ಸಂಸ್ಕಾರದಿಂದ ಸಹಕಾರದವರೆಗೆ —ಮಾನನೀಯ ಶ್ರೀ ಲಕ್ಷ್ಮಣರಾವ್ ಇನಾಮ್ದಾರ್ ರವರ ಜೀವನದರ್ಶನ.

 

“ ಬಿನಾ ಸಂಸ್ಕಾರ ನಹೀ ಸಹಕಾರ —ಬಿನಾ ಸಹಕಾರ ನಹೀ ಉದ್ಧಾರ”
ಇದು ಕೇವಲ ಒಂದು ಘೋಷವಾಕ್ಯವಲ್ಲ. ಭಾರತೀಯ ಸಹಕಾರ ಚಳವಳಿಯನ್ನು ಮನುಷ್ಯನ ಬದುಕಿನೊಂದಿಗೆ, ಸಮಾಜದ ಸಂಸ್ಕಾರದೊಂದಿಗೆ ಮತ್ತು ಸ್ವಾವಲಂಬನೆಯ ಆಶಯದೊಂದಿಗೆ ಜೋಡಿಸಿದ ಒಂದು ಜೀವನದರ್ಶನ. ಈ ಮಹತ್ವದ ಚಿಂತನೆಯ ಹಿಂದೆ ನಿಂತ ಯುಗದೃಷ್ಟಿ ಶ್ರೀ ಲಕ್ಷ್ಮಣರಾವ್ ಮಾಧವರಾವ್ ಇನಾಮ್ದಾರ್, ಪ್ರೀತಿಯಿಂದ ಕರೆಯಲ್ಪಟ್ಟ “ ವಕೀಲ ಸಾಹೇಬ್ ”

ಸೆಪ್ಟೆಂಬರ್ 21, 1917ರಂದು ಮಹಾರಾಷ್ಟ್ರದ ಖಟಾವ್‌ನಲ್ಲಿ  ಜನಿಸಿದ ಲಕ್ಷ್ಮಣರಾವ್ ಇನಾಮ್ದಾರ್ ಅವರು ಬಾಲ್ಯದಲ್ಲಿಯೇ ಕುಟುಂಬದ ಕಷ್ಟ-ಸಂಕಷ್ಟಗಳ ನಡುವೆ ಕಾಳಜಿ, ಹಂಚಿಕೊಳ್ಳುವಿಕೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಕಲಿತರು. ಮುಂದೆ ಇದೇ ಮೌಲ್ಯಗಳು ಅವರ ಸಾಮಾಜಿಕ ಮತ್ತು ಸಹಕಾರಿ ಚಿಂತನೆಯ ಪ್ರಮುಖ ಆಧಾರಗಳಾದವು.

ಸಹಕಾರ ಎಂದರೆ ಕೇವಲ ಸಂಸ್ಥೆಯಲ್ಲ— ಸಂಸ್ಕಾರ

ಲಕ್ಷ್ಮಣರಾವ್ ಇನಾಮ್ದಾರ್ ಅವರ ವಿಶೇಷತೆ ಎಂದರೆ ಅವರು ಸಹಕಾರವನ್ನು ಕೇವಲ ಆರ್ಥಿಕ ವ್ಯವಸ್ಥೆಯಾಗಿ ನೋಡಲಿಲ್ಲ. ಬಡವರು, ದುರ್ಬಲರು ಮತ್ತು ಸಾಮಾನ್ಯ ಜನರು ಒಟ್ಟಾಗಿ ನಿಂತಾಗ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬಹುದು ಎಂಬ ವಿಶ್ವಾಸ ಅವರ ಚಿಂತನೆಯ ಕೇಂದ್ರಬಿಂದುವಾಗಿತ್ತು.

