ನಮ್ಮ ದೇಶದಲ್ಲಿ ಸಹಕಾರ ಚಳವಳಿ 1904ರಲ್ಲಿ ಅಸ್ತಿತ್ವಕ್ಕೆ ಬಂತು. ಕರ್ನಾಟಕದ ಗದಗದ ಕಣಗಿನಹಾಳದಲ್ಲಿ ಶ್ರೀ ಸಿದ್ದನಗೌಡ ಸಂಣ ರಾಮನ ಗೌಡ ಪಾಟೀಲರಿಂದ ಆರಂಭಿಸಲ್ಪಟ್ಟಿತು. ಅಲ್ಲಿಂದ ಆರಂಭವಾದ ಸಹಕಾರ ಚಳವಳಿ ಪ್ರಕೃತ ಭಾರತದಾದ್ಯಂತ ವ್ಯಾಪಿಸಿದ್ದು ಭಾರತ ಸರಕಾರದ ಸಹಕಾರ ಸಚಿವಾಲಯದ 2024-25ರ ವರದಿ ಪ್ರಕಾರ 28 ವಿಧದ ಒಟ್ಟು 8.36 ಲಕ್ಷ ಸಹಕಾರ ಸಂಘಗಳು ದೇಶದಲ್ಲಿ ನೋಂದಾವಣೆಗೊಂಡಿವೆ.. ಅವುಗಳಲ್ಲಿ ಈಗ ಸುಮಾರು 6.50 ಲಕ್ಷ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. 32.38 ಕೋಟಿ ಜನರು ಸದಸ್ಯರಾಗಿರುತ್ತಾರೆˌ ಸಹಕಾರ ಇಲಾಖೆ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, NABARḐ, APEX BANK, DCC Bank —ಇವುಗಳು ಮೇಲ್ವಿಚಾರಣೆ, ಪರಿವೀಕ್ಷಣೆಗಳನ್ನು ಕಾಲ ಕಾಲಕ್ಕೆ ನಡೆಸುತ್ತಾ ಪ್ರಾಥಮಿಕ ಸಂಘಗಳು ಸರಿಯಾದ ದಾರಿಯಲ್ಲಿ ನಡೆಯುತ್ತಿರುವುದನ್ನು ಖಾತರಿ ಪಡಿಸಿಕೊಳ್ಳುತ್ತವೆ. ಸಹಕಾರ ಸಂಘಗಳ ಸದಸ್ಯರಿಂದ ಪ್ರತಿನಿಧಿತವಾಗಿರುವ ಸಹಕಾರಿ ಯೂನಿಯನ್, ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಗಳ ಆಡಳಿತ ಮಂಡಳಿಗಳು ಸಹಕಾರ ವ್ಯವಸ್ಥೆಯಲ್ಲಿ ಕಾನೂನು ಮತ್ತು ಕಾಯ್ದೆಗಳಲ್ಲಿ ತರಬೇಕಾಗಿರುವ ಬದಲಾವಣೆಗಳು ಇತ್ಯಾದಿಗಳ ಬಗ್ಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜನಪ್ರತಿನಿಧಿಗಳನ್ನು ಸಂಪರ್ಕಿಸುವ ಕೊಂಡಿಯಾಗಿ ಕೆಲಸ ಮಾಡುತ್ತವೆ ಮತ್ತು ಸ್ಥಳೀಯವಾಗಿ ಸಹಕಾರ ಸಂಘಗಳಿಗೆ ಬರುವ ಸವಾಲುಗಳನ್ನು ಮುನ್ನಡೆಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿಕೊಂಡು ಸಹಕಾರ ಸಂಘಗಳ ಆಡಳಿತ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ದೇಶಕರಿಗೆ/ ಸಿಬ್ಬಂದಿಗಳಿಗೆ ತರಬೇತಿ, ಸ್ಥಳೀಯವಾಗಿ ಅಕ್ರಮಗಳು ನಡೆದಿದ್ದಲ್ಲಿ ಅವುಗಳ ವಿಚಾರಣೆಗಳ ಕೆಲಸಗಳನ್ನು ಇಲಾಖಾ ಅಧಿಕಾರಿಗಳ ಮೂಲಕ ನಡೆಸಿ ಸಹಕಾರಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಡುವ ಕೆಲಸ ನಿರ್ವಹಿಸುತ್ತಿರುತ್ತವೆ.
ಸಹಕಾರ ಸಂಘದಲ್ಲಿ ಪರಮೋಚ್ಛ ಯಾರು….. ಅಧ್ಯಕ್ಷರೊ?ˌಆಡಳಿತ ಮಂಡಳಿಯೋ?ˌ ಸಿಬ್ಬಂದಿಗಳೋ?ˌ ಇಲಾಖೆಯೋ? … ಈ ಕಾರಣಕ್ಕೆ ಜಿದ್ದಾಜಿದ್ದಿ ನಡೆದು ಸಹಕಾರ ವ್ಯವಸ್ಥೆಗೆ ಹಾನಿಯಾಗುತ್ತಿರುವುದನ್ನು ಕೆಲವೊಂದು ಕಡೆ ಕಾಣುತ್ತೇವೆ. ಸರಕಾರ ಅವ್ಯವಹಾರಿಕವಾದˌ ಸ್ವಾಯತ್ತಾವ್ಯವಸ್ಥೆಗೆ ದಕ್ಕೆ ತರುವ ಕಾನೂನುಗಳನ್ನು ಜ್ಯಾರಿ ಮಾಡುವುದು ಮತ್ತು ಸಂಘಗಳುˌಸದಸ್ಯರು ಕೋರ್ಟ್ ಮೊರೆ ಹೋಗುವುದು ಈಗೀಗ ಅತ್ಯಧಿಕವಾಗುತ್ತಿದೆ. ಸಹಕಾರ ಕ್ಷೇತ್ರದೊಳಗೆ ರಾಜಕೀಯ ನುಸುಳಿವಿಕೆ ಮೊದಲಿನಿಂದಲೇ ಇದ್ದರೂ ಚುನಾವಣೆಯ ನಂತರ ಪಕ್ಷಭೇದ ಮರೆತು ಸಹಕಾರ ವ್ಯವಸ್ಥೆಗೆ ಕುಂದು ಬಾರದಂತೆ ಸಮನ್ವಯದಿಂದ ಕೆಲಸ ಮಾಡುತ್ತಿರುವುದು ಇತ್ತೀಚಿನವರೆಗೂ ನಡೆದು ಬರುತ್ತಿತ್ತು. ಆದರೆ ಈಗ ಪಂಚಾಯತ್ ವ್ಯವಸ್ಥೆಗಳಲ್ಲಿ ನಡೆಯುವಂತೆ ಸಹಕಾರ ಕ್ಷೇತ್ರದಲ್ಲೂ ರಾಜಕೀಯದ ಅತಿ ಪ್ರವೇಶ ಈ ಕ್ಷೇತ್ರವನ್ನು ನಿಧಾನವಾಗಿ ಕುಲಗೆಡಿಸುವುದು ಕಾಣಸಿಗುತ್ತಿದೆ. ಸಹಕಾರ ವಿಷಯದ ಅಧ್ಯಯನದ ಕೊರತೆ ಮತ್ತು ರಾಜಕೀಯ ಶಕ್ತಿಯ ಅತಿಯಾದ ಬಳಕೆ ಇವುಗಳಿಗೆ ಮುಖ್ಯ ಕಾರಣ.
