ಸಹಕಾರದ ಅಡಿಪಾಯ ಸ್ವಯಂಆಡಳಿತˌ ಸ್ವಾಯತ್ತೆ. |ಶ್ರೀ ರಾಧಾಕೃಷ್ಣ ಕೋಟೆ.

ಸಹಕಾರೀಕ್ಷೇತ್ರದಲ್ಲಿ ಹಂತಹಂತವಾಗಿ ಈ ರಂಗದ ಪ್ರಬಲ ವಿಚಾರಧಾರೆ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಸಹಕಾರವನ್ನು ಬೀಜಾಂಕುರಗೈದವರಿಗೆ ಮಾಡುತ್ತಿರುವ ಅಪಚಾರ.ಬಂಡವಾಳಶಾಹಿಯಿಂದ ನೊಂದ ಇಂಗ್ಲೇಂಡಿ ನ ನೇಕಾರರು ರಾಬರ್ಟ್ ಓವೆನ್ ನೇತೃತ್ವದಲ್ಲಿ ಸಹಕಾರ ಚಳವಳಿಯನ್ನು ಹುಟ್ಟುಹಾಕಿದಾಗ “ನಮ್ಮವರಿಂದ ನಮ್ಮವರಿಗಾಗಿ” ಜೀವನವನ್ನು ಕಟ್ಟುವ ಮಹದಾಸೆ ಹೊಂದಿದ್ದರು. 119 ವರ್ಷಇತಿಹಾಸದ ದೇಶದ ಸಹಕಾರ ಚಳವಳಿಯಲ್ಲಿ ಇದರ ಹುಟ್ಟಿನಿಂದ ಪ್ರಾರಂಭವಾಗಿ ಇಂದಿನ ತನಕ ಸ್ವಾಯತ್ತೆ ˌಸ್ವಯಂಆಡಳಿತವನ್ನು ನಿರಂತರ ಪ್ರತಿಪಾದಿಸಲಾಗಿದೆ. ಆದರೆ ಹಲವಾರು ಭಾರಿ ಇದಕ್ಕೆ ದಕ್ಕೆತರುವ ಕಾರ್ಯಗಳು ಬೇರೆಬೇರೆ ಆಯಾಮಗಳಿಂದ ನಡೆದಿದೆ. ರಾಜಕೀಯ

ಹಸ್ತಕ್ಷೇಪ ˌಸ್ವಹಿತಾಸಕ್ತಿˌ ಸರಕಾರದ ಗೊತ್ತುಗುರಿಯಿಲ್ಲದ ದಮನಕಾರಿ ನಿರ್ಧಾರಗಳು ಸಹಕಾರದ ಮೂಲ ಸಿದ್ದಾಂತಕ್ಕೆ ದಕ್ಕೆ ತರುವಲ್ಲಿ ಬಹಳಷ್ಟು ಪರಿಣಾಮ ಬೀರಿವೆ.

