ಕರಾವಳಿ ಕರ್ನಾಟಕದ ಸಹಕಾರ ಚಳವಳಿ ಜನರ ಜೀವನದಲ್ಲಿ ಮಹತ್ತರವಾದ ಬದಲಾವಣೆಯ ಕೊಡುಗೆ ನೀಡಿದೆ. ಇಲ್ಲಿ ಶಿಕ್ಷಣˌ ಆರೋಗ್ಯˌ ಸಂಸ್ಕೃತಿˌ ಸಂಸ್ಕಾರ ಮುಂತಾದವು ಏರುಗತಿಯಲ್ಲಿ ಸಾಗಿದ ರೀತಿಯಲ್ಲಿ ಸಹಕಾರ ಕೂಡಾ ಜನಮಾನಸದಲ್ಲಿ ಬೇರೂರಿದೆ. 20ನೇ ಶತಮಾನದ ಆರಂಭದಲ್ಲಿ ಸಹಕಾರದ ಮುನ್ನಡೆಗೆ ಜನಸಾಮಾನ್ಯರನ್ನು ಹುರಿದುಂಬಿಸಿದವರು ಸಹಕಾರಿ ಪಿತಾಮಹ ದಿ: ಮೊಳಹಳ್ಳಿ ಶಿವರಾಯರು . ಅವಿಭಜಿತ ದ.. ಕ.ಜಿಲ್ಲೆ ಯ ಬೈಂದೂರಿನಿಂದ ಕಾಸರಗೋಡಿನ ನೀಲೇಶ್ವರ ತನಕ ಸಹಕಾರಿ ಸಂಘಗಳನ್ನು ಕಟ್ಟಲು ಯಾವುದೇ ಸಂಚಾರ ಸೌಲಭ್ಯಗಳಿಲ್ಲದ ಅಂದಿನ ದಿನಗಳಲ್ಲಿ ಕಾಲ್ನಡಿಗೆˌ ಎತ್ತಿನ ಗಾಡಿಯಲ್ಲಿ ಸಂಚರಿಸಿ ಗ್ರಾಮೀಣ ಜನರಿಗೆ ಪ್ರೇರಣೆ ನೀಡಿದರು. ಸುಳ್ಯದ ಆರಂಭದ ಎಲ್ಲಾ ಸಹಕಾರಿ ಸಂಘಗಳ ಸ್ಥಾಪನೆಗೆ ಪ್ರೇರಣೆ ಮೊಳಹಳ್ಳಿ ಶಿವರಾಯರು.1909ರಲ್ಲಿ ಸುಳ್ಯಕ್ಕೆ ಭೇಟಿ ನೀಡಿದ ಮೊಳಹಳ್ಳಿ ಶಿವರಾಯರು ಸುಳ್ಯಸುತ್ತಮುತ್ತಲಿನ ಏಳೆಂಟು ಗ್ರಾಮಗಳ ಹಿರಿಯರನ್ನು ಒಗ್ಗೂಡಿಸಿ ಸಹಕಾರಿ ಸಂಘಗಳ ಸ್ಥಾಪನೆಗೆ ಹುರಿದುಂಬಿಸಿದರು.
