ವರ್ಷಕ್ಕೆ ಒಂದು ಸಲ ನಡೆಯುವ ಸಹಕಾರಿ ಸಂಘಗಳ ಸರ್ವಸದಸ್ಯರ ಸಭೆ ˌಮಹಾಸಭೆಯೆಂದು ಪರಿಗಣಿಸಲ್ಪಟ್ಟಿದೆ. ಅಪರೂಪದಲ್ಲಿ ಸರ್ವಸದಸ್ಯರಿಂದ ತುರ್ತು ವಿಷಯಗಳ ಮಂಜೂರಾತಿಗಾಗಿ ವಿಶೇಷ ಮಹಾಸಭೆ ಜರಗಿಸುವ ಅವಕಾಶ ಕೂಡಾ ಸಹಕಾರಿ ಕಾಯ್ದೆಯಲ್ಲಿದೆ.ಕನಿಷ್ಟ ಒಂದು ತಿಂಗಳ ಮುಂಚಿತವಾಗಿ ಮಹಾಸಭೆ ಜರಗಿಸುವ ದಿನಾಂಕವನ್ನು ಆಡಳಿತ ಮಂಡಳಿ ನಿರ್ಣಯಿಸಿˌ ಹದಿನೈದು ದಿನ ಮುಂಚಿತವಾಗಿ ಮಹಾಸಭೆಯ ನೋಟೀಸನ್ನು ಸರ್ವಸದಸ್ಯರಿಗೆ ಕಳುಹಿಸತಕ್ಕದ್ದು.ಪ್ರತಿವರ್ಷ ಸಪ್ಟಂಬರ್ ತಾರೀಕು 25ರ ಮುಂಚಿತವಾಗಿ ಈ ಸಭೆಯನ್ನು ನಡೆಸುವಂತೆ ಸಹಕಾರಿ ಸಂಘಗಳ ನಿಯಮದಲ್ಲಿ ಹೇಳಲಾಗಿದೆ.ವರ್ಷಾಂತ್ಯ (ಮಾರ್ಚ್ 31)ವಾಗಿ ಅಗೋಸ್ತು ತಿಂಗಳಾಂತ್ಯದೊಳಗೆ ಮಹಾಸಭೆಯಿಂದ ನಿರ್ಣಯಿಸಲ್ಪಟ್ಟ ಲೆಕ್ಕಪರಿಶೋಧಕರಿಂದ ಪರಿಶೋಧನಾ ವರದಿ ಸಂಘಕ್ಕೆ ಮಂಡಿಸಲ್ಪಟ್ಟಿರಬೇಕು.ಮಹಾಸಭೆಯನ್ನು ಸಂಘದ ಕೇಂದ್ರ ಕಛೇರಿಯ ಆವರಣ ಅಥವಾ ಅದರ ಪರಿಸರದ ಸಭಾಂಗಣಗಳಲ್ಲಿ ಮಾತ್ರ ನಡೆಸಲು ಕಾನೂನಿನಲ್ಲಿ ಅವಕಾಶವಿರುವುದು. ಮಹಾಸಭೆಯ ಸೂಚನಾ ಪತ್ರದಲ್ಲಿ ದಿನಾಂಕˌ ಸಮಯ ˌಸ್ಥಳ ನಮೂದಿಸಿ ಕಾರ್ಯನಿರ್ವಹಣಾಧಿಕಾರಿಯ ಸಹಿಯೊಂದಿಗೆ ಸದಸ್ಯರಿಗೆ ಕಳುಹಿಸಿಕೊಡತಕ್ಕದ್ದು ಸೂಚನಾಪತ್ರವು ಅಂಚೆದಾಖಲಾತಿಯೊಂದಿಗೆ ಕಳುಹಿಸಲ್ಪಡಬೇಕು.ಈ ಸೂಚನಾ ಪ ತ್ರದಲ್ಲಿ ಮಹಾಸಭೆಯ ಕಾರ್ಯಸೂಚಿ, ವಾರ್ಷಿಕ ವರದಿ, ವಾರ್ಷಿಕ ಜಮಾ_ಖರ್ಚು, ಲಾಭ_ನಷ್ಟದ ತಖ್ತೆ, ಆಸ್ತಿ _ಜವಾಬ್ದಾರಿ ತಖ್ತೆ, ಲೆ ಕ್ಕ ಪರಿಶೋಧನಾ ವರದಿ ಮುಂದಿನ ವರ್ಷದ ಬಜೆಟು, ಉಪನಿಬಂಧನೆ ತಿದ್ದುಪಡಿ ಇದ್ದಲ್ಲಿ ಅದರ ವಿವರ,ಅಲ್ಲದೇ ಕಾರ್ಯಸೂಚಿಯಲ್ಲಿರುವಎಲ್ಲಾ ವಿಷಯಗಳಿಗೆ ವಿವರಣೆ ಸಹಿತ ಟಿಪ್ಪಣಿ ನಮೂದಾಗಿರಬೇಕು.. ಆಡಳಿತ ಮಂಡಳೀ ವಿಂಗಡಿಸಿದ ಲಾಭಾಂಶ ವಿಂಗಡಣೆ ಮುಂತಾದ ಸಮಗ್ರ ಮಾಹಿತಿ ಇರತಕ್ಕದು.
