ಸಹಕಾರಿ ಸಂಘ ಸಂಸ್ಥೆಗಳ ಪೈಕಿ ಯಾವುದು ಹೆಚ್ಚು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆಯೋ ಅದರ ಯಶಸ್ಸಿನ ಹಿಂದೆ ಅನೇಕ ಅಂಶಗಳು ಅಡಕವಾಗಿದ್ದರೂ ಮುಖ್ಯವಾದ ಯಶಸ್ಸು ಒಲಿದು ಬರುವುದು ಸಿಬ್ಬಂದಿಗಳ ನಗುಮೊಗದ ಸೇವೆಯಿಂದ. ಸದಸ್ಯ ಅಥವಾ ಗ್ರಾಹಕ ಯಾವುದೇ ಉದ್ದೇಶದಿಂದ ಸಂಘದ ಕಚೇರಿಗೆ ಬಂದಾಗ ನಮಸ್ಕಾರ ಹೇಳಿ ನಗುಮೊಗದಿಂದ ಯಾವ ಸಿಬ್ಬಂದಿ ವಿಚಾರಿಸುತ್ತಾರೊ ಅದು ಸರಿಯಾದ ಸೇವೆಯ ಮೊದಲಮೆಟ್ಟಿಲು. ನಾವು ಎಷ್ಟೋ ಕಡೆ ಗಮನಿಸುತ್ತೇವೆ. ಒಳಗೆ ಬಂದು ಕೂತರೂ ನೋಡಿಯೂ ನೋಡದವರಂತೆ ವರ್ತಿಸುವವರು, ನೋಡಿದರೂ ಮುಖದಲ್ಲೊಂದು ಮಂದಹಾಸದ ನಗುವಿನ ಮಿಂಚನ್ನು ಹಾಯಿಸದೆ ಮುಖಗಂಟಿಕ್ಕಿ ನೋಡುವವರು, ಮಾತನಾಡಿಸಿದರೂನಯ ವಿನಯಗಳನ್ನು ಅಡವಿಟ್ಟವರಂತೆ ದರ್ಪ ಮತ್ತು ಅಹಂಕಾರದ ಸ್ವರದಲ್ಲಿ ವಿಚಾರಿಸುವವರು, ಬಂದು ಅರ್ಧಗಂಟೆ ಕಳೆದರೂ ಮಾತನಾಡಿಸದೆ ತೆಪ್ಪಗಿದ್ದು ಬಿಡುವವರು ಹೀಗೆ ಅನೇಕ ವಿಧದ ಮುಖವಾಡಗಳನ್ನು ಧರಿಸಿದ ಸಿಬ್ಬಂದಿ ನಮಗೆ ಕಾಣಸಿಗುತ್ತಾರೆ.
ಉಪಚಾರ
ಒಬ್ಬ ಸದಸ್ಯ ಅಥವಾ ಗ್ರಾಹಕನಾದವನು ಬಾಗಿಲು ದಾಟಿ ಬಂದಾಗ ಸಿಬ್ಬಂದಿ ಗಮನಿಸಲೇಬೇಕು. ಮೊದಲು ಮುಗುಳುನಗು ಮತ್ತೆ ನಮಸ್ಕಾರ. ಹೇಗಿದ್ದೀರಿ…? ಎಂಬ ಒಂದು ಮಾತು ಅವರನ್ನು ಪೂರ್ತಿ ಸಂಪ್ರೀತಿಗೊಳಿಸಿಬಿಡುತ್ತದೆ. ತುಂಬ ಕೆಲಸಗಳ ನಡುವೆ ಸಿಬ್ಬಂದಿ ಇದ್ದರೆ ಅಥವಾ ಮೊದಲೆ ಬಂದ ಹೆಚ್ಚು ಜನರಿದ್ದರೆ ಸ್ವಾಮಿ, ಸ್ವಲ್ಪ ಕುಳಿತುಕೊಳ್ಳಿ, ನಾನು ನಿಮ್ಮನ್ನು ಕರೀತೇನೆ ಎಂದು ಬಿಟ್ಟರೆ ಸಾಕು ಸಿಬ್ಬಂದಿ ಎಷ್ಟು ಹೊತ್ತು ಮಾಡಿದರೂ ಬಂದ ವ್ಯಕ್ತಿ ಸಿಟ್ಟಾಗುವುದು ಸಾಧ್ಯವಿಲ್ಲ. ಹಾಗೆಂದು ಜನ ಕಡಿಮೆಯಿದ್ದರೆ ಈ ಮಾತುಗಳಿಗೆಲ್ಲ ಯಾವ ಬೆಲೆಯೂ ಸಿಗಲಾರದು ಎಂಬುದು ನೆನಪಿರಬೇಕು.
