ಸಹಕಾರದ ಮೂರು ದಾರಿಗಳು – ಗುರಿ ಒಂದೇ.|ಶ್ರೀ. ಸಾಣೂರು ನರಸಿಂಹ ಕಾಮತ್

ಆಡು ಮುಟ್ಟದ ಸೊಪ್ಪಿಲ್ಲ ಸಹಕಾರ ಕ್ಷೇತ್ರ ತಲುಪದ ಜಾಗವಿಲ್ಲ ಎಂಬಂತೆ….. ದೇಶದ 30 ಕೋಟಿಗಿಂತಲೂ ಹೆಚ್ಚು ಜನರನ್ನು ಸದಸ್ಯರನ್ನಾಗಿ ಒಳಗೊಂಡ ಸಹಕಾರ ಕ್ಷೇತ್ರದ ಆಳ ಅಗಲ ಹರಿವು ವಿಸ್ತಾರ ಇದೆಲ್ಲವನ್ನು ಕೆಲವೇ ಶಬ್ದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಆದರೂ ಒಂದು ಸಣ್ಣ ಪ್ರಯತ್ನ

1959ರ ಸಹಕಾರಿ ಕಾಯ್ದೆ, 1997ರ ಸೌಹಾರ್ದ ಸಹಕಾರಿ ಕಾಯ್ದೆ ಮತ್ತು 2002 ರ ಬಹುರಾಜ್ಯ ಸಹಕಾರಿ ಸಂಸ್ಥೆಗಳ ಸಮಗ್ರ ಅವಲೋಕನ.

ಸಹಕಾರ ಎಂದರೆ ಕೇವಲ ಒಂದು ಸಂಸ್ಥೆಯ ನೋಂದಣಿ ಅಲ್ಲ; ಅದು ಜನರು ತಮ್ಮ ಆರ್ಥಿಕ, ಸಾಮಾಜಿಕ ಮತ್ತು ಸಮುದಾಯದ ಹಿತಾಸಕ್ತಿಗಾಗಿ ಒಗ್ಗೂಡಿ ಸ್ವಾವಲಂಬನೆಯತ್ತ ಸಾಗುವ ವ್ಯವಸ್ಥೆ.

ಕರ್ನಾಟಕದ ಸಹಕಾರಿ ಚಳವಳಿಯನ್ನು ಗಮನಿಸಿದಾಗ, ಪ್ರಸ್ತುತ ನಮ್ಮ ಮುಂದೆ ಪ್ರಮುಖವಾಗಿ ಮೂರು ರೀತಿಯ ಕಾನೂನು ಚೌಕಟ್ಟುಗಳಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಸ್ಥೆಗಳು ಕಾಣಿಸುತ್ತವೆ.

1. 1959ರ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆಯಡಿ ನೋಂದಾಯಿತ ಸಾಂಪ್ರದಾಯಿಕ ಸಹಕಾರಿ ಸಂಸ್ಥೆಗಳು.

2 1997ರ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯಡಿ ನೋಂದಾಯಿತ ಸೌಹಾರ್ದ ಸಹಕಾರಿ ಸಂಸ್ಥೆಗಳು

3. ಬಹುರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2002ರಡಿ ನೋಂದಾಯಿತ ಬಹುರಾಜ್ಯ ಸಹಕಾರಿ ಸಂಸ್ಥೆಗಳು.

ಮೂರು ಸಂಸ್ಥೆಗಳ ಕಾನೂನು ವ್ಯವಸ್ಥೆ ಬೇರೆಬೇರೆ ಆಗಿದ್ದರೂ, ಸದಸ್ಯರ ಸ್ವಯಂಪ್ರೇರಿತ ಭಾಗವಹಿಸುವಿಕೆ, ಪ್ರಜಾಸತ್ತಾತ್ಮಕ ಆಡಳಿತ, ಪರಸ್ಪರ ಸಹಾಯ, ಸದಸ್ಯರ ಆರ್ಥಿಕ–ಸಾಮಾಜಿಕ ಅಭಿವೃದ್ಧಿ ಮತ್ತು ಸ್ವಾವಲಂಬನೆ ಎಂಬ ಮೂಲ ಸಹಕಾರಿ ತತ್ವಗಳು ಒಂದೇ.

1. 1959ರ ಕಾಯ್ದೆಯಡಿ ಸಾಂಪ್ರದಾಯಿಕ ಸಹಕಾರಿ ಸಂಸ್ಥೆಗಳು

ಕರ್ನಾಟಕದಲ್ಲಿ ದಶಕಗಳಿಂದ ಬೇರೂರಿರುವ ಬಹುತೇಕ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳು, ವಿವಿಧೋದ್ದೇಶ ಸಹಕಾರಿ ಸಂಘಗಳು, ಸಹಕಾರಿ ಬ್ಯಾಂಕುಗಳು, ಮಾರುಕಟ್ಟೆ ಸಹಕಾರಿಗಳು ಸೇರಿದಂತೆ ಅನೇಕ ಸಂಸ್ಥೆಗಳು ಈ ಪರಂಪರೆಯ ಸಹಕಾರಿ ವ್ಯವಸ್ಥೆಯಡಿ ಬೆಳೆದಿವೆ.

