ಸಹಕಾರಿ ಸಂಸ್ಥೆಯ ಅಭಿವೃದ್ಧಿಯಲ್ಲಿ ಸದಸ್ಯರ ಪಾತ್ರ.| ಶ್ರೀ. ಕುಮಾರ ಸುಬ್ರಹ್ಮಣ್ಯ ಮುಳಿಯಾಲ.


“ಸಹಕಾರ” ಎಂಬ ಪದವೇ ಒಟ್ಟಾಗಿ ಸಾಗುವಿಕೆ ಎಂಬ ಅರ್ಥವನ್ನು ಹೊತ್ತಿದೆ. ಸಹಕಾರಿ ಸಂಸ್ಥೆಗಳು ಕೇವಲ ಲಾಭ ಗಳಿಸುವ ವ್ಯಾಪಾರ ಕೇಂದ್ರಗಳಲ್ಲ; ಅವು ಸಮಾನತೆ, ನಂಬಿಕೆ, ಪರಸ್ಪರ ಹೊಣೆಗಾರಿಕೆ ಮತ್ತು ಸಮೂಹ ಪ್ರಗತಿಯ ತತ್ವಗಳ ಮೇಲೆ ನಿಂತಿರುವ ಜನಆಧಾರಿತ ವ್ಯವಸ್ಥೆಗಳಾಗಿವೆ. ಆದ್ದರಿಂದ ಯಾವುದೇ ಸಹಕಾರಿ ಸಂಸ್ಥೆಯ ಯಶಸ್ಸು ಅಥವಾ ವೈಫಲ್ಯವು ಅದರ ಕಟ್ಟಡ, ಬಂಡವಾಳ ಅಥವಾ ಆಡಳಿತಕ್ಕಿಂತ ಹೆಚ್ಚಾಗಿ ಅದರ ಸದಸ್ಯರ ಜಾಗೃತಿ ಮತ್ತು ಭಾಗವಹಿಸುವಿಕೆಯಲ್ಲಿ ಅಡಕವಾಗಿದೆ.

ಸದಸ್ಯನೇ ಸಂಸ್ಥೆಯ ಮೂಲಶಕ್ತಿ:

ಸಹಕಾರಿ ಸಂಸ್ಥೆಯಲ್ಲಿ ಸದಸ್ಯನು ಕೇವಲ “ಖಾತೆದಾರ”ನಲ್ಲ; ಆತನೇ ಸಂಸ್ಥೆಯ ಮಾಲೀಕ, ಗ್ರಾಹಕ ಮತ್ತು ಪಾಲುದಾರ. ಒಂದು ಖಾಸಗಿ ಕಂಪನಿಯಲ್ಲಿ ಲಾಭವೇ ಕೇಂದ್ರಬಿಂದು ಆಗಿದ್ದರೆ, ಸಹಕಾರದಲ್ಲಿ ಸದಸ್ಯರ ಹಿತವೇ ಕೇಂದ್ರಬಿಂದು. ಹೀಗಾಗಿ ಸದಸ್ಯರ ನಿಷ್ಠೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದಿದ್ದರೆ ಸಹಕಾರದ ಅಸ್ತಿತ್ವವೇ ಕುಸಿಯಬಹುದು.

ಸಹಕಾರಿ ಸಂಸ್ಥೆಯ ಅಭಿವೃದ್ಧಿಯಲ್ಲಿ ಸದಸ್ಯರ ಜಾಗೃತಿ ಅತ್ಯಗತ್ಯ:

ಸಹಕಾರಿ ಸಂಸ್ಥೆಗಳು ಕೆಲವರ ಸ್ವಂತ ಆಸ್ತಿಯಲ್ಲ; ಅವು ಸಾವಿರಾರು ಸದಸ್ಯರ ವಿಶ್ವಾಸದ ಮೇಲೆ ನಿಂತಿರುವ ಜನಸಂಸ್ಥೆಗಳು. ಆದರೆ ಇಂದಿನ ಅನೇಕ ಸಹಕಾರಿ ಸಂಸ್ಥೆಗಳ ಸ್ಥಿತಿಯನ್ನು ನೋಡಿದರೆ, ಸದಸ್ಯರು ತಮ್ಮ ಹಕ್ಕು ಮತ್ತು ಜವಾಬ್ದಾರಿಯನ್ನು ಮರೆತು ಕೇವಲ ಪ್ರೇಕ್ಷಕರಾಗಿ ಉಳಿದಿರುವುದು ಸ್ಪಷ್ಟವಾಗುತ್ತದೆ.

ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಮುಖ್ಯವಾದರೂ, ಅದಕ್ಕಿಂತ ಮುಖ್ಯವಾದುದು ಆ ಮಂಡಳಿಯನ್ನು ಆಯ್ಕೆ ಮಾಡುವ ಸದಸ್ಯರ ಪ್ರಜ್ಞೆ. ಯಾಕೆಂದರೆ ಕೆಟ್ಟ ಆಡಳಿತ ಮಂಡಳಿ ಆಕಾಶದಿಂದ ಇಳಿಯುವುದಿಲ್ಲ; ಸದಸ್ಯರ ನಿರ್ಲಕ್ಷ್ಯದಿಂದಲೇ ಹುಟ್ಟುತ್ತದೆ.

ಚುನಾವಣೆಯ ಸಮಯದಲ್ಲಿ ವ್ಯಕ್ತಿತ್ವ, ಪ್ರಾಮಾಣಿಕತೆ, ಆಡಳಿತ ಸಾಮರ್ಥ್ಯ ಮತ್ತು ಸಂಸ್ಥೆಯ ದೃಷ್ಟಿಕೋನವನ್ನು ನೋಡದೆ ಜಾತಿ, ಗುಂಪು, ರಾಜಕೀಯ ಅಥವಾ ವೈಯಕ್ತಿಕ ಸಂಬಂಧಗಳ ಆಧಾರದ ಮೇಲೆ ಮತ ಚಲಾಯಿಸಿದರೆ, ನಂತರ ಸಂಸ್ಥೆಯ ದುಸ್ಥಿತಿಗೆ ಆಡಳಿತ ಮಂಡಳಿಯನ್ನು ಮಾತ್ರ ದೂರುವ ನೈತಿಕ ಹಕ್ಕು ಸದಸ್ಯರಿಗೆ ಇರುವುದಿಲ್ಲ.

ಸದಸ್ಯರು ಕೇವಲ ಮತ ಹಾಕುವ ದಿನ ಮಾತ್ರ “ಮಾಲೀಕರು” ಆಗಿ, ಉಳಿದ ದಿನಗಳಲ್ಲಿ ಮೌನ ವೀಕ್ಷಕರಾಗಿದ್ದರೆ ಸಹಕಾರ ಜೀವಂತವಾಗುವುದಿಲ್ಲ. ವಾರ್ಷಿಕ ಸಭೆಗಳಿಗೆ ಬಾರದವರು, ಲೆಕ್ಕಪತ್ರ ಕೇಳದವರು, ನಿರ್ಧಾರಗಳ ಬಗ್ಗೆ ಪ್ರಶ್ನಿಸದವರು , ಇಂಥ ಸದಸ್ಯರ ಮೌನವೇ ಅನೇಕ ಸಂಸ್ಥೆಗಳ ಕುಸಿತಕ್ಕೆ ಕಾರಣವಾಗಿದೆ.

ಆಡಳಿತ ಮಂಡಳಿಯವರನ್ನು ಹೊಗಳುವುದೇ ಸದಸ್ಯರ ಕರ್ತವ್ಯವಲ್ಲ; ಅವರನ್ನು ಜವಾಬ್ದಾರಿಯುತವಾಗಿ ಪ್ರಶ್ನಿಸುವುದು, ತಪ್ಪುಗಳನ್ನು ಎಚ್ಚರಿಸುವುದು ಮತ್ತು ಸಂಸ್ಥೆಯ ಹಿತದ ದೃಷ್ಟಿಯಿಂದ ನಿಷ್ಠುರವಾಗಿ ನಿಲುವು ತಾಳುವುದು ನಿಜವಾದ ಸದಸ್ಯತ್ವದ ಲಕ್ಷಣ. “ನಮ್ಮವರೇ” ಎಂಬ ಅಂಧಭಾವದಿಂದ ತಪ್ಪುಗಳನ್ನು ಮರೆಮಾಚುವುದು ಸಹಕಾರಕ್ಕೆ ಮಾಡಿದ ದೊಡ್ಡ ದ್ರೋಹ.

ಸಹಕಾರಿ ಸಂಸ್ಥೆಯಲ್ಲಿ ಅಧಿಕಾರ ಎನ್ನುವುದು ಗೌರವದ ಆಸನವಲ್ಲ; ಅದು ಸದಸ್ಯರ ವಿಶ್ವಾಸದ ಹೊಣೆಗಾರಿಕೆ. ಆ ಹೊಣೆಗಾರಿಕೆಯನ್ನು ಆಡಳಿತ ಮಂಡಳಿ ಮರೆತಾಗ, ಅವರನ್ನು ಎಚ್ಚರಿಸುವ ನೈತಿಕ ಧೈರ್ಯ ಸದಸ್ಯರಲ್ಲಿ ಇರಬೇಕು.

ಪ್ರಶ್ನಿಸದ ಸದಸ್ಯರು ಕೊನೆಗೆ ತಮ್ಮದೇ ಸಂಸ್ಥೆಯ ದುರ್ಬಲತೆಗೆ ಕಾರಣರಾಗುತ್ತಾರೆ. ಸಹಕಾರ ಉಳಿಯಬೇಕಾದರೆ ಸದಸ್ಯರು ಚಪ್ಪಾಳೆ ತಟ್ಟುವ ಜನರಾಗಬಾರದು; ಜಾಗೃತ ಪಾಲುದಾರರಾಗಬೇಕು. ಏಕೆಂದರೆ “ನಿದ್ರಿಸುವ ಸದಸ್ಯತ್ವದ ಮೇಲೆ ಆರೋಗ್ಯಕರ ಸಹಕಾರ ಕಟ್ಟಲಾಗುವುದಿಲ್ಲ.”

ಈ ನಿಟ್ಟಿನಲ್ಲಿ ಸದಸ್ಯರ ಪ್ರಮುಖ ಪಾತ್ರಗಳತ್ತ ಗಮನ ಹರಿಸೋಣ.

ಸದಸ್ಯರ ಪ್ರಮುಖ ಪಾತ್ರಗಳು:

1.ವ್ಯವಹಾರದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ:

ಸಹಕಾರಿ ಸಂಘವನ್ನು ಬೆಳೆಸಬೇಕಾದರೆ ಸದಸ್ಯರು ತಮ್ಮ ವ್ಯವಹಾರಗಳನ್ನು ಸಂಘದ ಮೂಲಕವೇ ನಡೆಸಬೇಕು. ಕೃಷಿ ಸಹಕಾರಿಯಾದರೆ ಉತ್ಪನ್ನವನ್ನು ಸಂಘಕ್ಕೆ ನೀಡುವುದು, ಬ್ಯಾಂಕ್ ಆದರೆ ಠೇವಣಿ ಮತ್ತು ಸಾಲ ವ್ಯವಹಾರಗಳನ್ನು ಸಂಘದಲ್ಲೇ ಮಾಡುವುದು, ಹಾಲು ಉತ್ಪಾದಕರ ಸಂಘವಾದರೆ ಹಾಲನ್ನು ಸಂಘಕ್ಕೆ ಪೂರೈಸುವುದು ಇವು ಸದಸ್ಯನ ಮೊದಲ ಕರ್ತವ್ಯಗಳು.ಸಂಸ್ಥೆಯಿಂದ ಸೌಲಭ್ಯ ಪಡೆದು ವ್ಯವಹಾರವನ್ನು ಹೊರಗಡೆ ನಡೆಸುವುದು ಸಹಕಾರದ ಆತ್ಮಕ್ಕೆ ವಿರುದ್ಧ. ಆದರೆ ಸದಸ್ಯರ ಹಿತ ಕಾಪಾಡುವುದು ಆಡಳಿತ ಮಂಡಳಿಯ ಜವಾಬ್ಧಾರಿಯೂ ಆಗಿದೆ.

2.ಪ್ರಜಾಸತ್ತಾತ್ಮಕ ಜವಾಬ್ದಾರಿ:

