‘ನಂದಿನಿ’ಗೆ ೫೦ ವರ್ಷ ಸಂಭ್ರಮಾಚರಣೆ| ಶ್ರೀ. ಶಶಿಧರ ಎಲೆ


‘ನಂದಿನಿ’ ಈಗ ಮನೆ ಮಾತಾಗಿದೆ. ಅತ್ಯಂತ ಯಶಸ್ವಿ’ ಸಹಕಾರ ಚಳುವಳಿ’ಯ ಮಾದರಿ ಯಾಗಿದೆ. ಹೈನು ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸಿವೆ. ರಾಷ್ಟ್ರದ ರಾಜಧಾನಿ ದೆಹಲಿಯ ಮಾರುಕಟ್ಟೆ ಪ್ರವೇಶಿಸಿದೆ. ದೂರದ ಅಮೇರಿಕದಲ್ಲಿ ಮಾರುಕಟ್ಟೆ ಕಂಡುಕೊಂಡಿದೆ. ಇದರ ರಚನೆ ‘ಸಹಕಾರ ಶೃಂಗ ವ್ಯವಸ್ಥೆ’ಯಾಗಿದ್ದು ಉತ್ಪಾದನೆ ಮಾರುಕಟ್ಟೆ ಹೈನುಗಾರಿಕೆ ‘ರೈತರಿಂದ ರೈತರಿಗಾಗಿ ರೈತರ ದೇ’ ಆದ ವ್ಯವಸ್ಥೆ/ ಸಂಸ್ಥೆ ಎಂಬ ಅರಿವು ಸಾರ್ವಜನಿಕರಲ್ಲಿ, ಅದರಲ್ಲಿಯೂ ಇಂದಿನ ಯುವಜನತೆಯಲ್ಲಿ, ಗ್ರಾಹಕರಲ್ಲಿ ಮತ್ತು ರೈತರಲ್ಲೂ ಮೂಡಿಸುವ ಅವಶ್ಯಕತೆ ಇದೆ. ಅನೇಕರಲ್ಲಿ ಇದು ಸರ್ಕಾರದ / ಸರ್ಕಾರದ ಅಂಗ ಸಂಸ್ಥೆ ಎಂಬ ಭಾವನೆ ಇದೆ. ಮಾದರಿ ಸಹಕಾರ ವ್ಯವಸ್ಥೆ/ ರಚನೆ ಎಂದು ಅರಿವು ಮೂಡಿಸುವ ಅವಶ್ಯಕತೆ ಇದೆ.

ಕರ್ನಾಟಕದಲ್ಲಿ ಈ ‘ಮಾದರಿ’ ಎಂದರೆ ‘ಅಮುಲ್’ ಮಾದರಿ ಅನುಷ್ಠಾನ ಗೊಳಿಸಲು ಆರಂಭಿಸಿ ಈ ವರ್ಷಕ್ಕೆ ಐವತ್ತು(೫೦) ವರ್ಷಗಳು ಕಳೆದಿವೆ. ಇದನ್ನು ಸಹಕಾರಿಗಳು ಸಂಭ್ರಮಿಸಬೇಕಾಗಿದೆ. ಇದರೊಡನೆ ಇದರ ಉಗಮ ಇತಿಹಾಸ ಅರಿತು ಮುನ್ನಡೆಸಬೇಕಾದದ್ದು ಈ ದಿನಮಾನಗಳ ಅವಶ್ಯಕತೆ ಕೂಡ.


