ನೆಹರೂರವರ ದೃಷ್ಟಿಯಲ್ಲಿ ಸಹಕಾರ ಚಳವಳಿ. | ಶ್ರೀ. ಶಂಕರ ಹೆಗಡೆ.

72 ನೇಸಹಕಾರಿ ಸಪ್ತಾಹ ನ.14 ರಿಂದ 20ರವರೆಗೆ ಜರುಗಲಿದ್ದು, ಸಹಕಾರದಿಂದಲೇ ಸಮೃದ್ಧಿಯೆಂಬುದು ಈ ಬಾರಿ ಘೋಷವಾಕ್ಯವಾಗಿದೆ. ಸಹಕಾರಿ ರಂಗಕ್ಕೆ ದೇಶದ ಮೊದಲ ಪ್ರಧಾನಿ ಪಂಡಿತ್ ನೆಹರೂರವರ ಕೊಡುಗೆಯನ್ನಾಧರಿಸಿ ಪ್ರತೀ ವರ್ಷ ಅವರ ಜನ್ಮ ದಿನವಾದ ನ.14ರಂದೇ ಸಹಕಾರಿ ಸಪ್ತಾಹಕ್ಕೆ ಚಾಲನೆ ಕೊಡುತ್ತಾ ಬರಲಾಗಿದೆ. ಚಾಚಾ ನೆಹರೂ ಎಂಬುದಾಗಿ ಮಕ್ಕಳಿಗೆಲ್ಲಾ ಪ್ರಿಯರಾಗಿದ್ದ ಜವಾಹರಲಾಲ ನೆಹರೂರವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಿಕ್ಕಂದಿನಿಂದಲೆ ಧುಮುಕಿ ರಾಷ್ಟ್ರೀಯ ನೇತಾರರೆಂದು ಮಹಾತ್ಮ ಗಾಂಧೀಜಿಯವರ ಆಶೀರ್ವಾದ ಪಡೆದು, ದೇಶದ ಸ್ವಾತಂತ್ರ್ಯಾ ನಂತರ ಪ್ರಥಮ ಪ್ರಧಾನಿಗಳಾಗಿ ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದವರು. ಎರಡು ದಶಕಗಳಲ್ಲಿ ಹಲವು ಪ್ರಗತಿಪರ ಹೆಜ್ಜೆಗಳನ್ನಿಟ್ಟು ಸಹಕಾರ ಸೇರಿದಂತೆ ಎಲ್ಲಾ ರಂಗಗಳಲ್ಲಿ ದೇಶದ ಮಹತ್ತರ ಸಾಧನೆಗೆ ಕಾರಣೀಭೂತರಾದವರು. ಈ ಹಿನ್ನೆಲೆಯಲ್ಲಿ ನೆಹರು ಅವರ ಜನ್ಮ ದಿನವನ್ನು ಸಹಕಾರ ಸಪ್ತಾಹದ ಪ್ರಾರಂಭದ ದಿನವಾಗಿ ದೇಶದಾದ್ಯಂತ ಆಚರಿಸಲಾಗುತ್ತಿತ್ತು. ಈ ಬಾರಿ ಕೇಂದ್ರ ಅಖಿಲ ಭಾರತ ಸಪ್ತಾಹದ ದಿನಾಂಕವನ್ನು ಬದಲಿಸಿದರೂ, ಸಹಕಾರ ರಂಗಕ್ಕೆ ನೆಹರೂ ಅವರ ಕೊಡುಗೆ ಸಾರ್ವಕಾಲಿಕವಾಗಿ ಉಳಿದಿದೆ. ರಾಜ್ಯದಲ್ಲೂ ನ.14ರಿಂದ 20ರವರೆಗೆ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ.