ಹಾಳುಹರಟೆ
ಕೆಲವು ಕಡೆ ಏನಾಗುತ್ತದೆಯೆಂದರೆ ನಾಲ್ಕೈದು ಜನ ಬಂದು ಕುಳಿತಿದ್ದರೂ ಅವರನ್ನು ಗಮನಿಸದೆ ಮತ್ತೆ ಬಂದ ಒಬ್ಬ ವ್ಯಕ್ತಿಯನ್ನು ಸಿಬ್ಬಂದಿ ವಿಶೇಷವಾಗಿಗುರುತಿಸಿ ಅವರ ಜತೆ ಹರಟೆ ಹೊಡೆಯಲು ಆರಂಭಿಸಿಬಿಡುತ್ತಾನೆ. ನಿಜವಾಗಿ ನೋಡಿದರೆ ಆ ವ್ಯಕ್ತಿ ಸಿಬ್ಬಂದಿಯ ನೆರೆ ಮನೆಯವನೊ ಸಂಬಂಧಿಕನೊ ಅಥವಾ ಗೆಳೆಯನೊ ಆಗಿರಬೇಕು ಅಷ್ಟೇ. ಬಂದು ಕುಳಿತವರನ್ನು ಮಾತನಾಡಿಸದೆ ಸಾಮಾನ್ಯ ವ್ಯಕ್ತಿಯೊಬ್ಬನನ್ನು ಪ್ರತ್ಯೇಕವಾಗಿ ಮಾತನಾಡಿಸುವುದು ಸರಿಬರುವುದಿಲ್ಲ. ಒಬ್ಬಅಧ್ಯಕ್ಷನೊ, ನಿರ್ದೇಶಕನೊ ಬಂದುದಾದರೆ ಕೂಡ ಹಾಳುಹರಟೆ ಈ ಸಮಯದಲ್ಲಿ ಮಾನ್ಯವಾಗುವುದಿಲ್ಲ. ಇದು ಸೇವೆಯ ದೃಷ್ಟಿಯಲ್ಲಿ ಲೋಪ ಎಂದು ಗುರುತಿಸಲ್ಪಡುತ್ತದೆ.
ಅರಿವು ತಿಳಿವು
ಬಂದ ಗ್ರಾಹಕನನ್ನು ವಿಚಾರಿಸಿ ಆತನಿಗೆ ಕೂಡಲೆ ಕೆಲಸಗಳನ್ನು ಮಾಡಿಕೊಡುವುದು ನಿಜವಾದ ಸಹಕಾರಿ ಸಂಘ ಸಂಸ್ಥೆಗಳ ಸೇವೆ. ಅದು ರಾಷ್ಟ್ರೀಕೃತ ಬ್ಯಾಂಕುಗಳ ಸೇವೆಯಂತಿರಬಾರದು. ಬಂದವರು ಇಲ್ಲಿಗೆ ಯಾಕೆ ಬಂದೆನೊ ಅನ್ನುವಂತಿರಬಾರದು. ಕಾಲು ಗಂಟೆಗೊಮ್ಮೆ ಕಂಪ್ಯೂಟರ್ ಹಾಳಾಗುವುದು, ಸರ್ವರ್ ತೊಂದರೆ ಕೊಡುವುದು ಸಹಕಾರಿ ಮರ್ಜಿಯಲ್ಲಿ ಬರಬಾರದು. ಅದಕ್ಕೆಲ್ಲ ಮುಂಜಾಗರೂಕತೆ ವಹಿಸುತ್ತಲೇ ಇರಬೇಕು. ಸದಸ್ಯ ಬಂದು ಬ್ಯಾಂಕಿಗೆ ಸಂಬಂಧಿಸಿದ ಮತ್ತು ಸದಸ್ಯನಿಗೆ ಸಿಬ್ಬಂದಿ ಹೇಳಬಹುದಾದ ವಿಷಯಗಳನ್ನು ಸದಾ ತಿಳಿದಿರಬೇಕು. ನಿರಖು ಠೇವಣಿಗಳ ಬಡ್ಡಿದರಗಳು, ಸಾಲ ಪಡೆವಾಗ ಬೇರೆ ಬೇರೆ ಸಾಲಗಳ ಬಡ್ಡಿದರಗಳು, ಬಡ್ಡಿ ಕಟ್ಟಲು ಕಂತುಗಳು ಇವೆಲ್ಲವನ್ನು