* ಭಾರತದ ಡೈರಿ ಚಳವಳಿಯ ನೈಜ ಕಥೆಯಾಧರಿಸಿದ ಸಿನಿಮಾ
* 1976ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಐದು ಲಕ್ಷ ರೈತರೇ ಪ್ರೊಡ್ಯೂಸರ್ಸ್
* ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು ಅನಂತ್‌ನಾಗ್, ಗಿರೀಶ್ ಕಾರ್ನಾಡ್
* ದೇಶದ ಡೈರಿ ಚಳವಳಿಯ ದಿಕ್ಕನ್ನೇ ಬದಲಿಸಿತ್ತು ಮಂಥನ್.
ಸಹಕಾರ ಕ್ಷೇತ್ರ ಇಂದು ಎಲ್ಲ ವಲಯಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಹಣಕಾಸು, ಆರ್ಥಿಕ ವ್ಯವಹಾರ, ಕೃಷಿ, ಮೀನಗಾರಿಕೆ, ಉದ್ಯಮ, ಹೈನುಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಸಹಕಾರಿಗಳು ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು ಎಂಬ ವಿಷಯ ಅನೇಕರಿಗೆ ತಿಳಿದಿಲ್ಲ.
ಇಂದು ಆರೋಗ್ಯ, ವಿದ್ಯಾಭ್ಯಾಸ, ಬಡವರ ಮನೆ ನಿರ್ಮಾಣಗಳಿಗೆ ಕ್ರೌಡ್‌ಫಂಡಿಂಗ್ ಸಾಮಾನ್ಯವಾಗಿದೆ. ಸಿನಿಮಾಕ್ಕೂ ಕ್ರೌಡ್‌ಫಂಡಿಂಗ್ ಮಾಡಲಾಗಿತ್ತು ಎಂಬುದು ಬಹಳ ಹಿಂದಿನ ಅಂದರೆ 48 ವರ್ಷಗಳ ಹಿಂದಿನ ಮಾತು. ದೇಶದ ಮೊದಲ ಕ್ರೌಡ್‌ಫಂಡಿಂಗ್ ಸಿನಿಮಾ ಎನಿಸಿರುವ ಶ್ಯಾಮ್ ಬೆನಗಲ್ ನಿರ್ದೇಶನದ “ಮಂಥನ್ʼʼ ಸಿನಿಮಾವನ್ನು ಕ್ರೌಡ್‌ಫಂಡಿಂಗ್ ಮೂಲಕವೇ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಐದು ಲಕ್ಷ ರೈತರು ಹಣ ತೊಡಗಿಸಿದ್ದು ಅವರೆಲ್ಲರೂ ಸಹಕಾರ ಕ್ಷೇತ್ರಕ್ಕೆ ಸೇರಿದವರು ಎಂಬುದು ಕುತೂಹಲಕಾರಿ ವಿಷಯ.
1976ರಲ್ಲಿ ಬಿಡುಗಡೆಯಾದ ಮಂಥನ್ ಹಿಂದಿ ಸಿನಿಮಾ ಭಾರತದ ಡೈರಿ ಚಳವಳಿಯ ನೈಜ ಕಥೆಯನ್ನು ಆಧರಿಸಿದ್ದು, ದೇಶದ ಮಿಲ್ಕ್‌ಮ್ಯಾನ್ ಎಂಬ ಖ್ಯಾತಿ ಪಡೆದಿದ್ದ ಕ್ಷೀರ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಅವರ ಬಗ್ಗೆ ಬೆಳಕು ಚೆಲ್ಲಿತ್ತು. ಕರ್ನಾಟಕದ ಈಗಿನ ಹಿರಿಯ ನಟ ಅನಂತ್‌ನಾಗ್, ಗಿರೀಶ್ ಪಾಟೀಲ್, ಬಾಲಿವುಡ್ ಪ್ರಮುಖ ನಟರಾದ ನಾಸಿರುದ್ದೀನ್ ಶಾ , ಸ್ಮಿತಾ ಪಾಟೀಲ್ ಮತ್ತು ಅಮರೀಶ್ ಪುರಿ ಪ್ರಮುಖ ಪಾತ್ರದಲ್ಲಿದ್ದರು.
