ಸಹಕಾರಿಯ ಗೆಲುವು ಇರುವುದೇ ವಿಶ್ವಾಸದಲ್ಲಿ.|ಶಂ. ನಾ. ಖಂಡಿಗೆ

ಎಷ್ಟೋ ಸಲ ಸಹಕಾರಗಳು ಸಹಕಾರಿ ಸಂಘ ಮತ್ತು ವ್ಯವಸ್ಥೆಯೊಳಗೆ ನಮ್ಮ ದೃಷ್ಟಿಯಲ್ಲಿ ಪರಸ್ಪರ ಹಾಸುಹೊಕ್ಕಾಗಿರುತ್ತವೆ. ಹೊರಗಿನಿಂದ ನೋಡುವ ಮೂರನೆಯ ವ್ಯಕ್ತಿಗೆ ಇದು ಬಹಳ ಒಳ್ಳೆಯ ವ್ಯವಸ್ಥೆ ಅನ್ನಿಸುವುದುಂಟು. ಹೊರಗಣ್ಣಿಗೆ ಸಪುಷ್ಟವಾಗಿ, ಸದೃಢವಾಗಿ, ಸಬಲವಾಗಿ ಮೆರೆಯುವುದುಂಟು. ಆದರೆ ಆಳಕ್ಕಿಳಿದು ಪರಾಂಬರಿಸಿದಾಗ ಆಂತರ್ಯ ಕೆಟ್ಟಿರುತ್ತದೆ. ನಿಶ್ಶಕ್ತಿಯಿಂದ ಬಳಲಿರುತ್ತದೆ. ಏನು ಮಾಡಿದರೂ ಸುಧಾರಿಸದಷ್ಟು ಕಳಂಕಿತವಾಗಿರುತ್ತದೆ. ಇದಕ್ಕೆಲ್ಲ ಕಾರಣ ‘ವಿಶ್ವಾಸ’ ಸೋತಿರುವುದು. ಸಹಕಾರಿ ಕ್ಷೇತ್ರ ಇಷ್ಟೊಂದು ಆಳ ಹರಹುಗಳಿಗೆ ತನ್ನ ವಿಸ್ತಾರವನ್ನು ಪಸರಿಸಿಕೊಳ್ಳಲು ಕಾರಣವಾಗಿರುವುದು ಅದರ ಮೂಲ ಮಂತ್ರ ಪರಸ್ಪರ ಸಹಕಾರದೊಂದಿಗೆ ಮಿಳಿತವಾಗಿರುವ ‘ವಿಶ್ವಾಸ.’

ಮಾಹಿತಿಯಿಲ್ಲ!