ಉಗಮ:
‘ಅಮುಲ್’ನ ಹೊರತುಪಡಿಸಿ ‘ನಂದಿನಿ’ ಉಗಮವನ್ನು ತಿಳಿಯಲು ಆಗುವುದಿಲ್ಲ. ಕಾರಣ ‘ನಂದಿನಿ’ ‘ಅಮುಲ್ ‘ನ ಪುನರ್ ಸೃಷ್ಠಿ .’ಜೈ ಜವಾನ್ ಜೈ ಕಿಸಾನ್’ ಘೋಷ ವಾಕ್ಯದೊಂದಿಗೆ ಪಾಕಿಸ್ಥಾನದ ವಿರೋಧ ಮತ್ತು ರಾಷ್ಟ್ರದ ಆಹಾರ ಭದ್ರತೆ ಗೆ ಅಗತ್ಯ ಕ್ರಮ ಕೈಗೊಂಡ ”ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂದೇ  ಖ್ಯಾತಿ ಪಡೆದ ನಮ್ಮ ದೇಶದ ಎರಡನೇ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿ ಯವರ ಕನಸು, ದೂರದೃಷ್ಟಿಯ ಫಲ. ಡಾ. ವರ್ಗೀಸ್ ಕುರಿಯನ್ ರವರ ಅವಿರತ ಶ್ರಮ ಮತ್ತು ಸಹಕಾರದ ಬಗ್ಗೆ ಅವರಿಗಿದ್ದ ಬದ್ಧತೆ. ಲಾಲ್ ಬಹದ್ದೂರ್ ಶಾಸ್ತ್ರಿ ಯವರನ್ನು ಅಮುಲ್ ನ ಒಂದು ‘ಪಶು ಆಹಾರ ಘಟಕದ ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಆ ಕಾರ್ಯಕ್ರಮದ ಮುನ್ನ ‘ಅಮುಲ್ ‘ ಮೂರು ಹಂತದ ಸಹಕಾರ ರಚನೆ (ವ್ಯವಸ್ಥೆ) ಯಾವ ರೀತಿ ನಡೆಯುತ್ತಿದೆ? ಹೇಗೆ ‘ಮಧ್ಯಮ ವರ್ತಿಗಳು’ ನಿರ್ಮೂಲನೆಗೊಂಡು ಇದು ರೈತರ ಸಹಕಾರ ಸಂಸ್ಥೆ ಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಶಾಸ್ತ್ರೀಜಿ ಯವರು ಕುರಿಯನ್ ರವರಿಂದ ತಿಳಿದುಕೊಂಡರು. ಇದನ್ನು ಪ್ರತ್ಯಕ್ಷವಾಗಿ ಅರಿಯಲು ಪ್ರಧಾನಿಗಳು ತಮ್ಮ ಮುಂದಿನ ಪೂರ್ವನಿರ್ಧಾರಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದರು. ಆ ದಿನ ಪಶು ಆಹಾರ ಘಟಕ ನಿರ್ಮಾಣಗೊಂಡಿದ್ದ ಗ್ರಾಮದಲ್ಲಿ ತಂಗಿದರು. ಆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಕ್ಕೆ ಭೇಟಿ ನೀಡಿದರು. ಹೇಗೆ ರೈತ ಮಹಿಳೆಯರು ಹಾಲು ಸರಬರಾಜು ಮಾಡುತ್ತಿದ್ದಾರೆ. ಬೆಳಿಗ್ಗೆ ಸರಬರಾಜು ಮಾಡಿದುದಕ್ಕೆ ಸಂಜೆ ಹಣ ಪಡೆಯುತ್ತಾರೆ. ಸಂಜೆ ಸರಬರಾಜು ಮಾಡಿದುದಕ್ಕೆ ಬೆಳಿಗ್ಗೆ ಹಣ ಪಡೆಯುತ್ತಾರೆ. ಅದೇ ಹಣದಲ್ಲಿ ‘ಅಮುಲ್ ದಾನ್ ‘( ಪಶು ಆಹಾರ) ಖರೀದಿಸುತ್ತಾರೆ. ಸಹಕಾರ ಸಂಘದ ‘ದಾನ ನಿಧಿ’ಯಿಂದ ‘ದೋಬಿ ಘಾಟ್’ ನಿರ್ಮಾಣ, ಎಮ್ಮೆಗಳಿಗೆ ನೀರು ಕುಡಿಯಲು ಕಾಲುವೆ ನಿರ್ಮಾಣ, ಗ್ರಂಥಾಲಯ ಸ್ಥಾಪನೆ, ಗ್ರಾಮದ ಬೀದಿ ದೀಪಗಳ ಜೋಡಣೆ ,ನಿರ್ವಹಣೆ ನಡೆದಿದೆ, ಎಂಬುದನ್ನು ಅರಿತರು. ಗ್ರಾಮೀಣ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ , ಸ್ವಾವಲಂಭನೆಯ ಬದುಕು ಸಾಧ್ಯ ಎಂಬುದು ಅವರಿಗೆ ಮನವರಿಕೆಯಾಯ್ತು. ಆಗ ಅವರು ಕುರಿಯನ್ ರವರನ್ನು ಉದ್ದೇಶಿಸಿ ‘why this only in ‘Anand ‘why not in the entire country ?’ (ಇದು ‘ಆನಂದ್’ನಲ್ಲಿ ಮಾತ್ರ ಏಕೆ? ಇಡೀ ದೇಶದಲ್ಲಿ ಏಕಗಾಬಾರದು ?) ಎಂದು ಪ್ರಶ್ನಿಸುತ್ತಾರೆ. ಆಗ ಕುರಿಯನ್ ರವರು ‘why not?'(ಏಕಾಗಬಾರದು?) ಎಂದು ಉತ್ತರಿಸುತ್ತಾರೆ. ಇದರ ಫಲಶೃತಿ ಎನ್. ಡಿ. ಡಿ.ಬಿ  (National Dairy Development Board) ಆನಂದ್ ನಲ್ಲಿ ಮತ್ತು ಐ. ಡಿ.ಸಿ(Indian Dairy corporation ) ನವದೆಹಲಿಯಲ್ಲಿ ಸ್ಥಾಪನೆ . ಎರಡೂ ಸಂಸ್ಥೆಗಳಿಗೆ ಕುರಿಯನ್ ರವರನ್ನೇ ಚೇರ್ಮನ್ ರಾಗಿ ನೇಮಕಾತಿ. ತಾಂತ್ರಿಕತೆಯ ಜವಾಬ್ದಾರಿ ಎನ್. ಡಿ. ಡಿ.ಬಿ ಗೆ, ಹಣಕಾಸು ಸಂಪನ್ಮೂಲ ಸಂಗ್ರಹಣೆಯ  ಜವಾಬ್ದಾರಿ ಐ.ಡಿ.ಎ.ಗೆ .ಇದರಿಂದ ಹಿತಾಸಕ್ತಿ ಸಂಘರ್ಷ ನಿವಾರಣೆ, ಯಾವುದೇ ಅಡಚಣೆಗಳಿಲ್ಲದೆ ಯೋಜನೆಯ  ಅನುಷ್ಠಾನ .( ತದ ನಂತರದಲ್ಲಿ ಎರಡೂ ಸಂಸ್ಥೆಗಳು ವಿಲೀನ ಗೊಂಡಿವೆ. ಎನ್. ಡಿ. ಡಿ.ಬಿ ಕಾಯ್ದೆ ಜಾರಿಗೆ ಬಂತು ). ಹೀಗೆ ರಾಷ್ಟ್ರಾದ್ಯಂತ ‘ಅಮುಲ್ ‘ಮಾದರಿ ಪುನರ್ ಸೃಷ್ಠಿ ಯೋಜನೆ ಜಾರಿಗೆ ಬಂತು. ಕರ್ನಾಟಕದಲ್ಲಿ ಈ ಯೋಜನೆ ‘ಕರ್ನಾಟಕ ಹೈನು ಅಭಿವೃದ್ಧಿ ಯೋಜನೆ ‘( ಕೆ. ಡಿ. ಡಿ. ಪಿ) ಆರಂಭಗೊಂಡಿತು. ಕರ್ನಾಟಕ ಹೈನು ಅಭಿವೃದ್ಧಿ ನಿಗಮ (Karnataka Dairy Devlopment corporation, ಕೆ. ಡಿ. ಡಿ.ಸಿ) ಕಂಪನಿ ಕಾಯ್ದೆಯಡಿಯಲ್ಲಿ ರಚಿಸಲಾಯಿತು. ಕೃಷಿ ಸಚಿವರು ಪಧನಿಮಿತ್ತ ಅಧ್ಯಕ್ಷರು(ತದನಂತರದಲ್ಲಿ ಕೃಷಿ ಇಲಾಖೆಯಿಂದ ಪಶು ಸಂಗೋಪನೆ ಇಲಾಖೆ ಬೇರ್ಪಡಿಸಲಾಯಿತು. ಪಶು ಸಂಗೋಪನೆ ಇಲಾಖೆ ಸಚಿವರು ಪಧನಿಮಿತ್ತ ಅಧ್ಯಕ್ಷರಾದರು ).

