ಕೊಳವೆ ಬಾವಿಯಲ್ಲಿ ನೀರು ಸಿಕ್ಕಿಲ್ಲ ಎಂದ ತಕ್ಷಣ ಕೇಸಿಂಗ್ ಪೈಪ್ ತೆಗೆದು ಮುಚ್ಚಿ ಬಿಡಬೇಡಿ. ಕನಿಷ್ಠ ಒಂದು ವಾರ ಕಾಯಿರಿ. ನೀರು ಬರುವ ಸಾಧ್ಯತೆ ಇದೆ ಎಂಬುವುದು ಜಲ ಮರುಪೂರಣ ತಜ್ಞ ದೇವರಾಜ ರೆಡ್ಡಿಯವರ ಸಲಹೆ. ಕೊಳವೆಬಾವಿ (ಬೊರ್ವೆಲ್) ನಮಗೆಲ್ಲರಿಗೂ ಗೊತ್ತಿರುವ ವಿಚಾರ.ಆದರ ಸಂಶೋಧನೆ ಹೇಗೆ ನಡೆಯಿತು ಎಂಬುದರ ಬಗ್ಗೆ ತಿಳಿಯೋಣ.
70ರ ದಶಕದಲ್ಲಿ ಬಿ.ಪಿ. ರಾಧಾಕೃಷ್ಣ ಅವರ ಮೂಲಕ ಬೋರ್ವೆಲ್ ಸಂಸ್ಕೃತಿ ಆರಂಭಗೊಂಡಿತು. ಆರು ಅಡಿಯ ಬಾವಿಗಿಂತ 6 ಇಂಚಿನಲ್ಲಿ ನೀರು ಪಡೆಯಬಹುದು ಎಂದು ತೋರಿಸಿದರು. ಡೆನ್ಮಾರ್ಕ್ ಸರ್ಕಾರ ಇದಕ್ಕೆ ಬೆಂಬಲ ನೀಡಿತು. ಮೊದಲ ಬಾರಿ ರಿಗ್ ಬಂತು. ಅದರಲ್ಲಿ 24 ಮೀಟರ್ ಅಷ್ಟೇ ಕೊರೆಯಬಹುದಿತ್ತು. ಅದಕ್ಕೆ 2 ದಿನಗಳು ಹಿಡಿಯುತ್ತಿದ್ದವು. ಆನಂತರ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನದಟ್ಟು ಮಾಡಲಾಯಿತು. ಹಾಗಾಗಿ 100ಕ್ಕೂ ಅಧಿಕ ಭೂವಿಜ್ಞಾನಿಗಳನ್ನು ಏಕಕಾಲದಲ್ಲಿ ನೇಮಕ ಮಾಡಿಕೊಳ್ಳಲಾಯಿತು.ಗಣಿ ಮತ್ತು ಅಂತರ್ಜಲ ಇಲಾಖೆ ಆರಂಭಗೊಂಡಿತು.
ಅಂತರ್ಜಲ, ಮಳೆ ನೀರು ಪರಿಶುದ್ಧ.
ಅಂತರ್ಜಲ ಪರಿಶುದ್ದವಾದದ್ದು, ಆದರೆ ಕೊಳವೆ ಬಾವಿಯಲ್ಲಿ ಕಬ್ಬಿಣದ ಕೇಸಿನ್ ಪೈಪ್ ಹಾಕುವುದರಿಂದ ನೀರಿನಲ್ಲಿ ಕಬ್ಬಿಣದ ಅಂಶ ಅತಿಹೆಚ್ಚಾಗಿ ಕಾಣಬಹುದು. ಆರಂಭದಲ್ಲಿ ಒಳ್ಳೆಯ ನೀರು ಸಿಕ್ಕಿದರೂ ಸಮಯ ಕಳೆದಂತೆ ಕಬ್ಬಿಣದಂಶ ಜಾಸ್ತಿಯಾಗುತ್ತದೆ. ಗುಣಮಟ್ಟದ ಕೇಸಿನ್ ಪೈಪ್ ಅಳವಡಿಸಿದರೆ ಈ ಸಮಸ್ಯೆಯ ಕಡಿಮೆಯಾಗುತ್ತದೆ. ನೀರು ಮರುಪೂರಣದಮೂಲಕ ನೀರು ಗಡಸು ಆಗುವುದನ್ನು ತಪ್ಪಿಸಲು ಸಾಧ್ಯ.