1959ರ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ ರಾಜ್ಯದೊಳಗೆ ಕಾರ್ಯನಿರ್ವಹಿಸುವ ಸಹಕಾರಿ ಸಂಸ್ಥೆಗಳ ಪ್ರಮುಖ ಕಾನೂನು ಆಧಾರವಾಗಿದೆ.

ಇದರ ಪ್ರಮುಖ ಶಕ್ತಿ

  • ದಶಕಗಳ ಅನುಭವ ಮತ್ತು ಬಲವಾದ ಗ್ರಾಮೀಣ ಜಾಲ
  •  ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯೊಂದಿಗೆ ನೇರ ಸಂಪರ್ಕ
  • PACS, ಹಾಲು, ಕೃಷಿ ಸೇವೆ, ಮಾರುಕಟ್ಟೆ ಮುಂತಾದ ಕ್ಷೇತ್ರಗಳಲ್ಲಿ ವ್ಯಾಪಕ ಉಪಸ್ಥಿತಿ
  • ಸರ್ಕಾರದ ವಿವಿಧ ಯೋಜನೆಗಳನ್ನು ಗ್ರಾಮಮಟ್ಟಕ್ಕೆ ತಲುಪಿಸುವ ಸಾಮರ್ಥ್ಯ

ಮೂರು ಹಂತದ ಸಹಕಾರಿ ವ್ಯವಸ್ಥೆಯನ್ನು ನಿರ್ಮಿಸುವ ಅವಕಾಶ: ಕರ್ನಾಟಕದ ಸಹಕಾರಿ ಕ್ಷೇತ್ರದ ವ್ಯಾಪ್ತಿಯನ್ನು ನೋಡಿದರೆ ಇದರ ಮಹತ್ವ ಸ್ಪಷ್ಟವಾಗುತ್ತದೆ. ರಾಷ್ಟ್ರೀಯ ಸಹಕಾರಿ ಡೇಟಾಬೇಸ್‌ನ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 44,005 ಸಹಕಾರಿ ಸಂಸ್ಥೆಗಳು ಮತ್ತು 3.33 ಕೋಟಿಗೂ ಹೆಚ್ಚು ಸದಸ್ಯರಿದ್ದು, PACS‌ಗಳು ರಾಜ್ಯದ ಗ್ರಾಮ ಪಂಚಾಯಿತಿಗಳ 98.63% ಪ್ರದೇಶವನ್ನು ಆವರಿಸಿವೆ.

ಹಾಲು ಉತ್ಪಾದಕರ ಸಹಕಾರಿ ಸಂಘಗಳು ಅತಿ ದೊಡ್ಡ(ಸುಮಾರು 14 ಸಾವಿರಕ್ಕೂ ಮಿಕ್ಕಿ..) ಸಂಖ್ಯೆಯಲ್ಲಿ ರಾಜ್ಯದಾದ್ಯಂತ ವಿಸ್ತರಿಸಿಕೊಂಡಿವೆ.

ಯಶಸ್ಸಿನ ಮಾದರಿ – ಹಾಲು ಉತ್ಪಾದಕರ ಸಹಕಾರ ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಮಾದರಿ ಗ್ರಾಮೀಣ ಸಹಕಾರದ ಶಕ್ತಿಗೆ ಅತ್ಯುತ್ತಮ ಉದಾಹರಣೆ.

ಗ್ರಾಮಮಟ್ಟದ ಹಾಲು ಉತ್ಪಾದಕರ ಸಂಘ → ಜಿಲ್ಲಾ ಹಾಲು ಒಕ್ಕೂಟ → ರಾಜ್ಯ ಹಾಲು ಮಹಾಮಂಡಳಿ ಎಂಬ ಮೂರು ಹಂತದ ವ್ಯವಸ್ಥೆ ಪ್ರಜಾಸತ್ತಾತ್ಮಕ ಸಹಕಾರಿ ಆಡಳಿತದ ಮಾದರಿಯಾಗಿದೆ.

ಹೀಗಾಗಿ, ಸಣ್ಣ ಹಾಲು ಉತ್ಪಾದಕರಿಂದ ಆರಂಭವಾಗಿ ರಾಜ್ಯಮಟ್ಟದ ಬ್ರ್ಯಾಂಡ್ ನಿರ್ಮಾಣ ಮಾಡುವ ಶಕ್ತಿಯನ್ನು ಸಾಂಪ್ರದಾಯಿಕ ಸಹಕಾರಿ ವ್ಯವಸ್ಥೆ ತೋರಿಸಿದೆ *.(ನಂದಿನಿ* )

2. 1997ರ ಸೌಹಾರ್ದ ಸಹಕಾರಿ ಕಾಯ್ದೆ – ಸ್ವಾಯತ್ತತೆಯ ಹೊಸ ಪ್ರಯೋಗ

ಸಹಕಾರಿ ಸಂಸ್ಥೆಗಳಲ್ಲಿ ಸರ್ಕಾರದ ಅತಿಯಾದ ಹಸ್ತಕ್ಷೇಪ ಕಡಿಮೆಯಾಗಬೇಕು, ಸದಸ್ಯರ ಸ್ವಯಂಆಡಳಿತ ಹೆಚ್ಚಬೇಕು, ಸಹಕಾರಿಗಳು ಹೆಚ್ಚು ಸ್ಪರ್ಧಾತ್ಮಕ ಮತ್ತು ಸ್ವಾವಲಂಬಿಯಾಗಬೇಕು ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ, 1997 ರೂಪುಗೊಂಡಿತು.