ಒಂದು ವೇಳೆ ಸಪ್ಟಂಬರ 25ರೊಳಗಡೆ ಮಹಾಸಭೆ ಜರಗಿಸುವರೇ ಆಡಳಿತ ಮಂಡಳಿಯು ನಿರ್ಣಯ ಕೈಗೊಳ್ಳಲು ವಿಫಲವಾದಲ್ಲಿ ಆಡಳಿತ ಮಂಡಳಿ ಸಂಪೂರ್ಣ ಹೊಣೆಗಾರ ಆಗಿದ್ದು ಆಡಳಿತ ಮಂಡಳಿಯನ್ನು ನಿಯಮಾನುಸಾರ ಬರ್ಖಾಸ್ತು ಗೊಳಿಸುವರೇ ಇಲಾಖೆಗೆ ಅಧಿಕಾರ ಇದೆ. ಅದೇ ರೀತಿ ಆಡಳಿತ ಮಂಡಳಿ ಇಲ್ಲದೇ ಇರುವ ಸಂದರ್ಭ ನೇಮಕಾತಿಗೊಂಡ ಆಡಳಿತಾಧಿಕಾರಿ ನಿಯಮಬದ್ದವಾಗಿ ಸಭೆಯ ದಿನಾಂಕ ಗೊತ್ತುಪಡಿಸಿ ಮಹಾಸಭೆ ಜರಗಿಸತಕ್ಕದ್ದು. ಆತನು ಮಹಾಸಭೆ ಜರಗಿಸಲು ವಿಫಲವಾದರೆ ಇಲಾಖೆ ಆತನ ಮೇಲೆ ಕ್ರಮಜರಗಿಸಲು ಅಧಿ ಕಾರ ಹೊಂದಿರುತ್ತದೆ. ವರ್ಷ ಅಂತ್ಯವಾದ ಒಂದು ತಿಂಗಳ ಒಳಗೆ ವಾರ್ಷಿಕ ಲೆಕ್ಕಪತ್ರಗಳನ್ನು ಹಿಂದೆಯೇ ನಿರ್ಣಯಿಸಲ್ಪಟ್ಟ ಲೆಕ್ಕಪರಿಶೋಧಕರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಳುಹಿಸಿದರೂ ಮಹಾಸಭೆ ಸಂದರ್ಭ ಪರಿಶೋಧನಾ ವರದಿ ಸಂಘದ ಕೈಸೇರದೆ ಇದ್ದಲ್ಲಿ, ಕಾರಣವನ್ನು ಮಹಾಸಭೆಗೆ ತಿಳಿಸಿ ಆ ಕುರಿತು ನಿರ್ಣಯಿಸತಕ್ಕದ್ದು.
