ಭಾರತೀಯ ಸಂಸ್ಕೃತಿಯ ಹಬ್ಬಗಳು ಕೇವಲ ಆಚರಣೆಗಳಲ್ಲ; ಅವು ಜೀವನದ ಮೌಲ್ಯಗಳನ್ನು, ಸಾಮಾಜಿಕ ಹೊಣೆಗಾರಿಕೆಯನ್ನು ಮತ್ತು ಮಾನವೀಯ ಸಂಬಂಧಗಳನ್ನು ನೆನಪಿಸುವ ಸಾಂಸ್ಕೃತಿಕ ಸಂಕೇತಗಳು, ಅಂತಹ ಮಹತ್ವದ ಹಬ್ಬಗಳಲ್ಲಿ ದಸರಾ ಅಥವಾ ವಿಜಯದಶಮಿ ವಿಶಿಷ್ಟವಾದುದು. ನವರಾತ್ರಿಯ ಒಂಬತ್ತು ದಿನಗಳ ಆರಾಧನೆಯ ನಂತರ ಬರುವ ವಿಜಯದಶಮಿ, ಒಳಿತಿನ ಮೇಲೆ ಕೆಡುಕಿನ, ಸತ್ವದ ಮೇಲೆ ಅಸತ್ವದ, ಧರ್ಮದ ಮೇಲೆ ಆಧರ್ಮದ ವಿಜಯವನ್ನು ಸಾರುವ ದಿನ, ಆದರೆ ಈ ವಿಜಯದ ಅರ್ಥವನ್ನು ಕೇವಲ ಪೌರಾಣಿಕ ಕಥನದ ಹಿನ್ನೆಲೆಯಲ್ಲಿ ನೋಡುವುದಕ್ಕಿಂತ, ಇಂದಿನ ಸಾಮಾಜಿಕ ಮತ್ತು ಆರ್ಥಿಕ ಬದುಕಿನೊಂದಿಗೆ ಜೋಡಿಸಿ ನೋಡಿದಾಗ ಅದರ ಮಹತ್ವ ಮತ್ತಷ್ಟು ವಿಸ್ತಾರಗೊಳ್ಳುತ್ತದೆ.
ವಿಜಯದಶಮಿ ಎಂದರೆ ಒಂದು ವಿಜಯದ ಆಚರಣೆ ಮಾತ್ರವಲ್ಲ; ಹೊಸ ವಿಜಯಗಳಿಗಾಗಿ ಮಾಡುವ ಸಂಕಲ್ಪದ ದಿನ ನಮ್ಮೊಳಗಿನ ಅಹಂಕಾರ, ಸ್ವಾರ್ಥ, ದುರಾಸೆ, ಅಸಮಾನತೆ ಮತ್ತು ಅನ್ಯಾಯಗಳನ್ನು ಗೆದ್ದು, ಸತ್ಯ, ಸೇವೆ, ಸಹಬಾಳ್ವೆ ಮತ್ತು ಪರಸ್ಪರ ಸಹಕಾರದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ದಿನ. ಇದೇ ಆಶಯ ಸಹಕಾರ ಚಳವಳಿಯ ಮೂಲತತ್ವಗಳಲ್ಲಿಯೂ ಅಡಕವಾಗಿದೆ. ವ್ಯಕ್ತಿಗಿಂತ ಸಮೂಹಕ್ಕೆ, ಸ್ವಾರ್ಥಕ್ಕಿಂತ ಸಾಮೂಹಿಕ ಹಿತಕ್ಕೆ, ಸ್ಪರ್ಧೆಗಿಂತ ಸಹಕಾರಕ್ಕೆ ಆದ್ಯತೆ ನೀಡುವ ಸಹಕಾರ ವ್ಯವಸ್ಥೆ, ವಿಜಯದಶಮಿಯ ಸಂದೇಶಕ್ಕೆ ಅತ್ಯಂತ ಸಮೀಪವಾದ ಸಾಮಾಜಿಕ-ಆರ್ಥಿಕ ಮಾದರಿಯಾಗಿದೆ.