ತಿಳಿಸಿದರೆ ಸದಸ್ಯ ಸಂತೃಪ್ತನಾಗಿಬಿಡುತ್ತಾನೆ. ಕೃಷಿ ಸಾಲವಾಗಲಿ ಅಥವಾ ಇನ್ನಿತರ ಸಾಲಗಳಾಗಲಿ, ಸಾಲ ಪಡೆಯಬೇಕಾದವ ತರಬೇಕಾದ ಕಡತ, ದಾಖಲೆಗಳನ್ನು ಒಂದು ಚೀಟಿಯಲ್ಲಿ ಬರೆದುಕೊಟ್ಟರೆ ಬಹಳ ನಾಜೂಕು ಸೇವೆ ಅನ್ನಿಸಿಬಿಡುತ್ತದೆ.
ನೆಮ್ಮದಿ, ಕೆಲಸಕ್ಕೆ ಉತ್ತೇಜನ
ಸಿಬ್ಬಂದಿಗಳ ನೆಮ್ಮದಿ, ಕೆಲಸ ಕಾರ್ಯಗಳಿಗೆ ಉತ್ತೇಜನ ಕೊಡುವುದು ಯಾವತ್ತೂ ಆಡಳಿತ ಮಂಡಳಿಯ ಕರ್ತವ್ಯ. ಸೇವೆಯಲ್ಲಿ ಲೋಪಗಳಾದರೆ ಅದರ ಹಿಂದಿರುವ ಸತ್ಯಗಳನ್ನು ಒಳಹೊಕ್ಕು ನೋಡಬೇಕು. ಅನಂತರ ಜಾಗರೂಕತೆಯಿಂದ ಕಾರಣಗಳನ್ನು ಹುಡುಕಿ ಅಲ್ಲಿ ಅಸಡ್ಡೆಯಾದರೆ, ಸಮಸ್ಯೆಗಳಿದ್ದರೆ, ಅಸಮಾಧಾನ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮುಂತಾದವುಗಳನ್ನು ಕಂಡರೆ ನಿರ್ದೇಶಕರೆಲ್ಲ ಕುಳಿತು ಸಮಾಲೋಚಿಸಿ ನಿವಾರಣೋಪಾಯಗಳನ್ನು ತುರ್ತಾಗಿ ಮಾಡಬೇಕು. ತಡವಾದಷ್ಟು ಸಂಘಕ್ಕೆ ಹಾನಿಯಾಗಿಬಿಡುತ್ತದೆ. ನಗುಮೊಗದ ಸೇವೆ ಸಿಬ್ಬಂದಿಗಳಿಂದ ಸಿಗಬೇಕಾದರೆ ಅದರ ಹಿಂದೆ ಆಡಳಿತ ಮಂಡಳಿ ಸಾಕಷ್ಟು ಸಾಧನೆ, ತಾಳ್ಮೆ, ತ್ಯಾಗಗಳನ್ನು ಮಾಡಿರಬೇಕಾಗುತ್ತದೆ. ಸಂಸ್ಥೆಯನ್ನು ಬೆಳೆಸುವ ದೃಷ್ಟಿಯಿಂದ ಇದೆಲ್ಲವೂ ಅಗತ್ಯ ಮತ್ತು ಅನಿವಾರ್ಯ.
– ಶಂ. ನಾ. ಖಂಡಿಗೆ
ಶಂಕರನಾರಾಯಣ ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ- 671552
ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ
(ಲೇಖಕರು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರು, ಮೊಬೈಲ್ : 09946406321)