ದೇಶದ ಮೂಲೆ ಮೂಲೆಗಳಲ್ಲಿ ಸಹಕಾರದ ವಿವಿಧ ಮುಖಗಳ ಅರಿವನ್ನು ಜನತೆಗೆ ಮಾಡಿಕೊಡುವುದು 7 ದಿನಗಳ ಸಹಕಾರ ಸಪ್ತಾಹದ ಉದ್ದೇಶವಾಗಿದ್ದು, ಸಹಕಾರದ ಆದರ್ಶ, ಅನುಷ್ಠಾನದಿಂದಲೇ ಅಧಿಕ ಉತ್ಪಾದನೆ, ಕೃಷಿ ಕೈಗಾರಿಕೆಗಳಲ್ಲಿ ಪ್ರಗತಿ, ಬೆಲೆ ನಿಯಂತ್ರಣ ಇನ್ನಿತರ ಆರ್ಥಿಕ ರಂಗಗಳಲ್ಲಿ ಪ್ರಗತಿ ಸಾಧನೆಯ ವಿಧಾನವಿದೆಯೆಂಬುದನ್ನು ತಿಳಿಯಪಡಿಸಲು ಸಹಕಾರ ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ಹುರಿದುಂಬಿಸುವುದು ಸಹಕಾರ ಸಪ್ತಾಹದ ಉದ್ದೇಶವಾಗಿದೆ.

ಸಹಕಾರ ತತ್ವ ಎಂದೊಡನೆ ಅದೊಂದು ಸುವ್ಯವಸ್ಥಿತ ಆರ್ಥಿಕ ವ್ಯವಸ್ಥೆ ಎಂಬುದು ಸರ್ವೆ ಸಾಮಾನ್ಯ ಭಾವನೆ. ಆದರೆ ಈ ಪದ್ಧತಿ ಬರೀ ಆರ್ಥಿಕ ವ್ಯವಸ್ಥೆ ಮಾತ್ರವಲ್ಲ. ಜನಜೀವನದಲ್ಲಿ ವ್ಯಾವಹಾರಿಕವಾಗಿ ನಡೆದು ಬಂದ ಸಾಮಾಜಿಕ ವ್ಯವಸ್ಥೆಯೂ ಆಗಿದೆ. ಇದು ಬಂಡವಾಳದಾರರ ಸ್ವತ್ತಲ್ಲ, ಅದೇ ಹೊತ್ತಿಗೆ ಇದೊಂದು ಸಮಾಜವಾದಿ ಪದ್ದತಿಯೆನ್ನಲೂ ಬರುವುದಿಲ್ಲ, ಬಂಡವಾಳ ಶಾಹಿ ಪದ್ದತಿಗಿಂತ ಸಮಾಜವಾದಿ ಪದ್ದತಿಗೆ ಹತ್ತಿರದ ಸಂಬಂಧಿಯೆಂದರೆ ತಪ್ಪಾಗದು ಎಂದಿದ್ದಾರೆ ಜವಾಹರಲಾಲ ನೆಹರೂರವರು.

ಸಹಕಾರ ಎಂದರೆ ಪರಸ್ಪರತೆ, ಪರಸ್ಪರ ನೆರವಾಗುವ ವ್ಯವಸ್ಥೆ ಹಾಗೂ ಶಾಂತಿಯುತ ಪ್ರಗತಿ ಸಾಧನೆಯ ಮಾರ್ಗ, ಪರಸರ ಸಹಕಾರದ ದೃಷ್ಟಿಕೋನವಿಟ್ಟುಕೊಂಡ ಜನ ಎಂದಿಗೂ ಘರ್ಷಣೆ, ಶಾಂತಿ ಭಂಗ, ಯುದ್ಧಗಳನ್ನು ಪ್ರೋತ್ಸಾ ಹಿಸುವ ಪ್ರವೃತ್ತಿಯವರಲ್ಲ. ಶಾಂತಿ ಪ್ರಿಯರು ಎಂಬುದು ಸುಸ್ಪಷ್ಟ ಎಂದವರು ನೆಹರೂ,