ಪ್ರಥಮ ವ್ಯವಸ್ಥಾಪಕ ನಿರ್ದೇಶಕರು ಬಿ. ಎಸ್. ಮುದ್ದಪ್ಪ ಐ.ಎ.ಎಸ್ ರವರು ತದ ನಂತರ ಎಂ.ಕೆ. ವೆಂಕಟೇಶನ್ ಐ .ಎ.ಸ್ ರವರುಗಳ ವ್ಯವಸ್ಥಾಪಕ ನಿರ್ದೇಶಕರುಗಳಾಗಿದ್ದರು. ಅಂದು ಬೆಂಗಳೂರಿನ ಸದಾಶಿವ ನಗರದಲ್ಲಿ ಒಂದು ಮನೆಯಲ್ಲಿ ಕಛೇರಿ ಆರಂಭಗೊಂಡಿತು. ಇವರೊಡನೆ ಕೃಷಿ ಇಲಾಖೆಯ
ಕುರ0ಭಯ್ಯ ಮತ್ತು ಸಹಕಾರ ಇಲಾಖೆಯ ಶ್ರೀನಿವಾಸ ಅಯ್ಯಾಂಗರ್ ರವರು ಕೈಜೋಡಿಸಿದ್ದರು. ಪಶುವೈದ್ಯಾಧಿಕಾರಿ, ಮೇವು ವಿಸ್ತರಣಾಧಿಕಾರಿ (ತದನಂತರ ಕೃಷಿ ಅಧಿಕಾರಿ ಯಾಗಿ ಪದನಾಮ ಬದಲಾವಣೆ ಮಾಡಲಾಯಿತು), ಸಹಕಾರ ವಿಸ್ತರಣಾ ಸಹಾಯಕ / ಸಂಗ್ರಹಣಿ ಮತ್ತು ಸವಲತ್ತು ಮೇಲ್ವಿಚಾರಕ ( ತದ ನಂತರದಲ್ಲಿ ವಿಲೀನಗೊಳಿಸಿ ‘ವಿಸ್ತರಣಾಧಿಕಾರಿ’ ಎಂದು ಪದನಾಮ ಬದಲಾವಣೆ ಮಾಡಲಾಯಿತು.) ಗಳ ನೇಮಕಾತಿ ಮಾಡಲಾಯಿತು. ಇವರುಗಳಿಗೆ ಎನ್. ಡಿ. ಡಿ. ಬಿ ‘ಅಮುಲ್’ನಲ್ಲಿ ಮೂರು ತಿಂಗಳ ಕೆಲಸ ಮಾಡಿ ಅನುಭವ ಪಡೆಯುವ (on the job training ) ನೀಡಲಾಯಿತು. ಕೆ. ಡಿ. ಡಿ.ಸಿ ಯ ನಾಲ್ಕು ಘಟಕಗಳನ್ನು ಸ್ಥಾಪಿಸಲಾಯಿತು. ಬೆಂಗಳೂರು, ಮೈಸೂರು, ತುಮಕೂರು, ಮತ್ತು ಹಾಸನ. ಈ ಘಟಕಗಳ ಕಾರ್ಯವ್ಯಾಪ್ತಿ ಈ ಕೆಳಕಂಡಂತೆ ನಿಗದಿ ಪಡಿಸಲಾಗಿತ್ತು. ಬೆಂಗಳೂರು: ಆಗಿನ ಬೆಂಗಳೂರು ಮತ್ತು ಕೋಲಾರ ಜಿಲ್ಲೆ. ಮೈಸೂರು: ಆಗಿನ ಮೈಸೂರು ಮತ್ತು ಮಂಡ್ಯ ಜಿಲ್ಲೆ (ಮದ್ದೂರು ತಾಲ್ಲೂಕು ಹೊರತು ಪಡಿಸಿ), ತುಮಕೂರು : ತುಮಕೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕು, ಹಾಸನ: ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆ. ಈ ಘಟಕಗಳಲ್ಲಿ ‘ ಕಾರ್ಯಪಡೆ ತಂಡ’ಗಳನ್ನು ( Spear Head Team ) ಗಳನ್ನು ರಚಿಸಲಾಗಿತ್ತು.

