ELEVATE ಯೋಜನೆ
ಕರಾವಳಿ ಕರ್ನಾಟಕದ ಇಂಜಿನಿಯರ್‌ಗಳು, ಸಂಶೋಧಕರು ಮತ್ತು ನವೋದ್ಯಮಿಗಳಿಗೆ ಬೆಂಗಳೂರಿನಾಚೆಗೂ ಬೆಳೆಯುವ ಸುವರ್ಣಾವಕಾಶ
ಒಂದು ಹೊಸ ಆಲೋಚನೆ, ಒಂದು ತಾಂತ್ರಿಕ ಆವಿಷ್ಕಾರ, ಒಂದು ಸ್ಟಾರ್ಟ್‌ಅಪ್ ಕನಸು. ಇವೆಲ್ಲವನ್ನೂ ಸಾಕಾರಗೊಳಿಸಲು ಕರ್ನಾಟಕ ಸರ್ಕಾರವೇ ₹50 ಲಕ್ಷದವರೆಗೆ ಅನುದಾನ ನೀಡುತ್ತದೆ ಎಂದರೆ ಯುವಜನರಿಗೆ ಇದಕ್ಕಿಂತ ದೊಡ್ಡ ಪ್ರೋತ್ಸಾಹ ಮತ್ತೇನಿದೆ? ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ELEVATE NxT ಮೂಲಕ ₹1 ಕೋಟಿವರೆಗೆ ನೆರವು ಪಡೆಯುವ ಅವಕಾಶವೂ ಇದೆ. ಕರಾವಳಿ ಕರ್ನಾಟಕದ ಯುವ ಪ್ರತಿಭೆಗಳು ಈ ಅವಕಾಶವನ್ನು ಬಳಸಿಕೊಳ್ಳುವ ಕಾಲ ಬಂದಿದೆ.
ELEVATE ಎಂದರೇನು?
ELEVATE ಎಂಬುದು ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಡಿ ಜಾರಿಯಲ್ಲಿರುವ ಮಹತ್ವದ ಸ್ಟಾರ್ಟ್‌ಅಪ್ ಪ್ರೋತ್ಸಾಹ ಯೋಜನೆ.
2017ರಲ್ಲಿ ಆರಂಭವಾದ ಈ ಕಾರ್ಯಕ್ರಮದ ಉದ್ದೇಶ ಹೊಸ ಆಲೋಚನೆಗಳನ್ನು ತಾಂತ್ರಿಕ ಉತ್ಪನ್ನಗಳಾಗಿ, ಸಂಶೋಧನೆಗಳನ್ನು ವಾಣಿಜ್ಯ ಉದ್ಯಮಗಳಾಗಿ ಪರಿವರ್ತಿಸುವುದಾಗಿದೆ.
ಇದು ಕೇಂದ್ರ ಸರ್ಕಾರದ ಯೋಜನೆಯಲ್ಲ; ಕರ್ನಾಟಕ ಸರ್ಕಾರದ ಸ್ವಂತ ಅನುದಾನ ಕಾರ್ಯಕ್ರಮವಾಗಿದೆ.
ಸಾಮಾನ್ಯ ELEVATE ಯೋಜನೆಯಡಿ ಅರ್ಹ ಸ್ಟಾರ್ಟ್‌ಅಪ್‌ಗಳಿಗೆ ಗರಿಷ್ಠ ₹ 50 ಲಕ್ಷದವರೆಗೆ ಅನುದಾನ ದೊರೆಯುತ್ತದೆ. ಅತ್ಯಾಧುನಿಕ ಸಂಶೋಧನೆ ಮತ್ತು DeepTech ಕ್ಷೇತ್ರದ ಉದ್ಯಮಗಳಿಗೆ ELEVATE NxT ಮೂಲಕ ₹ 1 ಕೋಟಿವರೆಗೆ ಅನುದಾನ ಪಡೆಯುವ ಅವಕಾಶವಿದೆ.
ಇದು ಸಾಮಾನ್ಯ ಬ್ಯಾಂಕ್ ಸಾಲವಲ್ಲ. ಷೇರುಪಾಲು ಬಿಟ್ಟುಕೊಡಬೇಕಾದ ಹೂಡಿಕೆಯೂ ಅಲ್ಲ. ಅನುಮೋದಿತ ಯೋಜನೆ ಮತ್ತು ಸಾಧಿಸಬೇಕಾದ ಹಂತಗಳ ಆಧಾರದ ಮೇಲೆ ಕಂತುಗಳಲ್ಲಿ ಬಿಡುಗಡೆ ಮಾಡುವ Grant-in-Aid ನೆರವಾಗಿದೆ. ಇದರೊಂದಿಗೆ ಮಾರ್ಗದರ್ಶನ, ಇನ್‌ಕ್ಯುಬೇಷನ್ ಮತ್ತು ತಾಂತ್ರಿಕ ಅಭಿವೃದ್ಧಿಗೆ ಸಹಕಾರವೂ ದೊರೆಯುತ್ತದೆ.