ಒಟ್ಟು ಅರ್ಹ ಸದಸ್ಯರ 10%ಸಂಖ್ಯೆ ಮಹಾಸಭೆ ಜರಗಿಸಲು ಕೋರಂ ಆಗಿರುತ್ತದೆˌ ನಿಶ್ಚಿತ ದಿನಾಂಕದ ನಿಗದಿತ ಸಮಯದ ಅರ್ಧ ಗಂಟೆಗಳಷ್ಟು ಕಾಲ ಕೋರಂಗಾಗಿ ಕಾಯತಕ್ಕದ್ದು. ನಿಗದಿತ ಸಮಯದಲ್ಲಿ ಕೋರಂ ಆಗಿದ್ದಲ್ಲಿ ಸಭೆ ಪ್ರಾರಂಭಿಸಬಹುದು. ಸಾಕಷ್ಟು ಸಮಯ ಕಾದು ಕೋರಂ ಆಗದೆ ಇದ್ದಲ್ಲಿ ಅಧ್ಯಕ್ಷ ಸಭೆ ಮುಂದೂಡುವ ಘೋಷಣೆ ಕೈಗೊಳ್ಳತಕ್ಕದ್ದು.ಸಂಘದ ಅಧ್ಯಕ್ಷ ಅಧ್ಯಕ್ಷತೆ ವಹಿಸತಕ್ಕದ್ದು. ಅಧ್ಯಕ್ಷ ಗೈರು ಹಾಜರಾದಲ್ಲಿ ಉಪಾಧ್ಯಕ್ಷ… ಇಬ್ಬರೂ ಗೈರುಹಾಜರಾದಲ್ಲಿ ಸರ್ವಸದಸ್ಯರು ಒಪ್ಪಿದ ಒಬ್ಬ ನಿರ್ದೇಶಕ ಅಧ್ಯಕ್ಷತೆ ವಹಿಸತಕ್ಕದ್ದು.
ಪ್ರಾರ್ಥನೆ ಯೊಂದಿಗೆ ಆರಂಭ ವಾದ ಸಭೆ ವಂದನಾರ್ಪಣೆ ಯೊಂದಿಗೆ ಮುಕ್ತಾಯಗೊಳ್ಳುವುದು ಪದ್ದತಿ. ಪ್ರಾರ್ಥನೆ ಬಳಿಕ ಅಧ್ಯಕ್ಷರಿಂದ ಸಂಕ್ಷಿಪ್ತ ವಾಗಿ ಸರ್ವಸದಸ್ಯರನ್ನು ಸ್ವಾಗತಿಸುವುದು. ಪೂರ್ಣಪ್ರಮಾಣದ ಪಾಲುಬಂಡವಾಳ ಹೊಂದಿರದ ಯಾವನೇ ವ್ಯಕ್ತಿ ಸಭೆಯಲ್ಲಿ ಹಾಜರಿರತಕ್ಕದ್ದಲ್ಲ. ಸಭೆ ಯಲ್ಲಿ ಉಪಸ್ಥಿತನಿರಬೇಕಾದರೆ ಮುಂಚಿತವಾಗಿ ನಿಗದಿತ ಹಾಜರಿ ದಾಖಲಾತಿ ಯಲ್ಲಿ ಹೆಸರು ನೋಂದಾಯಿಸಿ ಸಹಿ ಮಾಡತಕ್ಕದ್ದು. ಸ್ವಾಗತದ ಬಳಿಕ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆ ದಿನ ದ ಸಭೆಯ ಕಾರ್ಯಸೂಚಿಯನ್ನು ಓದಿ ಹೇಳಿ ದಾಖಲೀಕರಣಗೊಳಿಸತಕ್ಕದ್ದು.ಬಳಿಕ ಸಭೆಯ ಪೂರ್ತಿ ನಿರ್ವಹಣೆ ಜವಾಬ್ದಾರಿ ಅಧ್ಯ ಕ್ಷನ ದ್ದು. ಅಧ್ಯ ಕ್ಷ ನ ಹೊರತು ಇತರ ನಿರ್ದೇಶಕರು ಸಭೆಗೆ ಉತ್ತರ ನೀಡುವುದಾಗಲಿ, ಚರ್ಚೆ ಯಲ್ಲಿ ಪಾಲ್ಗೊಳ್ಳುವುದು ಅಥವಾ ಸಭಾ ನಿರ್ವಹಣೆ ಮಾಡತಕ್ಕದ್ದಲ್ಲ. ವಿಶೇಷ ಸಂದರ್ಭದಲ್ಲಿ ಅಧ್ಯಕ್ಷ ಬಯಸಿದಲ್ಲಿ ಮಾತ್ರ ಮಾಡಬಹುದು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಂಕೆ ಸಂಖ್ಯೆಗಳ ಮಾಹಿತಿ ಇನ್ನಿತರ ಮಾಹಿತಿಯನ್ನು ಅಧ್ಯ ಕ್ಷನ ಒಪ್ಪಿಗೆ ಮೇರೆಗೆ ಸಭೆಗೆ ನೀಡಬಹುದು.ಪ್ರತಿಯೊಂದು ಚರ್ಚೆ ಯ ವಿಷಯವನ್ನು ಸಂಘದ ನುರಿತ ಶಿಬಂಧಿ ವಿಷಯ ಮಂಡನೆ ಮಾಡಿದ ಸದಸ್ಯನ ಸದಸ್ಯ ಸಂಖ್ಯೆ,ಹೆಸರು, ಚರ್ಚೆ ಯಲ್ಲಿ ಮುನ್ನಲೆಗೆ ಬಂದ ವಿಷಯ ಸಹಿತ ದಾಖಲಿಕರಣ ಗೊಳಿಸಬೇಕು
ದಾಖಲೀಕರಣದಲ್ಲಿ ನೈಜ ಚರ್ಚೆಯ ಹೊರತು ಎಡವಟ್ಟು ಆಗದಂತೆ ಎಚ್ಚರ ವಹಿಸಬೇಕು.ಕಾರ್ಯಸೂಚಿಯಲ್ಲಿ ತಿಳಿಯಪಡಿಸಿದ ವಿಷಯವನ್ನು ಹೊರತಾಗಿ ಯಾವುದೇ ವಿಷಯ ಮಧ್ಯದಲ್ಲಿ ಬಂದಲ್ಲಿ ಅದಕ್ಕೆ ಅಧ್ಯಕ್ಷ ಅವಕಾಶ ನೀಡ ಬಾರದು.
