ಆಧುನಿಕತೆಯ ವೇಗಕ್ಕೆ ಸಿಲುಕಿ ನಮ್ಮ ಪ್ರಕೃತಿ ನಲುಗಿದೆ. ಸರ್ವತ್ರ ಪ್ಲಾಸ್ಟಿಕ್ ಬಳಕೆ, ಹಳ್ಳ ತೋಡು ನದಿಗಳ ನೀರಿಗೆ ಹಾಕುವ ಕಸ ಮತ್ತು ವಿಷಯುಕ್ತ ರಾಸಾಯನಿಕಗಳು, ಹೊಗೆಯುಗುಳುವ ಕೈಗಾರಿಕೆಗಳು ಮತ್ತು ವಾಹನಗಳ ಹಾವಳಿ ಹೀಗೆ ಅನೇಕ ಕಾರಣಗಳಿಂದ ಇಡೀ ಪರಿಸರವೇ ನೆಮ್ಮದಿಯ ವಾಸಕ್ಕೆ ಯೋಗ್ಯವಲ್ಲದಷ್ಟು ಹದಗೆಟ್ಟಿದೆ. ನಿತ್ಯ ನಿರಂತರ ಅರೋಗ್ಯ ಸಮಸ್ಯೆಗಳು, ಕುಡಿಯಲು ಶುದ್ಧ ನೀರಿನ ಕೊರತೆ, ನಡೆದಾಡಲು ನೆರಳಿಲ್ಲದ ರಸ್ತೆಗಳು ಹೀಗೆ ತಾಪತ್ರಯಗಳು ಅನೇಕ. ಮನುಷ್ಯ ತಾನು ಭೂಮಿಯಿಂದ ಮತ್ತು ಪರಿಸರದಿಂದ ಅನೇಕ ಉಪಕಾರ ಪಡೆಯುವುದನ್ನು ಬಿಟ್ಟರೆ ಪರಿಸರಕ್ಕೆ ಕೊಡುವ ಕೊಡುಗೆ ಬಹುತೇಕ ಶೂನ್ಯ. ಇಂತಹ ಪರಿಸ್ಥಿತಿಯಲ್ಲಿ ಸಹಕಾರಿ ಕ್ಷೇತ್ರ ಏನು ಮಾಡಬಹುದು?
ಹಲವು ದಾರಿಗಳು
ನಮ್ಮ ಪ್ರಾಥಮಿಕ ಸಹಕಾರಿ ಸಂಘಗಳು, ಸಂಸ್ಥೆಗಳು ಪ್ರತಿವರ್ಷ ವನಮಹೋತ್ಸವ, ಪರಿಸರದಿನಗಳಲ್ಲಿ ಒಂದಷ್ಟು ಗಿಡ ವಿತರಿಸುವ, ಗಿಡನೆಡುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಲವು ಕಡೆ ನಟ್ಟ ಗಿಡಗಳಿಗೆ ನೀರೆರೆದು ವರ್ಷಪೂರ್ತಿ ಗಮನಿಸುವ ಕ್ರಮ ಇದೆ. ಆದರೆ ಬಹುತೇಕ ಕಡೆ ಕೇವಲ ಪ್ರಚಾರಕ್ಕೆ ಗಿಡ ನೆಟ್ಟು ಕೈತೊಳೆದುಕೊಳ್ಳುವ ಜಾಯಮಾನ ಹೆಚ್ಚಿದೆ. ನಮ್ಮ ಪರಿಸರದ ಬಗ್ಗೆ ಎಷ್ಟು ಸಾಧ್ಯವೊ ಅಷ್ಟು ಮುತುವರ್ಜಿ ಸಹಕಾರಿಗಳು ವಹಿಸಿಕೊಳ್ಳಬೇಕು. ಯಾಕೆಂದರೆ ನಿರ್ದಿಷ್ಟ ಕಾರ್ಯವ್ಯಾಪ್ತಿ ಹೊಂದಿದ ಪ್ರದೇಶದ ಎಲ್ಲರ ಮನೆಗೂ ಸುಲಭದಲ್ಲಿ ತಲಪುವುದು ಸರಕಾರದ ಇಲಾಖೆಗಿಂತಲೂ ಸಹಕಾರಿ ಸಂಘಗಳ ಅಧಿಕೃತರು. ಹೆಚ್ಚು ಕಡಿಮೆ ಎರಡು ಮೂರು ಗ್ರಾಮಗಳ ಹೆಚ್ಚಿನ ಜನರ ಸಂಪರ್ಕ ಪ್ರಾಥಮಿಕ ಸಹಕಾರಿ ಸಂಘಗಳಿಗೆ ಇರುವುದು ಮತ್ತು ನಿರಂತರ ಬಾಂಧವ್ಯ ಚೆನ್ನಾಗಿರುವುದು ಇಂತಹ ಕಾರ್ಯಗಳನ್ನು ಮುನ್ನಡೆಸಲು ಹೆಚ್ಚು ಅನುಕೂಲ.
