ಒಬ್ಬರು ಗೆದ್ದು, ಒಬ್ಬರು ಸೋತರೆ ಯುದ್ಧ, ಇಬ್ಬರು ಸೋತು ಇಬ್ಬರೂ ಗೆದ್ದರೆ ಸಂಸಾರ, ಯಾರೂ ಸೋಲದೆ ಎಲ್ಲರೂ ಗೆದ್ದರೆ ಅದುವೇ ಸಹಕಾರ! ೧೯೦೫ರಲ್ಲಿ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲ್ ರವರು ಪ್ರಾರಂಭಿಸಿದ ಮೊದಲ ಸಹಕಾರ ಸಂಘದ ಮೂಲಕ ಪ್ರಾರಂಭವಾದ ಸಹಕಾರ ಚಳುವಳಿ ಸುದೀರ್ಘ ೧೨೦ ವರ್ಷಗಳಲ್ಲಿ ಎಲ್ಲರನ್ನೂ ಗೆಲ್ಲಿಸುತ್ತಾ ದೇಶವನ್ನು ಕಟ್ಟುವ ಹಾಗೂ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ಕಾಯಕದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಸಹಕಾರ ಕ್ಷೇತ್ರವು ಹಾಲು, ಸಕ್ಕರೆ, ರಸಗೊಬ್ಬರ, ಪತ್ತು, ನೌಕರರ ಪತ್ತಿನ ಸಹಕಾರ ಸಂಘ, ಪಟ್ಟಣ ಸಹಕಾರ ಸಂಘ, ಮಾರಾಟ ಸಹಕಾರ ಸಂಘ, ಕೃಷಿ ಹಾಗೂ ಕೃಷಿಯೇತರ ಸಹಕಾರ ಸಂಘ- ಹೀಗೆ ಸಾಲು ಸಾಲು ಕ್ಷೇತ್ರಗಳನ್ನು ಗೆಲ್ಲಿಸಿದೆ.
ಸಹಕಾರ ಎಂದರೆ ಕೇವಲ ಸಹಕಾರಿ ಸಂಸ್ಥೆಗಳಲ್ಲ, ಇದು ಸಹಜ ಮಾನವಿಯ ಗುಣ. ಒಂದು ಚಳುವಳಿ ವರ್ತಮಾನದ ತಲ್ಲಣಗಳಿಗೆ/ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರೆ ಅಂತಹ ಚಳುವಳಿ ಜೀವಂತ ಇದೆ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಸಹಕಾರ ಚಳುವಳಿ ವರ್ತಮಾನದ ತಲ್ಲಣಗಳಾದ ನಿರುದ್ಯೋಗ, ಸಂಘಟನೆ, ಮಹಿಳಾ ಸಬಲೀಕರಣ, ದಕ್ಷ ನಾಯಕತ್ವ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಗಿರಿಜನರ ಅಭಿವೃದ್ಧಿ ಹೀಗೆ ಮುಂತಾದ ತಲ್ಲಣಗಳಿಗೆ ಪರಿಹಾರ ನೀಡಿ ಚಳುವಳಿ ಜೀವಂತ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ದೇಶದ ಸ್ವಾತಂತ್ರ್ಯ ಹೋರಾಟವು ಸಹ ಸಹಕಾರ ತತ್ವದ ಪರಿಣಾಮ, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್ ಹಾಗೂ ಸುಭಾಷ್ಚಂದ್ರ ಬೋಸ್ ಮುಂತಾದ ನಾಯಕರ ನಡುವೆ ವೈಚಾರಿಕ ಭಿನ್ನತೆ ಇದ್ದರೂ ಕೂಡ ದೇಶಕ್ಕಾಗಿ ಅವರ ಸಹಕಾರ ದೇಶದ ಪ್ರಜೆಗೆ ಸ್ವಾತಂತ್ರ್ಯ ದೊರಕಿಸಿತು.೪೦೦೦ಕ್ಕೂ ಹೆಚ್ಚು ರೈತ ಮಿತ್ರರ ಹೊಂದಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಾಡಬಾಳ PACS೨೩,೦೬೭.೦೩ ವಾರ್ಷಿಕ ಒಟ್ಟು ವ್ಯವಹಾರಗಳೊಂದಿಗೆ ಅಲ್ಲಿನ ರೈತರನ್ನು, ಮಹಿಳೆಯರನ್ನು ಹಾಗೂ ೫೨ ಸೈನಿಕರ ಕುಟುಂಬಗಳ ಆರ್ಥಿಕ ವ್ಯವಹಾರದ ಸೇತುವೆಯಾಗಿ ಎಲ್ಲರನ್ನೂ ಗೆಲ್ಲಿಸಿದೆ.
೧೦,೦೦೦ಕ್ಕೂ ಹೆಚ್ಚು ಸದಸ್ಯತ್ವದೊಂದಿಗೆ ರೂ ೨೫೨ ಕೋಟಿ ವಾರ್ಷಿಕ ದುಡಿಯುವ ಬಂಡವಾಳದೊoದಿಗೆ ಮಹಿಳೆಯರನ್ನು ಗೆಲ್ಲಿಸುತ್ತಿರುವ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ., ವಿಜಯಪುರ ಮಾದರಿ ಸಹಕಾರ ಸಂಘವಾಗಿದೆ. ೨,೫೯೨ ಕುಟುಂಬಗಳಿಗೆ ೩,೪೮೪ ಲಕ್ಷ ರೂಗಳ ಸಾಲ ನೀಡಿರುವ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ PACS ರೈತರ ಜೀವನದ ಆಶಾಭಾವನೆಯಾಗಿದೆ.