ಈ ಕಾಯ್ದೆಯ ಜಾರಿ 1 ಜನವರಿ 2001ರಿಂದ ನಡೆಯಿತು.  ಕಾಯ್ದೆಯ ಉದ್ದೇಶವೇ ಸದಸ್ಯರ ಸ್ವಾಮ್ಯ, ನಿರ್ವಹಣೆ ಮತ್ತು ನಿಯಂತ್ರಣದ ಮೇಲೆ ಆಧಾರಿತ, ಸ್ವಯಂಸಹಾಯ ಮತ್ತು ಪರಸ್ಪರ ಸಹಾಯದ ಮೂಲಕ ಕಾರ್ಯನಿರ್ವಹಿಸುವ ಸ್ವಾವಲಂಬಿ ಹಾಗೂ ಸ್ಪರ್ಧಾತ್ಮಕ ಸಹಕಾರಿ ಉದ್ಯಮಗಳನ್ನು ಉತ್ತೇಜಿಸುವುದಾಗಿದೆ.

ಸೌಹಾರ್ದ ಮಾದರಿಯ ಪ್ರಮುಖ ವೈಶಿಷ್ಟ್ಯಗಳು, ಸ್ವಾಯತ್ತತೆ – ಸ್ವಯಂಆಡಳಿತ – ಸ್ವಯಂನಿಯಂತ್ರಣ. ಇದು ಸೌಹಾರ್ದ ಸಹಕಾರಿಯ ಪ್ರಮುಖ ಚಿಂತನೆ.

ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಸರ್ಕಾರದ ನಿಯಂತ್ರಣದ ಪಾತ್ರ ಹೆಚ್ಚು ಕಂಡುಬಂದರೆ, ಸೌಹಾರ್ದ ವ್ಯವಸ್ಥೆ ಸದಸ್ಯರ ಹೊಣೆಗಾರಿಕೆ ಮತ್ತು ಸಂಸ್ಥೆಯ ಸ್ವಾಯತ್ತ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುತ್ತದೆ.

ಸೌಹಾರ್ದ ಕ್ಷೇತ್ರದ ಕೆಲವು ಯಶಸ್ವಿ ಮಾದರಿಗಳು

ಕರ್ನಾಟಕದ ಸೌಹಾರ್ದ ಚಳವಳಿಯಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ಉತ್ತಮ ಮಾದರಿಗಳು ನಿರ್ಮಾಣಗೊಂಡಿವೆ.

  •  ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ, ಸಿರಸಿ – ಸ್ಥಳೀಯ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಮಾದರಿ.
  •  ಸುವಿಧಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಸಾಗರ – ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಸಹಕಾರಿ ಸೂಪರ್ ಮಾರ್ಕೆಟ್ ಮಾದರಿ.
  • ಹಂಸ ಚೈತನ್ಯ ಸೌಹಾರ್ದ ಸಹಕಾರಿ, ಉಡುಪಿ – ವಲಸೆ ಕಾರ್ಮಿಕ ಕುಟುಂಬಗಳಿಗೆ ಸೌರ ದೀಪ ಸಾಲದಂತಹ ಹೊಸ ಪ್ರಯೋಗ.
  •  ಶ್ರೀ ಜ್ಯೋತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ, ಎಕ್ಸಂಬಾ – ಗ್ರಾಮೀಣ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಮಾದರಿ.
  • ನಿವೇದಿತಾ ಮಹಿಳಾ ಪಟ್ಟಣ ಸೌಹಾರ್ದ ಸಹಕಾರಿ, ಕಲಬುರಗಿ ಸಣ್ಣ ವ್ಯಾಪಾರಿಗಳು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾದ ಮಾದರಿ.

ಇವುಗಳಂತಹ ಪ್ರಯೋಗಗಳನ್ನು ಸೌಹಾರ್ದ ಚಳವಳಿಯ ಕುರಿತ ಅಧ್ಯಯನಗಳಲ್ಲಿಯೂ ದಾಖಲಿಸಲಾಗಿದೆ.

ಸೌಹಾರ್ದ ಕ್ಷೇತ್ರದ ವಿಸ್ತಾರವೂ ಗಮನಾರ್ಹವಾಗಿದೆ.

2023–24ರ ವೇಳೆಗೆ ಸೌಹಾರ್ದ ಸಹಕಾರಿಗಳ ಒಟ್ಟು ವ್ಯವಹಾರವು ಸುಮಾರು ₹77,000 ಕೋಟಿಯನ್ನು ದಾಟಿದ್ದು, ಠೇವಣಿ ಮತ್ತು ಸಾಲಗಳ ಪ್ರಮಾಣವೂ ಗಣನೀಯವಾಗಿ ಬೆಳೆದಿದೆ ಎಂಬ ವರದಿಗಳಿವೆ.