ಪ್ರತಿ ಯೊಬ್ಬ ಸದಸ್ಯ ಮಹಾಸಭೆಗೆ ಸಂಬಂಧಿಸಿದ ಕಾರ್ಯಸೂಚಿ, ವರದಿ, ಲೆಕ್ಕ ಪತ್ರಗಳು ಮುಂತಾದ ಸಮಗ್ರ ವಿಷಯಗಳನ್ನು ಮಹಾಸಭೆಗೆ ಮುಂಚಿತವಾಗಿ ಸೂಕ್ಷ್ಮ ವಾಗಿ ಓದಿರಬೇಕು.ಸಂಶಯದ ವಿಷಯಗಳು ಹಾಗೂ ಚರ್ಚಿಸತಕ್ಕ ವಿಷಯಗಳಿಗೆ ಆಯಾಯ ಕಾರ್ಯಸೂಚಿ ಪ್ರಸ್ತಾವನೆ ಯಾಗುವ ಸಂದರ್ಭ ತನ್ನ ಅಭಿಪ್ರಾಯ ವನ್ನು ಅಧ್ಯಕ್ಷ ರ ಅನುಮತಿ ಯೊಂದಿಗೆ ಮಹಾಸಭೆಯಲ್ಲಿ ಮಂಡಿಸಬಹುದು. ಪ್ರಜಾಸತ್ತಾತ್ಮಕವಾಗಿ ಜರಗುವ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಕಾಯ್ದೆ ನಿಯಮ ಬೈಲಾದ ಚೌಕಟ್ಟಿಗೊಳಪಟ್ಟು ವಿಷಯ ಪ್ರತಿಪಾದನೆ ಮಾಡುವರೇ ಎಚ್ಚರವಹಿಸತಕ್ಕದ್ದು. ಉದ್ವೇಗ, ಭಾವಪರವಶತೆ, ವಿಷಯಾಂತರಗಳಿಗೆ ಯಾರೂ ಒಳಗಾಗ ಬಾರದು. ಒಬ್ಬ ಸದಸ್ಯ ವಿಷಯ ಮಂಡಿಸುವಾಗ ಬೇರಾರು ಮಧ್ಯೆ ಪ್ರವೇಶಿಸಿ ಮಾತನಾಡಬಾರದು
ಅಧ್ಯಕ್ಷ ಕಾರ್ಯ ಸೂಚಿಗೊಳಪಟ್ಟು ಎಲ್ಲಾ ಸದಸ್ಯರಿಗೂ ಮಾತನಾಡಲು ಅವಕಾಶ ನೀಡುವುದಲ್ಲದೇ, ಗೌರವಯುತವಾಗಿ, ತಾಳ್ಮೆ ಯಿಂದ ಉತ್ತರ ನೀಡಬೇಕು.ಬಳಿಕ ವಿಮರ್ಶೆ, ಚರ್ಚೆ ಯ ಆಧಾರದಲ್ಲಿ ಧ್ವನಿ ಮತ ಅಥವಾ ಬಹುಮತದ ನಿರ್ಣಯವನ್ನು ಅಧ್ಯಕ್ಷ ಪಕ್ಷಾತೀತ ವಾಗಿ ಘೋಷಿಸಬೇಕು. ಮಹಾಸಭೆ ಸಂಘದ ಭವಿಷ್ಯದ ಚಿಂತನಾವೇದಿಕೆಯಾಗಿ ಸಂಘದ ಮುನ್ನಡೆಗೆ ದಾರಿ ದೀಪ ವಾಗಬೇಕು.
