ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಮತ್ತು ರೈತ ಉತ್ಪಾದಕ ಸಂಘಗಳು ಉಸಿರಾಡಬೇಕಾದರೆ ಕೃಷಿಕರ ಅವಲಂಬನೆ ಅತ್ಯಗತ್ಯ. ಈ ಸಂಘಗಳ ಬಹುತೇಕ ಶೇರುದಾರ ಸದಸ್ಯರು ಕೃಷಿಕರು ಅಥವ ಕೃಷಿ ಕ್ಷೇತ್ರ ಅವಲಂಬಿತರು. ಸಂಘ ಅವರೊಡನೆ ಯಾವ ರೀತಿಯ ಬಾಂಧವ್ಯ ಹೊಂದಿದೆ ಅದರ ಮೇಲೆ ಸಂಸ್ಥೆಯ ಸಾಮರ್ಥ್ಯ ನಿರ್ಧಾರವಾಗುತ್ತದೆ. ಠೇವಣಿಗಳು, ಉಳಿತಾಯ ಖಾತೆಗಳು, ಸಾಲಗಳು ಹೀಗೆ ಯಾವುದಿದ್ದರೂ ಅದು ಸದಸ್ಯರ ಜೊತೆಗೆ ಯಾವ ರೀತಿಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಸಂಪರ್ಕ ಹೊಂದಿದೆ ಎಂಬುದರ ಮೇಲೆ ಅವಲಂಬಿತ. ಈ ಸಂಪರ್ಕಗಳು, ಬಾಂಧವ್ಯಗಳು ವೃದ್ಧಿಯಾಗಬೇಕಾದರೆ ಕೃಷಿಕರು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಸಂಘ ಹೆಗಲಾಗಬೇಕು.
ಯಂತ್ರಗಳು ಮತ್ತು ಸದಸ್ಯರು
ಕೃಷಿಕರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಕಾರ್ಮಿಕರ ಕೊರತೆ. ಅದರಲ್ಲೂ ನೈಪುಣ್ಯ ಹೊಂದಿದ ಮತ್ತು ಕೌಶಲ್ಯವಿರುವ ಕಾರ್ಮಿಕರ ಕೊರತೆ. ತಂತ್ರಜ್ಞಾನ ಬೆಳೆದಂತೆ ತನ್ನ ಕೃಷಿಯೊಳಗಿನ ಕಷ್ಟಗಳನ್ನು ನೀಗಿ ಕೆಲಸದ ಹೊರೆಯನ್ನು ಸುಲಭಗೊಳಿಸಲು ಕೃಷಿಕ ಹತ್ತಾರು ಯಂತ್ರಗಳು, ಸಲಕರಣೆಗಳಿಗೆ ಮೊರೆಹೋಗಬೇಕಾಗಿ ಬಂದಿದೆ. ಇವುಗಳು ಅವನಿಗೆ ಬಹಳಷ್ಟು ಕೆಲಸಗಳನ್ನು ಹಗುರಗೊಳಿಸಿವೆ ಕೂಡ. ಆದರೆ ತನ್ನ ಕಾರ್ಯಕ್ಷೇತ್ರಕ್ಕೆ ಅಗತ್ಯ ಇರುವ ಎಲ್ಲಾ ಯಂತ್ರಗಳನ್ನು ಖರೀದಿ ಮಾಡಲು ಹೆಚ್ಚಿನ ಕೃಷಿಕರಿಂದ ಸಾಧ್ಯ ಇಲ್ಲ. ಇಂತಹ ಸಂದರ್ಭದಲ್ಲಿ ಸಹಕಾರಿ ಸಂಘಗಳು ಕೃಷಿಕನಿಗೆ ನೆರವಾಗುವ ಯಂತ್ರಗಳು, ಗಾಡಿಗಳು ಹಾಗು ಸಲಕರಣೆಗಳನ್ನು ಬಾಡಿಗೆಗೆ ಕೊಡುವ ಯೋಚನೆ ಮಾಡಬೇಕಾಯಿತು. ಇಂದು ಎಷ್ಟೋ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ ಕೃಷಿಕರಿಗೆ ನೆರವಾಗುತ್ತಿವೆ.
