ಎಲ್ಲ ಕ್ಷೇತ್ರಗಳಲ್ಲಿ ಯುವ ಪೀಳಿಗೆ ಪ್ರಬಲವಾಗಿ ತನ್ನ ತನವನ್ನು ತೋರಿಸಿಕೊಡುತ್ತಿದೆ. ಆದರೆ ಈ ಮಾತು ಸಹಕಾರಿ ಕ್ಷೇತ್ರಕ್ಕೆ ಸರಿಹೊಂದುವುದಿಲ್ಲ.
ವಿಶ್ವದಲ್ಲಿಯೆ ಭಾರತದಲ್ಲಿರುವಷ್ಟು ಯುವ ಸಂಪತ್ತು ಬೇರೆಲ್ಲಿಯೂ ಇಲ್ಲ ಎಂಬ ಹೆಗ್ಗಳಿಕೆ ನಮ್ಮದಿದೆ. ಇವರೆಲ್ಲ ಒಗ್ಗಟ್ಟಾದರೆ, ಇವರನ್ನೆಲ್ಲ ಒಂದು ಸೂತ್ರದಡಿಯಲ್ಲಿ ತರಲು ಸಾಧ್ಯವಾದರೆ ಭಾರತಕ್ಕೆ ಮತ್ತೆ ಯಾವ ಚಿಂತೆಯೂ ಬೇಡ. ವಿಶ್ವಗುರುವಾಗಲು ಮುಂದಡಿಯಿಟ್ಟ ಭಾರತಕ್ಕೆ ಮತ್ತಷ್ಟು ಸಶಕ್ತ ಯುವಜನತೆಯ ಸಹಕಾರ ಸಿಗಬೇಕು. ಅದು ಸಹಕಾರ ಕ್ಷೇತ್ರದ ಮೂಲಕ ಆಗುವಂತಾದರೆ ಸಹಕಾರಿ ಕ್ಷೇತ್ರವೂ ಸಮೃದ್ಧ, ಭರತವೂ ಸದೃಢವಾಗಿ ಇನ್ನಷ್ಟು ಮತ್ತಷ್ಟು ಬೆಳೆದು ನಿಲ್ಲುವುದರಲ್ಲಿ ಸಂಶಯಗಳಿಲ್ಲ.
ಹಿರಿಯರೇ ಮುಂದು ಸಹಕಾರಿ ವಲಯದ ಸಹಕಾರಿ ಸಂಘಗಳ ಸದಸ್ಯರ ಪಟ್ಟಿಯಲ್ಲಿ ಯುವಜನತೆಯ ಸದಸ್ಯತನ ಇಲ್ಲ ಅಂತಲ್ಲ. ಆದರೆ ಸಹಕಾರಿ ಸಂಘದ ಜೊತೆಗೆ ವ್ಯವಹಾರ ಮಾಡುವವರಲ್ಲಿ, ಠೇವಣಿ ಇಡುವವರಲ್ಲಿ, ಅದರಲ್ಲೂ ನಿತ್ಯ ವ್ಯವಹಾರ ಮಾಡುವವರಲ್ಲಿ ಯುವ ಶಕ್ತಿಯ ಪಾಲು ಬಹಳ ಕಡಿಮೆ. ಯುವಕರಿಗಿಂತ ಐವತ್ತು ವರ್ಷ ದಾಟಿದ ಸದಸ್ಯರು ವ್ಯವಹಾರಕ್ಕೆ ಬರುವುದೇ ಹೆಚ್ಚು. ಸಹಕಾರಿ ಸಂಘದಿಂದ ಸಾಲ ಪಡೆಯುವವರನ್ನು ಗಮನಿಸಿದರೆ ಕೂಡ ಇದೇ ಸ್ಥಿತಿ. ಸಣ್ಣ ಪುಟ್ಟ ವಾಹನಗಳಿಗೊ, ವ್ಯಕ್ತಿಗತ ವ್ಯವಹಾರಕ್ಕೊ ಸಣ್ಣ ಮೊತ್ತದ ಸಾಲಗಳನ್ನು ಯುವ ಜನತೆ ಪಡೆಯುವುದಿಲ್ಲ ಎಂದಲ್ಲ. ಆದರೆ ದೊಡ್ಡ ಮೊತ್ತದ ಉಳಿತಾಯ ಕೂಡಿಡಲು ಮತ್ತು ಸಾಲಗಳ ಜವಾಬ್ದಾರಿಯನ್ನು ಹೊರಲು ಅವರು ಇನ್ನೂ ತಯಾರಾಗುತ್ತಿಲ್ಲ. ಕಿರಿಯರಿಗೆ ಅವಕಾಶ ಮಾಡಿಕೊಡಿ ಮನೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಹಕಾರಿ ಸಂಘಕ್ಕೆ ಹೋಗುವ ಹಿರಿಯರು ಸಾಧ್ಯವಾದಷ್ಟು ಕಿರಿಯರಿಗೆ ಅವಕಾಶ ಮಾಡಿಕೊಡಬೇಕು.
