ವಿಶ್ವಸಂಸ್ಥೆಯು 2025ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳ ವರ್ಷವೆಂದು ಘೋಷಿಸಿದ್ದು, ಅದರ ಧ್ಯೇಯವಾಕ್ಯ “ಶಾಂತಿಯುತ ಜಗತ್ತಿಗಾಗಿ ಸಹಕಾರ ಸಂಸ್ಥೆಗಳು” (Cooperatives Build a Better World / Cooperatives for a Peaceful World) ಆಗಿದೆ. ಈ ಘೋಷಣೆಯ ಮೂಲಕ ಸಹಕಾರ ಸಂಸ್ಥೆಗಳು ಶಾಂತಿ ನಿರ್ಮಾಣ, ಸುಸ್ಥಿರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಸಾಧನೆಯಲ್ಲಿ ವಹಿಸುವ ಮಹತ್ವದ ಪಾತ್ರವನ್ನು ವಿಶ್ವದ ಗಮನಕ್ಕೆ ತರಲಾಗಿದೆ.
ವಿಶ್ವಸಂಸ್ಥೆಯು 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (Sustainable Development Goals – SDGs) ಸಾಧಿಸುವ ನಿಟ್ಟಿನಲ್ಲಿ ಬಡತನ ನಿರ್ಮೂಲನೆ, ಹಸಿವು ನಿವಾರಣೆ, ಎಲ್ಲರಿಗೂ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಕೈಗೆಟುಕುವ ಮತ್ತು ಹಸಿರು ಇಂಧನ, ನಾವೀನ್ಯತೆ, ಅಸಮಾನತೆ ಕಡಿತ ಸೇರಿದಂತೆ ಒಟ್ಟು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಘೋಷಿಸಿದೆ. ಈ ಗುರಿಗಳ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತಿವೆ.
ಈ ವರ್ಷದ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳ ವರ್ಷದ ಅಂಗವಾಗಿ ಮೂರು ಪ್ರಮುಖ ಆಶಯಗಳಿಗೆ ಒತ್ತು ನೀಡಲಾಗಿದೆ. ಮೊದಲನೆಯದಾಗಿ ಪುನಶ್ಚೇತನವನ್ನು ಪ್ರೋತ್ಸಾಹಿಸುವುದು (Foster Resilience). ಸಂಘರ್ಷ, ವಿಪತ್ತು ಅಥವಾ ಸಂಕಷ್ಟಗಳಿಂದ ತತ್ತರಿಸಿರುವ ಜನಸಮೂಹಗಳಲ್ಲಿ ಸಹಕಾರ ಸಂಸ್ಥೆಗಳು ಸಾಮಾಜಿಕ ಬಾಂಧವ್ಯವನ್ನು ಪುನರ್ನಿರ್ಮಿಸಿ, ಪರಸ್ಪರ ನಂಬಿಕೆಯನ್ನು ಬೆಳೆಸಿ, ಸಮುದಾಯಗಳ ಪುನರುತ್ಥಾನಕ್ಕೆ ದಾರಿಯಾಗಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಡಬೇಕು.
ಎರಡನೆಯದಾಗಿ ಜನಕೇಂದ್ರಿತ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು (Promote Inclusive and People-centred Development). ಸಹಕಾರ ಸಂಸ್ಥೆಗಳು ಸಾಮಾನ್ಯ ಜನರ ಜೀವನಮಟ್ಟವನ್ನು ಸುಧಾರಿಸುವುದು, ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಬಡತನ ನಿರ್ಮೂಲನೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡುವುದಕ್ಕೆ ಒತ್ತು ನೀಡುತ್ತವೆ.
ಮೂರನೆಯದಾಗಿ ಶಾಶ್ವತ ಶಾಂತಿ ನಿರ್ಮಿಸುವುದು (Build Lasting Peace). ನ್ಯಾಯಯುತ, ಸಮಾನತೆ ಆಧಾರಿತ ಮತ್ತು ಭಾಗವಹಿಸುವಿಕೆಯ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಶಾಂತಿಯುತ ಸಮಾಜವನ್ನು ರೂಪಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಅನನ್ಯವಾಗಿದೆ.
