ಭ್ರಷ್ಟತೆಯಿಂದ “ಸಹಕಾರ” ಸೊರಗಬಾರದು.| ಶ್ರೀ.ರಾಧಾಕೃಷ್ಣ ಕೋಟೆ.

ಸಹಕಾರ  ಜಗತ್ತಿನ ನಾಗರಿಕತೆ ಜತೆಯಲ್ಲಿ ಬೆಳೆದ ಜೀವನಪದ್ದತಿ.ಸುಮಾರು ಒಂದೂವರೆ ಶತಮಾನದ ಹಿಂದೆ ಅದಕ್ಕೊಂದು ಚಳುವಳಿಯ ಸ್ವರೂಪ ದೊರೆಯಿತು. ಭಾರತದ ಸಹಕಾರಭೂಮಿಕೆಗೆ 120ವರ್ಷದ ಇತಿಹಾಸ . ಗ್ರಾಮಕ್ಕೊಂದು ಪಂಚಾಯತ್ ˌಶಾಲೆˌ ಸಹಕಾರಿ ಸಂಘ ಇದ್ದಲ್ಲಿ ಆ ಗ್ರಾಮದ ಜನಜೀವನದ ಸುಭದ್ರತೆಗೆ ದಾರಿದೀಪ ಎಂಬ  ಕಲ್ಪನೆ ನಾಡ ಕಟ್ಟುವ ಜನಕರಲ್ಲಿ ಉಂಟಾಗಿತ್ತು. ಇಂತಹ  ವ್ಯವಸ್ಥೆ ಕಲ್ಪನೆ ಮಾತ್ರ ಆಗದೇ ಯಶಸ್ಸು ಕೂಡಾ ಕಂಡಿತು. ಮನುಷ್ಯ ಸಂಸ್ಕಾರವಂತ ಜ್ಞಾನವಂತನಾಗಿ ಬಾಳಲು ಪ್ರಾಥಮಿಕ ಶಾಲೆ ಬುನಾದಿ. ಆತನ ಬಾಳಿನ ವರ್ಚಸ್ಸು ಬೆಳಗಲು ವಿದ್ಯೆ ಅನಿವಾರ್ಯ. ಇದನ್ನು ಸಾದರಪಡಿಸುವ ವ್ಯವಸ್ಥೆ ಶಿಕ್ಷಣದ ಅಡಿಪಾಯವಾದ ಪ್ರಾಥಮಿಕ ಶಾಲೆ. ಅದೇ ರೀತಿ ಹಳ್ಳಿಯು ರಸ್ತೆ ˌಸೇತುವೆ ˌಕುಡಿಯುವ ನೀರುˌ ವಸತಿˌ ದಾರಿದೀಪ ಮುಂತಾದ ಸೌಲಭ್ಯಗಳನ್ನು ಹೊಂದಿ ನಾಗರಿಕತೆ ಹೆಚ್ಚು ಪ್ರಕರವಾಗಲು ಪಂಚಾಯತ್  ವ್ಯವಸ್ಥೆ ಅತೀಅಗತ್ಯ. ನಾಡಿನ ಅಭಿವೃಧ್ಧಿಯ ಪ್ರಾಥಮಿಕ ಹಂತ ಪಂಚಾಯತ್ ರಾಜ್ ಕಲ್ಪನೆ. ಗ್ರಾಮಗಳಲ್ಲಿ ಇವೆರಡರಷ್ಟೆ ಮಹತ್ವವಾದ ಆರ್ಥಿಕತೆ ಹಾಗೂ ದೈನಂದಿನ ಅವಶ್ಯಕತೆಯ ಇನ್ನೊಂದು ಕೇಂದ್ರಬಿಂದು ಸಹಕಾರಿಸಂಘ. ಇವು ಮೂರೂ ನಿತ್ಯನಿರಂತರವಾಗಿ ಸ್ವಚ್ಫತೆಯಿಂದ ಸಾಗಿದಾಗ ದೇಶದ ಯಾವುದೇ ಹಳ್ಳಿಯ ಬದುಕು  “ಹಚ್ಚಹಸಿರು” ಎಂಬುದು ಈಗಾಗಲೇ ಸಾಬೀತಾಗಿದೆ.