ಈ ಚಿಂತನೆಯಿಂದಲೇ ಸಹಕಾರ ಭಾರತಿ ರೂಪುಗೊಂಡಿತು. ಸಹಕಾರ ಭಾರತಿ 11 ಜನವರಿ 1979ರಂದು ರಾಷ್ಟ್ರಮಟ್ಟದಲ್ಲಿ ನೋಂದಣಿಗೊಂಡು ಭಾರತದ ಪ್ರಪ್ರಥಮ ಮತ್ತು ಈವರೆಗೆ ಏಕೈಕ ಸರಕಾರೇತರ ಸಹಕಾರಿ ಸ್ವಯಂಸೇವಾ ಸಂಸ್ಥೆಯಾಗಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು.

ಅದಕ್ಕೂ ಮುನ್ನವೇ 1978ರಲ್ಲಿ ಸಂಸ್ಥೆಯ ರೂಪುರೇಷೆಗಾಗಿ ಚಿಂತನೆ ಮತ್ತು ಪ್ರಯತ್ನಗಳು ಆರಂಭವಾಗಿದ್ದವು.

ದೇಶದ ಅಂದಿನ ಕರಾಳ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಪಾಲಾಗಿದ್ದ ಸಾವಿರಾರು ಮಂದಿ ನಾಯಕರಲ್ಲಿ ನಮ್ಮ ವಕೀಲ್ ಸಾಬ್ ಕೂಡ ಇದ್ದರು.

ಜೈಲಿನಲ್ಲಿ ಮೊಳಕೆಯೊಡೆದ ಚಿಂತನೆ ಇಂದು ಸಹಕಾರಿ ಕ್ಷೇತ್ರದ ವಟವ್ರಕ್ಷವಾಗಿ ಬೆಳೆಯುತ್ತಲಿದೆ.
ತಮ್ಮ ಬಾಲ್ಯದ ವಿದ್ಯಾಭ್ಯಾಸ, ಬಳಿಕ ಕಾನೂನು ಪದವಿ, ಬಳಿಕ ವಕೀಲ ವೃತ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ತಮ್ಮ ಇಡೀ ಬದುಕನ್ನೇ ಸಮರ್ಪಿಸಿಕೊಂಡ ಲಕ್ಷ್ಮಣ್ ರಾವ್ ಇನಾಂದಾರ್ ರವರು ಜೈಲಿನಿಂದ ಹೊರ ಬಂದ ಬಳಿಕ ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆಗಾಗಿ ತಮ್ಮ 5 ವರ್ಷಗಳ ಜೀವನವನ್ನು ಸಂಪೂರ್ಣವಾಗಿ ದೇಶದ ಹೆಚ್ಚಿನೆಲ್ಲಾ ರಾಜ್ಯಗಳಿಗೆ ಪ್ರವಾಸ ಮಾಡಿ ಸಾರ್ಥಕ ಗೊಳಿಸಿದ್ದರು.

ಸಹಕಾರ ಭಾರತೀಯ ಗರಡಿಯಲ್ಲಿ ಪಳಗಿದ ಸಾವಿರಾರು ಮಂದಿ ತಾಲೂಕು, ಜಿಲ್ಲೆ ,ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವಾರು ಸಹಕಾರ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಜವಾಬ್ದಾರಿಯ ಸ್ಥಾನ ಪಡೆದು ಸಹಕಾರ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಲಕ್ಷ್ಮಣ್ ರಾವ್ ಇನಾಮ್ದಾರ್ ರವರ ಅಂದಿನ ದೂರ ದೃಷ್ಟಿಯ ಚಿಂತನೆಯೇ ಕಾರಣ.

ಲಕ್ಷ್ಮಣರಾವ್‌ ಜಿಯವರ ದೃಷ್ಟಿಯಲ್ಲಿ ಸಹಕಾರಿ ಸಂಸ್ಥೆ ಎಂದರೆ ಕೇವಲ ಲಾಭ-ನಷ್ಟದ ಲೆಕ್ಕಾಚಾರ ಮಾಡುವ ಸಂಸ್ಥೆಯಲ್ಲ; ಅದು ವ್ಯಕ್ತಿಯಲ್ಲಿ ಆತ್ಮವಿಶ್ವಾಸ, ಸಮಾಜದಲ್ಲಿ ಪರಸ್ಪರ ನಂಬಿಕೆ ಮತ್ತು ಆರ್ಥಿಕ ಬದುಕಿನಲ್ಲಿ ಸ್ವಾವಲಂಬನೆ ಬೆಳೆಸುವ ವೇದಿಕೆ.