ವಿಶ್ವದಾದ್ಯಂತ ಸುಮಾರು 30 ಲಕ್ಷಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 100 ಕೋಟಿ ಸದಸ್ಯರನ್ನು ಹೊಂದಿವೆ. ಇವು ಸುಮಾರು 28 ಕೋಟಿ ಜನರಿಗೆ ನೇರ ಉದ್ಯೋಗ ಒದಗಿಸುತ್ತಿವೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಸುಮಾರು 8.5 ಲಕ್ಷ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 32 ಕೋಟಿ ಸದಸ್ಯರನ್ನು ಹೊಂದಿವೆ. ಇವುಗಳ ಮೂಲಕ ಸುಮಾರು 5.5 ಕೋಟಿ ಜನರಿಗೆ ನೇರ ಉದ್ಯೋಗ ದೊರೆತಿದೆ. ಈ ಅಂಕಿಅಂಶಗಳು ಸಹಕಾರ ಚಳವಳಿಯ ವ್ಯಾಪ್ತಿ ಮತ್ತು ಮಹತ್ವವನ್ನು ಸ್ಪಷ್ಟಪಡಿಸುತ್ತವೆ.
ಭಾರತದ ಉತ್ಪಾದಕ ವಯೋಮಾನದ (15–64 ವರ್ಷ) ಜನಸಂಖ್ಯೆ 2025ರಲ್ಲಿ ಸುಮಾರು 98 ಕೋಟಿ ಎಂದು ಅಂದಾಜಿಸಲಾಗಿದೆ. ಈ ಅಪಾರ ಮಾನವ ಸಂಪನ್ಮೂಲವನ್ನು ಸಹಕಾರ ಕ್ಷೇತ್ರದೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕಿಸಲು ವಿಪುಲ ಅವಕಾಶಗಳಿವೆ. ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳ ವರ್ಷದ ಆಶಯಗಳನ್ನು ಸಾಕಾರಗೊಳಿಸಲು ಹೊಸ ಸಹಕಾರ ಸಂಸ್ಥೆಗಳ ಸ್ಥಾಪನೆಯ ಜೊತೆಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಲಪಡಿಸುವ ಅಗತ್ಯವಿದೆ.
ಭಾರತದ ಆರ್ಥಿಕತೆ ಇಂದು ನಾಲ್ಕು ಟ್ರಿಲಿಯನ್ ಡಾಲರ್ಗಿಂತ ಹೆಚ್ಚಿನ ಮಟ್ಟ ತಲುಪಿರುವ ಸಂದರ್ಭದಲ್ಲಿ, ಅದರಲ್ಲಿ ಸಹಕಾರ ಕ್ಷೇತ್ರದ ಪಾಲು ಎಷ್ಟು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಜಗತ್ತಿನ ಅಗ್ರ ಹತ್ತು ಸಹಕಾರ ಸಂಸ್ಥೆಗಳಲ್ಲಿ ಭಾರತದ ಅಮುಲ್ ಮತ್ತು ಇಫ್ಕೋ ಮೊದಲ ಎರಡು ಸ್ಥಾನಗಳಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ. 2024–25ನೇ ಸಾಲಿನಲ್ಲಿಯೂ ಇಫ್ಕೋ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸಿರುವುದು ಅದರ ಸಾಮರ್ಥ್ಯವನ್ನು ತೋರಿಸುತ್ತದೆ.
ಅಮುಲ್ ಇಂದು ಗುಜರಾತ್ ಹಾಲು ಉತ್ಪಾದಕರ ಸಹಕಾರ ಚಳವಳಿಯ ಯಶಸ್ವಿ ಮಾದರಿಯಾಗಿದೆ. ಇದು 18 ಜಿಲ್ಲಾ ಹಾಲು ಒಕ್ಕೂಟಗಳು, ಸುಮಾರು 18,500 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು, ಸುಮಾರು 36 ಲಕ್ಷ ಸದಸ್ಯರು ಹಾಗೂ ಪ್ರತಿದಿನ ಸುಮಾರು 3.5 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇಫ್ಕೋ ದೇಶಾದ್ಯಂತ ಸುಮಾರು 35,000 ಸಹಕಾರ ಸಂಘಗಳನ್ನು ಸದಸ್ಯರನ್ನಾಗಿ ಹೊಂದಿದ್ದು, ಐದು ಕೋಟಿಗೂ ಹೆಚ್ಚು ಸದಸ್ಯರಿಗೆ ಸೇವೆ ಸಲ್ಲಿಸುತ್ತಿದೆ. ಇಂತಹ ಯಶಸ್ವಿ ಮಾದರಿಗಳು ಸಹಕಾರ ಚಳವಳಿಯ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ.