“ದೇಶವನ್ನು ಪ್ರೀತಿಸುವವರು ಶಿಕ್ಷಣವನ್ನು ಪ್ರೀತಿಸಬೇಕು. ಶಿಕ್ಷಣವನ್ನು ಪ್ರೀತಿಸುವವರು ಯುವಜನತೆಯನ್ನು ಪ್ರೀತಿಸಬೇಕು, ಯುವಜನತೆಯನ್ನು ಪ್ರೀತಿಸುವವರು ಸಹಕಾರವನ್ನು ಪ್ರೀತಿಸಬೇಕು” ಎಂಬ ಮಾತು ತನ್ನಲ್ಲೇ ಅನೇಕ ಆಳವಾದ ಅರ್ಥಗಳನ್ನು ಒಳಗೊಂಡಿದೆ. ಈ ಮಾತು ಕೇವಲ ನುಡಿಯಲ್ಲ, ನಾಡು ಕಟ್ಟುವ ಮಾರ್ಗದರ್ಶಿ ತತ್ವವಾಗಿದೆ. ದೇಶದ ಪ್ರಗತಿ, ಶಕ್ತಿ, ಸಾಂಸ್ಕೃತಿಕ ಐಕ್ಯತೆ, ಆರ್ಥಿಕ ಬೆಳವಣಿಗೆ ಇವೆಲ್ಲ ಅಂಶಗಳ ಸಮನ್ವಯದಿಂದ ಸಾಧ್ಯವಾಗುತ್ತದೆ.
೨೦೨೫ನೇ ವರ್ಷವು ಅಂತರಾಷ್ಟ್ರೀಯ ಹಾಗೂ ದೇಶದ ಸಹಕಾರ ಕ್ಷೇತ್ರದ ಪ್ರಮುಖ ಘಟ್ಟವಾಗಿದೆ. “ಸಹಕಾರ ಉತ್ತಮ ಜಗತ್ತನ್ನು ನಿರ್ಮಿಸಬಲ್ಲದು” ಎಂಬ ಘೋಷವಾಕ್ಯದೊಂದಿಗೆ ವಿಶ್ವಸಂಸ್ಥೆಯು ೨೦೨೫ನೇ ವರ್ಷವನ್ನು ಅಂತಾರಾಷ್ಟ್ರೀಯ ಸಹಕಾರ ವರ್ಷವೆಂದು ಘೋಷಿಸಿದೆ ಹಾಗೂ ೨೦೦೨ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಮೊದಲ ಸಹಕಾರ ನೀತಿಯನ್ನು ಪರಿಚಯಿಸಿದ ನಂತರ ಸುಮಾರು ೨೩ ವರ್ಷದ ನಂತರ ಎರಡನೇಯ ರಾಷ್ಟ್ರೀಯ ಸಹಕಾರ ನೀತಿ -೨೦೨೫ ನ್ನು ಕೇಂದ್ರ ಸರ್ಕಾರ ಅನಾವರಣ ಮಾಡಿದೆ. ಇವೆರಡು ಸಹಕಾರ ಕ್ಷೇತ್ರದ ಪ್ರಾಮುಖ್ಯತೆಯನ್ನು ವ್ಯಕ್ತಪಡಿಸುತ್ತಿವೆ.
ಚಾಲಕರಿಗೆ ಉತ್ತಮ ಪ್ರತಿಫಲ ಸಿಗಬೇಕು, ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಹಾಗೂ ಸುರಕ್ಷಿತವಾದ ಸೇವೆಯು ಕೈಗೆಟಕುವ ದರದಲ್ಲಿ ಸಿಗಬೇಕು ಎಂಬ ಪ್ರಮುಖ ಉದ್ದೇಶದೊಂದಿಗೆ “ಭಾರತ್” ಹೆಸರಿನ ಬ್ರಾಂಡ್ ಅಡಿಯಲ್ಲಿ ಓಲಾ ಮತ್ತು ಉಬರ್ ಮಾದರಿಯಲ್ಲಿ “ಸಹಕಾರ ಟ್ಯಾಕ್ಸಿ” ಪ್ರಾರಂಭಿಸಲು ವೇದಿಕೆ ಸಜ್ಜಾಗಿದೆ. ಇದರೊಟ್ಟಿಗೆ ಪ್ರವಾಸೋದ್ಯಮ, ಆರೋಗ್ಯ, ಹಸಿರು ಇಂಧನ, ಪ್ಲಾಟ್ಫಾರಂ ಸಹಕಾರಿ ಸಂಸ್ಥೆಗಳು, ಕಿಚನ್ ಸಹಕಾರ ಸಂಘಗಳು ಮತ್ತಿತರ ಉದ್ಯೋನ್ಮುಖ ಸಹಕಾರ ಸಂಘಗಳನ್ನು ಅನುಕೂಲಕರ ಪ್ರದೇಶಗಳಿಗೆ ವಿಸ್ತರಣೆ ಮಾಡುವ ಮೂಲಕ “ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ” ಎಂಬ ತಾತ್ವಿಕ ನೆಲೆಯಲ್ಲಿ ರೂಪಗೊಂಡ ಸಹಕಾರಕ್ಷೇತ್ರ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಅಪೂರ್ವ ಕೊಡುಗೆ ನೀಡುವಂತಾಗಿ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹ ಅರ್ಥಪೂರ್ಣವಾಗಿ ಆಚರಿಸುವಂತಾಗಲಿ.

ರಾಜೇಶ ಯಾವಗಲ್
ಉಪನ್ಯಾಸಕರು
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್
ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಕಲಬುರಗಿ