ಡಬಲ್ ರೂಪಾಂತರಿ ಕೊರೊನಾವೈರಸ್ ಎಬ್ಬಿಸಿರುವ ಎರಡನೇ ಅಲೆ?

2019 ಡಿಸೆಂಬರ್ ತಿಂಗಳು ಚೀನಾದಲ್ಲಿ ಮೊದಲು ಪತ್ತೆಯಾದ ಹೊಸ ತಳಿಯ   ಕೊರೊನಾವೈರಸ್  (SARS-CoV-2) ಆರಂಭದಲ್ಲಿ ಆ ದೇಶದ ಕೆಲವು ಪ್ರಾಂತ್ಯಗಳಲ್ಲಿ ಮಾತ್ರ ಅನಾಹುತವನ್ನು ಸೃಷ್ಟಿಸಿದರೆ   ತದನಂತರ ಭಾರತವು ಸೇರಿದಂತೆ ಜಗತ್ತಿನಾದ್ಯಂತ ವ್ಯಾಪಿಸಿ  ಭೀಕರ  ಸಾವು ನೋವಿನ ಅಲೆಯನ್ನು ಎಬ್ಬಿಸಿತು.  ಸಾಮಾಜಿಕ ಅಂತರ, ಸಾನಿಟೈಸರ್ ಬಳಕೆ, ಫೇಸ್ ಮಾಸ್ಕ್ ಧರಿಸಿವುದು,  ಜನತಾ ಕರ್ಫ್ಯೂ,  ಲಾಕ್ಡೌನ್, ಸಭೆ, ಸಮಾರಂಭ, ಜಾತ್ರೆ,   ಜನಸಮೂಹಕ್ಕೆ ನಿರ್ಬಂಧ,   ಮುಂತಾದ ಕ್ರಮಗಳಿಂದ  ಕೋವಿಡ್-19 ಭೀಕರತೆಗೆ ಒಂದು ಮಟ್ಟಿಗೆ ಕಡಿವಾಣ ಹಾಕಿ ಜನಜೀವನ,  ಆರ್ಥಿಕತೆ  ಮರಳಿ  ಹಳಿಗೆ ಬರುತ್ತಿದೆ ಅನ್ನುವಾಗಲೇ ರೂಪಾಂತರಿ ಕೊರೊನಾವೈರಸ್ ಎರಡನೇ  ಅಲೆ   ಹೆಸರಿನಲ್ಲಿ ಇನ್ನಷ್ಟು ವೇಗ ಮತ್ತು ತೀರ್ವವಾಗಿ  ದುಷ್ಪರಿಣಾಮ ಬೀರುತ್ತಿದೆ.

ಕಳೆದ ಬಾರಿ ಕೋವಿಡ್-19 ಸ್ಫೋಟಗೊಂಡಾಗ ವಿಶ್ವದಾದ್ಯಂತ ಎಲ್ಲರ ವಕ್ರ ದೃಷ್ಟಿ  ಚೀನಾದ* ಮೇಲೆ ಇತ್ತು.  ಈ ಬಾರಿ ಜಗತ್ತಿನ ದೃಷ್ಟಿ ನಮ್ಮ ದೇಶದ ಮೇಲೆ, ಆದರೆ  ವಕ್ರ ದೃಷ್ಟಿಯಲ್ಲ ಮಾನವೀಯತೆಯ  ಸಹನಾಭೂತಿ;   ಈಗಾಗಲೇ ಭಾರತಕ್ಕೆ ನೆರವಾಗಲು  ನಲವತ್ತು ದೇಶಗಳು  ಸಹಾಯಹಸ್ತವನ್ನು ಚಾಚಿವೆ. ಕಾರಣ, ಈಗ ಕೋವಿಡ್-19 ಎರಡನೇ ಅಲೆ  ಸುನಾಮಿಯಂತೆ  ಅಪ್ಪಳಿಸಿರುವುದು ಭಾರತದಲ್ಲಿ. ಹಾಗೂ ಇದಕ್ಕೆ  ಕಾರಣವಾಗಿರುವ ಡಬಲ್ ರೂಪಾಂತರಿ   ಕೊರೊನಾವೈರಸ್  ಮೊದಲು ಪತ್ತೆಯಾಗಿರುವುದೂ  ಭಾರತದಲ್ಲಿ.  ಮಹಾರಾಷ್ಟ್ರದಲ್ಲಿ ಅಕ್ಟೋಬರ್ 2020 ರಲ್ಲಿ ಕೋವಿಡ್-19  ಪೀಡಿತ ರೋಗಿಗಳಿಂದ ಪಡೆದ    ಸ್ಯಾಂಪಲ್ ಗಳನ್ನು  ಪರೀಕ್ಷೆಗೆ ಒಳಪಡಿಸಿದಾಗ (ಜೀನೋಮ್ ಸೀಕ್ವೆನ್ಸಿಂಗ್ )    61% ಮಾದರಿಗಳಲ್ಲಿ ‘ಡಬಲ್ ರೂಪಾಂತರಿ’ ಕೊರೊನಾವೈರಸ್ ಇರುವಿಕೆಯನ್ನು  ಪತ್ತೆಹಚ್ಚಲಾಯಿತು. ಇದನ್ನು ಡಿಸೆಂಬರ್ 1, 2020 ರಂದು  ದೃಢಪಡಿಸಲಾಯಿತು. ‘L452R’ ಮತ್ತು ‘E484Q’  ಎಂಬ    ಎರಡು ರೂಪಾಂತರಗಳನ್ನು ಹೊಂದಿರುವ  ‘ಡಬಲ್ ರೂಪಾಂತರಿ’  (Double variant) ಕೊರೊನಾವೈರಸ್ ಗೆ ನೀಡಿದ ಹೆಸರು  ಬಿ.1.617  SARS-CoV-2.