ದೇಶದಲ್ಲಿ ಮೇಲ್ಮಟ್ಟದ ರಾಜಕಾರಣಿಗಳಿಂದ ಪಂಚಾಯತ್ ರಾಜಕಾರಣಿಗಳ ತನಕ ಅವ್ಯವಹಾರ ˌಭ್ರಷ್ಟತೆ ವ್ಯಾಪಕವಾಗಿ ಪಸರಿಸಿದೆ. ಅಲ್ಲೊಂದು ಇಲ್ಲೊಂದು ಕೆಲವೇ ಮಂದಿ ಸ್ವಚ್ಚ ಶುಭ್ರ ರಾಜಕಾರಣದವರನ್ನು ನಾವು ಕಾಣುತ್ತಿದ್ದೇವೆ.ಸರಕಾರಿ ಇಲಾಖೆಗಳಂತೂ ಲಂಚಾವತಾರದ ಬೀಡು. ಇದರ ವಿರುದ್ದ ಹಲವಾರು ಹೋರಾಟಗಳು ನಡೆದರೂ ಕಿರು ಪ್ರಮಾಣದಲ್ಲಿ ಕೂಡಾ ಭ್ರಷ್ಟಾಚಾರ ಕುಗ್ಗಿಲ್ಲ. ಸರಕಾರಿ ಇಲಾಖೆಗಳ ಜತೆ ಸಹಕಾರಕ್ಕೂ ಅವ್ಯವಹಾರ ಲಂಚಾವತಾರ ಹಬ್ಬಿರುವುದು ಸಹಕಾರರಂಗದ ವಿಶೇಷತೆಗೆ ಬಡಿದಿರುವ ಬಹುದೊಡ್ಡ ಆಘಾತ.

ಸಹಕಾರ ಸ್ವಾಯತ್ತಾ ವ್ಯವಸ್ಥೆ. ಸಹಕಾರ ಸಂಘದಲ್ಲಿ ಆಡಳಿತಮಂಡಳಿ ಯಾವದೆಲ್ಲಾ ವ್ಯವಹಾರಗಳು ಯಾವ ರೀತಿಯಲ್ಲಿ ಸದಸ್ಯರ ಹಿತದೃಷ್ಟಿಯಿಂದ ಜ್ಯಾರಿಯಾಗಬೇಕೆಂದು ನಿರ್ಣಯ ಕೈಗೊಳ್ಳುವ ನೀತಿರೂಪಣಾಒಕ್ಕೂಟ. ಅವೆಲ್ಲವನ್ನು ಜ್ಯಾರಿಗೊಳಿಸಲು ಕ್ರಮ ಕೈಗೊಳ್ಳುವ ಮುಖ್ಯಸ್ಥ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ.  ಇವೆಲ್ಲವು ಸುಸೂತ್ರವಾಗಿ ಮುನ್ನಡೆಯಲು ದಿಕ್ಸೂಚಿ ನೀಡುವುದು ಅಧ್ಯಕ್ಷನ ಕಾರ್ಯಭಾರ. ಆಡಳಿತ ಮಂಡಳಿಯನಿರ್ಣಯˌ ಕಾನೂನು ಉಪವಿಧಿಗಳಲ್ಲಿ ನಮೂದಿಸಲ್ಪಟ್ಟ ಕೆಲವೊಂದು ಅಧಿಕಾರಕ್ಕನು ಸರಿಸಿ ಅಧ್ಯಕ್ಷ ನೀಡುವ ದಿಕ್ಸೂಚಿಯ ಆಧಾರದ ಹಾಗೂ ಶಿಬಂಧಿ ಸೇವಾನಿಯಮˌ ಕೆಲಸ ಹಂಚೋಣದಂತೆ ಮುಖ್ಯಕಾರ್ಯನಿರ್ವಹಣಾಧಿಕಾರಿ ನೀಡುವ ಆದೇಶಕ್ಕನುಸರಿಸಿ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ಶಿಬಂಧಿಯ ಕರ್ತವ್ಯ.