ಸಹಕಾರ ಸಂಘಗಳ ವ್ಯಾಖ್ಯೆ(The defination of co-operative Societies)ಯನ್ನು ಬಲ್ಲವರು ಈ ರೀತಿಯಾಗಿ ಮಂಡಿಸಿರುತ್ತಾರೆ…..”ಸಹಕಾರ ಸಂಘಗಳು ಸ್ವಯಂಪ್ರೇರಣೆಯಿಂದ ಸಂಘಟಿತರಾದ ವ್ಯಕ್ತಿಗಳ ಸ್ವಾಯತ್ತ ಹಾಗೂ ಸಾಮೂಹಿಕ ಮಾಲಿಕತ್ವದಲ್ಲಿ ನಿಯಂತ್ರಿಸಲ್ಪಡುವ ಸಂಸ್ಥೆಯಾಗಿದ್ದುˌ ತಮ್ಮ ಆರ್ಥಿಕˌ ಸಾಮಾಜಿಕˌ ಸಾಂಸ್ಕೃತಿಕ ಅಗತ್ಯಗಳನ್ನು ಪೂರೈಸಿಕೊಳ್ಳುವ ಮಾಧ್ಯಮವಾಗಿರುತ್ತದೆ.” ಈ ವ್ಯಾಖ್ಯೆಯಲ್ಲಿ ಸಹಕಾರದ ಸಿದ್ಧಾಂತˌ ಗುಣಲಕ್ಷಣಗಳನ್ನು ಸ್ಪಷ್ಟವಾಗಿ ಒತ್ತಿಹೇಳಲಾಗಿದೆ. ಮೂಲ ಸಿದ್ಧಾಂತ ಹೀಗಿದ್ದರೂ ಇಂದು ಸಹಕಾರ ಮಾಧ್ಯಮ ಬೃಹತ್ತಾಗಿ ಬೆಳೆದಿರುವುದರಿಂದ ಅದನ್ನು ಸ್ವೇಚ್ಛೆ ˌಸ್ವ-ಹಿತ ಹಾಗೂ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಹಾಗೂ ಸರಕಾರ ದುರುಪಯೋಗಿಸು ತ್ತಿರುವುದು ಖಂಡನಾರ್ಹ.

ಇಂತಹ ಸಂದರ್ಭಗಳು ಕಾಣಿಸಿಕೊಂಡಾಗ ಸಹಕಾರಸಂಘಗಳ ಸದಸ್ಯರು ಹಾಗೂ ಸಹಕಾರದ ಬಗ್ಗೆ ಒಲವುಳ್ಳ ನಾಗರಿಕರು ಪ್ರತಿಬಾರಿಯೂ ವಿರೋಧಿಸುತ್ತಾ ಬಂದಿರುವುದು ಸ್ವಾಗತಾರ್ಹ ವಿಚಾರ.

ನಮ್ಮ ದೇಶದಲ್ಲಿ1904ರಲ್ಲಿ ಮೂಲ ಸಹಕಾರಿ ಕಾನೂನು ಜಾರಿಯಾಯಿತು. ಕಾನೂನಿನ ಸುಧಾರಣೆ, ಆ ಮೂಲಕ ಸಹಕಾರದ ಸುಧಾರಣೆಗಾಗಿ 1912ರಿಂದ ಇಂದಿನ ತನಕ ಹಲವಾರು ಸಮಿತಿಗಳು ರಚನೆಯಾಗಿ ಅವುಗಳು ಶಿಫಾರಸ್ಸಿನ ವರದಿಗಳನ್ನು ಸಲ್ಲಿಸುತ್ತಾ ಬಂದಿವೆ.ಎಲ್ಲಾ ಸಮಿತಿಗಳು ಸ್ವಾಯತ್ತೆಯ ತಳಹದಿಯಲ್ಲಿ ಸಹಕಾರದಲ್ಲಿ ಬದಲಾವಣೆ ಅಥವಾ ಬೆಳವಣಿಗೆಯ ಸೂತ್ರಗಳನ್ನು ಪ್ರತಿಪಾದಿಸಿವೆ. 1965ರಲ್ಲಿ ಅಂತರಾಷ್ಟ್ರೀಯ ಸಹಕಾರಿ ಮೈತ್ರಿ ಕೂಟ(ICA) ರಚಿಸಿದ ಏಳು ಸಹಕಾರಿ ನೀತಿಗಳು ಕೂಡಾ ಪ್ರಜಾಸತ್ತಾತ್ಮಕ ರೀತಿಯ ಸದಸ್ಯ ಹತೋಟಿˌಸ್ವಾಯತ್ತೆ ˌ ಸ್ವಾತಂತ್ರ್ಯದ ಬಗ್ಗೆ ವಿಶೇಷವಾಗಿ ಉಲ್ಲೇಖಿಸಿದೆ.

