ಕಿರು ಹಣಕಾಸು (ಮೈಕ್ರೊ ಫೈನಾನ್ಸ್ ) ಸಹಕಾರ- ಸವಾಲು.| ಶ್ರೀ.ಶಶಿಧರ. ಎಲೆ.

ಕಿರು ಹಣಕಾಸು  ಈಗ  ಸುದ್ದಿಯಲ್ಲಿದೆ. ಸುದ್ದಿಯಾಗಲು ಕಾರಣ , ಬ್ಯಾಂಕಿಂಗ್ ಯೇತರ  ಹಣಕಾಸು  ಕಂಪನಿಗಳು ಮತ್ತು ಸಂಸ್ಥೆಗಳು  ಸಾಲ  ವಸೂಲಾತಿಗೆ  ಅನುಸರಿಸುತ್ತಿರುವ  ಬಲವಂತದ  ಕ್ರಮಗಳು. ಇದುವರೆಗೆ ಕರ್ನಾಟಕದಲ್ಲಿ ಕಂಡರಿಯದ  ಪರಿಸ್ಥಿತಿ  ನಿರ್ಮಾಣವಾಗಿದೆ. ಹಿಂದೆ  ಆಂಧ್ರಪದೇಶದಲ್ಲಿ  ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಖಾಸಗಿ ಸಂಸ್ಥೆಗಳು ಲಾಭವನ್ನೇ ಗುರಿಯಾಗಿಸಿಕೊಂಡು  ಕಾರ್ಯವೆಸಗುತ್ತದೆ  ಎಂಬುದು ಇದರಿಂದ  ಮತ್ತೊಮ್ಮೆ ಸಾಬೀತಾಗಿದೆ. ಅತಿಯಾಗಿ ವಿಧಿಸುವ ಬಡ್ಡಿದ್ದರ , ಸಾಲ  ಪಡೆಯುವ  ಶಕ್ತಿ  ಮಿಾರಿ  ಬಲವಂತದ  ಅತಿ  ಹೆಚ್ಚಿನ ಸಾಲವಿತರಣೆ. ಸಾಲ  ಬಳಕೆಯ  ಉದ್ದೇಶ  ಉತ್ಪಾದಕತೆಯಲ್ಲಿ  ತೊಡಗದಿರುವುದು. ಈ  ಕಾರಣಗಳಿಂದ  ಸಾಲಗಾರರು  ಸಾಲ ಮರುಪಾವತಿಸಲು  ಸಾಧ್ಯವಾಗುತ್ತಿಲ್ಲ. ಸಾಲ  ಮರುಪಾವತಿಸಿದವರು  ಶೋಷಣೆಗೆ  ಒಳಗಾಗಿರುತ್ತಾರೆ. ಈ  ಸನ್ನಿವೇಶ  ನಿರ್ಮಾಣದ  ಹಿನ್ನೆಲೆಯ  ವಿಮರ್ಶೆಗೆ  ಇದು  ಸಕಾಲ.

ಇತಿಹಾಸ : ಕಿರು ಹಣಕಾಸು  ಎಂದರೇನು? ಇದರ  ಉಗಮ ಹೇಗೆ  ಆಯಿತು? ಎಂಬ  ಕುತೂಹಲ ಎಲ್ಲರಲ್ಲೂ ಮೂಡಿಸುತ್ತದೆ. ಈ ಪರಿಕಲ್ಪನೆಗೆ  ಕಾರಣರಾದವರು   ಡಾ. ಮಹಮದ್  ಯುನೂಸ್  ಆರ್ಥಿಕ  ತಜ್ಞರು. ( ಈಗ  ಇವರು  ಸುದ್ದಿಯಲಿದ್ದಾರೆ, ಕಾರಣ  ಹಾಲಿ  ಬ್ಲಾಂಗ್ಲಾ ದೇಶದ  ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.) ಬಾಂಗ್ಲ ದೇಶದಲ್ಲಿ  ಬಡತನ  ನಿರ್ಮೂಲನೆಗೆ ಅವರು ಕಂಡುಹಿಡಿದ  ಮಾರ್ಗ  ‘ ಗುಂಪು ‘ ರಚನೆ ಮಾಡಿ  ಗುಂಪಿಗೆ  ಸಾಲ  ನೀಡುವುದು.  ಅದಕ್ಕಾಗಿ  ಗ್ರಾಮೀಣ  ಬ್ಯಾಂಕ್ ಗಳ  ರಚನೆ ಮಾಡಿದರು. ಈ  ಬ್ಯಾಂಕ್ ಗಳ  ಮೂಲಕ  ‘ ಗುಂಪು’ಗಳ  ರಚನೆ ಮಾಡಿ  ಗುಂಪುಗಳಿಗೆ  ಸಾಲವನ್ನು  ನೀಡಿದರು.  ಈ ಸಾಲಕ್ಕೆ ಯಾವುದೇ  ‘ಖಾತ್ರಿ’ ಅಥವ  ‘ಭದ್ರತೆ’ ಇಲ್ಲ.  ‘ಸಾಲ’ ಅಥವ ‘ಪತ್ತು’ ಅಥವ ‘ಕ್ರೆಡಿಟ್”ಎಂದರೆ ‘ನಂಬಿಕೆ ‘ ಎಂತಹ ನಂಬಿಕೆ  ಎಂದರೆ  ಪಡೆದ  ಹಣವನ್ನು  ಬಡ್ಡಿ ಸಹಿತ  ಮರುಪಾವತಿಸುತ್ತಾರೆ  ಎಂಬ  ನಂಬಿಕೆ.’ ಟ್ರಸ್ಟ್ ‘.
ಸಾಲ ವನ್ನು  ಒಬ್ಬ ವ್ಯಕ್ತಿಗೆ  ನೀಡಿದಲ್ಲಿ  ಅದರ  ಬಳಕೆ  ಏರುಪೇರಾಗಬಹುದು, ನಕಾರಾತ್ಮಕ ವಾಗಬಹುದು ಆದರೆ  ‘ಗುಂಪು’ ಗೆ  ಸಾಲ  ನೀಡಿದಾಗ   ಅದು  ಸಕಾರಾತ್ಮಕ  ವಾಗಿ  ಉಪಯೋಗವಾಗುತ್ತದೆ. ಗುಂಪು ಸಕಾರಾತ್ಮಕವಾಗಿ  ವರ್ತಿಸುತ್ತದೆ. ಒಬ್ಬ  ವ್ಯಕ್ತಿ  ಒಬ್ಬರೇ  ಇದ್ದಾಗ  ಅವರ  ಆಲೋಚನೆ , ವರ್ತನೆ  ಗೂ  ‘ಗುಂಪು’ ನಲ್ಲಿದ್ದಾಗಿನ  ತನ್ನ ವರ್ತನೆಗೂ  ವ್ಯತ್ಯಾಸ  ವಿರುತ್ತದೆ. ಗುಂಪಿನಲ್ಲಿ  ಸಕಾರಾತ್ಮಕ  ಚಿಂತನೆಗಳು  ಮೇಲ್ಪಂಕ್ತಿಗಳನ್ನು   ಪಡೆಯುತ್ತದೆ. ಗುಂಪು  ಸಕಾರಾತ್ಮಕ  ತೀರ್ಮಾನಗಳನ್ನು  ತೆಗೆದುಕೊಳ್ಳುತ್ತದೆ. ಸಾಲದ  ಸದುಪಯೋಗವಾಗುತ್ತದೆ. ಸಾಲ  ಸಕಾಲದಲ್ಲಿ  ಮರುಪಾವತಿಸಲು  ಕ್ರಮವಹಿಸುತ್ತಾರೆ. ಆದುದರಿಂದ
ಗುಂಪು  ಸಾಲಗಳ  ವಿತರಣೆ  ಮತ್ತು  ಸಾಲ  ಮರುಪಾವತಿ  ವಿಧಾನವನ್ನು  ಡಾ. ಮಹಮದ್ ಯುನೂಸ್ ರವರು  ಜಗತ್ತಿಗೆ  ಪರಿಚಯಿಸಿದರು. ‘The Poor  are also  bankable ‘ ಬಡ ಜನತೆಯೂ  ಬ್ಯಾಂಕಿಂಗ್ ಗೆ ಯೋಗ್ಯರು  ಎಂಬುದು  ಅವರ  ಉಕ್ತಿ. ಎಂದರೆ  ಠೇವಣಿಯನ್ನು  ಒದಗಿಸಬಲ್ಲರು  ಸಾಲಗಳನ್ನು ಉತ್ಪಾನೆಯಲ್ಲಿ  ಬಳಸಿ  ಬಡ್ಡಿ ಸಹಿತ  ಹಿಂತಿರುಗಿಸಬಲ್ಲರು.  ಬಾಂಗ್ಲ ದೇಶದಲ್ಲಿ  ಇವರು ಮಾಡಿದ  ಈ  ಪ್ರಯೋಗ ಜಗತ್ತಿನ  ಗಮನ ಸೆಳೆಯಿತು. ಬಡತನ  ನಿರ್ಮೂಲನೆ , ಆರ್ಥಿಕ  ಪ್ರಗತಿಯಿಂದ  ಶಾಂತಿ  ನಿರ್ಮಾಣ  ಸಾಧ್ಯ. ಹೀಗಾಗಿ  ಇವರಿಗೆ 2006  ರ  ನೊಬೆಲ್  ಶಾಂತಿ  ಪ್ರಶಸ್ತಿ  ದೊರೆಯಿತು.