ಅಧ್ಯಕ್ಷˌ ಆಡಳಿತಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿˌ ಶಿಬಂಧಿಗೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಹಕಾರಿ ಕಾನೂನು ˌನಿಯಮ ಉಪವಿಧಿˌಒಳನಿಯಮಾವಳಿ ಲೆಕ್ಕಪತ್ರ ನಿರ್ವಹಣೆಯ ಪೂರ್ಣ ಅರಿವು ಅಗತ್ಯ. ಒಂದುವೇಳೆ ಜ್ಞಾನದ ಕೊರತೆ ಇದ್ದರೆ ಕಾಲಕಾಲದಲ್ಲಿ ವಿಷಯಾಧಾರಿತವಾಗಿ ತಜ್ಞರಿಂದ ತರಬೇತಿˌ ಅಭ್ಯಾಸವರ್ಗ ಅಗತ್ಯ. ಜೀವನದ ಯಾವುದೇ ವಿಚಾರಕ್ಕೆ ಕ್ಷಣಕ್ಷಣ ಶಿಕ್ಷಣ ಅಂದ ಹಾಗೆ ಸಹಕಾರದಲ್ಲಿ ಸದಾ ಆಗಾಗ ಶಿಕ್ಷಣವನ್ನು ಏರ್ಪಡಿಸುವುದು ಆಡಳಿತ ಮಂಡಳಿಯ ಹೊಣೆಗಾರಿಕೆ .ಜವಾಬ್ದಾರಿಯ ಬದ್ದತೆˌನಿಷ್ಟೆˌ ಹೊಣೆಗಾರಿಕೆಯಮೌಲ್ಯದ ಅರಿವು ಎಲ್ಲರಿಗೂ ಇದ್ದಾಗ ಮಾತ್ರ ಸಂಸ್ಥೆ ಯಶಸ್ವಿನ ಪಥದಲ್ಲಿ ಸಾಗಲು ಸಾಧ್ಯ.

   ಸಹಕಾರದ ವೈಫಲ್ಯಕ್ಕೆ ಈ ಕೆಳಗಿನ ಒಂದಷ್ಟು ಅಂಶಗಳು ಪ್ರಮುಖ ಕಾರಣ.

  1).ಆಡಳಿತ ಮಂಡಳಿಗೆ ಸಹಕಾರ ಕ್ಷೇತ್ರದ ಬಗ್ಗೆ ವಿಶೇಷ ಜ್ಞಾನ ಇರಲೇ ಬೇಕು. ಆತ  ಆಡಳಿತ ಮಂಡಳಿಗೆ ಪ್ರವೇಶಿಸಿದ ಆರಂಭಿಕ ಹಂತದಲ್ಲಿ ಪರಿಣತಿ ಇಲ್ಲದಿದ್ದಲ್ಲಿ ಕಲಿಯುವ ಪರಿಪಾಠಯನ್ನು ಹೊಂದಬೇಕು. ಕಾನೂನುˌ ನಿಯಮˌ ಬೈಲಾ ˌಒಳನಿಯಮಾವಳಿˌ ಲೆಕ್ಕಪತ್ರವನ್ನು ಅಧ್ಯಯನ ಮಾಡುವ ಮೂಲಕ ಸಹಕಾರದ ವಿಷಯದಲ್ಲಿ ತಿಳುವಳಿಕೆಯನ್ನು ಹೊಂದಲು ಅವಕಾಶವಿದೆ. ಅದೇ ರೀತಿ ಸಭೆಗಳ ಕಾರ್ಯಸೂಚಿಯ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಂಡು ಸಭೆಯಲ್ಲಿ  ನಿಗದಿತ ಸಮಯಕ್ಕೆ ಮುಂಚಿತವಾಗಿ ಹಾಜರಾಗಿ ಸಕ್ರಿಯವಾಗಿ ಚರ್ಚಿಸುವ ಸ್ವಭಾವವನ್ನು ಬೆಳೆಸಬೇಕು. ಸಭೆಯ ಕೊನೆಯ ತನಕ ಉಪಸ್ಥಿತನಿರಬೇಕು ಈ ರೀತಿಯ ನಡವಳಿಕೆಯನ್ನು ರೂಢಿಸಿಕೊಂಡಾಗ ಸ್ವಾಭಾವಿಕವಾಗಿ ಸಹಕಾರದಲ್ಲಿ ಧೀಮಂತ ನಡೆಯನ್ನು ಇಡಲು ಸಾಧ್ಯವಾಗುತ್ತದೆ. ಅದಿಲ್ಲದೆ ಹೋದಲ್ಲಿ ಸಹಕಾರದ ವೈಫಲ್ಯಕ್ಕೆ ನಮ್ಮ “ಕೊಡುಗೆ” ನೀಡಿದಂತಾಗುತ್ತದೆ. ವ್ಯವಹಾರಕ್ಷೇತ್ರದ ಜನತೆಗೆ ಎಲ್ಲಾ ಸೌಲಭ್ಯಗಳು ಒಂದೇ ಕೇಂದ್ರದಲ್ಲಿ ಸಿಗುವಂತಾಗಬೇಕು. ಯಾವ ಸೌಲಭ್ಯ ಸಂಸ್ಥೆಯಲ್ಲಿ ಇನ್ನೂ ಕೂಡಾ ದೊರೆಯುತ್ತಿಲ್ಲ ಎಂಬುದನ್ನು ಗಣನೆಗೆ ತೆಗೆದು ಕೊಂಡು ಅದನ್ನು ಒದಗಿಸುವ ಕರ್ತವ್ಯ ವನ್ನು ಆಡಳಿತ ಮಂಡಳಿ ಜ್ಯಾರಿಗೊಳಿಸಬೇಕು. ಹಾಗೇ ಪ್ರಾದೇಶಿಕವಾಗಿ ಅಗತ್ಯವಿಲ್ಲದ   ಕೆಲಸಕ್ಕೆ ತೊಡಗಬಾರದು.