ನಿರ್ದೇಶನ ಹಿರಿಯದಿರಲಿ. ಕೆಲಸ ಕಾರ್ಯಗಳು ಕಿರಿಯರ ಮೂಲಕ ನಡೆಯಲಿ. ಹೀಗಾದರೂ ಯುವ ಶಕ್ತಿ ಸಹಕಾರಿ ಸಂಘಗಳ ಮೆಟ್ಟಲು ಹತ್ತಲು ಕಲಿಯಲಿ ಎಂಬ ಆಸೆ. ನಿಮ್ಮ ಮನೆಯ ಉಳಿತಾಯದಲ್ಲಿ ನೀವು ಠೇವಣಿ ಇಡುವುದಿದ್ದರೆ ಅ ಠೇವಣಿಯ ಶೇಕಡಾ ಐವತ್ತು ನಿಮ್ಮ ಮನೆಯ ಯುವಜನತೆಯ ಹೆಸರಲ್ಲಿಡಿ. ಅವರು ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದರೂ ಪರವಾಗಿಲ್ಲ. ಅವರ ಹೆಸರಲ್ಲಿ ಉಳಿತಾಯ ಖಾತೆಯೂ ತೆರೆದಿರಲಿ. ರಜೆಯಲ್ಲಿ ಮನೆ ಕಡೆ ಬಂದಿರುವಾಗ ಸಂಪಾದನೆಯ ಮೊತ್ತದ ಒಂದಂಶ ಊರಿನ ಸಹಕಾರಿ ಸಂಘಗಳಲ್ಲಿ ಯುವಜನತೆ ಕೂಡಿಡಲಿ. ಅವರ ಕಷ್ಟಕಾಲವೋ, ಮನೆಯ ಅಗತ್ಯವೊ ಯಾವುದಾದರೊಂದಕ್ಕೆ ಉಳಿತಾಯ ಖಾತೆಯ ಹಣ ಆಪತ್ನಿಧಿಯಾಗಿ ಮನೆಯವರನ್ನು ಕಾಯುತ್ತದೆ. ಯುವಜನತೆ ಈ ಕಾರ್ಯ ಮಾಡಿದ್ದೇ ಆದರೆ ಊರಿನ ಸಹಕಾರಿ ಸಂಘಗಳೂ ಉಸಿರಾಡಲು, ಬೆಳೆಯಲು ಅನುವುಮಾಡಿಕೊಟ್ಟಂತಾಗುವುದು.