ಚೀನಾ ಮೂಲದಿಂದ ಬಂದಂತಹ ಹೊಸ ತಳಿಯ ಕೊರೊನಾವೈರಸ್ (SARS-CoV-2ರೂಪಾಂತರಗೊಂಡಿದ್ದು ಹೇಗೆ?  

ಮೊದಲು ರೂಪಾಂತರ ಅಂದರೆ ಏನು ಅನ್ನುವುದನ್ನು ತಿಳಿಯೋಣ.  ಮ್ಯುಟೇಷನ್ (Mutation) ಪದ ಕೇಳಿರಬಹುದು;  ಸರಳವಾಗಿ ಹೇಳುವುದಿದ್ದರೆ,  ಇದು ತಳಿ ಮಾಹಿತಿಯಲ್ಲಿ  ಆಗುವ ಬದಲಾವಣೆ.  ನಾವು ಸೇರಿ ಪ್ರತಿಯೊಂದು ಜೀವಿ ಏನು ಅನ್ನುವ ಮಾಹಿತಿ ಡಿಎನ್ಎ ಯಲ್ಲಿ    ಇರುತ್ತದೆ; ಅದನ್ನೇ ತಳಿ / ಆನುವಂಶಿಕ ಮಾಹಿತಿ (Genetic information) / ವಂಶವಾಹಿಗಳು (Genes) ಅನ್ನುವುದು.  ಅದೇ ರೀತಿ   ಕೊರೊನಾವೈರಸ್  ರಚನೆ, ಜೀವನಚಕ್ರದ ಮಾಹಿತಿ ಅದರ ಆರ್.ಎನ್.ಎ  (RNA) ಯಲ್ಲಿ ಇರುತ್ತದೆ.   ಡಿಎನ್ಎ / ಆರ್.ಎನ್.ಎ  (DNA/RNA) ಯಲ್ಲಿ ಬದಲಾವಣೆಯಾದರೆ ಅದನ್ನು ಮ್ಯುಟೇಷನ್ ಎನ್ನಲಾಗುತ್ತದೆ. ತಳಿ ಮಾಹಿತಿಯಲ್ಲಿ  ಉಂಟಾದ  ಬದಲಾವಣೆ   ಪ್ರೋಟೀನ್ ಗಳಲ್ಲಿ   ಪ್ರಕಟಗೊಳ್ಳುತ್ತದೆ. ಏಕೆಂದರೆ,  ಜೀವಿಗಳ ರಚನೆ ಮತ್ತು  ಕೆಲಸಕಾರ್ಯಗಳನ್ನು ನಿರ್ವಹಿಸಲು ಯಾವ ಯಾವ ಪ್ರೋಟೀನ್ ಗಳು  ಬೇಕು ಅನ್ನುವ ಮಾಹಿತಿ ಡಿಎನ್ಎ  / ಆರ್.ಎನ್.ಎ  ಯಲ್ಲಿ ಇರುತ್ತದೆ. ಪ್ರೋಟೀನ್ ಗಳು  ಅಲನೈನ್  (A),   ಅರ್ಜಿನೈನ್  (R),  ಆಸ್ಪ್ಯಾರಜಿನ್ (N),  ಆಸ್ಪರ್ಟಿಕ್ ಆಮ್ಲ  (D),  ಸಿಸ್ಟೀನ್ (C),  ಗ್ಲುಟಾಮಿನ್ (Q),    ಗ್ಲುಟಾಮಿಕ್ ಆಮ್ಲ  (E), ಗ್ಲೈಸಿನ್  (G), ಹಿಸ್ಟಿಡಿನ್   (H),   ಐಸೊಲ್ಯೂಸಿನ್  (I), ಲ್ಯುಸಿನ್ (L),     ಲೈಸಿನ್ (K),  ಮೆಥಿಯೋನಿನ್  (M),   ಫೆನೈಲಾಲನೈನ್  (F),   ಪ್ರೋಲೈನ್ (P),   ಸೆರೈನ್ (S),   ಥ್ರೆಯೋನೈನ್  (T),    ಟ್ರಿಪ್ಟೊಫಾನ್  (T),  ಟೈರೋಸಿನ್  (W),    ವ್ಯಾಲಿನ್ (V)  ಎಂಬ  20 ಬಗೆಯ ಅಮೈನೊ ಆಮ್ಲ (Amino acids) ಗಳಿಂದ ನಿರ್ಮಿತವಾಗಿರುತ್ತವೆ (ಬ್ರಾಕೆಟ್ನಲ್ಲಿರುವ ಇಂಗ್ಲಿಷ್ ವರ್ಣಮಾಲೆಗಳು ಪ್ರತಿ ಅಮೈನೊ ಆಮ್ಲಕ್ಕೆ ನೀಡಲಾದ ಸಂಕೇತ).

ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಒಂದು  ಮನೆ ನಿರ್ಮಾಣವನ್ನು ಕಲ್ಪಿಸಿಕೊಳ್ಳೋಣ. ಇಟ್ಟಿಗೆಗಳನ್ನು ಸರಿಯಾದ ಕ್ರಮದಲ್ಲಿ   ಜೋಡಿಸಿ ಮನೆಯನ್ನು ನಿರ್ಮಿಸುವಂತೆ, ಮೂರು ಆಯಾಮದ ರಚನೆ ಇರುವ  ಪ್ರೋಟೀನ್ ಗಳನ್ನು  ರೂಪುಗೊಳ್ಳಲು  ಅಮೈನೋ ಆಮ್ಲಗಳು  ಸರಿಯಾದ ಕ್ರಮದಲ್ಲಿ ಜೋಡಣೆಯಾಗುತ್ತವೆ.  ಇಟ್ಟಿಗೆಗಳನ್ನು ಯಾವ  ಅನುಕ್ರಮದಲ್ಲಿ   ಜೋಡಿಸಬೇಕೆನ್ನುವ  ನೀಲನಕ್ಷೆ ವಾಸ್ತುಶಿಲ್ಪದ ರೇಖಾಚಿತ್ರದಲ್ಲಿರುತ್ತದೆ.  ಅಂತೆಯೇ, ಡಿಎನ್ಎ / ಆರ್.ಎನ್.ಎ  ಯಲ್ಲಿರುವ ವಂಶವಾಹಿಗಳು  ಯಾವ ರೀತಿಯ ಪ್ರೋಟೀನ್  ಗಳನ್ನು ರೂಪಿಸಬೇಕು ಎಂಬುದರ ನೀಲನಕ್ಷೆಯಾಗಿ ಕಾರ್ಯನಿರ್ವಹಿಸಿದರೆ, ಪ್ರೋಟೀನ್  ರಚನೆಗೆ ಅಮೈನೋ ಆಮ್ಲಗಳು ಬಿಲ್ಡಿಂಗ್ ಬ್ಲಾಕ್ ಗಳಾಗಿ ಕಾರ್ಯನಿರ್ವಹಿಸುತ್ತವೆ.   ಡಿಎನ್ಎ  ಅಥವಾ ಆರ್.ಎನ್.ಎಯಲ್ಲಿರುವ   ನ್ಯೂಕ್ಲಿಯೋಟೈಡ್ ಗಳ  ಅನುಕ್ರಮವು ಪ್ರೊಟೀನ್ ಲ್ಲಿರುವ  ಅಮೈನೊ ಆಸಿಡ್ ಅನುಕ್ರಮವನ್ನು ನಿರ್ಧರಿಸುತ್ತದೆ.

ಕೊರೊನಾವೈರಸ್ ಹೊರಮೈಯಲ್ಲಿರುವ  ಗದೆ  ಆಕಾರದ  ಸ್ಪೈಕ್ ಕೂಡ ಒಂದು ಪ್ರೋಟೀನ್ (ಸ್ಪೈಕ್ ಪ್ರೋಟೀನ್ ವೈರಸ್ ಮಾನವ ಜೀವಕೋಶಗಳಿಗೆ ನುಗ್ಗಲು ಬಳಸುವ ‌ ಒಂದು ಭಾಗ*). ಇದು ಒಟ್ಟು  1255 ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. ಈ ಸ್ಪೈಕ್ ಪ್ರೋಟೀನ್ ನಲ್ಲಿರುವ ಅಮೈನೋ  ಆಮ್ಲಗಳಲ್ಲಿ  ವ್ಯತ್ಯಾಸವಾದರೆ   ಅಂದರೆ ಒಂದು ನಿರ್ದಿಷ್ಟ ಸ್ಥಾನದಲ್ಲಿರುವ ಅಮೈನೋ ಆಮ್ಲದಿಂದ ಇನ್ನೊಂದು ಅಮೈನೋ ಆಮ್ಲ  ಬದಲಿಯಾದರೆ    ಪ್ರೊಟೀನ್ ರಚನೆಯಲ್ಲಿ ಸಣ್ಣ ಬದಲಾವಣೆಯಾಗಬಹುದು.  ಆ ಬದಲಾವಣೆ ಅಪಾಯಕಾರಿಯೂ ಆಗಿರಬಹುದು.  ಈಗ   ರೂಪಾಂತರಿ ಕೊರೊನಾವೈರಸ್ ನಲ್ಲಿ ಆಗಿರುವುದು ಅದೇ.

ವೇರಿಯಂಟ್ L452R:  ಸ್ಪೈಕ್ ಪ್ರೋಟೀನ್  452 ನೇ ಸ್ಥಾನದಲ್ಲಿ  ಲ್ಯುಸಿನ್ (L)  ಬದಲು   ಅರ್ಜಿನೈನ್ (R) ಸೇರಿಕೊಂಡಿದೆ; ಹಾಗಾಗಿ ಈ ರೂಪಾಂತರದ (ವೇರಿಯಂಟ್)   ಹೆಸರು L452R.  ಸ್ಪೈಕ್ ಪ್ರೊಟೀನ್ ಲ್ಲಿ  ಆದಂತಹ ಈ  ಬದಲಾವಣೆಯು ಕೊರೊನಾವೈರಸ್  ಅತಿಥೆಯ (Host) (ಮಾನವನ) ಜೀವಕೋಶದೊಳಗೆ ಇನ್ನಷ್ಟೂ  ಪ್ರಬಲವಾಗಿ ಅಂಟಿಕೊಳ್ಳುವಂತೆ ಮಾಡಿದೆ. ವಾಸ್ತವವಾಗಿ,  L425R ಹೊಂದಿರುವ   ರೂಪಾಂತರಿ  ಕೊರೊನಾವೈರಸ್   ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಮೊದಲ ಬಾರಿಗೆ  ಪತ್ತೆಯಾಗಿದ್ದು ಅದು ತನ್ನ  ಸ್ಪೈಕ್ ಪ್ರೋಟೀನ್ಗಳ ಮೂಲಕ ಇನ್ನೂ  ಬಿಗಿಯಾಗಿ ಅಂಟಿಕೊಳ್ಳುವ ಶಕ್ತಿಯನ್ನು ಹೊಂದಿರುವುದು ಮಾತ್ರವಲ್ಲ ಈ ಹಿಂದಿನ ಹೊಸ ತಳಿಯ ಕೊರೊನಾವೈರಸ್ (SARS-CoV-2) ಗಿಂತ ಇನ್ನು ಹೆಚ್ಚು ವೇಗವಾಗಿ ವೃದ್ಧಿಗೊಳ್ಳುವ  ಹಾಗೂ   ಸುಮಾರು 20% ರಷ್ಟು ಪ್ರಸರಣವನ್ನು  ಹೆಚ್ಚಿಸುವ ಸಾಮರ್ಥ್ಯ ಪಡೆದಿದೆ  ಮತ್ತು ಪ್ರತಿಕಾಯದ ಪರಿಣಾಮಕಾರಿತ್ವವನ್ನು 50% ಕ್ಕಿಂತ ಕಡಿಮೆ ಮಾಡುತ್ತದೆ ಎಂದು  ವಿಜ್ಞಾನಿಗಳು  ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ವೇರಿಯಂಟ್ E484Q:  ಇದೂ  ಕೂಡ ಸ್ಪೈಕ್ ಪ್ರೋಟೀನ್ ನಲ್ಲಿ  ಆದಂತಹ ಬದಲಾವಣೆ; 484 ನೇ ಸ್ಥಾನದಲ್ಲಿ ಗ್ಲುಟಾಮಿಕ್ ಆಮ್ಲದ  ಬದಲು  (E)  ಗ್ಲುಟಾಮಿನ್ (Q)  ಸೇರಿಕೊಂಡಿದೆ.  ಇದು ಈ ಮೊದಲು  ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದ ಲ್ಲಿ ಕಂಡುಬಂದಿದ್ದ   E484K ರೂಪಾಂತರಕ್ಕೆ ಹೋಲುತ್ತದೆ ಎಂಬುವುದನ್ನು ಕಂಡುಕೊಳ್ಳಲಾಗಿದೆ.    ಇದು ಕೂಡ  ಸ್ಪೈಕ್ ಪ್ರೋಟೀನ್‌  ಜೀವಕೋಶದ  ಎಸಿಇ 2 ರಿಸೆಪ್ಟರ್* ಅಂಟಿಕೊಳ್ಳುವ  ಸಾಮರ್ಥ್ಯವನ್ನು ಹೆಚ್ಚಿಸಿದೆ ಮತ್ತು ಈಗಾಗಲೇ ಮೂಲ ಕೊರೊನಾವೈರಸ್  (SARS-CoV-2) ವಿರುದ್ಧ ದೇಹದಲ್ಲಿ ಉತ್ಪತ್ತಿಯಾದ      ಪ್ರತಿಕಾಯ (Antibodies) ಗಳಿಂದ  ನುಣುಚಿಕೊಳ್ಳುವ  ಸಾಮರ್ಥ್ಯವನ್ನು ಹೊಂದಿದೆ   ಎಂದು ತಿಳಿದುಬಂದಿದೆ.