2). ಆಡಳಿತ ಮಂಡಳಿಗಳಿಗೆ ಆಯ್ಕೆಯಾಗುವ ಬಹುಪಾಲು ಸದಸ್ಯರ ಆಸಕ್ತಿ ಸೀಮಿತವಾಗಿರುತ್ತದೆ. ರಾಜಕೀಯಹಿನ್ನಲೆಯಿಂದ ಬರುವವರಾದ ಕಾರಣ ಅಭ್ಯರ್ಥಿ ಆಯ್ಕೆ ಸಂದರ್ಭ ಮಾನದಂಡಕ್ಕೆ ಗಮನ ನೀಡದೆ ಮುಖಂಡರನ್ನು ಓಲೈಸುವ ಯಾವುದೇ ಕಾರ್ಯಕರ್ತನಿಗೆ ಪ್ರಾಧಾನ್ಯತೆ. ಇಂತಹ ಹೆಚ್ಚಿನವರು ನಂತರ ಸ್ವಂತ ಅಥವಾ ತನ್ನವರ ಹಿತಾಸಕ್ತಿಗೆ ಗಮನಹರಿಸುವುದುˌ ಶಿಬಂಧಿ ನೇಮಕಾತಿ ಸಂದರ್ಭ ಅವರನ್ನು ಸಂಪರ್ಕಿಸಿದವರು ಯಾ ಸಂಬಂಧಿಕರ ನೇಮಕಾತಿಗೆ ಉತ್ಸಾಹ ತೋರಿಸುವುದು ಮುಂತಾದ ಕೆಲವು ವಿಷಯಗಳನ್ನು ಬಿಟ್ಟರೆ ಸಂಸ್ಥೆಯ ಅಭಿವೃಧ್ಧಿಗೆ ಚಿಂತನೆಯನ್ನು ಮಾಡುವುದಿಲ್ಲ. ಹೊರಗಿನ ರಾಜಕೀಯ ಪ್ರಮುಖರ ಒತ್ತಡಕ್ಕೆ ಮಣಿದು ಅವ್ಯವಹಾರಿಕ ಅಥವಾ ಕಾನೂನು ಬಾಹಿರ ಕಾರ್ಯಕ್ಕೆ ಆಸ್ಪದ ನೀಡಬಾರದು.ಆಡಳಿತ ಮಂಡಳಿ ಸದಸ್ಯ ತಾನು ನೀಡಿದ ಸೂಚನೆಯಂತೆ ಸಂಘದ ಕಾರ್ಯ ನಡೆಯಬೇಕೆಂಬ ಹಠಮಾರಿತನಕ್ಕೆ ಬೀಳಬಾರದು.ಈ ರೀತಿಯ  ಚಟುವಟಿಕೆಗಳಿಂದ ಹೊಡೆತ ಬಿದ್ದು ದೊಡ್ಡಪ್ರಮಾಣದಲ್ಲಿ ಆಡಳಿತ ಮಂಡಳಿಗಳು  ಹೊರದಾರಿಗೆ ನಡೆಯುತ್ತವೆ.