ಸಹಕಾರಿ ಸಂಘಗಳ ಸಿಬ್ಬಂದಿಗಳು, ನಿರ್ದೇಶಕರು ಉಳಿತಾಯ ಖಾತೆ ತೆರೆಯಲು ತಮ್ಮ ಸುತ್ತ ಮುತ್ತ ವಾಸಿಸುವ, ತಮ್ಮ ಸಂಪರ್ಕಕ್ಕೆ ಸಿಗುವ ನಾಗರಿಕರನ್ನು, ಯುವಜನತೆಯನ್ನು ಪ್ರೇರೇಪಿಸಬೇಕು. ಇಂತಹ ಪ್ರಯತ್ನಗಳು ನಡೆಯದೆ ಸಹಕಾರ ಕ್ಷೇತ್ರ ಬೆಳೆಯುವುದಿಲ್ಲ. ಸಾಮೂಹಿಕ ಪ್ರಯತ್ನಗಳು ಕೊಡುವ ಫಲಿತಾಂಶ ಬಹಳ ದೊಡ್ದದಿರುತ್ತದೆ.
ಆಡಳಿತಕ್ಕೂ ಯುವಜನತೆ ಯುವ ಜನತೆ ಸಹಕಾರಿ ಕ್ಷೇತ್ರದಿಂದ ದೂರ ಉಳಿಯುವಂತಾದರೆ ಆಡಳಿತ ಮಂಡಳಿಯ ಚುನಾವಣೆ ಸಂದರ್ಭದಲ್ಲಿ ಊರಿಡೀ ನಿರ್ದೇಶಕರ ಸ್ಥಾನಕ್ಕೆ ಸದಸ್ಯರನ್ನು ಹುಡುಕುವ ಕೆಲಸವಾಗುತ್ತದೆ. ಸಹಕಾರಿ ಕ್ಷೇತ್ರದಲ್ಲಿ ಯುವಜನತೆ ಗುರುತಿಸಿಕೊಂಡರೆ ನಿರ್ದೇಶಕ ಸ್ಥಾನಕ್ಕೆ ಸುಲಭವಾಗಿ ಅರ್ಹರನ್ನು ತರಬಹುದು. ಆಡಳಿತ ಮಂಡಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವಾಗ ಹಳೆಯ ಶೇಕಡಾ ಐವತ್ತು ನಿರ್ದೇಶಕರ ಜೊತೆಗೆ ಉಳಿದ ಶೇಕಡಾ ಐವತ್ತು ಯುವ ಪೀಳಿಗೆಗೆ ಪ್ರಾಶಸ್ತ್ಯ ಕೊಡಬೇಕು. ಇದಕ್ಕೆ ಹಿರಿಯ ಸದಸ್ಯರ ಸಹಕಾರ ತುಂಬ ಬೇಕು. ಯುವಕರು ಸಹಕಾರಿ ಕ್ಷೇತ್ರದ ಸಂಪರ್ಕದಲ್ಲಿ ಇಲ್ಲದೆ ಹೋದರೆ ಸಹಕಾರಿ ಕ್ಷೇತ್ರಕ್ಕೆ ಹೊಸತನಗಳು ಬರುವುದಿಲ್ಲ, ವೇಗ ಸಿದ್ಧಿಸುವುದಿಲ್ಲ. ಕಾಲಕಾಲಕ್ಕೆ ತರಬೇಕಾದ ಬದಲಾವಣೆಗಳು, ಮೌಲ್ಯವರ್ಧಿತ ಸೇವೆಗಳು ಕೈಗೂಡುವುದಿಲ್ಲ. ಯುವ ಶಕ್ತಿ ಸಹಕಾರಿ ವಲಯದಿಂದ ದೂರವಿದ್ದಾಗ ಸಹಕಾರಿ ಸಂಘಗಳ ಚಟುವಟಿಕೆ, ಚುನಾವಣೆ, ಹೊಸ ನಿರ್ದೇಶಕರ ಸೇರ್ಪಡೆಗಳಿಗೆ ತೊಂದರೆಯಾಗುತ್ತದೆ.