‘ಸೇತುಬಂಧ’ ಹೇಳುವ ವಕೀಲ ಸಾಹೇಬರ ಮಾನವೀಯ ಮುಖ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ರಾಜಾಭಾಯಿ ನೇನೆ ಅವರೊಂದಿಗೆ ಸಂಬಂಧ ಹೊಂದಿರುವ ‘ ಸೇತುಬಂಧ’ ಕೃತಿಯಲ್ಲಿ ಲಕ್ಷ್ಮಣರಾವ್ ಇನಾಮ್ದಾರ್ ಅವರ ವ್ಯಕ್ತಿತ್ವದ ಮತ್ತೊಂದು ಆಳವಾದ ಮುಖವನ್ನು ಕಾಣಬಹುದು.

ಆ ಕೃತಿಯ ಮುನ್ನುಡಿಯಲ್ಲಿ ಮಾನವರ ನಡುವೆ ಧರ್ಮ, ವಿಚಾರ, ಪಕ್ಷ, ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಉಂಟಾಗುವ ಅಂತರವನ್ನು ಕಡಿಮೆ ಮಾಡುವ “ಸೇತುಬಂಧ ”ದ ಪ್ರೇರಣೆಯಾಗಿ ವಕೀಲ ಸಾಹೇಬರ ಜೀವನವನ್ನು ನಿರೂಪಿಸಲಾಗಿದೆ.

ಮನುಷ್ಯರನ್ನು ಅರ್ಥಮಾಡಿಕೊಳ್ಳುವುದು ಮತ್ತು ಪ್ರೀತಿಯಿಂದ ತಮ್ಮವರನ್ನಾಗಿ ಮಾಡಿಕೊಳ್ಳುವುದು ಅವರ ವಿಶಿಷ್ಟ ಗುಣವಾಗಿತ್ತು ಎಂಬ ಭಾವನೆಯನ್ನು ಕೃತಿಯಲ್ಲಿ ವ್ಯಕ್ತಪಡಿಸಲಾಗಿದೆ.

ಇದೇ ಕಾರಣಕ್ಕೆ ಲಕ್ಷ್ಮಣರಾವ್‌ಜಿಯವರನ್ನು ಕೇವಲ ಸಹಕಾರಿ ಕ್ಷೇತ್ರದ ಸಂಘಟಕ ಎಂದು ನೋಡುವುದು ಅವರ ವ್ಯಕ್ತಿತ್ವವನ್ನು ಸೀಮಿತಗೊಳಿಸಿದಂತಾಗುತ್ತದೆ.

ಅವರು ಮೊದಲು ಮನುಷ್ಯರನ್ನು ಕಟ್ಟಿದರು; ಮನುಷ್ಯರಿಂದ ಸಂಘಟನೆ ಕಟ್ಟಿದರು; ಸಂಘಟನೆಯ ಮೂಲಕ ಸಮಾಜವನ್ನು ಕಟ್ಟುವ ಪ್ರಯತ್ನ ಮಾಡಿದರು.

2 ದಶಕಗಳ ಸಹಕಾರ ಪಯಣದ ನನ್ನ ಅನುಭವ.

ಗ್ರಾಮೀಣ ಮಟ್ಟದ ಸಹಕಾರಿ ಚಟುವಟಿಕೆಗಳಿಂದ ಆರಂಭವಾದ ಈ ಪಯಣ, ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಸಹಕಾರ ಚಳವಳಿಯ ವಿವಿಧ ಆಯಾಮಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ನೀಡಿದೆ.

