ನಾಗರಿಕತೆಯಲ್ಲಿ ಶ್ರೀಮಂತ ಜೀವನದ ಮೆರುಗು ಹಾಗೂ ಶೋಷಿತರ ಹೋರಾಟ ಬದುಕಿನ ಮಧ್ಯದ ಸುವರ್ಣ ಮಾಧ್ಯಮವಾಗಿ ಸರ್ವರಿಗೂ ಸಮಬಾಳು ಕಲ್ಪಿಸುವ ಸದುದ್ದೇಶದಿಂದ “ಸಹಕಾರವಾದ” ಹುಟ್ಟಿಕೊಂಡಿತು.ಜಗತ್ತಿನಲ್ಲಿ ಸಹಕಾರಿ ಆಂದೋಲನ ಪ್ರಾರಂಭವಾದ ಲಾಗಾಯಿತು ಇಂದಿನ ತನಕ ಸಹಕಾರದಲ್ಲಿ ಹಲವಾರು ಮಾರ್ಪಾಡುಗಳು ಹೊಸತನಗಳು ಕಾಣಿಸಿಕೊಂಡವು. ಗ್ರಾಹಕ ಸಹಕಾರಿ ಸಂಘಗಳ ಆರಂಭದಿಂದ ತೊಡಗಿˌಹತ್ತುಹಲವಾರು ಉದ್ದೇಶದ ಸಹಕಾರಿ ಸಂಘಗಳು ಜಗತ್ತಿನಾದ್ಯಂತ ಪಸರಿಸಿವೆ. ಸಹಕಾರ ಪದ್ದತಿ ಜನರ ಜೀವನದ ಯಶಸ್ವಿನಲ್ಲಿ ಮಹತ್ತರ ಪಾತ್ರ ವಹಿಸಿವೆ. ನಮ್ಮ ದೇಶದಲ್ಲಿ ಸಹಕಾರಿ ಕಾನೂನುˌ ನಿಯಮ ಚೌಕಟ್ಟಿನಡಿ ಕಾರ್ಯನಿರ್ವಹಿಸಿದ ಸಂಘಗಳು ಜನರ ಮನಸ್ಸಿನಾಳಕ್ಕೆ ಬೇರೂರಲು ದಾರಿಮಾಡಿವೆ. ಗ್ರಾಮೀಣ ಜನರ ಬದುಕಿಗೆ ಬಾಹ್ಯ ಅರಿವಿಲ್ಲದೇ ನವಶಕ್ತಿಯನ್ನು ತುಂಬಲು ಸಹಕಾರಿರಂಗ ದೊಡ್ಡ ಕೊಡುಗೆ ನೀಡಿದೆ.
ಹಾಗೆಯೇ ಕಾನೂನು ನಿಯಮ ಚೌಕಟ್ಟನ್ನು ಮೀರಿ ಆಡಳಿತಮಂಡಳಿˌಶಿಬಂಧಿ ಸ್ವಹಿತಾಸಕ್ತಿˌ ಸ್ವಾರ್ಥ ದ ಮೂಲಕ ಸಾಗಿದ ಸಂಸ್ಥೆಗಳು ನೆಲಕಚ್ಚಿˌ ಮುಗ್ದ ಸದಸ್ಯರ ಬಾಳನ್ನು ಹಾಳುಗೆಡವಿದ ಉದಾಹರಣೆಗಳೂ ಸಾಕಷ್ಟು ಇವೆ. ನಮ್ಮ ದೇಶದಲ್ಲಿ ಇಂದು ಕೂಡಾ ದುರ್ನಡತೆಯ ಕಾರಣಕ್ಕಾಗಿ ಹಲವಾರು ಸಹಕಾರಿ ಸಂಘಗಳು ನಾಶವಾದ ಪ್ರಕರಣಗಳು ಆಗಾಗ ಕೇಳಿಬರುತ್ತಿರುವುದು ದುರಂತದ ಸಂಗತಿ.ಪ್ರಾಮಾಣಿಕತೆˌ ನಿಷ್ಟೆˌ ಬದ್ದತೆ ಸಹಕಾರಿರಂಗದ ಯಶಸ್ಸಿನ ಒಳಮರ್ಮ.