ಸೌಹಾರ್ದ ಸಹಕಾರಗಳ ಸ್ವಾಯತ್ತತೆ: ಸವಾಲುಗಳು ಮತ್ತು ಅವಕಾಶಗಳು.|ಶ್ರೀ. ಮನೋಹರ ಮಸ್ಕಿ

 

  • ಸರಕಾರ ಮಾಡಬೇಕಿರುವುದು ಸ್ವತಂತ್ರ ಸಹಕಾರಿ ಒಂಬಡ್ಸ್‌ಮನ್ ವ್ಯವಸ್ಥೆ .
  • ಆಂತರಿಕ ಅಪಾಯ ಆಧಾರಿತ ಅಡಿಟ್ ಮತ್ತು ಅದರ ಅನುಷ್ಠಾನದ ಬಗ್ಗೆ ಸೂಕ್ತ ನಿಯಮ.
  • ಸಹಕಾರಿ ಆಧಾರಿತ ಠೇವಣಿ ಭದ್ರತಾ ವ್ಯವಸ್ಥೆ ಸಹಕಾರ ಮಾಡುತ್ತಿರುವುದು.

ಸೌಹಾರ್ದ ಸಹಕಾರ: ಸ್ವಾಯತ್ತತೆ, ನಿಯಂತ್ರಣ ಮತ್ತು ಮುಂದಿನ ದಾರಿ ದೇಶದಲ್ಲಿ ಸಹಕಾರಿ ಕ್ಷೇತ್ರ ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಲಾಗಲಿಲ್ಲ ವಿಫಲವಾಗಿದೆ ಎಂದು ಯೋಜನಾ ಆಯೋಗದ ( ಈಗಿನ ನೀತಿ ಆಯೋಗ) ಸಮಿತಿಗಳ ವರದಿಗಳು ಬಂದು, ಯೋಜನಾ ಆಯೋಗ ನೀಡಿದ ಮಾದರಿ ಸಹಕಾರಿ ಕಾಯ್ದೆಯಿಂದ ರೂಪುಗೊಂಡು ಬಂದದ್ದೇ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ. ಈ ವರ್ಷಾಂತ್ಯಕ್ಕೆ 25 ವರ್ಷಗಳನ್ನು ಪೂರೈಸುತ್ತಿದೆ. ಸಹಕಾರವನ್ನು “ಸರ್ಕಾರದ ವಿಸ್ತರಣೆ”ಯಾಗಿ ಅಲ್ಲ, “ಜನರ ಸ್ವಂತ ಸಂಸ್ಥೆ”ಯಾಗಿ ನೋಡುವ ದೃಷ್ಟಿಕೋನವೇ ಸೌಹಾರ್ದ ಕಾಯ್ದೆ ಒಂದು ಪರ್ಯಾಯ ದಾರಿಯಾಗಿ ಹೊರಹೊಮ್ಮಿತು.

ಬದಲಾವಣೆಯ ಹರಿಕಾರವಾಗಿದ್ದ ಈ ಸೌಹಾರ್ದ ಕಾಯ್ದೆಯನ್ನು ಮತ್ತೆ 25 ವರ್ಷಗಳಷ್ಟು ಹಿಂದಕ್ಕೆ ಒಯ್ಯುವ ಪ್ರಯತ್ನಗಳು ಮತ್ತು ಸೌಹಾರ್ದ ಸಹಕಾರಿಗಳ ಪ್ರಗತಿಯ ಹೆಜ್ಜೆಗಳನ್ನು ಒಮ್ಮೆ ನೋಡಬೇಕಿದೆ. ಸದಸ್ಯರ ಸ್ವಾಯತ್ತತೆ, ಸ್ವನಿಯಂತ್ರಣ, ಸ್ವಶಾಸನ ಎಂಬ ಮೂಲ ತತ್ವಗಳನ್ನು ಆಧಾರವಾಗಿಟ್ಟುಕೊಂಡು, ಇಂದು ರಾಜ್ಯದೆಲ್ಲೆಡೆ 5800ಕ್ಕೂ ಅಧಿಕ ಸೌಹಾರ್ದ ಸಹಕಾರಿಗಳು ಸುಮಾರು 50 ಲಕ್ಷಕ್ಕೂ ಮೇಲ್ಪಟ್ಟ ಸದಸ್ಯರ ಜೀವನದಲ್ಲಿ ಆರ್ಥಿಕ–ಸಾಮಾಜಿಕ ಬದಲಾವಣೆಯನ್ನು ತಂದಿವೆ. ವಾರ್ಷಿಕ ವ್ಯವಹಾರ 51ಸಾವಿರ ಕೋಟಿಯನ್ನು ದಾಟಿರುವುದು ಈ ಚಳವಳಿಯ ಶಕ್ತಿ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಸಂದರ್ಭದಲ್ಲಿ ಸೌಹಾರ್ದ ಚಳವಳಿ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ, ಜೊತೆಗೆ ಗಂಭೀರ ಆತ್ಮಪರಿಶೀಲನೆಯ ಕ್ಷಣವೂ ಹೌದು.