ಇತ್ತೀಚೆಗೆ ಒಂದು ದೊಡ್ಡ ಸಹಕಾರಿ ಸಂಘದ ಚುನಾವಣೆ ಬಂತು.ಹನ್ನೊಂದು ನಿರ್ದೇಶಕರು ಬೇಕು. ಸುಲಭದಲ್ಲಿ ಹುಡುಕಾಡಿದಾಗ ಅರ್ಹರು ಸಿಗಲಿಲ್ಲ. ಮತ್ತೆ ಭರ್ತಿಗೆ ಹನ್ನೊಂದು ಸಂಖ್ಯೆ ತುಂಬುವ ಕೆಲಸ ಆಯಿತೆನ್ನಿ. ಯರ‍್ಯಾರದೋ ಒತ್ತಾಯಕ್ಕೆ ಏನೆಲ್ಲ ಸುಳ್ಳುಗಳನ್ನು ಹೇಳಿ ಕೆಲವರನ್ನು ಒತ್ತಾಯಕ್ಕೆ ತರಲಾಯಿತು. ಸಹಕಾರಿ ಸಂಘಕ್ಕೆ ವರ್ಷದಲ್ಲಿ ನಾಲ್ಕು ಸಲ ಬಂದವರು ಅದರಲ್ಲಿದ್ದದ್ದು ಬಹಳ ಕಡಿಮೆ ಸಂಖ್ಯೆಯಲ್ಲಿ. ಎಲ್ಲವೂ ನಿರ್ದೇಶಕ ಮಂಡಳಿಯ ಒಳಹೊಕ್ಕು ಕಲಿಯ ಬೇಕಷ್ಟೆ. ಕೆಲವರಿಗೆ ಆಡಳಿತ ಮಂಡಳಿಯ ಸಭೆ ತಿಂಗಳಿಗೊಂದು ಸಲ ಆಗುವ ಸಂದರ್ಭದಲ್ಲಿ ಬರಲು ಸಮಯ ಸಿಗದ ಅವಸ್ಥೆಗಳು. ಇದೆಲ್ಲ ಆಗಬಾರದು. ನಿರ್ದೇಶಕರ ಆಯ್ಕೆ ಮಾಡುವ ಜವಾಬ್ದಾರಿ ಇದ್ದವರು ಸೂಕ್ತರನ್ನು ಆಯ್ಕೆ ಮಾಡುವಾಗ ಸಹಕಾರಿ ಸಂಘದ ಭವಿಷ್ಯದ ಕಡೆಗೂ ತಮ್ಮ ದೃಷ್ಟಿಯನ್ನು ನೆಟ್ಟಿರಬೇಕು. ಸಾಮಾಜಿಕ ನ್ಯಾಯದಿಂದ ಹಿಡಿದು ವಿದ್ಯಾಭ್ಯಾಸ, ತಾಳ್ಮೆ, ಸಹನೆ, ತಿಳಿಯುವ ಕುತೂಹಲ, ಸಮಯ ಕೊಡುವಂತಹ ಮನಸ್ಸು ಎಲ್ಲ ಬೇಕು.
ಸಹಕಾರಿ ಕ್ಷೇತ್ರವನ್ನು ಯುವಜನತೆಯ ಸಹಕಾರದೊಂದಿಗೆ ಮಹೋನ್ನತವಾಗಿ ಬೆಳೆಸಬೇಕಾಗಿದೆ. ಅದಕ್ಕೊಂದು ಕಾರ್ಯಯೋಜನೆ ಹಾಕಿಕೊಳ್ಳ ಬೇಕಾದ ಅನಿವಾರ್ಯತೆ ಇದೆ. ಯಾರೆಲ್ಲ ಸಹಕಾರ ಕ್ಷೇತ್ರದ ಹಿರಿಯರು ಯುವ ಜನತೆಗೆ ಸಹಕಾರದ ಮೂಲಪಾಠ ಹೇಳಿಕೊಡುವ ಮಹತ್ತರ ಜವಾಬ್ದಾರಿ ಹೊರಬೇಕು.
ಶಂ.ನಾ.ಖಂಡಿಗೆ
‘ಶ್ಯಾಮಕೃಪಾ’ ನಾಗೋಡಿ
ಅಂಚೆ : ಪೆರ್ಲ – ೬೭೧೫೫೨
ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ.