ಭಾರತದ ಸಾಲಗಾರರು ಬಡ್ಡಿದರಗಳ ಏರಿಳಿತದ ಪರ್ವದಲ್ಲಿ ಮಹತ್ವದ ತಿರುವೊಂದನ್ನು ಎದುರಿಸುತ್ತಿದ್ದಾರೆ. 2026ರ ಅಕ್ಟೋಬರ್ 7ರಂದು ಭಾರತೀಯ ರಿಸರ್ವ್ ಬ್ಯಾಂಕ್ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು ಶೇ. 5,25ರಿಂದ ಶೇ. 5.50ಕ್ಕೆ ಹೆಚ್ಚಿಸಿತು. ಇದು ಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಕೈಗೊಂಡ ಬಡ್ಡಿದರ ಏರಿಕೆಯಾಗಿದೆ. ಈ ನಿರ್ಧಾರದಿಂದ 2025ರಲ್ಲಿ ಆರಂಭವಾಗಿದ್ದ ಬಡ್ಡಿದರ ಇಳಿಕೆಯ ಪ್ರಕ್ರಿಯೆಗೂ ತೆರೆ ಬಿದ್ದಂತಾಗಿದೆ.
ಇದರ ಜೊತೆಗೆ, ಆರ್ಬಿಐ ತನ್ನ ಹಣಕಾಸು ನೀತಿಯ ನಿಲುವನ್ನು ಹಂತ ಹಂತವಾಗಿ ಬಿಗಿಗೊಳಿಸುವ ನೀತಿಯಾಗಿ ಬದಲಾಯಿಸಿದೆ.
ಅಗತ್ಯ ಪರಿಸ್ಥಿತಿ ಎದುರಾದರೆ ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಕಠಿಣ ಹಣಕಾಸು ಕ್ರಮಗಳನ್ನು ಮುಂದುವರಿಸಲು ಕೇಂದ್ರ ಬ್ಯಾಂಕ್ ಸಿದ್ಧವಿದೆ ಎಂಬ ಸೂಚನೆಯನ್ನು ಇದು ನೀಡುತ್ತದೆ.
ರೆಪೊ ದರ ಎಂದರೇನು? ಅದು ಏಕೆ ಮಹತ್ವದ್ದು?
ರೆಪೊ ದರವೆಂದರೆ ವಾಣಿಜ್ಯ ಬ್ಯಾಂಕುಗಳಿಗೆ ಅಲ್ಪಾವಧಿಗೆ ಹಣ ಒದಗಿಸುವಾಗ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸುವ ಬಡ್ಡಿದರ, ಬ್ಯಾಂಕುಗಳು ತಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಕೇಂದ್ರ ಬ್ಯಾಂಕಿನಿಂದ ಹಣ ಪಡೆಯುವ ವೆಚ್ಚವನ್ನು ಈ ದರವು ಪ್ರಭಾವಿಸುತ್ತದೆ. ಹೀಗಾಗಿ, ರೆಪೊ ದರವು ಬ್ಯಾಂಕುಗಳ ಸಾಲದ ಬಡ್ಡಿದರಗಳನ್ನು ನಿರ್ಧರಿಸುವ ಪ್ರಮುಖ ಆಧಾರಗಳಲ್ಲಿ ಒಂದಾಗಿದೆ.
ರೆಪೊ ದರ ಹೆಚ್ಚಾದಾಗ ಬ್ಯಾಂಕುಗಳಿಗೆ ಹಣ ಹೊಂದಿಸಿಕೊಳ್ಳುವ ವೆಚ್ಚವೂ ಹೆಚ್ಚಾಗಬಹುದು. ಈ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ನೀಡುವ ಸಾಲಗಳ ಬಡ್ಡಿದರವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಇದರಿಂದ ಗೃಹಸಾಲ, ವಾಹನಸಾಲ ಹಾಗೂ ವೈಯಕ್ತಿಕ ಸಾಲ ಪಡೆದವರು ಹೆಚ್ಚಿನ ಬಡ್ಡಿಯ ಹೊರೆ ಎದುರಿಸಬೇಕಾಗಬಹುದು.