 3. ಬಹುರಾಜ್ಯ ಸಹಕಾರಿ ಸಂಸ್ಥೆಗಳು – ರಾಜ್ಯದ ಗಡಿ ದಾಟಿದ ಸಹಕಾರ. ಒಂದು ಸಹಕಾರಿ ಸಂಸ್ಥೆಯ ಕಾರ್ಯವ್ಯಾಪ್ತಿ ಒಂದೇ ರಾಜ್ಯಕ್ಕೆ ಸೀಮಿತವಾಗದೆ ಎರಡು ಅಥವಾ ಹೆಚ್ಚು ರಾಜ್ಯಗಳಲ್ಲಿ ಸದಸ್ಯರ ಹಿತಾಸಕ್ತಿಯನ್ನು ಪೂರೈಸುವ ಮಟ್ಟಕ್ಕೆ ವಿಸ್ತರಿಸಿದಾಗ, ಅದು ಬಹುರಾಜ್ಯ ಸಹಕಾರಿ ಸಂಸ್ಥೆಯ ರೂಪ ಪಡೆಯುತ್ತದೆ.

ಇವುಗಳನ್ನು Multi-State Cooperative Societies Act, 2002ರಡಿ ಕೇಂದ್ರದ Central Registrar of Cooperative Societies ನೋಂದಣಿ ಮತ್ತು ನಿಯಂತ್ರಣ ವ್ಯವಸ್ಥೆಯಡಿ ನಡೆಸಲಾಗುತ್ತದೆ.

ಬಹುರಾಜ್ಯ ಸಹಕಾರದ ಪ್ರಮುಖ ಅವಕಾಶಗಳು

  • ರಾಜ್ಯದ ಗಡಿ ಮೀರಿ ಸದಸ್ಯತ್ವ ಮತ್ತು ವ್ಯವಹಾರ ವಿಸ್ತರಣೆ
  • ದೊಡ್ಡ ಪ್ರಮಾಣದ ಮಾರುಕಟ್ಟೆ ನಿರ್ಮಾಣ
  • ಉತ್ಪಾದಕರಿಗೆ ರಾಷ್ಟ್ರೀಯ ಮಟ್ಟದ ಮಾರುಕಟ್ಟೆ
  • ಖರೀದಿ ಮತ್ತು ಮಾರಾಟದಲ್ಲಿ ಪ್ರಮಾಣದ ಆರ್ಥಿಕತೆ
  • ತಂತ್ರಜ್ಞಾನ ಮತ್ತು ವೃತ್ತಿಪರ ನಿರ್ವಹಣೆಯ ಬಳಕೆ
  • ರಫ್ತು ಮತ್ತು ರಾಷ್ಟ್ರೀಯ ಸರಬರಾಜು ಸರಪಳಿಯಲ್ಲಿ ಅವಕಾಶ
  • ವಿವಿಧ ರಾಜ್ಯಗಳ ಸಹಕಾರಿಗಳನ್ನು ಒಂದೇ ವೇದಿಕೆಗೆ ತರುವುದು

IFFCO, KRIBHCO, NAFED, ಕ್ಯಾಂಪ್ಕೋ,ಮುಂತಾದ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಸ್ಥೆಗಳು ಬಹುರಾಜ್ಯ ಸಹಕಾರದ ಸಾಮರ್ಥ್ಯವನ್ನು ತೋರಿಸಿವೆ. ಇತ್ತೀಚಿನ ದಿನಗಳಲ್ಲಿ National Cooperative Exports Limited (NCEL), National Cooperative Organics Limited (NCOL), Bharatiya Beej Sahakari Samiti Limited (BBSSL) ಮುಂತಾದ ರಾಷ್ಟ್ರೀಯ ಮಟ್ಟದ ಬಹುರಾಜ್ಯ ಸಹಕಾರಿ ಉಪಕ್ರಮಗಳಿಗೂ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ.

ಬಹುರಾಜ್ಯ ಸಹಕಾರದ ಮೂಲ ಉದ್ದೇಶವೇ ಒಂದು ರಾಜ್ಯದ ಗಡಿಗೆ ಸೀಮಿತವಾಗದ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಸಹಕಾರಿ ತತ್ವಗಳ ಮೂಲಕ ಸಾಧಿಸುವುದಾಗಿದೆ.

ಮೂರು ವ್ಯವಸ್ಥೆಗಳಲ್ಲೂ ಏನು ಸಾಮ್ಯತೆ?

ಅಂಶ| 1959ರ ಕಾಯ್ದೆ| 1997ರ ಸೌಹಾರ್ದ ಕಾಯ್ದೆ| 2002ರ ಬಹುರಾಜ್ಯ ಸಹಕಾರಿ

ಮೂಲ ತತ್ವ | ಸಹಕಾರ| ಸಹಕಾರ| ಸಹಕಾರ.

ಸದಸ್ಯರ ಪಾತ್ರ| ಪ್ರಮುಖ| ಅತ್ಯಂತ ಪ್ರಮುಖ| ಪ್ರಮುಖ

ಪ್ರಜಾಸತ್ತಾತ್ಮಕ ಆಡಳಿತ| ಇದೆ| ಇದೆ| ಇದೆ

ಸ್ವಯಂಸಹಾಯ| ಇದೆ| ಹೆಚ್ಚಿನ ಒತ್ತು| ಹೆಚ್ಚಿನ ಒತ್ತು

ಸದಸ್ಯರ ಆರ್ಥಿಕ ಹಿತ| ಕೇಂದ್ರಬಿಂದು| ಕೇಂದ್ರಬಿಂದು| ಕೇಂದ್ರಬಿಂದು.