ಸ್ವಾಯತ್ತತೆ ಸಹಕಾರ ಪದ್ದತಿಯ ಮುಖ್ಯ ಉದ್ದೇಶ, ಗ್ರಾಮಾಂತರ ಜನತೆಯ, ನಿಶ್ಚಿತ ಘಟಕ ಯಾ ಸಮೂಹ ಅಥವಾ ಸಮಾಜದ ಆರ್ಥಿಕ ಉನ್ನತಿ ಪರಸ್ಪರರ ಸಹಕಾರ ಸಹಾಯ ಹಾಗೂ ಸಹಕಾರಿ ಮಾರ್ಗದರ್ಶನದಿಂದಲೆ ಸಾಧ್ಯ. ಸ್ವಯಂ ಪ್ರೇರಣೆಯಿಂದಲೆ ಸ್ವಯಂ ಶ್ರೇಯೋಭಿವೃದ್ಧಿ ಗಳಿಸುವ ಸಾಧನವಿದು. ಇಲ್ಲಿ ಪರಸ್ಪರರ ಅರಿವು, ಪರಸ್ಪರರ ನೆರವು ಇದೇ ಮುಖ್ಯ. ಈ ಕ್ಷೇತ್ರದಲ್ಲಿ ಸರಕಾರದ ನಿಯಂತ್ರಣಕ್ಕೆ ಅವಕಾಶವಿಲ್ಲ. ಒಳ್ಳೆಯದಕ್ಕೆ ಆಗಲಿ, ಕೆಡುಕಿಗೆ ಆಗಲಿ, ಸಹಕಾರ ಕ್ಷೇತ್ರದಲ್ಲಿ ಸರಕಾರ ಹತೋಟಿಗೆ ಪ್ರಯತ್ನಿಸಿದಲ್ಲಿ ಅದು ಸಹಕಾರವೆ ಅಲ್ಲ, ಅದು ಇನ್ನೇನೊ ಎನ್ನಬೇಕಾಗುತ್ತದೆ ಎಂಬ ತಮ್ಮ ಮನಃ ಪೂರ್ವಕ ಹಾಗೂ ನಿಶ್ಚಿತ ಅಭಿಪ್ರಾಯ ನೆಹರೂರನ್ನು, ಸಹಕಾರ ವಿಚಾರ ಪ್ರಸ್ತಾಪಿತವಾದ ಪ್ರತಿಯೊಂದು ವೇದಿಕೆಯಲ್ಲೂ ದೇಶದ ಪ್ರಧಾನಿಯ ನೆಲೆಯಿಂದಲೂ, ವೈಯಕ್ತಿಕ ನೆಲೆಯಿಂದಲೂ, ಈ ತಮ್ಮ ಅಭಿಪ್ರಾಯವನ್ನು ಅವರು ಒತ್ತಿ ಒತ್ತಿ ಹೇಳಿದ್ದಾರೆ. ಸರಕಾರದ ಹತೋಟಿ ಸಹಕಾರ ರಂಗದಲ್ಲಿ ಹೆಚ್ಚುತ್ತಾ ಹೋದಂತೆ ಆ ಬಗ್ಗೆ ತನ್ನ ತೀವ್ರ ವೇದನೆಯನ್ನು ತೋಡಿಕೊಂಡಿದ್ದಾರೆ ಅವರು.

ಮಹಾತ್ಮಾ ಗಾಂಧೀಜಿಯವರಿಂದ ಸ್ಪೂರ್ತಿ ಹೊಂದಿ ಸ್ವಾಯತ್ತ ಸಹಕಾರಿ ಪ್ರಜಾಪ್ರಭುತ್ವ ಪದ್ಧತಿಯನ್ನು ಈ ದೇಶದಲ್ಲಿ ಸ್ಥಾಪಿಸುವ ನಿರ್ಧಾರ ಸ್ವಾತಂತ್ರ್ಯಾ ನಂತರ ತಳೆಯಲಾಗಿತ್ತು. ಘಟನೆಯ ರಚನೆಯ ಕಾಲದಲ್ಲೂ ಪದ್ದತಿಗೆ ಒಂದು ವಿಶಿಷ್ಟ ಸ್ಥಾನವನ್ನು ನೀಡಲಾಗಿತ್ತೆಂಬುದನ್ನೂ, 1958 ರಲ್ಲಿ ಭಾರತೀಯ ಸಹಕಾರಿ ಮಹಾ ಸಮ್ಮೇಳನವನ್ನುದ್ದೇಶಿಸಿ ಮಾಡಿದ ನೆಹರೂರವರ ಭಾಷಣದಲ್ಲಿ ಸ್ಪಷ್ಟವಾಗುತ್ತದೆ.