ಕಳೆದ 2 ವರ್ಷಗಳಿಂದ ಕರ್ನಾಟಕ ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ರಾಷ್ಟ್ರಮಟ್ಟದ ಚಟುವಟಿಕೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ, ಲಕ್ಷ್ಮಣರಾವ್ ಇನಾಮ್ದಾರ್ ಅವರು ಬಿತ್ತಿದ ವಿಚಾರಗಳ ಪ್ರಸ್ತುತತೆ ಇನ್ನಷ್ಟು ಸ್ಪಷ್ಟವಾಗಿ ಅರಿವಾಗುತ್ತಿದೆ.

ಗ್ರಾಮೀಣ ಪ್ರದೇಶದ ಸಣ್ಣ ರೈತ, ಮಹಿಳೆ, ಯುವಕ, ಸಣ್ಣ ಉದ್ಯಮಿ, ಕಾರ್ಮಿಕ—ಇವರನ್ನು ಆರ್ಥಿಕವಾಗಿ ಸಬಲಗೊಳಿಸುವಲ್ಲಿ ಸಹಕಾರದ ಶಕ್ತಿ ಅಪಾರವಾಗಿದೆ. ಆದರೆ ಸಂಸ್ಥೆಯ ಕಟ್ಟಡ, ಬಂಡವಾಳ ಅಥವಾ ವ್ಯವಹಾರಕ್ಕಿಂತ ಮುಖ್ಯವಾದದ್ದು ಸಂಸ್ಕಾರ, ಪಾರದರ್ಶಕತೆ, ಪ್ರಾಮಾಣಿಕತೆ, ಪರಸ್ಪರ ವಿಶ್ವಾಸ ಮತ್ತು ಸೇವಾ ಮನೋಭಾವ.

ಇದೇ ಕಾರಣಕ್ಕೆ “ ಬಿನಾ ಸಂಸ್ಕಾರ ನಹೀ ಸಹಕಾರ” ಎಂಬ ಸಂದೇಶ ಇಂದಿಗೂ ಪ್ರಸ್ತುತವಾಗಿದೆ.

ಸಹಕಾರ ಭಾರತಿ — ಒಂದು ಚಿಂತನೆಯ ವಟವೃಕ್ಷ

ಲಕ್ಷ್ಮಣರಾವ್ ಇನಾಮ್ದಾರ್ ಅವರ ಪ್ರೇರಣೆಯಿಂದ ಬೆಳೆದ ಸಹಕಾರ ಭಾರತಿ ಇಂದು ದೇಶದ ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಸಂಘಟನಾ ಪರಂಪರೆಯನ್ನು ನಿರ್ಮಿಸಿಕೊಂಡಿದೆ. ಸಹಕಾರ ಚಳವಳಿಯನ್ನು ವಿಕೇಂದ್ರೀಕೃತ ಹಾಗೂ ಶ್ರಮಾಧಾರಿತ ಆರ್ಥಿಕ ವ್ಯವಸ್ಥೆಯ ಪ್ರಮುಖ ಸಾಧನವಾಗಿ ಬೆಳೆಸಬೇಕು ಎಂಬ ದೃಷ್ಟಿಕೋನವೂ ಅದರೊಂದಿಗೆ ಸಂಬಂಧಿಸಿದೆ.

*2017ರಲ್ಲಿ ಲಕ್ಷ್ಮಣರಾವ್ ಇನಾಮ್ದಾರ್ ಅವರ* *ಜನ್ಮಶತಮಾನೋತ್ಸವದ* ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಹಕಾರ ಚಳವಳಿಯ ಮೂಲಭೂತ ಆಶಯವಾಗಿ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹಾಗೂ ಇನಾಮ್ದಾರ್ ಅವರ ಜೀವನದಿಂದ ಸ್ಫೂರ್ತಿ ಪಡೆಯುವ ಅಗತ್ಯವನ್ನು ಒತ್ತಿಹೇಳಿದ್ದರು. ಅದೇ ಸಂದರ್ಭದಲ್ಲಿ “ *ಬಿನಾ ಸಂಸ್ಕಾರ್, ನಹೀ ಸಹಕಾರ್”* ಎಂಬ ಅವರ ಮಂತ್ರವನ್ನೂ ಸ್ಮರಿಸಿದ್ದರು.