ಬಡ್ಡಿದರ ಹೆಚ್ಚಳದ ಹಿಂದೆ ಹಣದುಬ್ಬರದ ಮೇಲಿನ ಕಳವಳವೂ ಪ್ರಮುಖ ಕಾರಣವಾಗಿದೆ. 202627ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಹಣದುಬ್ಬರ ಆಗಸ್ಟ್ ನಲ್ಲಿ 4.82 ಇದ್ದದ್ದು ಸೆಪ್ಟೆಂಬರ್ ನಲ್ಲಿ 5.54ಕ್ಕೆ ಏರಿದೆ. ಬಡ್ಡಿದರವನ್ನು ಏರಿಸುವುದರಿಂದ ಸಾಲ ಪಡೆಯುವ ವೆಚ್ಚ ಹೆಚ್ಚಾಗಿ, ಅತಿಯಾದ ಬೇಡಿಕೆ ತಗ್ಗಬಹುದು. ಇದರ ಮೂಲಕ ಸರಕು ಮತ್ತು ಸೇವೆಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಆರ್ಬಿಐನ ಉದ್ದೇಶವಾಗಿದೆ.
ಯಾವ ಸಾಲಗಾರರ ಮೇಲೆ ಪರಿಣಾಮ ಮೊದಲು ಬೀರುತ್ತದೆ?
ಬಡ್ಡಿದರ ಏರಿಕೆಯ ಪರಿಣಾಮವು ಎಲ್ಲ ಸಾಲಗಾರರಿಗೂ ಒಂದೇ ಸಮಯದಲ್ಲಿ ತಟ್ಟುವುದಿಲ್ಲ. ಸಾಲದ ಬಡ್ಡಿದರವನ್ನು ಯಾವ ಮಾನದಂಡದ ಆಧಾರದ ಮೇಲೆ ನಿರ್ಧರಿಸಲಾಗಿದೆ ಮತ್ತು ಅದನ್ನು ಮರುಪರಿಶೀಲಿಸುವ ಅವಧಿ ಎಷ್ಟು ಎಂಬುದರ ಮೇಲೆ ಪರಿಣಾಮ ಬೀರುವ ಸಮಯ ಅವಲಂಬಿತವಾಗಿರುತ್ತದೆ.
1. ರೆಪೊ ದರಕ್ಕೆ ಸಂಬಂಧಿಸಿದ ಸಾಲಗಳು:
ರೆಪೊ ದರದಂತಹ ಬಾಹ್ಯ ಮಾನದಂಡಕ್ಕೆ ಜೋಡಿಸಲಾದ ಸಾಲಗಳ ಬಡ್ಡಿದರವು ಸಾಮಾನ್ಯವಾಗಿ ತ್ವರಿತವಾಗಿ ಬದಲಾಗುತ್ತದೆ. ಪ್ರಸ್ತುತ ಅನೇಕ ಹೊಸ ಗೃಹಸಾಲಗಳು ಇಂತಹ ವ್ಯವಸ್ಥೆಯಡಿ ನೀಡಲ್ಪಡುತ್ತವೆ. ಹೀಗಾಗಿ, ಸಾಲದ ಒಪ್ಪಂದದಲ್ಲಿರುವ ಬಡ್ಡಿದರ ಮರುನಿರ್ಧಾರ ದಿನಾಂಕಕ್ಕೆ ಅನುಗುಣವಾಗಿ, ಬ್ಯಾಂಕುಗಳು ಸಾಮಾನ್ಯವಾಗಿ ಒಂದು ಅಥವಾ ಎರಡು ತಿಂಗಳೊಳಗೆ ಹೆಚ್ಚಳದ ಪರಿಣಾಮವನ್ನು ಸಾಲಗಾರರಿಗೆ ವರ್ಗಾಯಿಸಬಹುದು.
ಆದರೆ ಪ್ರತಿಯೊಂದು ಸಾಲದ ಒಪ್ಪಂದದ ಷರತ್ತುಗಳು ವಿಭಿನ್ನವಾಗಿರುವುದರಿಂದ ನಿಖರವಾದ ಸಮಯವನ್ನು ಸಾಲದಾತರಲ್ಲಿಯೇ ಖಚಿತಪಡಿಸಿಕೊಳ್ಳಬೇಕು.