1970ರ ದಶಕದ ಬಳಿಕ ರಾಜಕೀಯ ಹಸ್ತಕ್ಷೇಪ ಅಧಿಕಾರಿಗಳ ಭ್ರಷ್ಟತೆ ಮಿತಿ ಮೀರಿತು .ಇದನ್ನು ಹದ್ದುಬಸ್ತಿನಲ್ಲಿಡಲು ಸಹಕಾರಿಗಳ ಒತ್ತಡ ತೀವ್ರವಾಯಿತು. ಈ ಹಂತದಲ್ಲಿ ಕೇಂದ್ರಸರಕಾರದಿಂದ ಅಧ್ಯಯನಕ್ಕಾಗಿ ನೇಮಕಗೊಂಡ ಅರ್ಧನಾರೀಶ್ವರನ್ ಸಮಿತಿ ಸಹಕಾರದ ಮೇಲಾಗಿರುವ ದುಷ್ಪರಿಣಾಮಗಳನ್ನು ಎತ್ತಿತೋರಿಸಿ ಸಹಕಾರದಲ್ಲಿ ಸ್ವಯಂಆಡಳಿತˌ ಸ್ವಾಯತ್ತೆ ಒಂದೇ ದಾರಿ ಎಂಬುದಾಗಿ ಪ್ರತಿಪಾದಿಸಿ ವರದಿ ನೀಡಿತು. ಈ ವರದಿ ಜಾರಿಗೆ ನೀತಿಗಳನ್ನು ರೂಪಿಸುವರೇ ನೇಮಕಗೊಂಡ ಚೌಧುರಿ ಬ್ರಹ್ಮಪ್ರಕಾಶ ನೇತೃತ್ವದ ಸಮಿತಿ ಸಹಕಾರಕ್ಕೆ ಸ್ವಯಂಆಡಳಿತˌ ಸ್ವಾಯತ್ತೆ ನೀಡಬಲ್ಲ ಸಂಪೂರ್ಣ ಪ್ರಜಾಸತ್ತಾತ್ಮಕವಾದ ಮಾದರಿ ಸಹಕಾರಿ ಕಾಯ್ದೆ ರಚಿಸಿ ಮಂಡನೆ ಮಾಡಿತು.ಹಲವು ರಾಜ್ಯಗಳು ಇದನ್ನು ಅನುಸರಿಸಿದವು. ಇದರ ಆಧಾರದಲ್ಲಿ ಕೇಂದ್ರ ಸರಕಾರದ ಬಹುರಾಜ್ಯ ಸಹಕಾರಿ ಕಾಯ್ದೆ 2002 ರಲ್ಲಿ ಸಂಪೂರ್ಣ ತಿದ್ದುಪಡಿಗೊಂಡು ಸ್ವಾಯತ್ತಾ ಕಾಯಿದೆಯಾಯಿತು. ಕರ್ನಾಟಕದಲ್ಲಿ ಮಾದರಿ ಕಾಯ್ದೆ ಸ್ವರೂಪದ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ1997ರಲ್ಲಿ ಜಾರಿಯಾಯಿತು. ದೇಶದ ಕೃಷಿ ಪತ್ತಿನ ಸಹಕಾರಿ ಸಂಘಗಳ ಪುನರುಜ್ಜೀವನಕ್ಕಾಗಿ ಪ್ರೊ. ವೈದ್ಯನಾಥನ್ ಸಮಿತಿ ಸಮಗ್ರ ವರದಿಯೊಂದನ್ನು 2004ರಲ್ಲಿ ಬಿಡುಗಡೆ ಮಾಡಿತು. ಮಾದರಿ ಸಹಕಾರಿ ಕಾಯ್ದೆ ಹಾಗೂ ಪ್ರೊ. ವೈದ್ಯನಾಥನ್ ವರದಿಯ ತಳಹದಿಯಲ್ಲಿ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959 -2010ರಲ್ಲಿ ತಿದ್ದುಪಡಿಗೆ ಒಳಪಟ್ಟಿತು. ಇದರಲ್ಲಿ ಸ್ವಾಯತ್ತೆ , ಸ್ವಯಂಆಡಳಿತಕ್ಕೆ ಒತ್ತು ನೀಡಲ್ಪಟ್ಟು ಹಲವಾರು ಕಲಂಗಳು ತಿದ್ದುಪಡಿಯಾದವು.

ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959 ರ ಕಲಂ128ಎ ರಂತೆ ಸಹಕಾರ ಸಂಘಗಳ ನೌಕರರ ಸಾಮಾನ್ಯ ಶ್ರೇಣಿ ಪ್ರಾಧಿಕಾರ ರಚನೆ(comman cadre authority)ಗೆ ಅವಕಾಶವಿತ್ತು.ಇದರ ಅನ್ವಯ ಸಹಕಾರಿ ಸಂಘಗಳ ನೌಕರರ ನೇಮಕ ˌಸಂಬಳ-ಸವಲತ್ತು ˌವರ್ಗಾವಣೆ ಮುಂತಾದವುಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ ಆ ಮೂಲಕ ನೌಕರರ ಹತೋಟಿಯನ್ನು ಸಹಕಾರ ಸಂಘಗಳ ಆಡಳಿತ ಮಂಡಳಿಯಿಂದ ಮೊಟಕುಗೊಳಿಸುವುದಾಗಿರುತ್ತದೆ. ಕಾಯಿದೆಯಲ್ಲಿ ಅವಕಾಶವಿದ್ದರೂ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಸಹಕಾರಿ ಬ್ಯಾಂಕ್ ( PCARD Bank) ಹೊರತು ಪಡಿಸಿ ಇನ್ನಾವುದೇ ಸಹಕಾರಿ ವಲಯದಲ್ಲಿ ಇದು ಜಾರಿಯಾಗಿರಲಿಲ್ಲ. ಪಿಕಾರ್ಡು ಬ್ಯಾಂಕುಗಳಿಗೆ ಸಂಬಂಧಿಸಿ ಇಡೀ ರಾಜ್ಯಕ್ಕೆ ಒಂದು ಪ್ರಾಧಿಕಾರವಿದ್ದು ಈಗಾಗಲೇ ಹಲವು ಸುಸ್ಥಿರ ಪಿಕಾರ್ಡು ಬ್ಯಾಂಕುಗಳು ಪ್ರಾಧಿಕಾರವು ವ್ಯವಸ್ಥಿತ ಕಾರ್ಯಾಚರಣೆ ಇಲ್ಲದೇ ಬಳಲುತ್ತಿವೆ. ಪಿಕಾರ್ಡು ಬ್ಯಾಂಕು ಸಾಮಾನ್ಯ ಶ್ರೇಣಿ ಪ್ರಾಧಿಕಾರ ಹೊಸ ನೇಮಕಾತಿಗಳನ್ನು ಪ್ರಾದೇಶಿಕ ಅವಶ್ಯಕತೆ ಮನಗಂಡು ಕಾರ್ಯಗತಗೊಳಿಸುತ್ತಿಲ್ಲ. ದ.ಕ. ಜಿಲ್ಲೆಯಂತಹ ಸಹಕಾರಿ ವ್ಯವಸ್ಥೆ ಮುಂದುವರಿದ ಪ್ರದೇಶದ ಕೆಲವೊಂದು ಪಿಕಾರ್ಡುಬ್ಯಾಂಕುಗಳಲ್ಲಿ 8-10ಖಾಯಂ ನೌಕರರ ಅವಶ್ಯಕತೆ ಇರುವಲ್ಲಿ ಕೇವಲ ಒಬ್ಬರು -ಇಬ್ಬರು ಖಾಯಂ ನೌಕರರಿದ್ದು ಉಳಿದ ಎಲ್ಲರೂ ಆಡಳಿತ ಮಂಡಳಿ ವ್ಯವಹಾರದ ಅವಶ್ಯಕತೆಗಾಗಿ ನೇಮಿಸಿದ ದಿನಕೂಲಿ ನೌಕರರಾಗಿರುತ್ತಾರೆ. ( ಅಧಿಕೃತವಾಗಿ ದಿನಕೂಲಿ ನೌಕರರ ನೇಮಕಾತಿಗೆ ಸಹಕಾರ ಇಲಾಖೆಯ ನಿರ್ಬಂಧ ಇದೆ. ) ಇವರಿಗೆ ನೌಕರಿಯ ಭದ್ರತೆ ˌಸವಲತ್ತುˌ ಹುದ್ದೆಯ ಉತ್ತರದಾಯಿತ್ವ ಯಾವುದು ಇರುವುದಿಲ್ಲ. ಇದು ಹಲವು ವರ್ಷಗಳಿಂದ ನಡೆದು ಬಂದಿದ್ದು ಪ್ರಾಧಿಕಾರ ಜವಾಬ್ದಾರಿಯುತವಾಗಿ ವರ್ತಿಸದೇ ಇರುವುದು ಸಹಕಾರದ ಆರೋಗ್ಯಕ್ಕೆ ಮಾರಕ.