ಸಹಕಾರಿ ಸಂಸ್ಥೆಗಳಲ್ಲಿ “ಒಬ್ಬ ಸದಸ್ಯ ಒಂದು ಮತ” ಎಂಬ ತತ್ವವಿದೆ. ಆದ್ದರಿಂದ ಚುನಾವಣೆಗಳಲ್ಲಿ ಜಾಣ್ಮೆಯಿಂದ ಮತ ಚಲಾಯಿಸುವುದು, ಯೋಗ್ಯ ಆಡಳಿತ ಮಂಡಳಿಯನ್ನು ಆಯ್ಕೆ ಮಾಡುವುದು ಮತ್ತು ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಸದಸ್ಯರ ಮಹತ್ತರ ಹೊಣೆಗಾರಿಕೆ. ಸಭೆಗಳಿಗೆ ಹಾಜರಾಗದೇ, ನಂತರ ಸಂಸ್ಥೆಯ ವೈಫಲ್ಯವನ್ನು ಟೀಕಿಸುವುದು ಆರೋಗ್ಯಕರ ಸಹಕಾರ ಮನೋಭಾವವಲ್ಲ

3.ಪಾರದರ್ಶಕತೆಗೆ ಒತ್ತಾಯ :

ಒಳ್ಳೆಯ ಸದಸ್ಯನು ಕೇವಲ ಸೌಲಭ್ಯ ಪಡೆಯುವುದಲ್ಲ; ಸಂಸ್ಥೆಯ ಹಣಕಾಸು, ಆಡಳಿತ ಮತ್ತು ನಿರ್ಧಾರ ಪ್ರಕ್ರಿಯೆಗಳ ಬಗ್ಗೆ ಜಾಗೃತನಾಗಿರಬೇಕು. ಪ್ರಶ್ನಿಸುವುದು, ಸಲಹೆ ನೀಡುವುದು ಮತ್ತು ತಪ್ಪುಗಳನ್ನು ಸರಿಪಡಿಸಲು ಒತ್ತಾಯಿಸುವುದು ಸಹಕಾರದ ಆರೋಗ್ಯಕರ ಲಕ್ಷಣ. ಅಂಧ ಬೆಂಬಲ ಸಹಕಾರವನ್ನು ದುರ್ಬಲಗೊಳಿಸುತ್ತದೆ; ಜವಾಬ್ದಾರಿಯುತ ಬೆಂಬಲ ಅದನ್ನು ಬಲಪಡಿಸುತ್ತದೆ.

4. ಯುವಜನರ ಮತ್ತು ಹೊಸ ಆಲೋಚನೆಗಳ ಸೇರ್ಪಡೆ :

ಇಂದಿನ ಕಾಲದಲ್ಲಿ ಸಹಕಾರಿ ಕ್ಷೇತ್ರವು ತಂತ್ರಜ್ಞಾನ, ಮಾರುಕಟ್ಟೆ ಸ್ಪರ್ಧೆ ಮತ್ತು ಗ್ರಾಹಕರ ನಿರೀಕ್ಷೆಗಳೊಂದಿಗೆ ಹೆಜ್ಜೆ ಹಾಕಬೇಕಿದೆ. ಇದರಿಗಾಗಿ ಸದಸ್ಯರು ಯುವಜನರನ್ನು ಸಂಘದ ಚಟುವಟಿಕೆಗೆ ತರುವುದು, ಹೊಸ ಆಲೋಚನೆಗಳಿಗೆ ಅವಕಾಶ ನೀಡುವುದು ಮತ್ತು ಡಿಜಿಟಲ್ ವ್ಯವಸ್ಥೆಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಬೇಕು.

5.ಸಹಕಾರಿ ಸಂಸ್ಥೆಗಳಲ್ಲಿ ಮಹಿಳೆಯರ ಸೇರ್ಪಡೆ :

ಸಹಕಾರಿ ಸಂಸ್ಥೆಯ ದೀರ್ಘಕಾಲೀನ ಸ್ಥಿರತೆ ಮತ್ತು ನೈತಿಕ ಬಲದ ಹಿಂದೆ ಮಹಿಳೆಯರ ಪಾತ್ರವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.ಯಾಕೆಂದರೆ ಮಹಿಳೆ ಕೇವಲ ಸದಸ್ಯೆಯಾಗಿರುವುದಿಲ್ಲ; ಆಕೆ ಕುಟುಂಬದ ಆರ್ಥಿಕ ಶಿಸ್ತು, ನಂಬಿಕೆ ಮತ್ತು ಸಂವೇದನೆಯ ಪ್ರತಿನಿಧಿಯಾಗಿರುತ್ತಾಳೆ.