2. ಎಂಸಿಎಲ್ಆರ್ಗೆ ಸಂಬಂಧಿಸಿದ ಸಾಲಗಳು:
ಎಂಸಿಎಲ್ಆರ್ ಎಂದರೆ ನಿಧಿ ಆಧಾರಿತ ಸಾಲದ ಕನಿಷ್ಠ ಬಡ್ಡಿದರೆ, ಈ ಮಾನದಂಡಕ್ಕೆ ಸಂಬಂಧಿಸಿದ ಸಾಲಗಳ ಬಡ್ಡಿದರವು ಸಾಮಾನ್ಯವಾಗಿ ನಿಧಾನವಾಗಿ ಬದಲಾಗುತ್ತದೆ. ಬ್ಯಾಂಕುಗಳು ಎಂಸಿಎಲ್ರ್ಆ ದರವನ್ನು ಮಾಸಿಕವಾಗಿ ಪರಿಷ್ಕರಿಸಬಹುದಾದರೂ, ಸಾಲಗಾರನ ಬಡ್ಡಿದರವು ಒಪ್ಪಂದದಲ್ಲಿ ನಿಗದಿಪಡಿಸಿದ ಮರುಪರಿಶೀಲನಾ ಅವಧಿಯಲ್ಲಿಯೇ ಬದಲಾಗುತ್ತದೆ. ಈ ಅವಧಿ ಸಾಮಾನ್ಯವಾಗಿ ಆರು ತಿಂಗಳು ಅಥವಾ ಒಂದು ವರ್ಷವಾಗಿರಬಹುದು.
ಆದ್ದರಿಂದ, ಇಂತಹ ಸಾಲ ಪಡೆದವರು ತಕ್ಷಣವೇ ಬಡ್ಡಿದರ ಏರಿಕೆಯ ಪರಿಣಾಮವನ್ನು ಅನುಭವಿಸದೇ ಇರಬಹುದು. ಆದರೆ ಮುಂದಿನ ಮರುಪರಿಶೀಲನೆಯ ಸಂದರ್ಭದಲ್ಲಿ ಹೆಚ್ಚಿನ ಬಡ್ಡಿದರ ಅನ್ವಯವಾಗುವ ಸಾಧ್ಯತೆ ಇದೆ.”
3. ಹೊಸ ಸಾಲ ಪಡೆಯುವವರ ಮೇಲೆ ಪರಿಣಾಮ:
ವಾರದ ಆರ್ಥಿಕ ಚಿಂತನೆ ಹೊಸದಾಗಿ ಸಾಲ ಪಡೆಯುವವರಿಗೆ ಬಡ್ಡಿದರ ಏರಿಕೆಯ ಪರಿಣಾಮವು ಬೇಗನೆ ಕಾಣಿಸಿಕೊಳ್ಳಬಹುದು. ಏಕೆಂದರೆ ಹೊಸ ಮಾರುಕಟ್ಟೆ ಪರಿಸ್ಥಿತಿ ಮತ್ತು ಬ್ಯಾಂಕಿನ ಸಾಲ ನೀತಿಗೆ ಅನುಗುಣವಾಗಿ ನಿಗದಿಪಡಿಸಲಾಗುತ್ತದೆ.
ವೈಯಕ್ತಿಕ ಸಾಲಗಳು ಮತ್ತು ವಾಹನ ಸಾಲಗಳ ಬಡ್ಡಿದರಗಳಲ್ಲಿ ಬದಲಾವಣೆಗಳು ಗೃಹಸಾಲಗಳಿಗಿಂತ ಬೇಗ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೂ, ನಿಜವಾದ ಪರಿಣಾಮವು ಸಾಲದ ಸ್ವರೂಪ, ಬಡ್ಡಿದರದ ಮಾನದಂಡ ಮತ್ತು ಬ್ಯಾಂಕಿನ ನಿಯಮಗಳನ್ನು ಅವಲಂಬಿಸಿರುತ್ತದೆ.