1904ರಲ್ಲಿ ದೇಶದ ಅಧಿಕೃತ ಸಹಕಾರ ಚಳವಳಿ ಪ್ರಾರಂಭವಾದುದು ಇತಿಹಾಸ. ದೇಶದಲ್ಲಿ ಸಹಕಾರ ರಂಗ ಪ್ರವೇಶಿಸಿದ ಒಂಭತ್ತನೇ ವರ್ಷದಲ್ಲಿ 11 -4 -1913 ರಲ್ಲು15 ಮಂದಿ ಸದಸ್ಯರ ನೇತೃತ್ವದಲ್ಲಿ ಪಂಜ ಪರಸ್ಪರ ಸಹಕಾರ ಸಂಘ ಸ್ಥಾಪನೆಯಾಯಿತು. ಪ್ರಥಮ ಸಭೆಯ ಅಧ್ಯಕ್ಷತೆಯನ್ನು ಕರಾವಳಿಯ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ವಹಿಸಿದ್ದರು. ದಿ .ಕಲ್ಲೇಗ ಪೂವಣಿ ಹೆಗ್ಡೆ ಪ್ರಥಮ ಅಧ್ಯಕ್ಷರಾಗಿˌ ದಿ. ಬಿ.ಭವಾನಿಶಂಕರ ರಾಯರು ಗೌರವ ಕಾರ್ಯದರ್ಶಿಗಳಾಗಿ ಸಹಕಾರಿಸಂಘ ಕಾರ್ಯಪ್ರವೃತ್ತವಾಯಿತು. ಐವತ್ತೊಕ್ಲುˌ ಕೇನ್ಯˌ ಬಳ್ಪ ˌ ಕೂತ್ಕುಂಜˌ ಎಡಮಂಗಲˌ ಎಣ್ಮೂರುˌ ಪಂಬೆತ್ತಾಡಿ ಗ್ರಾಮಗಳ ಕಾರ್ಯಕ್ಷೇತ್ರವನ್ನು ಹೊಂದಿತ್ತು. ಇಂದಿನ ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 1914ರಲ್ಲಿ ಸುಳ್ಯ ಸಹಕಾರಿ ಸಂಘ ಲಿಮಿಟೆಡ್ ಹೆಸರಿನಲ್ಲಿ ಮದ್ರಾಸು ಸಂಸ್ಥಾನದ ಕಾಯ್ದೆಯಡಿ ದಿ| ಬೇಲ್ಯ ಐತ್ತಪ್ಪ ರೈಗಳ ಮುಂದಾಳುತ್ವದಲ್ಲಿ 24ಜನರ ಸದಸ್ಯತ್ವ ₹300/ ಪಾಲುಬಂಡವಾಳದೊಂದಿಗೆ ಆರಂಭವಾಯಿತು. ಶ್ರೀ ಉಲ್ಪೆ ಮಂಗೇಶಯ್ಯ ಪ್ರಥಮ ಅಧ್ಯಕ್ಷರುˌ ಶ್ರೀ ನಾವೂರು ನಾರ್ಣಪ್ಪಯ್ಯನವರು ಪ್ರಥಮ ಕಾರ್ಯದರ್ಶಿ. ಅಧ್ಯಕ್ಷರ ಮನೆ ಸಂಘದ ಕಛೇರಿಯಾಗಿತ್ತು.1915ರಲ್ಲಿ ಬೆಳ್ಳಾರೆ ಸಹಕಾರಿ ಸಂಘ ಮೊಳಹಳ್ಳಿಯವರ ಪ್ರೇರಣೆಯಿಂದ ವಾರಣಾಶಿ ಸುಬ್ರಾಯ ರ (ಕ್ಯಾಂಪ್ಕೊ ಸ್ಥಾಪಕ ದಿ ವಾರಣಾಶಿ ಸುಬ್ರಾಯ ಭಟ್ಟರ ದಾಯಾದಿ )ಅಧ್ಯಕ್ಷತೆಯಲ್ಲಿ ಬೆಳ್ಳಾರೆˌಕಳಂಜˌ ಬಾಳಿಲˌ ಮುಪ್ಪೆರ್ಯˌ ಹಾಗೂ ಐವರ್ನಾಡು ಗ್ರಾಮಗಳ ವ್ಯಾಪ್ತಿಯನ್ನೊಳ ಗೊಂಡು ಸ್ಥಾಪಿಸಲ್ಪಟ್ಟಿತು. 1934ರಲ್ಲಿ ಇದೇ ವಾರಣಾಶಿ ಸುಬ್ರಾಯರವರ ನೇತೃತ್ವದಲ್ಲಿ ಕಳಂಜˌ ಬಾಳಿಲˌ ಮುಪ್ಪೆರ್ಯ ಗ್ರಾಮ ವ್ಯಾಪ್ತಿಯ ಕಳಂಜ ಬಾಳಿಲ ಸಹಕಾರಿ ಸಂಘ ಉದಯವಾಯಿತು.