ವಿಜಯದಶಮಿಯ ವಿಜಯ – ಸಹಕಾರದ ಆಶಯ
ವಿಜಯದಶಮಿಯಂದು ಶ್ರೀರಾಮನು ರಾವಣನನ್ನು ಜಯಿಸಿದ ಕಥೆಯನ್ನು ನಾವು ಸ್ಮರಿಸುತ್ತೇವೆ. ರಾವಣನು ಕೇವಲ ಒಬ್ಬ ವ್ಯಕ್ತಿಯಲ್ಲ; ಅವನು ಅಹಂಕಾರ, ದುರಾಸೆ, ಅನ್ಯಾಯ ಮತ್ತು ಅಧರ್ಮದ ಸಂಕೇತ. ರಾಮನ ವಿಜಯವು ಸತ್ಯ, ಧರ್ಮ ಮತ್ತು ನ್ಯಾಯದ ವಿಜಯದ ಸಂಕೇತವಾಗಿದೆ. ಈ ದೃಷ್ಟಿಯಿಂದ ನೋಡಿದರೆ. ಇಂದಿನ ಸಮಾಜದಲ್ಲಿರುವ ಬಡತನ, ಆರ್ಥಿಕ ಅಸಮಾನತೆ, ಶೋಷಣೆ, ನಿರುದ್ಯೋಗ, ಅವಕಾಶಗಳ ಕೊರತೆ ಮತ್ತು ಸಾಮಾಜಿಕ ಹಿಂದುಳಿತತನಗಳ ವಿರುದ್ಧದ ಹೋರಾಟವೂ ಒಂದು ರೀತಿಯ ವಿಜಯದ ಸಾಧನೆಯೇ ಆಗಿದೆ. ಈ ಸವಾಲುಗಳನ್ನು ಒಬ್ಬ ವ್ಯಕ್ತಿಯಿಂದ ಮಾತ್ರ ಎದುರಿಸುವುದು ಸುಲಭವಲ್ಲ, ಆದರೆ ಜನರು ತಮ್ಮ ಶಕ್ತಿ, ಸಂಪನ್ಮೂಲ, ಜ್ಞಾನ ಮತ್ತು ಸಾಮರ್ಥ್ಯಗಳನ್ನು ಒಗ್ಗೂಡಿಸಿದಾಗ ಬದಲಾವಣೆಯನ್ನು ತರಬಹುದು. ಇದೇ ಸಹಕಾರದ ಶಕ್ತಿ.
“ನಾನು” ಎನ್ನುವ ಚಿಂತನೆಯಿಂದ “ನಾವು” ಎನ್ನುವ ಚಿಂತನೆಯತ್ತ ಸಾಗುವ ಹಯಣವೇ ಸಹಕಾರ.
ಒಬ್ಬ ರೈತನ ಸಣ್ಣ ಉಳಿತಾಯ ಮತ್ತೊಬ್ಬ ರೈತನ ಉಳಿತಾಯದೊಂದಿಗೆ ಸೇರಿದಾಗ ಅದು ದೊಡ್ಡ ಬಂಡವಾಳವಾಗುತ್ತದೆ. ಒಬ್ಬ ಮಹಿಳೆಯ ಉದ್ಯಮಶೀಲತೆ ಮತ್ತೊಬ್ಬ ಮಹಿಳೆಯ ಅನುಭವದೊಂದಿಗೆ ಸೇರಿದಾಗ ಅದು ಸಾಮೂಹಿಕ ಉದ್ಯಮವಾಗಿ ಬೆಳೆಯುತ್ತದೆ. ಸಣ್ಣ ವ್ಯಾಪಾರಿಗಳ ಅಗತ್ಯಗಳು ಒಟ್ಟಾಗಿ ಬಂದಾಗ ಅವರಿಗೆ ದೊಡ್ಡ ಮಾರುಕಟ್ಟೆ ರೂಪುಗೊಳ್ಳುತ್ತದೆ. ಹೀಗೆ ಸಣ್ಣ ಸಣ್ಣ ಶಕ್ತಿಗಳು ಒಂದಾಗಿ ದೊಡ್ಡ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯಾಗಿ ಪರಿವರ್ತನೆಯಾಗುವುದೇ ಸಹಕಾರದ ಸೌಂದರ್ಯ,
ಹಬ್ಬದ ಸಂಭ್ರಮದಿಂದ ಅಭಿವೃದ್ಧಿಯ ಸಂಕಲ್ಪದತ್ತ
ದಸರಾ ಹಬ್ಬದಲ್ಲಿ ಮನೆ, ಕಚೇರಿ, ಅಂಗಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ, ಅಲಂಕಾರ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಹಳೆಯವನ್ನು ಸ್ವಚ್ಛಗೊಳಿಸಿ ಹೊಸತನಕ್ಕೆ ಸ್ವಾಗತ ನೀಡುವುದು ಹಬ್ಬದ ಒಂದು ಪ್ರಮುಖ ಸಂದೇಶ, ಸಹಕಾರ ಕ್ಷೇತ್ರಕ್ಕೂ ಈ ಸಂದೇಶ ಅತ್ಯಂತ ಪ್ರಸ್ತುತ.