ಈ ತಂಡವುಗ್ರಾಮಗಳನ್ನು ಪ್ರಾಥಮಿಕ ಮತ್ತು ತದ ನಂತರದಲ್ಲಿ ಹೆಚ್ಚಿನ ಹೈನು ಉತ್ಪನ್ನ ವಿರುವ ಗ್ರಾಮಗಳನ್ನು ಗುರುತಿಸಿ ವಿವರಣಾತ್ಮಕ ಸಮೀಕ್ಷೆ ಮಾಡಬೇಕಾಗಿತ್ತು. ವಿವರಣಾತ್ಮಕ ಸಮೀಕ್ಷೆ ವರದಿಯಂತೆ ಹೆಚ್ಚುವರಿ ಹಾಲು ದೊರೆಯುವ ಗ್ರಾಮಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಿ’ ಹಾಲು ಮಾರ್ಗ’ವನ್ನು ರಚಿಸಿ, ಹಾಲನ್ನು ಸಹಕಾರ ಸಂಘಗಳನ್ನು ರಚಿಸಿ ಅಲ್ಲಿ ಹಾಲನ್ನು ಸಂಗ್ರಹಿಸಿ ಹಾಲಿನ ಡೈರಿಗೆ ಸರಬರಾಜುಮಾಡುವುದು. ನಂತರದಲ್ಲಿ ಪಶು ವೈದ್ಯಕೀಯ ಮಾರ್ಗ ರಚಿಸಿ ಸಹಕಾರ ಸಂಘಗಳ ಮೂಲಕ ಸದಸ್ಯ ರೈತರ ರಾಸುಗಳಿಗೆ ಚಿಕಿತ್ಸೆ , ಕೃತಕ ಗರ್ಭ ಧಾರಣೆ, ಗರ್ಭಧರಿಸಿದ ಹಸುಗಳಿಗೆ ಚಿಕಿತ್ಸೆ, ಪೋಷಣೆ, ಕರುಗಳ ಪೋಷಣೆ, ಮೇವು ಬೆಳೆಯಲು ಉತ್ತೇಜನ, ತರಬೇತಿ, ಪಶು ಆಹಾರ ಸರಬರಾಜು , ಅದರ ಬಗ್ಗೆ ತಿಳುವಳಿಕೆ ನೀಡಿ ಶುದ್ಧ ಮತ್ತು ಅಧಿಕ ಹಾಲಿನ ಉತ್ಪಾದನೆ , ಸಂಗ್ರಹಣೆ ಈ ತಂಡದ ಜವಾಬ್ದಾರಿಯಾಗಿತ್ತು. 1975,76,77 ರಲ್ಲಿ ನೇಮಕಾತಿಯಾದ ಈ ಸಿಬ್ಬಂದಿ ಅನೇಕ ಸವಾಲುಗಳನ್ನು ಎದುರಿಸಿ ಗ್ರಾಮೀಣ ಜನತೆಯಲ್ಲಿ ‘ಹೈನುಗಾರಿಕೆ ‘ ಮತ್ತು ‘ಸಹಕಾರ’ಗಳಲ್ಲಿ ನಂಬಿಕೆ , ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು. ಅದರಿಂದ ಮುಂದಕ್ಕೆ ಇದು ‘ನಂದಿನಿ ‘ಯಾಗಿ ಬ್ರಾಂಡ್ ಆಗಲು ಸಾಧ್ಯವಾಯಿತು. ಈ ಬೀಜಾಂಕುರ ಗೊಳಿಸುವಲ್ಲಿ ಈ ತಂಡ ಪಟ್ಟ ಶ್ರಮ , ತ್ಯಾಗ, ಚಾಣಕ್ಷತೆ, ತಂತ್ರಗಾರಿಕೆ ಗಳೇ ಕಾರಣ ಎಂಬುದು ಹೆಮ್ಮೆಯ ವಿಚಾರವಾಗಿದೆ. ಈ ಸಂದರ್ಭದಲ್ಲಿ, ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಶ್ರೀ ಶ್ರೀನಿವಾಸ ಅಯ್ಯಂಗಾರ್ ರವರ ಸೇವೆ ಅವಿಸ್ಮರಣೀಯ.
ಇತಿಹಾಸ:

ಹಂತ 1.
ಕರ್ನಾಟಕ ಹೈನು ಅಭಿವೃದ್ಧಿ ಯೋಜನೆಯು 1975 ರಲ್ಲಿ ಆರಂಭಗೊಂಡು ಆ 1997 ಕ್ಕೆ ಅಂತ್ಯಗೊಂಡಿತು. ಈ ಯೋಜನೆಯು ‘ಅತ್ಯಂತ ಯಶಸ್ವಿ ‘ ಯೋಜನೆ ಎಂದು ‘ವಿಶ್ವ ಸಂಸ್ಥೆ’ ಶ್ಲಾಘಿಸಿದೆ. 1975 ರ ದಶಕದಲ್ಲಿ ಗ್ರಾಮೀಣ ಪ್ರದೇಶದ ‘ನಾಯಕ’ರನ್ನು ಗುರುತಿಸುವುದು , ಸಹಕಾರ ಸಂಘ ಸ್ಥಾಪನೆ ಅದರಿಂದ ಆಗುವ ಅನುಕೂಲತೆಗಳು. ಹಾಲು ಮಾರಾಟದಿಂದ ಪ್ರತಿವಾರ ಹಣ ಸಂದಾಯ ವಾಗಿ ರೈತರಿಗೆ ಪಾವತಿ ವ್ಯವಸ್ಥೆ ಬಗ್ಗೆ’ ಮನವಲಿಸುವುದು’ ಸುಲಭವಾಗಿರಲಿಲ್ಲ. ಅವರ ಮುಂದೆ ಇದ್ದ ಸಿದ್ಧ ಮಾದರಿಗಳು ಉತ್ತೇಜನಕಾರಿಯಾಗಿರಲಿಲ್ಲ. ಆದರೂ ಅವರ ಮನ ಒಪ್ಪಿಸಿ ‘ಮುಖ್ಯ ಪ್ರವರ್ತಕರ ‘ಆಯ್ಕೆ ‘ಗ್ರಾಮ ಸಭೆ’ಯಲ್ಲಿ ಮಾಡಿ ಪ್ರತಿ ಸದಸ್ಯರಾಗ ಬಯಸುವವರಿಂದ ರೂ10/- ರಂತೆ ಆರಂಭಿಕ ಷೇರು ಬಂಡವಾಳ ಸಂಗ್ರಹಿಸಿ ಜಿ.ಕೇ. ಸ.ಬ್ಯಾಂಕ್ ನ ‘ಅಮಾನತ್’ನಲ್ಲಿರಿಸಿ, ತದ ನಂತರ ಉಪ ನಿಯಮಗಳಿಗೆ ಪ್ರವರ್ತಕರ ಸಹಿಯೊಂದಿಗೆ ಸಂಬಂಧಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಸಲ್ಲಿಸಿ ನೊಂದಣಿ ಮಾಡಿಸುವಲ್ಲಿ ವಿಸ್ತರಣಧಿಕಾರಿಗಳ ಸಾಹಸಮಯ, ಊಟ, ನಿದ್ರೆ ಇಲ್ಲದ  ದಿನಗಳು ಕಳೆಯುತ್ತಿದ್ದವು. ತದ ನಂತರ ಎರಡನೇ ಹಂತ ಸಂಘದ ಸ್ಥಾಪನೆ. ಮೊದಲ ಸಾಮಾನ್ಯ ಸಭೆ, ಮೊದಲ ಆಡಳಿತ ಮಂಡಳಿ ರಚನೆ. ಅಧ್ಯಕ್ಷರ ಆಯ್ಕೆ, ಕಾರ್ಯದರ್ಶಿ, ಟೆಸ್ಟರ್(ಹಾಲು ಪರೀಕ್ಷಕ) ನೇಮಕಾತಿ, ಅವರಿಗೆ ತರಬೇತಿ.