ಸಾಮಾನ್ಯವಾಗಿ, ಇಂತಹ ನೀತಿ ಬದಲಾವಣೆಯ ನಂತರ ಬ್ಯಾಂಕುಗಳು ಕೆಲವು ದಿನಗಳು ಅಥವಾ ವಾರಗಳೊಳಗೆ ತಮ್ಮ ಬಡ್ಡಿದರಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಬಹುದು. ಆದ್ದರಿಂದ ಸಾಲಗಾರರು ತಮ್ಮ ಬ್ಯಾಂಕಿನ ಅಧಿಕೃತ ಜಾಲತಾಣವನ್ನು ಪರಿಶೀಲಿಸಬೇಕು ಅಥವಾ ಇತ್ತೀಚಿನ ಸಾಲದ ವಿವರಪಟ್ಟಿಯನ್ನು ಗಮನಿಸಬೇಕು. ತಮ್ಮ ಸಾಲಕ್ಕೆ ಅನ್ವಯಿಸುವ ಹೊಸ ಬಡ್ಡಿದರೆ, ಅದು ಜಾರಿಗೆ ಬರುವ ದಿನಾಂಕ ಮತ್ತು ಮಾಸಿಕ ಕಂತಿನ ಮೇಲೆ ಬೀರುವ ಪರಿಣಾಮವನ್ನು ಬ್ಯಾಂಕಿನಿಂದ ಖಚಿತಪಡಿಸಿಕೊಳ್ಳುವುದು ಸೂಕ್ತ.
ಈಗಾಗಲೇ ಸಾಲ ಪಡೆದವರು ಏನು ಮಾಡಬೇಕು?
ಬಡ್ಡಿದರ ಏರಿಕೆಯ ಪರಿಣಾಮವು ಈಗಾಗಲೇ ಸಾಲ ಪಡೆದವರಿಗೆ ಮುಖ್ಯವಾಗಿ ಎರಡು ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಒಂದು, ಮಾಸಿಕ ಸಮಾನ ಕಂತಿನ ಮೊತ್ತ ಹೆಚ್ಚಾಗುವುದು, ಮತ್ತೊಂದು, ಮಾಸಿಕ ಕಂತಿನ ಮೊತ್ತವನ್ನು ಬದಲಾಯಿಸದೆ ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸುವುದು.
ಮಾಸಿಕ ಕಂತು ಹೆಚ್ಚಾಗುವುದನ್ನು ತಪ್ಪಿಸಲು ಕೆಲವು ಸಾಲಗಾರರು ಮರುಪಾವತಿ ಅವಧಿಯನ್ನು ವಿಸ್ತರಿಸಲು ಒಪ್ಪಿಕೊಳ್ಳುತ್ತಾರೆ. ಆದರೆ ಇದರಿಂದ ದೀರ್ಘಾವಧಿಯಲ್ಲಿ ಪಾವತಿಸಬೇಕಾದ ಒಟ್ಟು ಬಡ್ಡಿಯ ಮೊತ್ತ ಹೆಚ್ಚಾಗಬಹುದು. ಹೀಗಾಗಿ, ಸಾಧ್ಯವಾದಷ್ಟು ಸಾಲ ಮರುಪಾವತಿ ಅವಧಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮತ್ತು ಒಟ್ಟು ಬಡ್ಡಿಯ ಹೊರೆಯನ್ನು ಲೆಕ್ಕಹಾಕುವುದು ಮುಖ್ಯ.
ಸಾಲಗಾರರು ಕೆಳಗಿನ ಕ್ರಮಗಳನ್ನು ಪರಿಗಣಿಸಬಹುದು:
1. ಮಾಸಿಕ ಕಂತು ಮತ್ತು ಮರುಪಾವತಿ ಅವಧಿಯನ್ನು ಪರಿಶೀಲಿಸಿ:-ಬಡ್ಡಿದರ ಹೆಚ್ಚಾದಾಗ ಕಂತಿನ ಮೊತ್ತವನ್ನು ಹೆಚ್ಚಿಸುವುದರಿಂದ ಸಾಲದ ಅವಧಿ ಅನಗತ್ಯವಾಗಿ ವಿಸ್ತರಿಸುವುದನ್ನು ತಪ್ಪಿಸಬಹುದು. ಆದರೆ ತಮ್ಮ ಮಾಸಿಕ ಆದಾಯ ಮತ್ತು ಅಗತ್ಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು.