1919ರಲ್ಲಿ ಕಲ್ಮಡ್ಕ ಸಹಕಾರಿ ಸಂಘ ಆರಂಭವಾಯಿತು. ಶ್ರೀ ಯಸ್ ಸದಾಶಿವಯ್ಯ ಪ್ರಥಮ ಅಧ್ಯಕ್ಷರುˌ ಶ್ರೀ ಬಿ. ಯಸ್ . ಕೃಷ್ಣಯ್ಯರು ಗೌರವ ಕಾರ್ಯದರ್ಶಿಗಳಾಗಿ ಸಂಘ ಚಾಲನೆ ಗೊಂಡಿತು.ಶ್ರೀ ಜಿ. ಶಂಕ್ರನಾರ್ಣಪ್ಪಯ್ಯˌ ಶ್ರೀಯಂ ಸೀತಾರಾಮಯ್ಯˌ ಶ್ರೀ ಯಂ ವೀರಪ್ಪ ಗೌಡ ಅಂದಿನ ನಿರ್ದೇಶಕರು.
1918ರಲ್ಲಿ ಜಾಲ್ಸೂರು ಸಹಕಾರಿ ಸಂಘ ಆರಂಭವಾಯಿತು.ಶ್ರೀ ಕುರಿಯ ತಿಮ್ಮಪ್ಪ ರೈಗಳ ಸಾರಥ್ಯದಲ್ಲಿ ಕುರಿಯ ತರವಾಡು ಮನೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.1919ರಲ್ಲಿ ಕನಕಮಜ್ಲು ಸಹಕಾರಿ ಸಂಘ ˌಶ್ರೀ ಪಟೇಲ್ ರಾಮಣ್ಣ ಗೌಡರ ನೇತೃತ್ವˌ ಶ್ರೀ ಕುದ್ಕುಳಿ ದೇರಪ್ಪ ಮಾಸ್ತರ್ ರವರ ಕಾರ್ಯನಿರ್ವಹಣೆಯೊಂದಿಗೆ ಸ್ಥಾಪಿಸಲ್ಪಟ್ಟಿತು. 1919ರಲ್ಲಿ ಬೆಳ್ಳಾರೆ ಸಂಘದಿಂದ ಬೇರ್ಪಟ್ಟು ಐವರ್ನಾಡು ಸಹಕಾರಿ ಸಂಘ ಸ್ಥಾಪನೆಯಾಯಿತು.ˌ ಮರ್ಕಂಜ ˌಅರಂತೋಡು ˌ ಅಲೆಟ್ಟಿ ಸಹಕಾರಿ ಸಂಘಗಳು ಕೂಡಾ 1919ರಲ್ಲಿ ˌಸಂಪಾಜೆ ಸಹಕಾರಿ ಸಂಘ1921ರಲ್ಲಿ ಸ್ಥಾಪನೆಯಾಯಿತು.1922ರಲ್ಲಿ ಚೊಕ್ಕಾಡಿ ಸಹಕಾರಿ ಸಂಘ ಅಸ್ತಿತ್ವಕ್ಕೆ ಬಂತು. ಗುತ್ತಿಗಾರು ಸಹಕಾರಿ ಸಂಘ ದಿ. ಪುಲ್ಲಡ್ಕಸುಬ್ರಾಯರ ನೇತೃತ್ವದಲ್ಲಿ1923ರಲ್ಲಿ 24 ಸದಸ್ಯರನ್ನೊಳಗೊಂಡು ಆರಂಭವಾಯಿತು. 1919ರಲ್ಲಿ ಎಲಿಮಲೆ ಶಾಲಾ ಕೊಠಡಿಯಲ್ಲಿ ದಿ. ಹಮ್ಮದೆ ಬ್ಯಾರಿಯವರ ಮುಂದಾಳುತ್ವದಲ್ಲಿ ದೇವಚಳ್ಳ ಆರಂಭವಾಗಿ 1922ರಲ್ಲಿ ದಿ. ದೇವ ಭೀಮಯ್ಯನವರ ಮನೆಗೆ ಕಛೇರಿಯು ವರ್ಗಾವಣೆಗೊಂಡು ಅವರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭವಾಯಿತು. 