ಸಹಕಾರಕ್ಕೆ ಸರಕಾರೀ ಹಸ್ತಕ್ಷೇಪರಹಿತ ಸ್ವಾಯತ್ತೆ ನೀಡಬೇಕೇಂಬುದು ನಿಷ್ಟಾವಂತ ಹಿರಿಯ ಸಹಕಾರಿಗಳ ಒತ್ತಾಸೆಯಾಗಿತ್ತು. ಇದರ ಫಲಶುೃತಿಯಾಗಿ 1997 ರಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ಜ್ಯಾರಿಗೆ ಬಂತು. ಇದರಲ್ಲಿ ನೋಂದಣಿ ಹಾಗೂ ಸೀಮಿತ ವಿಷಯಕ್ಕೆ ಸಂಬಂಧಿಸಿ ಸಹಕಾರಿ ಇಲಾಖೆಗೆ ಅಧಿಕಾರ. ಕರ್ನಾಟಕ ಸೌಹಾರ್ದ ಸಹಕಾರಿ ಫೆಡೆರೇಶನ್ ಗೆ ಕೆಳಹಂತದ ಸೌಹಾರ್ದ ಸಹಕಾರಿ ಸಂಘಗಳ ಉಸ್ತುವಾರಿಯ ಹೊಣೆಗಾರಿಕೆ. ಆರಂಭದಲ್ಲಿ ಈ ವ್ಯವಸ್ಥೆ ಸಹಕಾರಿಬಂಧುಗಳಿಗೆ ಖುಷಿನೀಡಿ ಯಶಸ್ವಿನ ಪಥದತ್ತ ಸಾಗುವುದನ್ನು ಕಂಡರು. ರಾಜ್ಯದಲ್ಲಿ ನಿಷ್ಟಾವಂತ ಸಹಕಾರಿಗಳಿಂದ ಸ್ಥಾಪಿಸಲ್ಪಟ್ಟುˌ ಪ್ರಾಮಾಣಿಕವಾಗಿ ನಡೆಸಲ್ಪಟ್ಟ ಸೌಹಾರ್ದ ಸಹಕಾರಿಗಳು ಇಂದು ಕೂಡಾ ಮೇರು ದಾರಿಯಲ್ಲಿ ಸಾಗಿ ಸಹಕಾರಕ್ಕೆ ಹೊಸದಿಕ್ಕನ್ನು ನೀಡುತ್ತಿರುವುದನ್ನು ನಾವು ಕಾಣಬಹುದು. ಪೂರ್ಣ ಸ್ವಾಯತ್ತೆಯ ಪರಿಣಾಮದಿಂದಾಗಿ ನಂತರದ ದಿನಗಳಲ್ಲಿ ಖಾಸಗಿ ಫೈನಾನ್ಸ್ ಕಂಪೆನಿಗಳು ವ್ಯವಹಾರಿಕ ಅನುಕೂಲಕ್ಕಾಗಿ ಸೌಹಾರ್ದ ಸಹಕಾರಿಗಳಾಗಿ ಮಾರ್ಪಾಡು ಹೊಂದುವ ಜಾಯಮಾನ ಪ್ರಾರಂಭವಾಗಿ ಸಹಕಾರಿ ಸ್ವಾಯತ್ತೆಯ ದುರ್ಬಳಕೆಗೆ ದಾರಿಯಾಯಿತು. ಅದೇ ರೀತಿ ಕೆಲವು ಖಾಸಗಿ ರೀತಿಯ ಸಾಲˌ ಠೇವಣಾತಿಯ ವ್ಯವಹಾರಕ್ಕಾಗಿ ಸೌಹಾರ್ದ ಸಹಕಾರಿ ಸಂಘಗಳನ್ನು ಹುಟ್ಟುಹಾಕಿ ಕುಟುಂಬದ ಸದಸ್ಯರು ಅಥವಾ ಕೆಲವೇ ಮಂದಿ ಬಂಧು ಮಿತ್ರರ ಪೂರ್ಣ ಹಿಡಿತದಲ್ಲಿ ಸಂಘಗಳನ್ನು ನಡೆಸಲು ಮುಂದಾದರು .