2.ಭಾಗಶಃ ಮುಂಗಡ ಮರುಪಾವತಿ ಮಾಡಿ:-
ಕೈಯಲ್ಲಿ ಹೆಚ್ಚುವರಿಹಣವಿದ್ದರೆ ಸಾಲದ ಒಂದು ಭಾಗವನ್ನು ಮುಂಗಡವಾಗಿ ಪಾವತಿಸುವುದನ್ನು ಪರಿಗಣಿಸಬಹುದು. ಇದರಿಂದ ಬಾಕಿ ಅಸಲಿನ ಮೊತ್ತ ಕಡಿಮೆಯಾಗಿ, ಮುಂದಿನ ಅವಧಿಯಲ್ಲಿ ಪಾವತಿಸಬೇಕಾದ ಬಡ್ಡಿಯೂ ತಗ್ಗಬಹುದು. ವೈಯಕ್ತಿಕ ಸಾಲಗಾರರು ಪಡೆದ ತೇಲುವ ಬಡ್ಡಿದರದ ಸಾಲಗಳಿಗೆ ಸಾಮಾನ್ಯವಾಗಿ ಭಾಗಶಃ ಮುಂಗಡ ಮರುಪಾವತಿ ಶುಲ್ಕ ಇರುವುದಿಲ್ಲ. ಆದರೂ ಅನ್ವಯಿಸುವ ನಿಯಮಗಳು ಮತ್ತು ಸಾಲದ ಒಪ್ಪಂದವನ್ನು ಪರಿಶೀಲಿಸಬೇಕು.
3. ಕಡಿಮೆ ಬಡ್ಡಿದರಕ್ಕಾಗಿ ಬ್ಯಾಂಕಿನೊಂದಿಗೆ ಮಾತುಕತೆ ನಡೆಸಿ:-ಈಗಾಗಲೇ ಪಾವತಿಸುತ್ತಿರುವ ಬಡ್ಡಿದರವು ಹೊಸ ಗ್ರಾಹಕರಿಗೆ ನೀಡಲಾಗುತ್ತಿರುವ ದರಕ್ಕಿಂತ ಗಮನಾರ್ಹವಾಗಿ ಹೆಚ್ಚಿದ್ದರೆ, ಬಡ್ಡಿದರವನ್ನು ಕಡಿಮೆ ಮಾಡುವಂತೆ ಬ್ಯಾಂಕಿಗೆ ಮನವಿ ಸಲ್ಲಿಸಬಹುದು. ಬ್ಯಾಂಕಿನ ಆಂತರಿಕ ನೀತಿ, ಸಾಲಗಾರನ ಮರುಪಾವತಿ ಇತಿಹಾಸ ಮತ್ತು ಅರ್ಹತೆಯ ಆಧಾರದ ಮೇಲೆ ಮನವಿಯನ್ನು ಪರಿಗಣಿಸಬಹುದು.
4. ಸಾಲ ವರ್ಗಾವಣೆ ಸಾಧ್ಯತೆಯನ್ನು ಪರಿಶೀಲಿಸಿ:- ಮತ್ತೊಂದು ಬ್ಯಾಂಕ್ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಸಿದ್ದವಿದ್ದರೆ, ಚಾಲ್ತಿಯಲ್ಲಿರುವ ಸಾಲದ ಬಾಕಿಯನ್ನು ಹೊಸ ಬ್ಯಾಂಕಿಗೆ ವರ್ಗಾಯಿಸುವ ಆಯ್ಕೆಯನ್ನೂ ಪರಿಗಣಿಸಬಹುದು, ಆದರೆ ಸಂಸ್ಕರಣಾ ಶುಲ್ಕ, ಇತರ ಅನ್ವಯಿಸುವ ವೆಚ್ಚಗಳು, ಹೊಸ ಸಾಲದ ಷರತ್ತುಗಳು ಮತ್ತು ಉಳಿದಿರುವ ಮರುಪಾವತಿ ಅವಧಿಯನ್ನು ಲೆಕ್ಕಹಾಕಿದ ನಂತರವೇ ನಿರ್ಧಾರ ಕೈಗೊಳ್ಳಬೇಕು. ಬಡ್ಡಿದರದಲ್ಲಿ ಸ್ವಲ್ಪ ವ್ಯತ್ಯಾಸವಿದೆ ಎಂಬ ಕಾರಣಕ್ಕೆ ಮಾತ್ರ ಸಾಲ ವರ್ಗಾವಣೆ ಮಾಡುವುದು ಸೂಕ್ತವಲ್ಲ,
ಸಣ್ಣ ಏರಿಕೆ, ಆದರೆ ಮಹತ್ವದ ಮುನ್ಸೂಚನೆ:
2026ರ ಅಕ್ಟೋಬರ್ನಲ್ಲಿ ರೆಪೊ ದರವನ್ನು 25 ಮೂಲಾಂಶಗಳನ್ನು ಹೆಚ್ಚಿಸಿರುವುದು ಪ್ರಮಾಣದ ದೃಷ್ಟಿಯಿಂದ ಸಣ್ಣ ಬದಲಾವಣೆಯಂತೆ ಕಾಣಬಹುದು. ಆದರೆ ದೀರ್ಘಕಾಲದಿಂದ ಮುಂದುವರಿದಿದ್ದ ಬಡ್ಡಿದರ ಇಳಿಕೆಯ ಪ್ರವೃತ್ತಿಯ ಬಳಿಕ ಈ ನಿರ್ಧಾರವು ಹಣಕಾಸು ನೀತಿಯ ದಿಕ್ಕಿನಲ್ಲಿ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ.