ಸುಮಾರು 30ವರ್ಷಗಳ ಹಿಂದೆ1990ರ ದಶಕದ ಆರಂಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕಾರ್ಯದರ್ಶಿಗಳಿಗೆ ಸಂಬಂಧಿಸಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ನೇತೃತ್ವದಲ್ಲಿ ಸಹಕಾರಿ ಕಾಯಿದೆ ಕಲಂ128ಎ ಅನ್ವಯ ಈ ರೀತಿಯ ಪ್ರಾಧಿಕಾರ ರಚನೆಗೆ ಸರಕಾರ ಆದೇಶ ನೀಡಿತ್ತು .ಈ ಕಲಂನಲ್ಲಿ ಹೇಳಿದಂತೆ ಆಡಳಿತ ವೆಚ್ಚ ಭರಿಸುವರೇ ಪ್ರತಿಯೊಂದು ಸಹಕಾರಿಸಂಘವು ತಮ್ಮ ವಂತಿಗೆ(management contribution)ಯನ್ನು ಪ್ರಾಧಿಕಾರಕ್ಕೆ ಪ್ರತಿ ವರ್ಷ ಪಾವತಿಸತಕ್ಕದ್ದು. ಪ್ರಾಧಿಕಾರ ರಚನೆಯ ಆದೇಶ ಜಾರಿಯಾದರೂ ನಂತರದ ದಿನಗಳಲ್ಲಿ ಅದು ಕಾರ್ಯಗತವಾಗದೆ ಸ್ಥಗಿತಗೊಂಡಿತ್ತು. ಸಹಕಾರ ಸಂಘಗಳ