1935ರಲ್ಲಿ ಅಮರ ನಾಲ್ಕೂರು ಸಹಕಾರಿ ಸಂಘ ದಿ ವೀರಪ್ಪ ಗೌಡರು ಸ್ಥಾಪಿಸಿದರು . ನಂತರದ ದಿನಗಳಲ್ಲಿ ಗುತ್ತಿಗಾರುˌ ದೇವಚಳ್ಳˌ ನಾಲ್ಕೂರು ಸಂಘಗಳು ಹಂತಹಂತವಾಗಿ ವಿಲೀನವಾಗಿ ಗುತ್ತಿಗಾರು ಸೇವಾ ಸಹಕಾರಿ ಸಂಘವಾಯಿತು.1925ರಲ್ಲಿ ಕೊಲ್ಲಮೊಗ್ರು ಹಾಗೂ ಪೆರುವಾಜೆ ಸಹಕಾರಿ ಸಂಘಗಳು ಸ್ಥಾಪನೆಯಾಯಿತು. ಮಂಡೇಕೋಲು ಸಹಕಾರಿ ಸಂಘ 1940ರಲ್ಲಿ ಸ್ಥಾಪನೆಯಾಯಿತು.
ಈ ರೀತಿ ಸ್ವಾತಂತ್ರ್ಯ ಪೂರ್ವದಲ್ಲಿ ಇಂದಿನ ಸುಳ್ಯ ತಾಲೂಕಿನ ಹೆಚ್ಚಿನ ಎಲ್ಲಾ ಸಹಕಾರಿ ಸಂಘಗಳು ಮೊಳಹಳ್ಳಿಯವರ ದಿಟ್ಟತನದ ಪ್ರೇರಣೆಯಿಂದ ಸ್ಥಾಪನೆಯಾದದ್ದು ಸುಳ್ಯದ ಸಹಕಾರಿ ಚಳವಳಿಗೆ ಗರಿ. ಅದೇ ರೀತಿ ಜನರ ಬಹುಅವಶ್ಯಕತೆಯ ತಾಣವಾಗಿ ಬೆಳೆಯಲು ಸಾಧ್ಯವಾಯಿತು. ಸ್ವಾತಂತ್ರ್ಯ ನಂತರ ಕೆಲವು ಸಹಕಾರಿ ಸಂಘಗಳ ಕಾರ್ಯವ್ಯಾಪ್ತಿ ವಿಂಗಡಣೆಗೊಂಡು ಹೊಸ ಸಂಘಗಳು ಅಸ್ತಿತ್ವಕ್ಕೆ ಬಂದವು. 1957ರಲ್ಲಿ ಮುರುಳ್ಯ ,1962ರಲ್ಲಿ ಎಡಮಂಗಲˌ ಹಾಗೂ ಯೇನೆಕಲ್ಲುˌ1951ರಲ್ಲಿ ನೆಲ್ಲೂರು ಕೆಮ್ರಾಜೆˌ1968ರಲ್ಲಿ ಉಬರಡ್ಕ ಮಿತ್ತೂರು1953 ರಲ್ಲಿ ಐನೆಕಿದುˌ1960ರಲ್ಲಿ ಪಂಬೆತ್ತಾಡಿ ಸಹಕಾರಿ ಸಂಘಗಳ ಸ್ಥಾಪನೆ ದಾಖಲೆಗಳಿಂದ ಕಂಡುಬರುತ್ತದೆ.ಅದೇ ರೀತಿ ಸರಕಾರದ ಧೋರಣೆಗನುಸರಿಸಿ ಮುಖ್ಯವಾಗಿ 1976 ರಲ್ಲಿ ವಿಲೀನ ಪ್ರಕ್ರಿಯೆಗೆ ಒಳಪಟ್ಟವು. ಸಂಘದ ಹೆಸರಿನಲ್ಲೂ ಬದಲಾವಣೆಗಳನ್ನು ಕಂಡವು. ಈ ಎಲ್ಲ ಸಂದರ್ಭಗಳಲ್ಲಿ ಸಂಘಗಳು ಮರು ನೋಂದಣಿಗೆ ಒಳಪಟ್ಟವು. 