ಸಹಕಾರ ಸಂಸ್ಥೆಗಳು ಕಾಲದ ಬದಲಾವಣೆಗೆ ತಕ್ಕಂತೆ ತಮ್ಮ ಕಾರ್ಯವಿಧಾನಗಳನ್ನು ಪರಿಷ್ಕರಿಸಿಕೊಳ್ಳಬೇಕು. ಪಾರದರ್ಶಕ ಆಡಳಿತ, ಉತ್ತಮ ಹಣಕಾಸು ನಿರ್ವಹಣೆ, ಸದಸ್ಯರ ಸಕ್ರಿಯ ಭಾಗವಹಿಸುವಿಕೆ, ತಂತ್ರಜ್ಞಾನ ಬಳಕೆ, ಡಿಜಿಟಲ್ ಸೇವೆಗಳು, ವೃತ್ತಿಪರ ನಿರ್ವಹಣೆ ಮತ್ತು ಪರಿಣಾಮಕಾರಿ ಲೆಕ್ಕಪತ್ರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹಕಾರ ಸಂಸ್ಥೆಗಳು ಹೊಸ ಶಕ್ತಿಯನ್ನು ಪಡೆದುಕೊಳ್ಳಬೇಕು.
ಹೀಗಾಗಿ ಈ ವಿಜಯದಶಮಿ ಸಂದರ್ಭದಲ್ಲಿ ಪ್ರತಿಯೊಂದು ಸಹಕಾರ ಸಂಸ್ಥೆಯೂ ತನ್ನೊಳಗೆ ಒಂದು ಪ್ರಶ್ನೆಯನ್ನು ಕೇಳಿಕೊಳ್ಳಬೇಕು:
“ನಮ್ಮ ಸಂಸ್ಥೆ ಸದಸ್ಯರ ಬದುಕಿನಲ್ಲಿ ಎಷ್ಟು ಬದಲಾವಣೆಯನ್ನು ತಂದಿದೆ?” ಈ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಸಿಗುವಂತೆ ಕಾರ್ಯನಿರ್ವಹಿಸುವುದೇ ಸಹಕಾರದ ನಿಜವಾದ ವಿಜಯ. ಆಯುಧ ಪೂಜೆ ಶ್ರಮದ ಸಾಧನಗಳಿಗೆ ಗೌರವ ದಸರೆಯ ಸಂದರ್ಭದಲ್ಲಿ ನಡೆಯುವ ಆಯುಧ ಪೂಜೆ ನಮ್ಮ ಸಂಸ್ಕೃತಿಯ ವಿಶಿಷ್ಟ ಆಚರಣೆ, ಜೀವನೋಪಾಯಕ್ಕೆ ನೆರವಾಗುವ ಸಾಧನಗಳು, ಉಪಕರಣಗಳು, ಯಂತ್ರಗಳು ಮತ್ತು ವಾಹನಗಳನ್ನು ಪೂಜಿಸುವ ಮೂಲಕ ನಾವು ನಮ್ಮ ಶ್ರಮದ ಸಾಧನಗಳಿಗೆ ಗೌರವ ಸಲ್ಲಿಸುತ್ತೇವೆ. ಇದನ್ನು ಸಹಕಾರ ಕ್ಷೇತ್ರದೊಂದಿಗೆ ಜೋಡಿಸಿದಾಗ ಮತ್ತೊಂದು ಅರ್ಥ ತೆರೆದುಕೊಳ್ಳುತ್ತದೆ. ಸಹಕಾರ ಸಂಸ್ಥೆಯ ಕಚೇರಿ, ತಂತ್ರಜ್ಞಾನ, ಗಣಕಯಂತ್ರ, ಬ್ಯಾಂಕಿಂಗ್ ವ್ಯವಸ್ಥೆ, ದಾಖಲೆಗಳು, ಹಣಕಾಸು ಸಂಪನ್ಮೂಲಗಳು