3).ಆಡಳಿತ ಮಂಡಳಿ ಸದಸ್ಯ ಸಂಘ ನಡೆಸುವ ವ್ಯವಹಾರಗಳನ್ನು ನಡೆಸಿದರೆ ಆತ ಆಡಳಿತ ಮಂಡಳಿಗೆ ಕಾನೂನು ಪ್ರಕಾರ ಅನರ್ಹ ನಾಗುತ್ತಾನೆ.ಹಲವು ಕಡೆಗಳಲ್ಲಿ ಇಂತಹದ್ದು ನಡೆದರೂ ಆತನನ್ನು ಅನರ್ಹಗೊಳಿಸಲು ಕಾನೂನು ಪ್ರಕ್ರಿಯೆಗೆ ಯಾರೂ ಮುಂದಾಗುವುದಿಲ್ಲ.

4). ಅಧ್ಯಕ್ಷರುˌ ಆಡಳಿತಮಂಡಳಿಗಳು ಶಿಬಂಧಿಗಳ ಮೇಲೆ ವಿಪರೀತ ವಿಶ್ವಾಸ ಹೊಂದಿರುವುದು ಸಂಸ್ಥೆಯಲ್ಲಿ ಅವ್ಯವಹಾರಕ್ಕೆ ದಾರಿಯಾಗುತ್ತದೆ. ಕಾಲಕಾಲದಲ್ಲಿ ಶಿಬಂಧಿಗೆ ವಹಿಸಿದ ವ್ಯವಹಾರಗಳಿಗೆ ಗಮನನೀಡುವುದುˌ ಸ್ವಾಯತ್ತಾ ವ್ಯವಸ್ಥೆಯಿಂದ ಆಂತರಿಕ ಲೆಕ್ಕಪರಿಶೋಧನೆ ನಡೆಸಿ ವರದಿ ಪಡೆದು ಆಡಳಿತ ಮಂಡಳಿ ಪರಿಶೀಲಿಸುವ ಪರಿಪಾಠ ಬೆಳೆಸಿಕೊಳ್ಳಬೇಕು.  ಶಿಬಂಧಿಗಳ ಕಾರ್ಯವೈಖರಿ ಬಗ್ಗೆ CEOನೀಡುವ ವರದಿಯನ್ನು ಆಡಳಿತ ಮಂಡಳಿ ಗಣನೆಗೆ ತೆಗೆದು ಕೊಳ್ಳಬೇಕು.ಜೀನಸು ಮುಂತಾದ ಸಾಮಾಗ್ರಿಗಳ ಖರೀದಿ ˌಮಾರಾಟಕ್ಕೆ ನಿಯಮಾವಳಿ ರೂಪಿಸಿ ಪ್ರಜಾಪ್ರಭುತ್ವ ಸ್ವರೂಪದಲ್ಲಿ ಜ್ಯಾರಿಗೊಳಿಸಬೇಕು.CEO ಗೆ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಆತನ ಕೆಳಹಂತದ ಅಧಿಕಾರಿಗೆ ಕೆಲವೊಂದು ಕಾರ್ಯಗಳ ಜವಾಬ್ದಾರಿಯನ್ನು ಅಧಿಕೃತವಾಗಿ ನೀಡಬೇಕು. ಯಾವುದೇ ಸಾಮಾಗ್ರಿಗಳ ಖರೀದಿˌ ಮಾರಾಟದಲ್ಲಿ ಶಿಬಂಧಿಗೆ ಪೂರ್ಣ ಸ್ವಾಯತ್ತೆ ನೀಡಲೆ ಬಾರದು .ಆತನ ಮೇಲಾಧಿಕಾರಿ ಅಥವಾ ಮುಖ್ಯಕಾರ್ಯನಿರ್ವಹಣಾಧಿಕಾರಿˌ ಅಧ್ಯಕ್ಷ ಸದಾ ಪರಿಶೀಲನೆ ನಡೆಸುತ್ತಿರಬೇಕು.  