ಕಾರ್ಯವ್ಯಾಪ್ತಿ| ಮುಖ್ಯವಾಗಿ ರಾಜ್ಯ| ಮುಖ್ಯವಾಗಿ ರಾಜ್ಯ| ಒಂದಕ್ಕಿಂತ ಹೆಚ್ಚು ರಾಜ್ಯ

ನಿಯಂತ್ರಣ| ರಾಜ್ಯ ವ್ಯವಸ್ಥೆ| ಸೌಹಾರ್ದ ವ್ಯವಸ್ಥೆ| ಕೇಂದ್ರದ CRCS

ವಿಸ್ತರಣೆಯ ಅವಕಾಶ| ಉತ್ತಮ| ಉತ್ತಮ| ಅತ್ಯಂತ ವ್ಯಾಪಕವಾಗಿ

ಆದರೆ ವ್ಯತ್ಯಾಸವೇನು? ಸರಳವಾಗಿ ಹೇಳುವುದಾದರೆ:

1959ರ ಸಹಕಾರಿ (“ಸಂಸ್ಥೆ + ಸದಸ್ಯರು + ನಿಯಂತ್ರಣ ವ್ಯವಸ್ಥೆ”)

1997ರ ಸೌಹಾರ್ದ ಸಹಕಾರಿ (“ಸದಸ್ಯರು + ಸ್ವಾಯತ್ತತೆ + ಸ್ವಯಂಆಡಳಿತ”)

ಬಹುರಾಜ್ಯ ಸಹಕಾರಿ (“ಸದಸ್ಯರು + ಸಹಕಾರಿ ತತ್ವ + ರಾಜ್ಯಗಳ ಗಡಿ ದಾಟಿದ ವ್ಯಾಪಾರ”)

ಆದರೆ ಯಾವ ಕಾಯ್ದೆಯಡಿ ನೋಂದಾಯಿತ ಸಂಸ್ಥೆಯಾದರೂ ಸದಸ್ಯರ ವಿಶ್ವಾಸ ಕಳೆದುಕೊಂಡರೆ ಕಾನೂನು ಚೌಕಟ್ಟು ಮಾತ್ರ ಸಂಸ್ಥೆಯನ್ನು ಉಳಿಸಲು ಸಾಧ್ಯವಿಲ್ಲ.

ಮೂರು ವ್ಯವಸ್ಥೆಗಳ ಪ್ರಮುಖ ಅನುಕೂಲಗಳು ಮತ್ತು ಸವಾಲುಗಳು

1959ರ ಹಳೆ ಸಹಕಾರಿ ಕಾಯ್ದೆ ವ್ಯವಸ್ಥೆ ಮತ್ತು ಅನುಕೂಲಗಳು

  • ಗ್ರಾಮೀಣ ಮಟ್ಟದಲ್ಲಿ ಬಲವಾದ ನೆಲೆ
  • ದೀರ್ಘಕಾಲದ ಅನುಭವ
  • ಕೃಷಿ, ಹಾಲು, ಸಾಲ, ಮಾರುಕಟ್ಟೆ ಮುಂತಾದ ಕ್ಷೇತ್ರಗಳಲ್ಲಿ ವ್ಯಾಪಕ ಜಾಲ

ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಸಾಮರ್ಥ್ಯ ಮತ್ತು ಸವಾಲುಗಳು

  • ರಾಜಕೀಯ ಹಸ್ತಕ್ಷೇಪದ ಸಾಧ್ಯತೆ
  • ಆಡಳಿತಾತ್ಮಕ ವಿಳಂಬ
  • ವೃತ್ತಿಪರ ನಿರ್ವಹಣೆಯ ಕೊರತೆ
  • ಸದಸ್ಯರ ಭಾಗವಹಿಸುವಿಕೆ ಕಡಿಮೆಯಾಗುವ ಅಪಾಯ
  • ಹಳೆಯ ಪದ್ಧತಿಗಳಿಂದ ಹೊರಬರುವಲ್ಲಿ ನಿಧಾನಗತಿ

1997ರ ಸೌಹಾರ್ದ ವ್ಯವಸ್ಥೆಯ ಅನುಕೂಲಗಳು

  •  ಹೆಚ್ಚಿನ ಸ್ವಾಯತ್ತತೆ
  • ಸದಸ್ಯರ ನೇರ ಹೊಣೆಗಾರಿಕೆ
  • ವೇಗವಾಗಿ ನಿರ್ಧಾರ ಕೈಗೊಳ್ಳುವ ಅವಕಾಶ
  • ಹೊಸ ವ್ಯವಹಾರ ಮಾದರಿಗಳಿಗೆ ಅವಕಾಶ
  • ವೃತ್ತಿಪರ ನಿರ್ವಹಣೆಗೆ ಹೆಚ್ಚಿನ ಅವಕಾಶ

ಸವಾಲುಗಳು

  • ಸ್ವಾಯತ್ತತೆಯ ಜೊತೆಗೆ ಹೊಣೆಗಾರಿಕೆಯೂ ಅಗತ್ಯ
  • ಕೆಲವೊಮ್ಮೆ ಕೆಲವೇ ವ್ಯಕ್ತಿಗಳಲ್ಲಿ ಅಧಿಕಾರ ಕೇಂದ್ರೀಕರಣದ ಅಪಾಯ
  • ವೃತ್ತಿಪರ ಆಡಳಿತದ ಕೊರತೆ
  • ಸಣ್ಣ ಸಂಸ್ಥೆಗಳಿಗೆ ತಂತ್ರಜ್ಞಾನ ಮತ್ತು ಬಂಡವಾಳದ ಸವಾಲು
  • ಸದಸ್ಯರ ಶಿಕ್ಷಣ ಮತ್ತು ಸಹಕಾರಿ ಅರಿವು ಇನ್ನಷ್ಟು ಅಗತ್ಯ

