ಕರ್ನಾಟಕ ರಾಜ್ಯ ಸರಕಾರ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಮೂವರು ಸಾಧಕರನ್ನು ಆಯ್ಕೆ ಮಾಡಿದೆ. ಹಿರಿಯ ಸಹಕಾರಿ ಸವಣೂರು ಸೀತಾರಾಮ ರೈ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಇತ್ತೀಚಿನವರೆಗೆ ಅನುಪಮ ಸೇವೆ ಸಲ್ಲಿಸಿದ ಕೆ.ರವಿರಾಜ ಹೆಗ್ಡೆ ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಇವರನ್ನು ಗುರುತಿಸಿ ಆಯ್ಕೆ ಮಾಡಿದೆ. ನಿಜವಾಗಿಯೂ ಸಹಕಾರ ಸಹಕಾರ ಕ್ಷೇತ್ರದ ವಿವಿಧ ವಲಯಗಳಲ್ಲಿ ಅನುಪಮ ಸೇವೆ ಸಲ್ಲಿಸಿ ದೃಢವಾಗಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಈ ಮೂವರು ಸಹಕಾರ ಕ್ಷೇತ್ರದ ಅನರ್ಘ್ಯ ರತ್ನಗಳೆಂದು ಗೌರವಿಸಬಹುದು.
ಸವಣೂರು ಸೀತಾರಾಮ ರೈಗಳು ಜಿಲ್ಲೆಯ ಹಿರಿಯ ಸಹಕಾರಿಗಳಾಗಿ, ಪ್ರಗತಿಪರ ಕೃಷಿಕರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿ ಸಮಾಜದಲ್ಲಿ ಅನನ್ಯ ಸೇವೆ ಸಲ್ಲಿಸಿ ಗೌರವಾದರಗಳಿಗೆ ಪಾತ್ರರಾದವರು. ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಮುನ್ನಡೆಸಿಕೊಂಡು ಬರುತ್ತಿರುವ ಸೀತಾರಾಮ ರೈಗಳು ಸವಣೂರು ಸಿಎ ಬ್ಯಾಂಕಿನ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾಗಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಮತ್ತು ಹಲವಾರು ಸಹಕಾರ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಮತ್ತು ನಾಯಕತ್ವ ನೀಡಿದವರು.
ಕೊಡವೂರು ರವಿರಾಜ ಹೆಗ್ಡೆ ಯವರು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಅಧ್ಯಕ್ಷರಾಗಿ ಹಲವಾರು ವರ್ಷಗಳಿಂದ ಹಾಲು ಒಕ್ಕೂಟದ ಗಣನೀಯ ಬೆಳವಣಿಗೆಗೆ ತಮ್ಮದೇ ವಿಶೇಷ ಕೊಡುಗೆ ಸಲ್ಲಿಸಿ ರಾಜ್ಯದಲ್ಲಿಯೇ ಗುರುತಿಸಿಕೊಂಡವರು. ಕೊಡವೂರು ಸಿಎ ಬ್ಯಾಂಕಿನ ಅಧ್ಯಕ್ಷರಾಗಿ, ಸ್ಕ್ಯಾಡ್ಸ್ ಸಂಸ್ಥೆಯ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಹಕಾರ
ಗಣನೀಯ ಸೇವೆ ಸಲ್ಲಿಸಿ ಸಹಕಾರ ಕ್ಷೇತ್ರದ ಹಿರಿಮೆಗೆ ಗರಿ ಮೂಡಿಸಿದವರು.
ಚಿತ್ತರಂಜನ್ ಬೋಳಾರ್ ಇವರದು ಸಹಕಾರ ಕ್ಷೇತ್ರದಲ್ಲಿ ಕಳೆದ ಒಂದು ದಶಕದಿಂದ ಕೇಳಿ ಬರುತ್ತಿರುವ ಬಲವಾದ ಹೆಸರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ರಾಜ್ಯದಲ್ಲಿಯೇ ಒಂದು ಮಾದರಿ ಸಹಕಾರಿ ಸಂಘ ಕಟ್ಟಿ ಬೆಳೆಸಿ ಮಾದರಿಯಾದವರು. ಮಹಿಳಾ ಸಂವರ್ಧನೆಯ ಕನಸು ಕಾಣುತ್ತಿರುವ ಇವರು ತಮ್ಮ ಸಹಕಾರ ಸಂಘವನ್ನು ಶೇಕಡಾ 99ರಷ್ಟು ಮಹಿಳಾ ಸಿಬ್ಬಂದಿಗಳಿಂದಲೇ ನಡೆಸುತ್ತಿದ್ದು ಕೇವಲ ಹತ್ತು ವರ್ಷಗಳಲ್ಲಿ ಅದನ್ನು ನೂರು ವರ್ಷ ಮೀರಿದ ಸಹಕಾರ ಸಂಘಗಳಿಗೆ ಮಿಗಿಲಾಗಿ ಕಟ್ಟಿ ಬೆಳೆಸಿದ ಪರಿಯು ಎಲ್ಲಾ ಸಹಕಾರಿಗಳಿಗೆ ಮಾದರಿ ಮತ್ತು ಅಧ್ಯಯನ ಯೋಗ್ಯವಾಗಿದೆ. ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಮತ್ತು ಜನತಾ ಬಜಾರ್ ಮಂಗಳೂರು ಇದರ ನಿರ್ದೇಶಕರಾಗಿಯೂ ತೊಡಗಿಸಿಕೊಂಡು ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಹರ್ನಿಶಿ
ದುಡಿಯುತ್ತಿರುವ ಇವರು ಸಹಕಾರ ರತ್ನ ಪ್ರಶಸ್ತಿಗೆ ನಿಜವಾಗಿಯೂ ಅತ್ಯಂತ ಸೂಕ್ತರೂ ಯೋಗ್ಯರೂ ಆಗಿದ್ದಾರೆ.
ಕರ್ನಾಟಕ ರಾಜ್ಯ ಸರಕಾರ ಹೀಗೆ ಈ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿರುವ ಶ್ರೀ ಸವಣೂರು ಸೀತಾರಾಮ ರೈಗಳು, ಶ್ರೀ ಕೆ. ರವಿರಾಜ ಹೆಗ್ಡೆಯವರು ಮತ್ತು ಶ್ರೀ ಚಿತ್ತರಂಜನ್ ಬೋಳಾರ್ ಇವರುಗಳಿಂದ ಕರಾವಳಿಯ ಸಹಕಾರ ಕ್ಷೇತ್ರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಬೆಳವಣಿಗೆ ಹಾಗೂ ಚಟುವಟಿಕೆಗಳಿಗೆ ಹೆಚ್ಚಿನ ಗೌರವ ಸಿಕ್ಕಂತಾಗಿದೆ ಎಂದು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ. ‘ಸ್ಪಂದನ’ ಮಂಗಳೂರು ಸಾಧಕರನ್ನು ಗೌರವಪೂರ್ವಕವಾಗಿ ಅಭಿನಂದಿಸುತ್ತದೆ
ಡಾ. ಎಸ್ ಆರ್ ಹರೀಶ್ ಆಚಾರ್ಯ
ಅಧ್ಯಕ್ಷರು
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ, ‘ ಸ್ಪಂದನ’ ಮಂಗಳೂರು