ವಾರ್ಷಿಕ ಮಾಲು ಪರಿಶೀಲನೆ ಜತೆಯಲ್ಲಿ ಕನಿಷ್ಟ ಮೂರು ತಿಂಗಳ ಅಂತರದಲ್ಲಿ ಸಂಸ್ಥೆಯ ಮಾಲುಗಳನ್ನು  ಆ ವಿಭಾಗದ ಹೊರತಾದ ಶಿಬಂಧಿಯ ಸಹಾಯದಿಂದ ಗೊತ್ತುಪಡಿಸಿದ ಆಡಳಿತ ಮಂಡಳಿ ಸದಸ್ಯ ಮಾಲು ಪರಿಶೀಲನೆ ನಡೆಸಬೇಕು. ಯಾವುದೇ ನ್ಯೂನತೆ ಕಂಡುಬಂದಲ್ಲಿ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು. ಜತೆಯಲ್ಲಿ ಅಲ್ಲಿನ ಶಿಬಂಧಿಯನ್ನು ಇನ್ನೊಂದು ವಿಭಾಗಕ್ಕೆ ವರ್ಗಾಯಿಸಬೇಕು. ಒಬ್ಬ ಶಿಬಂಧಿ ಒಂದು ವಿಭಾಗದಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಇರಬಾರದು.  ಹೀಗಾದಲ್ಲಿ ಸಂಸ್ಥೆಯ ಎಲ್ಲಾ ವಿಭಾಗಗಳು ಪಾರದರ್ಶಕವಾಗಿರುತ್ತವೆ ಮತ್ತು ಶಿಬಂಧಿಗೆ ಎಲ್ಲ ಕೆಲಸಗಳಲ್ಲೂ ಅನುಭವ ದೊರೆಯುತ್ತದೆ. ರಸಗೊಬ್ಬರˌ ಜಾನುವಾರು ಆಹಾರˌಅಕ್ಕಿ ಮುಂತಾದ ದೊಡ್ಡಪ್ರಮಾಣದ (ಸಾಧ್ಯವಾದಲ್ಲಿ ಸಣ್ಣವಸ್ತುಗಳ ಬಗ್ಗೆ ಯೋಚಿಸಬಹುದು)ಸಾಮಾಗ್ರಿಗಳನ್ನು ಬಳಕೆದಾರನಿಂದ ಆರ್ಡರ್ ಪಡಕೊಂಡು ಕ್ಲಪ್ತಕಾಲದಲ್ಲಿ ಆತನ ಮನೆಬಾಗಿಲಿಗೆ ತಲಪಿಸಲು ತೊಡಗಬೇಕು. ಇದಕ್ಕಾಗಿಯೇ ಒಬ್ಬ ಶಿಬಂಧಿ ಮೂಲಕ ಹಾಗೂ ಸಂಸ್ಥೆವಾಹನವೊಂದನ್ನು ಹೊಂದಿ ಸೀಮಿತದರದಲ್ಲಿ ಒದಗಿಸಬೇಕು. ಆಗ ಗ್ರಾಹಕರು ಆಕರ್ಷಿತರಾಗಿ ಸಂಘದ ವ್ಯವಹಾರ ವೃದ್ದಿಯಾಗುತ್ತದೆ. ವ್ಯಾಪಾರ ವಹಿವಾಟಿನಲ್ಲಿ ಕನಿಷ್ಟ ಲಾಭಾಂಶ ಇಟ್ಟು ಹೆಚ್ಚುಸಲ ವ್ಯವಹಾರವಾಗುವಂತೆ ನೋಡಿಕೊಳ್ಳಬೇಕು.

5).ಇತ್ತೀಚೆಗಿನ ದಿನಗಳಲ್ಲಿ ಶಿಬಂಧಿ ನೇಮಕಾತಿಯಲ್ಲಿ ಲಕ್ಷಗಟ್ಟಲೆ ಲಂಚಗುಳಿತನದ ಆರೋಪಗಳು ಕೇಳಿಬರುತ್ತಿವೆ.ಶಿಬಂಧಿ ನೇಮಕಾತಿ ಯು ಪಾರದರ್ಶಕವಾಗಿದ್ದುˌ ಅರ್ಹತೆˌ ನಿಯಮ ವನ್ನು ಪಾಲಿಸುವುದರ ಜತೆಗೆ ಶಿಬಂಧಿಗಳ ಪದೋನ್ನತಿಯ ಸಂದರ್ಭ ಕೂಡಾ ಆತನ ಸಾಮಾರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಅದರಲ್ಲೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿಯಾದಾಗ ಎಲ್ಲಾ ರೀತಿಯಲ್ಲೂ ಸಮರ್ಥನಾದರೆ ಮಾತ್ರ ಕೆಳಹಂತದವನನ್ನು ಪದೋನ್ನತಿ ನೀಡಬೇಕು. ಇಲ್ಲವಾದಲ್ಲಿ ಹೊಸನೇಮಕಾತಿ ಮೂಲಕ ವಿದ್ಯಾರ್ಹತೆˌ ಸಹಕಾರಿರಂಗದ ಬಗ್ಗೆ ಆಸಕ್ತಿˌ ಸಂಸ್ಥೆಯನ್ನು ಮುನ್ನಡೆಸುವ ಉಲ್ಲಾಸವನ್ನು ನೇಮಕಾತಿ ಪ್ರಕ್ರಿಯೆ ಸಂದರ್ಭ ಸೂಕ್ಷ್ಮ ವಾಗಿ ಪರಿಶೀಲಿಸಿ ನೇಮಕಾತಿಯನ್ನು ಕೈಗೆತ್ತಿಕೊಳ್ಳಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು. ಒಬ್ಬ ಪ್ರೊಬೇಷನರಿ ಅವಧಿಯಲ್ಲಿ ಅಸಮರ್ಥನೆಂದು ಕಂಡರೆ ಆತನನ್ನು ಕೈಬಿಟ್ಟು ಹೊಸ ನೇಮಕಾತಿ ಮಾಡುವುದು ಅಗತ್ಯ. ಯಾವುದೇ ಸಂಸ್ಥೆಯಲ್ಲಾದರೂ ದೈನಂದಿನ ವ್ಯವಹಾರದ ಸೂತ್ರದಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಆದ ಕಾರಣ ಸಮರ್ಥˌ ನಿಷ್ಟಾವಂತˌ ಪ್ರಾಮಾಣಿಕˌ ಬದ್ದತೆಯ ತಿಳುವಳಿಕೆ ಹೊಂದಿರುವವನಾದರೆ ಸಂಸ್ಥೆ ಬಹುಪಾಲು ಯಶಸ್ವಿಪಡೆಯಬಹುದು.

6) ಆಡಳಿತಮಂಡಳಿ ವಿಷಯ ಪರಿಣತರಿಂದ ಸಲಹೆ ಸೂಚನೆಗಳನ್ನು ಪಡೆದು ಸುಧೀರ್ಘಚಿಂತನೆಯ ಬಳಿಕ ಹೊಸ ವ್ಯವಹಾರˌ ಕಟ್ಟಡಕಟ್ಟುವುದು ಮುಂತಾದ ದೊಡ್ಡ ಕಾರ್ಯಗಳಿಗೆ ಕೈಯಿಕ್ಕಬೇಕು. ಜ್ಞಾನ ಇಲ್ಲದೇ ಕೇವಲ ಬಾಹ್ಯನೋಟಕ್ಕಾಗಿ ದೊಡ್ಡಪ್ರಮಾಣದಲ್ಲಿ ಹಣಕಾಸು ತೊಡಗಿಸುವಿಕೆ ಮಾಡಿದಾಗ ಸಂಸ್ಥೆಗೆ ಸುಧೀರ್ಘಕಾಲ ನಿಭಾಯಿಸಲಸಾಧ್ಯವಾದ ಹೊಡೆತ ಬೀಳಬಹುದು. ಕಂಟ್ರಾಕ್ಟರ್ˌ ಏಜಂಟರ ಮೂಲಕಬಂಡವಾಳ ಹೂಡಿಕೆ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಅಧ್ಯಕ್ಷˌ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಮಿಷನ್ ದಂಧೆಗೆ ಕೈಚಾಚುವುದು ಕೇಳಿ ಬರುವ ಇನ್ನೊಂದು ವಿಚಾರ.

7). ತಂತ್ರಜ್ಞಾನದ ಆಧುನಿಕ ಯುಗದಲ್ಲಿ ಅದರ ನಿರ್ವಹಣೆˌ  ಹೊಸತನಕ್ಕೆ ಗಮನನೀಡಬೇಕು. ಮುಖ್ಯಕಾರ್ಯನಿರ್ವಹಣಾಧಿಕಾರಿ ಅಥವಾ ಆತನಿಂದ ಅಧಿಕಾರಹೊಂದಿದ ತಂತ್ರಜ್ಞಾನದ ವಿಶೇಷತೆ ಬಲ್ಲ ಶಿಬಂಧಿ ಅದರಲ್ಲಾಗುತ್ತಿರುವ ಕೊರತೆಗಳನ್ನು ಸರಿಪಡಿಸಬೇಕು. ಎಲ್ಲಾ ಶಿಬಂಧಿಗಳಿಗೆ ಕಂಪ್ಯೂಟರ್ ನಿರ್ವಹಣೆಯ ಪ್ರಾಥಮಿಕ ಜ್ಞಾನ ಇರಲೇಬೇಕು.

8). ಹಲವಾರು ವರ್ಷಗಳಿಂದ ಒಂದೇ ಗುಂಪು ಆಡಳಿತ ನಡೆಸಿದಲ್ಲಿ ಲೋಪದೋಷಗಳಾಗುವ ಸಾಧ್ಯತೆ ಇದೆ. ಸುಧೀರ್ಘ ಅವಧಿಯ ಅಧ್ಯಕ್ಷನಿರಬಾರದು. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯಲ್ಲಿ ಒಂದಷ್ಟು ಮಂದಿ ಹೊಸಬರು ಒಳಪ್ರವೇಶಿಸಿದಾಗ ಹಿಂದಿನ ಅನುಭವಿಗಳ ಜತೆ ಇವರು ಅನುಭವಿಗಳಾಗಲು ಅವಕಾಶವಾಗುತ್ತದೆ.

ಇನ್ನೂ ಹಲವಾರು ಪ್ರಾದೇಶಿಕ ನ್ಯೂನತೆಗಳು ಸಹಕಾರಿ ಕ್ಷೇತ್ರದಲ್ಲಿ ಕಾಣಲು ಸಾಧ್ಯ. ಪ್ರಾಮಾಣಿಕವಾಗಿ ˌಸಹಕಾರದ ಚೌಕಟ್ಟಿನಡಿ ಸರ್ವರು ನಿಷ್ಟೆಯಿಂದ ಕಾರ್ಯವೆಸಗಿದಾಗ ಎಲ್ಲಾ ಅಡ್ಡದಾರಿಗಳು ಹಿಮ್ಮೆಟ್ಟುತ್ತವೆ.ಸಹಕಾರಿರಂಗ ಸದಸ್ಯರಿಂದ ಸದಸ್ಯರಿಗಾಗಿ ಸದಸ್ಯರಿಗೋಸ್ಕರ ನಡೆಯುವ ವಿಶೇಷ ಸ್ವರೂಪದ ಕ್ಷೇತ್ರವಾದ ಕಾರಣ ಮೇಲ್ಕಾಣಿಸಿದಂತೆ ವಿಷಯಾಧಾರಿತವಾಗಿ ಸರ್ವರು ಪ್ರಾಮಾಣಿಕವಾಗಿ ಮುನ್ನಡೆಸಿದಾಗ ಮಾತ್ರ ಯಶಸ್ವಿನ ಪಥದಲ್ಲಿ ಸಾಗಲು ಸಾಧ್ಯ.

ರಾಧಾಕೃಷ್ಣ ಕೋಟೆ                        
ಅಂಚೆ:ಕಳಂಜˌ                                                                                                                                                                                                                          ಸುಳ್ಯ ತಾಲೂಕು. ದ.ಕ.                                                                                                                                                                                                          574212                                                                                                                                                                                                                  9448503424

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More