“ಸಹಕಾರಿ ಕ್ಷೇತ್ರದಡಿಯಲ್ಲಿ ವಾಹನ ನಿಲುಗಡೆ.”
ಮತ್ತೆ ಮತ್ತೆ ನೆನಪಿಗೆ ಬರುವುದು ‘ಆಡು ತಿನ್ನದ ಸೊಪ್ಪಿಲ್ಲ ಸಹಕಾರಿ ಕ್ಷೇತ್ರ ಮುಟ್ಟದ ನೆಲೆಯಿಲ್ಲ’ಎಂಬುದು. ತನ್ನ ಪರಂಪರಾಗತ ಬ್ಯಾಂಕಿಂಗ್ ವ್ಯವಸ್ಥೆಯೊಂದನ್ನೇ ನಚ್ಚಿಕೊಂಡಿದ್ದ ಸಹಕಾರಿ ಸಂಸ್ಥೆಗಳಿಂದು ತನ್ನ ಕಾರ್ಯ ವಿಸ್ತಾರವನ್ನು ಹರಹಿಕೊಂಡದ್ದು ನೋಡುವಾಗ ಮುಂದೊಂದು ದಿನ ಸಕಲ ಕಾರ್ಯವೂ ಸಹಕಾರಿ ವ್ಯವಸ್ಥೆಯಡಿ ಬರಬಹುದು ಎಂಬುದಂತೂ ನೂರಕ್ಕೆ ನೂರು ಸತ್ಯ. ಪಡಿತರದಿಂದ ಹಿಡಿದು ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ವರೆಗೆ, ಗೊಬ್ಬರದಿಂದ ಹಿಡಿದು ಕೃಷಿಕರಿಗೆ ಬೇಕಾದ ಸರ್ವ ಸವಲತ್ತುಗಳ ವರೆಗೆ ನೂರಾರು ಸರಕು ಸೇವೆಗಳು ಸಹಕಾರಿ ಕ್ಷೇತ್ರದ ಅಡಿಯಲ್ಲಿ ಬಂದಿವೆ.
‘ಸಹಕಾರಿ ಕಾಶಿ’ ಎನಿಸಿಕೊಳ್ಳುತ್ತಿರುವ ಶಿರಸಿ ಭಾಗಕ್ಕೆ ಹೋದರಂತು ಅಲ್ಲಿಯ ಸಹಕಾರಿ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆಗಳ ವಿಶ್ವರೂಪ ದರ್ಶನವಾಗುತ್ತವೆ. ಅಲ್ಲಿಯ ಜನ ಸಹಕಾರಿ ಸಂಘಗಳ ಜೊತೆಗೆ ತಾದಾತ್ಮ ಹೊಂದಿದ್ದನ್ನು ನೋಡಿದರೆ ಖುಷಿಯಾಗುತ್ತದೆ. ಎಷ್ಟೋ ಸಲ ಅನಿಸುವುದುಂಟು. ನಮ್ಮ ಸಹಕಾರಿಗಳು ಕನಸು ಕಾಣುವುದು ಕಡಿಮೆಯೇ ಎಂದು. ನಿತ್ಯದ ಹತ್ತು ಹಲವು ಜೀವನ ಜಂಜಾಟಗಳನ್ನು ಮತ್ತು ಖಾಸಗಿ ವಲಯದ ಕೆಲವು ಮಂದಿ ಮಾಡುವ ಶೋಷಣೆಯನ್ನು ಗಮನಿಸಿದರೆ ಸಹಕಾರಿ ಕ್ಷೇತ್ರದ ವೇಗ ಬಹಳ ಕಡಿಮೆಯೆನಿಸುತ್ತದೆ. ಎಲ್ಲವನ್ನೂ ಆವರಿಸಿಬಿಡಲು ಇನ್ನೆಷ್ಟು ಸಮಯ ತೆಗೆದುಕೊಳ್ಳುತ್ತದೊ ಎಂಬ ಆತಂಕವೂ ಮನೆ ಮಾಡುತ್ತದೆ.