ಗುಜರಾತ್ ನಲ್ಲಿ ಶ್ರೀ ಲಕ್ಷ್ಮಣ್ ರಾವ್ ಇನಾಮ್ದಾರ್ ರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ಪ್ರಚಾರಕರಾಗಿ ಸಂಘದ ಶಾಖೆಗಳನ್ನು ವಿಸ್ತರಿಸುವ ಜವಾಬ್ದಾರಿಯನ್ನು ತೆಗೆದುಕೊಂಡು, ಬಾಲಕ ನರೇಂದ್ರನನ್ನು ಶಾಖೆಯ ಸಂಸ್ಕಾರಕ್ಕೆ ಕೈ ಹಿಡಿದು ತಂದು, ಬಾಲ್ಯ ಸ್ವಯಂಸೇವಕನಾಗಿ ಶಾಖಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಆ ಬಳಿಕ ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಂಘಟನಾತ್ಮಕ ಅತ್ಯುನ್ನತ ಸಾಧನೆಗೈದು, ಗುಜರಾತಿನ ಮುಖ್ಯಮಂತ್ರಿ, ಆ ಬಳಿಕ ದೇಶದ ಪ್ರಧಾನ ಮಂತ್ರಿ ಜೊತೆಗೆ ಇದೀಗ ಜಗತ್ತಿನ ಶ್ರೇಷ್ಠ ನಾಯಕನಾಗಿ ಸಾಗಿ ಬರುವವರೆಗಿನ ಈ ಸುಧೀರ್ಘ ಪಯಣದಲ್ಲಿ ಬಾಲ್ಯದಲ್ಲಿ ಸಂಸ್ಕಾರದ ಬೀಜವನ್ನು ಬಿತ್ತಿ ಬೆಳೆಸಿದವರು ಶ್ರೀ ಲಕ್ಷ್ಮಣ್ ರಾವ್ ಇನಾಮ್ದಾರ್ ಎನ್ನುವುದನ್ನು ಭಾವಪೂರ್ಣವಾಗಿ ಶ್ರೀ ನರೇಂದ್ರ ಮೋದಿಯವರು ಅಂದು ಸ್ಮರಿಸಿದ್ದರು.

*ಇಂದಿನ ಪೀಳಿಗೆಗೆ ವಕೀಲ ಸಾಹೇಬರ* *ಸಂದೇಶವೇನು?*

ಇಂದು ದೇಶದ ಆರ್ಥಿಕತೆ ವೇಗವಾಗಿ ಬದಲಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳು, ಕೃತಕ ಬುದ್ಧಿಮತ್ತೆ, ಇ-ಕಾಮರ್ಸ್, ಜಾಗತಿಕ ಮಾರುಕಟ್ಟೆ—ಹೊಸ ಅವಕಾಶಗಳು ನಮ್ಮ ಮುಂದೆ ತೆರೆದುಕೊಳ್ಳುತ್ತಿವೆ.

ಆದರೆ ಈ ಬದಲಾವಣೆಯ ನಡುವೆ ಗ್ರಾಮೀಣ ಭಾರತದ ಸಾಮಾನ್ಯ ವ್ಯಕ್ತಿಯನ್ನು ಹಿಂದೆ ಉಳಿಸಬಾರದು. “ನಾನು”ಗಿಂತ “ನಾವು” ಎಂಬ ಚಿಂತನೆ ಬೆಳೆಸುವುದು ಸಹಕಾರದ ಮೂಲತತ್ವ.

ಸಹಕಾರ ಸಂಘಗಳು ಕೇವಲ ಸಾಲ ನೀಡುವ ಅಥವಾ ಉತ್ಪನ್ನ ಮಾರಾಟ ಮಾಡುವ ಸಂಸ್ಥೆಗಳಾಗದೆ, ಜ್ಞಾನ, ಕೌಶಲ್ಯ, ಮಾರುಕಟ್ಟೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯನ್ನು ಸಾಮಾನ್ಯ ಜನರ ಕೈಗೆ ತಲುಪಿಸುವ ಕೇಂದ್ರಗಳಾಗಬೇಕು.