ಸ್ವಸಹಾಯ ಗುಂಪುಗಳು : ಬಾಂಗ್ಲದೇಶದಲ್ಲಿ  ರಚನೆಯಾದ  ಗುಂಪುಗಳು  ಸಾಲ  ಕೇಂದ್ರಿತ  ಗುಂಪುಗಳು. ಎಂದರೆ  ಗುಂಪು ರಚನೆಯ  ಉದ್ದೇಶವೇ ಸಾಲವನ್ನು  ಪಡೆಯುವುದು ಮತ್ತು  ಸಾಲವನ್ನು  ಮರುಪಾವತಿ ಮಾಡುವುದು. ಬಾಂಗ್ಲದೇಶದ  ಈ ಯಶಸ್ಸು  ಕಂಡ  ಭಾರತ  ಇದನ್ನು  ಅಧ್ಯಯನ ಮಾಡಿ  ಭಾರತದಲ್ಲಿಯೂ  ಅನುಕರಿಸಲು  ಬಯಸಿತು. ಈ ಕಾರಣಕ್ಕೆ  ನಬಾರ್ಡ್ ಬಾಂಗ್ಲ ದೇಶದಲ್ಲಿ  ಅಧ್ಯಯನ ಮಾಡಿ  ಭಾರತದಲ್ಲಿ  ಅದನ್ನು  ಯಥಾ ತಥಾ  ಅನುಷ್ಠಾನ ಗೊಳಿಸಲಿಲ್ಲ. ಭಾರತದಲ್ಲಿ  ‘ ಉಳಿತಾಯ’ ಕ್ಕೆ  ಪ್ರಾಮುಖ್ಯತೆ ಇದೆ. ಭವಿಷ್ಯಕ್ಕಾಗಿ ‘ ಗಳಿಸಿದ್ದರಲ್ಲಿ  ಉಳಿಸುವುದು ‘ ಭಾರತೀಯರ, ಗ್ರಾಮೀಣ ಜನತೆಯ  ಅದರಲ್ಲಿಯೂ  ಮುಖ್ಯವಾಗಿ  ‘ಮಹಿಳೆಯರ’ ಸ್ವಭಾವ. ಇದು  ನಮ್ಮ  ಸಂಸ್ಕೃತಿಯಲ್ಲಿಯೇ ಅಡಕವಾಗಿದೆ. ಇದನ್ನು  ಮನಗಂಡ ನಬಾರ್ಡ್  ‘ಉಳಿತಾಯ  ಕೇಂದ್ರಿತ ಗುಂಪು ‘ ರಚನೆಗೆ ಶಿಫಾರಸ್ಸು  ಮಾಡಿತು.
ಇದಕ್ಕೆ ‘ ಸ್ವಸಹಾಯ ಗುಂಪು ‘ ಎಂದು  ಕರೆಯಲಾಯಿತು. (Self Help  Group- SHG ). ಈ  ಗುಂಪುಗಳ ರಚನೆಯಲ್ಲಿ  ‘ಸರ್ಕಾರೇತರ  ಸಂಸ್ಥೆಗಳು ‘ ಪರಿಣತಿಯನ್ನು  ಪಡೆದು  ಗುಂಪುಗಳ  ರಚನೆಯಲ್ಲಿ  ತೊಡಗಿಸಿಕೊಂಡವು. ಕರ್ನಾಟಕದಲ್ಲಿ  ‘ಮೈರಾಡ (MYRADA)’ ಎಸ್. ಕೆ. ಆರ್ . ಡಿ. ಎಸ್ (ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮೀಣ  ಅಭಿವೃದ್ಧಿ ಸಂಸ್ಥೆ) ಅಲ್ಲದೆ ಇದೇ ತರಹೆಯ  ಇತರೆ ಸಂಸ್ಥೆಗಳು ಪ್ರಮುಖ  ಪಾತ್ರ  ನಿರ್ವಹಿಸಿದವು. ಇವು  ಕೆಲವೊಂದು  ಅಲಿಖಿತ  ಸ್ಪಷ್ಟ ನಿಯಮಗಳನ್ನು ರೂಢಿಗೆ  ತಂದವು. ಇದರಿಂದಾಗಿ  ಈ  ಗುಂಪುಗಳು ಯಶಸ್ವಿಯಾಗಿ  ಕಾರ್ಯನಿರ್ವಹಣೆ  ಮಾಡಲು  ಸಾಧ್ಯವಾಯಿತು. ಈ ನಿಯಮಗಳು ಈಗಾಗಲೆ ‘ಸಹಕಾರ  ಸಂಘಗಳಲ್ಲಿ  ‘ಅಳವಡಿಸಿಕೊಂಡ  ನಿಯಮಗಳೇ  /ತತ್ವ ಗಳೇ  ಆಗಿದ್ದವು. ಆದರೂ  ಅಲ್ಪಬದಲಾವಣೆಗಳೊಡನೆ ಅತ್ಯುತ್ತಮ  ಅನುಷ್ಠಾನವು  ಯಶಸ್ಸಿಗೆ  ಕಾರಣವಾಯಿತು.

ಭಾರತೀಯ  ರಿಸಮ್ ಬ್ಯಾಂಕ್ ನ  ಸುತ್ತೋಲೆ: 1991 ರಲ್ಲಿ  ಆರ್. ಬಿ. ಐ. ನವರು ತಮ್ಮ ಮೊದಲ  ಸುತ್ತೋಲೆಯನ್ನು  ಹೊರಡಿಸಿರುತ್ತಾರೆ. ಸ್ವ. ಸ.ಗುಂ. ನೊಂದಣಿ  ಯಾಗುವ  ಅವಶ್ಯಕತೆಯಿಲ್ಲ. ಗುಂಪಿನ ಸದಸ್ಯ ಸಂಖ್ಯೆ 15- 20 ರ  ಒಳಗೆ ಇರತಕ್ಕದ್ದು. ಗುಂಪು ಒಂದು  ಹೆಸರು ,ಒಂದು  ಮೊಹರು  ಹೊಂದಿರಬೇಕು. ತಮ್ಮ  ಪ್ರತಿನಿಧಿಗಳು (ಒಂದು ಮತ್ತು ಎರಡು ) ಆಯ್ಕೆ ಮಾಡಿಕೊಂಡಿರಬೇಕು. ನಿಗದಿತ ಸಮಯಕ್ಕೆ
ನಿಗದಿತ  ಸ್ಥಳದಲ್ಲಿ  ಸಭೆ ಸೇರಬೇಕು. ಸಭೆಯ ಎಲ್ಲ  ನಡುವಳಿಕೆಗಳು  ನಡವಳಿಕೆ  ಪುಸ್ತಕದಲ್ಲಿ  ದಾಖಲಾಗಬೇಕು. ಬ್ಯಾಂಕ್ ಗುಂಪಿನ  ಖಾತೆ ತೆರೆಯಲು  ಅವಕಾಶ  ನೀಡಬೇಕು. ಗುಂಪಿನ  ಉಳಿತಾಯ ವನ್ನು ಈ ಖಾತೆಯಲ್ಲಿ  ಇರಿಸಲು  , ಹಿಂತೆಗೆಯಲು ಪ್ರತಿ ನಿಧಿಗಳಿಗೆ  ನಡುವಳಿಕೆ ಮೂಲಕ ಗುಂಪು  ಅನುಮತಿಸಬೇಕು. ಗುಂಪು  ಕನಿಷ್ಟ ಆರು ತಿಂಗಳು ಕಾರ್ಯನಿರ್ವಹಿಸಿ ಫಲಿತಗೊಂಡ ನಂತರ  ಅದರ  ‘ನಿಧಿ’ ಆಧಾರಿತವಾಗಿ  ಬ್ಯಾಂಕ್  ಗುಂಪಿಗೆ  ಸಾಲ  ಒದಗಿಸುವುದು.
ಸ್ವಸಹಾಯ ಗುಂಪು  ರಚನೆ ಮತ್ತು ಕಾರ್ಯಾಚರಣೆ: ಗುಂಪು ರಚನೆ ಯನ್ನು ಮತ್ತು ಅದರ ಕಾರ್ಯಾಚರಣೆಯ  ಮೇಲ್ವಿಚಾರಣೆಯನ್ನು  ಎನ್. ಜಿ. ಓ ಗಳ  ಕಾರ್ಯಕರ್ತರುಗಳು  ವಹಿಸಿಕೊಳ್ಳುತ್ತಾರೆ.‌ ಸಮಾನ  ಮನಸ್ಕ, ಆದಷ್ಟು ಸಮಾನ  ಆಧಾಯವುಳ್ಳ , ಬೇರೆ  ಬೇರೆ  ಕುಟುಂಬದ ಸದಸ್ಯರು, ಮಹಿಳೆಯರು, ಮಹಿಳೆಯರು  ಮತ್ತು ಪುರುಷರು, ಪುರುಷರು ಗಳ  15 – 20 ಸದಸ್ಯರ  ಗುಂಪನ್ನು  ರಚಿಸುವುದು.