ಹಿಂದೆ ಕೊಳವೆಬಾವಿಯನ್ನು ನಿಧಾನವಾಗಿ ಕೊರೆಯಲಾಗುತ್ತಿತ್ತು. ಒಂದು ರಾಡ್ ಇಳಿಸಲು ಒಂದು ಗಂಟೆ ಬೇಕಿತ್ತು. ಈಗ ಎಲ್ಲವೂ ವೇಗವಾಗಿದೆ. ಐದೇ ನಿಮಿಷಕ್ಕೆ ರಾಡ್ ಇಳಿಸಲು ಸಾಧ್ಯವಾಗುತ್ತದೆ. ಆಗ ಅರ್ಧ ಇಂಚು, ಒಂದಿಂಚು ನೀರು ಸಿಕ್ಕಿದರೂ ಅದುಹೊರಹಾಕುವ ಮಣ್ಣಿನ ದೂಳಿನೊಂದಿಗೆ ಬಂದು ಬಿಡುತ್ತದೆ. ಮಣ್ಣು ಕೆಸರಾದಂತೆ ಕಂಡರೂ ನೀರಿಲ್ಲ ಎಂದು ನಿರ್ಧರಿಸಿಬಿಡುವ ಅಪಾಯ ಇದೆ. ಒಂದಿಂಚು ನೀರು ಸಿಕ್ಕಿದರೆ ಒಂದು ಎಕರೆ ಜಾಗಕ್ಕೆ ಸಾಕಾಗುತ್ತದೆ.
ಕಾಲಬದಲಾದಂತೆ ಕೊಳವೆ ಬಾವಿಗಳ ಅವಲಂಬನೆ ಹೆಚ್ಚಿದೆ. ಇಂದಿನ ದಿನಗಳಲ್ಲಿ ಮನೆ ಕಟ್ಟುವ ಪ್ರತಿಯೊಬ್ಬರು ಬೊರ್ವೆಲ್ ಹಾಕಿಸಿಕೊಂಡ ನಂತರವೇ ಮನೆ ಕಟ್ಟಲಾರಂಬಿಸುತ್ತಾರೆ. ಬೊರ್ವೆಲ್ ನಲ್ಲಿ ನೀರು ಬರದಿದ್ದರೆ ಮತ್ತೊಂದು ಕಡೆ ಅಲ್ಲಿ ಸಹ ನೀರು ಬರದಿದ್ದರೆ ಮತ್ತೊಂದು ಕಡೆ ಹೀಗೆ ಬೊರ್ವೆಲ್ ಗಾಗಿ ಅತಿ ಹಣ ಮತ್ತು ಸಮಯ ವ್ಯರ್ಥ ಮಾಡುತ್ತಾರೆಂಬುದು ತಜ್ಞರ ಅಭಪ್ರಾಯ.