ಯಾವ ಕ್ಷೇತ್ರಗಳಿಗೆ ಅನುದಾನ ದೊರೆಯುತ್ತದೆ ?
ELEVATE ಯೋಜನೆಯ ವ್ಯಾಪ್ತಿ ಬಹಳ ವಿಶಾಲವಾಗಿದೆ. ಕೇವಲ ಸಾಫ್ಟ್‌ವೇರ್ ಕಂಪನಿಗಳಿಗೆ ಮಾತ್ರವಲ್ಲದೆ ವಿಜ್ಞಾನ, ಇಂಜಿನಿಯರಿಂಗ್, ಕೈಗಾರಿಕೆ, ಕೃಷಿ ಮತ್ತು ಪರಿಸರ ಕ್ಷೇತ್ರಗಳ ನವೀನ ಆವಿಷ್ಕಾರಗಳಿಗೂ ಅವಕಾಶವಿದೆ.
ಪ್ರಮುಖ ಕ್ಷೇತ್ರಗಳು:
– AI ಮತ್ತು ಡಿಜಿಟಲ್ ತಂತ್ರಜ್ಞಾನ: ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಸಾಫ್ಟ್‌ವೇರ್ ಮತ್ತು ಡೇಟಾ ವಿಶ್ಲೇಷಣೆ.
– Robotics & Automation: ಕೈಗಾರಿಕಾ ಯಂತ್ರಗಳ ಸ್ವಯಂಚಾಲಿತ ನಿರ್ವಹಣೆ, ರೋಬೋಟ್‌ಗಳು ಮತ್ತು ಹೊಸ ಯಂತ್ರೋಪಕರಣಗಳು.
– AgriTech: ಅಡಿಕೆ, ತೆಂಗು, ಗೋಡಂಬಿ ಸಂಸ್ಕರಣಾ ಯಂತ್ರಗಳು ಮತ್ತು ಕೃಷಿ ತಂತ್ರಜ್ಞಾನ.
– Biotechnology & HealthTech: ವೈದ್ಯಕೀಯ ಉಪಕರಣಗಳು, ಔಷಧ ಸಂಶೋಧನೆ ಮತ್ತು ಆರೋಗ್ಯ ಸೇವೆಗಳ ಆವಿಷ್ಕಾರ.
– GreenTech: ಸೌರಶಕ್ತಿ, ವಿದ್ಯುತ್ ವಾಹನಗಳು, ಬ್ಯಾಟರಿ ತಂತ್ರಜ್ಞಾನ ಮತ್ತು ತ್ಯಾಜ್ಯ ನಿರ್ವಹಣೆ.
– Electronics & Semiconductor: ಎಲೆಕ್ಟ್ರಾನಿಕ್ ಉಪಕರಣಗಳು, ಚಿಪ್ ವಿನ್ಯಾಸ ಮತ್ತು ಸೆನ್ಸರ್ ತಂತ್ರಜ್ಞಾನ.
– MarineTech: ಮೀನುಗಾರಿಕಾ ದೋಣಿಗಳ GPS, ಸಮುದ್ರ ಸುರಕ್ಷತೆ, ಮೀನು ಸಂಗ್ರಹಣೆ ಮತ್ತು ಶೀತಲೀಕರಣ ತಂತ್ರಜ್ಞಾನ.
-DeepTech: ಕ್ವಾಂಟಮ್ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಮತ್ತು ಅತ್ಯಾಧುನಿಕ ವೈಜ್ಞಾನಿಕ ಆವಿಷ್ಕಾರಗಳು.
ELEVATEನ ವಿಶೇಷ ವಿಭಾಗಗಳು
ಯುವ ಉದ್ಯಮಿಗಳಿಗೆ ವಿವಿಧ ವರ್ಗಗಳಲ್ಲಿ ಅವಕಾಶ ಕಲ್ಪಿಸಲು ಸರ್ಕಾರ ವಿಶೇಷ ವಿಭಾಗಗಳನ್ನು ರೂಪಿಸಿದೆ.