ಈ ರೀತಿ ಖಾಸಗಿ ಸೊತ್ತಿನಂತೆ ಸಹಕಾರಿ ಸಂಘಗಳು ನಡೆಸಲ್ಪಡುವುದು ಸಹಕಾರಿ ಸಿದ್ದಾಂತಕ್ಕೆ ವೈರುಧ್ಯದ ವಿಚಾರಧಾರೆ. ಸಮಾಜದ ಸರ್ವರಿಗೂ ಅವಕಾಶ ನೀಡುವುದು ಸಹಕಾರದ ಮೂಲಧ್ಯೇಯ.ಕರ್ನಾಟಕ ಸಹಕಾರ ಕಾಯ್ದೆ 1959ರಲ್ಲಿ ನೋಂದಣಿಯಾದ ಸಂಸ್ಥೆಗಳನ್ನು ಸಾಕಷ್ಟು ಏಕಚಕ್ರಾಧಿಪತ್ಯದಲ್ಲಿ ಅಥವಾ ಸರ್ವಾಧಿಕಾರಿಗಳು ನಡೆಸುತ್ತಿರುವುದನ್ನು ಕೂಡಾ ನಾವು ಕಾಣಬಹುದು. ಉತ್ತರ ಕರ್ನಾಟಕದ ಹಲವು ಸಹಕಾರಿ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ನಡೆಯುತ್ತಿದ್ದು ಬೆಳೆಗಾರರು ಶೋಷಣೆಗೆ ಒಳಗಾಗುತ್ತಿರುವುದನ್ನು ಕೇಳುತ್ತಿದ್ದೇವೆˌ ಹಾಗೆಯೇ ರಾಜ್ಯದಲ್ಲಿ ಹಲವು ನಾಯಕಮಣಿಗಳು ಸಹಕಾರಿ ಸಂಘಗಳನ್ನು ತಮ್ಮ ನೇತೃತ್ವದಲ್ಲಿ ಹಲವು ದಶಕಗಳಿಂದ ನಡೆಸುತ್ತಿದ್ದುˌ ಅವರ ನಿಕಟವರ್ತಿಗಳ ಹೊರತಾಗಿ ಇತರರನ್ನು ಆಡಳಿತ ಮಂಡಳಿ ಪ್ರವೇಶಿಸಲು ದಾರಿ ಕಲ್ಪಿಸುವುದಿಲ್ಲ. ಸಂಘಗಳ ಲೆಕ್ಕಪತ್ರಗಳನ್ನು ಆಡಳಿತದವರ ಇಚ್ಚೆಗೆ ಅನುಸಾರವಾಗಿ ಬಹಿರಂಗಪಡಿಸಿ ಮೇಲ್ನೋಟಕ್ಕೆ ಎಲ್ಲವು ಸರಿಯಿದೆ ಎಂಬಂತೆ ನಡಕೊಳ್ಳುತ್ತಾರೆ. ಇಂತಹವರು ಇಲಾಖಾಅಧಿಕಾರಿಗಳು ಲೆಕ್ಕಪರಿಶೋಧಕರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾರೆˌ ಇಂದು ಲಂಚವೆಂಬ ಪೆಡಂಭೂತದಿಂದಾಗಿ ಎಲ್ಲ ರೀತಿಯ ಅವ್ಯವಹಾರಗಳನ್ನು ಮುಚ್ಚಿಹಾಕಲು ಸಾಧ್ಯವಾಗುತ್ತಿರುವುದು