ಸಹಕಾರ ಸಿದ್ಧಾಂತದ ಪ್ರಕಾರ ಸಂಘದ ಸಂಪೂರ್ಣ ಅಧಿಕಾರ ಸದಸ್ಯರದ್ದಾಗಿರುತ್ತದೆ. ಎಲ್ಲಾ ಸದಸ್ಯರು ನಿರಂತರ ಕಚೇರಿಗೆ ಬಂದು ಆಡಳಿತ ನಡೆಸುವುದು ವ್ಯವಹಾರಿಕವಾಗಿ ಅಸಾಧ್ಯವಾಗಿರುವುದರಿಂದ ಸದಸ್ಯರಿಂದ ಚುನಾಯಿತರಾದ ಆಡಳಿತ ಮಂಡಳಿಯು ಸಂಘದ ಆಡಳಿತವನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತದೆ. ಸಂಘದ ಬೈಲಾದಲ್ಲಿ ಅಳವಡಿಸಿಕೊಂಡ ಕಾರ್ಯಗಳನ್ನು, ಸೇವೆಗಳನ್ನು ಸಹಕಾರ ಸಂಘದ ಕಾಯ್ದೆ ಮತ್ತು ನಿಯಮಗಳಿಗನುಸಾರವಾಗಿ ಸದಸ್ಯರಿಗೆ ತಲುಪುವಂತೆ ಮುನ್ನಡೆಸುವ ಜವಾಬ್ದಾರಿ ಆಡಳಿತ ಮಂಡಳಿಗೆ ಇರುತ್ತದೆ. ಈ ಎಲ್ಲಾ ಕಾರ್ಯಗಳನ್ನು ನಡೆಸಲು ಸೂಕ್ತ ಸಿಬ್ಬಂದಿಯ ವೃಂದಬಲವನ್ನು ನಿಯಮಾನುಸಾರ ಮಂಜೂರು ಮಾಡಿಸಿಕೊಂಡು ಅವರಿಂದ ಕೆಲಸ ಮಾಡಿಸಿಕೊಳ್ಳಬೇಕಾಗುತ್ತದೆ. ಒಬ್ಬ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಸಂಘದ ಸಿಬ್ಬಂದಿ ವರ್ಗದ ಮೇಲ್ವಿಚಾರಣೆ ನಡೆಸಿಕೊಂಡು ಆಡಳಿತ ಮಂಡಳಿ, ಹಣಕಾಸು ಪೂರೈಕೆಯ ಡಿಸಿಸಿ ಬ್ಯಾಂಕ್, ಸಹಕಾರ ಇಲಾಖೆಯೊಂದಿಗೆ ಸಮಾಲೋಚಿಸಿಕೊಂಡು ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ನಡುವೆ ಕೊಂಡಿಯಂತೆ ಕಾರ್ಯ ನಿರ್ವಹಿಸಬೇಕು. ಸಹಕಾರ ಸಂಘಗಳ ಕಾಯ್ದೆ, ನಿಯಮ, ಬೈಲಾಗಳ ವಿಷಯಗಳನ್ನು ಸರಿಯಾಗಿ ತಿಳಿದು ಅರ್ಥೈಸಿಕೊಂಡು ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಹಂಚಲಾದ ಕೆಲಸದ ಹಂಚಿಕೆ ಪಟ್ಟಿಯ ಪ್ರಕಾರ ಕರ್ತವ್ಯ ನಿರ್ವಹಿಸಿ ಸಂಘದ ನಿರಂತರ ಚಟುವಟಿಕೆಗಳನ್ನು ಮುನ್ನಡೆಸುವುದು ಸಿಬ್ಬಂದಿ ವರ್ಗದ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಸಹಕಾರ ಸಂಘಗಳ ಕಾಯ್ದೆ ಕಲಂ 29.ಜಿ(4) ಪ್ರಕಾರ ಮುಖ್ಯ ಕಾರ್ಯನಿರ್ವಾಹಕನು ಸಂಘದ ಮುಖ್ಯ ಆಡಳಿತ ಅಧಿಕಾರಿಯಾಗಿರುತ್ತಾನೆ ಮತ್ತು ಕಲಂ 29 ಜಿ 4(ಬಿ) ಪ್ರಕಾರ ಆಡಳಿತ ಮಂಡಳಿಯ ಪದನಿಮಿತ್ತ ಸದಸ್ಯನಾಗಿರುತ್ತಾನೆ. ಆಡಳಿತ ಮಂಡಳಿಯ ಮೇಲ್ವಿಚಾರಣೆಗೊಳಪಟ್ಟು ಬೈಲಾ ಮತ್ತು ಸಹಕಾರ ಕಾಯ್ದೆ, ನಿಯಮಗಳಿಗನುಸಾರ ಸಿಬ್ಬಂದಿ ವರ್ಗದವರ ಮೇಲ್ವಿಚಾರಣೆ ಮಾಡಲು ಅಧಿಕಾರ ಹೊಂದಿದವನಾಗಿರುತ್ತಾನೆ. ಕಾಯ್ದೆ 29 ಜಿ 4(ಎ) ಪ್ರಕಾರ ಸಂಘದ ಪ್ರತಿಯೊಂದು ಸಭೆಯಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಹಾಗೂ ಯಾವುದೇ ಗೊತ್ತುವಳಿಯನ್ನು ಮಂಡಿಸಲು ಅಧಿಕಾರ ಹೊಂದಿರುತ್ತಾನೆ. ಸಹಕಾರ ಸಂಘಗಳ ನಿಯಮ 14 ಎಕೆ(3) ಪ್ರಕಾರ ಅಧ್ಯಕ್ಷನ ಸಮಾಲೋಚನೆಯೊಂದಿಗೆ ಕರೆದ ಆಡಳಿತ ಮಂಡಳಿ ಸಭೆಯ ನೋಟೀಸಿನೊಂದಿಗೆ ಮುಖ್ಯ ಕಾರ್ಯನಿರ್ವಾಹಕನು ಪ್ರತಿ ಕಾರ್ಯಸೂಚಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಾಧಕ ಭಾಧಕಗಳು, ಅವುಗಳಿಂದ ಸಂಘಕ್ಕಾಗುವ ಆರ್ಥಿಕ ಪರಿಣಾಮಗಳ ಬಗ್ಗೆ, ಕಾನೂನಿನ ಉಪಬಂಧಗಳ ಬಗ್ಗೆ ವಿವರವಾದ ಟಿಪ್ಪಣಿಗಳನ್ನು ಬರೆದು ಆಡಳಿತ ಮಂಡಳಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವ ಅಧಿಕಾರ ಹೊಂದಿರುತ್ತಾನೆ. ಆಡಳಿತ ಮಂಡಳಿಯು ಈ ವಿಷಯಗಳನ್ನು ಗಮನಿಸಿಕೊಂಡು ಸಂಘ ಮತ್ತು ಸದಸ್ಯರ ಹಿತಾಸಕ್ತಿಗೆ ಪೂರಕವಾಗಿ ತೀರ್ಮಾನ ಕೈಗೊಳ್ಳಬೇಕಾಗಿರುತ್ತದೆ. ಅಧ್ಯಕ್ಷನು ಎಲ್ಲಾಸದಸ್ಯರಿಗೂ ಅಭಿಪ್ರಾಯ ಮಂಡಿಸಲು ಅವಕಾಶ ನೀಡುವುದು ಮತ್ತು ಕೊನೆಯಲ್ಲಿ ತನ್ನ ಅಭಿಪ್ರಾಯ ಹೇಳುವುದು. ಚರ್ಚೆಗಳು ಹೇಗೇ ಇದ್ದರೂ ಸರ್ವಾನುಮತ ಅಥವಾ ಬಹುಮತದ ಅಭಿಪ್ರಾಯದ ಆಧಾರದಲ್ಲಿ ನಿರ್ಣಯವನ್ನು ಕ್ರೋಡೀಕರಿಸಿ ಅಧ್ಯಕ್ಷನು ಅಂತಿಮ ನಿರ್ಣಯವನ್ನು ಮಂಡಿಸತಕ್ಕದ್ದು.. ಸಹಕಾರ ಸಂಘಗಳ ನಿಯಮ 14 ಎಕೆ(9) ಪ್ರಕಾರ ಮುಖ್ಯ ಕಾರ್ಯನಿರ್ವಾಹಕನು ಪ್ರತಿ ಸಭೆಯ ಮುಕ್ತಾಯದ ನಂತರ ಏಳು ದಿನಗಳ ಒಳಗೆ ಸಭೆಯ ತೀರ್ಮಾನಗಳ ನಡವಳಿಕೆಗಳ ಪ್ರತಿಯನ್ನು ತನ್ನ ಸಹಿ ಮತ್ತು ಅಧ್ಯಕ್ಷನ ಸಹಿ ಮಾಡಿಸಿ ಪ್ರತಿ ನಿರ್ದೇಶಕರಿಗೆ ಕಳುಹಿಸಿ ಕೊಡತಕ್ಕದ್ದು. ಸಭೆಯ ತೀರ್ಮಾನಗಳನ್ನು ಚರ್ಚಿಸಿದಂತೆ ದಾಖಲಿಸಿರುವಲ್ಲಿ ಏನಾದರೂ ವ್ಯತ್ಯಾಸಗಳು ಕಂಡು ಬಂದಲ್ಲಿ ನಿರ್ದೇಶಕರು ನಡವಳಿಕೆ ಸ್ವೀಕೃತಿಯ ಮೂರು ದಿನಗಳೊಳಗಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆಕ್ಷೇಪಣೆಯನ್ನು ಸಲ್ಲಿಸತಕ್ಕದ್ದು ಮತ್ತು ಅರ್ಧಕ್ಕಿಂತ ಹೆಚ್ಚಿನ ಬಲದ ನಿರ್ದೇಶಕರು ಆಕ್ಷೇಪಣೆ ಸಲ್ಲಿಸಿದಲ್ಲಿ ಮುಖ್ಯ ಕಾರ್ಯನಿರ್ವಾಹಕನು ಆ ತೀರ್ಮಾನಗಳನ್ನು ಜಾರಿ ಮಾಡದೆ ಮುಂದಿನ ಸಭೆಗೆ ಮಂಡಿಸತಕ್ಕದ್ದು. ಇದು ಮುಖ್ಯ ಕಾರ್ಯನಿರ್ವಾಹಕನ ಆದ್ಯ ಕರ್ತವ್ಯವಾಗಿದೆ.
ಆಡಳಿತ ಮಂಡಳಿಯು ಕಾಯ್ದೆ ಕಲಂ 28 ಸಿ ಅನ್ವಯ ತನ್ನ ಅಧಿಕಾರಗಳು ಮತ್ತು ಪ್ರಕಾರ್ಯಗಳನ್ನು ನಡೆಸಬೇಕು.ಪ್ರತೀ ವರ್ಷ ಸಪ್ಟಂಬರ್ 1ರೊಳಗೆ ಸಂಘದ ಲೆಕ್ಕ ಪರಿಶೋಧನೆಯನ್ನು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯು ಅನುಮೋದಿಸಿ ಪ್ರಕಟಿಸಿದ ಪಟ್ಟಿಯಲ್ಲಿರುವ ಸನ್ನದು ಲೆಕ್ಕ ಪರಿಶೋಧಕರಿಂದ ಅಥವಾ ಸಹಕಾರ ಲೆಕ್ಕಪರಿಶೋಧನಾ ಇಲಾಖೆಯ ಅಧಿಕಾರಿಗಳಿಂದ ನಡೆಸಿ ವರದಿ ಪಡೆದು ನ್ಯೂನತೆಗಳ ಬಗ್ಗೆ ಪರಿಶೀಲಿಸಿ ಅವುಗಳನ್ನು ಸರಿಪಡಿಸುವ ಮತ್ತು ಗಂಭೀರ ಪ್ರಕರಣಗಳಿದ್ದಲ್ಲಿ ಅವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಆಡಳಿತ ಮಂಡಳಿಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಚುನಾವಣೆಯನ್ನು ನಡೆಸಲು ಸಹಕಾರ ಚುನಾವಣಾ ವಿಭಾಗಕ್ಕೆ ಆಡಳಿತ ಮಂಡಳಿ ಪದಾವಧಿ ಮುಕ್ತಾಯದ 6 ತಿಂಗಳ ಮೊದಲು ನಿರ್ಣಯಕೈಗೊಳ್ಳುವುದು ಆಡಳಿತ ಮಂಡಳಿ ಜವಾಬ್ದಾರಿಯಾಗಿದೆ. ಪ್ರತೀ ವರ್ಷ ಸಪ್ಟಂಬರ್ 25ರೊಳಗೆ ಸಂಘದ ವಾರ್ಷಿಕ ಮಹಾಸಭೆಯನ್ನು ನಡೆಸುವುದು ಸಹಕಾರ ಸಂಘಗಳ ಕಾಯ್ದೆ ಕಲಂ 17 ಪ್ರಕಾರ ಆಡಳಿತ ಮಂಡಳಿಯ ಜವಾಬ್ದಾರಿಯಾಗಿದೆ ಮತ್ತು ಕಾಯ್ದೆಯಲ್ಲಿ ಸೂಚಿಸಿದಂತೆ ಸಂಘದ ಲೆಕ್ಕ ಪತ್ರಗಳನ್ನು ಮಹಾಸಭೆಯಲ್ಲಿ ಮಂಡಿಸಿ ಲಾಭಾಂಶ ವಿಲೇವಾರಿ ಮಾಡುವುದು, ಬಜೆಟ್ ಅನುಮೋದನೆ ಪಡೆಯುವುದು, ಲೆಕ್ಕ ಪರಿಶೋಧಕರ ನೇಮಕಾತಿ ಇತ್ಯಾದಿಗಳನ್ನು ಕಾರ್ಯಸೂಚಿಗನುಸರಿಸಿ ತೀರ್ಮಾನಿಸಬೇಕಾಗಿರುತ್ತದೆ.
ಪ್ರತೀ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ತಮ್ಮ ಸಂಘದ ಬೈಲಾ ಪ್ರತಿ ಪಡಕೊಂಡು ವಿಷಯಗಳನ್ನು ಮನನ ಮಾಡಿಕೊಳ್ಳತಕ್ಕದ್ದು. ಆಡಳಿತ ಮಂಡಳಿಯ ಅನರ್ಹತೆಗಳ ಬಗ್ಗೆ ಕಾಯ್ದೆ ಕಲಂ 29ಸಿ ಯಲ್ಲಿ ತಿಳಿಸಲಾಗಿದೆ. ಅದು ಆಡಳಿತ ಮಂಡಳಿ ಸದಸ್ಯರ ತಿಳುವಳಿಕೆಯಲ್ಲಿರಬೇಕು. ಸಂಘದ ಆರ್ಥಿಕ ಸ್ಥಿತಿ ಗತಿಯ ಮೇಲ್ನೋಟದ ಮಾಹಿತಿ ಪ್ರತಿ ನಿರ್ದೇಶಕನಲ್ಲೂ ಇರತಕ್ಕದ್ದು ಮತ್ತು ಪ್ರತೀ ಆಡಳಿತ ಮಂಡಳಿ ನೋಟೀಸಿನೊಂದಿಗೆ ಆ ತಿಂಗಳ ಜಮಾ ಖರ್ಚಿನ ತಃಖ್ತೆಯನ್ನು ಕಳುಹಿಸಲು ಮುಖ್ಯ ಕಾರ್ಯನಿರ್ವಾಹಕನಿಗೆ ಸೂಚಿಸಿ ಸಭೆಗೆ ಬರುವಾಗ ಅವುಗಳನ್ನು ಓದಿ ಅದರ ಬಗ್ಗೆ ಚರ್ಚೆಗಳನ್ನು ನಡೆಸಬೇಕು.