ಸಹಕಾರಿ ಪದ್ಧತಿ ನಮ ದೇಶದಲ್ಲಿ ಬೆಳೆದು ಬಂದ ಬಗೆಗೆ ನೆಹರೂ ತಮ್ಮ ಅಸಮಾಧಾನವನ್ನು ಅಂದೆ ವ್ಯಕ್ತಪಡಿಸಿದ್ದಾರೆ. ಸಚೇತನ ಸಜೀವ ಸೇವಾಪರ ಚಳವಳಿಯಾಗಿ ಬೆಳೆದುಬರಬೇಕಾಗಿದ್ದ ಸಹಕಾರ ಚಳವಳಿ ತನ್ನದೆ ಆದ ಸಮಸ್ಯೆಗಳನ್ನೂ ಹೊಂದಿದ್ದು, ಸ್ವಯಂಪೂರ್ಣ ಸ್ವಾಯತ್ತತೆಯನ್ನು ಬೆಳೆಸಿಕೊಳ್ಳುವಲ್ಲಿ ವಿಫಲತೆಯ ಹಾದಿಯನ್ನು ಅಂದೇ ಹಿಡಿದಿರುವುದನ್ನು ಕಂಡ ಅವರು ಈ ಬಗ್ಗೆ ಸದಾ ಚಿಂತನೆಯಾಗಬೇಕು. ಸೂಕ್ತ ಮಾರ್ಗದರ್ಶನ, ಮುಂದಾಳತ್ತ ಹಾಗೂ ನಿಷ್ಠಾವಂತ ಸೇವಾನಿರತ ಕಾರ್ಯಕರ್ತರ ಅವಶ್ಯಕತೆ ಚಳವಳಿ ಸುಸೂತ್ರವಾಗಿ ಕಾರ್ಯವೆಸಗಲು ಅವಶ್ಯವೆಂಬುದನ್ನು ಒತ್ತಿ ಹೇಳಿದರು.

ಜನತೆಯ ಸಾಮರ್ಥ್ಯದ ಅರಿವನ್ನು ಮಾಡಿಕೊಳ್ಳದೆ ನಮ್ಮ ಜನ ತಮ್ಮ ಕಾಲ ಮೇಲೆ ನಿಲ್ಲಬಲ್ಲರು. ತಮ್ಮ ಹಿತ ಸಾಧನೆಯ ಬಗ್ಗೆ ಚಿಂತಿಸಬಲ್ಲರು. ತಮ್ಮದೇ ಆದ ದಾರಿಯನ್ನು ಕಂಡುಕೊಳ್ಳಬಲ್ಲರು ಎಂಬುದರ ಬಗೆಗೆ ಶಂಕೆಯಿಂದ ರೂರಲ್ ಕ್ರೆಡಿಟ್ ಸರ್ವೇ ಸಮಿತಿಯು ಸರಕಾರ ಅವರ ಬೆಂಗಾವಲಾಗಿ ನಿಲ್ಲಬೇಕು ಎಂದು ಸೂಚಿಸಿತ್ತು. ತತ್ಪರಿಣಾಮವಾಗಿ ಚಳವಳಿ ತಪ್ಪು ದಾರಿಯಲ್ಲಿ ಸಾಗಿತು. ಸರಕಾರದ ಆರ್ಥಿಕ ನೆರವಿನೊಂದಿಗೆ ಸರಕಾರಿ ಅಧಿಕಾರಿಗಳ ನೇಮಕಾತಿ ತತ್ವದ ಹಾಗೂ ಆಗು ಹೋಗುಗಳ ಅರಿವೆ ಇಲ್ಲದ ಜನ ಚಳವಳಿಯ ಕಾರ್ಯನಿರ್ವಾಹಕರಾಗಿ ಬಂದುದು, ಸಹಕಾರಿ ಘಟಕಗಳು ಅಮಾಯಕವಾಗಿ ದೊಡ್ಡ ಘಟಕಗಳಾಗಿ ಪರಿವರ್ತಿತಗೊಂಡು, ಸದಸ್ಯರುಗಳಲ್ಲಿ ಪರಸ್ಪರರ ಗುರುತು ಪರಿಚಯವಿಲ್ಲದಂತಾದುದು, ದುರ್ಬಲ ಸದಸ್ಯರ ಮೇಲೆ ಸಬಲರ ಹಾಗೂ ಸರಕಾರಿ ಅಧಿಕಾರಿಗಳಿಂದ ದಬ್ಬಾಳಿಕೆ, ಶೋಷಣೆ ಮುಂತಾದ ದುಷ್ಪರಿಣಾಮಗಳಿಗೆ ಕಾರಣವಾಯಿತೇ ವಿನಃ ಸಂಘದಲ್ಲಿ ಪರಸ್ಪರ ಹೊಂದಾಣಿಕೆ, ಸಹಜೀವನ, ಸಹಬಾಳ್ವೆಯ ಭಾವನೆ ಹಾಗೂ ಸ್ವಯಂ ನಿರ್ಧಾರದ ಶಕ್ತಿ ಬೆಳೆದು ಬರುವ ಅವಕಾಶವೆ ಇಲ್ಲದಂತಹ ಪರಿಸ್ಥಿತಿ ಸಂಭವಿಸಿದೆ.

