
ಸಮಾಜದ ಕಟ್ಟ ಕಡೆಯ ವ್ಯಕ್ತಿಯ ವರೆಗೂ ಮುಟ್ಟುವ ವ್ಯವಸ್ಥೆಯೆಂದರೆ ಅದು ಸಹಕಾರಿ ಕ್ಷೇತ್ರ. ಪ್ರಜಾಪ್ರಭುತ್ವ ರೀತಿಯ ವ್ಯವಸ್ಥೆ. ಎಲ್ಲರೂ ಸಮಾನರು. ಒಂದು ಶೇರು ಇದ್ದವನಿಗೂ ಒಂದು ಮತ. ಸಾವಿರ ಶೇರು ಹೊಂದಿದ ಸದಸ್ಯನಿಗೂ ಮತದಾನದ ಸಮಯದಲ್ಲಿ ಒಂದೇ ಮತದ ಹಕ್ಕು. ಗ್ರಾಮೀಣ ಪ್ರದೇಶದಲ್ಲಿ ತನ್ನ ಅಸ್ತಿತ್ವ ಹೊಂದಿರುವ ಒಂದು ಸಹಕಾರಿ ಸಂಘ ಒಂದು ಪ್ರದೇಶದ ಪರಿಮಿತಿಯಲ್ಲಿ ಕೆಲಸ ನಿರ್ವಹಿಸುತ್ತದೆ, ತನ್ನ ಸದಸ್ಯರಿಗೆ ಸೇವೆ ಒದಗಿಸುತ್ತದೆ. ತನ್ನ ಸದಸ್ಯರಿಂದ ಠೇವಣಿ, ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹಿಸಿ ಸಾಲ ರೂಪದಲ್ಲಿ ಸದಸ್ಯರಿಗೆ ಕೊಡುವುದು. ಸಾಲ ಮರುಪಾವತಿ ಸಮಯದಲ್ಲಿ ವಿಧಿಸುವ ಬಡ್ಡಿಯಿಂದ ಆರ್ಥಿಕ ಶಕ್ತಿಯನ್ನು ಕ್ರೋಢೀಕರಿಸುವುದು ಸಹಕಾರಿ ಸಂಘಗಳ ಕಾರ್ಯಶೈಲಿ.
ಕೇವಲ ಬ್ಯಾಂಕಿಂಗ್ ವ್ಯವಸ್ಥೆ ಸಹಕಾರಿ ಸಂಘದ ಅಸ್ತಿತ್ವಕ್ಕೆ ಸಹಕಾರಿ ಆಗದು. ಇದನ್ನು ಮಾತ್ರ ಒಪ್ಪಿಕೊಂಡು ಬೇರೆ ಸೇವೆಗಳ ಬಗ್ಗೆ ಗಮನ ಕೊಡದವರು ಭವಿಷ್ಯದಲ್ಲಿ ಕಷ್ಟ ಪರಂಪರೆಯನ್ನು ಅನುಭವಿಸಬೇಕಾಗಬಹುದು. ಯಾಕೆಂದರೆ ಸಹಕಾರಿ ಸಂಘದ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಕೇವಲ ಠೇವಣಿ ಸಂಗ್ರಹ, ಸಾಲ ನೀಡಿಕೆ, ಸಾಲ ವಸೂಲಾತಿಯಿಂದ ಸಾಧ್ಯ ಆಗದ ದಿನಗಳು ಬರಲಿವೆ. ಎಷ್ಟು ಸಾಧ್ಯವೋ ಅಷ್ಟು ಸೇವೆಗಳನ್ನು ಹೊಂದಿ ಲಾಭಾಂಶ ಹೆಚ್ಚು ಮಾಡುವ ಅನಿವಾರ್ಯತೆ ಇದೆ.
ಗ್ರಾಮೀಣ ಪ್ರದೇಶದ ತನ್ನ ಸದಸ್ಯರು ಬಯಸಿದ ಸೇವೆಗಳನ್ನು ಒದಗಿಸಿದಾಗ ಸಹಕಾರಿ ಸಂಘವೂ ಸ್ವಾವಲಂಬಿಯಾಗಿ ಬಲಾಢ್ಯ ಆಗುತ್ತದೆ, ಜೊತೆಗೆ ಗ್ರಾಮೀಣ ಪ್ರದೇಶದ ಜನರು ಕೂಡ ಸ್ವಾವಲಂಬಿ ಜೀವನ ನಡೆಸಲು ಕಾರಣವಾಗುತ್ತದೆ.