ಅದರಲ್ಲಿ ಅಕ್ಷರಸ್ತರನ್ನ  ಪುಸ್ತಕಗಳ  ನಿರ್ವಹಣೆಗೆ  ಸುಜ್ಜು ಗೊಳಿಸುವುದು. ಗುಂಪಿನಲ್ಲಿ  ಗುಂಪು ಒಬ್ಬರನ್ನು ಪ್ರತಿನಿಧಿ -(1) ಮತ್ತೊಬ್ಬರನ್ನು ಪ್ರತಿನಿಧಿ – (2) ಎಂದು ಆರಿಸುವುದು. ( ಸಹಕಾರ  ಸಂಘಗಳ  ಸಿದ್ಧ ಮಾದರಿಯಾಗಿದ್ದ  ಅಧ್ಯಕ್ಷರು , ಕಾರ್ಯದರ್ಶಿ ಬದಲಾಗಿ) ಇವರಿಗೆ  ಟ್ಯಾಂಕಿನ  ಖಾತೆ ತೆರೆದು  ವ್ಯವಹರಿಸಲು  ಅಧಿಕಾರ  ನೀಡುವುದು. ಸಭೆಯನ್ನು ನಡೆಸಲು  ಎಲ್ಲರಿಗೂ  ಅನುಕೂಲಕರ  ಸ್ಥಳದಲ್ಲಿ  ನಿಗದಿತ  ದಿನ
ಮತ್ತು ನಿಗದಿತ ಸಮಯದಲ್ಲಿ ಕಡ್ಡಾಯವಾಗಿ  ನಡೆಸಲೇಬೇಕು. ಸಭೆಯಲ್ಲಿ  ನಿಗದಿತ  ಕಾರ್ಯಸೂಚಿಯನ್ನು  ಕ್ರಮಬದ್ಧವಾಗಿ  ತೀರ್ಮಾನಗಳನ್ನು  ತೆಗೆದುಕೊಂಡು ಎಲ್ಲವನ್ನೂ  ನಡೆವಳಿಕೆ ಪುಸ್ತಕದಲ್ಲಿ  ದಾಖಲು ಮಾಡುವುದು. ಸಭೆಯ  ಅಧ್ಯಕ್ಷತೆಯನ್ನು  ಸಭೆಯಲ್ಲಿರುವ  ಸದಸ್ಯರು  ಒಬ್ಬರು  ಸರತಿಯಂತೆ  ಅಧ್ಯಕ್ಷತೆ ವಹಿಸಿಕೊಳ್ಳುವುದು. ಪ್ರತಿನಿಧಿಗಳನ್ನು  ಪ್ರತಿ ಆರು  ತಿಂಗಳಿಗೊಮ್ಮೆ  ಬದಲಾವಣೆ ಮಾಡುವುದು. ಸಭೆಯ
ಕಾರ್ಯಸೂಚಿ ಈ  ಮುಂದಿನ  ತರಹೆಯಲ್ಲಿ  ಇರುತ್ತದೆ . ಇದನ್ನು ನಡೆಸಿಕೊಡುವವರು ಕೂಡ  ಸರತಿಯಂತೆ  ಬದಲಾವಣೆಯಾಗಬೇಕು. ಸಭೆ  ನಡೆಸುವಾಗ  ಸದಸ್ಯರು  ವೃತ್ತಾಕಾರದಲ್ಲಿ  ಕೂಡುವುದು. ಇದರಿಂದ ಒಬ್ಬರ ಮುಖವನ್ನು  ಮತ್ತೊಬ್ಬರು  ನೇರವಾಗಿ  ನೋಡಿಕೊಂಡು  ಸಂಭಾಷಿಸಬಹುದಾಗಿದೆ. ಇಲ್ಲಿ ಎಲ್ಲರೂ  ಸಮಾನರು  ಯಾರೂ  ಹೆಚ್ಚು ಅಥವ ಕಡಿಮೆ  ಸಮಾನರಲ್ಲ. ಕಾರ್ಯಸೂಚಿಯಲ್ಲಿ  ಕ್ರಮವಾಗಿ  ಪ್ರಾರ್ಥನೆ, ಸ್ವಾಗತ, ಉಳಿತಾಯ, ಸಾಲ ವಸೂಲಿ, ಸಾಲ  ವಿತರಣೆ , ಇತರೆ  ಚಟುವಟಿಕೆ, (ಉತ್ಪಾದನೆ, ಸಾಮಾಜಿಕ  ಅಥವ  ಸಾಂಸ್ಕೃತಿಕ ) ಇತರೆ ವಿಷಯಗಳು , ವಂದಾನರ್ಪಣಿ. ನಡವಳಿಕೆ ಪುಸ್ತಕದಲ್ಲಿ ಎಲ್ಲ ವಿವರ ಸದಸ್ಯವಾರು ದಾಖಲಿಸುವುದು. ನಗದು ಪುಸ್ತಕ ‘ಜನರಲ್ ಲೆಡ್ಜರ್ , ಸದಸ್ಯರ  ಸಾಲಖಾತೆ , ಉಳಿತಾಯ ಖಾತೆಯನ್ನು (ಕನಿಷ್ಟ) ಲೆಕ್ಕಗಳನ್ನು ನಿರ್ವಹಿಸಬೇಕಾಗುತ್ತದೆ. ಸದಸ್ಯರು  ಶಿಸ್ತನ್ನು ಪಾಲಿಸಬೇಕು. ಶಿಸ್ತು ಪಾಲಿಸದಿದ್ದಲ್ಲಿ , ಉಲ್ಲಂಘನೆಯಾದಲ್ಲಿ  ತೆಗೆದುಕೊಳ್ಳಬೇಕಾದ  ಕ್ರಮ ಉದಾ: ದಂಡ ವಿಧಿಸುವಿಕೆ, ಉಚ್ಛಾಟನೆ, ಅಮಾನತ  ,ನಿರ್ಧಾರಗಳನ್ನು ಗುಂಪು ತೆಗೆದುಕೊಳ್ಳುತ್ತದೆ. ಶಿಸ್ತು ಪಾಲನೆ ಎಂದರೆ  ಸಮಯಕ್ಕೆ ಸರಿಯಾಗಿ  ಸಭೆಗೆ  ಹಾಜರಾಗುವುದು. ನಿಗದಿತ  ಉಳಿತಾಯ  ಸಂದಾಯ  ಮಾಡುವುದು, ಸಾಲ  ತೆಗೆದುಕೊಂಡಿದ್ದಲ್ಲಿ  ನಿಗದಿತ ಬಡ್ಡಿ ಧರದಲ್ಲಿ  ಕಂತು  ಮರುಪಾವತಿಸುವುದು. ಉಳಿತಾಯ  ಮೊತ್ತ , ಸಾಲ ಪ್ರಮಾಣ ಉದ್ದೇಶ , ಕಂತು  ಇವುಗಳನ್ನು  (Loan appraisal ) ಗುಂಪೇ  ಮಾಡುತ್ತದೆ. ಆರಂಭಿಕವಾಗಿ  ಸಾಲಗಳು  ಬಳಕೆ ಉದ್ದೇಶಗಳು ( ಹಿಂದಿನ  ಇತರೆಡೆ  ಸಾಲ ತೀರಿಸಲು, ದಿನಬಳಕೆ ವಸ್ತು ಖರೀದಿಸಲು, ಮಕ್ಕಳ  ಶಾಲ ಶುಲ್ಕ  ಪಾವತಿಸಲು  ಇತರೆ  ಉಪಯೋಗಿಸ್ಪಾಟ್ಟರೆ  ಕಾಲಕ್ರಮೇಣ  ಉತ್ಪಾದನೆ  ಚಟುವಟಿಕೆಗೆ ಬಳಕೆಯಾಗುತ್ತದೆ  ಕೋಳಿ, ಕುರಿ, ಮೇಕೆ ಕೊಳ್ಳಲು , ಹೈನುಗಾರಿಕೆ, ರೇಷ್ಮೆ ಇತರೆ  ಚುಟುವಟಿಕೆಗಳಿಗೆ  ಬಳಕೆಯಾಗುತ್ತದೆ.  ಇದು  ಅನುಭವ ವೇದ್ಯ?

ಬ್ಯಾಂಕಿನೊಡನೆ ಸಂಯೋಜನೆ : ಗುಂಪು  ರಚನೆಯಾಗಿ  ಗುಂಪು  ತನ್ನ ಉಳಿತಾಯ ಖಾತೆಯನ್ನು  ಬ್ಯಾಂಕ್/ಸಹಕಾರ  ಸಂಘದಲ್ಲಿ  ತೆರೆಯುತ್ತದೆ. ಗುಂಪಿನ  ಕಾರ್ಯಾಚರಣೆಯನ್ನು  ಬ್ಯಾಂಕ್ / ಸಹಕಾರ ಸಂಘ ಗಮನಿಸುತ್ತಿರುತ್ತದೆ. ಅದು  ಯಶಸ್ವಿಯಾಗಿ  ಕಾರ್ಯನಿರ್ವಹಿಸುತ್ತದ್ದಲ್ಲಿ, ಅದರ  ಉಳಿತಾಯ , ಸಾಲ  ಹೊರಬಾಕಿ , ಸಾಲ ವಸೂಲಾತಿ ಉತ್ತಮವಾಗಿದ್ದಲ್ಲಿ  ಗುಂಪಿನ  ಒಟ್ಟಾರೆ  ‘ ನಿಧಿ’ ಎಂದರೆ ಉಳಿತಾಯ ಮತ್ತು ಸಾಲ ಹೊರಬಾಕಿಗೆ  ಸರಿಸಮ  ಅಥವ  ಎರಡು , ಮೂರು, ನಾಲ್ಕು ಪಟ್ಟು  ಬ್ಯಾಂಕ್/ಸಹಕಾರ  ಸಂಘ  ಸಾಲ ನೀಡುತ್ತದೆ. ಈ  ಸಾಲವನ್ನು  ನಗದು ಪತ್ತಿನ ಮಿತಿ ನಿಗದಿ ಪಡಿಸಲು ಆರ್. ಬಿ. ಐ  ನಿರ್ದೇಶ ನೀಡಿದೆ.
