“ಓರ್ವ ವ್ಯಕ್ತಿ ಮಾಡುವ ಕಾರ್ಯವು ಆತನು ಬರೆದುಕೊಂಡ ಆತನ ವ್ಯಕ್ತಿ ಚಿತ್ರಣವೇ ಆಗಿರುತ್ತದೆ.” ಎನ್ನುವ ಅರ್ಥ ಬರುವ ಈ ಮಾತು ಶ್ರೀ ಕೆ.ಎನ್.ಆರ್.ರವರ ವ್ಯಕ್ತಿತ್ವಕ್ಕೆ ಹೋಲಿಸಿದರೆ ತಪ್ಪಾಗಲಾರದು.
ಕೆ.ಎನ್.ಆರ್. ಈ ಮೂರು ಅಕ್ಷರಗಳು ಅದೇನೋ ಮೋಡಿ ಮಾಡಿದಂತೆ ಇದೆ. ಅಚ್ಚರಿ ಬೆರಗಿದೆ. ಆದೇಕೋ ನನಗೆ ಶ್ರೀ ಕೆ.ಎನ್.ಆರ್.ರವರನ್ನು ನೋಡಿದಾಗೆಲ್ಲಾ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ರವರ ನೆನಪಾಗುತ್ತದೆ. ಉಕ್ಕಿನ ಮನುಷ್ಯನ ಧೈರ್ಯ, ಕಡುಗಲಿತನ ಕಣ್ಣು ಕಟ್ಟಿದಂತಾಗುತ್ತದೆ. ವೈರಿಗಳು ಒಪ್ಪಿಕೊಂಡ ಅಭಿಪ್ರಾಯಕ್ಕೆ ಹೆಚ್ಚು ಬೆಲೆ. ಸರ್ವಜನಪ್ರಿಯತೆ ಕೆಲವೊಮ್ಮೆ ಉತ್ತಮ ನಾಯಕತ್ವದ ಪ್ರಮುಖ ಲಕ್ಷಣವಲ್ಲ. ಆದ್ದರಿಂದಲೇ ಹೇಳಿದ್ದು ಶ್ರೀ ಕೆ.ಎನ್.ಆರ್.ರವರ ನಾಯಕತ್ವ ಕಟ್ಟಾ ಕೆಚ್ಚಿನದು. ಕಡುಗಲಿತನವಿದು. ಅವರ ವ್ಯಕ್ತಿತ್ವದಲ್ಲಿ ಒಂದು ಮಾಂತ್ರಿಕ ಶಕ್ತಿ ಇದೆ. ಸಂಗಡ ಪ್ರಬಲ ಇಚ್ಛಾಶಕ್ತಿಗಳು ಅವರಲ್ಲಿ ಮನೆ ಮಾಡಿಕೊಂಡಿದೆ.
ನಾನು 1994 ರಲ್ಲಿ ಬೆಳಗಾವಿಯಿಂದ ತುಮಕೂರು ಜಿಲ್ಲಾ ಸಹಕಾರ ಯೂನಿಯನ್ಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ವರ್ಗವಾಗಿ ಬಂದಾಗ ಶ್ರೀ ಕೆ.ಎನ್.ಆರ್.ರವರ ಚಾರಿತ್ರಿಕ ವಿವರಗಳು ಚೆನ್ನಾಗಿ ಗೊತ್ತಿರಲಿಲ್ಲ. ಆದರೆ ಅವರ ಕುರಿತು ಸಾಧನೆಗಳ ಪರಿಚಯ ಮಾಡಲು ನನಗೆ ಸಿಕ್ಕ ಅವಕಾಶಗಳು ವಿಫುಲ. ಕಾರಣ ಅವರ ಸಾಧನೆ ಹಾಗೂ ಚಾರಿತ್ರಿಕ ಹಿನ್ನಲೆಯನ್ನು ಸಂಗ್ರಹಿಸಲು ಅನುಕೂಲವಾಯಿತು.