ಹೆಚ್ಚಿನ ಸದಸ್ಯರಿಗೆ ಸಂಘಗಳ ರಚನೆ, ಉದ್ದೇಶ, ಸದಸ್ಯರ ಪಾತ್ರ, ಕರ್ತವ್ಯ, ಹಕ್ಕು, ಭಾದ್ಯತೆ, ಕಾನೂನು, ನಿಯಮ, ಬೈಲಾ, ಲಾಭ, ನಷ್ಟ ಇತ್ಯಾದಿ ವಿಷಯಗಳ ಬಗ್ಗೆ ಅರಿವಿರುವುದಿಲ್ಲ. ಸದಸ್ಯರ ಭೇಟಿ ಸಕ್ರಿಯತೆ ಕನಿಷ್ಟ ಮಟ್ಟದಲ್ಲಿರುತ್ತದೆ. ಇಂತಹ ಸದಸ್ಯರು ಮಹಾಸಭೆಗೆ ಕಡಿಮೆ ಸಂಖ್ಯೆಯಲ್ಲಿ ಹಾಜರಾಗುವುದು.ಕೆಲವರು ತಮ್ಮ ಸ್ವಾರ್ಥ ಕ್ಕಾಗಿ ಸಂಘವನ್ನು ಬಳಸಿಕೊಳ್ಳುತ್ತಾರೆ. ಸಾಲ ಪಡೆದವರು ಮರುಪಾವತಿಸುವುದಿಲ್ಲ. ಇಂತಹವರು ಕೀಳರಿಮೆಯಿಂದ ಮಹಾಸಭೆಗೆ ಹಾಜರಾಗುವುದಿಲ್ಲ. ಇಂದು ಕಾಯ್ದೆಯಲ್ಲಿ 5 ಮಹಾಸಭೆಗಳ ಪೈಕಿ ಎರಡು ಮಹಾಸಭೆಗಳಿಗೆ ಹಾಜರಾದರೆ ಮಾತ್ರ ಮತದಾನದ ಹಕ್ಕು ಇರುವ ಕಾರಣ ಆ ಉದ್ದೇಶಕ್ಕಾಗಿ ನಿಮಿತ್ತಮಾತ್ರ ಹಾಜರಾಗುತ್ತಾರೆ. ಸಂಘದ ಭವಿಷ್ಯದ ದ್ರ ಷ್ಟಿಯಿಂದ ಮಹಾಸಭೆಯ ಪಾತ್ರದ ಬಗ್ಗೆ ಬಹುಪಾಲು ಸದಸ್ಯರಿಗೆ ಜ್ಞಾನ ವಿಲ್ಲದೇ ವಾರ್ಷಿಕ ವಿಧಿಯ ರೀತಿಯಲ್ಲಿ ಜರಗಿ ನೀರಸವಾಗಿರುತ್ತವೆ. ರಚನಾತ್ಮಕವಾಗಿ ಕ್ರಿಯಾಶೀಲವಾಗಿ ಚರ್ಚೆ, ವಿಮರ್ಶೆಗಳು ಜರಗಿದಾಗ ಸಂಘದ ಭವಿಷ್ಯ ಬಲಗೊಳ್ಳಲು ನಾಂದಿಯಾಗುತ್ತದೆ. ಆಡಳಿತ ಮಂಡಳಿ ಸದಸ್ಯರು ಮಹಾಸಭೆಯ ಪ್ರಾಮುಖ್ಯತೆ ಕುರಿತು ಸಕಾರಾ ತ್ಮಕವಾಗಿ ಚಿಂತಿಸಿ ಸದಸ್ಯರನ್ನು ಬರಮಾಡಿದಾಗ ಸಂಘದ ಬೆಳವಣಿಗೆಗೆ ದಾರಿಯಾಗುತ್ತದೆ.

ರಾಧಾಕೃಷ್ಣ ಕೋಟೆ.
ಅಂಚೆ ಕಳಂಜ 574212
ದ.ಕ. 9448503424 (Whatsaap Call)