ನಮ್ಮ ದೇಶದ ಗ್ರಾಮಾಂತರ ಜನಜೀವನದ ಸಾಮಾಜಿಕ ಆರ್ಥಿಕ ಉನ್ನತಿಯಾಗಬೇಕಾದಲ್ಲಿ ಪ್ರತೀ ಗ್ರಾಮದಲ್ಲಿ ಒಂದು ಪಂಚಾಯತಿ, ಒಂದು ಸಹಕಾರ ಸಂಘ ಹಾಗೂ ಒಂದು ಪ್ರಾಥಮಿಕ ಶಾಲೆ ಈ ಮೂರು ಘಟಕಗಳಿಂದ ಮಾತ್ರ ಸಾಧ್ಯ. ಸ್ವಯಂ ಆಡಳಿತಕ್ಕಾಗಿ ಪಂಚಾಯತಿ, ಆರ್ಥಿಕ ಉನ್ನತಿಗಾಗಿ ಸಹಕಾರ ಸಂಘ, ನಿರಕ್ಷರತೆ ನಿವಾರಣೆಗಾಗಿ ಶಾಲೆ ಅತ್ಯವಶ್ಯ. ಈ ಧೈಯವಿಟ್ಟುಕೊಂಡವರು ನೆಹರೂ. ಸಹಕಾರ ರಂಗದಲ್ಲಿ ಸರಕಾರದ ನೆರವು ಹೆಚ್ಚು ಹೆಚ್ಚಾದಂತೆ ಗ್ರಾಮದ ಆರ್ಥಿಕ ಘಟಕವಾದ ಸಹಕಾರ ಸಂಘ ಸ್ಥಾಯತ್ತತೆಯ ಮಾರ್ಗದಿಂದ ಶಿಥಿಲಗೊಂಡು ಗ್ರಾಮದ ಹಿತಸಾಧನೆಗೆ ಕುತ್ತಾಗಿ ಪರಿಣಮಿಸಿತು. ಅದರ ಬೆನ್ನಲ್ಲೇ ಸಂಘದ ರೂಪ ಬದಲಾಗಿ ಒಂದು ಗ್ರಾಮಕ್ಕೆ ಸೀಮಿತವಿರಬೇಕಾದ ಸಹಕಾರ ಸಂಘವು ಹಲವಾರು ಗ್ರಾಮಗಳನ್ನೊಳಗೊಂಡ ದೊಡ್ಡ ಪ್ರಮಾಣದ ಸಂಘವಾಗುವ ಸಂಭವ ಹೆಚ್ಚು. ಸ್ವಯಂಪೂರ್ಣತೆಯ ಉದ್ದೇಶದ ಬದಲಾಗಿ ಲಾಭಗಳಿಕೆಯೆ ಪ್ರಾಮುಖ್ಯವೆನಿಸಿ, ಅನಗತ್ಯ ಕಾರ್ಯವಿಸ್ತರಣೆಯಿಂದಾಗಿ ಸದಸ್ಯರ ಹೊಂದಾಣಿಕೆಗೆ ಧಕ್ಕೆ, ಹೆಜ್ಜೆ ಹೆಜ್ಜೆಗೂ ಸರಕಾರದ ನೆರವು, ಮಾರ್ಗದರ್ಶನದ ಹಾರೈಕೆ, ಪರಾವಲಂಬನೆ ಈ ಪರಿಸ್ಥಿತಿ ಸಹಕಾರದ ಮೂಲ ತತ್ವಕ್ಕೆ ತದ್ದಿರುದ್ಧವಾಗಿ ಪರಿಣಮಿಸಿದೆ ಎಂದು ಅಂದೇ ಅವರು ಹೇಳಿದರು.