ಅಮುಲ್ ಮಾದರಿಯನ್ನು ಅನುಸರಿಸಿ ಕರ್ನಾಟಕದಲ್ಲಿ ನಂದಿನಿ ಯಶಸ್ವಿಯಾಗಿ ಬೆಳೆಯಲಾಗಿದೆ. ಕರ್ನಾಟಕ ಹಾಲು ಮಹಾಮಂಡಳಿಯ ಅಡಿಯಲ್ಲಿ 16 ಜಿಲ್ಲಾ ಹಾಲು ಒಕ್ಕೂಟಗಳು, ಸುಮಾರು 16,000 ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ 26 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪ್ರತಿದಿನ ಸುಮಾರು ಒಂದು ಕೋಟಿ ಲೀಟರ್ ಹಾಲು ಸಂಗ್ರಹಣೆ ನಡೆಯುತ್ತಿದ್ದು, ವಾರ್ಷಿಕವಾಗಿ ಸುಮಾರು ₹24,000 ಕೋಟಿಗೂ ಅಧಿಕ ವಹಿವಾಟು ನಡೆಯುತ್ತಿದೆ. ಈ ಮಾದರಿಗಳು ಸಣ್ಣ ಮತ್ತು ಮಧ್ಯಮ ರೈತರು, ರೈತ ಮಹಿಳೆಯರು ಹಾಗೂ ಗ್ರಾಮೀಣ ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಉತ್ತಮ ಉದಾಹರಣೆಗಳಾಗಿವೆ.
ಆದರೆ, ಇತರ ಅನೇಕ ವಲಯಗಳಲ್ಲಿ ಸಹಕಾರ ವ್ಯವಸ್ಥೆಗಳು ಇದೇ ಮಟ್ಟದ ಯಶಸ್ಸು ಸಾಧಿಸಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಕರ್ನಾಟಕದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಶೃಂಗ ವ್ಯವಸ್ಥೆಯ ವಿವಿಧ ಹಂತಗಳ ನಡುವೆ ಸಮರ್ಪಕ ಕಾರ್ಯಸಮನ್ವಯದ ಕೊರತೆ ಕಂಡುಬರುತ್ತದೆ. ತರಕಾರಿ, ಹಣ್ಣು, ಮೀನುಗಾರಿಕೆ, ರೇಷ್ಮೆ, ಪ್ರಾಥಮಿಕ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಒಕ್ಕೂಟಗಳ ನಡುವೆ ಸ್ಪಷ್ಟವಾದ ವ್ಯವಹಾರಿಕ ಉದ್ದೇಶ ಮತ್ತು ಸಮನ್ವಯದ ಕೊರತೆಯಿಂದಾಗಿ ಅಂತಿಮ ಫಲಾನುಭವಿಯಾದ ಸದಸ್ಯರು ನಿರಾಶರಾಗುವ ಪರಿಸ್ಥಿತಿ ಉಂಟಾಗಿದೆ.
ಈ ದೌರ್ಬಲ್ಯಗಳಿಗೆ ಪ್ರಮುಖ ಕಾರಣವೆಂದರೆ ಅನೇಕ ಸಹಕಾರ ಸಂಸ್ಥೆಗಳು ಸರ್ಕಾರದ ಬೆಂಬಲ ಮತ್ತು ಯೋಜನೆಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವುದು. ಸ್ವಾವಲಂಬನೆ ಮತ್ತು ಸ್ವಯಂ ಅಭಿವೃದ್ಧಿಯ ದೃಷ್ಟಿಕೋನ ಸಾಕಷ್ಟು ಬೆಳೆಸಿಕೊಳ್ಳದಿರುವುದು ಸಹ ಒಂದು ಕಾರಣವಾಗಿದೆ. ಆದ್ದರಿಂದ ಇವುಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಮೂಲಭೂತ ಪ್ರಶ್ನೆಗೆ ಉತ್ತರ ಹುಡುಕಬೇಕಾದ ಸಮಯ ಬಂದಿದೆ.