ತನ್ನ ಪ್ರದೇಶದ ಸರ್ವತೋಮುಖ ಬೆಳವಣಿಗೆಗೆ ಒಂದು ಸಹಕಾರಿ ಸಂಘ ಕಟಿಬದ್ಧವಾಗಬೇಕು. ತನ್ನ ಸದಸ್ಯರ ನಿತ್ಯ ಜೀವನ ನಿರ್ವಹಣೆಯಲ್ಲಿ ಸಹಕಾರಿ ಸಂಘದ ಛಾಪು ಎದ್ದು ಕಾಣಬೇಕು.
ಕೃಷಿ,ಹೈನುಗಾರಿಕೆ, ಜೇನು ವ್ಯವಸಾಯ, ವ್ಯಾಪಾರ ವ್ಯವಹಾರ, ರಸ್ತೆ ಮತ್ತು ಸಾರಿಗೆ, ವೈದ್ಯಕೀಯ, ಶಿಕ್ಷಣ, ವಿದ್ಯುತ್, ದೂರ ಸಂಪರ್ಕ, ಶುದ್ಧ ಕುಡಿಯುವ ನೀರು ಮುಂತಾದವುಗಳ ಬಗ್ಗೆ ಪ್ರಾಥಮಿಕ ಸಹಕಾರಿ ಸಂಘವೊಂದು ಕಾರ್ಯಯೋಜನೆಗಳನ್ನು ಹಮ್ಮಿಕೊಂಡು ಕಾರ್ಯನಿರ್ವಹಿಸಿದರೆ ಅದೊಂದು ಅದ್ಭುತ ಬದಲಾವಣೆಗೆ ಮತ್ತು ಉತ್ಪಾದನೆಯನ್ನು ದ್ವಿಗುಣಗೊಳಿಸುವ ಪ್ರಧಾನಮಂತ್ರಿ ಮೋದಿಯವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ದೊಡ್ಡ ಕೊಡುಗೆಯಾಗಬಹುದು.
ಯುವಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸ್ವದ್ಯೋಗ, ಗುಡಿಕೈಗಾರಿಕೆ, ಕೃಷಿಯಲ್ಲಿ ಹೊಸತನವನ್ನು ತರುವ ಕೆಲಸಗಳನ್ನು ಸಹಕಾರಿ ಸಂಘಗಳು ಹಮ್ಮಿಕೊಂಡರೆ ಯುವ ಶಕ್ತಿ ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಂಡು ಅಭಿವೃದ್ಧಿಯ ಹರಿಕಾರರಾಗಬಹುದು.
ಹೆಚ್ಚಾಗಿ ಗ್ರಾಮೀಣ ಪ್ರದೇಶದ ಮನೆಗಳಿಂದು ಅರುವತ್ತು ದಾಟಿದ ಹಿರಿಯ ನಾಗರಿಕರಿರುವ ಬೀಡಾಗಿದೆ. ಅವರ ಕೃಷಿಗೆ ಬೇಕಾದ ಗೊಬ್ಬರ, ಕೃಷಿ ಪರಿಕರಗಳನ್ನು, ಅಕ್ಕಿ, ದಿನಸಿಗಳನ್ನು ಅವರ ಮನೆಬಾಗಿಲಿಗೆ ಸಾಗಿಸಿ ಪೂರೈಸುವುದು, ಅವರು ಬೆಳೆದ ತರಕಾರಿ, ಕೃಷಿ ಉತ್ಪನ್ನಗಳನ್ನು ತಂದು ಸಹಕಾರಿ ಸಂಘದ ಮೂಲಕ ಮಾರಾಟಮಾಡುವುದು ಮುಂತಾದ ಸೇವೆಗಳನ್ನು ಸಹಕಾರಿ ಸಂಘಗಳು ಒದಗಿಸಿದರೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ವೇಗ ಹೆಚ್ಚಿ ತನ್ಮೂಲಕ ದೇಶದ ಆರ್ಥಿಕತೆ ಸಬಲವಾಗಬಹುದು.
ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಸಹಕಾರಿ ಸಂಘ ಸದೃಢಗೊಳಿಸಲು ಸಹಕಾರಿ ಸಾರಿಗೆ, ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ, ತರಕಾರಿ ಮತ್ತು ಬತ್ತದ ಬೀಜಗಳ ವಿತರಣೆ, ಗದ್ದೆ ಬೇಸಾಯಕ್ಕೆ ಮತ್ತು ಹೈನುಗಾರಿಕೆಗೆ ಬೇಕಾದ ಆರ್ಥಿಕ ಸಹಕಾರ ನೀಡುವುದು ಮುಂತಾದವು ಸಹಕಾರಿ ಸಂಘ ಮಾಡಬಹುದಾದ ಕಾರ್ಯಗಳು.
ಮನೆ ಮನೆಗೆ ಸೋಲಾರ್ ಪ್ಯಾನೆಲ್ ಅಳವಡಿಸಿ ಮನೆ ಬಳಕೆಗೆ, ಗ್ರಾಮೀಣ ರಸ್ತೆಗಳಿಗೆ ದೀಪ ಅಳವಡಿಸಲು ಸಹಕಾರಿ ಸಂಘ ನೆರವಾಗಬಹುದು.
ಸಹಕಾರಿ ಕ್ಷೇತ್ರದಲ್ಲಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು
ಸಹಕಾರಿ ಕ್ಷೇತ್ರ ಮುಟ್ಟದ ವಿಷಯಗಳಿಲ್ಲ. ಒಂದು ಗ್ರಾಮೀಣ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಸಹಕಾರಿ ಸಂಘ ತನ್ನ ಪ್ರದೇಶದ ಜನರ ಆರೋಗ್ಯದತ್ತ ಕಾಳಜಿ ವಹಿಸ ಬಹುದು. ಹತ್ತು ಹಾಸಿಗೆಗಳ ಒಂದು ಆಸ್ಪತ್ರೆ. ಎಲ್ಲ ಸುಸಜ್ಜಿತ ವ್ಯವಸ್ಥೆ. ವಾರದ ಎಲ್ಲ ದಿನಗಳಲ್ಲಿ ವಿಶೇಷ ಪರಿಣತ ವೈದ್ಯರು ಬೇರೆ ಬೇರೆ ಕಡೆಯಿಂದ ಬಂದು ವೈದ್ಯಕೀಯ ತಪಾಸಣೆ ಮಾಡುವಂತೆ ಯೋಜನೆ ರೂಪಿಸಬಹುದು. ಸಹಕಾರಿ ಸಂಘದ ಸದಸ್ಯರಿಗೆ ವೈದ್ಯಕೀಯ ಸೇವೆಗೆ ಕೊಂಚ ರಿಯಾಯಿತಿ ತೋರಿಸಬಹುದು.
ಗ್ರಾಮೀಣ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವ್ಯವಸ್ಥೆ ಹೆಚ್ಚಾಗಿ ಇರುವುದಿಲ್ಲ. ಬೇಕಾದಷ್ಟು ಕಟ್ಟಡ, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಬಯಲು ರಂಗಭೂಮಿ, ಸಂಪರ್ಕ ರಸ್ತೆ, ವಿದ್ಯುತ್ ಅಥವಾ ಸೋಲಾರ್ ವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಸಹಕಾರಿ ಸಂಘ ಒದಗಿಸಿಕೊಡಬಹುದು. ಶಾಲಾ ಶುಲ್ಕ ಸ್ವೀಕರಿಸುವುದು ಮತ್ತು ಶಾಲೆಯ ಖರ್ಚು ವೆಚ್ಚಗಳನ್ನು ಭರಿಸುವ ಜವಾಬ್ದಾರಿ ಸಹಕಾರಿ ಸಂಘವೇ ಮಾಡಬಹುದು. ಕಲಿಯುವ ವಿದ್ಯಾರ್ಥಿಗಳು ಬಯಸಿದಲ್ಲಿ ಕಲಿಕಾ ಸಾಮಾಗ್ರಿಗಳ ಖರೀದಿಗೆ ಸಾಲ ಸೌಲಭ್ಯ, ಪ್ರತಿ ವಿದ್ಯಾರ್ಥಿ ಕಡ್ಡಾಯವಾಗಿ ಸಹಕಾರಿ ಸಂಘದಲ್ಲಿ ಖಾತೆ ಹೊಂದುವುದು ಮುಂತಾದ ಮಾರ್ಗೋಪಾಯಗಳಿಂದ ಖರ್ಚು ವೆಚ್ಚಗಳನ್ನು ಸಹಕಾರಿ ಸಂಘಗಳು ಸರಿದೂಗಿಸಬಹುದು.
ಶಂ.ನಾ.ಖಂಡಿಗೆ