ಚೊಕ್ಕ ಗಿಡಗಳಿರಲಿ
ಕೃಷಿ ಮತ್ತು ಅರಣ್ಯ ಇಲಾಖೆಗಳು ಹಾಗೂ ತೋಟಗಾರಿಕಾ ಇಲಾಖೆಗಳು ಹೆಚ್ಚು ಕಡಿಮೆ ಪ್ರತಿವರ್ಷ ನಾನಾ ತರದ ಗಿಡಗಳನ್ನು ಬೆಳೆಸಿ ವಿತರಿಸುತ್ತಿವೆ. ಅಂತಹ ಇಲಾಖೆಗಳ ಸಂಪರ್ಕಮಾಡಿ ಸಹಕಾರಿ ಸಂಘಕ್ಕೆ ಬೇಕಾದ ಗಿಡಗಳಿಗೆ ಬೇಡಿಕೆ ಸಲ್ಲಿಸುವ ಕಾರ್ಯ ಬಹಳ ಮೊದಲೇ ಆಗಬೇಕು. ಸಾಧ್ಯವಾದರೆ ಒಂದು ವರ್ಷದಷ್ಟು ಹಳೆಯ ಗಿಡಗಳಿಗೆ ಬೇಡಿಕೆಕೊಟ್ಟು ತರಿಸುವ ವ್ಯವಸ್ಥೆ ಮಾಡಬಹುದು. ಎಳೆಯ ಗಿಡಗಳ ಬದಲು ಹಣ್ಣು ಹಂಪಲು, ಮೋಪಿನ ಮರದ ಗಿಡಗಳು ಒಂದು ವರ್ಷದ ಬೆಳವಣಿಗೆಯಲ್ಲಿರುವುದನ್ನು ನಡಲು ಆಯ್ಕೆ ಮಾಡಿಕೊಳ್ಳುವುದು ಜಾಣತನ. ಇವು ಬೇಗನೆ ಬದುಕುತ್ತವೆ. ಸದೃಢ ಬೇರುಗಳಿರುವುದರಿಂದ ಭೂಮಿಗೆ ಬೇರಿಳಿಸಿ ಬದುಕಿಕೊಳ್ಳಲು ಅನುಕೂಲ ಕೂಡ ಆಗುತ್ತದೆ.
ಸಾಮೂಹಿಕವಾಗಿ ತೊಡಗಿಸಿಕೊಳ್ಳುವುದು
ಸಾಮಾನ್ಯವಾಗಿ ಸಹಕಾರಿ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ಬಹುತೇಕ ಜನರಿಗೆ ತಮ್ಮ ಸದಸ್ಯರಲ್ಲಿ ಗಿಡ ನೆಟ್ಟು ಹಸಿರು ಬೆಳೆಸಿ ಉಳಿಸುವವರು ಯಾರೆಂಬ ತಿಳುವಳಿಕೆ ಇದ್ದೇ ಇರುತ್ತದೆ. ಅಂತವರನ್ನು ಆಯ್ದುಕೊಂಡು ಅವರಿಗೆ ಹಣ್ಣಿನ ಗಿಡಗಳನ್ನು, ಮೋಪಿನ ಗಿಡಗಳನ್ನು ಸಂಘ ವಿತರಣೆ ಮಾಡಬೇಕು. ಸಹಕಾರಿ ಸಂಘ ಇಂತಹ ಕೆಲಸ ಮಾಡಿ ಕೃಷಿಕ ಸದಸ್ಯರನ್ನು ಗುರುತಿಸಿದರೆ ಅವರೆಂದೂ ಸಂಘವನ್ನು ಮರೆಯುವುದಿಲ್ಲ. ಮಳೆಗಾಲದ ರಜಾ ದಿನವೊಂದರಲ್ಲಿ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಮತ್ತು ಆಸಕ್ತ ಸದಸ್ಯರು ಸದಸ್ಯರೊಬ್ಬರ ಖಾಲಿ ಜಾಗವನ್ನು ಆಯ್ದುಕೊಂಡು ಅಲ್ಲಿ ಹಸಿರು ಬೆಳೆಸಬಹುದೇ? ಇದು ಒಳ್ಳೆಯ ಯೋಚನೆ ಅನಿಸುವುದಿಲ್ಲವೆ?
