“ ಸರ್ ನಮಸ್ತೆ, ನಾವೊಂದಷ್ಟು ಜನ ಸೇರಿಕೊಂಡು, ನಮ್ಮೆಲ್ಲರ ಆರ್ಥಿಕ ಅಗತ್ಯತೆಯನ್ನು ಈಡೇರಿಸಬೇಕೆಂದು ಒಂದು ಸಹಕಾರ ಸಂಘವನ್ನು ಆರಂಭಿಸುವ ಯೋಚನೆಯಲ್ಲಿದ್ದೇವೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆದಿದ್ದೇವೆ… ಮಾನ್ಯ ಸಹಕಾರ ಸಂಘಗಳ ನಿಬಂಧಕರು ಒಂದಷ್ಟು ಷೇರು ಸಂಗ್ರಹಣೆ ಮಾಡಲು ಅನುಮತಿಯನ್ನು ಕೊಟ್ಟಿದ್ದಾರೆ… ಹಾಗಾಗಿ ನೀವೂ ಸ್ವಲ್ಪ ಷೇರನ್ನು ಖರೀದಿಸಬೇಕು ಸರ್…. ನಮ್ಮವರ…. ನಮ್ಮೆಲ್ಲರ ಅಗತ್ಯತೆಗೆ ಒಂದು ಸಂಸ್ಥೆ ಹುಟ್ಟುತ್ತಲ್ಲಾ ಸರ್… ತುಂಬಾ ಚೆನ್ನಾಗಿ ನಡೆಸಿಕೊಂಡು ಹೋಗಬೇಕೆಂದಿದ್ದೇವೆ …. ಸರ್ , ನಿಮ್ಮ ಸಹಕಾರ ತುಂಬಾ ಅಗತ್ಯ….”
ಈ ಮೇಲಿನ ವಾಕ್ಯವನ್ನು ಓದಿದಾಗ ಯವುದೇ ಒಂದು ಸಹಕಾರ ಸಂಘದ ಆರಂಭಕ್ಕಾಗಿ ಓಡಾಡಿದ/ ಅಲೆದಾಡಿದವರ ಮುಖದಲ್ಲಿ ಒಂದು ಸಣ್ಣ ಮುಗುಳ್ನಗೆ ಕಾಣಬಹುದು.ಇನ್ನೂ ಬಿಡಿಸಿ ಹೇಳಬೇಕೆಂದರೆ ತಾವು ಆರಂಭಿಸಲು ಹೊರಟ ಆ ಸಹಕಾರ ಸಂಘದ ನೋಂದಣಿಯ ಕಾಲದಲ್ಲಿ ಅವರನ್ನು ಯಾರಾದರೂ ನಿದ್ದೆಯಿಂದ ಎಬ್ಬಿಸಿ ಕೇಳಿದಾಗಲೂ ಅವರ ಬಾಯಿಂದ ಬರುತ್ತಿದ್ದದ್ದು ಈ ಮಾತುಗಳೆ .
ಇಂದು ಸಹಕಾರ ಕ್ಷೇತ್ರದ ಈ ಭವ್ಯ ಬೆಳವಣಿಗೆಯ ಅಡಿಪಾಯ ಆ ಹಿರಿಯರು ಹಲವು ಬಾಗಿಲನ್ನು ತಟ್ಟಿ ಕೇಳಿಕೊಂಡ ಆ ಮಾತುಗಳೇ. ನಮ್ಮವರ ಅಗತ್ಯತೆಯನ್ನು ಈಡೇರಿಸಬೇಕೆಂಬ ಆ ಮಹಾತ್ಮರ ನಿಸ್ವಾರ್ಥ ತಪಸ್ಸಿನ ಫಲವೇ ಇಂದು ಬೆಳೆದು ನಿಂತಿರುವ ಪ್ರತಿಯೊಂದು ಸಹಕಾರ ಸಂಘಗಳು.