ಸಾಮಾಜಿಕ–ಸಾಂಸ್ಕೃತಿಕ ಮಟ್ಟದಲ್ಲೂ ಸೌಹಾರ್ದ ಚಳವಳಿ ಹೊಸ ದಾಖಲೆಗಳನ್ನು ನಿರ್ಮಿಸಿದೆ. 2025 ಜನವರಿ 1ರಂದು ರಾಜ್ಯದ 1500ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ “ಸಹಕಾರಿ ಧ್ವಜಾರೋಹಣ” ನಡೆಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದು, 25 ವರ್ಷಗಳ ಸಾಧನೆಯನ್ನು ಆಚರಿಸಿತು. ಡಿಜಿಟಲೀಕರಣದ ಕ್ಷೇತ್ರದಲ್ಲಿ ಸೌಹಾರ್ದ ಬ್ಯಾಂಕುಗಳು ATM, RTGS, NEFT, IMPS, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಕಾರ್ಡ್ ಸೇವೆಗಳು ಮುಂತಾದೆಲ್ಲ ಸೇವೆಯನ್ನು ಗ್ರಾಮ–ನಗರಗಳಲ್ಲಿ ವಿಸ್ತರಿಸಿ, ಗ್ರಾಹಕಸ್ನೇಹಿ, ಪಾರದರ್ಶಕ ವ್ಯವಹಾರ ಮಾದರಿಯನ್ನು ನಿರ್ಮಿಸುತ್ತಿವೆ. ಇದರಿಂದ ಸದಸ್ಯತೆ, ಠೇವಣಿಗಳು, ಸಾಲ ಮತ್ತು ಲಾಭದಾರಿತ್ವ ಎಲ್ಲವೂ ಶಾಶ್ವತ ಏರಿಕೆಯನ್ನು ಕಂಡಿವೆ. ಗ್ರಾಮೀಣ–ನಗರ ಆರ್ಥಿಕ ಚಟುವಟಿಕೆಗಳಿಗೆ ಈ ಚಳುವಳಿ ಎಷ್ಟು ಆಳವಾಗಿ ನಂಟಾಗಿದೆ ಎಂಬುದು ಸ್ಪಷ್ಟ.