1. ELEVATE General: ವಿವಿಧ ಕ್ಷೇತ್ರಗಳ ಅರ್ಹ ನವೋದ್ಯಮಗಳಿಗೆ.
2. ELEVATE Aspire: ಬೆಂಗಳೂರು ನಗರ ಜಿಲ್ಲೆಯ ಹೊರಗಿನ ಸ್ಟಾರ್ಟ್‌ಅಪ್‌ಗಳಿಗೆ.
3. ELEVATE Shakti: ಮಹಿಳಾ ನೇತೃತ್ವದ ಉದ್ಯಮಗಳಿಗೆ.
4. ELEVATE Unnati: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ.
5. ELEVATE NxT: ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ DeepTech ಉದ್ಯಮಗಳಿಗೆ.
ಇವುಗಳಲ್ಲಿ ಕರಾವಳಿ ಕರ್ನಾಟಕದ ಯುವಜನತೆಗೆ ವಿಶೇಷವಾಗಿ ಗಮನಾರ್ಹವಾದದ್ದು ELEVATE Aspire, ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅರ್ಹ ಸ್ಟಾರ್ಟ್‌ಅಪ್‌ಗಳು ಬೆಂಗಳೂರಿನಾಚೆಗಿನ ಉದ್ಯಮಗಳಿಗೆ ನೀಡುವ ಈ ಪ್ರೋತ್ಸಾಹದ ಪ್ರಯೋಜನ ಪಡೆಯಬಹುದು.
ಸಿದ್ಧಾರ್ಥ ಪೈ ಯವರ ₹36 ಲಕ್ಷದ ಅನುದಾನ – ಯುವಕರಿಗೆ ಸ್ಫೂರ್ತಿ
ELEVATE ಯೋಜನೆಯ ಮೂಲಕ ₹36 ಲಕ್ಷದ ಅನುದಾನ ಪಡೆದಿರುವ ಸಿದ್ಧಾರ್ಥ ಪೈ ಯವರ ಉದಾಹರಣೆ ಸ್ಥಳೀಯ ಯುವಜನರಿಗೆ ಗಮನಾರ್ಹ ಸಂದೇಶ ನೀಡುತ್ತದೆ.
ಹೊಸ ಆಲೋಚನೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಸೂಕ್ತ ಯೋಜನೆಯಾಗಿ ರೂಪಿಸಿದರೆ ಸರ್ಕಾರದ ಅನುದಾನ ಪಡೆಯಲು ಸಾಧ್ಯ ಎಂಬುದಕ್ಕೆ ಇದು ಪ್ರೇರಣೆಯಾಗಬಹುದು.
ಒಂದು ಆವಿಷ್ಕಾರವನ್ನು ಉದ್ಯಮವಾಗಿ ರೂಪಿಸಲು ದೊಡ್ಡ ಬಂಡವಾಳವೇ ಇರಬೇಕೆಂದಿಲ್ಲ. ಸೂಕ್ತ ಯೋಜನೆ, ತಾಂತ್ರಿಕ ನವೀನತೆ, ಕಾರ್ಯಸಾಧ್ಯತೆ ಮತ್ತು ಸಮರ್ಥ ತಂಡ ಇದ್ದರೆ ಸರ್ಕಾರದ ಬೆಂಬಲ ಪಡೆಯುವ ದಾರಿಗಳಿವೆ.
ಇಂತಹ ಯಶೋಗಾಥೆಗಳು ನಮ್ಮ ಕರಾವಳಿಯ ಯುವಕರಲ್ಲಿ ಉದ್ಯಮಶೀಲತೆಯ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿದೆ.
ಕರಾವಳಿ ಕರ್ನಾಟಕದ ಯುವಜನತೆಗೆ ಏನು ಅವಕಾಶ?
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಶಿಕ್ಷಣ, ಇಂಜಿನಿಯರಿಂಗ್, ಕೃಷಿ, ಮೀನುಗಾರಿಕೆ, ಆಹಾರ ಸಂಸ್ಕರಣೆ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಅಪಾರ ಸಾಮರ್ಥ್ಯ ಹೊಂದಿವೆ. ನಮ್ಮಲ್ಲಿ ಸಾವಿರಾರು ಇಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ ತಂತ್ರಜ್ಞರು ಮತ್ತು ಐಟಿಐ ತರಬೇತಿ ಪಡೆದ ಯುವಕರಿದ್ದಾರೆ.
ಆದರೆ ಹೆಚ್ಚಿನವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಅಥವಾ ಇತರ ನಗರಗಳಿಗೆ ತೆರಳುತ್ತಿದ್ದಾರೆ. ಇದೇ ಪ್ರತಿಭೆಯನ್ನು ನಮ್ಮ ಕರಾವಳಿಯಲ್ಲಿಯೇ ಉದ್ಯಮ ಸೃಷ್ಟಿಗೆ ಬಳಸಿಕೊಳ್ಳುವ ಅಗತ್ಯವಿದೆ.