1966ರಲ್ಲಿ ಸುಳ್ಯ ತಾಲೂಕು ಅಸ್ತಿತ್ವಕ್ಕೆ ಬಂದ ಸುರುವಿನಲ್ಲಿ ದೀರ್ಘಾವಧಿ ಹಾಗೂ ಮಧ್ಯಮಾವಧಿ ಸಾಲದ ಉದ್ದೇಶಕ್ಕಾಗಿ ತಾಲೂಕು ಕಾರ್ಯವ್ಯಾಪ್ತಿಯ ಸುಳ್ಯ ಸಹಕಾರಿ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃಧಿ ಬ್ಯಾಂಕು ಅಸ್ತಿತ್ವಕ್ಕೆ ಬಂತು. ತಾಲೂಕು ರಚನೆ ಬಳಿಕ ಸುಳ್ಯ ಟಿ ಎ ಪಿ ಸಿ ಯಂ ಯಸ್ˌ ಸುಳ್ಯ ತಾಲೂಕು ಮಹಿಳಾ ಸಹಕಾರಿ ಸಂಘ ರಚನೆಯಾಯಿತು.1973ರಲ್ಲಿ ಬೆಳ್ಳಾರೆಪೇಟೆಯಲ್ಲಿ ತಾಲೂಕಿನ ಪ್ರಥಮ ಹಾಲು ಉತ್ಪಾದಕರ ಸಹಕಾರಿಸಂಘ ಕೊಡಿಯಾಲ ಹಾಲು ಉತ್ಪಾದಕರ ಸಹಕಾರಿ ಸಂಘ ಸ್ಥಾಪನೆ ಯಾಯಿತು. 1979ರಲ್ಲಿ ಕುಕ್ಕುಜಡ್ಕ ಗ್ರಾಮಾಂತರ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘ ಅಮರಮೂಡ್ನೂರುˌ ಅಮರಪಡ್ನೂರುˌ ಕಳಂಜ ಗ್ರಾಮಗಳ ವ್ಯಾಪ್ತಿ ಹೊಂದಿ ಶ್ರೀ ಯಂ ಜಿ ಸತ್ಯನಾರಾಯಣರವರ ಪ್ರಯತ್ನದ ಫಲವಾಗಿ ಸ್ಥಾಪಿತಗೊಂಡು ಕ್ಷೀರ ಕ್ಷೇತ್ರಕ್ಕೆ ಹೊಸತನ ನೀಡಿತು. ದ.ಕ ಸಹಕಾರಿ ಹಾಲು ಒಕ್ಕೂಟ ಸ್ಥಾಪನೆ ಯಾಗಲು ಮುಂಚಿತವಾಗಿ ಈ ಎರಡು ಸಂಘಗಳು ಸ್ಥಾಪನೆಯಾಗಿ ಹಾಲಿನ ಮಾರುಕಟ್ಟೆಗೆ ಬೆಳಕು ಚೆಲ್ಲಿದವು. ತಾಲೂಕಿನ ಉಳಿದ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳು 1985ರ ನಂತರ ರಚನೆಯಾಯಿತು. (ಈ ಲೇಖನದಲ್ಲಿರುವ ಮಾಹಿತಿಗಳು ಲಭ್ಯ ದಾಖಲೆಗಳಗನುಸರಿಸಿ ಹೇಳಲಾಗಿದ್ದುˌ ಸಣ್ಣಪುಟ್ಟ ವ್ಯತ್ಯಾಸಗಳಿರುವ ಸಾಧ್ಯತೆ ಇದೆ)
