![]()
ಕನ್ನಡ ರಾಜ್ಯೋತ್ಸವವು ಕನ್ನಡಿಗರ ಹೆಮ್ಮೆ, ನಾಡಿನ ಏಕತೆ ಮತ್ತು ಭಾಷಾಭಿಮಾನದ ಪ್ರತೀಕವಾಗಿದೆ. ಪ್ರತಿವರ್ಷ ನವೆಂಬರ್ ೧ರಂದು ಆಚರಿಸುವ ಕನ್ನಡ ರಾಜ್ಯೋತ್ಸವವು ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯನ್ನು ಸ್ಮರಿಸುವ ಪವಿತ್ರ ದಿನವಾಗಿದೆ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಕನ್ನಡಿಗನಿಗೂ ಜವಾಬ್ದಾರಿಯಿದ್ದು, ಈ ಮಹತ್ಕಾರ್ಯದಲ್ಲಿ ಸಹಕಾರ ಕ್ಷೇತ್ರವೂ ಮಹತ್ವದ ಪಾತ್ರ ವಹಿಸುತ್ತದೆ.
ಸಹಕಾರವೆಂದರೆ ಒಗ್ಗಟ್ಟು, ಪರಸ್ಪರ ನಂಬಿಕೆ, ಸಹಾಯ ಮತ್ತು ಸಾಮೂಹಿಕ ಪ್ರಗತಿಯ ಸಂಕೇತ. “ಒಗ್ಗಟ್ಟಿನಲ್ಲಿ ಬಲವಿದೆ” ಎಂಬ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಹಕಾರ ಸಂಸ್ಥೆಗಳು ಗ್ರಾಮೀಣ ಅಭಿವೃದ್ಧಿ, ಆರ್ಥಿಕ ಸಬಲೀಕರಣ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಪ್ರಗತಿಗೆ ಕೊಡುಗೆ ನೀಡುತ್ತಿವೆ. ರೈತರು, ಮಹಿಳೆಯರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಜನರ ಆರ್ಥಿಕ ಬದುಕಿಗೆ ಆಸರೆಯಾಗಿರುವ ಸಹಕಾರಿ ಸಂಸ್ಥೆಗಳು ಸಮಾಜದ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭಗಳಾಗಿವೆ.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಜವಾಬ್ದಾರಿ ಇನ್ನಷ್ಟು ಮಹತ್ವ ಪಡೆಯುತ್ತದೆ. ಸಹಕಾರಿ ಸಂಸ್ಥೆಗಳು ತಮ್ಮ ದೈನಂದಿನ ಆಡಳಿತ, ಸಭೆಗಳು, ತರಬೇತಿ ಕಾರ್ಯಕ್ರಮಗಳು ಮತ್ತು ಸದಸ್ಯರೊಂದಿಗೆ ನಡೆಯುವ ಸಂವಹನದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಸಂಸ್ಥೆಗಳ ನಾಮಫಲಕಗಳು, ಪ್ರಕಟಣೆಗಳು, ಅರ್ಜಿಗಳು, ಸೂಚನೆಗಳು ಹಾಗೂ ಮಾಹಿತಿ ಪತ್ರಗಳು ಕನ್ನಡದಲ್ಲಿಯೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇದರಿಂದ ಸಾಮಾನ್ಯ ಸದಸ್ಯರಿಗೆ ಸಂಸ್ಥೆಯ ಕಾರ್ಯವೈಖರಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಸಹಕಾರಿ ಸಂಘಗಳು ಕನ್ನಡದ ಮೂಲಕ ಜನರನ್ನು ತಲುಪುವ ಪರಿಣಾಮಕಾರಿ ಮಾಧ್ಯಮಗಳಾಗಿವೆ. ಸದಸ್ಯರಿಗೆ ಸಾಲ, ಉಳಿತಾಯ, ಮರುಪಾವತಿ, ಹಣಕಾಸಿನ ಶಿಸ್ತು ಮತ್ತು ಸಹಕಾರ ತತ್ವಗಳ ಕುರಿತು ಕನ್ನಡದಲ್ಲಿ ಮಾಹಿತಿ ನೀಡುವುದರಿಂದ ಅವರ ಅರಿವು ಹೆಚ್ಚುತ್ತದೆ. ಕನ್ನಡದಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳು ಸಿಬ್ಬಂದಿ ಮತ್ತು ಆಡಳಿತ ಮಂಡಳಿಯ ಸದಸ್ಯರ ಸಾಮರ್ಥ್ಯವರ್ಧನೆಗೂ ಸಹಕಾರಿಯಾಗುತ್ತವೆ.