ಗುಂಪು  ತನ್ನ ಸದಸ್ಯರಿಗೆ  ಅವಶ್ಯಕತೆ ಗನುಸಾರ  ಸಾಲ ವಿತರಿಸುತ್ತದೆ. ಸಾಲ ವಸೂಲಾತಿಯ  ಜವಾಬ್ದಾರಿ ಗುಂಪಿನದ್ದಾಗಿರುತ್ತದೆ. ಗುಂಪಿಗೆ  ಸದಸ್ಯರ ಅವಶ್ಯಕತೆ , ನಡುವಳಿಕೆ ಬಗ್ಗೆ  ಅರಿವು ಇರುತ್ತದೆ. ಅದರಂತೆ ಗುಂಪು ಅವರ  ಸಾಲ ಪಡೆಯುವ  ಶಕ್ತಿ ಯನ್ನು  ನಿರ್ಧರಿಸುತ್ತದೆ. ಗುಂಪಿನಲ್ಲಿ  ಒಬ್ಬರಿಗೆ ಮತ್ತೊಬ್ಬರು  ಜವಾಬ್ದಾರವಾಗಿರುವುದರಿಂದ  ಯಾವುದೇ  ಕಾರಣದಿಂದ  ಒಬ್ಬ ಸದಸ್ಯರಿಂದ  ಸಾಲ  ವಸೂಲಾತಿ ಆಗದಿದ್ದಲ್ಲಿ ಗುಂಪು  ಬ್ಯಾಂಕಿಗೆ  / ಸಹಕಾರ  ಸಂಘಕ್ಕೆ  ಸಾಲ  ಮರುಪಾವತಿ  ಮಾಡುತ್ತದೆ. ಹೀಗಾಗಿ  ಬ್ಯಾಂಕ್/ಸಹಕಾರ ಸಂಘಕ್ಕೆ  ಶೇ 100 ಸಾಲ ವಸೂಲಾತಿ ಯಾಗುತ್ತದೆ.
ಉತ್ಪಾದನೆ ಚಟುವಟಿಕೆ : ಈ  ಗುಂಪುಗಳು ಉಳಿತಾಯ ಮತ್ತು  ಸಾಲ  ಚಟುವಟಿಕೆ  ಯಲ್ಲದೆ ಕ್ರಮೇಣ ಉತ್ಪಾದನೆ  ಮತ್ತು  ಮಾರಾಟ ಚಟುವಟಿಕೆಯಲ್ಲಿ  ತೊಡಗಿಕೊಂಡವು. ಅದರಲ್ಲಿಯೂ ಮಹಿಳೆ  ಸ್ವಸ್ಟಹಾಯ ಗುಂಪುಗಳು  ಆಹಾರ  ಉತ್ಪನ್ನಗಳಾದ , ಬಹುಕಾಲ  ಕೆಡದಂತಹ  ಹಪ್ಪಳ, ಉಪ್ಪಿನಕಾಯಿ, ಜೋಳದ ರೊಟ್ಟಿ, ಚಟ್ನಿಪುಡಿ  ಮುಂತಾದವುಗಳನ್ನ  ತಯಾರಿಸಿ ಮಾರಾಟ  ಮಾಡಲು  ಆರಂಭಿಸಿದವು. ಅಲ್ಲದೆ  ಉಡುಪುಗಳ  ತಯಾರಿ, ಅಡಕೆ ಹಾಳೆ ತಟ್ಟೆ, ಇನ್ನಿತರ ವಸ್ತುಗಳ  ತಯಾರಿ ಮಾರಾಟ ಮಾಡುವಲ್ಲಿ ತೊಡಗಿಸಿಕೊಂಡವು.
ತಿರುಗುವಿಕೆ ಪರಣಾಮ (Spin – off  effects ): ಒಂದು  ಗುಂಪು ಒಟ್ಟಿಗೆ  ಸೇರಿದಾಗ  ಅದು ಕೇವಲ ಕಾರ್ಯಸೂಚಿಗೆ  ಸೀಮಿತವಾಗುವುದಿಲ್ಲ. ಅದರಲ್ಲೂ ಮಹಿಳೆಯರ ಗುಂಪು  ಗಳಲ್ಲಿ ತನ್ನ ಕುಟುಂಬ , ನೆರೆಹೊರೆ, ಗ್ರಾಮ ಕ್ಕೆ  ಸಂಬಂಧಿಸಿದ  ವಿಷಯಗಳು , ಸಾಮಾಜಿಕ ಪಿಡುಗುಗಳು, ಸಾಂಸ್ಕೃತಿಕ , ಧಾರ್ಮಿಕ , ರಾಜಕೀಯ ಹೀಗೆ  ಹತ್ತು ಹಲವು  ವಿಷಯಗಳನ್ನು  ಒಳಗೊಳ್ಳುತ್ತದೆ. ಇದರಿಂದ  ಸಕಾರಾತ್ಮಕ  ಪರಿಣಾಮಗಳು  ಸಮಾಜದ  ಆರೋಗ್ಯ ಸುಧಾರಣೆ ತರಬಲ್ಲವು. ಆರ್ಥಿಕ ಬೆಳವಣಿಗೆಗಳ  ಜೊತೆಗೆ ಸಮಾಜ  ಸ್ವಾಸ್ಥತೆ  ನಿರ್ಮಾಣ ಸಾಧ್ಯ.
ಸ್ತ್ರೀ ಶಕ್ತಿ ಸಂಘಗಳು: 90 ರ ದಶಕದಲ್ಲಿ  ಯಶಸ್ವಿಯಾಗಿ  ಬ್ಯಾಂಕ್ ಗಳ  ಜೋಡಣಿ  ಗುಂಪುಗಳ ಗಳ  ಸಾಲಗಳು ಶೇ100ರ  ವಸೂಲಿ ಇವು  ಆಂದೋಲನ, ಚಳುವಳಿ ಸ್ವರೂಪವನ್ನು ಪಡೆಯಿತು. ಇದನ್ನು  ಮನಗಂಡು  2000 ದಶಕದಲ್ಲಿ  ಕರ್ನಾಟಕದಲ್ಲಿ  ಮಹಿಳಾ ಮತ್ತು  ಮಕ್ಕಳ  ಕಲ್ಯಾಣ  ಇಲಾಖೆ  ಮೂಲಕ  ಸರ್ಕಾರದ ಕಾರ್ಯಕ್ರಮ ವಾಗಿ  ರೂಪುಗೊಂಡು ಈ ಇಲಾಖೆ  ಮತ್ತು ಇತರೆ ಇಲಾಖೆಗಳು (ಅಭಿವೃದ್ಧಿ)
ಒಡಗೂಡಿ  ಮಹಿಳಾ  ಸ್ವಸಹಾಯ ಸಂಘಗಳನ್ನು  ಸ್ಥಾಪಿಸಿದವು. ಸ್ವಸಹಾಯ ಸಂಘಗಳು  ಪುರುಷರು, ಮಹಿಳೆಯರು , ಮತ್ತು ಪುರುಷರು  ಮತ್ತು ಮಹಿಳೆಯರು ಮಿಶ್ರ  ಗುಂಪುಗಳು  ರಚನೆಯಾದರೂ  ಅತ್ಯಂತ ಯಶಸ್ವಿಯಾಗಿ  ಗುಂಪು  ನಿಷ್ಕ್ರಿಯವಾಗದೆ  ಸಕ್ರಿಯವಾಗಿ  ಕಾರ್ಯನಿರ್ವಹಿಸಿ  ಯಶಸ್ವಿಯಾಗಿ  ನಿರ್ವಹಿಸಿದ  ಗುಂಪುಗಳೆಂದರೆ  ಮಹಿಳಾ  ಸ್ವ.ಸ. ಗುಂ . ಹೀಗಾಗಿ  ಈ ಚಳುವಳಿ ಮಹಿಳಾ  ಸ್ವ.ಸ. ಗುಂಪುಗಳ  ಚಳುವಳಿಯಾಗಿ  ರೂಪುಗೊಂಡಿತು. ಸರ್ಕಾರವು ಅನುದಾನಗಳನ್ನು  ಕೊಡಲು  ಆರಂಭಿಸಿತು. ಸಬ್ಸಿಡಿ ಸಾಲ  ಯೋಜನೆಗಳನ್ನು  ಆರಂಭಿಸಿತು.