ಸಹಕಾರ ಸಂಘಗಳ ಮಾರಾಟ ವಿಭಾಗಗಳಲ್ಲಿ ಇತ್ತೀಚೆಗೆ ಅತ್ಯಧಿಕ ಅವ್ಯವಹಾರಗಳು ಕಂಡು ಬರುತ್ತಿದ್ದು ಆಡಳಿತ ಮಂಡಳಿಯು ಕನಿಷ್ಟ 6 ತಿಂಗಳಿಗೊಮ್ಮೆಯಾದರೂ ದಾಸ್ತಾನು ಪರಿಶೀಲನೆಯನ್ನು ಮಾಡತಕ್ಕದ್ದು. ಬ್ಯಾಂಕಿಂಗ್ ವಿಭಾಗದಲ್ಲಿಯೂ ಆರ್.ಟಿ.ಜಿ.ಎಸ್ ˌನೆಫ್ಟ್ ವ್ಯವಹಾರಗಳಲ್ಲಿ ಮೇಲಿಂದ ಮೇಲೆ ಅವ್ಯವಹಾರದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಪ್ರತೀ ಆಡಳಿತ ಮಂಡಳಿ ಸಭೆ ನಡೆದಾಗ ಹಿಂದಿನ ತಿಂಗಳಾಂತ್ಯದ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಆಸ್ತಿ ಜವಾಬ್ದಾರಿ ತಃಖ್ತೆಯಲ್ಲಿ ಇರುವ ಮೊತ್ತವನ್ನು ತುಲನೆ ಮಾಡಿಕೊಂಡು ಪರಿಶೀಲಿಸುವುದು ಆಡಳಿತ ಮಂಡಳಿಯ ಜವಾಬ್ದಾರಿ.ಮಾರಾಟ ದಾಸ್ತಾನುಗಳ ವಿತರಕರಿಂದಲೂ ಅಂತಿಮ ಬ್ಯಾಲೆನ್ಸ್ ದೃಢಿಕರಣ ಪತ್ರವನ್ನು ವರ್ಷಾಂತ್ಯಕ್ಕೆ ತರಿಸಿ ಸಂಘದಲ್ಲಿ ಕೊಡತಕ್ಕ ಬಾಕಿ ಮೊತ್ತಕ್ಕೆ ತಾಳೆ ಇರುವುದನ್ನು ಪರಿಶೀಲಿಸಬೇಕು. ಈ ರೀತಿ ಸಂಘದಲ್ಲಿ ಆಂತರಿಕ ಲೆಕ್ಕ ಪರಿಶೋಧನಾ ವ್ಯವಸ್ಥೆಯನ್ನು ಸ್ಥಳೀಯ ಸಿ.ಎ ಅಥವಾ ಸಹಕಾರ ಕ್ಷೇತ್ರದಲ್ಲಿಲೆಕ್ಕಪತ್ರಗಳ ಕೆಲಸ ಮಾಡಿ ಅನುಭವ ಇರುವ ನಿವೃತ್ತ ಅಧಿಕಾರಿಗಳಿಂದ ಮಾಡಿಸಿ ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಬೇಕು.