ಇದು ಒಂದು ದಿನದ ಹಸಿ ಬಿಸಿ ನಿರ್ಧಾರವಾಗಬಾರದು. ಪೂರ್ವಯೋಜಿತ ಕೆಲಸಗಳನ್ನು ಮಾಡಿ ಗಿಡಗಳನ್ನು ನೆಡುವುದು. ಇದು ಇಲ್ಲಿಗೆ ನಿಲ್ಲಬಾರದು. ಮುಂದಿನ ತಿಂಗಳು ಇಂತಹ ರಜಾ ದಿನವನ್ನು ಆಯ್ದುಕೊಂಡು ಎಲ್ಲರೂ ಸೇರಿ ನೆಟ್ಟ ಗಿಡಗಳನ್ನು ನೋಡಿ ಸತ್ತಲ್ಲಿಗೆ ಬೇರೆ ಗಿಡಗಳನ್ನು ನಟ್ಟು ಉಳಿದವಕ್ಕೆ ಆರೈಕೆ ಮಾಡಿ ಬರುವುದು. ಗಿಡಗಳನ್ನು ಕಾಡುಪ್ರಾಣಿಗಳು ಹಾನಿ ಮಾಡುವ ಆತಂಕಗಳಿದ್ದರೆ ಅದಕ್ಕೆ ಕೂಡ ಸಮರ್ಪಕ ವ್ಯವಸ್ಥೆ ಮಾಡಬೇಕಾಗುತ್ತದೆ. ನಟ್ಟು ಬೆಳೆಸಿದ ಗಿಡಗಳು ಬೆಳೆದು ಫಸಲು ಕೊಡುವಲ್ಲಿ ತನಕ ಈ ಸಾಮೂಹಿಕ ಜವಾಬ್ದಾರಿ ಮುಂದುವರಿಯಬೇಕು.
ಸದಸ್ಯರ ಜೊತೆ ಸಂಬಂಧಗಳ ವೃದ್ಧಿಗೆ ಸಹಕಾರಿ ಸಂಘಗಳು ಇಂತಹ ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ನಾಲ್ಕು ಸಹಕಾರಿ ಸಂಘಗಳು ಇಂತಹ ಕಾರ್ಯ ಯೋಜನೆಗಳಿಗೆ ಹೆಗಲು ಕೊಡಲಿ. ಇದರಿಂದ ಪ್ರೇರಿತವಾಗಿ ಇಂತಹ ಅನೇಕ ಯೋಜನೆಗಳನ್ನು ಘೋಷಿಸುವ ದಿನಗಳು ಖಂಡಿತ ಬಂದೇ ಬರುತ್ತವೆ.
ನಾಟಕಗಳನ್ನು ಬಿಟ್ಟು ಬಿಡಿ
ಪರಿಸರಕ್ಕೆ ಸಂಬಂಧಿಸಿದ ವಿಶೇಷ ದಿನಗಳಲ್ಲಿ ಪತ್ರಿಕಾ ವರದಿಗಳಿಗಾಗಿ ಸಹಕಾರಿ ಸಂಘಗಳ ಅಂಗಳಗಳಲ್ಲಿ ಕಣ್ಣುಕಟ್ಟಿಗೆ ಹೊಂಡ ತೆಗೆದು ಗಿಡ ನೆಡುವ ಜನರನ್ನೂ ನಾನು ನೋಡಿದ್ದೇನೆ. ಈ ರೀತಿ ಕ್ಯಾಮರಾದೆದುರು ನಿಂತು ಹತ್ತು ನಿಮಿಷದೊಳಗೆ ಆ ಗಿಡ ಹೊಂಡದಲ್ಲಿ ಇರುವುದು ಬಿಡಿ ಹೊಂಡವೇ ಇರುವುದಿಲ್ಲ. ಇಂತಹ ಕಣ್ಣುಕಟ್ಟುಗಳು, ನಾಟಕಗಳು ಸಹಕಾರಿ ಕ್ಷೇತ್ರಕ್ಕೆ ಭೂಷಣವಲ್ಲ. ರಾಜ್ಯ ಮಟ್ಟದಲ್ಲಿ ಸುದ್ಧಿಯಾದ ಇಂತಹ ಅನೇಕ ಗಿಡ ನಡುವ ಕಾರ್ಯಕ್ರಮಗಳು ನಾಲ್ಕು ದಿವಸಗಳ ಕಾಲ ಅಲ್ಲಿ ಇಲ್ಲಿ ಹತ್ತು ಜನರ ಬಾಯಲ್ಲಿ ಬರುತ್ತವೆ, ಪತ್ರಿಕೆಗಳಲ್ಲಿ, ಮೀಡಿಯಾಗಳಲ್ಲಿ ರಾರಾಜಿಸುತ್ತವೆ. ಮತ್ತೆ ಮರೆಯುತ್ತಾರೆ ಎಂದು ಸಹಕಾರಿಗಳು ಗ್ರಹಿಸುವುದು ಬೇಡ. ಜನ ಮರೆಯಬಹುದು. ನಮ್ಮ ಪೊರೆಯುವ ಮಾತೃಭೂಮಿ ಮರೆಯಲಾರದು. ಇದು ನೆನಪಿರಲಿ.

ಶಂ.ನಾ.ಖಂಡಿಗೆ