ಸಹಕಾರ  ಮತ್ತು  ಸ್ವ ಸಹಾಯ  ಗುಂಪುಗಳು: ಸಹಕಾರ  ಸಂಘವೇ  ಒಂದು  ಸ್ವಸಹಾಯ ಗುಂಪು, ಸ್ವಸಹಾಯ  ಮತ್ತು  ಪರಸ್ಪರ  ಸಹಾಯ ವೇ  ಸಹಾರದ ದ್ಯೇಯ. ಸಹಕಾರ ಸಂಘ  ಒಂದು  ದೊಡ್ಡ ಸ್ವಸಹಾಯ ಗುಂಪು  ಸಂಖ್ಯೆ  ಅಧಿಕ  ವಾದುದರಿಂದ  ಧ್ಯೆಯ  ಸಾಧನೆಗಾಗಿ  ಒಂದು  ಆಡಳಿತ  ವ್ಯವಸ್ಥೆ ಕಾಯ್ದೆಯಾತ್ಮಕವಾಗಿ  ರೂಪುಗೊಂಡಿದೆ. ಸದಸ್ಯರ  ನಡುವೆ ಆರ್ಥಿಕ , ಸಾಮಾಜಿಕ  ಅಸಾಮಾನತೆ  ಅನಿವಾರ್ಯ. ಆದರೆ
ಸ್ವಸಹಾಯ  ಸಂಘದ  ಕಾರ್ಯಾಚರಣಿಯಲ್ಲಿ  ಇದು  ಸಾಧ್ಯ ಕಾರಣ ಇದರಲ್ಲಿನ  ಸೀಮಿತ  ಸಂಖ್ಯೆ. 90ರ  ದಶಕದ  ಅಂತ್ಯದೊಳಗೆ  ಸಹಕಾರ  ಸಂಘಗಳು  ಮತ್ತು  ಸಹಕಾರ ಬ್ಯಾಂಕ್ ಗಳು  ‘ನಬಾರ್ಡ್’ ನ  ಉತ್ತೇಜನದ  ಮೇರೆಗೆ  ಸ್ವಸಹಾಯ  ಗುಂಪುಗಳ  ರಚನೆಯಲ್ಲಿ  ತೊಡಗಿ ಕೊಂಡಿದ್ದು  ಅವುಗಳಿಗೆ  ಸಾಲಗಳನ್ನು  ನೀಡಲು  ಆರಂಭಿಸಲಾಯಿತು. ಅದರಂತೆ  ಸ್ವ. ಸ. ಸಂ. ಗಳ  ರಚನೆಯಿಂದ  ಸಂಘಗಳಿಗೆ  ಇವುಗಳ
ಉಳಿತಾಯವು  ಠೇವಣಿ  ರೂಪದಲ್ಲಿ  ಸಂಪನ್ಮೂಲವಾಯಿತು. ಸಾಲ ನೀಡುವಿಕೆಯಿಂದ  ಆದಾಯ ಗಳಿಕೆಯ  ಮೂಲವಾಯಿತು. ಅದರಂತೆ  “ವ್ಯಾಪಾರ ಅಭಿವೃದ್ಧಿ  ಯೋಜನೆ”ಯ  ಭಾಗವಾಗಿ  ಯಶಸ್ವಿಯಾಯಿತು.
ಅದರಂತೆ  ಜಿಲ್ಲ ಕೇಂದ್ರ  ಸಹಕಾರ ಬ್ಯಾಂಕ್ ಗಳು  ಈ  ದಿಸೆಯಲ್ಲಿ ಶ್ಲಾಘನೀಯ  ಕಾರ್ಯವೆಸಗಿದವು. ನಬಾರ್ಡ್  ಶೇ100 ಪ್ರವರ್ಧನ ನೀಡಿ  ಪ್ರೊತ್ಸಾಹ , ಅಲ್ಲದೆ  ಜಿ.ಕೆ.ಸ ಬ್ಯಾಂಕ್ ಗಳಿಗೆ  ಉತ್ತೇಜನ  ನೀಡುವ ಸಲುವಾಗಿ  ಪ್ರತ್ಯೇಕ  ನಿಧಿ ಸ್ಥಾಪಿಸಿ  ಅದರಿಂದ  ವ್ಯವಸ್ಥಾಪನ ವೆಚ್ಚ , ಪ್ರೊತ್ಸಾಹ  ಧನ  ನೀಡಿತು. ಸಹಕಾರ ಕಾಯ್ದೆಯಡಿಯಲ್ಲಿ  ತಿದ್ದುಪಡಿ ಮಾಡಿ ಸಹಕಾರ ಸಂಘಗಳಲ್ಲಿ  ಸ್ವ.ಸ.ಗುಂಪುಗಳಿಗೆ  ನಾಮಮಾತ್ರ/ಸದಸ್ಯತ್ವ
ನೀಡಲು  ಅವಕಾಶ  ಕಲ್ಪಿಸಲಾಯಿತು. ಸಾಲ ವಸೂಲಾತಿ  ಶೇ100 ರಷ್ಟು ಆಗುತ್ತಿತ್ತು.

ಬೀದರ್  ಮಾದರಿ: ರಾಷ್ಟ್ರದಲ್ಲಿ  ಬೀದರ್  ಜಿಲ್ಲ ಕೇಂದ್ರ ಸಹಕಾರ  ಬ್ಯಾಂಕ್  ಈ  ವಲಯದಲ್ಲಿ  ಅದ್ಭುತ  ಸಾಧನೆ  ಮಾಡಿತು.  ಆರ್ಥಿಕ  ವಾಗಿ  ಅಲ್ಲದೆ  ಅದರ  ಸಾಮಾಜಿಕ  ಆಯಾಮ, ಮಹಿಳೆಯರ ಸಶಕ್ತತೆಗೆ ಕಾರಣವಾದದ್ದು  ರಾಷ್ಟ್ರಮಟ್ಟದಲ್ಲಿ  ಗಮನ ಸೆಳೆಯಿತು. ಇದನ್ನು ‘ಬೀದರ್ ಮಾದರಿ ‘ಎಂದು ಕರೆಯಲಾಯಿತು. ಉಳಿತಾಯ, ಸಾಲ ಸದುಪಯೋಗ, ಮರುಪಾವತಿ , ಉತ್ಪಾದನೆ  ಚಟುವಟಿಕೆಗಳು, ತರಬೇತಿ  ಮೂಲಕ  ಕೌಶಲ  ಅಭಿವೃದ್ಧಿ, ಸಾಮಾರ್ಥ್ಯಭಿವೃದ್ಧಿ  ಕಾರ್ಯಕ್ರಮಗಳನ್ನು  ಮನಗಂಡು  “ಸಹಾರ್ಧ” ಹೆಸರಿನಲ್ಲಿ ತರಬೇತಿ ಕೇಂದ್ರ (ನಬಾರ್ಡ್ ಸಹಾಯ ದಿಂದ ) ತೆರೆಯಲಾಯಿತು. ಇಲ್ಲಿ ರಾಷ್ಟಾದ್ಯಂತ  ನಬಾರ್ಡ್, ರಾಜ್ಯ ಸಬ್ಯಾಂಕ್, ಜಿ. ಕೇ.ಸ.ಬ್ಯಾಂಕ್ ಅಧಿಕಾರಿಗಳು  ಸಿಬ್ಬಂದಿ  , ಅಧಿಕಾರೇತರರಿಗೆ  ತರಬೇತಿ  ನೀಡಲಾಯಿತು. ಅದರಿಂದ ರಾಷ್ಟ್ರದ್ಯಂತ ಸಹಕಾರ  ವಲಯದಲ್ಲಿ  ಸ್ವಸಹಾಯ  ಗುಂಪು  ಚಳುವಳಿಯು  ಒಳಗೊಳ್ಳಲು  ಸಾಧ್ಯವಾಯಿತು.
