ಸದಸ್ಯರ ಆರೋಗ್ಯ ಕಾಳಜಿಗೆ ಗಮನ.|ಶ್ರೀ. ಶಂ. ನಾ. ಖಂಡಿಗೆ.

 

ಸಹಕಾರಿ ಕ್ಷೇತ್ರದ ಆಧಾರ ಸ್ಥಂಭ ಎಂದರೆ ಸದಸ್ಯರೆ. ಸಹಕಾರಿ ಸಂಘಗಳ ಒಡೆತನ ಕೂಡ ಅವರದ್ದೆ. ಸಂಘದ ಏಳುಬೀಳುಗಳಲ್ಲಿ, ಕಷ್ಟ ಸುಖಗಳಲ್ಲಿ ಸದಸ್ಯರ ಪಾಲ್ಗೊಳ್ಳುವಿಕೆ ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಸಹಕಾರಿ ಸಂಘಗಳು ಕೂಡ ತಮ್ಮ ಸದಸ್ಯರ ಬಗ್ಗೆ ಕಾಳಜಿ, ಆಸ್ಥೆ ವಹಿಸಿಕೊಳ್ಳಲು ಮುಂದಾಗಬೇಕು. ಸದೃಢ ಸದಸ್ಯರು ಸಂಘವನ್ನು ಮತ್ತಷ್ಟು ಇನ್ನಷ್ಟು ಮುನ್ನಡೆಸಲು ಅನುವುಮಾಡಿಕೊಡುವ ಜವಾಬ್ದಾರಿ ಸಹಕಾರಿ ಸಂಘದ ಆಡಳಿತ ಮಂಡಳಿಯದ್ದು ಎಂಬುದನ್ನು ಯಾವತ್ತೂ ಮರೆಯಬಾರದು. ಸದಸ್ಯರ ಆರೋಗ್ಯದ ದೃಷ್ಟಿಯಿಂದ ಸಹಕಾರಿ ಸಂಘಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಹೊಸದಾದ ತರಕಾರಿ ಪೂರೈಕೆ ಯೋಜನೆಯನ್ನು ಹಮ್ಮಿಕೊಂಡರೆ ಹೇಗಾಗಬಹುದು?