ಹೌದು, ಒಂದು ಸಹಕಾರ ಸಂಘದ ಆರಂಭದ ಹಿಂದಿರುವ ಪರಿಶ್ರಮ, ನಿಷ್ಠೆ, ಸಹನೆ ಬರೆದು-ಹೇಳಿ ವಿವರಿಸಲು ಸಾಧ್ಯವಿಲ್ಲ. ಬಹುಶಃ ತಮ್ಮ ಮಕ್ಕಳ ಭವಿಷ್ಯದ ಕನಸ್ಸನ್ನು ಎಷ್ಟು ಕಂಡಿರುತ್ತಾರೋ ಅಷ್ಟೇ ಕನಸ್ಸುಗಳು ಮತ್ತು ಯೋಚನೆಗಳನ್ನು ತಾವು ಆರಂಭಿಸುವ ಸಂಸ್ಥೆಯ ಕುರಿತು ಅವರು ಮಾಡಿರಬಹುದು. ಮುಂದೊಮ್ಮೆ, ತಾವು ಕಟ್ಟಿ ಬೆಳೆಸಿದ ಸಂಸ್ಥೆ ಇವತ್ತು ಹಲವರಿಗೆ ನೆರಳನ್ನು ನೀಡುತ್ತಿದೆಯಲ್ಲಾ ಅನ್ನುವ ಸಂತೃಪ್ತಿಯೊಂದೆ ಅವರಿಗೆ ಸಿಗಬಹುದಾದ ಪ್ರತಿಫಲ. ಒಂದು ಮರ ಬೆಳೆದು ಹಲವರಿಗೆ ನೆರಳನ್ನು ನೀಡುತ್ತಿದೆ ಎಂದರೆ ಆ ಗಿಡವನ್ನು ನೆಟ್ಟವರಿಗೂ, ಪೋಷಿಸಿದವರಿಗೂ ಅದರ ಗೌರವ ಸಲ್ಲಬೇಕು. ಹೀಗೆ ಸಂಘದ ಆರಂಭದ ಮೊದಲ ಹೆಜ್ಜೆಯನ್ನು ಇಡುವಾಗ ಎದುರಾದ ಸವಾಲುಗಳನ್ನೆಲ್ಲಾ ಎದುರಿಸಿ ಮುನ್ನಡೆದ ಅವರ ಮನೋಧೈರ್ಯಕ್ಕೆ ಶಿರಭಾಗಲೇಬೇಕು.
ಇದೊಂದು ನಿರಂತರ ಪ್ರಕ್ರಿಯೆಯೇ ನಿಜ, ಇನ್ನು ಮುಂದಕ್ಕೂ ಹಲವು ಸಹಕಾರ ಸಂಘಗಳು ಹುಟ್ಟಲಿವೆ, ಹಲವರ ಅಗತ್ಯತೆಗಳು ಈಡೇರಲಿವೆ, ಷೇರು ಸಂಗ್ರಹಣೆಗಾಗಿ ಹಲವು ಕದಗಳು ತಟ್ಟಲಿಕ್ಕಿದೆ, ಮತ್ತದೇ ಮಾತು….
“ ಸರ್ ನಮಸ್ತೆ, ನಾವೊಂದಷ್ಟು ಜನ ಸೇರಿಕೊಂಡು, ನಮ್ಮೆಲ್ಲರ ಆರ್ಥಿಕ ಅಗತ್ಯತೆಯನ್ನು ಈಡೇರಿಸಬೇಕೆಂದು ಒಂದು ಸಹಕಾರ ಸಂಘವನ್ನು ಆರಂಭಿಸುವ ಯೋಚನೆಯಲ್ಲಿದ್ದೇವೆ….”
ದೇಶದಲ್ಲಿ ಸಹಕಾರ ಕ್ಷೇತ್ರವನ್ನು ಕಟ್ಟಿ ಬೆಳೆಸಲು ತಮ್ಮ ಸರ್ವಸ್ವವನ್ನು ನೀಡಿದ ಎಲ್ಲಾ ಗುರು-ಹಿರಿಯರಿಗೆ ಈ ಗೌರವದ ಸ್ಮರಣೆ.
ಶ್ರೀ ಜಿತಿನ್ ಜಿಜೋ
ಕಾರ್ಯದರ್ಶಿ,
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ, ಮಂಗಳೂರು
+91 7026397567