ಈ ಎರಡು ಬಗೆಯ ರೂಪಾಂತರಿ ಕೊರೊನಾವೈರಸ್ ಪ್ರತ್ಯೇಕವಾಗಿ ಬೇರೆ ಬೇರೆ ದೇಶಗಳಲ್ಲಿ ಗುರುತಿಸಲಾಗಿದ್ದರೂ,  ಆ ಎರಡು ಮ್ಯುಟೇಷನ್ ಒಂದರಲ್ಲೇ ಇರುವ  ಕೊರೊನಾವೈರಸ್ ಮೊದಲು ಪತ್ತೆಯಾಗಿರುವುದು ಭಾರತದಲ್ಲಿ.  ಹಾಗಾಗಿ,  ಈಗ ಜಗತ್ತಿನ ಗಮನ ಸೆಳೆದಿರುವ ಭಾರತದಲ್ಲಿ  ಸುನಾಮಿಯಂತೆ   ಎರಡನೇ ಅಲೆ  ಎಬ್ಬಿಸಲು ಕಾರಣವಾಗಿರಬಹುದಾದ ಕೊರೊನಾವೈರಸ್ ನ್ನು  ‘ಡಬಲ್ ಮ್ಯುಟೆಂಟ್’  / ಡಬಲ್ ರೂಪಾಂತರಿ  (ಬಿ.1.617  SARS-CoV-2 :  L452R ಮತ್ತು E484Q )     ಎಂಬ ಹೆಸರು ನೀಡಲಾಗಿದೆ (ಬಿ.1.617′ ಕೊರೊನಾ ವೈರಾಣುವಿನ ವಂಶಾವಳಿಯನ್ನು ಸೂಚಿಸುತ್ತದೆ).

ಭಾರತದಲ್ಲಿ ಪತ್ತೆಹಚ್ಚಿದ ನಂತರ  ಈ ಡಬಲ್ ರೂಪಾಂತರಿ ಈಗಾಗಲೇ  ಯು.ಕೆ., ಯು.ಎಸ್., ಇಸ್ರೇಲ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜರ್ಮನಿ,  ಸೇರಿದಂತೆ 17 ದೇಶಗಳಲ್ಲಿಯೂ ಪತ್ತೆ ಹಚ್ಚಲಾಗಿದೆ.  ಈ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತವನ್ನು ತಪ್ಪಿಸಲು ಈಗಾಗಲೇ  ಈ ಎಲ್ಲ ದೇಶಗಳು ಭಾರತದ ಪ್ರಯಾಣಿಕರ ವಿಮಾನಯಾವನ್ನು ಸಧ್ಯದ ಮಟ್ಟಿಗೆ ನಿರ್ಬಂಧಿಸಿವೆ.