ಆದರೆ ಕೊಳವೆಬಾವಿ ತೆಗೆದ ಬಳಿಕ ಕೇಸಿಂಗ್ ಪೈಪ್ ತೆಗೆಯಬೇಕಿದ್ದರೆ ಒಂದು ವಾರ ಕಾಯಲೇಬೇಕು. ಯಾಕೆಂದರೆ ಆಮೇಲೂ ಒರತೆ ಬರಬಹುದು. ನೀರು ಸಿಗದ ಕೊಳವೆಬಾವಿಗೆ ಒಂದು ಟ್ಯಾಂಕರ್ ನೀರು ಬಿಡಬೇಕು. ಆ ನೀರನ್ನು ಕೊಳವೆಬಾವಿ ಹಿಡಿದಿಟ್ಟುಕೊಂಡರೆ ಅಲ್ಲಿ ನೀರು ಸಿಗಲು ಅವಕಾಶ ಇದೆ ಎಂದರ್ಥ. ನೀರು ಮರುಪೂರಣ ಮಾಡಲೂ ಸಾಧ್ಯವಿದೆ. ನೀರು ಹಿಡಿದಿಟ್ಟುಕೊಳ್ಳದಿದ್ದರೆ ಅಲ್ಲಿ ನೀರು ಮರುಪೂರಣವೂ ಸಾಧ್ಯವಿಲ್ಲ. ಕೊಳವೆಬಾವಿ ವಿಫಲವಾಗುತ್ತಿದ್ದಂತೆ ಇನ್ನೊಂದು ತೆಗೆಯುತ್ತಾ ಹೋದರೆ ಹಣವೂ ವ್ಯರ್ಥ. ಭೂಮಿಯಲ್ಲೆಲ್ಲ ರಂಧ್ರವಾಗುತ್ತದೆ. ನೀರಿನ ಕಣ್ಣುಗಳನ್ನೆಲ್ಲ ಬಂದ್ ಮಾಡಿದಂತಾಗುತ್ತದೆ. ವಿಫಲ ಕೊಳವೆಬಾವಿಗಳನ್ನು ಮುಚ್ಚಿಸುವ ಬದಲು ಉಳಿಸಲು ಪ್ರಯತ್ನ ಪಡಬೇಕು. ವಿಫಲವಾದ ಶೇ. 80ರಷ್ಟು ಕೊಳವೆಬಾವಿಗಳನ್ನು ಮರುಪೂರಣ ಮೂಲಕ ಸಫಲಗೊಳಿಸಲು ಸಾಧ್ಯವಿದೆ. ಶೇ 20ರಷ್ಟು ಮಾತ್ರ ಮತ್ತೆ ಬಳಕೆಗೆ ಸಾಧ್ಯವಾಗುವುದಿಲ್ಲ.
ರೆಡ್ಡಿ ಹೇಳಿದ ಯಶೋಗಾಥೆಗಳು.
ಹುಣಿಸೆಕೆರೆ ಮಲ್ಲೇಶಪ್ಪ ಎಂಬವರು 2001ರಿಂದ 2003ರ ನಡುವೆ ತಮ್ಮ 3 ಎಕರೆ ಜಮೀನಲ್ಲಿ ಏಳು ಕೊಳವೆಬಾವಿ ಕೊರೆಸಿದ್ದರು. ಏಳು ಕೂಡ ವಿಫಲವಾಗಿದ್ದವು. ಅವರು ಕೊಳವೆಬಾವಿಗಳ ಬಾಯಿ ಮುಚ್ಚಿ ಮೇಲಿಂದಷ್ಟೇ ಮಣ್ಣು ಹಾಕಿದ್ದರು. 2015ರಲ್ಲಿ ಅವರು ಈ ವಿಚಾರ ತಿಳಿಸಿದಾಗ ಎಲ್ಲಿದೆ ಬೋರು ಎಂದು ನಾನು ಹೋದೆ. ಅವರು ಮೇಲಿನ ಮಣ್ಣು ತೆಗೆದು ಅದರ ಬಾಯಿಯ ಮುಚ್ಚಳ ತೆಗೆದು
ನೋಡಿದಾಗ ಕೇವಲ 50 ಅಡಿಯಲ್ಲಿ ನೀರಿತ್ತು. ಆನಂತರ ನೀರು ಎತ್ತಲು ಆರಂಭಿಸಿದರು.
ಮಾಯಕೊಂಡ ಹೊನ್ನನಾಯಕನಹಳ್ಳಿ ಆನಂದನಾಯ್ಕ ಅವರು ತಮ್ಮ ಜಮೀನಿನಲ್ಲಿ 12-13 ಕೊಳವೆಬಾವಿ ಕೊರೆಸಿದರೂ ನೀರು ಸಿಕ್ಕಿರಲಿಲ್ಲ. ಕೊನೆಗೆ 4 ಲಕ್ಷ ವಿಮೆ ಮಾಡಿಸಿ ಸಾಯುವುದು ಎಂದು ಅವರು ನಿರ್ಧರಿಸಿದ್ದರು. ಇದರ ನಡುವೆ ನನ್ನ ಸಂಪರ್ಕಕ್ಕೆ ಬಂದಿದ್ದರಿಂದ ನೀರು ಮರುಪೂರಣ ಮಾಡುವ ಸಲಹೆ ನೀಡಿದೆ. 30 ಸಾವಿರ ಖರ್ಚು ಮಾಡಿ ನೀರು ಮರುಪೂರಣ ಮಾಡಿದರು. ಸಾಯಲು ಹೊರಟವರ ಬದುಕೇ ಬದಲಾಗಿ ಹೋಯಿತು. ನಾನಾ ಬೆಳೆಗಳಿಂದ ಆದಾಯ ಗಳಿಸುತ್ತಿದ್ದಾರೆ. ಕೃಷಿ ಪಂಡಿತ ಸಹಿತ ಹಲವು ಪ್ರಶಸ್ತಿ ಪಡೆದಿದ್ದಾರೆ.