ಲಕ್ಷ್ಮಣರಾವ್ ಇನಾಮ್ದಾರ್ ಅವರ ಜೀವನ ನಮಗೆ ಇದೇ ಪಾಠ ಕಲಿಸುತ್ತದೆ.

ಸಮಾಜ ಬದಲಾಗಬೇಕಾದರೆ ಮೊದಲು ಮನುಷ್ಯ ಬದಲಾಗಬೇಕು; ಮನುಷ್ಯ ಬದಲಾಗಬೇಕಾದರೆ ಅವನಲ್ಲಿ ಸಂಸ್ಕಾರ ಮತ್ತು ಹೊಣೆಗಾರಿಕೆಯ ಭಾವನೆ ಬೆಳೆಬೇಕು.

ಯುಗದೃಷ್ಟಿಗೆ ನಮನ

ಸಹಕಾರದ ಮೂಲಕ ಸ್ವಾವಲಂಬನೆ, ಸ್ವಾವಲಂಬನೆಯ ಮೂಲಕ ಸಾಮಾಜಿಕ ಸಬಲೀಕರಣ, ಸಾಮಾಜಿಕ ಸಬಲೀಕರಣದ ಮೂಲಕ ರಾಷ್ಟ್ರ ನಿರ್ಮಾಣ—ಇದು ಲಕ್ಷ್ಮಣರಾವ್ ಇನಾಮ್ದಾರ್ ಅವರ ಚಿಂತನೆಯ ಸಾರವೆಂದು ಹೇಳಬಹುದು.

ಮೂರು ದಶಕಗಳ ಸಹಕಾರ ಕ್ಷೇತ್ರದ ನನ್ನ ಅನುಭವದಲ್ಲಿ ನಾನು ಕಂಡುಕೊಂಡಿರುವ ಸತ್ಯವೆಂದರೆ, ಸಹಕಾರದ ಶಕ್ತಿ ಅದರ ಕಟ್ಟಡದಲ್ಲಿಲ್ಲ; ಅದರ ಸದಸ್ಯರ ಪರಸ್ಪರ ವಿಶ್ವಾಸದಲ್ಲಿದೆ. ಸಂಸ್ಥೆಯ ಬಲ ಅದರ ಬಂಡವಾಳದಲ್ಲಿಲ್ಲ; ಅದರ ಕಾರ್ಯಕರ್ತರ ಸಂಸ್ಕಾರದಲ್ಲಿದೆ.

ಆದ್ದರಿಂದಲೇ ವಕೀಲ ಸಾಹೇಬರ ಜನ್ಮದಿನ ಕೇವಲ ಸ್ಮರಣೆಯ ದಿನವಲ್ಲ; ನಮ್ಮ ಸಹಕಾರಿ ಚಿಂತನೆಗಳನ್ನು ಪುನರ್‌ಪರಿಶೀಲಿಸಿ, ಹೊಸ ಪೀಳಿಗೆಗೆ ಹೊಸ ಸಹಕಾರದ ದಿಕ್ಕನ್ನು ತೋರಿಸುವ ದಿನ.

ಸಹಕಾರ ಕ್ಷೇತ್ರಕ್ಕೆ ಸಂಸ್ಕಾರದ ನೆಲೆ, ಸಂಘಟನೆಯ ಶಕ್ತಿ ಮತ್ತು ಸ್ವಾವಲಂಬನೆಯ ಕನಸು ನೀಡಿದ ಈ ಮಹಾನ್ ಯುಗದೃಷ್ಟಿಗೆ ಅವರ ಜನ್ಮದಿನದಂದು ಹೃತ್ಪೂರ್ವಕ ನಮನ.

॥ ಜಯ ಸಹಕಾರ ॥

 

–ಸಾಣೂರು ನರಸಿಂಹ ಕಾಮತ್
ರಾಜ್ಯ ಪ್ರಧಾನ ಕಾರ್ಯದರ್ಶಿ,
ಸಹಕಾರ ಭಾರತಿ, ಕರ್ನಾಟಕ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More