ಪ್ರಾಥಮಿಕ ಸಹಕಾರಿ ಸಂಘವೊಂದು ತನ್ನ ಸದಸ್ಯರಿಗೆ ಕೇವಲ ಬ್ಯಾಂಕಿಂಗ್, ಸಾಲ ಪಾವತಿ ಮರುಪಾವತಿ ಸೇವೆಯನ್ನಲ್ಲದೆ ಹೊಸದಾಗಿ ಕೃಷಿಗೆ ಪೂರಕವಾದ ಕಾಳುಮೆಣಸಿನ ಗಿಡ, ಕಸಿ ಕಟ್ಟಿದ ಮಾವಿನ ಗಿಡ, ತರ ತರದ ಹಣ್ಣು ಹಂಪಲಿನ ಗಿಡಗಳನ್ನು ಒದಗಿಸಿಕೊಡುವುದಾಗಿ ಪ್ರಕಟಿಸಿತು. ತಮ್ಮ ಊರಿನಲ್ಲಿ ವೈವಿಧ್ಯಮಯ ಗಿಡಗಳು ಸಿಗುವುದಾದರೆ ದೂರದ ನರ್ಸರಿಗಳಿಂದ ತರುವ ಶ್ರಮ ಕಡಿಮೆಯಾಯಿತು. ನಮ್ಮ ಸಹಕಾರಿ ಸಂಘ ಈ ವ್ಯವಸ್ಥೆ ಒದಗಿಸುವುದು ಒಳ್ಳೆಯದೆ ಆಯಿತು ಎಂದು ಸದಸ್ಯರು ತಮಗೆ ಬೇಕಾದ ಗಿಡಗಳ ಸಂಖ್ಯೆಗೆ ಬೇಡಿಕೆ ಸಲ್ಲಿಸಿದರು. ಬೇಡಿಕೆ ಸಲ್ಲಿಸಿ ಹದಿನೈದು ದಿವಸ ಕಳೆಯಿತು. ತಿಂಗಳಾಯಿತು. ಗಿಡಗಳು ಬರುವ ಸುದ್ದಿಯೇ ಇಲ್ಲ. ಮತ್ತೆ ವ್ಯವಸ್ಥೆಯ ಒಳಗಿರುವ ಕೆಲವು ಜನರಲ್ಲಿ ಅದು ಕೂಡ ನಿರ್ದೇಶಕರಲ್ಲಿ ವಿಚಾರಿಸುವಾಗ ನೀವು ಕೇಳುವ ಗಿಡಗಳು ಎಲ್ಲಿಂದ ಅಂತ ಗೊತ್ತಿಲ್ಲ. ನಿರ್ದೇಶಕರ ಸಭೆಯಲ್ಲಿ ಈ ವಿಚಾರಗಳು ಬಂದಿಲ್ಲ ಎಂಬ ಉತ್ತರ. ಹೆಚ್ಚಿನ ಸಿಬ್ಬಂದಿಗಳಿಗೂ ಇದರ ಬಗ್ಗೆ ನಿಖರ ಮಾಹಿತಿಗಳಿಲ್ಲ. ಮತ್ತೆ ಆಳಕ್ಕಿಳಿದು ನೋಡಿದಾಗ ಹೆಸರಾಗದ ನರ್ಸರಿಯೊಂದರಿಂದ ಸಹಕಾರಿ ಸಂಘದ ಒಂದೆರಡು ನಿರ್ದೇಶಕರು ಮತ್ತು ಸಿಬ್ಬಂದಿ ವ್ಯವಹರಿಸಿ ಮಾಡಿದ ಕೆಲಸ. ಬೇಡಿಕೆಯಿದ್ದಷ್ಟು ಕಾಳುಮೆಣಸಿನ ಗಿಡಗಳು ಅಲ್ಲಿ ಇಲ್ಲ. ಪ್ರಚಾರಕ್ಕೆ ಹಾಕಿದ ಫೊಟೋಗಳು ಕೂಡ ಅಲ್ಲಿಗೆ ಸಂಬಂಧಿಸಿದ್ದಲ್ಲ.

ದುಬಾರಿ ಬೆಲೆ. 

ಇದುವರೆಗೆ ಕೇಳರಿಯದ ಕೆಲವು ಮಾವಿನ ಗಿಡಗಳನ್ನು ಸಹಕಾರಿ ಸಂಘ ಶಿಫಾರಸು ಮಾಡಿತ್ತು. ಅದಕ್ಕೆ ದುಬಾರಿ ಬೆಲೆ ಬೇರೆ. ಕೆಲವರಿಂದ ಈ ಬಗ್ಗೆ ವಿಚಾರಣೆ. ಮುನ್ನೂರಕ್ಕೆ ಈ ತಳಿಯ ಗಿಡಗಳು ಸಿಗುತ್ತವೆ. ನಿಮ್ಮ ಬೆಲೆ ಐನ್ನೂರು ಆಗಿದೆಯಲ್ಲ ಅದರ ವಿಶೇಷತೆ ಏನು ಎಂಬ ಪ್ರಶ್ನೆ. ಇದಕ್ಕೂ ತೃಪ್ತಿಕರ ಉತ್ತರ ಸಹಕಾರಿ ಸಂಘದ ಕಡೆಯಿಂದ ಕೊಡುವವರು ಇಲ್ಲ. ಇದು ‘ವಿಶ್ವಾಸ’ದ ಪ್ರಶ್ನೆ. ನಮ್ಮ ಸಹಕಾರಿ ಸಂಘ ಎಂದು ನಂಬಿದ ಸದಸ್ಯರು ‘ವಿಶ್ವಾಸ’ದಿಂದ ಗಿಡಗಳಿಗೆ ಬೇಡಿಕೆ ಸಲ್ಲಿಸಿದ್ದರು. ಮಳೆ ಬರುವ ಸಮಯದಲ್ಲಿ ತಂದು ನಡಬಹುದು ಎಂಬ ಸಹಜ ಕಳಕಳಿ ಅವರದು. ಆದರೆ ಬೇಡಿಕೆ ಸಲ್ಲಿಸಿದವರ ಪ್ರಶ್ನೆಗೆ ಸಮರ್ಪಕ ಉತ್ತರ ಆ ಕಡೆಯಿಂದ ಬಂದಿಲ್ಲ. ಇದು ‘ವಿಶ್ವಾಸ’ ದ್ರೋಹ. ಗಿಡಗಳ ಸಮರ್ಪಕ ಪೂರೈಕೆ ಇಲ್ಲದಿರುವುದು, ಸದಸ್ಯರ ಪ್ರಶ್ನೆಗೆ ನೇರ ಉತ್ತರ ನೀಡದಿರುವುದು ಮತ್ತು ಬೆಲೆಯಲ್ಲಿ ತೀರಾ ವ್ಯತ್ಯಾಸ ತೋರಿಸಿರುವುದು ಸಹಕಾರಿ ಸಂಘದ ಮೇಲೆ ಸದಸ್ಯರು ಇಟ್ಟಿರುವ ‘ವಿಶ್ವಾಸ’ಕ್ಕೆ ತಕ್ಕುದಾದ ನಡವಳಿಕೆಯಲ್ಲ.