ಇನ್ನು ಇಂತಹ ಅನೇಕ ಅನುಭವಗಳನ್ನು ಹಂಚಿ ಕೊಂಡಿದ್ದಾರೆ.
ಕೊಳವೆಬಾವಿ ತೋಡಲು 25 ಸಾವಿರಕ್ಕೂ ಅಧಿಕ ಪಾಯಿಂಟ್ ನಾನು ಹೇಳಿರಬಹುದು. ಚನ್ನಗಿರಿಯಲ್ಲಿ ಸಮೃದ್ಧ ನೀರು ಸಿಗುತ್ತಿತ್ತು. ಕೊಳವೆಬಾವಿ ಕೊರೆಯುವ 65 ಮೆಶಿನ್ಗಳು ಆ ತಾಲ್ಲೂಕು ಒಂದರಲ್ಲಿಯೇ ಇದ್ದವು. ಆದರೂ ಬೇಡಿಕೆ ಇನ್ನಷ್ಟು ಇದ್ದವು. ರೆಡ್ಡಿಯವರು ತೋರಿಸಿದ ಜಾಗಗಳಲ್ಲೆಲ್ಲ ಬೇಕಾದಷ್ಟು ನೀರು ಸಿಗುತ್ತಿದ್ದವು. ಹಾರ ತಂದು ಹಾಕುವುದು, ಸಿಹಿ ಹಂಚುವುದೆಲ್ಲ ರೈತರು ಮಾಡುತ್ತಿದ್ದರು. ಆದರೆ ಒಂದುವಾರ, 15 ದಿನಗಳನ್ನು ಬಿಟ್ಟು ನೋಡಿದರೆ ನೀರು ಖಾಲಿ ಆಗುತ್ತಿದ್ದವು. 5 ಇಂಚು ನೀರು ಸಿಕ್ಕಿದ್ದು ಇಷ್ಟು ಬೇಗ ನಿಂತು ಹೋಯಿತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಬಳಿಕ ಅದರ ಅಧ್ಯಯನ ಮಾಡಬೇಕಾಯಿತು.
ಮಳೆ ನೀರು ನೇರವಾಗಿ ಅಂತರ್ಜಲ ಸೇರಲ್ಲ. ಹಾಗೆಯೇ ಭೂಮಿಯೊಳಗೆ ಸಾಗರ, ನದಿ, ಹೊಳೆಗಳಂತೆ ನೀರು ಹರಿಯುತ್ತಿರುತ್ತದೆ ಎಂಬ ನಂಬಿಕೆ ಕೂಡ ಸರಿಯಾದುದು ಅಲ್ಲ. ಶಿಲೆಗಳ ನಡುವೆ ಇರುವ ಬಿರುಕು, ಸೀಳುಗಳ ಮೂಲಕ ಒಂದೊಂದೇ ಹನಿ ನೀರು ಹೋಗಿ ಸಂಗ್ರಹವಾಗಿರುವುದೇ ಅಂತರ್ಜಲ. ಬೋರ್ವೆಲ್ ಹೆಚ್ಚೆಚ್ಚು ತೋಡಿದಷ್ಟು ನೀರು ಖಾಲಿ ಆಗುತ್ತಾ ಹೋಗುತ್ತದೆ. ಕೊಳವೆಬಾವಿಗಳನ್ನು ಮರುಪೂರಣ ಮಾಡುತ್ತಾ ಹೋದಂತೆ ಮತ್ತೆ ನೀರು ತುಂಬಿಕೊಳ್ಳುತ್ತದೆ.