ಸೌಹಾರ್ದ ಕಾಯ್ದೆಯ ಅಡಿಯಲ್ಲಿ ನೊಂದಣಿಯಾದ ಪ್ರಥಮ ಸಹಕಾರಿ ಸಂಸ್ಥೆಯೆಂದರೆ ಸುಕೋ ಬ್ಯಾಂಕ್. ಇದು ಹಳೆಯ ಸಹಕಾರ ಕಾಯ್ದೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯಾಗಿತ್ತು, ಸ್ವಯಂಪ್ರೇರಿತವಾಗಿ ಸೌಹಾರ್ದ ಕಾಯ್ದೆಗೆ ಪರಿವರ್ತನೆಯಾಯಿತು. ಈ ಪರಿವರ್ತನೆಯು ಕೇವಲ ಒಂದು ಸಹಕಾರಿ ಬ್ಯಾಂಕಿನ ನಿರ್ಧಾರವಲ್ಲ; ಇಡೀ ರಾಜ್ಯದ ಸಹಕಾರ ಕ್ಷೇತ್ರಕ್ಕೆ ದಾರಿ ತೋರಿಸಿದ ಒಂದು ಐತಿಹಾಸಿಕ ಹೆಜ್ಜೆಯಾಯಿತು. ಇದರ ಬಳಿಕ ಕೇವಲ 50ಕ್ಕಿಂತ ಹೆಚ್ಚು ಸಹಕಾರ ಸಂಸ್ಥೆಗಳು ಸೌಹಾರ್ದ ಕಾಯ್ದೆಯನ್ನು ಅಳವಡಿಸಿಕೊಳ್ಳಲು ಸಹ ಸುಕೋ ಬ್ಯಾಂಕ್ ಕೆಲಸ ಮಾಡಿತು. ಇದರ ಫಲವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಎಂಬ ರಾಜ್ಯಮಟ್ಟದ ಫೆಡರಲ್ ಸಂಸ್ಥೆ ಹುಟ್ಟಿಕೊಂಡಿತು. ಇದು ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆಯಲ್ಲ; ಸೌಹಾರ್ದ ಸಹಕಾರಗಳೇ ಸೇರಿ ನಿರ್ಮಿಸಿದ ಸ್ವಯಂ-ಆಡಳಿತ ಸಂಸ್ಥೆ. ಇದರ ಉದ್ದೇಶ ನಿಯಂತ್ರಣವಲ್ಲ, ಮಾರ್ಗದರ್ಶನ; ಆದೇಶವಲ್ಲ, ಸಂಯೋಜನೆ.

ಇಪ್ಪತ್ತೈದು ವರ್ಷಗಳ ಸಾಧನೆಗಳು: 

ಕಳೆದ 25 ವರ್ಷಗಳಲ್ಲಿ ಸೌಹಾರ್ದ ಸಹಕಾರಿಗಳು ಸರ್ಕಾರದ ಅನುದಾನಗಳಿಲ್ಲದೆ, ರಾಜಕೀಯ ಆದೇಶಗಳಿಲ್ಲದೆ, ಸ್ಥಳೀಯ ಜನರ ಹಣವನ್ನು ಸ್ಥಳೀಯ ಜನರಿಗೇ ಸಾಲವಾಗಿ ನೀಡಿ ಒಂದು ಮೌನ ಕ್ರಾಂತಿಯನ್ನು ನಡೆಸಿವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಣ್ಣ ವ್ಯಾಪಾರಿಗಳು, ಕೃಷಿಕರು, ಸೌಹಾರ್ದ ಸಹಕಾರಿಗಳ ಮೂಲಕ ಆರ್ಥಿಕ ಭದ್ರತೆ ಪಡೆದಿದ್ದಾರೆ. ಸಹಕಾರ ಸಂಸ್ಥೆಗಳು ಸರ್ಕಾರದ ಯೋಜನೆಗಳಾಗಿ ಅಲ್ಲ, ಜನರ ನಂಬಿಕೆಯ ಸಂಸ್ಥೆಗಳಾಗಿ ಬೆಳೆದವು. ಕೆಲವು ಸೌಹಾರ್ದ ಸಂಸ್ಥೆಗಳು ಜನರ ನಂಬಿಕೆಯನ್ನು ಹಾಳು ಮಾಡಿದ ಉದಾಹರಣೆಗಳೂ ಇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಾಡಿದ ಕೆಲವು ಕಾನೂನು ತಿದ್ದುಪಡಿಗಳು ಸೌಹಾರ್ದ ಕಾಯ್ದೆಯ ಮೂಲ ಸ್ವಭಾವವನ್ನೇ ಪ್ರಶ್ನಿಸುತ್ತಿವೆ. ರಿಜಿಸ್ಟ್ರಾರ್ ಅಧಿಕಾರ ವಿಸ್ತರಣೆ, ಠೇವಣಿಗಳ ಮೇಲೆ ಹೆಚ್ಚುವರಿ ಕಡ್ಡಾಯ ರಿಸರ್ವ್ ನಿಯಮಗಳು, ನಿಧಿ ಹೂಡಿಕೆಗಳ ಮೇಲಿನ ಕಠಿಣ ನಿಯಂತ್ರಣಗಳು ಸೌಹಾರ್ದ ಸಂಸ್ಥೆಗಳ ಸ್ವಾಯತ್ತ ನಿರ್ಧಾರ ಶಕ್ತಿಯನ್ನು ಕುಗ್ಗಿಸುವ ದಿಕ್ಕಿನಲ್ಲಿ ಸಾಗುತ್ತಿರುವುದು ಸ್ಪಷ್ಟವಾಗಿದೆ. ಇವುಗಳು ಸೌಹಾರ್ದ ಕಾಯ್ದೆಯ ಆತ್ಮಕ್ಕೆ ವಿರುದ್ಧವಾಗಿವೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