ಮತ್ತು ಮುಖ್ಯವಾಗಿ ಮಾನವ ಸಂಪನ್ಮೂಲ-ಇವೆಲ್ಲವೂ ಸದಸ್ಯರ ಸೇವೆಗೆ ಬಳಸುವ ಸಾಧನಗಳಾಗಿವೆ. ಸಾಧನಗಳಿಗೆ ಪೂಜೆ ಸಲ್ಲಿಸುವುದಷ್ಟೇ ಸಾಕಾಗುವುದಿಲ್ಲ; ಅವುಗಳನ್ನು ಸಮರ್ಥವಾಗಿ ಮತ್ತು ಪ್ರಾಮಾಣಿಕವಾಗಿ ಬಳಸುವುದೂ ಆಯುಧ ಪೂಜೆಯ ನಿಜವಾದ ಆಶಯ, ಸಹಕಾರ ಸಂಸ್ಥೆಯ ಸಂಪನ್ಮೂಲಗಳು ಸದಸ್ಯರ ಹಿತಕ್ಕಾಗಿ ಬಳಸಲ್ಪಟ್ಟಾಗ ಮಾತ್ರ ಆ ಸಂಸ್ಥೆಯ ಉದ್ದೇಶ ಸಾರ್ಥಕವಾಗುತ್ತದೆ. ಮಹಿಳಾ ಶಕ್ತಿಗೆ ಸಹಕಾರದ ಬೆಂಬಲ.
ದಸರೆಯ ಸಂದರ್ಭದಲ್ಲಿ ಶಕ್ತಿಯ ಆರಾಧನೆ ನಡೆಯುತ್ತದೆ. ನವರಾತ್ರಿಯ ದಿನಗಳಲ್ಲಿ ದೇವಿಯ ವಿವಿಧ ರೂಪಗಳನ್ನು ಪೂಜಿಸುವ ಸಂಪ್ರದಾಯವು ಭಾರತೀಯ ಸಮಾಜದಲ್ಲಿ ಮಹಿಳಾ ಶಕ್ತಿಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಇದೇ ಸಂದರ್ಭದಲ್ಲಿ ಸಹಕಾರ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಮಹಿಳಾ ಸಹಕಾರ ಸಂಘಗಳು, ಸ್ವಸಹಾಯ ಗುಂಪುಗಳು, ಉಳಿತಾಯ ಮತ್ತು ಸಾಲ ವ್ಯವಸ್ಥೆಗಳು ಹಾಗೂ ಸಣ್ಣ ಉದ್ಯಮಗಳ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆಯತ್ತ ಸಾಗುತ್ತಿದ್ದಾರೆ. ಮಹಿಳೆಯ ಕೈಗೆ ಆರ್ಥಿಕ ಶಕ್ತಿ ಬಂದಾಗ ಕುಟುಂಬ ಬಲವಾಗುತ್ತದೆ; ಕುಟುಂಬ ಬಲವಾದಾಗ ಸಮಾಜ ಬಲವಾಗುತ್ತದೆ. ಆದ್ದರಿಂದ ಮಹಿಳಾ ಸಬಲೀಕರಣವನ್ನು ಸಹಕಾರ ಚಳವಳಿಯ ಪ್ರಮುಖ ಗುರಿಗಳಲ್ಲಿ ಒಂದನ್ನಾಗಿ ಮಾಡುವುದು ವಿಜಯದಶಮಿಯ “ಶಕ್ತಿ” ಸಂದೇಶಕ್ಕೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.