ಜಲ ಹಾಳು ಮಾಡಿದ ಟ್ರ್ಯಾಕ್ಟರ್ ಸಂಸ್ಕೃತಿ.
ಎತ್ತಿನ ಮೂಲಕ ಉಳುಮೆ ಮಾಡುತ್ತಿದ್ದಾಗ ನೀರಿನ ಕೊರತೆ ಅಷ್ಟೊಂದು ಇರಲಿಲ್ಲ. ಹೊಲಗದ್ದೆಗಳು ಪದರ ಪದರಗಳಾಗಿದ್ದವು. ಬದುಗಳಿದ್ದವು. ನೀರು ಭೂಮಿಯಲ್ಲಿ ಇಂಗುತ್ತಿತ್ತು. ಟ್ರ್ಯಾಕ್ಟರ್ ಉಳುಮೆ ಆರಂಭಗೊಂಡಾಗ ಎಲ್ಲ ಹೊಲಗದ್ದೆಗಳನ್ನು ಒಂದೇ ಸಮತಟ್ಟು ಮಾಡತೊಡಗಿದರು. ನೀರು ಇಂಗುವುದು ಕಡಿಮೆ ಆಯಿತು.
ಇಂಗು ಗುಂಡಿ ಮುಖ್ಯ.
ಕರ್ನಾಟಕವು ಗಟ್ಟಿ ಶಿಲಾ ವಲಯವಾಗಿದೆ. ಇಲ್ಲಿ ವೈಜ್ಞಾನಿಕವಾಗಿ ಇಂಗುಗುಂಡಿಗಳನ್ನು ಮಾಡಿದರೆ ಅಂತರ್ಜಲ ಹೆಚ್ಚುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಂಜುಶ್ರೀ ಅವರು ಸಿಇಒ ಆಗಿದ್ದ ಸಮಯದಲ್ಲಿ ಕುಡಿಯುವ ನೀರಿನ ಬಳಕೆಯ ಕೊಳವೆಬಾವಿಗಳನ್ನು ಜಲಮರುಪೂರಣ ಮಾಡಲಾಯಿತು. ಒಂದೇ ವರ್ಷದಲ್ಲಿ 5 ಸಾವಿರ ಕೊಳವೆಬಾವಿಗಳು ಮರುಪೂರಣಕ್ಕೆ ಸಿದ್ಧವಾದವು. ಕೆಲವು
ಸಣ್ಣಪುಟ್ಟ ಲೋಪ ಬಿಟ್ಟರೆ ಯಶಸ್ವಿಯಾಯಿತು.
ಬೋರ್ವೆಲ್ಗಿಂತ 30 ಅಡಿ ದೂರಲ್ಲಿ ಹೊಂಡ, ಕೃಷಿ ಹೊಂಡಗಳನ್ನು ಮಾಡಬೇಕು. ಅದರಲ್ಲಿ ನೀರು ತುಂಬಿದ ಬಳಿಕ ಬೋರ್ವೆಲ್ ಕಡೆಗೆ ನೀರು ಹರಿಯುವಂತೆ ಮಾಡಬೇಕು. ಬೋರ್ವೆಲ್ನ ಸುತ್ತ 8 ಅಡಿ ಆಳ, 8 ಅಡಿ ಉದ್ದ, 8 ಅಡಿ ಅಗಲದಲ್ಲಿ ಇಂಗುಗುಂಡು ನಿರ್ಮಿಸಬೇಕು. ದೊಡ್ಡಕಲ್ಲು, ಸಣ್ಣ ಕಲ್ಲು, ಜಲ್ಲಿ ಮರಳು ಬಳಸಿ ನೀರು ಶುದ್ಧವಾಗುವಂತೆ ಮಾಡಬೇಕು. ಆ ನೀರು ಕೊಳವೆ ಬಾವಿಯೊಳಗೆ ಇಳಿಯಬೇಕು ಎಂದು ವಿವರಿಸಿದರು.
ಜಲಾಶಯ ಬಳಿಯ ಬೋರ್ನೆಲ್ನಲ್ಲೇ ನೀರಿಲ್ಲ.