ಬಹುರಾಜ್ಯ ಸಹಕಾರಿ ವ್ಯವಸ್ಥೆ ಮತ್ತು ಅನುಕೂಲಗಳು

  • ವಿಶಾಲ ಮಾರುಕಟ್ಟೆ
  • ರಾಷ್ಟ್ರೀಯ ಮಟ್ಟದ ವ್ಯವಹಾರ
  • ದೊಡ್ಡ ಪ್ರಮಾಣದ ಖರೀದಿ–ಮಾರಾಟ
  • ರಫ್ತು ಅವಕಾಶ
  • ತಂತ್ರಜ್ಞಾನ ಮತ್ತು ವೃತ್ತಿಪರ ನಿರ್ವಹಣೆ
  •  ರಾಜ್ಯಗಳ ನಡುವಿನ ಸಹಕಾರಿ ಜಾಲ

ಸವಾಲುಗಳು

  •  ದೊಡ್ಡ ಸಂಸ್ಥೆಯಲ್ಲಿ ಸದಸ್ಯರೊಂದಿಗೆ ನೇರ ಸಂಪರ್ಕ ಕಡಿಮೆಯಾಗುವ ಸಾಧ್ಯತೆ
  • ಆಡಳಿತ ಸಂಕೀರ್ಣತೆ
  • ವಿವಿಧ ರಾಜ್ಯಗಳ ಕಾನೂನು ಮತ್ತು ಮಾರುಕಟ್ಟೆ ಪರಿಸರ
  • ವೃತ್ತಿಪರ ಆಡಳಿತದ ಅಗತ್ಯ
  • ಪಾರದರ್ಶಕತೆ ಮತ್ತು ಸದಸ್ಯರ ಹಿತಾಸಕ್ತಿ ಕಾಪಾಡುವ ದೊಡ್ಡ ಹೊಣೆಗಾರಿಕೆ

ನನ್ನ ಎರಡು ದಶಕಗಳ ಅನುಭವ ಹೇಳುವುದೇನು?

ಸಹಕಾರಿ ಕ್ಷೇತ್ರದ ಕುರಿತು ಮಾತನಾಡುವಾಗ ನಾನು ಕೇವಲ ಪುಸ್ತಕದ ಜ್ಞಾನದಿಂದ ಮಾತನಾಡುತ್ತಿಲ್ಲ.

ಕಳೆದ ಎರಡು ದಶಕಗಳಿಂದ ಸಹಕಾರಿ ವ್ಯವಸ್ಥೆಯೊಂದಿಗೆ ನೇರವಾಗಿ ಕೆಲಸ ಮಾಡುವ ಅವಕಾಶ ನನಗೆ ದೊರೆತಿದೆ.

ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದೊಂದಿಗೆ ಸುಮಾರು 15 ವರ್ಷಗಳ ಅನುಭವ,ಪರಂಪರಾ ವಿವಿಧೋದ್ದೇಶ ಸಹಕಾರಿ ಸಂಘದೊಂದಿಗೆ ಸ್ಥಾಪಕ ನಿರ್ದೇಶಕನಾಗಿ ಈವರೆಗೆ

15 ವರ್ಷಗಳ ಅನುಭವ:ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದೊಂದಿಗೆ ಕಳೆದ ಒಂದು ವರ್ಷದ ಅನುಭವ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದೊಂದಿಗೆ ನಿರ್ದೇಶಕನಾಗಿ 6 ವರ್ಷಗಳ ಅನುಭವ—ಇವೆಲ್ಲವೂ ಸಹಕಾರದ ವಿವಿಧ ಹಂತಗಳನ್ನು ಹತ್ತಿರದಿಂದ ನೋಡುವ ಅವಕಾಶ ನೀಡಿವೆ.

ಅದರ ಜೊತೆಗೆ ಬಹುರಾಜ್ಯ ಸಹಕಾರಿ ವ್ಯವಸ್ಥೆಯೊಂದಿಗಿನ ಮಂಗಳೂರಿನ ಭಾರತಿ ಟೂರಿಸಂ ಡೆವಲಪ್ಮೆಂಟ್                   ಕೊಆಪರೇಟಿವ್ ಸಂಸ್ಥೆಯ ನಿರ್ದೇಶಕನಾಗಿ ಈಗಲೂ ಕಾರ್ಯನಿರ್ವಹಿಸುತ್ತಿರುವ ಅನುಭವವೂ ಸಹಕಾರದ ರಾಜ್ಯಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ.

ಕಳೆದ ಒಂದೂವರೆ ವರ್ಷಗಳಿಂದ ಸಹಕಾರ ಭಾರತಿಯ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯದ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿ, ವಿವಿಧ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿಗಳು, ಸಿಬ್ಬಂದಿ ಮತ್ತು ಸದಸ್ಯರೊಂದಿಗೆ ಸಂವಾದ ನಡೆಸಿದ್ದೇನೆ.