ಕಾಯಿದೆ 1959–2010ರಲ್ಲಿ ತಿದ್ದುಪಡಿಗೆ ಒಳಪಟ್ಟಾಗ ಕಲಂ128ಎಯನ್ನು ಸಹಕಾರಿ ಕ್ಷೇತ್ರದ ಸ್ವಾಯತ್ತತೆ ದೃಷ್ಟಿಯಿಂದ ರದ್ದುಪಡಿಸಿತು.2011ರಲ್ಲಿ ಪಿಕಾರ್ಡು ಬ್ಯಾಂಕುಗಳಿಗೆ ಮಾತ್ರ ಸಂಬಂಧಿಸಿ ಕಾಯಿದೆ ಕಲಂ97ಎ ಮೂಲಕ ಸಾಮಾನ್ಯ ಶ್ರೇಣಿ ಪ್ರಾಧಿಕಾರ ಕಾರ್ಯಾಚರಣೆಗೆ ಸರಕಾರ ಪುನರ್ಜೀವ ನೀಡಿತು. ಇತ್ತೀಚೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಸಂಬಂಧಿಸಿ ಪ್ರಾಧಿಕಾರ ರಚನೆಗೆ ಸರಕಾರ ಮಸೂದೆ ಮಂಡನೆಗೆ ಮುಂದಾಗಿದೆ. ಸಹಕಾರದ ಮೂಲ ಸಿದ್ಧಾಂತಕ್ಕೆ ದಕ್ಕೆ ತರಬಲ್ಲ ಸಂಘ ಹಾಗೂ ಆಡಳಿತ ಮಂಡಳಿಯ ಸ್ವಾಯತ್ತತೆಯನ್ನು ವಿನಾಶ ಗೊಳಿಸುವ ಹುನ್ನಾರವನ್ನು ಪ್ರತಿಯೊಬ್ಬ ಸಹಕಾರಿಯು ವಿರೋಧಿಸುವ ಹಂತ ಇದಾಗಿದೆ. ಕೆಲವೊಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅವ್ಯವಹಾರ ಹಾಗೂ ಕರ್ತವ್ಯಲೋಪವನ್ನು ಮಾಡುತ್ತಿದ್ದು ಅದನ್ನು ತಡೆಯುವ ಉದ್ದೇಶದಿಂದ ಅವರನ್ನು ಡಿ ಸಿ ಸಿ ಬ್ಯಾಂಕು ನೇತೃತ್ವದ ಪ್ರಾಧಿಕಾರ ವರ್ಗಾವಣೆ ಮಾಡುವ ಮೂಲಕ ಕಡಿವಾಣ ಹಾಕುವ ಉದ್ದೇಶವನ್ನು ಪ್ರಾಧಿಕಾರ ರಚನೆಯ ಹಿನ್ನಲೆಯು ಹೊಂದಿದೆ ಎಂಬ ಸಮರ್ಥನೆ ಯನ್ನು ಸರಕಾರ ನೀಡುತ್ತಿದೆ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕರ್ತವ್ಯಲೋಪ ˌಅವ್ಯವಹಾರ ಮಾಡಿದರೆ ಆಡಳಿತ ಮಂಡಳಿಯು ಅದನ್ನು ನಿಭಾಯಿಸಬೇಕು ಹೊರತು ಆಡಳಿತ ಮಂಡಳಿಯ ಸ್ವಾಯತ್ತೆಗೆ ದಕ್ಕೆ ತರುವುದು ಸಹಕಾರ ಸಿದ್ದಾಂತವಲ್ಲ. ಕರಾವಳಿ ಮಲೆನಾಡು ಭಾಗದ ಸಹಕಾರಿಸಂಘಗಳಿಗೆ ಇದರಿಂದ ಅನುಕೂಲಕ್ಕಿಂತ ಅನಾನುಕೂಲದ ಪರಿಣಾಮಗಳು ಜಾಸ್ತಿ.

ಸಾಮಾನ್ಯ ಶ್ರೇಣಿ ಪ್ರಾಧಿಕಾರದಿಂದ ಸಹಕಾರದಮೇ ಲಾಗುವ ವ್ಯತಿರಿಕ್ತ ಪರಿಣಾಮಗಳು.

*ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಂಘದ ದೈನಂದಿನ ವ್ಯವಹಾರದ ಕೇಂದ್ರಬಿಂದು ಹಾಗೂ ಚುಕ್ಕಾಣಿದಾರ .ಸ್ಥಳೀಯ ವ್ಯಕ್ತಿ ಅಥವಾ ಖಾಯಂ ನಿಯುಕ್ತಿಗೊಂಡವನಾದರೆ ಸಂಘದ ಸದಸ್ಯರ ವ್ಯವಹಾರದ ಬಗ್ಗೆ ಆತನಿಗೆ ನಿಕಟವಾದ ಸಂಪರ್ಕವಿದ್ದು ಸಾಲನೀಡುವಿಕೆ ˌವಸೂಲಾತಿ ಹಾಗೂ ಗ್ರಾಹಕವ್ಯವಹಾರˌ ಮಾರುಕಟ್ಟೆ ಮುಂತಾದ ಸಂಸ್ಥೆಯ ಹತ್ತುಹಲವು ವ್ಯವಹಾರಗಳ ಬಗ್ಗೆ ಪರಿಪೂರ್ಣ ಜ್ಞಾನವಿರುತ್ತದೆ. ಸಂಘದಿಂದ ಸಂಘಕ್ಕೆ ಪ್ರಾದೇಶಿಕ ಭಿನ್ನತೆ ಇರುವುದರಿಂದ ವರ್ಗಾವಣೆಗೊಂಡು ಬಂದವನಿಗೆ ವ್ಯವಹಾರದ ನಿಭಾಯಿಸುವಿಕೆ ಸುಲಭ ಸಾಧ್ಯವಲ್ಲ.