13-04-1951 ರಂದು ತುಮಕೂರಿನ ಕ್ಯಾತಸಂದ್ರದಲ್ಲಿ ದಿವಂಗತ ನಂಜಪ್ಪ ಮತ್ತು ದಿವಂಗತ ಲಕ್ಷ್ಮೀ ದೇವಮ್ಮ ಈ ದಂಪತಿಗಳ ಸುಪುತ್ರನಾಗಿ ಜನಿಸಿ ಬಿ.ಎಸ್.ಸಿ. ಪದವಿಯನ್ನು ಪಡೆದು ತುಮಕೂರು ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಪ್ರಾರಂಭಿಸಿದರು. ರೈತ ಕುಟುಂಬದ ಹಿನ್ನಲೆಯ ಶ್ರೀ ರಾಜಣ್ಣನವರು ಗ್ರಾಮೀಣ ಜನರ ಕಷ್ಟ ಸುಖಗಳಿಗೆ ಚೆನ್ನಾಗಿ ಅರಿತು ಸ್ಪಂದಿಸುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. 1969 ರಲ್ಲಿ ಕಾಂಗ್ರೇಸ್ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಪ್ರವೇಶವನ್ನು ಮಾಡಿದ ಶ್ರೀ ರಾಜಣ್ಣನವರು ಪಕ್ಷದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಬಹಳ ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ 1998 ರಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯರಾಗಿ ದಾಖಲೆಯ ಬಹುಮತದಿಂದ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಗೊಂಡಿದ್ದು ಒಂದು ಐತಿಹಾಸಿಕ ಸಂಗತಿ. ತದನಂತರ ಬೆಳ್ಳಾವಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡು ಮುಂದಿನ ಚುನಾವಣೆಯಲ್ಲಿ ಅತ್ಯಂತ ಹಿಂದುಳಿದ ಮಧುಗಿರಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಗೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ರಾಜಕೀಯ ಏಳು ಬೀಳುಗಳನ್ನು ಸಮರ್ಥವಾಗಿ ಎದುರಿಸಿ ಸೇವೆಯನ್ನೇ ಮುಖ್ಯ ಗುರಿಯನ್ನಾಗಿ ಹೊಂದಿರುವ ಶ್ರೀ ಕೆ.ಎನ್.ಆರ್.ರವರಿಗೆ ಹೆಚ್ಚು ಆಕರ್ಷಣೀಯ ಕ್ಷೇತ್ರವೆಂದರೆ ಸಹಕಾರ ಕ್ಷೇತ್ರ ತುಮಕೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘದ ಮೂಲಕ ಪಾದಾರ್ಪಣೆ ಮಾಡಿದ ಶ್ರೀ ಕೆ.ಎನ್.ಆರ್.ರವರು ತುಮಕೂರು ಡಿ.ಸಿ.ಸಿ. ಬ್ಯಾಂಕ್, ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ನಾಫೆಡ್ ನ್ಯೂಡೆಲ್ಲಿ, ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರುಗಳಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅನೇಕ ಉಲ್ಲೇಖನೀಯ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಮುಖ್ಯವಾಗಿ ತುಮಕೂರು ಡಿ.ಸಿ.ಸಿ. ಬ್ಯಾಂಕಿನ ಆಡಳಿತ ಸೂತ್ರ ಇವರ ಕೈಗೆ ಬರುವವರೆಗೂ ಅದೊಂದು ನಿಜವಾಗಿ ದೇವೇಂದ್ರನ ಹಿಡಿತ ತಪ್ಪಿದ ಐರಾವತ ಆಗಿತ್ತು. ಆದರೆ ಇವರ ಸಾರಥ್ಯದಲ್ಲಿ ವಾಮನ ಗಾತ್ರದ ಡಿ.ಸಿ.ಸಿ. ಬ್ಯಾಂಕನ್ನು ತ್ರಿವಿಕ್ರಮ ಸ್ವರೂಪಕ್ಕೆ ರೂಪಾಂತರಿಸುವುದಕ್ಕೆ ಪಣತೊಟ್ಟು ಯಶಸ್ವಿಯಾದರು. ಅವರು ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಬ್ಯಾಂಕಿನ ಸರ್ವತೋಮುಖ ಏಳಿಗೆಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಹತ್ತು ಹಲವಾರು. ಪ್ರಮುಖವಾದವುಗಳೆಂದರೆ : ಅವುಗಳಲ್ಲಿ
1) ತುಮಕೂರು ಜಿಲ್ಲೆ ತೀವ್ರ ಬರಗಾಲ ಎದುರಿಸುತ್ತಿದ್ದಾಗ ಸರ್ಕಾರ ಪ್ರಾರಂಭಿಸಿದ ಗೋಶಾಲೆಗಳಿಗೆ ಡಿ.ಸಿ.ಸಿ. ಬ್ಯಾಂಕಿನ ವತಿಯಿಂದ ರೈತರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಊಟ ನೀಡುವುದರ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.
2) ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಕೆ.ಎನ್.ರಾಜಣ್ಣನವರಿಗೆ ಸಲ್ಲುತ್ತದೆ. ಜಿಲ್ಲೆಯ ರೈತರ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರವನ್ನು ನೀಡುವ ಮಾದರಿ ಯೋಜನೆಯನ್ನು ಯೋಜನೆಯನ್ನು ಜಾರಿಗೊಳಿಸಿ ಗ್ರಾಮೀಣ ಪ್ರದೇಶದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿರುವ ಶ್ರೀ ಕೆ.ಎನ್. ರಾಜಣ್ಣನವರ “ಸಾಮಾಜಿಕ ಕಳಕಳಿ” ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದಲ್ಲದೆ ಇನ್ನೂ ಅನೇಕ ಕ್ರಾಂತಿಕಾರಿ ಬದಲಾವಣೆಯನ್ನು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಕೀರ್ತಿ ಶ್ರೀ ರಾಜಣ್ಣನವರಿಗೆ ಸಲ್ಲುತ್ತದೆ. ಅವರು ಶಾಸಕರಾಗಿ ಇಂದು ಕರ್ನಾಟಕ ರಾಜ್ಯದ ಸಹಕಾರ ಸಚಿವ ಪಟ್ಟವನ್ನು ಅಲಂಕರಿಸಿದರೂ ನಾನು ಮೊದಲು ಸಹಕಾರಿ ಆಮೇಲೆ ಶಾಸಕ, ಸಚಿವ ಎಂಬ ಮಾತು ಅವರಿಗೆ ಈ ಕ್ಷೇತ್ರದ ಮೇಲೆ ಇರುವ ಅಗಾಧ ಪ್ರೀತಿಯ ದ್ಯೋತಕವಾಗಿದೆ.
ಮನುಷ್ಯನಜೀವನ ಒಂದೇ ತೆರನಾಗಿ ಇರುವುದಿಲ್ಲ. ಅಲ್ಲಿ ಏಳು ಬೀಳುಗಳೆಲ್ಲಾ ಸಾಮಾನ್ಯ. ಆದರೆ ಪ್ರಜ್ಞಾಂತ ವ್ಯಕ್ತಿ ಆ ಯಾವುದೇ ಅಡೆ-ತಡೆ, ಏಳು-ಬೀಳು ಬಂದರೂ ಧೃತಿಗೆಡುವುದಿಲ್ಲ. ಜೀವನವನ್ನು ಬಂದಂತೆ ಸ್ವೀಕರಿಸಿ ಅದನ್ನು ಸಮರ್ಥ ರೀತಿಯಲ್ಲಿ ಸಾಗಿಸಿಕೊಂಡು ಹೋಗುತ್ತಾರೆ. ಇದು ಒಬ್ಬ ಪ್ರಜ್ಞಾವಂತ ಧೀಶಕ್ತಿಯ ಮನುಷ್ಯನ ಲಕ್ಷಣ.