ಜಂಟಿ ಭಾದ್ಯತಾ  ಗುಂಪುಗಳು (Joint Liability Groups): ಗುತ್ತಿಗೆ ರೈತರು , ದಾಖಲೆ ರಹಿತ ಭೂಹಿಡುವಳಿ  ದಾರ  ರೈತರು ಇವರಿಗೂ  ಬೆಳೆಸಾಲ (ಕಿಸಾನ್ ಕ್ರೆಡಿಟ್ ಸಾಲ) ಒದಗಿಸಲು  ಅನುವಾಗುವಂತೆ  4-5 ರೈತರ  ಗುಂಪು  ರಚಿಸಿ  ಒಬ್ಬರು ಮತ್ತೊಬ್ಬರಿಗೆ  ಬಾಧ್ಯಸ್ಥ ರಾಗಿ  ಸಾಲ ನೀಡಲು  (2010) ಲು  ನವಾರ್ಡ್  ಪ್ರೊತ್ಸಾಹ ನೀಡಿ  ನಿರ್ದೇಶನಗಳನ್ನು  ನೀಡಿತು.  ಅದರಂತೆ  ಸಹಕಾರ ಸಂಘಗಳಲ್ಲಿ, ಜಿ. ಕೇ. ಸ.ಬ್ಯಾಂಕ್
ಗಳಲ್ಲಿ ಗುಂಪುಗಳನ್ನು  ರಚಿಸಿ  ಸಾಲ  ನೀಡಲು  ಆರಂಭಿಸಲಾಯಿತು. ಇದು  ಚಟುವಟಿಕೆ  ಆಧಾರಿತ ಸಾಲ  ನೀಡುವ  ಗುರಿ ಹೊಂದಿದೆ. ಸಾಲ ಕೇಂದ್ರಿತ ಗುಂಪು ಆದರೂ ಉಳಿತಾಯಕ್ಕೆ  ನಿಷೇದವಿಲ್ಲ. ಈ  ಪ್ರಯೋಗವು  ಮಂಡ್ಯ ಜಿ.ಸ.ಕೇ. ಬ್ಯಾಂಕ್  ನಿಂದ  ಮಂಡ್ಯ ಜಿಲ್ಲೆ  ಯಲ್ಲಿ  ಯಶಸ್ಸು ಪಡೆಯಿತು. ಇಲ್ಲಿ ಉಳಿತಾಯವು  ಇದ್ದು ಚಟುವಟಿಕೆಯು  ವ್ಯವಸಾಯ  ಅಲ್ಲದೇ  ಗ್ರಾಮಗಳಲ್ಲಿನ  ಇತರೆ  ಚಟುವಟಿಕೆಯನ್ನು ಒಳಗೊಂಡು  ಗುಂಪುಗಳು  ರಚನೆಯಾದವು. ಉದಾ: ಕಲ್ಲು ಕುಟಿಕರ, ಮರಗೆಲಸ , ವಿಶ್ರ ಸ್ವ ಉದ್ಯೋಗಿಗಳ  ಉದಾ: ಗಾರೆ ಕೆಲಸ, ಕ್ಷೌರಿಕ, ಎಲೆಕ್ಟ್ರೀಷಿಯನ್, ಕ್ರಿರಾಕ್ಸ್ ಮೆಷಿನ್, ಪಾನಿ ಪೂರಿ ವ್ಯಾಪಾರ, ಬ್ಯೂಟಿಶಿಯನ್ , ದರ್ಜಿ, ಅಕ್ಕಸಾಲಿಗ, ರೇಷ್ಮೆ, ಹೈನುಗಾರಿಕೆ,ಹೀಗೆ  ಹತ್ತು  ಹಲವು  ಚಟುವಟಿಕೆಗಳಲ್ಲಿ  ತೊಡಗಿಕೊಂಡವರು 4-5 ಯುವಜನತೆ(ಪುರುಷರು, ಮಹಿಳೆಯರು )  ಇದರಲ್ಲಿ ಅವರ  ಗೆಳೆತನ ಮುಖ್ಯ ಪಾತ್ರ  (ವೃತ್ತಿಯಲ್ಲ) . ಇಂತಹ   ಗುಂಪು ರಚನೆ ಮಾಡಿ  ಅವರ ವೃತ್ತಿಗೆ  ಬೇಕಾದ  ದುಡಿಯುವ  ಬಂಡವಾಳದ  ಸಾಲ  ಒದಗಿಸಲಾಯಿತು. ಗುಂಪುಗಳು ಅತಿ ಯಶಸ್ವಿಯಾಗಿ  ನಡೆದು  ಸಾಲ ವಸೂಲಾತಿ  ಶೇ 100ರ  ವಸೂಲಾತಿ  ಯಾಯಿತು.  ನಬಾರ್ಡ  ಇದನ್ನು  ‘ಮಂಡ್ಯ ಮಾದರಿ’ ಎಂದು  ಗುರುತಿಸಿತು. ಭಾರತಾದ್ಯಂತ  ನಬಾರ್ಡ , ರಾಜ್ಯ ಸ.ಬ್ಯಾಂಕ್, ಜಿ. ಕೇ. ಸ.ಬ್ಯಾಂಕ್  ಗಳ   ಸಿಬ್ಬಂದಿ  ಮಂಡ್ಯ  ದಲ್ಲಿ  ತರಬೇತಿ  ಪಡೆದರು.
ಇದು  ರಾಷ್ಟ್ರಾದ್ಯಂತ  ಪಸರಿಸಲು  ಕಾರಣವಾಯಿತು. ತಮಿಳನಾಡು  ಮತ್ತು  ಕೇರಳದಲ್ಲಿ  ಯೂ  ವ್ಯವಸಾಯೇತರ  ಚಟುವಟಿಕೆ  ಗುಂಪುಗಳು  ಅತ್ಯಂತ  ಯಶಸ್ವಿಯಾದವು.
ರಾಜ್ಯ  ಸರ್ಕಾರದ  ಸಹಾಯ : ರಾಜ್ಯ  ಸರ್ಕಾರವು  ಸ್ವಸಹಾಯ  ಗುಂಪುಗಳ  ಸಾಲಗಳ  ಮೇಲಿನ  ಬಡ್ಡಿಯನ್ನು  ಭರಿಸಿಕೊಡುತ್ತಿದೆ. ಆದರೆ  ಜಂಟಿ ಬಾಧ್ಯತಾ  ಗುಂಪುಗಳಿಗೆ ಇದನ್ನು  ವಿಸ್ತರಿಸಲಿಲ್ಲ.
 ಈ  ಮೇಲಿನಂತೆ  ಕಿರು ಸಾಲಗಳು  ರಾಷ್ಟ್ರೀಕೃತ  ಬ್ಯಾಂಕುಗಳು ,  ಗ್ರಾಮೀಣ ಬ್ಯಾಂಕ್ ಗಳು  ಮತ್ತು  ಸಹಕಾರ ಬ್ಯಾಂಕ್  ಗಳು, ಪ್ರಾಥಮಿಕ  ಕೃಷಿ  ಪತ್ತಿನ  ಸಹಕಾರ ಸಂಘಗಳು  ಅಲ್ಲದೆ  ತದ ನಂತರದಲ್ಲಿ ನಗರ  ಪ್ರದೇಶಗಳನ್ನೂ  ಒಳಗೊಂಡಂತೆ  ಪತ್ತಿನ  ಸಹಕಾರ ಸಂಘಗಳು , ಸೌಹಾರ್ಧ  ಸಹಕಾರಿಗಳು  ಸ್ವಸಹಾಯ  ಗುಂಪುಗಳನ್ನು  ರಚಿಸಿ  ಕಿರು ಸಾಲಗಳನ್ನು  ಒದಗಿಸುತ್ತಿವೆ.  ಆದರೂ ಅದರಲ್ಲಿಯೂ  ಗ್ರಾಮೀಣ ಪ್ರದೇಶದಲ್ಲಿ  ಅನೇಕ  ಬಡಜನರನ್ನು  ಹಾಲಿ  ಸಾಂಸ್ಥಿಕ  ವ್ಯವಸ್ಥೆ  ಮುಟ್ಟಲು  ಸಾಧ್ಯವಾಗಿರುವುದಿಲ್ಲ , ಅವರಿಗೂ  ಸಾಂಸ್ಥಿಕ  ವ್ಯವಸ್ಥೆ ಮೂಲಕ  ಆರ್ಥಿಕತೆ ಮುಟ್ಟಬೇಕು.  ಅವರೂ  ರಾಷ್ಟ್ರದ  ಆರ್ಥಿಕತೆ  ಬೆಳವಣಿಗೆಯ  ಪಾಲುದಾರರಾಗಬೇಕು  ಎಂಬ  ದೃಷ್ಟಿಯಿಂದ  ಭಾರತೀಯ  ರಿಸರ್ವ್ ಬಾಂಕ್  ಬ್ಯಾಂಕಿಂಗ್ ಯೇತರ ಆರ್ಥಿಕ  ಸಂಸ್ಥೆಗಳು  ಕಂಪನಿಗಳು, ಸಂಘ ಸಂಸ್ಥೆಗಳು, ಗಳಿಗೆ  ಕಿರು ಹಣಕಾಸು  ಒದಗಿಸಲು ಅನುಮತಿಸಿತು.  ಕಂಪನಿಗಳು, ಸಂಸ್ಥೆಗಳು , ಲೇವಾ  ದೇವಿ  ಸಂಸ್ಥೆಗಳು  ಇದರಲ್ಲಿನ  ವ್ಯಾಪಾರ  ಅವಕಾಶಗಳನ್ನು  ಕಂಡುಕೊಂಡಿತು.

ತಂತ್ರ ಜ್ಞಾನದ ವೇಗದ  ಬೆಳವಣಿಗೆ : ಭಾರತೀಯ ರಿಸರ್ವ ಬ್ಯಾಂಕ್  ಆರ್ಥಿಕ ಸೇರ್ಪಡೆ ಅಂಗವಾಗಿ  ಬ್ಯಾಂಕ್ ಗಳಿಗೆ  ಬ್ಯಾಂಕಿಂಗ್  ಕರಸ್ಪಾಡೆಂಟ್ / ಬ್ಯಾಂಕಿಂಗ್  ಏಜೆಂಟರು  ಗಳ  ನೇಮಕಾತಿಗೆ  ಅವಕಾಶ ನೀಡಿತು. ಅದೇ ವೇಳೆಗೆ  ಕೋರ್ ಬ್ಯಾಂಕಿಂಗ್  ಅಸ್ಥಿತ್ವಕ್ಕೆ  ಬಂತು. ಮೊಬೈಲ್  ಗಳು  ಇಂಟರ್ನೆಟ್ ಸೌಲಭ್ಯಗಳಿಂದ  ಬ್ಯಾಂಕಿಂಗ್  ವಲಯ ದಲ್ಲಿ  ಕ್ರಾಂತಿಕಾರಕ  ಬದಲಾವಣೆಯಾಯಿತು. ಇದರಿಂದ  ಇದುವರೆಗೆ  ತಲುಪಲಾರದ ಜನರನ್ನು  ತಲುಪುವಂತಾಯಿತು.