ಏಕ ರೂಪಾಂತರಿಯು  ಉಂಟುಮಾಡುವ ಪರಿಣಾಮಗಳ ಬಗ್ಗೆ ಈಗಾಗಲೇ ತಿಳಿದಿದ್ದರೂ   ಡಬಲ್ ರೂಪಾಂತರಿ   ಕೊರೊನಾವೈರಸ್  ಹೇಗೆ ಹೋಸ್ಟ್ (ಮಾನವನ) ಮೇಲೆ ಪರಿಣಾಮ ಬೀರುತ್ತದೆ ಎಂಬುವುದನ್ನು  ಇನ್ನಷ್ಟೇ  ಅರ್ಥಮಾಡಿಕೊಳ್ಳಬೇಕಿದೆ. ಇದರ ಬಗ್ಗೆ ಅಧ್ಯಯನಗಳು ಈಗ ಪ್ರಗತಿಯಲ್ಲಿವೆ. ಇದಲ್ಲದೆ,  COVID-19 ಸಾಂಕ್ರಾಮಿಕದ ಎರಡನೇ ಅಲೆಗೆ  ಈ ಡಬಲ್ ರೂಪಾಂತರಿಯೇ  ಕಾರಣವೆಂದು 100% ಖಚಿತವಾಗಿಲ್ಲ. ಮೊದಲ ಅಲೆಗೆ  ಹೋಲಿಸಿದರೆ ಎರಡನೇ ಅಲೆಯ  ಕೋವಿಡ್-19 ತುಂಬಾ  ಆಕ್ರಮಣಕಾರಿ ಇರುವುದನ್ನು ಪರಿಗಣಿಸಿ,  ಇದಕ್ಕೆ ಕಾರಣ  ಡಬಲ್ ರೂಪಾಂತರಿ   ಎಂದು  ಊಹಿಸಲಾಗಿದೆ.      ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳು ಅದನ್ನು ಇನ್ನೂ  ದೃಢಪಡಿಸಬೇಕಿದೆ.

ತನಿಖೆಯಲ್ಲಿರುವ ರೂಪಾಂತರಿ

ಮ್ಯುಟೇಷನ್ / ರೂಪಾಂತರವು ಸ್ವಯಂಪ್ರೇರಿತವಾಗಿ  ಆಗುವ  ಒಂದು  ನೈಸರ್ಗಿಕ ವಿದ್ಯಮಾನ; ಜೀವಿಗಳ ವಿಕಾಸದಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.  ಹೋಸ್ಟ್  ಜೀವಕೋಶಗಳಲ್ಲಿ  ಅತಿ ವೇಗವಾಗಿ ವೈರಸ್ ಗಳು ವೃದ್ಧಿಯಾಗುವುದರಿಂದ  ಅವುಗಳು ಸಾರ್ವಕಾಲಿಕವಾಗಿ ವಿಕಾಸಗೊಳ್ಳುತ್ತಾ ಹೋಗುತ್ತವೆ. COVID-19 ಸಾಂಕ್ರಾಮಿಕಕ್ಕೆ ಕಾರಣವಾದ ಕೊರೊನಾವೈರಸ್  ಮತ್ತು ಇತರ ಇನ್ಫ್ಲುಯೆಂಜ ವೈರಸ್‌ಗಳ ಜೀನೋಮಿಕ್ ಡೇಟಾವನ್ನು ಸಂಗ್ರಹಿಸಿಸಲು  ಮತ್ತು ಹೆಚ್ಚಿನ ಅಧ್ಯಯನಕ್ಕೆ ಮುಕ್ತ   ಪ್ರವೇಶವನ್ನು ಒದಗಿಸಲು  ‘GISAID’ ಎಂಬ ಆನ್ಲೈನ್ ಡೇಟಾಬೇಸ್ ಅನ್ನು  ತೆರೆಯಲಾಗಿದೆ. ಇದರಲ್ಲಿ ಜಗತ್ತಿನಾದ್ಯಂತ ಸೃಷ್ಟಿಯಾಗುವ ರೂಪಾಂತರಿ ಕೊರೊನಾವೈರಸ್  ಜಿನೋಮ್ ಸೀಕ್ವೆನ್ಸ್ ನ್ನು  ಸಂಗ್ರಹಿಸಲಾಗುತ್ತಿದೆ. ಹೊಸ ತಳಿಯ  ಕೊರೊನಾವೈರಸ್ (SARS-CoV-19) ಆರ್.ಎನ್.ಎ. ಅನುಕ್ರಮವನ್ನು  ಜೀರೋ  ಸೀಕ್ವೆನ್ಸ್ (Zero sequence / Reference sequence) ಆಗಿ ಇಟ್ಟುಕೊಂಡು ಹೊಸ ರೂಪಾಂತರಿಗಳನ್ನು ಪತ್ತೆಹಚ್ಚಲಾಗುತ್ತಿದೆ.    ಜೀನೋಮ್  ಸೀಕ್ವೆನ್ಸಿಂಗ್  ದತ್ತಾಂಶದ ಪ್ರಕಾರ  ಈಗಾಗಲೇ ಸಾವಿರಾರು  ರೂಪಾಂತರಗಳು  (Mutation) ಸಂಭವಿಸಿವೆ. ಒಂದು ಅಥವಾ ಹೆಚ್ಚಿನ ಹೊಸ ರೂಪಾಂತರಗಳನ್ನು ಹೊಂದಿರುವ ವೈರಸ್ ಅನ್ನು ಮೂಲ ವೈರಸ್‌ (SARS-CoV-19)ನ “ರೂಪಾಂತರ”(Variant) ಎಂದು ಕರೆಯಲಾಗುತ್ತದೆ. ಆದರೆ ಎಲ್ಲಾ ರೂಪಾಂತರಗಳು ಅಪಾಯಕಾರಿ ಅಲ್ಲ. ಆದರೆ ಕೆಲವು ರೂಪಾಂತರಗಳು   ಸೋಂಕು ಮತ್ತು ರೋಗದ ತೀವ್ರತೆಯ ವಿಷಯದಲ್ಲಿ ಹೆಚ್ಚು ಆಕ್ರಮಣಕಾರಿಯಾಗಿರುವುದರಿಂದ  ಅಪಾಯಕಾರಿಯಾಗಿವೆ. ಇಂತಹ  ರೂಪಾಂತರಿ ವೈರಸ್ ಗಳನ್ನು   VOC (Variant of Concern) ಎಂದು ವರ್ಗೀಕರಿಸಲಾಗಿದೆ. ಅಂದರೆ, ಕಾಳಜಿ / ಜಾಗ್ರತೆ ವಹಿಸಬೇಕಾದ ರೂಪಾಂತರ.   L452R ಅನ್ನು Variant of Concern ಎಂದು ಪರಿಗಣಿಸಲಾಗಿದೆ.   ಈಗ ಡಬಲ್ ರೂಪಾಂತರಿಯಾಗಿ ವಕ್ಕರಿಸಿರುವ   ಕೊರೊನಾವೈರಸ್ ನ  ಪ್ರಭಾವದ  ಬಗ್ಗೆ ಅಧ್ಯಯನಗಳು  ಮುಂದುವರಿದಿರುವುದರಿಂದ   ವಿಶ್ವ ಆರೋಗ್ಯ ಸಂಸ್ಥೆಯು  ಸದ್ಯಕ್ಕೆ  ಇದನ್ನು ‘Variant under Investigation’ (ತನಿಖೆಯಲ್ಲಿರುವ ರೂಪಾಂತರಿ) ಎಂದು  ಪರಿಗಣಿಸಿದೆ.