ಹಿಂದಿನ ಸಹಕಾರ ಸಚಿವರು ಸಾರ್ವಜನಿಕವಾಗಿ “ಬಹುತೇಕ ಸೌಹಾರ್ದ ಸಹಕಾರಗಳು ಮುಚ್ಚುವ ಸ್ಥಿತಿಯಲ್ಲಿವೆ”, “ರಾಜ್ಯಮಟ್ಟದ ಫೆಡರೇಷನ್ ಅಗತ್ಯವಿಲ್ಲ”, “ಸರ್ಕಾರದ ಮಧ್ಯಪ್ರವೇಶ ಅನಿವಾರ್ಯ” ಎಂದು ಹೇಳಿರುವುದು ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಪ್ರಶ್ನೆ ಏನೆಂದರೆ, ಎಷ್ಟು ಸೌಹಾರ್ದಗಳು ನಷ್ಟದಲ್ಲಿವೆ? ಅವುಗಳ ವೈಫಲ್ಯಕ್ಕೆ ಕಾರಣ ದುರ್ಬಲ ಆಡಳಿತವೇ, ಅಥವಾ ನಿರಂತರ ನೀತಿ ಒತ್ತಡವೇ? ಕೆಲವೇ ಸಂಸ್ಥೆಗಳ ವೈಫಲ್ಯಕ್ಕೆ ಇಡೀ ಚಳವಳಿಯನ್ನು ಹೊಣೆ ಮಾಡುವುದು ನ್ಯಾಯಸಮ್ಮತವೇ?

ಇಲ್ಲಿ ಕಾಣಿಸಿಕೊಳ್ಳುವುದು ವಾಸ್ತವಾಂಶಾಧಾರಿತ ನೀತಿ ಚರ್ಚೆಯಿಗಿಂತ ಹೆಚ್ಚು ರಾಜಕೀಯ ಅಭಿಪ್ರಾಯದ ನಿರ್ಮಾಣ. ಫೆಡರಲ್ ಕೋಆಪರೇಟಿವ್ ದುರ್ಬಲವಾದರೆ, ಪ್ರತ್ಯೇಕವಾಗಿ ಸೌಹಾರ್ದ ಸಹಕಾರಿಗಳು ಸರ್ಕಾರದ ಮುಂದೆ ಏಕಾಂಗಿಗಳಾಗುತ್ತವೆ. ಸದಸ್ಯರ ಹಿತರಕ್ಷಣೆಗೆ ಇರುವ ಒಟ್ಟುಗೂಡಿದ ವೇದಿಕೆ ನಾಶವಾಗುತ್ತದೆ. ಸ್ವಯಂ ನಿಯಂತ್ರಣದ ಬದಲು ಸರ್ಕಾರಿ ನಿಯಂತ್ರಣ ಬಲಗೊಳ್ಳುತ್ತದೆ. ಇದು ಸಹಕಾರ ಕ್ಷೇತ್ರವನ್ನು ಮತ್ತೆ 1959ರ ಯುಗದ ಹಿಂದಕ್ಕೆ ಕರೆದೊಯ್ಯುವ ಅಪಾಯವನ್ನು ಹೊಂದಿದೆ.