1997ರಲ್ಲಿ ಪೂರ್ಣ ಸ್ವಾಯತ್ತೆಯ ಕರ್ನಾಟಕ ಸೌಹಾರ್ದ ಕಾಯ್ದೆ ಜ್ಯಾರಿಗೆ ಬಂದ ಬಳಿಕ ಹಲವು ಸೌಹಾರ್ದ ಸಹಕಾರಿ ಸಂಘಗಳು ರಚನೆಯಾಯಿತು. ಇವುಗಳಲ್ಲಿ ಹಲವು ಹಿಂದೆ ಖಾಸಗಿ ಒಡೆತನದ ಫೈನಾನ್ಸ್ ಗಳು ಕಾಯ್ದೆಯ ಲಾಭ ಪಡೆಯುವುದಕ್ಕೋಸ್ಕರ ಅನಾಮಿಕವಾಗಿ ಸೌಹಾರ್ದಗಳಾಗಿ ಬದಲಾವಣೆಯಾಯಿತು.
ಹೀಗೆ ಸಹಕಾರಿ ರಂಗದಲ್ಲಿ ಕಳೆದ ಶತಮಾನದಲ್ಲಿ ಸುಳ್ಯ ತಾಲೂಕು ಬಹುದೊಡ್ಡ ಸಾಮಾಜಿಕ ಕ್ರಾಂತಿಯನ್ನು ತೆರೆಯಿತು.
ಸಹಕಾರಿ ಸಂಘಗಳು ಹಲವು ತನ್ನ ಹೆಸರಿನಲ್ಲಿ ಬದಲಾವಣೆಗಳನ್ನು ಕಂಡ ಕಾರಣ ಸರಕಾರದ ಇಲಾಖಾ ನೋಂದಣಿಯು ಬದಲಾವಣೆಯಾಗಿದ್ದು ಅದರಲ್ಲಿ ನೋಂದಣಿ ಸಂಖ್ಯೆ ˌ ದಿನಾಂಕಗಳು ಬದಲಾವಣೆ ಕಂಡಿರುವುದರಿಂದ ಸಂಘಗಳ ಹುಟ್ಟಿನ ಬಗ್ಗೆ ಗೊಂದಲವಾಗಿದೆ. ಎಲ್ಲಾ ಸಂಘಗಳು ತನ್ನ ಮೂಲನೋಂದಣಿ ಸಂಖ್ಯೆಯನ್ನು ಸಂಘಗಳ ಪ್ರತಿಯೊಂದು ಲಿಖಿತಗಳಲ್ಲಿ ನಮೂದಿಸುವ ಅವಶ್ಯಕತೆ ಇದೆ. ಆರಂಭದಲ್ಲಿ ಸಹಕಾರಿ ಸಂಘˌ ನಂತರ ಸೇವಾ ಸಹಕಾರಿ ಸಂಘˌ ಸೇವಾ ಸಹಕಾರಿ ಬ್ಯಾಂಕುˌ ವ್ಯವಸಾಯ ಸೇವಾ ಸಹಕಾರಿ ಸಂಘˌ ಸಿ. ಎ. ಬ್ಯಾಂಕುˌಇತ್ತೀಚೆಗೆ ಕೃಷಿ ಪತ್ತಿನ ಸಹಕಾರಿ ಸಂಘ ಹೀಗೆ ಹೆಸರಿನಲ್ಲಿ ಬದಲಾವಣೆಗಳಾದ ಪ್ರತಿ ಸಂದರ್ಭದಲ್ಲೂ ನೋಂದಣಿಯಲ್ಲಿ ಬದಲಾವಣೆ ಕಂಡಿವೆ. ಮೂಲನೋಂದಣಿ ಸಂಖ್ಯೆಯ ಬಗ್ಗೆ ಎಚ್ಚರಿಕೆ ವಹಿಸದಿದ್ದಲ್ಲಿ ಸಂಸ್ಥೆಯ ಸ್ಥಾಪನೆಯ ವಿಷಯದಲ್ಲಿ ಮುಂದಿನ ತಲೆಮಾರಿಗೆ ಗೊಂದಲ ನಿಶ್ಚಿತ.
