ಯಾವತ್ತೂ ಸಹಕಾರ ಕ್ಷೇತ್ರದ ಬಗ್ಗೆ ಮಾತುಗಳು ಬಂದಾಗ ಅದರ ಸಮಾಜಮುಖಿ ವ್ಯವಸ್ಥೆಗಳ ಬಗ್ಗೆ ಎಲ್ಲರೂ ಬೆರಗಾಗುತ್ತಾರೆ. ಒಂದೊಂದು ಸೊಸೈಟಿಗಳೂ ಭಿನ ಭಿನ್ನ ಚಟುವಟಿಕೆ, ಕರ್ಯವಿಧಾನಗಳ ಮೂಲಕ ತನ್ನ ಸದಸ್ಯರಿಗೆ ಅತ್ಯಂತ ಉತ್ತಮ ಸೇವೆಗಳನ್ನು ಒದಗಿಸುತ್ತಿರುತ್ತಾರೆ. ಸಹಕಾರ ಕ್ಷೇತ್ರವೇ ದೇಶದ ಆರ್ಥಿಕತೆಯ ಹೆಬ್ಬಾಗಿಲು ಎಂಬುದು ಇದೇ ಅರ್ಥದಲ್ಲಿ. ಸಮಾಜದ ಕೊಟ್ಟ ಕೊನೆಯ ವ್ಯಕ್ತಿ ಕೂಡ ಸಹಕಾರದ ಕಕ್ಷೆಯೊಳಗೆ ಸಮ್ಮಿಳಿತವಾಗಬೇಕು. ಎಲ್ಲರೂ ಸಮನವಾಗಿ ಸಹಕಾರಿ ಸಂಘಗಳ ಕಾರ್ಯಯೋಜನೆಗಳಲ್ಲಿ ಒಳಗೊಳ್ಳಬೇಕೆಂಬುದು ಇಲ್ಲಿಯ ಮಹತ್ವದ ಸಂದೇಶ. ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವುದು ಸಹಕಾರದ ತಿರುಳು.
ತರ ತರದ ಸೇವೆಗಳು ನಾವು ಸಾಮನ್ಯವಾಗಿ ಬೆರೆ ಬೇರೆ ಸೊಸೈಟಿಗಳ ಕಾರ್ಯ ಚಟುವಟಿಕೆಗಳನ್ನು ಕಂಡಿರುತ್ತೇವೆ. ಕೆಲವು ಸೊಸೈಟಿಗಳು ಗೊಬ್ಬರ ಪೂರೈಸಿದರೆ ಇನ್ನು ಕೆಲವು ಸೊಸೈಟಿಗಳು ಸಂಬಾರ ಜೀನಸುಗಳು, ತರಕಾರಿಗಳನ್ನು ಸದಸ್ಯರ ಮನೆಬಾಗಿಲಿಗೆ ತಲಪಿಸಲು ಮುಂದಾಗುತ್ತವೆ. ಕೆಲವು ಸೊಸೈಟಿಗಳು ಹಡಿಲು ಬಿದ್ದ ಗದ್ದೆಗಳನ್ನು ಬೇಸಾಯ ಮಾಡಿ ಹಸಿರಾಗಿಸಿದರೆ ಇನ್ನು ಕೆಲವು ಸೊಸೈಟಿಗಳು ಖಾಲಿ ಗುಡ್ಡಗಳನ್ನು ಲೀಸಿಗೆ ಪಡೆದು ಹಣ್ಣು ಹಂಪಲು ಬೆಳೆದು ಮಾರುಕಟ್ಟೆ ಮಾಡುತ್ತವೆ, ಕೆಲವು ಸೊಸೈಟಿಗಳು ಸಾವಯವ ತರಕಾರಿ ಸಂಗ್ರಹಿಸಿ ಸದಸ್ಯರಿಗೆ ಮರಾಟ ಮಾಡುತ್ತವೆ ಅಥವ ಸಾವಯವ ತರಕಾರಿಗಳ ಸಂತೆಗೆ ವೇದಿಕೆಯಾಗುತ್ತವೆ. ಇನ್ನೂ ವಿಶಿಷ್ಟ ಎಂಬಂತೆ ಒಂದು ಸೊಸೈಟಿ ಕಾರ್ಮಿಕರಿಗೆ ಕೆಲಸ ಮಾಡಲು ಹಾರೆ, ಪಿಕ್ಕಾಸು, ಕತ್ತಿಗಳನ್ನು ಬಾಡಿಗೆಗೆ ಕೊಡುತ್ತದೆ. ಹಾಗೆ ಬಾಡಿಗೆಗೆ ಕೊಂಡುಹೋಗುವವರು ತಂಡವಾಗಿ ಕೆಲಸ ಮಾಡುವುದರಿಂದ ಅವರದ್ದೇ ಅಡುಗೆಗೆ ಸೊಸೈಟಿಯ ಸೂಪರ್ ಬಜಾರ್ ನಿಂದ ಬೇಕಾದ ಅಕ್ಕಿ, ತರಕಾರಿಗಳನ್ನು ಕೊಂಡುಹೋಗುತ್ತಾರೆ.