ಸಮಸ್ಯೆ ಎಲ್ಲಿ ? ಪರಿಹಾರ ಚಿಂತಿಸಬಹುದೇ ?: 

ಸೌಹಾರ್ದ ಸಹಕಾರಿಗಳ ಸಮಸ್ಯೆ ಸ್ವಾಯತ್ತತೆಯಲ್ಲ. ಸಮಸ್ಯೆ ಸ್ವಾಯತ್ತತೆಯನ್ನು ಬೆಂಬಲಿಸುವ ಸೂಕ್ತ, ಸ್ಪಷ್ಟ ಮತ್ತು ಜವಾಬ್ದಾರಿಯುತ ಗವರ್ನನ್ಸ್ ವ್ಯವಸ್ಥೆಗಳ ಕೊರತೆಯಲ್ಲಿ ಇದೆ. ಸ್ವಾಯತ್ತತೆ ಎಂದರೆ ನಿಯಂತ್ರಣವಿಲ್ಲದ ಸ್ವೇಚ್ಛೆ ಅಲ್ಲ; ಅದು ಸದಸ್ಯರ ಮುಂದೆ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸುವ ಸ್ವತಂತ್ರತೆ. ಈ ಸೂಕ್ಷ್ಮ ಅಂತರವನ್ನು ಅರಿಯದೆ, ಸ್ವಾಯತ್ತತೆಯನ್ನೇ ಸಮಸ್ಯೆಯಾಗಿ ಚಿತ್ರಿಸುವುದು ತಪ್ಪಾದ ನಿರ್ಣಯಕ್ಕೆ ಕರೆದೊಯ್ಯುತ್ತದೆ.

ನಿಯಂತ್ರಣ ಅನಿವಾರ್ಯ. ಯಾವುದೇ ಹಣಕಾಸು ಸಂಸ್ಥೆಯಲ್ಲಿ ಠೇವಣಿದಾರರ ಹಣದ ರಕ್ಷಣೆ ಮೊದಲ ಆದ್ಯತೆಯಾಗಬೇಕು. ಆದರೆ ಈ ನಿಯಂತ್ರಣ ಮೇಲಿನಿಂದ ಹೇರಲಾದ (takeover) ಅಥವಾ ನೇರ ಸರ್ಕಾರಿ ಹಸ್ತಕ್ಷೇಪ ಆಗಬಾರದು. ಅಂಥ ಕ್ರಮಗಳು ಸೌಹಾರ್ದ ಸಹಕಾರಿಗಳ ಮೂಲ ಆತ್ಮವನ್ನೇ ಕುಗ್ಗಿಸುತ್ತವೆ. ಬದಲಾಗಿ, ನಿಯಂತ್ರಣವು ಸಂಸ್ಥೆಯ ಒಳಗಿನಿಂದಲೇ ಬಲಪಡಿಸುವ ರೀತಿಯಲ್ಲಿ ರೂಪುಗೊಳ್ಳಬೇಕು. ಸರ್ಕಾರದ ಪಾತ್ರ ಮಾರ್ಗದರ್ಶಕವಾಗಿರಬೇಕು; ನಿರ್ವಾಹಕವಾಗಬಾರದು.