ಗ್ರಾಮೀಣ ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾದ ಕಡೆಗಳಲ್ಲಿ ಉಳಿತಾಯದ ಪ್ರಮಾಣ, ಸಾಲ ಮರುಪಾವತಿ ಮತ್ತು ಸಂಘದ ಮೇಲೆ ಇರುವ ನಿಷ್ಠೆ ಹೆಚ್ಚು ಗಟ್ಟಿಯಾಗಿರುವುದು ಅನೇಕ ಉದಾಹರಣೆಗಳಿಂದ ಸಾಬೀತಾಗಿದೆ. ಮಹಿಳೆಯರು ಸಹಕಾರವನ್ನು ಕೇವಲ ಲಾಭದ ವ್ಯವಹಾರವಾಗಿ ನೋಡುವುದಿಲ್ಲ; ಕುಟುಂಬ ಮತ್ತು ಸಮಾಜದ ಭದ್ರತೆಯ ಭಾಗವಾಗಿ ನೋಡುತ್ತಾರೆ.

ಆದರೆ ವಿಷಾದಕರ ಸಂಗತಿ ಏನೆಂದರೆ, ಅನೇಕ ಸಹಕಾರಿ ಸಂಸ್ಥೆಗಳಲ್ಲಿ ಮಹಿಳೆಯರ ಸ್ಥಾನ ಇನ್ನೂ ಕೇವಲ “ಕೋಟಾ” ಅಥವಾ “ಹೆಸರಿನ ಸದಸ್ಯತ್ವ” ಮಟ್ಟಕ್ಕೆ ಸೀಮಿತವಾಗಿದೆ. ಸಭೆಗಳಲ್ಲಿ ಮಾತನಾಡಲು ಅವಕಾಶ ಕಡಿಮೆ, ನಿರ್ಧಾರ ಪ್ರಕ್ರಿಯೆಯಲ್ಲಿ ಭಾಗವಹಿಸುವಿಕೆ ಅಲ್ಪ, ಕೆಲವೆಡೆ ಮಹಿಳಾ ಸದಸ್ಯತ್ವವೇ ಕುಟುಂಬದ ಪುರುಷರ ನಿಯಂತ್ರಣದಲ್ಲಿರುವಂತಿದೆ.

ಸಹಕಾರಿ ಸಂಸ್ಥೆಗಳು ನಿಜವಾಗಿ ಬೆಳೆಯಬೇಕಾದರೆ ಮಹಿಳೆಯರನ್ನು ಕೇವಲ ಸಂಖ್ಯೆಯಾಗಿ ಸೇರಿಸುವುದರಿಂದ ಸಾಲದು; ಅವರನ್ನು ನಿರ್ಧಾರ ಪ್ರಕ್ರಿಯೆಯ ಕೇಂದ್ರಕ್ಕೆ ತರಬೇಕು. ಮಹಿಳೆಯರ ಆರ್ಥಿಕ ಜಾಗೃತಿ, ಸ್ವಸಹಾಯ ಗುಂಪುಗಳ ಅನುಭವ, ಶಿಸ್ತು ಮತ್ತು ದೀರ್ಘದೃಷ್ಟಿ ಸಹಕಾರಿ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಬಲ್ಲವು.ಮುಖ್ಯವಾಗಿ ಮಹಿಳೆಯರು ಆಡಳಿತ ಮಂಡಳಿಯಲ್ಲಿ ಇದ್ದರೆ ಪಾರದರ್ಶಕತೆ, ಹಣಕಾಸಿನ ಜವಾಬ್ದಾರಿ ಮತ್ತು ಮಾನವೀಯ ಸ್ಪಂದನೆ ಹೆಚ್ಚಾಗುತ್ತದೆ ಎಂಬ ಅನುಭವ ಹಲವೆಡೆ ಕಂಡಿದೆ.

ಸದಸ್ಯರು ಆಡಳಿತ ಮಂಡಳಿಯನ್ನು ಪ್ರಶ್ನಿಸುವ ಧೈರ್ಯ ಹೊಂದಬೇಕಾದರೆ, ಮಹಿಳೆಯರು ಆ ಪ್ರಶ್ನಿಸುವ ಸಂಸ್ಕೃತಿಗೆ ನೈತಿಕ ಶಕ್ತಿ ತುಂಬಬೇಕು. ಮೌನವಾಗಿ ಕುಳಿತುಕೊಳ್ಳುವ ವ್ಯವಸ್ಥೆಯಲ್ಲ, ಜಾಗೃತವಾಗಿ ಭಾಗವಹಿಸುವ ವ್ಯವಸ್ಥೆಯೇ ಆರೋಗ್ಯಕರ ಸಹಕಾರವನ್ನು ನಿರ್ಮಿಸುತ್ತದೆ.

ಇಂದಿನ ಸಹಕಾರಿ ಕ್ಷೇತ್ರಕ್ಕೆ ಬೇಕಾಗಿರುವುದು ಕೇವಲ ಹಣಕಾಸಿನ ಬೆಳವಣಿಗೆಯಲ್ಲ; ಮೌಲ್ಯಾಧಾರಿತ ಬೆಳವಣಿಗೆ. ಅದಕ್ಕೆ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಅನಿವಾರ್ಯ.

6. ಸಂಘದ ಸೊತ್ತನ್ನು ನಮ್ಮದು ಎಂದು ಕಾಣುವ ಮನಸ್ಥಿತಿ :

ಸಹಕಾರಿ ಸಂಸ್ಥೆಯ ಕಟ್ಟಡ, ನಿಧಿ, ಗೌರವ ಮತ್ತು ನಂಬಿಕೆ ಇವೆಲ್ಲವೂ ಸದಸ್ಯರ ಸಮೂಹ ಆಸ್ತಿ. ಅದನ್ನು ವೈಯಕ್ತಿಕ ಲಾಭದ ಸಾಧನವಾಗಿ ಬಳಸದೆ, ಮುಂದಿನ ಪೀಳಿಗೆಗೂ ಉಳಿಯುವ ಸಂಸ್ಥೆಯಾಗಿ ಬೆಳೆಸುವುದು ಸದಸ್ಯರ ನೈತಿಕ ಜವಾಬ್ದಾರಿ.

ಸಹಕಾರದ ಸಂಕಷ್ಟಕ್ಕೆ ಕಾರಣವೇನು?

ಅನೇಕ ಸಹಕಾರಿ ಸಂಸ್ಥೆಗಳು ಕುಸಿಯುವುದಕ್ಕೆ ಆಡಳಿತದ ತಪ್ಪುಗಳಷ್ಟೇ ಕಾರಣವಲ್ಲ; ಸದಸ್ಯರ ನಿರಾಸಕ್ತಿ ಕೂಡ ಮುಖ್ಯ ಕಾರಣ. ಸಭೆಗಳಿಗೆ ಬಾರದ ಸದಸ್ಯರು, ಸಂಘದ ಸೇವೆ ಬಳಸದೇ ಇರುವವರು, ಚುನಾವಣೆ ಸಮಯದಲ್ಲಿ ಮಾತ್ರ ಚಟುವಟಿಕೆ ತೋರಿಸುವವರು ಇಂಥ ಮನೋಭಾವ ಸಹಕಾರವನ್ನು ರಾಜಕೀಯ ವೇದಿಕೆಯಾಗಿಸುತ್ತದೆ; ಜನಚಳವಳಿಯನ್ನಾಗಿಸದು.

ಸಹಕಾರಿ ಸಂಸ್ಥೆಯ ಅಭಿವೃದ್ಧಿ ಎನ್ನುವುದು ಕಟ್ಟಡಗಳ ಬೆಳವಣಿಗೆಯಲ್ಲ; ಅದು ಸದಸ್ಯರ ವಿಶ್ವಾಸ, ಪಾಲ್ಗೊಳ್ಳುವಿಕೆ ಮತ್ತು ಸಮೂಹ ಜವಾಬ್ದಾರಿಯ ಬೆಳವಣಿಗೆ.

ಸಹಕಾರದ ಯಶಸ್ಸು ಸರ್ಕಾರದ ನೆರವಿನಲ್ಲಿ ಅಲ್ಲ, ಸದಸ್ಯರ ಸಹಭಾಗಿತ್ವದಲ್ಲಿ ಅಡಕವಾಗಿದೆ.

ಏಕೆಂದರೆ“ಸಹಕಾರದಕಟ್ಟಡವನ್ನುಇಟ್ಟಿಗೆಗಳು ಕಟ್ಟುವುದಿಲ್ಲ ಸದಸ್ಯರ ನಂಬಿಕೆ ಮತ್ತು ನಿಷ್ಠೆಯೇ ಕಟ್ಟುತ್ತದೆ.”

 

ಕುಮಾರ ಸುಬ್ರಹ್ಮಣ್ಯ ಮುಳಿಯಾಲ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More