ಭಾರತೀಯ ಲಸಿಕೆ ಕೊವ್ಯಾಕ್ಸಿನ್ : 

ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಂಸ್ಥೆಯು  ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಭಾಗಿತ್ವದಲ್ಲಿ   ಅಭಿವೃದ್ಧಿ ಪಡಿಸಿರುವ ಲಸಿಕೆ ಕೊವ್ಯಾಕ್ಸಿನ್ (BBV152 ).  ಇದು ಕೊರೊನಾವೈರಸ್ ನ್ನು ತಟಸ್ಥಗೊಳಿಸುವಲ್ಲಿ 81%  ಪರಿಣಾಮಕಾರಿತ್ವವನ್ನು ಹೊಂದಿರುವುದು ಕ್ಲಿನಿಕಲ್ ಟ್ರಯಲ್ಸ್  ದೃಢಪಡಿಸಿದೆ.      ಎರಡು ಸಂಸ್ಥೆಗಳು ಜಂಟಿಯಾಗಿ  ನಡೆಸಿದ ಮೂರನೇ ಹಂತದ ಕ್ಲಿನಿಕಲ್  ಅಧ್ಯಯನದಿಂದ  ಒಂದು ಹೊಸ  ಆಶಾಕಿರಣ  ಮೂಡಿಸಿದೆ.  ಕೋವಾಕ್ಸಿನ್ ಲಸಿಕೆಯು ಡಬಲ್ ರೂಪಾಂತರಿ  ಕೊರೊನಾವೈರಸ್   (ಬಿ.1.617 SARS-CoV-2) ನ್ನೂ ತಟಸ್ಥಗೊಳಿಸುವಲ್ಲಿ ಪರಿಣಾಮಕಾರಿಯಾಗಿ ಕಂಡುಬಂದಿದೆ.    ಮೂರನೇ ಹಂತದ ಈ ಅಧ್ಯಯನದಲ್ಲಿ   ಭಾರತದಾದ್ಯಂತ 18 ರಿಂದ 98 ವರ್ಷ ವಯಸ್ಸಿನ   25,800 ಜನರನ್ನು  ಕೊವ್ಯಾಕ್ಸಿನ್  ಎರಡನೇ ಡೋಸ್ ಪಡೆದ  14 ದಿನಗಳ ನಂತರ ವಿಶ್ಲೇಷಣೆ ನಡೆಸಿ ಸಕಾರಾತ್ಮಕ  ಫಲಿತಾಂಶ ಪಡೆಯಲಾಗಿದೆ.  ಸಂಶೋಧನಾ ವರದಿಯು ಸಧ್ಯದಲ್ಲೇ ನಿಯತಕಾಲಿಕದಲ್ಲಿ ಪ್ರಕಟವಾಗಲಿದೆ. ಕೋವಾಕ್ಸಿನ್  ಇಂಗ್ಲೆಂಡ್ ನಲ್ಲಿ ಮೊದಲು ಪತ್ತೆಹಚ್ಚಲಾಗಿರುವ  ಬಿ .1.1.7 ರೂಪಾಂತರಿ  ಕೊರೊನಾವೈರಸ್ ನ್ನು (SARS‑CoV‑2 variant, B.1.1.7) ನಿಷ್ಕ್ರೀಯಗೊಳಿಸುವಲ್ಲಿಯೂ ಸಫಲವಾಗಿದೆ ಎಂದು ‘ಜರ್ನಲ್ ಆಫ್ ಟ್ರಾವೆಲ್ ಮೆಡಿಸಿನ್’  ನಲ್ಲಿ ಪ್ರಕಟವಾಗಿದೆ.

ಕೋವಿಶೀಲ್ಡ್ ಲಸಿಕೆಯೂ ಕೂಡ   ‘ಡಬಲ್ ರೂಪಾಂತರಿತ’ (B.1.617 variant)   ಕೊರೊನಾವೈರಸ್ ವಿರುದ್ಧವೂ   ರಕ್ಷಣೆಯನ್ನು ನೀಡುತ್ತದೆ ಎಂದು ಹೈದರಾಬಾದ್ ನಲ್ಲಿರುವ    ಸಿಎಸ್ಐಆರ್ – ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮೊಲೆಕ್ಯುಲರ್ ಬಯಾಲಜಿ (ಸಿಸಿಎಂಬಿ ) ವಿಜ್ಞಾನಿಗಳು ನಡೆಸಿದ  ಪ್ರಾಥಮಿಕ ಅಧ್ಯಯನದಿಂದ  ಕಂಡುಬಂದಿದೆ ಎಂದು  ಸಿಸಿಎಂಬಿ ನಿರ್ದೇಶಕರಾಗಿರುವ  ಡಾ.  ರಾಕೇಶ್ ಕೆ ಮಿಶ್ರಾ ಎಂದು ಇತ್ತೀಚೆಗೆ  ಹೇಳಿರುವುದು ಆಶಾದಾಯಕ (ಹೆಚ್ಚಿನ ಅಧ್ಯಯನ ನಡೆಯುತ್ತಿದೆ).