ನಬಾರ್ಡ್  ಮತ್ತು  ಆರ್. ಬಿ .ಐ  ನೀತಿಯಲ್ಲಿ  ಬದಲಾವಣೆ:  ಸ್ವಸಹಾಯ  ಗುಂಪುಗಳಿಗೆ  ಸಾಲ  ಅಲ್ಲದೇ  ಅರ್ಹರಿದ್ದಲ್ಲಿ ಗುಂಪಿನ ಸದಸ್ಯರಿಗೆ  ಬ್ಯಾಂಕ್  ನೇರ ಸಾಲ  ಒದಗಿಸಲು  ಅವಕಾಶ  , ಗುಂಪುಗಳಿಗೆ ಚಟುವಟಿಕೆ  ಆಧರಿಸಿ ಸಾಲ  ನೀಡಿಕೆ . ನಬಾರ್ಡ್ ನ  ಅಂಗ  ಸಂಸ್ಥೆಗಳಾಗಿ NABFINS,NABKISAN FNANCE,NABSAMRUDHI KISSAN, ಆರ್ಥಿಕ  ಸಂಸ್ಥೆಗಳನ್ನು  ರೂಪಿಸಿ  ಇವುಗಳು  ಸರ್ಕಾರೇತರ
ಸಂಸ್ಥೆಗಳಿಗೆ   ತಾವೇ  ಕಿರು ಹಣ ಕಾಸಿನ ಸಾಲ  ವಿತರಣೆಗೆ  ಅವಕಾಶ  ನೀಡಿರುವುದು.  ಕಂಪನಿಗಳಿಗೆ  ಬಂಡವಾಳ  ಒದಗಿಸಿರುವುದು  ಗ್ರಾಮೀಣ  ಪ್ರದೇಶಗಳಲ್ಲಿ  ಬಹು  ಏಜೆನ್ಸಿಗಳು  ಕಿರು ಹಣಕಾಸು  ಒದಗಿಸಲು
ಕಾರಣವಾಗಿದೆ.
ಈ ಕಿರು ಹಣಕಾಸು  ಸಂಸ್ಥೆಗಳು  ಅಧಿಕ  ಬಡ್ಡಿದರ  ವಿಧಿಸುತ್ತಿರುವುದು. ಕಂತುಗಳನ್ನು  ಸರಿಯಾಗಿ  ನಿಗದಿಪಡಿಸದೆ  ವಸೂಲಾತಿಯಾದ  ಮೊತ್ತವನ್ನು  ಕೇವಲ  ಬಡ್ಡಿಗೆ  ಜಮಾ  ಮಾಡಿಕೊಳ್ಳುತ್ತಿರುವುದು,  ಅಸಲಿಗೆ  ಒಂದಿಷ್ಟು  ಜಮಾ ಆಗದೇ  ಕೇವಲ  ಬಡ್ಡಿಗೆ ಜಮಾ  ಆಗುವುದರಿಂದ  ನಿರಂತರವಾಗಿ  ಅಸಲು ಹಾಗೆಯೇ  ಉಳಿಯುತ್ತದೆ.  ಸಾಲ  ನೀಡುವಾಗ  ಅವರ  ಸಾಲ  ಮರುಪಾವತಿ ಶಕ್ತಿ ಪರಿಶೀಲನೆಗೆ  ಒಳಪಡುತ್ತಿಲ್ಲ. ಮೂರು  ನಾಲ್ಕು ಮೂಲ ಗಳಿಂದ  ಏಕ  ವ್ಯಕ್ತಿಗೆ  ವಿವಿಧ  ಸಂಸ್ಥೆಗಳು  ಸಾಲ  ಹಂಚುತ್ತಿವೆ.  ಗುಂಪುಗಳು ‘ಗುಂಪು ‘ಗಳಾಗಿ  ಸಕ್ರಿಯವಾಗಿ  ಕಾರ್ಯನಿರ್ವಹಿಸುತ್ತಿಲ್ಲ. ಕೇವಲ  ಸಾಲ ಪಡೆಯಲು  ಗುಂಪುಗಳು  ರಚನೆಯಾಗುತ್ತಿವೆ. ಸರ್ಕಾರದ  ಆರ್ಥಿಕ  ಸಹಾಯ  ಪಡೆಯಲು  ಗುಂಪುಗಳು  ರಚನೆಯಾಗುತ್ತವೆ. ಈ ಹಿಂದೆ  ಇದ್ದ  ಶಿಸ್ತಿನ  ಕಾರ್ಯಾಚರಣೆ  ಇಲ್ಲವಾಗಿದೆ. ಏಜೆಂಟರು ಗಳೇ  ಅಮಾಯಕ ವ್ಯಕ್ತಿಗಳ  ದಾಖಲೆಗಳನ್ನು ಪಡೆದು  ಹಣ  ಅವರಿಗೆ  ವಿತರಿಸದೇ  ದುರುಪಯೋಗ  ಪ್ರಕರಣಗಳು ವರದಿಯಾಗಿವೆ.ಸಹಕಾರ  ಸಂಘಗಳ  ಉಸ್ತುವಾರಿಯಲ್ಲಿ   ಗುಂಪು  ರಚನೆ  ಯಾವಗಲೂ  ಸುಸ್ಥಿರವಾಗಿ  ಕಾರ್ಯವೆಸಗ ಬಲ್ಲದು  ಏಕೆಂದರೆ  ಸಹಕಾರ ಸಂಘಕ್ಕೆ  ತನ್ನ  ಜನರ/ಸದಸ್ಯರ  ಪರಿಚಯವಿರುತ್ತದೆ.  ಗುಂಪು ಕಾರ್ಯಾಚರಣೆಗೆ  ತಕ್ಕ  ಮಾರ್ಗದರ್ಶನ  ಒದಗಿಸಲು  ಅದು  ಸಶಕ್ತವಾಗಿರುತ್ತದೆ. ಗುಂಪಿನ  ಕಣ್ಣಗಾವಲು , ಮೇಲ್ವಿಚಾರಣೆ  ಯಿಂದ  ಗುಂಪಿನ ಶಿಸ್ತಿನ  ಕಾರ್ಯಚರಣೆ ಸಾಧ್ಯವಾಗುತ್ತದೆ. ರಾಷ್ಟ್ರೀಕೃತ  ಬ್ಯಾಂಕ್ ಗಳ
ಶಾಖೆಗಳು  ಗುರಿ ತಲುಪಲು  ಅಳತೆ ಮೀರಿ  ಸಾಲ  ನೀಡಿ  ವಸೂಲಾತಿಯಾಗದೆ  ನಷ್ಟ  ಅನುತ್ಪಾದಕ ಆಸ್ತಿ ಎಂದು  ಪರಿಗಣಿಸಿ (loss Asset) ಎಂದು  ಪರಿಗಣಿಸಿ  ಅವಕಾಶ ಕಲ್ಪಿಸಿ  ಮನ್ನ (write off) ಮಾಡುತ್ತದೆ.