ಚಿತ್ರ ನಿರ್ಮಾಣದ ಹಾದಿ ಬಹಳ ಕುತೂಹಲಕಾರಿಯಾಗಿತ್ತು. ಇದಕ್ಕಾಗಿ ಒಂದು ಸಣ್ಣ ಆಂದೋಲನ ನಡೆದಿದ್ದು, ಅದರಡಿಯಲ್ಲಿ, ಸಣ್ಣ ರೈತರು ಗುಜರಾತಿನ ಹಾಲು ಸಂಗ್ರಹಣಾ ಕೇಂದ್ರಗಳಿಗೆ ಬೆಳಳಗ್ಗೆ ಮತ್ತು ಸಂಜೆ ಹಾಲು ಮಾರಾಟ ಮಾಡಿದರು. ನಂತರ ಅದನ್ನು ಬೆಣ್ಣೆ ಮತ್ತು ಇತರ ಉತ್ಪನ್ನಗಳಾಗಿ ಸಂಸ್ಕರಿಸಲು ಡೈರಿಗಳಿಗೆ ಸಾಗಿಸಲಾಯಿತು. ಈ ಸಂಗ್ರಹಣಾ ಕೇಂದ್ರಗಳಿಂದ ಪ್ರತಿ ರೈತರಿಗೆ ನೀಡುವ ಹಣದಲ್ಲಿ ಎರಡು ರೂಪಾಯಿ ಕಡಿತ ಮಾಡುವಂತೆ ವರ್ಗೀಸ್ ಕುರಿಯನ್ ಸೂಚಿಸಿದರು. ತಮ್ಮದೇ ಚಲನಚಿತ್ರ ಎಂಬ ಕಾರಣಕ್ಕಾಗಿ ರೈತರು ಕೂಡ ಅದಕ್ಕೆ ಒಪ್ಪಿಕೊಂಡರು. ಅಂದರೆ ಆ ರೈತರೆಲ್ಲರೂ ಚಲನಚಿತ್ರದಲ್ಲಿ ನಿರ್ಮಾಪಕರೆನಿಸಿದರು. ರೈತರ ಈ ಸಂಖ್ಯೆ ಐದು ಲಕ್ಷ.! ಗುಜರಾತ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾಕ್ಕೆ ಅದ್ಭುತ ಬೆಂಬಲ ಲಭಿಸಿತು. ಏಕೆಂದರೆ ಹೆಚ್ಚಿನ ಪ್ರೇಕ್ಷಕರು ರೈತರು ಅಂದರೆ ಈ ಸಿನಿಮಾದ ನಿರ್ಮಾಪಕರೇ ಆಗಿದ್ದರು. ಸಿನಿಮಾದ ಯಶಸ್ಸು ಹೇಗಿತ್ತೆಂದರೆ ಈ ಚಿತ್ರ ನೋಡಲು ಟ್ರಕ್ ಲೋಡ್‌ಗಳಲ್ಲಿ ಜನ ಬರುತ್ತಿದ್ದರಂತೆ!
ಮಂಥನ್ ಚಿತ್ರ ಮಾಡಿದ ಸಂದರ್ಭ ನಾಸಿರುದ್ದೀನ್ ಶಾ ಸಿನಿಮಾ ಜಗತ್ತಿಗೆ ಹೊಸಬರು. ಗಿರೀಶ್ ಕಾರ್ನಾಡ್ ಉನ್ನತ ನಟರಾಗಿದ್ದರು. ಅನಂತ್‌ನಾಗ್ ಕನ್ನಡ ಚಿತ್ರರಂಗದಲ್ಲಿ ಮೇರುನಟನಾಗಿ ಬೆಳೆಯುತ್ತಿದ್ದರು. ಅಮರೀಶ್ ಪುರಿ ನೆಗೆಟಿವ್ ಪಾತ್ರದಲ್ಲಿ ಹೆಸರು ಮಾಡುತ್ತಿದ್ದರು. ಹಳ್ಳಿಯ ಮಹಿಳೆಯರನ್ನು ಪ್ರತಿನಿಧಿಸುವ ಪಾತ್ರದಲ್ಲಿ ಸ್ಮಿತಾ ಪಾಟೀಲ್ ಕಾಣಿಸಿಕೊಂಡಿದ್ದರು. ಚಿತ್ರದ ಸಂಭಾಷಣೆ ಕೈಫಿ ಅಜ್ಮಿ, ಚಿತ್ರಕಥೆ ವರ್ಗೀಸ್ ಕುರಿಯನ್ ಮತ್ತು ಶ್ಯಾಮ್ ಬೆನಗಲ್ ಬರೆದಿದ್ದರು. ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಕಂಪೆನಿ ಹೆಸರಲ್ಲಿ ಚಿತ್ರ ನಿರ್ಮಾಣವಾಗಿದ್ದು, ವನರಾಜ್ ಭಾಟಿಯಾ ಸಂಗೀತ ನಿರ್ದೇಶಿಸಿದ್ದರು. ಫಿಲ್ಮ್ ಫೇರ್ ಇದರ ಶೀಷೀಕೆ ಗೀತೆಗೆ ಪ್ರೀತಿ ಸಾಗರ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ಎರಡು ಗಂಟೆ 14 ನಿಮಿಷಗಳ ಸಿನಿಮಾವು ಡೈರಿ ಸಹಕಾರ ಚಳವಳಿಯ ಮೇಲೆ ಬೆಳಕು ಚೆಲ್ಲಿತ್ತು. ಈ ಆಂದೋಲನವು ಭಾರತವನ್ನು ಹಾಲಿನ ಕೊರತೆಯ ದೇಶದಿಂದ ವಿಶ್ವದ ಅಗ್ರ ಹಾಲು ಉತ್ಪಾದಕ ರಾಷ್ಟ್ರವಾಗಿ ಪರಿವರ್ತಿಸಿತು.
ಮೋಹನ್ ದಾಸ್ ಮರಕಡ
ಸಹಕಾರ ಸ್ಪಂದನ