ಜಲಾಶಯ, ಕೆರೆಗಳ ಪಕ್ಕದಲ್ಲಿರುವ ಎಲ್ಲಾ ಕೊಳವೆಬಾವಿಗಳಲ್ಲೂ ನೀರು ಬರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇಂಗುವ ನೀರು ಕೊಳವೆಬಾವಿಯ ಜಲಸ್ತರದ (ಅಕ್ವಿಫರ್) ಜೊತೆಗೆ ಸಂಪರ್ಕ ಹೊಂದಿದ್ದರೆ ಮಾತ್ರ ನೀರು ಸಿಗಲಿದೆ ಎಂದು ಜಲತಜ್ಞ ದೇವರಾಜ ರೆಡ್ಡಿ ಅಭಿಪ್ರಾಯಪಡುತ್ತಾರೆ.
‘ತುಂಗಭದ್ರಾ ಜಲಾಶಯದಲ್ಲಿ ನೀರು ಕಡಿಮೆಯಾದಾಗ ರೈತರು ಕಲ್ಲಂಗಡಿಯಂತಹ ಬೇಸಿಗೆ ಬೆಳೆ ಬೆಳೆಯಲು ಮುಂದಾಗುತ್ತಾರೆ. ಕೊಳವೆಬಾವಿ ಕೊರೆಸಿದರೆ ನೀರು ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ರೈತರು ನನ್ನನ್ನು ಬೋರ್ ಪಾಯಿಂಟ್ ಮಾಡಿಸಲು ಕರೆದುಕೊಂಡು ಹೋಗಿದ್ದರು. ಪರಿಶೀಲಿಸಿದ ಬಳಿಕ ಇಲ್ಲಿ 800 ಅಡಿಗೂ ನೀರು ಸಿಗಲ್ಲ ಎಂದು ಹೇಳಿದೆ. ಆದರೆ, ಆಶ್ಚರ್ಯಪಟ್ಟ ರೈತರು, ನೀವು ನಿಂತಿರುವುದು ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶ. ಇಲ್ಲಿ 50 ಅಡಿ ನೀರು ನಿಲ್ಲುತ್ತದೆ. ಇಲ್ಲೇ ನೀರು ಬೀಳುವುದಿಲ್ಲ ಎನ್ನುತ್ತಿದ್ದೀರಲ್ಲ ಎಂದು ಪ್ರಶ್ನಿಸಿದರು. ನಾನು ಒಂದು ಕಿ.ಮೀ ಸುತ್ತಲೂ ನೀರು ಸಿಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ನನ್ನ ಮಾತು ಕೇಳದೇ ಯಾರದ್ದೋ ಸಲಹೆ ಪಡೆದು ಕೊಳವೆಬಾವಿ ಕೊರೆಸಿದರು. ಬರಿ ಪೌಡರ್ ಬಂತೇ ವಿನಾ ನೀರು ಸಿಗಲಿಲ್ಲ’ ಎಂದು ತಮ್ಮ ಅನುಭವ ಹಂಚಿಕೊಂಡರು.
ಜಲಾಶಯಕ್ಕೂ ಅಂತರ್ಜಲಕ್ಕೂ ಸಂಬಂಧವಿಲ್ಲ. ಕಲ್ಲಿನಲ್ಲಿ ಪೊಟರೆಗಳಿದ್ದರೆ ಅವು ಜಲಸ್ತರಗಳ ಮೂಲಕ ಹೋಗಿ ಅಂತರ್ಜಲ ಮಟ್ಟ ಹೆಚ್ಚಾಗಬಹುದು. ಆದರೆ, ಜಲಸ್ತರಗಳೇ ಇಲ್ಲದಿದ್ದರೆ ನೀರಿನ ಮಟ್ಟ ಹೆಚ್ಚಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಎಷ್ಟೋ ವರ್ಷಗಳ ಹಿಂದೆ ಶೇಖರಣೆಗೊಂಡಿರುವ ನೀರು ಕೊಳವೆಬಾವಿಗಳಲ್ಲಿ ಸಿಗುತ್ತವೆ. ಕೆರೆಗಳಲ್ಲಿ ನೀರು ತುಂಬಿಸಿದ ತಕ್ಷಣ ಎಲ್ಲಾ ಕೊಳವೆಬಾವಿಗಳೂ ಮರುಪೂರಣಗೊಳ್ಳುವುದಿಲ್ಲ. ಮಳೆ, ಕೆರೆ ಹಾಗೂ ಜಲಸ್ತರಗಳಿಗೆ ನೇರವಾಗಿ ಸಂಪರ್ಕ ಇರುವುದಿಲ್ಲ ಎಂದರು.