ಮೊನ್ನೆ ಒಬ್ಬರು ಕಾಸರಗೋಡಿಗೆ ಹೋದ ವಿಷಯ ಪ್ರಸ್ತಾಪ ಮಾಡಿದರು. ನೂತನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪೂರ್ಣಗೊಳ್ಳುತ್ತಿರುವ ಸಮಯವಿದು. ವಾಹನದಲ್ಲಿ ಸರ್ವೀಸ್ ರಸ್ತೆಯಲ್ಲಿ ಹೋಗಿ ಯಾವುದೇ ಕೆಲಸ ಮಾಡಿಕೊಂಡು ಬರಬೇಕಾದರೆ ವಾಹನ ನಿಲುಗಡೆ ಸಮಸ್ಯೆ. ರಸ್ತೆ ಅಗಲವಾಗಿ ರಸ್ತೆ ಬದಿಯ ಕಟ್ಟಡಗಳ ತನಕ ಬಂದಾಗಿದೆ. ಒಂದಿನಿತು ಜಾಗ ಬಿಡದೆ ಕಟ್ಟಡಗಳು ಎದ್ದು ನಿಲ್ಲುತ್ತಿವೆ. ಇರದಲ್ಲಿ ಮತ್ತೆ ಮತ್ತೆ ಅಡಿಪಾಯಗಳೇಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಕೆಲಸಗಳಿಗೆ ವಾಹನದಲ್ಲಿ ಹೋದವರು ವಾಹನ ನಿಲುಗಡೆ ಎಲ್ಲಿ ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ.
ಇದು ಕೇವಲ ಕಾಸರಗೋಡು ನಗರದ ಸಮಸ್ಯೆಯಲ್ಲ. ಎಲ್ಲ ಸಣ್ಣ ಪುಟ್ಟ ಪೇಟೆಗಳಿಂದ ಹಿಡಿದು ಮಹಾನಗರಗಳವರೆಗೆ ಇದು ಜ್ವಲಂತ ಸಮಸ್ಯೆ. ಪಂಚಾಯತು ಅಥವ ನಗರಾಡಳಿತಗಳು ಇದಕ್ಕೆ ಈ ಸಮಸ್ಯೆ ನಿವಾರಣೆಗೆ ಸೂಕ್ತ ವ್ಯವಸ್ಥೆ ಮಾಡುತ್ತವೆ ಎಂಬ ಭರವಸೆ ಇಲ್ಲ. ಅಲ್ಲೊಂದು ಇಲ್ಲೊಂದು ಆಡಳಿತಗಳು ಇದನ್ನು ಮಾಡಿಯಾರು. ಆದರೆ ಇಡೀ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಲು ವಾಹನ ನಿಲುಗಡೆ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಸಹಕಾರ ಕ್ಷೇತ್ರದ ಸುಪರ್ದಿಗೆ ತಂದರೆ ಒಳ್ಳೆಯದಾಗಬಹುದು ಎನಿಸುತ್ತದೆ ನನಗೆ. ಸಹಕಾರಿ ಸಂಘಗಳು ನಿರ್ವಹಿಸಲಿ ಯಾವುದೇ ಪೇಟೆ ಪಟ್ಟಣ ಆಗಿರಬಹುದು. ಅಲ್ಲೆಲ್ಲ ಸಹಕಾರಿ ಸಂಘ ಇದ್ದೇ ಇರುತ್ತದೆ. ಇವುಗಳು ಕೇವಲ ಹಣ ಸಾಲ ಕೊಡುವುದು, ಸಾಲ ವಸೂಲು ಮಾಡುವುದು, ಚಿನ್ನ ಅಡವಿಟ್ಟು ಹಣ ಕೊಡುವುದು ಇಂತಹದ್ದೇ ವ್ಯವಹಾರ ಮಾಡಿದ್ದು ಸಾಕು.
ಅದರ ಜೊತೆಗೆ ‘ಆತ್ಮ ನಿರ್ಭರ ಭಾರತ’, ‘ಸಹಕಾರದಿಂದ ಸಮೃದಿ’್ಧ ಎಂಬ ಘೋಷವಾಕ್ಯಗಳಿಗೆ ಪೂರಕವಾದ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಡವೆ? ಅದಕ್ಕಾಗಿ ಅನ್ಯಾನ್ಯ ಸೇವೆಗಳನ್ನು ತಮ್ಮ ನಿತ್ಯದ ವಹಿವಾಟಲ್ಲಿ ಸಹಕಾರಿ ಸಂಘಗಳು ಸೇರಿಸಿಕೊಳ್ಳಬೇಕು. ಇಂತಹ ಆಯ್ದುಕೊಳ್ಳಬಹುದಾದ ಸೇವೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು ಒಂದು.