ಯುವಶಕ್ತಿ ಸಹಕಾರದ ಹೊಸ ದಿಕ್ಕು
ಇಂದಿನ ಯುವಜನತೆ ಜ್ಞಾನ, ತಂತ್ರಜ್ಞಾನ ಮತ್ತು ನವೀನ ಆಲೋಚನೆಗಳಿಂದ ಸಮೃದ್ಧವಾಗಿದೆ. ಆದರೆ ಯುವಕರನ್ನು ಸಹಕಾರ ಚಳವಳಿಯೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸಂಪರ್ಕಿಸುವುದು ಅಗತ್ಯವಾಗಿದೆ. ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ದತ್ತಾಂಶ ನಿರ್ವಹಣೆ, ಆನ್ಲೈನ್ ಸೇವೆಗಳು, ಹೊಸ ಉದ್ಯಮ ಮಾದರಿಗಳು ಮತ್ತು ಮಾರುಕಟ್ಟೆ ಸಂಪರ್ಕದಂತಹ ಕ್ಷೇತ್ರಗಳಲ್ಲಿ ಯುವಕರ ಸಾಮರ್ಥ್ಯವನ್ನು ಬಳಸಿಕೊಂಡರೆ ಸಹಕಾರ ಸಂಸ್ಥೆಗಳು ಹೊಸ ತಲೆಮಾರಿನ ಸಂಸ್ಥೆಗಳಾಗಿ ರೂಪುಗೊಳ್ಳಬಹುದು. ವಿಜಯದಶಮಿ ಹೊಸ ಆರಂಭದ ಸಂಕೇತವಾಗಿರುವಂತೆ, ಸಹಕಾರ ಕ್ಷೇತ್ರವೂ ಯುವಕರನ್ನು ಒಳಗೊಂಡ ಹೊಸ ಚಿಂತನೆಗೆ ತೆರೆದುಕೊಳ್ಳಬೇಕು. ಯುವಶಕ್ತಿ ಮತ್ತು ಸಹಕಾರಶಕ್ತಿ ಒಂದಾದರೆ, ಸಮೃದ್ಧಿಯ ಪಯಣ ಇನ್ನಷ್ಟು ವೇಗವಾಗುತ್ತದೆ.
ರೈತರಿಂದ ಗ್ರಾಹಕರವರೆಗೆ ಎಲ್ಲರ ಬದುಕಿನೊಂದಿಗೆ ಸಹಕಾರ
ಸಹಕಾರ ಚಳವಳಿಯ ಬಲ ಅದರ ವ್ಯಾಪಕತೆಯಲ್ಲಿ ಇದೆ. ಕೃಷಿ, ಹೈನುಗಾರಿಕೆ, ಸಾಲ ಮತ್ತು ಉಳಿತಾಯ, ಮಾರುಕಟ್ಟೆ, ವಸತಿ, ಕೈಗಾರಿಕೆ, ಮಹಿಳಾ ಅಭಿವೃದ್ಧಿ, ಕಾರ್ಮಿಕರ ಕಲ್ಯಾಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ರೈತನು ತನ್ನ ಉತ್ಪನ್ನಕ್ಕೆ ನ್ಯಾಯಯುತ ಬೆಲೆ ಪಡೆಯುವುದರಿಂದ ಹಿಡಿದು ಗ್ರಾಹಕನಿಗೆ ಗುಣಮಟ್ಟದ ವಸ್ತು ದೊರೆಯುವವರೆಗೆ ಸಹಕಾರದ ಪಾತ್ರ ಮಹತ್ವದ್ದಾಗಿದೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವೂ ಸಹಕಾರ ಕ್ಷೇತ್ರಕ್ಕಿದೆ. ಆದ್ದರಿಂದ ಸಹಕಾರವನ್ನು ಕೇವಲ “ಸಾಲ ನೀಡುವ ಸಂಸ್ಥೆ” ಎಂಬ ಸೀಮಿತ ದೃಷ್ಟಿಕೋನದಲ್ಲಿ ನೋಡದೆ, ಸಮಾಜದ ಆರ್ಥಿಕ ಅಭಿವೃದ್ಧಿಗೆ ನೆರವಾಗುವ ಜನಕೇಂದ್ರಿತ ವ್ಯವಸ್ಥೆ ಎಂದು ಅರ್ಥೈಸಬೇಕಾಗಿದೆ.