ಸುಮಾರು 40-50 ವರ್ಷಗಳ ಹಿಂದೆ ಸಹಕಾರಿ ಸಂಘಗಳ ಚುನಾವಣೆಗಳಲ್ಲಿ ರಾಜಕೀಯ ಪಕ್ಷ ಪ್ರವೇಶ ಕನಿಷ್ಟವಾಗಿತ್ತು. ನಂತರದಲ್ಲಿ ಬರಬರತ್ತು ಪಕ್ಷ ರಾಜಕಾರಣವೇ ಸಹಕಾರಿ ಸಂಘಗಳಲ್ಲಿ ಪ್ರಮುಖವಾದುದರಿಂದ ಸಹಕಾರದ ವಿಷಯದಲ್ಲಿ ಆಸಕ್ತಿˌ ಬದ್ದತೆಯಿಂದ ಪರಿಣತಿಯನ್ನು ಪಡೆದು ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಯಿತು. ಆಡಳಿತ ಮಂಡಳಿಯ ಹೆಚ್ಚಿನ ಮಂದಿಯ ಆಸಕ್ತಿ ಚುನಾವಣೆˌ ಸ್ವಹಿತಾಸಕ್ತಿಯ ವಿಷಯಗಳುˌ ಶಿಬಂಧಿ ನೇಮಕಾತಿ ಮುಂತಾದ ಸೀಮಿತ ವಿಷಯಗಳಿಗೆ ಒಳಪಡುವುದರಿಂದ ಸಕ್ರಿಯತೆಯ ಹೊಡೆತ ಸಹಕಾರದ ನೈಜ ಬೆಳವಣಿಗೆಗೆ ಮಾರಕ. ಸಹಕಾರದ ಕಾನೂನು ನಿಯಮ ಬೈಲಾ ವಿಷಯದಲ್ಲಿ ಪರಿಪೂರ್ಣ ಅರಿವಿನ ಅಧ್ಯಕ್ಷˌ ಆಡಳಿತಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಇದ್ದಾಗ ಶಿಬಂಧಿ ಶಿಸ್ತಿನಿಂದ ಕೆಲಸ ನಿರ್ವಹಿಸಬಹುದು. ಇಲ್ಲವಾದಲ್ಲಿ ಶಿಬಂಧಿ ಅವ್ಯವಹಾರಗಳು ˌಅವರ ಆರ್ಥಿಕ ಲಾಭದತ್ತ ಮನಸ್ಸು ತೆರಳಿ ಅವರ ಮನಸ್ಸಾಕ್ಷಿಯಂತೆ ವ್ಯವಹಾರ ನಡೆದು ಸಂಸ್ಥೆ ಬಸವಳಿಯಬಹುದು. ಇಂದು ತಾಲೂಕಿನ ಎಲ್ಲಾ ಸಂಘಗಳು ಸ್ವಂತ ಅಡಿಸ್ಥಳˌ ಭವ್ಯವಾದ ಕಟ್ಟಡಗಳನ್ನು ಹೊಂದಿ ಮೇಲ್ನೋಟಕ್ಕೆ ಭರ್ಜರಿಯಾಗಿ ಕಂಡರೂ ಆಡಳಿತ ಮತ್ತು ಶಿಬಂಧಿಯ ವೈಫಲ್ಯದಿಂದಾಗಿ ಕೆಲವೊಂದು ಸಂಘಗಳು ಆರ್ಥಿಕವಾಗಿ ಬಲಹೀನವಾಗಿರುವ ಹಾಗೂ ಸದಸ್ಯರಿಗೆ ನೀಡಬೇಕಾಗಿರುವ ಸರ್ವಸೌಲಭ್ಯದ ಕೇಂದ್ರಗಳಾಗದೇ ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಪ್ರತಿಯೊಬ್ಬ ಸದಸ್ಯನು ಎಚ್ಚರಿಕೆಯ ನಿಗಾ ವಹಿಸುವುದು ತೀರಾ ಅವಶ್ಯಕ.