ನ್ಯಾಯಯುತ ಮತ್ತು ಸಮಾನತೆಯ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಲು ಸಹಕಾರವೇ ಅತ್ಯುತ್ತಮ ಮಾರ್ಗ ಎಂಬುದು ಇಂದು ಜಗತ್ತಿಗೆ ಸ್ಪಷ್ಟವಾಗಿದೆ. ಆದ್ದರಿಂದ ಈಗಿರುವ ಶೃಂಗ ಸಹಕಾರಿ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವುದರ ಜೊತೆಗೆ ಅಗತ್ಯವಿರುವ ಹೊಸ ಕ್ಷೇತ್ರಗಳಲ್ಲಿ ಹೊಸ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸುವತ್ತ ವಿಶೇಷ ಗಮನ ಹರಿಸಬೇಕು.
ಈ ಪರಿವರ್ತನೆಯ ಕೇಂದ್ರಬಿಂದು ನಾಯಕತ್ವವಾಗಿದೆ. ಸಹಕಾರ ಎಂದರೆ ಪ್ರಜಾಪ್ರಭುತ್ವ; ಪ್ರಜಾಪ್ರಭುತ್ವ ಎಂದರೆ ಪರಿಣಾಮಕಾರಿ ನಾಯಕತ್ವ. ಈ ನಾಯಕತ್ವವು ಯುವಜನರಿಂದಲೇ ಬೆಳೆಯಬೇಕು. ಭಾರತದ ಅಪಾರ ಯುವಜನಸಂಖ್ಯೆಯ ಶಕ್ತಿಯನ್ನು ಸಹಕಾರ ಚಳವಳಿಯೊಂದಿಗೆ ಜೋಡಿಸಬೇಕಾಗಿದೆ.
ಸಹಕಾರ ಚಳವಳಿ ಪೀಳಿಗೆಯಿಂದ ಪೀಳಿಗೆಗೆ ನಿರಂತರವಾಗಿ ಸಾಗಬೇಕಾದರೆ, ಹೊಸ ಪೀಳಿಗೆಯ ಅಗತ್ಯಗಳಿಗೆ ತಕ್ಕಂತೆ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಆರ್ಥಿಕತೆ, ನವೋದ್ಯಮ, ಸೇವಾ ವಲಯ, ನವೀಕರಿಸಬಹುದಾದ ಇಂಧನ, ಆರೋಗ್ಯ, ಶಿಕ್ಷಣ ಹಾಗೂ ಇತರೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಹೊಸ ಸಹಕಾರ ಸಂಸ್ಥೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕು.
ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳ ವರ್ಷದ ಆಚರಣೆಯು ಕೇವಲ ಒಂದು ಸ್ಮರಣಾ ಕಾರ್ಯಕ್ರಮವಾಗಿರದೆ, ಯುವಜನರು, ಮಹಿಳೆಯರು ಮತ್ತು ಸಾಮಾನ್ಯ ನಾಗರಿಕರನ್ನು ಸಹಕಾರ ಚಳವಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳುವಂತೆ ಮಾಡುವ ಆತ್ಮಪರಿಶೀಲನೆಯ ಸಂದರ್ಭವಾಗಬೇಕು. ಈ ಚಿಂತನೆ ಮತ್ತು ಕಾರ್ಯಯೋಜನೆಗಳ ಮೂಲಕ ಸಹಕಾರ ಚಳವಳಿಗೆ ಹೊಸ ಚೈತನ್ಯ ತುಂಬಿ, ಶಾಂತಿಯುತ, ಸಮಾನತೆಯ ಮತ್ತು ಸುಸ್ಥಿರ ಜಗತ್ತಿನ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ತಮ್ಮ ಪಾತ್ರವನ್ನು ನಿರ್ವಹಿಸಲಿ ಎಂಬುದೇ ಈ ವರ್ಷದ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆಗಳ ವರ್ಷದ ಆಶಯವಾಗಿದೆ.

ಶಶಿಧರ ಯಾಲೆ
ಹೆಚ್ಚುವರಿ ಸಹಕಾರ ಸಂಘಗಳ ನಿಬಂಧಕರು (ನಿವೃತ್ತರು)
#281, ನೇಸರ
ಬಾಲಾಜಿ ಎಚ್ಬಿಸಿಎಸ್ ಲೇಔಟ್
ವಜರಹಳ್ಳಿ, ಕನಕಪುರ ರಸ್ತೆ
ಬೆಂಗಳೂರು – 560109
📞 ಮೊಬೈಲ್
+91 97401 15156