ಮಹಿಳಾ ಸಹಕಾರಿ ಸಂಘಗಳು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಜೊತೆಗೆ ಸ್ಥಳೀಯ ಭಾಷೆ, ಸಂಸ್ಕೃತಿ ಹಾಗೂ ಜನಪದ ಪರಂಪರೆಯನ್ನು ಉಳಿಸುವ ಕಾರ್ಯದಲ್ಲಿಯೂ ಭಾಗವಹಿಸಬಹುದು. ಯುವಜನರನ್ನು ಸಹಕಾರ ಚಳವಳಿಗೆ ಪರಿಚಯಿಸುವ ಕಾರ್ಯಕ್ರಮಗಳು, ಕನ್ನಡ ಭಾಷಣ ಸ್ಪರ್ಧೆಗಳು, ಪ್ರಬಂಧ ಸ್ಪರ್ಧೆಗಳು, ಸಾಹಿತ್ಯ ಕಾರ್ಯಕ್ರಮಗಳು ಮತ್ತು ನಾಡು-ನುಡಿಯ ಕುರಿತ ಜಾಗೃತಿ ಅಭಿಯಾನಗಳನ್ನು ಆಯೋಜಿಸುವ ಮೂಲಕ ಸಹಕಾರಿ ಸಂಸ್ಥೆಗಳು ಕನ್ನಡದ ಮೇಲಿನ ಅಭಿಮಾನವನ್ನು ಬೆಳೆಸಬಹುದು.
ಇಂದಿನ ಡಿಜಿಟಲ್ ಯುಗದಲ್ಲಿ ಸಹಕಾರ ಕ್ಷೇತ್ರವು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಕನ್ನಡದ ಬಳಕೆಯನ್ನೂ ವಿಸ್ತರಿಸಬೇಕಾಗಿದೆ. ಸಹಕಾರಿ ಸಂಸ್ಥೆಗಳ ಜಾಲತಾಣಗಳು, ಸದಸ್ಯರ ಮಾಹಿತಿ ವ್ಯವಸ್ಥೆಗಳು, ಮೊಬೈಲ್ ಸಂದೇಶಗಳು ಮತ್ತು ಡಿಜಿಟಲ್ ಸೇವೆಗಳಲ್ಲಿ ಕನ್ನಡಕ್ಕೆ ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಇದರಿಂದ ತಂತ್ರಜ್ಞಾನವು ಸಾಮಾನ್ಯ ಜನರಿಗೆ ಇನ್ನಷ್ಟು ಸುಲಭವಾಗಿ ತಲುಪುತ್ತದೆ.
ಸಹಕಾರದ ಮೂಲ ತತ್ವವಾದ ಪರಸ್ಪರ ಸಹಾಯ ಮತ್ತು ಕನ್ನಡದ ಮೂಲ ಮೌಲ್ಯಗಳಾದ ಮಾನವೀಯತೆ, ಸಮಾನತೆ ಹಾಗೂ ಸೌಹಾರ್ದತೆ ಒಂದಕ್ಕೊAದು ಪೂರಕವಾಗಿವೆ. ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು ಕೇವಲ ಸರ್ಕಾರದ ಕರ್ತವ್ಯವಲ್ಲ; ಅದು ಪ್ರತಿಯೊಂದು ಸಂಸ್ಥೆ ಮತ್ತು ನಾಗರಿಕನ ಜವಾಬ್ದಾರಿಯಾಗಿದೆ.
ಆದ್ದರಿಂದ ಈ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರತಿಯೊಂದು ಸಹಕಾರಿ ಸಂಸ್ಥೆಯೂ ಕನ್ನಡದ ಬಳಕೆಯನ್ನು ಹೆಚ್ಚಿಸುವ, ಕನ್ನಡದಲ್ಲಿ ಸಹಕಾರ ಶಿಕ್ಷಣ ನೀಡುವ ಮತ್ತು ಕನ್ನಡಿಗರ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ನೆರವಾಗುವ ಸಂಕಲ್ಪ ಕೈಗೊಳ್ಳಬೇಕು.
“ಕನ್ನಡ ನಮ್ಮ ನುಡಿ, ಸಹಕಾರ ನಮ್ಮ ನಡಿಗೆ; ಒಗ್ಗಟ್ಟಿನ ಶಕ್ತಿಯಿಂದ ಸಮೃದ್ಧ ಕರ್ನಾಟಕದ ನಿರ್ಮಾಣವೇ ನಮ್ಮ ಗುರಿ.”
ಕನ್ನಡದ ಕಂಪು ಸಹಕಾರ ಕ್ಷೇತ್ರದ ಮೂಲಕ ಮನೆಮನೆಗೂ ತಲುಪಲಿ. ಸಹಕಾರದ ಬೆಳವಣಿಗೆಯೊಂದಿಗೆ ಕನ್ನಡವೂ ಬೆಳೆಯಲಿ, ಕನ್ನಡದ ಬೆಳವಣಿಗೆಯೊಂದಿಗೆ ಕರ್ನಾಟಕವೂ ಸಮೃದ್ಧವಾಗಲಿ.
ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!

ಶ್ರೀಮತಿ . ಸವಿತಾ .ಎನ್.ಇ
೬೩೬೦೨೬೯೨೦೫