ಸಾಲಗಾರರು ತಮ್ಮ ಸಾಲ ಯಾವ ಮಾನದಂಡಕ್ಕೆ ಸಂಬಂಧಿಸಿದೆ. ಬಡ್ಡಿದರವನ್ನು ಯಾವಾಗ ಮರುಪರಿಶೀಲಿಸಲಾಗುತ್ತದೆ ಮತ್ತು ಕಂತಿನ ಮೊತ್ತ ಅಥವಾ ಮರುಪಾವತಿ ಅವಧಿಯಲ್ಲಿ ಯಾವ ಬದಲಾವಣೆ ಆಗಬಹುದು ಎಂಬುದನ್ನು ತಿಳಿದುಕೊಳ್ಳಬೇಕು. ಮುಂಚಿತವಾಗಿ ಯೋಜನೆ ರೂಪಿಸುವುದರಿಂದ ಅನಿರೀಕ್ಷಿತ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಬಹುದು.
ಹೊಸ ಸಾಲ ಪಡೆಯುವವರು ವಿವಿಧ ಬ್ಯಾಂಕುಗಳ ಬಡ್ಡಿದರಗಳು, ಸಂಸ್ಕರಣಾ ಶುಲ್ಕಗಳು, ಮರುಪಾವತಿ ಷರತ್ತುಗಳು ಮತ್ತು ಇತರ ವೆಚ್ಚಗಳನ್ನು ಹೋಲಿಕೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಈಗಾಗಲೇ ಸಾಲ ಪಡೆದವರು ತಮ್ಮ ಆದಾಯ, ಉಳಿತಾಯ ಮತ್ತು ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಬಡ್ಡಿದರ ಏರಿಕೆಯ ಸಂದರ್ಭದಲ್ಲಿ ಆತಂಕಪಡುವುದಕ್ಕಿಂತ, ಸಾಲದ ಷರತ್ತುಗಳನ್ನು ಅರ್ಥಮಾಡಿಕೊಳ್ಳುವುದು, ಒಟ್ಟು ಬಡ್ಡಿಯ ಹೊರೆಯನ್ನು ಲೆಕ್ಕಹಾಕುವುದು ಮತ್ತು ಹಣಕಾಸಿನ ಯೋಜನೆಯನ್ನು ಪರಿಷ್ಕರಿಸುವುದು ಹೆಚ್ಚು ಪ್ರಯೋಜನಕಾರಿ.
ದೊಡ್ಡ ಮೊತ್ತದ ಸಾಲ ಅಥವಾ ಸಾಲ ವರ್ಗಾವಣೆಯಂತಹ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಹಲವು ಸಾಲದಾತರ ಪ್ರಸ್ತಾವನೆಗಳನ್ನು ಹೋಲಿಸಿ, ಅಗತ್ಯವಿದ್ದರೆ ಅರ್ಹ ಹಣಕಾಸು ಸಲಹೆಗಾರರ ಮಾರ್ಗದರ್ಶನ ಪಡೆಯುವುದು ಒಳಿತು.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಅರಿವಿಗಾಗಿ ಮಾತ್ರ. ಇದನ್ನು ವೈಯಕ್ತಿಕ ಹಣಕಾಸು ಸಲಹೆಯೆಂದು ಪರಿಗಣಿಸಬಾರದು.
ಶ್ರೀ.ರಂಗನಾಥ ನೂಲಿಕರ.