ಇಲ್ಲಿ ಅಪಾಯ ಆಧಾರಿತ ನಿಯಂತ್ರಣ (Risk-based Regulation) ಮಹತ್ವ ಪಡೆದುಕೊಳ್ಳುತ್ತದೆ. ಎಲ್ಲ ಸೌಹಾರ್ದ ಸಹಕಾರಗಳನ್ನೂ ಒಂದೇ ತಟ್ಟೆಯಲ್ಲಿ ತೂಗುವುದರಿಂದ ಸಮಸ್ಯೆ ಪರಿಹಾರವಾಗದು. ಹಣಕಾಸು ಸ್ಥಿತಿ, ಆಡಳಿತ ಗುಣಮಟ್ಟ ಮತ್ತು ಅಪಾಯ ಮಟ್ಟವನ್ನು ಆಧರಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸೌಹಾರ್ದಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕು; ದುರ್ಬಲ ಸಂಸ್ಥೆಗಳ ಮೇಲೆ ಮಾತ್ರ ಹೆಚ್ಚುವರಿ ಮೇಲ್ವಿಚಾರಣೆ ಇರಬೇಕು. ಇದು ನಿಯಂತ್ರಣ ಮತ್ತು ಸ್ವಾಯತ್ತತೆಯ ನಡುವಿನ ಸಮತೋಲನಕ್ಕೆ ಸೂಕ್ತ ಮಾರ್ಗ. ಇಂತಹ ಅಗತ್ಯವಾದ ಬದಲಾವಣೆಗಳನ್ನು ಸೌಹಾರ್ದ ಕಾಯ್ದೆಯಲ್ಲಿ ಮಾಡದೆ, ಸರಕಾರ ಸಹಕಾರ ಇಲಾಖೆಗೆ ಹೆಚ್ಚು ಅಧಿಕಾರ ನೀಡುವ ಬದಲಾವಣೆಗಳನ್ನು ಮಾಡುವುದು ಸರಕಾರದ ಬದಲಾಗದ ಮತ್ತು ಅಧಿಕಾರ ಕೇಂದ್ರಿತ ಮನಸ್ಥಿತಿಯನ್ನು ಬಿಂಬಿಸುತ್ತದೆ

ಉದಾಹರಣೆಗೆ ಸ್ವತಂತ್ರ ಸಹಕಾರಿ ಒಂಬಡ್ಸ್‌ಮನ್ ವ್ಯವಸ್ಥೆ ತರುವ ಅಗತ್ಯವಿತ್ತು. ರಿಜಿಸ್ಟ್ರಾರ್‌ಗೆ ಅತಿಯಾದ ಅಧಿಕಾರ ಒಪ್ಪಿಸುವ ಬದಲು, ಠೇವಣಿದಾರರು ಮತ್ತು ಸದಸ್ಯರ ದೂರುಗಳಿಗೆ ವೇಗವಾಗಿ ಸ್ಪಂದಿಸುವ ಸ್ವತಂತ್ರ ವ್ಯವಸ್ಥೆ ರೂಪಿಸಬೇಕು. ಇದರಿಂದ ಆಡಳಿತದ ಮೇಲಿನ ವಿಶ್ವಾಸ ಹೆಚ್ಚುತ್ತದೆ ಮತ್ತು ಸರ್ಕಾರದ ನೇರ ಹಸ್ತಕ್ಷೇಪದ ಅಗತ್ಯ ಕಡಿಮೆಯಾಗುತ್ತದೆ.

ರಾಜ್ಯಮಟ್ಟದ ಸೌಹಾರ್ದ ಫೆಡರಲ್ ಕೋಆಪರೇಟಿವ್ ಪಾತ್ರವನ್ನು ದುರ್ಬಲಗೊಳಿಸುವ ಬದಲು, ಬಲವಾದ ಆಂತರಿಕ ಅಪಾಯ ಆಧಾರಿತ ಅಡಿಟ್ ಮತ್ತು ಅದರ ಅನುಷ್ಠಾನದ ಬಗ್ಗೆ ಸೂಕ್ತ ನಿಯಮ ಅಭಿವೃದ್ಧಿಪಡಿಸಬೇಕು. ಈ ಮೂಲಕ ಆಡಳಿತ ಮೌಲ್ಯಮಾಪನ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದರೆ, ಸಮಸ್ಯೆಗಳು ಆರಂಭದಲ್ಲಿಯೇ ಗುರುತಿಸಿ ಸರಿಪಡಿಸಬಹುದು. ಇದರಿಂದ ಸರ್ಕಾರದ ಕಠಿಣ ಕ್ರಮಗಳಿಗೆ ಅವಕಾಶವೇ ಬರುವುದಿಲ್ಲ.