ಪಾರದರ್ಶಕತೆ – ಸಹಕಾರದ ಸತ್ಯದ ವಿಜಯ
ವಿಜಯದಶಮಿ ಸತ್ಯದ ವಿಜಯವನ್ನು ಸಾರುತ್ತದೆ. ಸಹಕಾರ ಸಂಸ್ಥೆಗಳ ಯಶಸ್ಸಿಗೂ ಸತ್ಯ, ಪಾರದರ್ಶಕತೆ ಮತ್ತು ವಿಶ್ವಾಸ ಅತ್ಯಗತ್ಯ ಸದಸ್ಯರಿಗೆ ಸರಿಯಾದ ಮಾಹಿತಿ ನೀಡುವುದು, ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಕಾಪಾಡುವುದು, ಆಡಳಿತದಲ್ಲಿ ಹೊಣೆಗಾರಿಕೆಯನ್ನು ಬೆಳೆಸುವುದು. ನಿಯಮಗಳನ್ನು ಪಾಲಿಸುವುದು ಮತ್ತು ಸದಸ್ಯರ ಹಿತವನ್ನು ಮೊದಲ ಆದ್ಯತೆಯನ್ನಾಗಿ ಮಾಡುವುದು ಪ್ರತಿಯೊಂದು ಸಹಕಾರ ಸಂಸ್ಥೆಯ ಕರ್ತವ್ಯ ಸದಸ್ಯರ ವಿಶ್ವಾಸವೇ ಸಹಕಾರ ಸಂಸ್ಥೆಯ ನಿಜವಾದ ಬಂಡವಾಳ. ಆ ವಿಶ್ವಾಸವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಿರ್ದೇಶಕ, ಅಧಿಕಾರಿ ಮತ್ತು ಸಿಬ್ಬಂದಿಯ ಜವಾಬ್ದಾರಿಯಾಗಿದೆ.
ಸಹಕಾರ – ಸಮೃದ್ಧಿಯ ಹಬ್ಬ
ದಸರಾ ಮನೆಮನೆಗಳಲ್ಲಿ ಸಂಭ್ರಮವನ್ನು ತರುತ್ತದೆ. ಆದರೆ ಆ ಸಂಭ್ರಮವು ಸಮಾಜದ ಪ್ರತಿಯೊಬ್ಬರ ಬದುಕಿನಲ್ಲೂ ಸಮೃದ್ಧಿಯಾಗಿ ಪರಿವರ್ತನೆಯಾದಾಗ ಮಾತ್ರ ಅದರ ಅರ್ಥ ಇನ್ನಷ್ಟು ಗಾಢವಾಗುತ್ತದೆ. ಸಹಕಾರದ ಮೂಲಕ ಒಂದು ಕುಟುಂಬ ಆರ್ಥಿಕವಾಗಿ ಬಲವಾಗಬಹುದು, ಒಂದು ಕುಟುಂಬ ಬಲವಾದರೆ ಒಂದು ಗ್ರಾಮ ಬಲವಾಗುತ್ತದೆ. ಗ್ರಾಮಗಳು ಬಲವಾದರೆ ಜಿಲ್ಲೆ ಬಲವಾಗುತ್ತದೆ. ಜಿಲ್ಲೆಗಳು ಬಲವಾದರೆ ರಾಜ್ಯ ಮತ್ತು ದೇಶದ ಆರ್ಥಿಕತೆ ಬಲಗೊಳ್ಳುತ್ತದೆ. ಹೀಗಾಗಿ ಸಹಕಾರವು ಕೇವಲ ಸಂಸ್ಥೆಗಳ ಜಾಲವಲ್ಲ; ಅದು ಜನರ ಬದುಕುಗಳನ್ನು ಪರಸ್ಪರ ಜೋಡಿಸುವ ಆರ್ಥಿಕ-ಸಾಮಾಜಿಕ ಸೇತುವೆ,
ವಿಜಯದಶಮಿಯಂದು ಹೊಸ ಸಂಕಲ್ಪ