ಸಹಕಾರ  ಬ್ಯಾಂಕ್ ಗಳು /  ಸಹಕಾರ ಸಂಘಗಳು  ಆ  ತೆರನಾದ  ತೊಡಕು ( Risk) ತೆಗೆದುಕೊಳ್ಳಲು  ಸಶಕ್ತರಲ್ಲ ಆದುದರಿಂದ  ಗುಂಪು  ನಡವಳಿಕೆಯನ್ನು  , ಅದರ ಮೌಲ್ಯ ಮಾಪನ  ಮಾಡಿ  ಸಾಲ ನೀಡಿಕೆ  ಮಾಡಿ ಸಾಲಮರು  ಪಾವತಿಯನ್ನು  ಖಾತ್ರಿ  ಪಡಿಸಿಕೊಳ್ಳ  ಬಹುದು. ಸ್ವಸಹಾಯ  ಗುಂಪು / ಕಿರು ಸಾಲ  ನೀಡಿಕೆ  (ಅಲ್ಪಮೊತ್ತ ಮತ್ತು  ಭದ್ರತೆ  ರಹಿತ  ಸಾಲ ) ಆರಂಭವಾಗಿ  ನಾಲ್ಕು  ದಶಕಗಳ  ಹತ್ತಿರ ಬಂದಿದೆ. ಅಷ್ಟರಲ್ಲಿ
‘ ಹೊಳೆಯಲ್ಲಿ  ಸಾಕಷ್ಟು  ನೀರು  ಹರಿದಿದೆ ‘. ಸಾಲ  ವಸೂಲಾತಿ’ ಪರಿಸರ ‘ ಸಾಕಷ್ಟು  ಕುಲಷಿತ ಗೊಂಡಿದೆ.  ಸಾಲ ಮರು ಪಾವತಿ  ಶಿಸ್ತು ರೂಪಿಸುವುದೇ  ಸರಿಯಾದ  ಮಾರ್ಗ. ಸಾಲವಿತರಣೆಗೆ  ನಿಖರವಾದ  ಮಾನದಂಡಗಳು, ಮಾನದಂಡಗಳು ಉಲ್ಲಂಘನೆ  ಯಾಗದಂತೆ  ಖಾತ್ರಿ  ಪಡಿಸಿಕೊಳ್ಳುವುದು, ಆಂತರಿಕ ಉತ್ತಮ  ನಿಯಂತ್ರಣ  ಕ್ರಮಗಳು , ಸಾಲ  ಸದುಪಯೋಗ ಖಾತ್ರಿ, ಅವಶ್ಯವಿದ್ದಷ್ಟು ಮಾತ್ರ ಸಾಲ, ಸಕಾಲದಲ್ಲಿ ಸಾಲ, ಗುಂಪಿನ  ಕಾರ್ಯಾಚರಣೆ  ಖಚಿತ  ಗೊಳಿಸಿಕೊಳ್ಳುವುದು. ಲೆಕ್ಕ ಪರಿಶೋಧನೆ  , ನಿಖರ  ಮೌಲ್ಯಮಾಪನ  (ಮೌಲ್ಯಮಾಪನ  ವ್ಯವಸ್ಥೆಯಲ್ಲಿ  ಪ್ರತಿ ಹಂತಗಳಿಗೆ  ಅಂಕಗಳನ್ನು  ನಿಗದಿಪಡಿಸಿ  ಎ,ಬಿ,ಸಿ,ಡಿ. ಎಂದು ವಿಂಗಡಿಸಲಾಗುವುದು )’ ಎ ‘ವರ್ಗದಲ್ಲಿದ್ದರೆ   ಮಾತ್ರ  ಸಾಲ  ವಿತರಿಸಲಾಗುವುದು. ಗುಂಪು  ಆಗಿರುವ  ತಪ್ಪನ್ನು  ಸರಿಪಡಿಸಿಕೊಳ್ಳಬೇಕು ಅದಕ್ಕೆ ಬ್ಯಾಂಕ್ / ಸ. ಸಂಘ ಸೂಕ್ತ ಮಾರ್ಗದರ್ಶನ  ಒದಗಿಸಬೇಕು.

 ಕಿರು ಸಾಲ  ಸಂಸ್ಥೆಗಳು (ಎಂ.ಎಫ್. ಐ ) ಸಾಲ  ವಿತರಣೆ  ಮತ್ತು ವಸತಿಗೆ  ಪ್ರೊತ್ಸಾಹಧನ  ಆಧಾರಿತ  ಸೇವೆ, ಏಜೆಂಟರ್ ಗಳ  ನೇಮಕಾತಿಯಿಂದ  ಶಕ್ತಿ ಮೀರಿ ಸಾಲಗಳ  ವಿತರಣೆಯಿಂದ  , ಅತಿಯಾದ ಬಡ್ಡಿ ಆತರಣೆಯಿಂದ  ಸಾಲ  ವಸೂಲಿಗೆ  ಅನೈತಿಕ  ಮಾರ್ಗವನ್ನು  ಅನುಸರಿಸುತ್ತಿರುವುದರಿಂದ  ರಾಜ್ಯ ಸರ್ಕಾರ  ಇದರ  ವಿರುದ್ಧ  ಕಾನೂನು ಕ್ರಮ  ಕೈಗೊಳ್ಳಲು  ಉದ್ದೇಶಿಸಿದೆ. ಹಿಂದೆ  ಆಂಧ್ರ ಪ್ರದೇಶದಲ್ಲಿ  ಇದೇ ತರಹೆಯ ಪರಿಸ್ಥಿತಿ  ಉಂಟಾಗಿ  ಪ್ರತ್ಯೇಕ ಕಾಯ್ದೆ  ರೂಪಿಸಲಾಗಿತ್ತು.  ಈ  ಪರಿಸರದ  ಬದಲಿಗೆ  ಈ ಜನತೆಯನ್ನು  ಸಹಕಾರ  ಸಂಘಗಳು  ಒಳಗೊಂಡು  ಕ್ರಮಬದ್ದ  ಗುಂಪು ರಚನೆ  , ಸದಸ್ಯರಲ್ಲಿ ಆರ್ಥಿಕ  ಶಿಸ್ತು, ಕುಟುಂಬ  ಆಯ-ವ್ಯಯ, ಆರ್ಥಿಕ  ಸಾಕ್ಷರರನ್ನಾಗಿ  ಮಾಡುವ  ಸವಾಲು  ಸಹಕಾರಿಗಳ  ಮುಂದೆ  ಇದೆ. ಈ  ಜನತೆಯ  ಸಾಮಾಜಿಕ  ನ್ಯಾಯದೊಡನೆ  ಆರ್ಥಿಕ ಪ್ರಗತಿಗೆ  ಸಹಕಾರ  ಮಾರ್ಗವೇ  ಅತ್ಯಂತ  ಸೂಕ್ತವಾದದ್ದು  ಎಂಬುದನ್ನು  ಮನಗಾಣಬೇಕಿದೆ. ಕರ್ನಾಟಕದಲ್ಲಿ  ಈಗ  ಅವಕಾಶ  ಮೂಡಿ ಬಂದಿದೆ. ಗ್ರಾಮೀಣ    ಪ್ರದೇಶದಲ್ಲಿ  ಸಹಕಾರ  ಸಂಘಗಳು ತನ್ನಲ್ಲಿನ  ಸಂಪನ್ಮೂಲಗಳು  ಇತರೆಡೆ  ಹರಿದು  ಹೋಗದಂತೆ
ನೋಡಿಕೊಂಡು  ಸಂಪನ್ಮೂಲ  ಕ್ರೋಢೀಕರಣ  ಗೊಂಡಲ್ಲಿ  ಕಿರುಹಣಕಾಸು  ವಲಯದಲ್ಲಿ  ಏಕಸ್ವಾಮ್ಯ  ಸ್ಥಾಪಿಸುವಲ್ಲಿ  ಯಶಸ್ಸು ಕಾಣುವುದರಲ್ಲಿ  ಅನುಮಾನವಿಲ್ಲ. ಇಂತಹ  ಶೋಷಣೆ , ಕಿರುಕಳ, ಆತ್ಮಹತ್ಯೆ  ಅಂತಹ  ಪ್ರಕರಣಗಳಿಗೆ  ಇತಿಶ್ರೀ  ಹಾಡಬಹುದು. ಸ್ವಸ್ತ  ಸಮಾಜ  ಕಟ್ಟುವಲ್ಲಿ  ಸಹಕಾರಿಗಳು  ಯಶಸ್ಸು  ಗಳಿಸಬಹುದು. ಸಮಾಜವಾದದ  ಶಿಶುವೇ  ಸಹಕಾರ  ಚಳುವಳಿ  ಎಂದು  ಹೇಳಲಾಗಿದೆ.ಉಳ್ಳವರು  ಶಿವಾಲಯ  ಮಾಡುವರು
              ನಾನೇನ  ಮಾಡುವೆ  ಬಡವನಯ್ಯ
            ಎನ್ನ  ಕಾಲೇ ಕಂಬ  , ದೇಹವೇ  ದೇಗುಲ
            ಶಿರ ಹೊನ್ನ  ಕಳಸವಯ  ಕೂಡಲಸಂಗಮ ದೇವಾ                  ಕೇಳಯ್ಯ ಸ್ಥಾವರಕ್ಕಳಿವುಂಟು  ಜಂಗಮಕ್ಕಳಿವಿಲ್ಲ.
  – ಬಸವಣ್ಣ 
( ಸ್ವಸಹಾಯ  ಗುಂಪು, ಜಂಟಿ  ಬಾಧ್ಯುತಾ  ಗುಂಪುಗಳು, ಸಹಕಾರ  ಸಂಘಗಳೇ  ಬಡವರಿಗೆ  ಕೊಡಲಸಂಗಮದೇವ  – ಬಸವಣ್ಣ  ನವರ ಕ್ಷಮೆಕೋರಿ , ವೈ. ವಿ. ಗುಂಡೂರಾವ್  ನಬಾರ್ಡ  ಡಿ. ಜಿ. ಎಂ .(ನಿವೃತ್ತ)   ಸಹಕಾರ  ಸಂಪನ್ಮೂಲ  ವ್ಯಕ್ತಿಗಳನ್ನು  ಈ  ಸಂದರ್ಭದಲ್ಲಿ  ನೆನೆಯುತ್ತೇನೆ )
                                                                                                                                                                                                 
ಶಶಿಧರ.ಎಲೆ

ಸಹಕಾರ  ಸಂಘಗಳ  ಅಪರ  ನಿಬಂಧಕರು  (ನಿವೃತ್ತ )  ನಂ281, ನೇಸರ  , ಬಾಲಾಜಿ  ಹೆಚ್. ಬಿ. ಸಿ, ಎಸ್  ಲೇಔಟ್ , ವಾಜರಹಳ್ಳಿ  , ಕನಕಪುರ ರಸ್ತೆ  ಬೆಂಗಳೂರು  560109

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More