ಎಷ್ಟು ಲಾಭ ಬೇಕು?

ಸಹಕಾರಿ ಸಂಘಗಳಿಗೆ ನಿತ್ಯ ವ್ಯವಹಾರದಲ್ಲಿ ಲಾಭ ಬೇಕು. ನಷ್ಟಮಾಡಿಕೊಂಡು ವ್ಯವಹಾರ ಮಾಡಿದರೆ ಆ ಸಹಕಾರಿ ಹೆಚ್ಚು ಸಮಯ ಬಾಳದು. ಹೊಸದಾಗಿ ಸೇವೆಗಳನ್ನು ಆರಂಭಿಸುವ ಮೊದಲು ನಿರ್ದೇಶಕರು ಮತ್ತು ಸಂಸ್ಥೆಯ ಸಿಬ್ಬಂದಿಗಳ ಗಮನಕ್ಕೆ ತಂದು ಅದರ ಲಾಭಾಲಾಭಗಳನ್ನು ತುಲನೆ ಮಾಡಿ ಮುಂದುವರಿಸುವುದು ಕ್ರಮ. ಅಗತ್ಯ ಬಿದ್ದರೆ ಈ ವ್ಯವಹಾರದಲ್ಲಿ ಅನುಭವ ಇರುವ ನಾಲ್ಕಾರು ಸದಸ್ಯರನ್ನೂ ಕರೆದು ಅವರಲ್ಲಿ ಯೋಜನೆಗಳ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಿ ಒಳ್ಳೆಯ ಅಂಶಗಳು ಹೆಚ್ಚಿದ್ದರೆ ಮುಂದುವರಿಸುವುದು ಸೂಕ್ತ. ಇಂತಹ ವ್ಯವಹಾರದಲ್ಲಿ ಸಹಕಾರಿ ಸಂಘದ ಖರ್ಚು ಹೋಗಿ ಸಣ್ಣ ಮಟ್ಟಿನ ಲಾಭ ಬಂದರೆ ಸಾಕು. ಸಿಬ್ಬಂದಿಗಳ ಶ್ರಮಕ್ಕೆ ತಕ್ಕ ಲಾಭ. ಎಲ್ಲಕ್ಕಿಂತ ಹೆಚ್ಚು ಒತ್ತು ನೀಡಬೇಕಾದುದು ‘ವಿಶ್ವಾಸ’ದ ವ್ಯವಹಾರದ ಮೇಲೆ. ಒಂದಿಬ್ಬರು ನಿರ್ದೇಶಕರಿಗೆ, ಸಿಬ್ಬಂದಿಗಳಿಗೆ ಮಾತ್ರ ಈ ವ್ಯವಹಾರದಲ್ಲಿ ಮುತುವರ್ಜಿ ವಹಿಸುತ್ತಾರೆಂದರೆ ಇಲ್ಲಿ ಏನೋ ನಡೆಯುತ್ತದೆ ಎಂದೇ ಅರ್ಥ. ಪಾರದರ್ಶಕತೆಯಿಲ್ಲದೆ ವ್ಯವಹಾರ ನಡೆಯುವಲ್ಲಿ ‘ವಿಶ್ವಾಸ’ಕ್ಕೆ ಉಸಿರೇ ನಿಲ್ಲದು ಎಂಬುದು ಸರ್ವವಿದಿತ. ಸತ್ಯಗಳನ್ನು ಮುಚ್ಚಿಟ್ಟು ವ್ಯವಹಾರಗಳು ನಡೆದರೆ ಅಂತಹ ಸಹಕಾರಿ ಒಂದಲ್ಲ ಒಂದು ದಿನ ಪೂರ್ತಿ ವ್ಯವಹಾರಿಕವಾಗಿ ಬೆತ್ತಲಾಗಿ ಸದಸ್ಯರ ‘ವಿಶ್ವಾಸ’ವನ್ನು ಕಳೆದುಕೊಂಡು ಪರಿತಪಿಸಬೇಕಾಗುತ್ತದೆ.