ಸ್ಥಳೀಯವಾಗಿ ಉತ್ಪಾದಿಸುವ  ಕೋವಾಕ್ಸಿನ್ ಮೆಕ್ಸಿಕೊ, ಫಿಲಿಪೈನ್ಸ್, ಇರಾನ್, ಪರಾಗ್ವೆ, ಗ್ವಾಟೆಮಾಲಾ, ನಿಕರಾಗುವಾ, ಗಯಾನಾ, ವೆನೆಜುವೆಲಾ, ಬೋಟ್ಸ್ವಾನ, ಜಿಂಬಾಬ್ವೆ  ಹೀಗೆ  ಒಟ್ಟು  60 ಕ್ಕೂ ಹೆಚ್ಚು ದೇಶಗಳು   ತುರ್ತು ಬಳಕೆಗೆ ಬೇಡಿಕೆ ಪಡೆದುಕೊಂಡಿದೆ. ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಮತ್ತು ಅಮೆರಿಕದ ಉನ್ನತ ಸಾಂಕ್ರಾಮಿಕ ತಜ್ಞ ಡಾ. ಆಂಥೋನಿ ಫೌಸಿ ಅವರು    “ಮಾರಣಾಂತಿಕ ರೂಪಾಂತರಿ ವೈರಸ್  ಬಿ.1.617 ನ್ನು  ತಟಸ್ಥಗೊಳಿಸುವಲ್ಲಿ   ಯಶಸ್ವಿಯಾಗಿದೆ” ಎಂದು ಇತ್ತೀಚೆಗೆ ಹೇಳಿಕೆ ನೀಡಿರುವುದು  ಇಲ್ಲಿ ಉಲ್ಲೇಖನೀಯ.

ಜಾಗತಿಕ ಸವಾಲು

ಕೋವಿಡ್-19 ಸಾಂಕ್ರಾಮಿಕದ ಮೊದಲ ಅಲೆಯಲ್ಲಿ ವೈರಸ್  ಸಾಮೂಹಿಕ ಹರಡುವಿಕೆಯನ್ನು ನಿಲ್ಲಿಸುವುದು ಒಂದು ಮುಖ್ಯ ಸವಾಲಾಗಿತ್ತು. ಎರಡನೆಯ ಅಲೆಯಲ್ಲಿ  ಸಮುದಾಯ ಪ್ರಸರಣವನ್ನು ತಡೆಯುವುದು   ಮಾತ್ರವಲ್ಲದೆ ಕೊರೊನಾವೈರಸ್ ಇನ್ನಷ್ಟು ರೂಪಾಂತರಕ್ಕೆ ಒಳಗಾಗುವುದನ್ನು  ತಡೆಹಿಡಿಯುವುದು ಒಂದು ದೊಡ್ಡ ಜಾಗತಿಕ ಸವಾಲಾಗಿದೆ.    ಈಗಾಗಲೇ ಡಬಲ್ ರೂಪಾಂತರವು ಸಮುದಾಯದಲ್ಲಿ ಶೀಘ್ರವಾಗಿ ಹರಡುವುದರಿಂದ ಮತ್ತು ರೋಗವನ್ನು ಹೆಚ್ಚು ತೀವ್ರಗೊಳಿಸುವ ಮೂಲಕ  ಹಾನಿಯನ್ನುಂಟುಮಾಡಿದೆ. ಆದರೆ ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳು ಕೊರೊನಾವೈರಸ್ ಇನ್ನೂ ಅಪಾಯಕಾರಿ ಮೂರನೇ ರೂಪಾಂತರಿಯಾಗಿ  ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.

 ಲಸಿಕೆ ಅಭಿಯಾನ

ರೂಪಾಂತರ ವೈರಸ್ ಜನರನ್ನು ಆಕ್ರಮಿಸುವ ಮೊದಲು ಲಸಿಕೆಯನ್ನು ಪಡೆಯಬೇಕು.   ಹೆಚ್ಚು ಹೆಚ್ಚು  ಜನರು ಲಸಿಕೆ ಪಡೆಯುತ್ತಿದ್ದಂತೆ  ವೈರಸ್ ಪ್ರಸರಣವು ಕಡಿಮೆಯಾಗಿ  ಅದು     ರೂಪಾಂತಗೊಳ್ಳುವ  ಪ್ರಕ್ರಿಯೆಗೆ  ಒಂದು ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಜವಾಬ್ದಾರಿಯುತ ಭಾಗವಹಿಸುವಿಕೆಯಿಂದ ಮಾತ್ರ ಇದು ಸಾಧ್ಯ. ಈಗಾಗಲೇ ಲಸಿಕೆ ಅಭಿಯಾನ ಪ್ರಾರಂಭವಾಗಿದೆ; ಹಂತ ಹಂತವಾಗಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. (ಕೋವಿಡ್ -೧೯ ಲಸಿಕೆಗಾಗಿ  ನೋಂದಾಯಿಸಲು ಸರ್ಕಾರದ   ಈ ಕೆಳಗಿನ   ಲಿಂಕ್ ನ್ನು ಕ್ಲಿಕ್ ಮಾಡಬಹುದು.https://selfregistration.cowin.gov.in) ಪ್ರಸ್ತುತ, ಭಾರತದಲ್ಲಿ  ಎರಡು ಲಸಿಕೆಗಳು ಸಾರ್ವಜನಿಕರಿಗೆ ಲಭ್ಯವಿದೆ ಕೊವಾಕ್ಸಿನ್ ಮತ್ತು ಸೀರಮ್ ಇನ್ಸ್ಟಿಟ್ಯೂಟ್ ಆಫ್  ಇಂಡಿಯಾ – ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಉತ್ಪಾದಿಸಿರುವ   ಕೋವಿಶೀಲ್ಡ್ ಲಸಿಕೆ.  ಇದರೊಂದಿಗೆ,  ರಷ್ಯಾದ  ‘ಸ್ಪುಟ್ನಿಕ್ ವಿ’ (Sputnik V)  ಲಸಿಕೆಗೂ  ಸರ್ಕಾರದ ಅನುಮೋದನೆ ದೊರೆತಿದ್ದು   ಮೇ 2021 ರ ಅಂತ್ಯದ ವೇಳೆ ಅದರ ನಿಯೋಜನೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಈಗಾಗಲೇ  ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಂಡಿರುವ ಇಸ್ರೇಲ್ ನಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ  ಗಮನಾರ್ಹವಾಗಿ ಇಳಿಮುಖವಾಗಿದೆ  ಎಂಬ ವರದಿ ಭಾರತದ  ಲಸಿಕೆ ಅಭಿಯಾನಕ್ಕೆ ಇನ್ನಷ್ಟೂ  ಪುಷ್ಠಿ ನೀಡಿದೆ.

ಕೊರೊನಾಮುಕ್ತ ಸಮಾಜ ನಿರ್ಮಾಣದ ಅನಿವಾರ್ಯತೆ

ಪ್ರಥಮ ಮತ್ತು  ಎರಡನೇ ಡೋಸ್ ಲಸಿಕೆ ಪಡೆದ  ನಂತರ ಅತಿಯಾದ ಆತ್ಮವಿಶ್ವಾಸದಲ್ಲಿ   ‘ನಾನು  ಸೇಫ್,  ನನಗೆ ಯಾವ ಕೊರೊನವೂ ತಾಗುವುದಿಲ್ಲ’ ಎಂದು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಲಸಿಕೆ ಹಾಕಿಸಿಕೊಂಡ ನಂತರ   COVID-19 ವಿರುದ್ಧ ಸಂಪೂರ್ಣ ರಕ್ಷಣೆ ನೀಡಲು ಸಮಯ ತೆಗೆದುಕೊಳ್ಳುತ್ತದೆ. ಮುಖ್ಯವಾಗಿ,  ಲಸಿಕೆಗಳು ಎಷ್ಟು ಸಮಯದವರೆಗೆ ರಕ್ಷಣೆ ನೀಡುತ್ತವೆ ಎಂಬುದು ಇನ್ನೂ ತಿಳಿದಿಲ್ಲ. ಸುರಕ್ಷತೆಗಾಗಿ  ಸರ್ಕಾರಿ  ಮಾರ್ಗಸೂಚಿಗಳನ್ನು ಮತ್ತು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲೇಬೇಕು. ವೈರಸ್   ವ್ಯಾಪಕವಾಗಿ ಹರಡಿ  ಹೆಚ್ಚು ಹೆಚ್ಚು ಜನರು   ಸೋಂಕಿತರಾದಾಗ   ರೂಪಾಂತರಗೊಳ್ಳುವ ಸಾಧ್ಯತೆಯು ಹೆಚ್ಚಾಗುತ್ತದೆ.  ಆದುದರಿಂದ,  ಇನ್ನೂ ಬಲಿಷ್ಠ ರೂಪಾಂತರಿ ಕೊರೊನವೈರಸ್    ಸೃಷ್ಟಿಯಾಗುವುದನ್ನು ತಡೆಹಿಡಿಯಬೇಕಾಗಿದೆ.  ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ   ಸಮಸ್ಯೆ  ಮತ್ತಷ್ಟೂ  ಬಿಗಡಾಯಿಸಬಹುದು.

ಆರಂಭದಲ್ಲಿ  ಜನರು ಲಸಿಕೆ ಪಡೆಯಲು ಹಿಂಜರಿಕೆ ತೋರಿದರೂ  ಎರಡನೇ ಅಲೆಯ ಹೊಡೆತದಿಂದಾಗಿ ಹೆಚ್ಚಿನ  ಸಂಖ್ಯೆಯಲ್ಲಿ ಜನರು ಲಸಿಕೆ ಪಡೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ, 18-45 ವಯಸ್ಸಿನ 1.3 ಕೋಟಿ ಜನರು ಲಸಿಕೆಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. 139.12 ಜನಸಂಖ್ಯೆ ಇರುವ    ಭಾರತದಂತಹ ವಿಶಾಲ ರಾಷ್ಟ್ರದಲ್ಲಿ  ಅಷ್ಟೊಂದು ಪ್ರಮಾಣದಲ್ಲಿ ಲಸಿಕೆಯನ್ನು ಉತ್ಪಾದಿಸಿ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಸೀಮಿತ ಅವಧಿಯೊಳಗೆ ಸಂಪೂರ್ಣಗೊಳಿಸುವುದು  ಒಂದು ದೊಡ್ಡ ಸವಾಲು.  ಈ ಸವಾಲನ್ನು ಭಾರತವು ಯಶಸ್ವಿಯಾಗಿ ಎದುರಿಸುತ್ತದೆ ಎಂದು ಆಶಿಸೋಣ.  ನಮ್ಮ ನಮ್ಮ ಜಾಗ್ರತೆ ಮುಂದುವರಿಸೋಣ. ‘ಎಲ್ಲರೂ ಸುರಕ್ಷಿತವಾಗಿದ್ದರೆ ನಾವು ಸುರಕ್ಷಿತರು’ ಎಂಬ ಧ್ಯೇಯವನ್ನು  ಇಟ್ಟುಕೊಂಡು ಕೊರೊನಾಮುಕ್ತ ಸಮಾಜವನ್ನು  ನಿರ್ಮಿಸಲು  ನಾವೆಲ್ಲರೂ ಕೈಜೋಡಿಸಲೇಬೇಕು.

 

– ಡಾ. ಪ್ರಶಾಂತ ನಾಯ್ಕ
ಪ್ರಾಧ್ಯಾಪಕರು,
ಜೀವವಿಜ್ಞಾನ ವಿಭಾಗ,
ಮಂಗಳೂರು ವಿಶ್ವವಿದ್ಯಾನಿಲಯ

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More