ಠೇವಣಿದಾರರ ರಕ್ಷಣೆಗೆ ಸರ್ಕಾರ ತಾನೇ ಅಧಿಕಾರ ಸ್ವಾಧೀನ ಪಡಿಸಿಕೊಳ್ಳುವ ಮಾರ್ಗವನ್ನು ಆಯ್ಕೆಮಾಡುವ ಬದಲು, ಸಹಕಾರಿ ಆಧಾರಿತ ಠೇವಣಿ ಭದ್ರತಾ ವ್ಯವಸ್ಥೆ ರೂಪಿಸುವುದು ಹೆಚ್ಚು ಸೂಕ್ತ. ಸಹಕಾರಗಳೇ ಸೇರಿ ನಿರ್ಮಿಸುವ ಠೇವಣಿ ಭದ್ರತಾ ನಿಧಿ ಅಥವಾ ವಿಮಾ ವ್ಯವಸ್ಥೆ, ಅಪಾಯ ಎದುರಾದಾಗ ಠೇವಣಿದಾರರಿಗೆ ರಕ್ಷಣೆ ನೀಡಬಹುದು. ಇದು ಸಹಕಾರದ ತತ್ವಕ್ಕೂ ಹೊಂದಿಕೆಯಾಗುತ್ತದೆ ಮತ್ತು ಸ್ವಾಯತ್ತತೆಯನ್ನೂ ಉಳಿಸುತ್ತದೆ.

ಸಾರಾಂಶವಾಗಿ ಹೇಳಬೇಕಾದರೆ, ಸೌಹಾರ್ದ ಸಹಕಾರಗಳಿಗೆ ಬೇಕಾಗಿರುವುದು ಸ್ವಾಯತ್ತತೆಯ ಕಡಿತವಲ್ಲ; ಸ್ವಾಯತ್ತತೆಯನ್ನು ಜವಾಬ್ದಾರಿಯುತವಾಗಿ ನಡೆಸುವ ಬಲವಾದ ವ್ಯವಸ್ಥೆಗಳು. ನಿಯಂತ್ರಣ ಮತ್ತು ಸ್ವಾತಂತ್ರ್ಯ ಪರಸ್ಪರ ವಿರೋಧಿಗಳಲ್ಲ; ಸರಿಯಾದ ವಿನ್ಯಾಸದಲ್ಲಿ ಅವೆರಡೂ ಒಂದೇ ಸಮಯದಲ್ಲಿ ಸಾಧ್ಯ. ಈ ಸಮತೋಲನವನ್ನು ಸಾಧಿಸುವುದೇ ಸೌಹಾರ್ದ ಸಹಕಾರ ಚಳವಳಿಯ ಮುಂದಿನ ಹಂತದ ಯಶಸ್ಸಿನ ಕೀಲಿಕೈ. ಈ ಬಗ್ಗೆ ಸೂಕ್ತ ಚರ್ಚೆ ರಾಜ್ಯ ಮಟ್ಟದಲ್ಲಿ ಮತ್ತು ಸರಕಾರೀ ಮಟ್ಟದಲ್ಲಿ ನಡೆಯದಿರುವುದು ದುರದೃಷ್ಟಕಾರ

“ಸೌಹಾರ್ದ ಸಹಕಾರ ಚಳವಳಿ ಒಂದು ಕಾನೂನು ಸಮಸ್ಯೆಯಲ್ಲ; ಅದು ಒಂದು ವಿಚಾರ ಚಳವಳಿ. 25 ವರ್ಷಗಳ ನಂತರವೂ ಇದು ಚರ್ಚೆಯಲ್ಲಿದೆ ಎಂದರೆ, ಅದು ವಿಫಲತೆಯಲ್ಲ — ಅದರ ಪ್ರಸ್ತುತತೆಯ ಸಾಕ್ಷಿ. ಸ್ವಾಯತ್ತತೆಯನ್ನು ಕುಗ್ಗಿಸಿ ಸಹಕಾರವನ್ನು ಉಳಿಸಲಾಗದು. ಸ್ವಾಯತ್ತತೆಯನ್ನು ಬಲಪಡಿಸಿದರೆ ಮಾತ್ರ ಸಹಕಾರ ಚಳವಳಿ ಜೀವಂತವಾಗಿರುತ್ತದೆ.”

ಲೇಖಕರು: ಮನೋಹರ ಮಸ್ಕಿ 

ಸೌಹಾರ್ದ ಸಂಯುಕ್ತ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಮಾಜಿ ಶಾಸಕರು 

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More