ಒಮ್ಮೆ ಅವರು ಮಧುಗಿರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನು ಎದುರಿಸಬೇಕಾಯಿತು. ಆಗ ಒಂದು ಘಟನೆ ನನ್ನ ನೆನಪಿಗೆ ಬರುತ್ತದೆ. ಫಲಿತಾಂಶದ ನಂತರ ಅವರು ಏಕಾಂಗಿಯಾಗಿ ಡಿ.ಸಿ.ಸಿ. ಬ್ಯಾಂಕಿಗೆ ಬಂದಾಗ ನಾನು ಒಂದು ಆಂಗ್ಲಭಾಷೆಯ ನುಡಿಯನ್ನು ಅವರ ಮುಂದಿಟ್ಟೆ. Sir, though you have lost the battle but in future you will certainly win the war. (series of battle is called war) ಆಗ ಅವರ ಮುಖದ ಮೇಲೆ ನಗೆ ಬೀರಿತು. ತದನಂತರ ಅವರು ಎಲ್ಲಾ ಚುನಾವಣೆಗಳಲ್ಲಿಯೂ ವಿಜಯ ಸಾಧಿಸಿ ಇಂದು ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಅಗ್ರಸ್ಥಾನ ಗಳಿಸಿ ಸಚಿವರಾಗಿರುವುದು ಸಹಕಾರಿಗಳು ಹೆಮ್ಮೆ ಪಡುವ ವಿಷಯ. ಅಲ್ಲದೇ ಅವರ ಶಬ್ದದಲ್ಲೇ ಹೇಳಬೇಕಾದರೆ ನನಗೆ ಜೀವನದಲ್ಲಿ ಒಮ್ಮೆಯಾದರೂ ಸಹಕಾರ ಸಚಿವನಾಗಬೇಕು, ಅಲ್ಲದೆ ತದನಂತರ ಒಮ್ಮೆಯಾದರೂ ಭಾರತದ ಸಂಸತ್ ಭವನವನ್ನು ಸಂಸದನಾಗಿ ಸಚಿವನಾಗಿ ಪ್ರವೇಶಿಸಬೇಕು ಎಂದು ಹೇಳಿರುವುದು ನನ್ನ ಸ್ಮೃತಿಪಟಲದ ಮೇಲೆ ಇನ್ನೂ ಅಚ್ಚಳಿಯದೆ ನಿಚ್ಚಳವಾಗಿ ನಿಂತಿದೆ.
ದೀನದಲಿತರ ಆಶಾಕಿರಣವಾಗಿ ಹಾಗೂ ಬಡವರ ಬಂಧುವಾಗಿ ಶ್ರೀ ಕೆ.ಎನ್.ಆರ್.ರವರು ಬಡವರ ಧ್ವನಿಯಾಗಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಟ ಮಾಡುತ್ತಿರುವುದು ನನಗೆ ಅತ್ಯಂತ ಮೆಚ್ಚುಗೆ ಎನಿಸಿದೆ. ಅಲ್ಲದೆ ಅವರ ಪರೋಪಕಾರ ಗುಣ ಮತ್ತು ಆದರಾತಿತ್ಯಗುಣ ಅವರ ವ್ಯಕ್ತಿತ್ವಕ್ಕೆ ಮೆರಗು ನೀಡಿದೆ. ಆದರೆ ನನ್ನ ವೈಯಕ್ತಿಕ ಕಾರಣಗಳ ನಾನು ತುಮಕೂರನ್ನು ಬಿಟ್ಟು ಬೆಂಗಳೂರಿಗೆ ನೆಲಸಬೇಕಾಗಿ ಬಂದ ಕಾರಣ ಅವರ ಅದ್ಭುತ ಒಡನಾಟ ಸ್ವಲ್ಪಮಟ್ಟಿಗೆ ತಪ್ಪಿದಂತಾಗಿದೆ. ಅವರು ನಿಜವಾಗಿಯೂ ಒಬ್ಬ ಅಗ್ರಗಣ್ಯ ಸಹಕಾರಿ ಹೋರಾಟಗಾರ ಹಾಗೂ ಜೀವನದಲ್ಲಿ ಎಲ್ಲವನ್ನು ದಿಟ್ಟವಾಗಿ ಎದುರಿಸಿ ನಿಂತು ಸ್ಥಿತಪ್ರಜ್ಞರಾಗಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೂ, ಅವರ ಕುಟುಂಬದ ಸದಸ್ಯರುಗಳ ಏಳೆಯನ್ನು ಸದಾ ಬಯಸಿ ಶುಭ ಕೋರುತ್ತೇನೆ.
ಜೈ ಹಿಂದ್ ಜೈ ಸಹಕಾರ
ಶ್ರೀ. ಶಂಕರ ಹೆಗೆಡೆ.
ಸಹಕಾರಿ ಸಲಹೆಗಾರರು, ತುಮಕೂರು.