ಗ್ರಾಮದಲ್ಲಿಯೇ ಕನಿಷ್ಟ ಒಂದು ತಿಂಗಳ ವಾಸ,( ವನವಾಸ). ಎಲ್ಲ ಲೆಕ್ಕ ಪತ್ರಗಳ ನಿಖರ ನಿರ್ವಹಣೆ ಬಗ್ಗೆ ತರಬೇತಿ, ಅಲ್ಲದೆ ಹಾಲು ಖರೀದಿಗೆ ಪಾವತಿ. ರಿವಾಲ್ವಿಂಗ್ ಫಂಡ್ (ಸುತ್ತನಿಧಿ ) ಬರುವುದು ತಡವಾದಲ್ಲಿ ವಿಸ್ತರಣಾಧಿಕಾರಿಗಳು ತಮ್ಮ ವೇತನದಿಂದಲೇ ಹಾಲಿನ ಖರೀದಿಗೆ ಪಾವತಿಸಿದ ಸಂದರ್ಭಗಳುಂಟು. ಹಾಲು ಉತ್ಪಾದಕರಿಗೆ ‘ಸ್ವಚ್ಛತೆ ‘ಬಗ್ಗೆ ತಿಳುವಳಿಕೆ, ಹಾಲು ಹುಳಿ ಆಗದಂತೆ ಎಚ್ಚರಿಕೆ ಕ್ರಮಗಳ ಬಗ್ಗೆ ಪ್ರಥಮ ಪಾಠ. ಗ್ರಾಮೀಣ ಜನತೆಯೊಂದಿಗೆ ತಾವು ಒಬ್ಬರಾಗಿ , ಅಲ್ಲಿನ ರಾಜಕೀಯ , ಸಾಮಾಜಿಕ, ಆರ್ಥಿಕ ಪರಿಸರಕ್ಕೆ ಹೊಂದಿಕೊಂಡು ಯಶಸ್ವಿಯಾಗಿ ಸಹಕಾರ ಸಂಘ ಸ್ಥಾಪನೆಯಾಗಿ ಕಾರ್ಯನಿರ್ವಹಣೆ ಯಾಗುವಂತೆ ಮಾಡುವುದು, ಸವಾಲೇ ಸರಿ. ಹಿತಾಸಕ್ತಿ ಸಂಘರ್ಷಗಳ ನಿವಾರಣೆ ಅತ್ಯಂತ ಚಾಕು ಚಕ್ಯತೆಯಿಂದ ನಿರ್ವಹಿಸುತ್ತಿದ್ದ ರೀತಿ ಅದ್ಭುತವೇ ಸರಿ. ಸದಸ್ಯರಿಗೆ ಪ್ರಜ್ಞಾವಂತಿಗೆ ಮೂಡಿಸುವಲ್ಲಿ ಜಿಲ್ಲ ಸಹಕಾರ ಒಕ್ಕೂಟ, ಆಕಾಶವಾಣಿಯ ಉಪಯುಕ್ತತೆ ಪಡೆದದ್ದು ಮರೆಯುವಂತಿಲ್ಲ. ನಿಖರವಾಗಿ ಸಮಯಕ್ಕೆ ಸರಿಯಾಗಿ ಹಾಲು ಖರೀದಿ ಬಾಕಿ ಪಾವತಿ, ಸವಲತ್ತುಗಳ ಸಮರ್ಥ ವಿತರಣೆ, ಹಾಲು ಸರಬರಾಜಿಗೆ ತಕ್ಕಂತೆ’ ಬೋನಸ್’ ಪಾವತಿ ವಿಸ್ತರಣಿಯ ಯಶಸ್ಸಿಗೆ ಕಾರಣವಾಯಿತು.
ಹಂತ 2.
ಘಟಕಗಳಲ್ಲಿ ಐವತ್ತು ಪ್ರಾಥಮಿಕ ಸಹಕಾರ ಸಂಘಗಳು ಸ್ಥಾಪನೆ ನಂತರ ‘ಒಕ್ಕೂಟ’ಗಳ ರಚನೆ. ಒಕ್ಕೂಟದ ಅಡಿಯಲ್ಲೇ ಸಹಕಾರ ಸಂಘಗಳ ರಚನೆ.  ಸರ್ಕಾರದ ಡೈರಿಗಳನ್ನು ಕೆಡಿಡಿಸಿಗೆ ಹಸ್ತಾಂತರ, ತದ ನಂತರ ಒಕ್ಕೂಟಗಳಿಗೆ ಹಸ್ತಾಂತರ.

ಹಂತ 3
1984 ರಲ್ಲಿ, ಕೆ.ಡಿ. ಡಿ.ಸಿ. ಸಮಾಪನೆ ಮಾಡಿ ಒಕ್ಕೂಟಗಳ ಸದಸ್ಯತ್ವದ ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ರಚಿಸಲಾಯಿತು.  ಕೆ.ಡಿ.ಡಿ.ಸಿ ಯಾಗಿರುವಾಗಲೆ ವಾರ್ತ ಇಲಾಖೆ ಯಿಂದ ಎರವಲು ಸೇವೆಯಿಂದ ನಿಯುಕ್ತಿಗೊಂಡಿದ್ದ ಅಧಿಕಾರಿ ಶ್ರೀ ರಾಜಗೋಪಾಲ ಎನ್ನುವವರು ಪೌರಾಣಿಕ ಸೃಷ್ಟಿಯಾದ ‘ನಂದಿನಿ’ ಹೆಸರನ್ನು ಸೂಚಿಸಲಾಗಿ ಅದನ್ನು ಕೆ. ಡಿ. ಡಿ.ಸಿ ಅನುಮೋದಿಸಿ ‘ಬ್ರಾಂಡ್’ ಹೆಸರಾಗಿ ಒಪ್ಪಲಾಯಿತು.