ವಿವಿಧ ಕಾರ್ಯಾಗಾರಗಳು, ಸಭೆಗಳು, ಸಮಾರಂಭಗಳು ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ವಿವಿಧ ಮಾದರಿಯ ಸಹಕಾರಿ ಸಂಸ್ಥೆಗಳ ಕಾರ್ಯವೈಖರಿಯನ್ನು ನೇರವಾಗಿ ಗಮನಿಸಿದ್ದೇನೆ. ಹಿರಿಯ ಹಾಗೂ ಅನುಭವಿ ಸಹಕಾರಿಗಳೊಂದಿಗೆ ನಡೆಸಿದ ಚರ್ಚೆಗಳು ಸಹಕಾರ ಕ್ಷೇತ್ರದ ನೈಜ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಬಹಳಷ್ಟು ನೆರವಾಗಿವೆ.

ಈ ಅನುಭವದಿಂದ ನನಗೆ ಸ್ಪಷ್ಟವಾದ ಒಂದು ಸತ್ಯವೆಂದರೆ ಸಹಕಾರಿ ಸಂಸ್ಥೆಯ ಯಶಸ್ಸನ್ನು ನಿರ್ಧರಿಸುವುದು ಅದು 1959ರ ಕಾಯ್ದೆಯಡಿಯಲ್ಲಿದೆಯೇ, 1997ರ ಸೌಹಾರ್ದ ಕಾಯ್ದೆಯಡಿಯಲ್ಲಿದೆಯೇ ಅಥವಾ ಬಹುರಾಜ್ಯ ಕಾಯ್ದೆಯಡಿಯಲ್ಲಿದೆಯೇ ಎಂಬುದಕ್ಕಿಂತ, ಅದರ ಆಡಳಿತ ಎಷ್ಟು ಪಾರದರ್ಶಕವಾಗಿದೆ, ಸದಸ್ಯರು ಎಷ್ಟು ಸಕ್ರಿಯರಾಗಿದ್ದಾರೆ ಮತ್ತು ಸಂಸ್ಥೆ ಎಷ್ಟು ವೃತ್ತಿಪರವಾಗಿ ನಡೆಯುತ್ತಿದೆ ಎಂಬುದೇ ಮುಖ್ಯ.»

ಮುಂದಿನ ದಾರಿ: ಮೂರು ವ್ಯವಸ್ಥೆಗಳೂ ಪರಸ್ಪರ ಕಲಿಯಬೇಕು ಇಂದು ಸಹಕಾರಿ ಕ್ಷೇತ್ರದ ಮುಂದೆ ಇರುವ ಪ್ರಶ್ನೆ “ಯಾವ ಕಾಯ್ದೆ ಶ್ರೇಷ್ಠ?” ಎಂಬುದಲ್ಲ.

ಪ್ರಶ್ನೆ:“ಯಾವ ವ್ಯವಸ್ಥೆಯಿಂದ ಸದಸ್ಯರಿಗೆ ಹೆಚ್ಚಿನ ಪ್ರಯೋಜನ ಕೊಡಬಹುದು ?”

1959ರ ವ್ಯವಸ್ಥೆಯಲ್ಲಿರುವ ಸಂಸ್ಥೆಗಳು ಸೌಹಾರ್ದ ವ್ಯವಸ್ಥೆಯ ಸ್ವಾಯತ್ತತೆ ಮತ್ತು ವೃತ್ತಿಪರತೆಯಿಂದ ಕಲಿಯಬಹುದು.

ಸೌಹಾರ್ದ ಸಹಕಾರಿಗಳು ಸಾಂಪ್ರದಾಯಿಕ ಸಹಕಾರಿಗಳ ದೀರ್ಘಕಾಲದ ಗ್ರಾಮೀಣ ಜಾಲ, ಸದಸ್ಯರ ಸಂಘಟನೆ ಮತ್ತು ಸಾಮಾಜಿಕ ಬದ್ಧತೆಯಿಂದ ಕಲಿಯಬಹುದು.

ರಾಜ್ಯಮಟ್ಟದ ಸಹಕಾರಿಗಳು ಬಹುರಾಜ್ಯ ಸಹಕಾರಿಗಳ ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ, ಬ್ರ್ಯಾಂಡಿಂಗ್ ಮತ್ತು ವೃತ್ತಿಪರ ನಿರ್ವಹಣೆಯಿಂದ ಕಲಿಯಬಹುದು.

ಅದೇ ರೀತಿ ಬಹುರಾಜ್ಯ ಸಹಕಾರಿಗಳು ಗ್ರಾಮಮಟ್ಟದ ಸದಸ್ಯರೊಂದಿಗೆ ನೇರ ಸಂಪರ್ಕ, ಸ್ಥಳೀಯ ಅಗತ್ಯಗಳು ಮತ್ತು ಸಹಕಾರಿ ಮೌಲ್ಯಗಳನ್ನು ಮರೆಯಬಾರದು.