ಸ್ಥಾಪನೆಯ ಹಿರಿಯರ ಕಾಲದಲ್ಲಿ ಇದಾವುದಕ್ಕೂ ಅವಕಾಶವಿಲ್ಲದೇ ಕೇವಲ ಸಹಕಾರ ಚಳವಳಿಯ ಬಲವರ್ಧನೆಗೆ ಅಂದಿನ ಜನಾಂಗ ಗಮನನೀಡಿರುತ್ತಾರೆˌ
ಸಹಕಾರ ಸುಳ್ಯ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಪಸರಿಸಿ ಆರ್ಥಿಕ ಹಾಗೂ ವ್ಯವಹಾರಿಕವಾಗಿ ಜನರ ಬಲತನಕ್ಕೆ ಮೆರಗು ನೀಡಿವೆ.ಸುಳ್ಯದಲ್ಲಿ ಕುರುಂಜಿಯವರ ಪ್ರಯತ್ನದಿಂದಾಗಿ ಶಿಕ್ಷಣ ˌಆರೋಗ್ಯ ಸೇವೆ ಬಲವಾಗಿದ್ದುˌ ವಾಣಿಜ್ಯಬೆಳೆ ಅಡಿಕೆ ರಬ್ಬರುಆರ್ಥಿಕವಾಗಿ ಸಬಲತೆ ನೀಡಿದೆ. ಅದೇ ರೀತಿ ಹಿರಿಯರ ಫಲಾಪೇಕ್ಷೆ ಇಲ್ಲದ ಸಾಧನೆಯಿಂದಾಗಿ ಸಹಕಾರಿಕ್ಷೇತ್ರ ಬೇರೂರಿದೆ. ಇದೆಲ್ಲದರ ಪರಿಣಾಮ ಕೃಷಿಕರು ಉದ್ಯೋಗಿಗಳು ˌ ಕಾರ್ಮಿಕರು ಆರ್ಥಿಕವಾಗಿ ಸಬಲತೆ ಹೊಂದಿದ್ದು ಕನಿಷ್ಟಬಡತನರೇಖೆಗಿಂತ ಮೇಲ್ಮಟ್ಟದಲ್ಲಿದ್ದಾರೆ. ಕೇಂದ್ರ ಸರಕಾರದ ಸಹಕಾರಿ ನೀತಿಯಂತೆ ಸುಳ್ಯದ ಸಹಕಾರಿಕ್ಷೇತ್ರ ಗ್ರಾಮೀಣ ಜನರ ಅವಶ್ಯಕತೆಯ ಸರ್ವ ಸರಕಿನ ಕೇಂದ್ರವಾಗಬೇಕು. ಆ ದಿಸೆಯಲ್ಲಿ ಸಹಕಾರರಂಗದ ಸರ್ವಸದಸ್ಯರು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾದ ಕಾಲ ಸನ್ನಿಹಿತವಾಗಿದೆ.

ರಾಧಾಕೃಷ್ಣ ಕೋಟೆ.
ಅಂಚೆ:ಕಳಂಜ 574212
ದ. ಕ . 9448503424(wattsapp call)