ವಿಶ್ವಬ್ಯಾಂಕ್ ಯೋಜನೆಯಡಿಯಲ್ಲಿ ‘ಕರ್ನಾಟಕ ಮಿಲ್ಕ ಪ್ರಾಡಕ್ಟ್ಸ್’ ಎಂಬ ಕಂಪನಿ ಆರಂಭಿಸಿ ಅದನ್ನು ಕೆ. ಡಿ. ಡಿ.ಸಿ ಯೊಡನೆ ವಿಲೀನಗೊಳಿಸಲಾಯಿತು. ಎಲ್ಲ ಡೈರಿ ಘಟಕಗಳನ್ನು ಒಕ್ಕೂಟಗಳಿಗೆ ಹಸ್ತಾಂತರಗೊಳಿಸಲಾಯಿತು. ಪ್ರತಿ ಹಂತದ ಸಹಕಾರ ವ್ಯವಸ್ಥೆಗೆ ಉಪನಿಯಮಗಳ ರೀತಿ ನಿರ್ದಿಷ್ಟ ಪಡಿಸಿದ ಕರ್ತವ್ಯ ಜವಾಬ್ದಾರಿಗಳಿದ್ದು , ಒಂದು ಹಂತಕ್ಕೂ, ಮತ್ತೊಂದು ಹಂತಕ್ಕೂ ಖಚಿತ ಸಾವಯವ ಸಂಬಂಧ ಏರ್ಪಟ್ಟು ಕಾರ್ಯನಿರ್ವಹಿಸುತ್ತಿರುವುದೇ ಈ ವ್ಯವಸ್ಥೆಯ ಯಶಸ್ಸಿಗೆ ಕಾರಣ ಎಂದರೆ ತಪ್ಪಾಗಲಾರದು.

ಹಂತ-4
ಕರ್ನಾಟಕ ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆ.ಎಂ .ಎಫ್) ಯನ್ನು ಕೆ.ಎಂ.ಎಫ್ ಎಂಬ ಸಂಕ್ಷಿಪ್ತ ರೂಪದಲ್ಲಿ ‘ಸ’ ಇಲ್ಲದಿರುವುದು . ಇದು ‘ಸಹಕಾರ ‘ಸಂಸ್ಥೆ ಎಂದು ಸಾರ್ವಜನಿಕರಿಗೆ ತಿಳಿಯದಾಗಿದೆ ಏನೇ ಆದರೂ ಇದು ಬಳಕೆಗೆ ಬಂದಾಗಿದೆ. ‘ನಂದಿನಿ’ ಕರ್ನಾಟಕದ ‘ಅಸ್ಮಿತೆ’ಯಾಗಿರುವುದು ಹೆಮ್ಮೆಯಾಗಿದೆ. ಈ ತ್ರಿಭುಜಾಕೃತಿಯ ವ್ಯವಸ್ಥೆಯ ತಳಹದಿ ಗ್ರಾಮೀಣ ಮಟ್ಟದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಈಗ 14000 ಮೀರಿ ಸಹಕಾರ ಸಂಘಗಳಿವೆ. ಒಂದು ಕೋಟಿ ಲೀಟರು ದಿನವಹಿ ಸಂಗ್ರಹವಾಗುತ್ತಿದೆ. ರೂ 40 ಕೋಟಿ ಹಣ ದಿನವಹಿ 25 ಲಕ್ಷ ದಷ್ಟು ಹಾಲು ಉತ್ಪಾದಕರಿಗೆ ಪಾವತಿಯಾಗುತ್ತಿದೆ.

ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಇದರ ಕೊಡುಗೆ , ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ ಮತ್ತು ಮಹಿಳೆಯರಿಗೆ ಆರ್ಥಿಕ ಸಬಲತೆ ನೀಡಿರುವುದನ್ನು ಗಮನಿಸಬೇಕಾಗಿದೆ. ಅಲ್ಲದೆ 4000ಕ್ಕೂ ಮೀರಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆ ಮಹಿಳೆಯರನ್ನು ಸಶಕ್ತಗೊಳಿಸಿದೆ. 1984ರಲ್ಲಿ ರಾಜ್ಯಾದಂತ ಯೋಜನೆ ವಿಸ್ತರಿಸಿ ಹಾಲಿ 15 ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ವಿಶ್ವಬ್ಯಾಂಕ್  (ಆಪರೇಷನ್ ಫ್ಲಡ್) ಕ್ಷೀರಧಾರ II , ಕ್ಷೀರಧಾರ III, 1997 ರಲ್ಲಿ ಅಂತ್ಯಗೊಂಡಿತು. ತದ ನಂತರ ಸರ್ಕಾರದ ಸಹಾಯವಿಲ್ಲದೇ ಸ್ವಯಂಶಕ್ತಿ ಮೇರೆಗೆ ಕಾರ್ಯಾಚರಣೆ ಮುಂದುವರೆದಿದೆ.