*ವರ್ಗಾವಣೆಗೊಂಡು ಬರುವವರು ಸರಕಾರಿ ನೌಕರರ ಶೈಲಿಯಲ್ಲಿ ಕಾರ್ಯನಿರ್ವಹಿಸಬಹುದೇ ಹೊರತು ಅವಿನಾಭಾವ ಸಂಬಂಧದಲ್ಲಿ ಸಂಘದಲ್ಲಿ ಆಸ್ಥೆಯಿಂದ ಕಾರ್ಯ ನಿರ್ವಹಿಸಲಾರರು. ಸ್ಥಳೀಯವಾಗಿ ಮುಲಾಜಿಲ್ಲದ ಈತ ಸರಕಾರಿ ನೌಕರರಂತೆ ಭ್ರಷ್ಟನಾಗುವ ಸಾಧ್ಯತೆಗಳಿವೆ. ಇದು ಸದಸ್ಯರಿಗೆ ಹೊಡೆತವಾಗಬಹುದು.

*ಸಾಮಾನ್ಯ ಶ್ರೇಣಿ ಪ್ರಾಧಿಕಾರದ ಹಿಡಿತದ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಡಳಿತ ಮಂಡಳಿಯ ನಿರ್ಣಯಗಳನ್ನು ಚಾಚುತಪ್ಪದೇ ಜಾರಿಗೊಳಿಸುವ ಸಾಧ್ಯತೆ ಕಡಿಮೆ.

*ಆಡಳಿತ ಮಂಡಳಿಗೆ ಆತನ ಮೇಲೆ ಹಿಡಿತವಿಲ್ಲದ ಕಾರಣ ಆಡಳಿತಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧ್ಯೆ ಘರ್ಷಣೆಯ ಸಾಧ್ಯತೆಗಳು ಬಲವಾಗಿದ್ದು ಸಂಸ್ಥೆ ಇದರಿಂದ ಬಸವಳಿಯಬಹುದು.

* ಆತನಿಗೆ ಸಂಸ್ಥೆಯ ಬಗ್ಗೆ ಖಾಯಂ ಸಿಬ್ಬಂಧಿಯ ರೀತಿಯ ಮಮಕಾರˌ ನಮ್ಮದು ಎನ್ನುವ ಪ್ರೀತಿ ಜಾಗ್ರತೆ ಯಾವುದು ಇರಲಾರದು.

*ಇಂದು ಕರಾವಳಿ ಮಲೆನಾಡಿನ ಬಹುಸಂಖ್ಯೆಯ ಪ್ಯಾಕ್ಸ್ ಗಳ ಯಶಸ್ವಿನ ಹಿನ್ನಲೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿ ಏಕಪಥದಲ್ಲಿ ಸಾಗುತ್ತಿರುವುದು.

*ಡಿ ಸಿ ಸಿ ಬ್ಯಾಂಕು ನೇತೃತ್ವದ ಸಾಮಾನ್ಯ ಶ್ರೇಣಿ ಪ್ರಾಧಿಕಾರ ಹಾಗೂ ಆಡಳಿತ ಮಂಡಳಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಲ್ಲಿ CEO ಪ್ರಾಧಿಕಾರದ ಹಿಡಿತದವ ನಾಗಿರುವುದರಿಂದ ಸಂಘ ಬಳಲುವ ಸಾಧ್ಯತೆ ಬಹಳಷ್ಟಿದೆ.