ನನ್ನ ಗಮನಕ್ಕೆ ಬಂದಂತೆ ಕೆಲವು ಸಹಕಾರಿ ಸಂಘಗಳ ವ್ಯವಸ್ಥೆ ಸರಿ ಇಲ್ಲದೆ ಬಾಡಿಗೆಗೆ ಹೋದ ಯಂತ್ರಗಳು ಬೇಗನೆ ರಿಪೇರಿಗೆ ಬರುವುದು, ಕೆಲಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಹಾಳಾಗುವುದು ಎಲ್ಲ ನಡೆಯುತ್ತಿದೆ. ಸಹಕಾರಿ ಸಂಘಗಳ ಸಿಬ್ಬಂದಿಗಳಿಗೆ ಮತ್ತು ಯಂತ್ರಗಳನ್ನು ಬಾಡಿಗೆಗೆ ಒಯ್ಯುವ ಸದಸ್ಯರಿಗೆ ಅದರ ಕೆಲಸದ ಮಾಹಿತಿ ಇಲ್ಲದಿರುವುದು ವ್ಯವಸ್ಥೆಯ ದೊಡ್ಡ ಕೊರತೆ.
ರಿಪೇರಿ ಮತ್ತು ಜೋಡಣೆಯ ಪಾಠ
ಯಾವ ಸಹಕಾರಿ ಸಂಘಗಳು ಬಾಡಿಗೆಗೆ ಇಂತಹ ಯಂತ್ರಗಳನ್ನು ಕೊಡುತ್ತಿದೆಯೊ ಅವುಗಳು ಆ ಯಂತ್ರಗಳ ಬಗ್ಗೆ, ಅವುಗಳ ಕೆಲಸಗಳ ಕುರಿತು ಪೂರ್ಣ ಮಾಹಿತಿಯ ಕಾರ್ಯಾಗಾರಗಳನ್ನು ಕೃಷಿ ಕ್ಷೇತ್ರಗಳಲ್ಲಿ ಮಾಡಬೇಕು. ಮರ ತುಂಡರಿಸುವ, ಕಳೆಕೊಚ್ಚುವ ಯಂತ್ರಗಳು, ತೆಂಗಿನ ಗರಿ, ತೆಂಗಿನ ಕಾಯಿ ಸಿಪ್ಪೆ ಹುಡಿಮಾಡುವ ಯಂತ್ರಗಳು, ಕಾರ್ಬನ್ ಫೈಬರ್ ದೋಟಿ, ಮೋಟೋಕಾರ್ಟ್ಗಳು ಮುಂತಾದವುಗಳ ಕಾರ್ಯ ಚಟುವಟಿಕೆಗಳ ಪರಿಚಯ ಬಳಕೆ ಮಾಡುವವರಿಗೆ ಕೊಡುವ ವ್ಯವಸ್ಥೆ ಕಾರ್ಯಾಗಾರಗಳಲ್ಲಿ ನಡೆಯಬೇಕು. ಈ ಯಂತ್ರಗಳು ಬಳಕೆಯ ಹಂತದಲ್ಲಿ ಕೊಡುವ ತೊಂದರೆಗಳ ಅರಿವು, ಅಪಾಯವಾಗದಂತೆ ಉಪಯೋಗಿಸುವ ತಂತ್ರಗಳ ಬಗ್ಗೆಯೂ ಕಾರ್ಯಾಗಾರ ಬೆಳಕು ಚೆಲ್ಲಬೇಕು.
ಈ ಯಂತ್ರಗಳನ್ನು ಮತ್ತು ಸಲಕರಣೆಗಳನ್ನು ಉಪಯೋಗಿಸುವವರು ಹೇಗೆ ರಿಪೇರಿ ಮಾಡಬಹುದು ಎಂಬ ಅರಿವು ಎಲ್ಲಕ್ಕಿಂತ ಮುಖ್ಯ. ಕಾರ್ಯಾಗಾರದ ಪ್ರಮುಖ ಉದ್ದೇಶವೆ ಅದಾಗಬೇಕು. ಮರ ತುಂಡರಿಸುವ ಯಂತ್ರವನ್ನೇ ತೆಗೆದುಕೊಂಡರೆ ಅದಕ್ಕೆ ಇಂಧನ ತುಂಬಿಸುವುದು, ಚೈನ್ ಜೋಡಿಸುವುದು, ಚಾಲೂ ಮಾಡುವಾಗ ವೇಗ ನಿಯಂತ್ರಣ ಮಾಡುವ ಕ್ರಮ ಇವೆಲ್ಲವನ್ನು ತಿಳಿಯದೆ ಮರ ತುಂಡರಿಸುವ ಯಂತ್ರ ಹೊಂದಿದ್ದರೆ ಅದರಿಂದ ಪ್ರಯೋಜನ ಸಿಗದು. ಹುಲ್ಲು ತುಂಡರಿಸುವ ಯಂತ್ರವಾಗಿರಬಹುದು, ಮೋಟೋಕಾರ್ಟ್ ಆಗಿರಬಹುದು ಅವುಗಳ ಬಿಡಿ ಭಾಗಗಳ ಕೆಲಸಗಳ ಬಗ್ಗೆ ತಿಳುವಳಿಕೆ ಕೊಡಬೇಕು. ಎಷ್ಟೋ ಅಡಿಕೆ ಕೃಷಿಕರ ಮನೆಯಲ್ಲಿ ಕಾರ್ಬನ್ ಫೈಬರ್ ದೋಟಿ ಇವೆ. ಅದರ ಕೆಲಸದ ಮಾಹಿತಿಯ ಕೊರತೆಯಿದೆ. ಈ ಕೊರತೆಗಳನ್ನು ನೀಗುವ ಕೆಲಸ ಸಹಕಾರಿ ಸಂಘಗಳು ಮಾಡಿ ಕೊಡಬೇಕು.