ಇದೊಂದು ನನ್ನ ಕನಸಿನ ಯೋಜನೆ. ನಾನು ಕಾಸರಗೋಡು ಜಿಲ್ಲೆಯ ಪೆರ್ಲದ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕನಾಗಿದ್ದ ಸಮಯ. ಕೊರೋನಾಕ್ಕೆ ಮುಂಚೆ “ನಮ್ಮ ಅನ್ನದ ಬಟ್ಟಲಿಗೆ ನಮ್ಮದೇ ಸಾವಯವ ತರಕಾರಿ” ಎಂಬ ಯೋಜನೆಯ ಅಂಗವಾಗಿ ಸದಸ್ಯರು ಸಾವಯವ ರೀತಿಯಲ್ಲಿ ಬೆಳೆದ ತರಕಾರಿಗೆ ತನ್ನ ಕಟ್ಟಡದಲ್ಲಿ ಸಾವಯವ ಅಂಗಡಿಯನ್ನು ತೆರೆದಿತ್ತು. ಈ ವ್ಯವಸ್ಥೆಗೆ ಪೂರಕವಾಗಿ ಆಡಳಿತ ಮಂಡಳಿ ನಿರ್ದೇಶಕರಾಗಿದ್ದ ನಾವು ಹಳ್ಳಿಗಳಿಗೆ ತೆರಳಿ ಅಲ್ಲಿ “ತರಕಾರಿ ಬೆಳೆಯುವವರನ್ನು ಗುರುತಿಸಿ ನೀವು ಇನ್ನಷ್ಟು ವೈವಿಧ್ಯಮಯ ತರಕಾರಿ ಬೆಳೆಯಿರಿ ನಿಮಗೆ ಮಾರುಕಟ್ಟೆ ನಾವು ಒದಗಿಸಿ ಕೊಡುತ್ತೇವೆ” ಎಂಬ ಪ್ರೋತ್ಸಾಹದ ಮಾತುಗಳನ್ನಾಡಿ ಬಂದಿದ್ದೆವು. ಆ ಬಳಿಕ ಸಾವಯವ ತರಕಾರಿ ಮಾರುಕಟ್ಟೆ ಒಂದಷ್ಟು ಸಮಯ ಚೆನ್ನಾಗಿ ನಡೆದಿತ್ತು.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ತರಕಾರಿ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಂದ ಕೃಷಿಕನಿಗೆ ತರಕಾರಿ ಅಂಗಡಿಯವರು ಬೆಲೆ ನಿಗದಿ ಮಾಡುವುದು ಬಹಳ ಕಡಿಮೆ. ಅಂಗಡಿಯಲ್ಲಿ ನುಗ್ಗೆಕಾಯಿ ಕಿಲೋ ಒಂದಕ್ಕೆ ನೂರು ರೂಪಾಯಿ ಬೆಲೆ ಇದ್ದರೆ ಅದನ್ನು ಬೆಳೆದು ತಂದು ಕೊಟ್ಟರೆ ಕಿಲೋ ಒಂದಕ್ಕೆ ಅಂಗಡಿಯಾತ ಕೊಡುವುದು ಅರುವತ್ತು ರೂಪಾಯಿ. ಕುಳಿತಲ್ಲಿಗೆ ನಲುವತ್ತು ರೂಪಾಯಿ ಲಾಭ. ಈ ರೀತಿಯ ಶೋಷಣೆಯನ್ನು ತಪ್ಪಿಸುವುದು ಕೂಡ ಸಹಕಾರಿ ಸಂಘ ಸಾವಯವ ತರಕಾರಿ ಅಂಗಡಿ ಆರಂಭಿಸಿದ್ದರ ಹಿಂದಿನ ಉದ್ದೇಶಗಳಲ್ಲಿ ಒಂದು. ಕೃಷಿಕರಿಗೆ ಕಿಲೋ ಒಂದರ ಅರುವತ್ತು ರೂಪಾಯಿ ಧಾರಣೆ ನೀಡಿದರೆ ತರಕಾರಿ ಕೊಂಡುಕೊಳ್ಳುವ ಗ್ರಾಹಕನಿಗೆ ಅರುವತ್ತೈದು ರೂಪಾಯಿಗೆ ಮಾರಾಟ ಮಾಡುವ ಉದ್ದೇಶ. ಕಷ್ಟದಿಂದ ತರಕಾರಿ ಬೆಳೆದ ಕೃಷಿಕ ಎಷ್ಟೋ ಸಲ ತೀರಾ ಬೇಸರಕ್ಕೆ ಒಳಗಾಗುವುದಿದೆ. ಆತ ಬೆಳೆದ ತರಕಾರಿಗೆ ಬೆಲೆ ನಿಗದಿ ಮಾಡುವ ಅಧಿಕಾರ ಆತನಿಗಿಲ್ಲ. ಕೊಂಡುಕೊಳ್ಳುವ ಗ್ರಾಹಕನಿಗೂ ಇಲ್ಲ. ಅದೆಲ್ಲ ಅಂಗಡಿಯಾತನ ಕಾರ್ಯತಂತ್ರಗಳು. ದೊಡ್ಡ ಪ್ರಮಾಣದಲ್ಲಿ ಲಾಭ ಹೊಡೆಯಲು ಏನೆಲ್ಲ ಬೇಕೋ ಅವೆಲ್ಲವನ್ನೂ ನಾಜೂಕಿನಿಂದ ಮಾಡಿ ಬೆಳೆದವನಿಗೆ ನಿರಾಸೆಯಷ್ಟೇ ಸಿಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದ ಜೊತೆಗೆ ಸಾವಯವ ತರಕಾರಿ ಸದಸ್ಯರ ಮನೆಗೆ ಅಡುಗೆಗೆ ಒದಗಲಿ, ಘಟ್ಟದಿಂದ ಇಳಿದು ಬರುತ್ತಿದ್ದ ಚಂದದ ವಿಷಯುಕ್ತ ತರಕಾರಿ ನಮ್ಮ ಸದಸ್ಯರ ಅನ್ನದ ಬಟ್ಟಲಿಗೆ ಬರದಿರಲಿ ಎಂಬ ಕಾಳಜಿ ನಮಗೆ ಪ್ರೇರಣೆ ಆಗಿತ್ತು.

ಸಾವಯವ ತರಕಾರಿಗಳನ್ನು ಬೆಳೆಯಲು ಸಾಲ ನೀಡುವ ಯೋಚನೆ ಕೂಡ ಆಡಳಿತ ಮಂಡಳಿಯ ಮುಂದಿತ್ತು. ಸಾವಯವ ತರಕಾರಿಗಳನ್ನು ಬೆಳೆಯಲು ತರಕಾರಿ ಬೀಜ ಬ್ಯಾಂಕ್ ಸ್ಥಾಪನೆ, ಕೃಷಿ ತಜ್ಞರಿಂದ ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮುಂತಾದವು ನಮ್ಮ ಹತ್ತು ಹಲವು ಕನಸಿನ ಯೋಜನೆಗಳಲ್ಲಿ ಕೆಲವು.