ಸರಕಾರ ಪೇಟೆ ಮತ್ತು ನಗರ, ಮಹಾನಗರಗಳಲ್ಲಿರುವ ಸಹಕಾರಿ ಸಂಘಗಳನ್ನು ಸಂಪರ್ಕಿಸಿ ಅವುಗಳಿಗೆ ನಿರ್ದಿಷ್ಟ ವರ್ಷಗಳಿಗೆ ಜಾಗ ಮೀಸಲು ಕೊಟ್ಟು ಅದರಲ್ಲಿ ಆ ಪೇಟೆ ಅಥವ ನಗರಗಳ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲು ನೆರವಾಗಬೇಕು. ದೊಡ್ಡ ನಗರಗಳಾದರೆ ವಾಹನ ನಿಲುಗಡೆ ದಟ್ಟಣೆಯನ್ನು ನಿಭಾಯಿಸಲು ಹೆಚ್ಚು ಸಹಕಾರಿ ಸಂಸ್ಥೆಗಳಿಗೆ ಅನುವು ಮಾಡಿಕೊಡಬಹುದು.
ನಿರ್ದಿಷ್ಟ ಸಮಯಕ್ಕೆ ಸೂಕ್ತ ಮೊತ್ತ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ ನಿಲುಗಡೆಗೆ ನಿರ್ದಿಷ್ಟ ಸಮಯಕ್ಕೆ ಸೂಕ್ತ ಮೊತ್ತ ಸಹಕಾರಿ ಸಂಘಗಳು ನಿಗದಿಮಾಡಬೇಕು. ಅಲ್ಲಿಯ ನಿರ್ವಹನೆಗೆ ಬೇಕಾದ ಸಿಬ್ಬಂದಿ ನೇಮಿಸಿಕೊಳ್ಳುವುದು. ಎಲ್ಲ ಡಿಜಿಟಲೀಕರಣ ವ್ಯವಸ್ಥೆಯಡಿಯಲ್ಲಿ ನಿರ್ವಹಣೆ ನಡೆದರೆ ಬಹಳ ಹಿತಕಾರಿ. ಕೆಲವು ವಾಹನಗಳು ನಿಲುಗಡೆಗೆ ಬಂದು ಅರ್ಧ ಘಂಟೆಯಲ್ಲಿ ಹಿಂತಿರುಗಬಹುದು. ಕೆಲವು ಇಡೀ ದಿವಸ ಇದ್ದರೂ ಇರಬಹುದು. ಈ ಲೆಕ್ಕಾಚಾರದಲ್ಲಿ ಸಹಕಾರಿ ಸಂಘ ಅಲ್ಲಿಗೆ ನೇಮಿಸಿದ ಸಿಬ್ಬಂದಿಯ ವೇತನ ಸರಿಹೊಂದಿ ಸಣ್ಣ ಮೊತ್ತವಾದರೂ ಸಹಕಾರಿ ಸಂಘಕ್ಕೆ ಸಿಗುವಂತಾಗಬೇಕು.
ಬಂದ ವಾಹನ ನಿಲುಗಡೆ ಗ್ರಾಹಕರಿಗೆ ಮತ್ತಷ್ಟು ಸೇವೆಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದು.
ಇದೊಂದು ಕನಸು, ನನಸಾದರೆ ಖುಷಿ ಸಹಕಾರ ಕ್ಷೇತ್ರ ಸಮಾಜದ ಕೊಟ್ಟ ಕೊನೆಯ ವ್ಯಕ್ತಿಗೂ ತಲುಪಬೇಕೆಂಬ ಮಹತ್ವಾಕಾಂಕ್ಷೆಯ ಜೊತೆಗೆ ಸಾಧ್ಯವಾದಷ್ಟು ಹೆಚ್ಚಿನ ಸೇವೆಗಳನ್ನು ಆರಂಭಿಸಬೇಕೆAಬ ಕನಸಿದು. ಯಾವುದಾದರು ಒಂದು ಸಹಕಾರಿ ಸಂಘ ಇದರ ಬಗ್ಗೆ ಯೋಚಿಸಿ ಕಾರ್ಯರೂಪಕ್ಕೆ ತಂದರೆ ಮತ್ತಷ್ಟು ಸಹಕಾರಿ ಸಂಘಗಳು ಆ ದಾರಿಯಲ್ಲಿ ಮುನ್ನಡೆದಾವು. ಜನತೆಗೆ ಪ್ರಯೋಜನವಾಗುವ ಯಾವುದೇ ಯೋಜನೆಯನ್ನು ಗ್ರಹಿಸಿಕೊಂಡು ಯೋಜನೆ ರೂಪಿಸಿಕೊಂಡು ಕಾರ್ಯಗತಗೊಳಿಸುವ ಸಹಕಾರಿಗಳಿಗೆ ಇದೊಂದು ಸವಾಲು.

ಶಂ.ನಾ.ಖಂಡಿಗೆ