ಸಹಕಾರ ಕ್ಷೇತ್ರ ಬೆಳೆಯಬೇಕಾದರೆ ಈ ಚಳವಳಿಯ ಬಗ್ಗೆ ಹಳ್ಳಿಯ ಜನಕ್ಕೆ, ಬಡಜನಕ್ಕೆ, ಯುವ ಜನರಿಗೆ, ಯಾವ ವರ್ಗದ ಜನರ ಸಾಮಾಜಿಕ ಆರ್ಥಿಕ ಉದ್ಧಾರಕ್ಕಾಗಿ ಚಳವಳಿ ಕಾರ್ಯವೆಸಗುತ್ತದೋ ಆ ಜನರಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ತೀರಾ ಅವಶ್ಯವೆಂಬುದು ಅವರ ಕಳಕಳಿಯಾಗಿತ್ತು. ಚಳವಳಿಯ ಬಗ್ಗೆ ಸಾಕಷ್ಟು ತಿಳಿವಳಿಕೆ ಎಲ್ಲೆಡೆಯಲ್ಲೂ ಒದಗಿಸಬೇಕು. ಅದಕ್ಕಾಗಿ ಯುವಕರಿಗೆ ಗ್ರಾಮಾಂತರ ಜನರಿಗೆ ತರಬೇತಿ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಗ್ರಾಮದ ಕಾರ್ಯಕರ್ತರಿಗೆ ಸಂಸ್ಥೆಯನ್ನು ನಡೆಸುವ ಜವಾಬ್ದಾರಿಯ ಕುರಿತಾಗಿ ಲೆಕ್ಕಪತ್ರಗಳನ್ನಿಡುವ ವಿಷಯ ಹಾಗೂ ಸಂಘಗಳು ತಮ್ಮ ವ್ಯವಹಾರಗಳನ್ನು ಸುವ್ಯವಸ್ಥಿತವಾಗಿ ಕೈಗೊಳ್ಳುವಂತೆ ತರಬೇತಿ ದೇಶದಾದ್ಯಂತ ಆಗಬೇಕೆಂದೂ ಅವರು ಸೂಚಿಸಿದರು.

ನೆಹರೂರವರ ಆದರ್ಶಗಳನ್ನು ಪರಿಪಾಲಿಸುವಲ್ಲಿ ಸಹಕಾರ ಚಳವಳಿ ಎಷ್ಟು ಯಶಸ್ವಿಯಾಗಿದೆ ಎಂದು ನಾವು ಸಿಂಹಾವಲೋಕನಗೈಯುವುದೂ ಇಲ್ಲಿ ಸೂಕ್ತ. ಚಳವಳಿಯ ಉದ್ದೇಶ ಒಳ್ಳೆಯದು. ಚಳವಳಿಯ ಬೆಳವಣಿಗೆಯ ದಾರಿ ಮಾತ್ರ ನೆಹರೂರವರಂದಂತೆ ತೀರಾ ತಪ್ಪು ಮಾರ್ಗದಲ್ಲೇ ಸಾಗಿದೆಯೆನ್ನಲು ವಿಷಾದವೆನಿಸುತ್ತದೆ.