ಪ್ರಸಕ್ತ ಸವಾಲು: ಖಾಸಗಿಯವರೊಡನೆ ಸ್ಪರ್ದೆ, ಶುದ್ಧ , ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಗೆ  ವಿಸ್ತರಣೆ, ನೆರೆ ರಾಜ್ಯಗಳಲ್ಲಿ ಖಾಸಗಿ ವಲಯದ ಸ್ಪರ್ದೆ, ಗ್ರಾಮೀಣ ಪ್ರದೇಶಗಳಲ್ಲಿ ಅವುಗಳು ಒಡ್ಡುವ ಆಸೆ, ಅಮಿಷಗಳು, ಉಂಟು ಮಾಡುವ ಗೊಂದಲಗಳಿಂದಾಗಿ ಅವಸಾನದ ಹಂಚಿಗೆ ತಲುಪಿದೆ. ಇದು ಕರ್ನಾಟಕಕ್ಕೆ ಎಚ್ಚರಿಕೆಯ ಕರೆಘಂಟೆ ಎಂದು ಪರಿಗಣಿಸಬೇಕು.

ಸರ್ಕಾರದ ಸಹಾಯ: ಕರ್ನಾಟಕ ರಾಜ್ಯ ಸರ್ಕಾರವು ಸಹಕಾರ ಸಂಘಗಳ ರೈತ ಸದಸ್ಯರು ಉತ್ಪಾದಿಸುವ ಪ್ರತಿ ಲೀಟರ್ ಹಾಲಿಗೆ ಐದು  ರೂಪಾಯಿ ಪ್ರೊತ್ಸಾಹಧನ ನೀಡುತ್ತಿದೆ. ಕ್ಷೀರ ಭಾಗ್ಯ ಯೋಜನೆಯಲ್ಲಿ ಶಾಲ ಮಕ್ಕಳಿಗೆ ಹಾಲು ಒದಗಿಸಲು ಹಾಲಿನ ಪುಡಿ ಕೊಳ್ಳುತ್ತಿದೆ. ಇದು ಸಹಕಾರ ಜಾಲಕ್ಕೆ ಸಹಕಾರಿಯಾಗಿದೆ. ‘ನಂದಿನಿ ‘ ಯಶೋಗಾಥೆ ಸಂಭ್ರಮವನ್ನು ಆಚರಿಸಲು 1975-76,77ರಲ್ಲಿ ಯುವಕರಾಗಿ (ವಯಸ್ಸು 18 ರಿಂದ 22 ರಿಂದ 23 ಸೇವೆಗೆ ಸೇರಿ ‘ಅಮುಲ್’ ಎನ್. ಡಿ. ಡಿ. ಬಿ. ತರಬೇತಿ ಪಡೆದು ಗುಜರಾತ್ ನಲ್ಲಿ ಕಲಿತ, ಗುಜರಾತಿಯಲ್ಲಿ ಕಲಿತ ‘ಸಹಕಾರ ಸಂಘ’ ಉಪನಿಯಮ, ಲೆಕ್ಕ ಪದ್ಧತಿ, ಪಾವತಿ ವಿಧಾನಗಳನ್ನು ಯಶಸ್ವಿಯಾಗಿ ಗ್ರಾಮೀಣ ಪ್ರದೇಶದಲ್ಲಿ ಬದ್ಧತೆ, ಪ್ರಾಮಾಣಿಕತೆ, ಅವಿರತ ಶ್ರಮ, ವಿಶಿಷ್ಟ ರೀತಿಯ ಬುದ್ದಿವಂತಿಕೆ, ಕೌಶಲ್ಯ, ದಿಂದ ಗ್ರಾಮೀಣ ಜನತೆಯ ಒಲುವನ್ನು ಗಳಿಸಿ,’ ಸಹಕಾರ’ ಮತ್ತು ‘ಹೈನುಗಾರಿಕೆ’ಯಲ್ಲಿ’ ನಂಬಿಕೆ ‘ ಬರುವಂತೆ ವಿಸ್ತರಣಾ ಕಾರ್ಯ ಕೈಗೊಂಡಿದ್ದರಿಂದ ಇಂದು ‘ನಂದಿನಿ’ ಒಂದು ಬ್ರಾಂಡ್ ಆಗಿ ಕರ್ನಾಟಕದ ಹೆಮ್ಮೆಯ ‘ಅಸ್ಮಿತೆ’ಯಾಗಲು ಕಾರಣರಾದ ‘ವಿಸ್ತರಣಾಧಿಕಾರಿ’ಗಳು ‘ ಬೆಂಗಳೂರಿನಲ್ಲಿ ದಿನಾಂಕ 16.12.2025 ರಂದು ಸಮಾವೇಶಗೊಂಡು  “ಐವತ್ತರ ಸಡಗರದ ಸಂಭ್ರಮ- ಸಮಾಗಮ ” ಸಮಾರಂಭ ನಡೆಸಲಿದ್ದಾರೆ.

“ಇದರ ನಿಮಿತ್ತ ಈ ‘ನೆನಪಿನ’ ಲೇಖನ. ಈ ತಂಡದಲ್ಲಿ ಲೇಖಕರು ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ.”


ಶಶಿಧರ ಎಲೆ
ಸಹಕಾರ ಸಂಘಗಳ ಅಪರ ನಿಬಂಧಕರು ( ನಿವೃತ್ತ) ನಂ281,
ʼನೇಸರ’ ಬಾಲಾಜಿ ಹೆಚ್.ಬಿ.ಸಿ.ಎಸ್.ಲೇಔಟ್, ವಾಜರಹಳ್ಳಿ,ಕನಕಪುರ ರಸ್ತೆ , ಬೆಂಗಳೂರು 560109

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More