‘ಜಲದ ಕಣ್ಣು ಮುಚ್ಚಬೇಡಿ’
‘ಕೊಳವೆಬಾವಿ ಕೊರೆಸುವಾಗ ಸಡಿಲ ಮಣ್ಣು ಇರುವವರೆಗೂ ಕೇಸಿಂಗ್ ಪೈಪ್ಗಳನ್ನು ವಿಜ್ಞಾನಿಗಳು ಹಾಕಿಸುತ್ತಿದ್ದಾರೆ. ಕಲ್ಲು ಬಂದ ಬಳಿಕ ಕೇಸಿಂಗ್ ಪೈಪ್ ನಿಲ್ಲಿಸಲಾಗುತ್ತಿದೆ. 80 ಅಡಿವರೆಗೂ ಮಣ್ಣು ಸ್ಪಂಜಿನಂತೆ ಇರಲಿದ್ದು, ಇದು ನೀರನ್ನು ಹೀರಿಕೊಳ್ಳುತ್ತದೆ. ಇಲ್ಲಿ ಕೇಸಿಂಗ್ ಪೈಪ್ ಹಾಕಿ, ಜಲದ ಸಣ್ಣ ಸಣ್ಣ ಕಣ್ಣುಗಳನ್ನು ಮುಚ್ಚುತ್ತಿದ್ದೇವೆ’ ಎಂದು ದೇವರಾಜ ರೆಡ್ಡಿ ಹೇಳಿದರು.
‘ಕಲ್ಲು ಬಂಡೆಗಳಲ್ಲಿರುವ ನೀರನ್ನು ಹುಡುಕುತ್ತಿದ್ದೇವೆ. ಅದರ ಬದಲು ನೀರು ಒಳಗೆ ಹೋಗುವಂತಹ ರಂಧ್ರ ಇರುವ ಕೇಸಿಂಗ್ ಪೈಪ್ಗಳನ್ನು ಹಾಕಿದರೆ ಮಳೆನೀರು ಇಂಗಿ ಅರ್ಧ ಇಂಚು ನೀರಾದರೂ ಕೊಳವೆಬಾವಿಗಳಲ್ಲಿ ಬರಲು ಸಾಧ್ಯವಿದೆ. ಇರುವ ಹಳೆಯ ಕೇಸಿಂಗ್ ಪೈಪ್ಗಳ ಒಳಗೆ ಯಂತ್ರವನ್ನು ಬಿಟ್ಟು ಸಣ್ಣ ಸಣ್ಣ ರಂದ್ರ ಮಾಡುವ ಹೊಸ ತಂತ್ರಜ್ಞಾನ ಬಂದಿದೆ. ರಂಧ್ರ ಮಾಡುತ್ತಿರುವಾಗಲೇ ನೀರು ಬಂದಿರುವಂತಹ ಉದಾಹರಣೆಗಳೂ ನಮ್ಮೆದುರಿಗೆ ಇವೆ. ಮೇಲ್ಪದರದ ನೀರನ್ನು ಬಿಟ್ಟು ಅಂತರ್ಜಲವನ್ನು ತೆಗೆಯಲು ಹೋಗುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕೃಪೆ: https://www.facebook.com/100003468005926/posts/pfbid0GD2CZ8bkoXUsoNENpn17dpABdEH5dAKpf5SzMgvPXXdpkrHdJf8PmfkxVQduBavhl/?mibextid=Nif5oz
https://www.prajavani.net/news/karnataka-news/wait-if-water-not-available-628378.html.
ಮರು ಪ್ರಕಟಿತ ಲೇಖನ.
ಸಹಕಾರ ಸ್ಪಂದನ.