ಸ್ವಾಯತ್ತ ಸ್ವಯಂಪೂರ್ಣತೆ ಮಾರ್ಗದಿಂದ ಬಹುದೂರ ಸಾಗುತ್ತಿದೆ. ಸಹಕಾರ ಕ್ಷೇತ್ರ ಭಾರತದಲ್ಲಿ ಸರಕಾರದ ಹಸ್ತವನ್ನೇ ನಂಬಿಕೊಂಡು ಸರಕಾರದ ಅಂಗಸಂಸ್ಥೆಯಾಗಿಯೇ ಸಾಗುತ್ತಿದೆ. ಅಲ್ಲೊಂದು ಇಲ್ಲೊಂದು ಎಂಬಂತೆ ಬೆರಳೆಣಿಕೆಗಷ್ಟೇ ಕೆಲವು ಸಂಘಗಳು ಮಾತ್ರ ತಾವೆ ತಾವಾಗಿ ಸ್ವಯಂ ಕಾಲಮೇಲೆ ನಿಂತಿರುವ ಪರಿಸ್ಥಿತಿ ಇದೀಗ ಸಹಕಾರ ಕ್ಷೇತ್ರದಲ್ಲಿ ಗ್ರಾಮಾಂತರದ ಹೆಚ್ಚಿನ ಸಂಘಗಳು ಸರಕಾರದ ಸಾಲ ಹಾಗೂ ಸಬ್ಸಿಡಿಯನ್ನೇ ನಂಬಿಕೊಂಡಿದೆ. ತತ್ಪರಿಣಾಮವಾಗಿ ಹೆಚ್ಚು ಹೆಚ್ಚು ಸಂಘಗಳು ಸರಕಾರಿ ಅಧಿಕಾರಿಗಳ ಆಡಳಿತಕ್ಕೊಳಪಟ್ಟಿವೆ. ನೆರವು, ಸಬ್ಸಿ ಡಿ, ಸರಕಾರದಿಂದ ದೊರಕದಿದ್ದಾಗ ಇವು ನಿಷ್ಕ್ರಿಯವಾಗುತ್ತಿವೆ. ಸ್ಥಳೀಯ ಮುಂದಾಳತನ ಬರೀ ನಾಮ ಮಾತ್ರವಾಗಿ ಉಳಿದಿವೆ. ಯಶಸ್ವಿಯಾಗಿ ಕಾರ್ಯವೆಸಗುವ ಕೆಲವು ಸಂಸ್ಥೆ ಕೆಲವೊಂದು ಹಿತಾಸಕ್ತಿಗಳ ಕೈಗೊಂಬೆಗಳಾಗಿ ಉಳಿದರೆ, ಪರಸ್ಪರ ಸಹಕಾರ ತತ್ವ ಎಲ್ಲಿದೆ ಎಂಬ ಸಂದೇಹವೂ ಉಂಟಾಗುತ್ತದೆ.

ಪ್ರವಾಹದೋಪಾದಿಯಲ್ಲಿ ಕಾಯಿದೆಗಳಿಗೆ ತಿದ್ದುಪಡಿ ಮಾಡಲಾಗುತ್ತಿದ್ದು, ಸಹಕಾರ ಕಾಯಿದೆಯೆ ವಿಕೃತಗೊಂಡಿದ್ದು, ಚಳವಳಿಯ ಸ್ವತಂತ್ರ ಆರ್ಥಿಕ ವ್ಯವಸ್ಥೆಯಾಗಿ ಗ್ರಾಮಾಂತರ ಜನತೆಯ ಹಿತಸಾಧಿಸುವ ಚಳವಳಿಯಾಗಿ ಮುನ್ನಡೆಯಲು ಅಸಾಧ್ಯವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೂ ತಪ್ಪಾಗದು. ಸರಕಾರದ ಹಿಡಿತದಿಂದ ಸಹಕಾರ ಕ್ಷೇತ್ರವನ್ನು ಹೊರತಾಗಿಸುವ ಬದಲಾಗಿ ಸರಕಾರದ ಬಿಗಿಮುಷ್ಟಿ ಇನ್ನಷ್ಟು ಹೆಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ, ಆಗುತ್ತಿದೆ.

ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ನಿರ್ಮಾಣವಾದ ಗ್ರಾಹಕರ ಸಹಕಾರ ಸಂಘಗಳಂತೂ ದುರ್ಬಲವಾಗಿದ್ದು ಸರಕಾರದ ಸಾರ್ವಜನಿಕ ಅವಶ್ಯಕತೆಗಳ ವಿತರಣಾ ವ್ಯವಸ್ಥೆಯ ಅಂಗಸಂಸ್ಥೆಗಳಷ್ಟೇ ಆಗಿ ಉಳಿದಿದೆ. ಅವಶ್ಯಕ ವಸ್ತುಗಳ ನಿಯಂತ್ರಣ ವ್ಯವಸ್ಥೆ ಮುರಿದು ಬಿದ್ದಾಗ ಈ ಸಂಘಗಳೂ ನಿಷ್ಕ್ರಿಯವಾಗಿಯೆ ಉಳಿಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಚಳವಳಿಯ ಸ್ವರೂಪ ನೆಹರೂರವರು ನಮ್ಮ ಮುಂದಿಟ್ಟ ಸ್ವಯಂಪೂರ್ಣ ಸ್ವಾಯತ್ತ ಆರ್ಥಿಕ ಉನ್ನತಿ ಸಾಧನೆಯ ಘಟಕವಾಗುವಂತೆ ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕು. ಈ ದಿಸೆಯಲ್ಲಿ ಸಂಘಟನೆಗಳು, ಚಳವಳಿಯಲ್ಲಿ ಆಸಕ್ತಿಯುಳ್ಳವರು, ನಿಷ್ಠಾವಂತ ಕಾರ್ಯಕರ್ತರು ಹಾಗೂ ಸರಕಾರ ಹೊಸಚಿಂತನೆ ಮಾಡುವುದು ತೀರಾ ಅವಶ್ಯ. ಶೇಕಡ 70 ಕ್ಕೂ ಮಿಕ್ಕಿದ ಗ್ರಾಮಾಂತರ ಜನಸ್ತೋಮದ ಸರ್ವತೋಮುಖ ಅಭಿವೃದ್ಧಿ ಸಾಧನೆಯ ಮೂಲ ಸ್ಥಂಭಗಳಾಗಿ ಗ್ರಾಮಕ್ಕೊಂದು ಪಂಚಾಯತ್ ಸಹಕಾರ ಸಂಘ ಹಾಗೂ ಪ್ರಾಥಮಿಕ ಶಾಲೆ ಸ್ಥಾಪನೆಯಾಗಬೇಕೆಂಬ ನೆಹರೂ ಆಶಯ ಫಲಿಸುವ ದಿನ ಬೇಗನೆ ಬರಲಿ ಎಂದು ಹಾರೈಸೋಣ. ಈ ದಿಸೆಯಲ್ಲಿ ಭವತೆಯುಳ್ಳ ಸಹಕಾರಿ ಧುರೀಣರು, ಸಹಕಾರಿ ಕಾರ್ಯಕರ್ತರು ಹಾಗೂ ಶಾಸಕರು ಚಿಂತನೆ ಮಾಡುವುದು ಅತ್ಯವಶ್ಯ. ಅದೇ ನಾವು ರಾಷ್ಟ್ರದ ಸಹಕಾರಿ ನೇತಾರರಾಗಿರುವ ಪಂಡಿತ್ ನೆಹರೂರವರಿಗೆ ನೀಡಬಹುದಾದ ದೊಡ್ಡ ಕಾಣಿಕೆ ಹಾಗೂ ಗೌರವ.

ಶಂಕರ ಹೆಗಡೆ

ಸಹಕಾರಿ ಸಲಹೆಗಾರರು, ತುಮಕೂರು.

80955 95512

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More