ದೌರ್ಭಾಗ್ಯ. ರಾಜಕೀಯ ಪಕ್ಷಗಳ ಕೃಪೆಯಿಂದ ಆಯ್ಕೆಯಾದ ಆಡಳಿತಮಂಡಳಿ ಸದಸ್ಯರು ಹೆಚ್ಚಿನ ಸಂದರ್ಭಗಳಲ್ಲಿ ಸಹಕಾರವಿಷಯದಲ್ಲಿ ಅನನುಭವ ಹೊಂದಿದ್ದು ಅವರ ಆಸಕ್ತಿ ಸಂಘದ ಚುನಾವಣೆ ಅಥವಾ ಶಿಬಂಧಿ ನೇಮಕಾತಿˌ ಸಂಸ್ಥೆಯ ಮೂಲಕ ಅವರ ಸ್ವಂತದ ಹಿತಾಸಕ್ತಿ ವಿಷಯ ಹೊರತುˌಸಂಸ್ಥೆಯ ವ್ಯವಹಾರದಲ್ಲಿ ಹಿಡಿತ ಹೊಂದಿರುವುದಿಲ್ಲ. ಇಂತಹ ಸಂಸ್ಥೆಗಳಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿˌ ಶಿಬಂಧಿಗಳು ತಮ್ಮ ಸ್ವಾರ್ಥಕ್ಕಾಗಿ ಸಂಸ್ಥೆಯನ್ನು ಬಳಸಿˌ ಅಧೋಪತನಕ್ಕೆ ಕಾರಣವಾದ ಉದಾಹರಣೆಗಳು ಸಾಕಷ್ಟಿವೆ.ಸದಸ್ಯ ಕೇಂದ್ರಿತವಾದ ಸಹಕಾರದಲ್ಲಿ ಸದಸ್ಯರ ಸಹಕಾರಿಜ್ಞಾನದ ಕೊರತೆ ಹಾಗೂ ನಿಷ್ಕ್ರಿಯತೆಯು ಸಂಸ್ಥೆಗಳು ನಲುಗಲು ದಾರಿಯಾಗಿವೆ. ಸಮಾಜಕ್ಕೆಸಹಕಾರ ನೀಡಿರುವ ಕೊಡುಗೆಯ ಬಗ್ಗೆ ಕನಿಷ್ಟಜ್ಞಾನವಿಲ್ಲದ ದುಷ್ಟರಿಂದಾಗಿ ಸಹಕಾರಿರಂಗ ದುಷ್ಪರಿಣಾಮವನ್ನು ಎದುರಿಸುವಂತಾಯಿತು. ದೇಶದಲ್ಲಿಎಷ್ಟೇ ಪ್ರಾಮಾಣಿಕರು ನಿಷ್ಟಾವಂತರು ಇದ್ದರೂ ಒಂದಷ್ಟು ಭ್ರಷ್ಟರಿಂದಾಗಿ ಎಲ್ಲ ಕ್ಷೇತ್ರಗಳು ಋಣಾತ್ಮಕ ಪ್ರಕ್ರಿಯೆ ಎದುರಿಸುತ್ತಿರುವುದನ್ನು ಪ್ರಜಾಪ್ರಭುತ್ವದಲ್ಲಿ ಕಾಣುತ್ತಿದ್ದೇವೆ. ಅದು ಸಹಕಾರಕ್ಕೂ ಹೊರತಲ್ಲ. ಮುಂದಿನದಿನಗಳಲ್ಲಿ ಇದೆಲ್ಲವನ್ನು ಪ್ರಾಮಾಣಿಕ ಪ್ರಜೆಗಳು ಮೆಟ್ಟಿ ನಿಂತು ಸಹಕಾರಿರಂಗದ ವರ್ಚಸ್ಸನ್ನು ಬೆಳೆಸುವ ಕಾರ್ಯ ಆಗಬೇಕಾಗಿದೆ.

ರಾಧಾಕೃಷ್ಣ ಕೊಟೆ.