ಈ ವಿಜಯದಶಮಿಯ ಸಂದರ್ಭದಲ್ಲಿ ನಾವು ರಾವಣನ ಪ್ರತಿಕೃತಿಯನ್ನು ಸುಡುವುದರ ಜೊತೆಗೆ ನಮ್ಮೊಳಗಿನ ಸ್ವಾರ್ಥ, ಅಹಂಕಾರ, ಅಸೂಯೆ, ದುರಾಸೆ ಮತ್ತು ನಿರ್ಲಕ್ಷ್ಯವನ್ನೂ ಸುಡುವ ಸಂಕಲ್ಪ ಮಾಡೋಣ.ಸಹಕಾರ ಕ್ಷೇತ್ರದಲ್ಲಿ ನಂಬಿಕೆಯನ್ನು ಬೆಳೆಸೋಣ. ಸದಸ್ಯರ ಭಾಗವಹಿಸುವಿಕೆಯನ್ನು ಹೆಚ್ಚಿಸೋಣ. ಮಹಿಳೆಯರನ್ನು ಸಬಲಗೊಳಿಸೋಣ. ಯುವಕರನ್ನು ಸಹಕಾರದೊಂದಿಗೆ ಜೋಡಿಸೋಣ. ತಂತ್ರಜ್ಞಾನವನ್ನು ಆಳವಡಿಸಿಕೊಳ್ಳೋಣ. ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡೋಣ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸೋಣ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಅಭಿವೃದ್ಧಿಯ ಮುಖ್ಯವಾಹಿನಿಗೆ ತರೋಣ. ಆಗ ವಿಜಯದಶಮಿ ಕೇವಲ ಕ್ಯಾಲೆಂಡರ್ನ ಒಂದು ಹಬ್ಬವಾಗದೆ, ಸಾಮಾಜಿಕ ವಿಜಯದ ಸಂಕಲ್ಪದ ದಿನವಾಗುತ್ತದೆ.
ವಿಜಯದಶಮಿ ನಮಗೆ ಹೇಳುವುದು ಒಂದೇ-ಕೆಟ್ಟದ್ದನ್ನು ಗೆಲ್ಲಬಹುದು. ಕತ್ತಲೆಯನ್ನು ಬೆಳಕಿನಿಂದ ದೂರ ಮಾಡಬಹುದು. ಅಸಾಧ್ಯವೆನಿಸುವುದನ್ನೂ ಒಗ್ಗಟ್ಟಿನಿಂದ ಸಾಧ್ಯವಾಗಿಸಬಹುದು. ಸಹಕಾರ ಚಳವಳಿಯೂ ನಮಗೆ ಇ ಇದೇ ಪಾಠವನ್ನು ಕಲಿಸುತ್ತದೆ. ಒಬ್ಬರ ಶಕ್ತಿ ಸೀಮಿತವಾಗಿರಬಹುದು; ಆದರೆ ಎಲ್ಲರ ಶಕ್ತಿ ಒಂದಾದಾಗ ಅದು ಅಪಾರವಾಗುತ್ತದೆ. ಒಬ್ಬರ ಕನಸು ಸಣ್ಣದಾಗಿರಬಹುದು; ಆದರೆ ಸಾಮೂಹಿಕ ಕನಸು ಸಮಾಜದ ಭವಿಷ್ಯವನ್ನೇ ಬದಲಾಯಿಸಬಲ್ಲದು.
ಆದ್ದರಿಂದ ಈ ವಿಜಯದಶಮಿಯಂದು ನಮ್ಮ ಸಂಕಲ್ಪ ಹೀಗಿರಲಿ-
“ಸಹಕಾರದಿಂದ ಸ್ವಾವಲಂಬನೆ, ಸ್ವಾವಲಂಬನೆಯಿಂದ ಸಮೃದ್ಧಿ,
ಸಮೃದ್ಧಿಯಿಂದ ಸಮಾನತೆ,

ಶ್ರೀಮತಿ ಸವಿತ ಎನ್ ಇ
ಕ.ರಾ.ಸೌ.ಸಂ.ಸ.ನಿ, ಬೆಂಗಳೂರು