ತಂತ್ರಜ್ಞ ಜೊತೆಗಿರಲಿ
ಸಹಕಾರಿ ಸಂಘಗಳು ಕೃಷಿಕರಿಗೆ ಅಗತ್ಯವಾದ ಯಂತ್ರಗಳನ್ನು ಬಾಡಿಗೆಗೆ ಕೊಡುವ ಯೋಜನೆ ಹಮ್ಮಿಕೊಂಡರೆ ಅವುಗಳ ಉಸ್ತುವಾರಿಗೆ ಒಬ್ಬ ತಂತ್ರಜ್ಞನನ್ನೂ ನೀವು ಹೊಂದಿರುವ ಅಗತ್ಯ ಖಂಡಿತ ಇದೆ. ಆತ ಕೃಷಿಕರ ಕಾರ್ಯಕ್ಷೇತ್ರಕ್ಕೂ ಅಗತ್ಯ ಬಿದ್ದರೆ ಭೇಟಿ ಕೊಡುವವನಾಗಿರಬೇಕು. ಕೃಷಿಕರ ಕೆಲಸಕಾರ್ಯಗಳನ್ನು ಹಗುರಗೊಳಿಸಲು ಬೇಕಾದ ಯಂತ್ರಗಳನ್ನು ಸಹಕಾರಿ ಸಂಘಗಳೇ ಬಾಡಿಗೆಗೆ ಕೊಡುವುದನ್ನು ಸರಿಯಾಗಿ ನಿರ್ವಹಿಸಿದರೆ ಒಳ್ಳೆಯ ಅದಾಯ ಕೂಡ ಅದಾಗಬಹುದು.
ಒಟ್ಟಿನಲ್ಲಿ ಸಹಕಾರಿ ಕ್ಷೇತ್ರ ತನ್ನ ಸದಸ್ಯರ ಬೇಕು ಬೇಡಗಳಿಗೆ ನಿತ್ಯ ಸ್ಪಂದನೆ ಮಾಡುವ ಜರೂರನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯ. ಆಡಳಿತ ಮಂಡಳಿಯ ಸದಸ್ಯರು ತಮ್ಮ ಸುತ್ತಲಿನ ಸಮಸ್ಯೆಗಳಿಗೆ, ಆಗು ಹೋಗುಗಳಿಗೆ ತಮ್ಮ ಸಂಘ ಯಾವ ರೀತಿ ಪ್ರತಿಕ್ರೀಯೆ ನೀಡಬಹುದು, ನೀಡಬೇಕು ಎಂಬೆಲ್ಲ ಕನಸುಗಳನ್ನು ಕಾಣದೆ ಹೋದರೆ ಅಂತಹ ಸಂಘಗಳು ಹಳೆಯ ಸಾಲಿಗೆ ಸೇರಿ ಬಿಡುತ್ತವೆ, ಸವಕಲಾಗುತ್ತವೆ. ಕಾರ್ಯಶೈಲಿಯಲ್ಲಿ ಚುರುಕುತನ, ಸೇವೆಯಲ್ಲಿ ನಿರ್ವಾಜ್ಯ ಭಾವನೆ ಮೂಡಿಸುವ ಜವಾಬ್ದಾರಿ ಕೂಡ ಆಡಳಿತ ಮಂಡಳಿಯ ಹೆಗಲಿಗಿದೆ ಎಂಬುದನ್ನು ಮರೆಯಬಾರದು.

ಶಂ.ನಾ.ಖಂಡಿಗೆ