ಇಂತಹ ಯೋಚನೆ ಮಾಡಿ ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗುತ್ತವೆ. ಸದಸ್ಯರ ಜೊತೆಗಿನ ಬಾಂಧವ್ಯ ವೃದ್ಧಿಯಾಗುತ್ತದೆ.
ಇದು ಒಂದು ವಿನೂತನ
ಸಹಕಾರಿ ಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆ ಕೊಡಲು ಅವಕಾಶ ಅಪಾರ. ಶಿರಸಿಯ ಹುಳಗೋಳ ಭೈರುಂಬೆ ಸೊಸೈಟಿ ಒಂದು ವಿನೂತನ ಕ್ರಮವನ್ನು ಅಳವಡಿಸಿಕೊಂಡಿದೆ. ಇದು ಇನ್ನಿತರ ಸೊಸೈಟಿಗಳಿಗೆ ಒಂದು ಮಾದರಿ. ಇಲ್ಲಿ ಒಂದು ಕಪಾಟು. ಗ್ಲಾಸು ಹಾಕಿದ ಬಾಗಿಲು ಇದ್ದ ಕಾರಣ ಅದರೊಳಗೆ ಇಟ್ಟ ವಸ್ತುಗಳು ಸುಲಭದಲ್ಲಿ ಗೋಚರವಾಗುತ್ತವೆ. ಭೈರುಂಬೆ ಸೊಸೈಟಿ ಬಂದ ಕೂಡಲೆ ಕಾಣುವಂತೆ ಈ ಕಪಾಟನ್ನು ಅಳವಡಿಸಿದೆ. ಈ ಕಪಾಟಿನಲ್ಲಿ ಸದಸ್ಯನಾದವನು ಯಾವುದೇ ಮೌಲ್ಯವರ್ಧಿತ ಆಹಾರ ಉತ್ಪನ್ನಗಳನ್ನು ತಂದಿಡಬಹುದು. ಅದು ಮಾರಾಟದ ಉದ್ದೇಶದಿಂದ. ತಂದಿಡುವವರು ಅದರ ಬಗ್ಗೆ ಮಾಹಿತಿ ತಿಳಿಸಿರಬೇಕು. ಅದರ ತೂಕ ಮತ್ತು ತಂದಿಟ್ಟವರ ವಿಳಾಸ, ಸದಸ್ಯತನ ಸಂಖ್ಯೆ, ಉಳಿತಾಯ ಖಾತೆಯ ಸಂಖ್ಯೆ ಹೀಗೆ ಎಲ್ಲ ಮಾಹಿತಿ ನೀಡಿರಬೇಕು. ಸೊಸೈಟಿಗೆ ಬಂದವರು ಈ ಉತ್ಪನ್ನಗಳನ್ನು ಕಂಡು ಕೊಂಡುಕೊಳ್ಳಬಹುದು. ಸೊಸೈಟಿ ಅದರ ಹಣ ಗ್ರಾಹಕನಿಂದ ಪಡೆದು ಮಾರಾಟಕ್ಕೆ ತಂದ ಸದಸ್ಯನ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತಾರೆ.
ಇದೊಂದು ಮಾದರಿ ಕ್ರಮ. ಪ್ರತಿಯೊಂದು ಸಹಕಾರಿ ಸಂಘ ಇದನ್ನು ತಮ್ಮ ಶಾಖೆಗಳಲ್ಲಿ ಅಳವಡಿಸಿಕೊಳ್ಳಬಹುದು. ಸದಸ್ಯರು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಹಪ್ಪಳ, ಉಪ್ಪಿನಕಾಯಿ, ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಇಲ್ಲಿ ತಂದಿಡಬಹುದು. ಸೊಸೈಟಿ ಇದಕ್ಕಾಗಿ ದೊಡ್ಡ ಶುಲ್ಕ ವಿಧಿಸಬಾರದು. ತೂಕದ ಮೇಲೆ ಒಂದು ಕಮಿಶನ್ ಇಟ್ಟುಕೊಂಡರೆ ಸಾಕು.
ಪ್ರಾಥಮಿಕ ಸಹಕಾರಿ ಸಂಘಗಳು ಕೇವಲ ಬ್ಯಾಂಕಿಂಗ್ ವ್ಯವಹಾರದಲ್ಲಿ ಮುಳುಗುವುದಲ್ಲ. ಇಂತಹ ತನ್ನದೇ ಆದ ವಿನೂತನ ಶೈಲಿಯ ಸೇವೆಗಳನ್ನು ಒದಗಿಸಲು ಮುಂದಾಗಬೇಕು. ಒಂದಿನಿತು ವರಮಾನವೂ ಸಹಕಾರಿ ಸಂಘಗಳಿಗೆ ಇದರಿಂದ ಬರಬಹುದು.

ಶಂ.ನಾ.ಖಂಡಿಗೆ