ಸ್ಪಷ್ಟತೆ, ನಿಖರತೆಗೆ ಒತ್ತು:

ಯಾವುದೇ ವ್ಯವಹಾರವಿರಲಿ ಅದು ನಿತ್ಯ ಸಹಕಾರಿ ಸಂಘದ ಕೆಲಸವಾಗಿರಬಹುದು ಅಥವಾ ಹೊಸದಾಗಿ ಆರಂಭಿಸಿದ ಮೌಲ್ಯವರ್ಧಿತ ಸೇವೆಗಳಿರಬಹುದು ಅಲ್ಲಿ ಸ್ಪಷ್ಟತೆ ಮತ್ತು ನಿಖರ ವ್ಯವಹಾರಕ್ಕೆ ಒತ್ತು ಕೊಡಲೇ ಬೇಕು. ಸ್ವಾರ್ಥ ಮತ್ತು ಸ್ವಹಿತಾಸಕ್ತಿ ಇರುವ ನಿರ್ದೇಶಕರು ಮತ್ತು ಸಿಬ್ಬಂದಿಗಳನ್ನು ಗುರುತಿಸಿ ಸಾಧ್ಯವಾದರೆ ಅವರನ್ನು ಸರಿದಾರಿಗೆ ತರುವುದು. ಅದಿಲ್ಲವಾದರೆ ತಕ್ಕ ಕ್ರಮಗಳನ್ನು ಕೈಗೊಳ್ಳದೆ ಹೋದರೆ ‘ವಿಶ್ವಾಸ’ಕ್ಕೆ ತಿಲಾಂಜಲಿ ಕೊಟ್ಟಂತಾಗುವುದು ಖಂಡಿತ.

ಮಹಾಸಭೆಯಲ್ಲಿ ಅಂಕುಶ:

ಇಲ್ಲಿ ಸದಸ್ಯರದ್ದೂ ಜವಾಬ್ದಾರಿಗಳಿವೆ. ಇಂತಹ ಭ್ರಷ್ಟತನ ತಿಳುವಳಿಕೆಗೆ ಬಂದರೆ ಸಹಕಾರಿ ಸಂಘದ ಮಹಾಸಭೆಯಲ್ಲಿ ಪ್ರಶ್ನಿಸಬಹುದು. ಎಚ್ಚರಿಸಿ ಆಡಳಿತ ಮಂಡಳಿ ಸರಿದಾರಿಯಲ್ಲಿ ಮುನ್ನಡೆಯುವಂತೆ ಮಾಡಬಹುದು. ಅಲ್ಲಿಯ ಆಡಳಿತ ಮಂಡಳಿಯ ಅಧ್ಯಕ್ಷರ ಕೈಕಟ್ಟಿ ಪ್ರಭಾವಿ ನಿರ್ದೇಶಕರು ಮತ್ತು ಕೆಲವೇ ಸಿಬ್ಬಂದಿ ಆಟವಾಡಿಸುತ್ತಿದ್ದರೆ ಅಧ್ಯಕ್ಷರ ಬೆಂಬಲಕ್ಕೆ ನಿಂತು ಅಂತಹ ನಿರ್ದೇಶಕರಿಗೆ ಮತ್ತು ಸಿಬ್ಬಂದಿಗಳಿಗೆ ಎಚ್ಚರಿಕೆ ರವಾನಿಸಬಹುದು. ಸರ್ವ ಸದಸ್ಯರ ಸಹಕಾರದಿಂದ ಹಿಂದಿನ ಆಡಳಿತ ಮಂಡಳಿಗಳು ಮತ್ತು ಸಿಬ್ಬಂದಿ ವರ್ಗ ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಕೆಲವು ಹೆಗ್ಗಣಗಳು ತಿಂದು ತೇಗುವುದನ್ನು ತಡೆದರೆ ಸಂಸ್ಥೆ ನಮ್ಮ ಹೆಮ್ಮೆಯಾಗಿ ಚಿರಂತನ ಬಾಳಬಹುದು. ನಮ್ಮ ಸಮಾಜದ, ಪರಿಸರದ ಏಳುಬೀಳುಗಳಲ್ಲಿ ಆಧಾರವಾಗಿ ನಮ್ಮನ್ನೆಲ್ಲ ಮುನ್ನಡೆಸಬಹುದು.

 ಶಂ. ನಾ. ಖಂಡಿಗೆ

ಶಂ. ನಾ. ಖಂಡಿಗೆ

ಶ್ಯಾಮಕೃಪಾ ನಾಗೋಡಿ

ಅಂಚೆ : ಪೆರ್ಲ- ೬೭೧೫೫೨

ಕಾಸರಗೋಡು ಜಿಲ್ಲೆ. 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More