ಒಟ್ಟಿನಲ್ಲಿ ಸಹಕಾರ ಸಂಘಗಳಲ್ಲಿ ನಿಯಮಬದ್ಧ ಚರ್ಚೆ, ಸಂವಾದಗಳ ಮೂಲಕ ಆಡಳಿತ ಮಂಡಳಿ ಸಭೆಗಳು ನಡೆದಾಗ ಸಂಘದ ನಿರಂತರ ಪ್ರಗತಿ ಸಾಧ್ಯ. ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಒಂದು ವಾಹನದ ಮುಂದಿನ ಎರಡು ಚಕ್ರವೆಂದು ಪರಿಗಣಿಸಿದರೆ ಪ್ರಾಥಮಿಕ ಸಹಕಾರ ಸಂಘಗಳಿಗೆ ಆರ್ಥಿಕತೆ ಒದಗಿಸುವ ಮಧ್ಯವರ್ತಿ ಡಿ ಸಿ ಸಿ ಬ್ಯಾಂಕು ಹಾಗೂ ಮಾರ್ಗದರ್ಶನ ನೀಡುವ ಸಹಕಾರ ಇಲಾಖೆ ವಾಹನದ ಹಿಂದಿನ ಎರಡು ಚಕ್ರಗಳೆಂದು ಪರಿಗಣಿಸಬಹುದು. ನಾಲ್ಕೂ ಚಕ್ರಗಳು ಕಾನೂನು ನಿಯಮಕ್ಕನುಸರಿಸಿ ಸಮನ್ವಯದಿಂದ ಚಲಿಸಿದರೆ ಸಂಘ ತನ್ನ ಗುರಿ ಮುಟ್ಟಬಹುದು. ಯಾವುದಾದರೂ ಒಂದು ದಾರಿತಪ್ಪಿದರೆ ಅಫಘಾತಕ್ಕೊಳಗಾಗುವುದು ಸಾಮಾನ್ಯ. ಇದರಿಂದಾಗಿ ಸಂಘ ಬಸವಳಿಯುವುದು. ಆದ್ದರಿಂದ ಸಂಘದ ಹಿತದೃಷ್ಟಿಯಿಂದ ಆಗಾಗ ಪರಿಣತರಿಂದ ಶಿಬಂಧಿ ನಿರ್ದೇಶಕರಿಗೆ ತರಬೇತಿ, ಹಾಗೂ ವಿಚಾರ ವಿಮರ್ಶೆಅಗತ್ಯ.
ಸಹಕಾರಿ ಸಂಘಗಳಲ್ಲಿ ಯಾರೂ ಪರಮೋಚ್ಚ ಅಲ್ಲ. ಸದಸ್ಯರು, ಅಧ್ಯಕ್ಷˌ ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಿಬಂಧಿ,ಆರ್ಥಿಕ ಮೂಲದ ಮಧ್ಯವರ್ತಿ ಬ್ಯಾಂಕುˌ ಸಹಕಾರ ಇಲಾಖೆ ಮುಂತಾದ ಎಲ್ಲರೂ ಅವರವರ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸುವುದು ಸಹಕಾರದ ವಿಶೇಷತೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಹಕಾರ ಸಿದ್ಧಾಂತ. ಇದಕ್ಕನುಸರಿಸಿ ಕಾಯ್ದೆ, ನಿಯಮ, ಬೈಲಾಗಳ ಪ್ರತಿಯೊಂದು ಅಂಶಗಳಿಗೆ ಗಮನ ನೀಡುವುದು ಪ್ರತಿಯೊಂದು ವಿಭಾಗದ ಹೊಣೆಗಾರಿಕೆ.ಎಲ್ಲ ವಿಭಾಗಗಳಿಗೆ ಸೀಮಿತ ಪರಿಧಿಯೊಳಗೆ ಹಕ್ಕು ˌಕರ್ತವ್ಯ ಹಂಚಿಕೆಯಾಗಿರುವುದರಿಂದ ಸಹಕಾರ ವ್ಯವಸ್ಥೆಯಲ್ಲಿ ಯಾರೂ ಪರಮೋಚ್ಚ ಅಲ್ಲ!

ರಾಧಾಕೃಷ್ಣ ಕೋಟೆ. ಅಂಚೆ ಕಳಂಜ 574212
ದ.ಕ. 9448503424 (Whatsaap Call)