ಉದಾಹರಣೆಗೆ:
– ಅಡಿಕೆ ಸುಲಿಯುವ ಮತ್ತು ಸಂಸ್ಕರಿಸುವ ಆಧುನಿಕ ಯಂತ್ರಗಳ ಅಭಿವೃದ್ಧಿ.
– ಮೀನುಗಾರಿಕಾ ದೋಣಿಗಳಿಗೆ GPS ಮತ್ತು ಸಮುದ್ರ ಸುರಕ್ಷತಾ ಉಪಕರಣಗಳು.
– ತೆಂಗು ಮತ್ತು ಗೋಡಂಬಿ ಸಂಸ್ಕರಣೆಗೆ ಸ್ವಯಂಚಾಲಿತ ಯಂತ್ರಗಳು.
– ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಕಡಿಮೆ ವೆಚ್ಚದ ಹೊಸ ತಂತ್ರಜ್ಞಾನ.
– ಸೌರಶಕ್ತಿ ಆಧಾರಿತ ಕೃಷಿ ಮತ್ತು ಕೈಗಾರಿಕಾ ಉಪಕರಣಗಳು.
– ಗ್ರಾಮೀಣ ಆರೋಗ್ಯ ಸೇವೆಗೆ ಡಿಜಿಟಲ್ ತಂತ್ರಜ್ಞಾನ.
– ಮಳೆನೀರು ಸಂಗ್ರಹಣೆ ಮತ್ತು ಪ್ರವಾಹ ಮುನ್ಸೂಚನಾ ವ್ಯವಸ್ಥೆಗಳು.
ಇಂತಹ ಆವಿಷ್ಕಾರಗಳು ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ನೀಡುವುದರ ಜೊತೆಗೆ ಹೊಸ ಉದ್ಯೋಗಗಳನ್ನೂ ಸೃಷ್ಟಿಸಬಲ್ಲವು.
ಅನುದಾನ ಪಡೆಯಲು ಯುವಕರು ಏನು ಮಾಡಬೇಕು?
ಮೊದಲಿಗೆ ತಮ್ಮ ಆಲೋಚನೆಯನ್ನು ಗುರುತಿಸಿ, ಅದರ ಕಾರ್ಯನಿರ್ವಹಣಾ ಮಾದರಿಯನ್ನು ( Prototype) ಸಿದ್ಧಪಡಿಸಬೇಕು. ನಂತರ ಅರ್ಹ ಕಂಪನಿ ಅಥವಾ ಸ್ಟಾರ್ಟ್‌ಅಪ್ ನೋಂದಣಿ, ಅಗತ್ಯವಿರುವ DPIIT ಮಾನ್ಯತೆ, ಯೋಜನಾ ವರದಿ, ಮಾರುಕಟ್ಟೆ ಅಧ್ಯಯನ ಮತ್ತು ವೆಚ್ಚದ ವಿವರಗಳನ್ನು ಸಿದ್ಧಪಡಿಸಬೇಕು.
ಸೂಕ್ತ ಇನ್‌ಕ್ಯುಬೇಷನ್ ಕೇಂದ್ರಗಳ ಮಾರ್ಗದರ್ಶನ ಪಡೆದು ಅಧಿಕೃತ ELEVATE ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ತಾಂತ್ರಿಕ ನವೀನತೆ, ವ್ಯವಹಾರ ಮಾದರಿ, ಸಾಮಾಜಿಕ ಪರಿಣಾಮ, ತಂಡದ ಸಾಮರ್ಥ್ಯ ಮತ್ತು ಹಣಕಾಸಿನ ಯೋಜನೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಅಧಿಕೃತ ವೆಬ್‌ಸೈಟ್: https://elevate.startupkarnataka.in/public/
ಕರಾವಳಿಯಲ್ಲಿ ನವೋದ್ಯಮ ಕ್ರಾಂತಿಗೆ ಸಂಘಟಿತ ಪ್ರಯತ್ನ ಅಗತ್ಯ
ಮಂಗಳೂರು, ಉಡುಪಿ, ಕಾರ್ಕಳ, ಕುಂದಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್ ಕೇಂದ್ರಗಳನ್ನು ಬಲಪಡಿಸಬೇಕು. ಇಂಜಿನಿಯರಿಂಗ್ ಕಾಲೇಜುಗಳು, ಕೈಗಾರಿಕಾ ಸಂಘಟನೆಗಳು, ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು ಮತ್ತು ಉದ್ಯಮಿಗಳು ಒಟ್ಟಾಗಿ ಯುವಕರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಬೇಕು.