ಈ ರೀತಿ ಸಾಮಾನ್ಯಶ್ರೇಣಿ ಪ್ರಾಧಿಕಾರ ರಚನೆಯಿಂದ ಅನುಕೂಲಕ್ಕಿಂತ ಸಂಸ್ಥೆಯ ಮುನ್ನಡೆಗೆ ಮಾರಕವಾಗುವ ಅಂಶ ಬಹಳಷ್ಟಿದೆ.ಕರಾವಳಿ ಮಲೆನಾಡಿನ ಸಹಕಾರ ಚಳವಳಿಗೆ ಬಹುದೊಡ್ಡ ಹೊಡೆತ ಬೀಳಬಹುದು. ಬಯಲು ಸೀಮೆಹಾಗೂ ಉತ್ತರ ಕರ್ನಾಟಕದ ಕೆಲವೊಂದು CEO ಗಳು ಆಡಳಿತ ಕಾರ್ಯವೈಖರಿ ಸರಿ ಇಲ್ಲ ಎನ್ನುವ ಕಾರಣಕ್ಕೆ ಸುಲಲಿತವಾಗಿ ಸಿದ್ಧಾಂತದ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳನ್ನು ಬಲಿನೀಡುವ ಪ್ರಸ್ತಾಪ ಏನೇನೂ ಸಮಂಜಸ ಅಲ್ಲ. ಪಿಕಾರ್ಡು ಬ್ಯಾಂಕು ಸಾಮಾನ್ಯ ಶ್ರೇಣಿ ಪ್ರಾಧಿಕಾರದ ಕಾರ್ಯವನ್ನು ಅಧ್ಯಯನ ನಡೆಸಿ ತುಲನೆ ಮಾಡಿದಾಗ ಪ್ಯಾಕ್ಸ್ ಸಂಬಂಧಿತ CCA ಪ್ರಸ್ತಾವನೆ ಸರಿದಾರಿಯಲ್ಲಿ ಕಾರ್ಯಾಚರಿಸುವ ಸಂಘಗಳನ್ನು ಹಾಳುಗೆಡಹುವ ಹುನ್ನಾರ ಎಂಬ ಅಂಶ ಬೆಳಕಿಗೆ ಬರುತ್ತದೆ.

ಸಹಕಾರದ ಸ್ವಚ್ಫತೆ ˌಸ್ವಾಯತ್ತತೆ ದೃಷ್ಟಿಯಿಂದ ಸರಕಾರ ಈ ಪ್ರಸ್ತಾವನೆಯನ್ನು ಕೈಬಿಡಬೇಕು. ಹಾಗೇಯೇ ಪಿಕಾರ್ಡು ಬ್ಯಾಂಕು ಸಂಬಂಧಿತ ಸಾಮಾನ್ಯ ಶ್ರೇಣಿ ಪ್ರಾಧಿಕಾರ (ಕಾಯಿದೆ ಕಲಂ97a) ರದ್ದುಪಡಿಸಿ ಆಡಳಿತ ಮಂಡಳಿಗೆ ನೌಕರರ ಸಂಪೂರ್ಣ ನಿಭಾವಣೆಯನ್ನು ಹಸ್ತಾಂತರಿಸಬೇಕು. ಸಹಕಾರ ಸ್ವಾಯತ್ತಾ ಕ್ಷೇತ್ರವಾಗಿ ಬೆಳೆಯಲು ಸರಕಾರ ಪ್ರೋತ್ಸಾಹಿಸಲಿ.

ರಾಧಾಕೃಷ್ಣ ಕೋಟೆ

ಅಂಚೆ :ಕಳಂಜ ಸುಳ್ಯ ತಾಲೂಕು

 ದ. ಕ. 574212

  9448503424

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More