ಆದರೆ ಮಹಾಮಾರಿ ಕೊರೋನಾ ನಮ್ಮ ಎಲ್ಲಾ ಕನಸುಗಳನ್ನು ನುಚ್ಚು ನೂರು ಮಾಡಿತ್ತು. ನಂತರದ ದಿನಗಳಲ್ಲಿ ನಾನು ಆಡಳಿತ ಮಂಡಳಿಯ ಅವಧಿ ಮುಗಿದು ಹೊರಗೆ ಬಂದೆ. ಮತ್ತೆ ನೂತನ ಆಡಳಿತ ಮಂಡಳಿ ಬಂದಾಗ ಈ ವಿಷಯ ಅವರ ಮುಂದಿಟ್ಟಿದ್ದೆ. ಬಹುಶ: ಮುಂದಿನ ದಿನಗಳಲ್ಲಿ ಅದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ಆಗಬಹುದು ಎಂಬ ನಿರೀಕ್ಷೆ ನನ್ನದು.

ಇದು ಕೇವಲ ಪೆರ್ಲದ ಸಹಕಾರಿ ಸಂಘವೊಂದು ಮಾಡಬೇಕಾದ ಕಾರ್ಯವಲ್ಲ. ನಾಡಿನ ಸಮಸ್ತ ಸಂಘಗಳು ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಪ್ರತಿಯೊಬ್ಬರ ಮನೆಗೆ ವಿಷಮುಕ್ತ ತರಕಾರಿ ಸಿಗುವಂತಾಗಬೇಕು.‌

ಏನಿದ್ದರೂ ಇದು ಡಿಜಿಟಲ್ ಭಾರತ. ತರಕಾರಿ ಬೆಳೆದು ಅದನ್ನು ಸಂಘದೊಳಗೆ ಗ್ರಾಹಕರಿಗಾಗಿ ಕಾಯುವಂತಾಗಬಾರದು. ಸಹಕಾರಿ ಸಂಘ ವಾಟ್ಸಪ್ ಗುಂಪುಗಳನ್ನು ಮಾಡಿ ಅದರಲ್ಲಿ ತರಕಾರಿ ಬೆಳೆಯುಔರನ್ನು, ಗ್ರಾಹಕರನ್ನು ಸೇರಿಸಿಕೊಳ್ಳಬೇಕು. ತರಕಾರಿ ಬೆಳೆದ ಕೃಷಿಕ ತರಕಾರಿ ಕೊಯ್ಲಿನ ಮುಂಚಿನ ದಿನ ಇಂತಹ ತರಕಾರಿ ತಯಾರಿದೆ ಎಂಬ ಸಂದೇಶ ವಾಟ್ಸಪ್ ಮೂಲಕ ಹರಿಯಬಿಡಬೇಕು. ಆ ಕಡೆಯಿಂದ ಖರೀದಿ ಮಾಡಲು ಗ್ರಾಹಕ ಬೇಡಿಕೆ ಅದೇ ಗುಂಪಲ್ಲಿ ಸಲ್ಲಿಸಿದರಾಯಿತು. ತರಕಾರಿ ಇಂತಿಷ್ಟು ಸಮಯಕ್ಕೆ ಸಹಕಾರಿ ಸಂಘಕ್ಕೆ ತಲುಪಲಿದೆ ಎಂಬ ಸೂಚನೆ ಗುಂಪಲ್ಲಿ ನೀಡುವುದು. ಆ ಸಮಯಕ್ಕೆ ಗ್ರಾಹಕ ಸಹಕಾರಿ ಸಂಘಕ್ಕೆ ಹೋಗಿ ತೂಕ ಮಾಡಿಸಿ ಕೊಂಡುಕೊಳ್ಳುವುದು. ಬೆಲೆ ನಿಗದಿ ಮಾಡುವುದು ಬೆಳೆಗಾರ ಮತ್ತು ಸಹಕಾರಿ ಸಂಘ ಜಂಟಿಯಾಗಿ. ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿ ವರ್ಗದ ನಾಲ್ಕಾರು ಜನರು ಇದಕ್ಕೆ ಗಮನ ಕೊಡಬೇಕು. ಸಣ್ಣ ಮಟ್ಟಿಗೆ ಲಾಭ ಸಹಕಾರಿ ಸಂಘಕ್ಕೂ ಇದರಿಂದ ಸಿಕ್ಕಿಯೇ ಸಿಗುತ್ತದೆ.
ಸಹಕಾರಿ ಸಂಘಗಳು ಇಂತಹ ಯೋಜನೆಗಳನ್ನು ಹಮ್ಮಿಕೊಂಡು ಸದಸ್ಯರ ಮತ್ತು ತನ್ಮೂಲಕ ಸಂಘದ ಶ್ರೇಯಸ್ಸಿಗೆ ಶ್ರಮಿಸುವ ಯೋಚನೆಯನ್ನು ಮಾಡಬೇಕು. ಕೇವಲ ಬ್ಯಾಂಕಿಂಗ್ ವ್ಯವಹಾರದಲ್ಲಿ ತಲ್ಲೀನವಾಗಿ ಬಿಡುವುದು ಮುಂದಿನ ದಿನಗಳಲ್ಲಿ ಸಮಸ್ಯೆ ಆಗಬಹುದು.

 

ಶಂ. ನಾ. ಖಂಡಿಗೆ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More