ಸಹಕಾರದ ಭವಿಷ್ಯ – ಸ್ಪರ್ಧಾತ್ಮಕವೂ, ಸ್ವಾವಲಂಬಿಯೂ ಆಗಬೇಕು.ಇಂದು ಸಹಕಾರಿ ಸಂಸ್ಥೆಗಳು ಕೇವಲ ಸಾಲ ನೀಡುವ ಅಥವಾ ಹಾಲು ಸಂಗ್ರಹಿಸುವ ಸಂಸ್ಥೆಗಳಾಗಿ ಉಳಿಯಲು ಸಾಧ್ಯವಿಲ್ಲ. ಡಿಜಿಟಲೀಕರಣ, AI, ಇ-ಕಾಮರ್ಸ್, ಬ್ರ್ಯಾಂಡಿಂಗ್, ಮೌಲ್ಯವರ್ಧನೆ, ರಫ್ತು, ವೃತ್ತಿಪರ ನಿರ್ವಹಣೆ, ಯುವಜನರ ಭಾಗವಹಿಸುವಿಕೆ ಮತ್ತು ಮಹಿಳಾ ಸಬಲೀಕರಣ ಇವುಗಳೆಲ್ಲವೂ ಸಹಕಾರಿ* *ಕ್ಷೇತ್ರದ ಮುಂದಿನ ಅಧ್ಯಾಯವಾಗಬೇಕು.

ಕೇಂದ್ರ ಸರ್ಕಾರವೂ ಸಹಕಾರವನ್ನು ಗ್ರಾಮಮಟ್ಟಕ್ಕೆ ಆಳವಾಗಿ ಕೊಂಡೊಯ್ಯುವುದು, ಪಾರದರ್ಶಕತೆ, ಆಧುನೀಕರಣ, ಕಂಪ್ಯೂಟರೀಕರಣ ಮತ್ತು ಸ್ಪರ್ಧಾತ್ಮಕ ಸಹಕಾರಿ ಸಂಸ್ಥೆಗಳನ್ನು ನಿರ್ಮಿಸುವುದಕ್ಕೆ ಒತ್ತು ನೀಡುತ್ತಿದೆ. “ *ಸಹಕಾರದಿಂದ ಸಮೃದ್ಧಿ”* ಎಂಬ ಆಶಯ ಇದೇ ದಿಕ್ಕನ್ನು ಸೂಚಿಸುತ್ತದೆ.

ಕೊನೆಯ ಮಾತು

1959ರ ಸಹಕಾರಿ ಕಾಯ್ದೆ ಆಗಿರಲಿ, 1997ರ ಸೌಹಾರ್ದ ಸಹಕಾರಿ ಕಾಯ್ದೆ ಆಗಿರಲಿ, ಅಥವಾ ಬಹುರಾಜ್ಯ ಸಹಕಾರಿ ಕಾಯ್ದೆ ಆಗಿರಲಿ—ಮೂರು ದಾರಿಗಳ ಗುರಿ ಒಂದೇ: ಸದಸ್ಯರ ಸಮೃದ್ಧಿ.

  • ಕಾಯ್ದೆಗಳು ಬದಲಾಗಬಹುದು.
  • ಕಾರ್ಯವ್ಯಾಪ್ತಿ ಬದಲಾಗಬಹುದು.
  • ಆಡಳಿತದ ವಿಧಾನ ಬದಲಾಗಬಹುದು.
  • ತಂತ್ರಜ್ಞಾನ ಬದಲಾಗಬಹುದು.

ಆದರೆ “ನಾನು”ಗಿಂತ “ನಾವು” ಎಂಬ ಚಿಂತನೆ ಇರುವವರೆಗೆ ಸಹಕಾರ ಚಳವಳಿ ಜೀವಂತವಾಗಿರುತ್ತದೆ.

ಸಹಕಾರಿ ಸಂಸ್ಥೆಯ ನಿಜವಾದ ಬಂಡವಾಳ ಅದರ ಕಟ್ಟಡವಲ್ಲ, ಅದರ ಠೇವಣಿಯಲ್ಲ, ಅದರ ಯಂತ್ರೋಪಕರಣಗಳಲ್ಲ.

ಅದರ ನಿಜವಾದ ಬಂಡವಾಳ – ಸದಸ್ಯರ ವಿಶ್ವಾಸ.

ಆ ವಿಶ್ವಾಸವನ್ನು ಉಳಿಸಿಕೊಂಡು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಯುವಜನರನ್ನು ಸೆಳೆದು, ವೃತ್ತಿಪರ ನಿರ್ವಹಣೆಯನ್ನು ಬೆಳೆಸಿ, ರಾಜಕೀಯ ಮತ್ತು ವೈಯಕ್ತಿಕ ಹಿತಾಸಕ್ತಿಗಳಿಂದ ಸಂಸ್ಥೆಗಳನ್ನು ಮುಕ್ತವಾಗಿಟ್ಟುಕೊಂಡು, ಮೂರು ವ್ಯವಸ್ಥೆಗಳ ಉತ್ತಮ ಅಂಶಗಳನ್ನು ಪರಸ್ಪರ ಅಳವಡಿಸಿಕೊಂಡಾಗ ಮಾತ್ರ ಕರ್ನಾಟಕದ ಸಹಕಾರಿ ಚಳವಳಿ ಮತ್ತೊಂದು ಹೊಸ ಶಿಖರವನ್ನು ತಲುಪಲಿದೆ.

ಲೇಖಕರು: ✍️

ಸಾಣೂರು ನರಸಿಂಹ ಕಾಮತ್,

 ರಾಜ್ಯ ಪ್ರಧಾನ ಕಾರ್ಯದರ್ಶಿ, 

ಸಹಕಾರ ಭಾರತಿ ,ಕರ್ನಾಟಕ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More