NITK ಸುರತ್ಕಲ್, ಮಣಿಪಾಲದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ನಿಟ್ಟೆಯಂತಹ ಶೈಕ್ಷಣಿಕ ಕೇಂದ್ರಗಳ ಸಂಶೋಧನಾ ಸಾಮರ್ಥ್ಯವನ್ನು ಸ್ಥಳೀಯ ಕೈಗಾರಿಕೆಗಳೊಂದಿಗೆ ಜೋಡಿಸಬೇಕು.
ಸರ್ಕಾರದ ELEVATE Aspire ಕಾರ್ಯಕ್ರಮವನ್ನು ಬಳಸಿಕೊಂಡು ಕರಾವಳಿ ಕರ್ನಾಟಕವನ್ನು ಬೆಂಗಳೂರಿನಾಚೆಗಿನ ಪ್ರಮುಖ ನವೋದ್ಯಮ ಕೇಂದ್ರವನ್ನಾಗಿ ರೂಪಿಸುವ ಪ್ರಯತ್ನವಾಗಬೇಕು.
ಉದ್ಯೋಗ ಹುಡುಕುವವರಲ್ಲ, ಉದ್ಯೋಗ ಸೃಷ್ಟಿಸುವವರಾಗಿ ಬೆಳೆಯೋಣ!
ನಮ್ಮ ಯುವಕರಲ್ಲಿ ಪ್ರತಿಭೆಯಿದೆ, ತಾಂತ್ರಿಕ ಜ್ಞಾನವಿದೆ, ಹೊಸದನ್ನು ಸಾಧಿಸುವ ಹಂಬಲವಿದೆ. ಅವರಿಗೆ ಬೇಕಾಗಿರುವುದು ಸರಿಯಾದ ಮಾರ್ಗದರ್ಶನ ಮತ್ತು ಆರಂಭಿಕ ಆರ್ಥಿಕ ಬೆಂಬಲ.
ಒಂದು ಸಣ್ಣ ಆವಿಷ್ಕಾರ ನಾಳೆ ದೊಡ್ಡ ಕೈಗಾರಿಕೆಯಾಗಬಹುದು. ಒಬ್ಬ ಯುವ ಉದ್ಯಮಿ ನೂರಾರು ಮಂದಿಗೆ ಉದ್ಯೋಗ ನೀಡಬಹುದು. ನಮ್ಮ ಕರಾವಳಿ ಕೇವಲ ಪ್ರವಾಸೋದ್ಯಮ ಮತ್ತು ವ್ಯಾಪಾರದ ಕೇಂದ್ರವಾಗದೆ, ತಂತ್ರಜ್ಞಾನ, ಸಂಶೋಧನೆ ಮತ್ತು ನವೋದ್ಯಮಗಳ ಕೇಂದ್ರವಾಗಬೇಕು.
ELEVATE ಯೋಜನೆ ಈ ದಿಕ್ಕಿನಲ್ಲಿ ದೊರೆತಿರುವ ಮಹತ್ವದ ಅವಕಾಶ. ಇದನ್ನು ಕೇವಲ ಸರ್ಕಾರದ ಒಂದು ಅನುದಾನ ಯೋಜನೆಯಾಗಿ ನೋಡದೆ, ಕರಾವಳಿ ಕರ್ನಾಟಕದ ಯುವಜನತೆಯ ಆರ್ಥಿಕ ಭವಿಷ್ಯವನ್ನು ರೂಪಿಸುವ ವೇದಿಕೆಯಾಗಿ ಪರಿಗಣಿಸಬೇಕಾಗಿದೆ.
ಪ್ರತಿಭೆ ನಮ್ಮಲ್ಲಿದೆ, ಆಲೋಚನೆ ನಮ್ಮಲ್ಲಿದೆ, ಅವಕಾಶವೂ ನಮ್ಮ ಬಾಗಿಲಲ್ಲಿದೆ. ಈಗ ಬೇಕಾಗಿರುವುದು ಅದನ್ನು ಬಳಸಿಕೊಳ್ಳುವ ಯುವಸಂಕಲ್ಪ!

✍️ ಸಾಣೂರು ನರಸಿಂಹ ಕಾಮತ್
ಸಾಮಾಜಿಕ ಚಿಂತಕರು ಮತ್ತು ವಿಶ್ಲೇಷಕರು