“ಶಿಕ್ಷಕರಾದವರು ಮಕ್ಕಳ ಮನಸ್ಸಿನಲ್ಲಿ ಕನಸುಗಳನ್ನು ಬಿತ್ತುವವರಾದರೆ, ನಮ್ಮ ದೇಶದ ಭವಿಷ್ಯವು ಉಜ್ವಲವಾಗುತ್ತದೆ. ಅದಕ್ಕೇ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಕರೆಂದರೆ ಅವರನ್ನು ಕೇವಲ ಉದ್ಯೋಗಿಗಳು ಎಂದು ಪರಿಗಣಿಸಿಲ್ಲ. ಅವರನ್ನು ಸಮಾಜದ ಗೌರವ ಪ್ರದಾನವಾಗುವಂತೆ ವ್ಯವಸ್ಥೆಯಲ್ಲಿ ಗುರುತಿಸಲಾಗಿದೆ. ಆ ಗೌರವಯುತ ವ್ಯವಸ್ಥೆಯನ್ನು ಎಷ್ಟು ಸಮರ್ಥವಾಗಿ ಇಂದು ಕಾಪಾಡಿಕೊಳ್ಳಲಾಗಿದೆ ಎಂಬುದು ಚರ್ಚಾರ್ಹ ಸಂಗತಿಯಾಗಿರಬಹುದು…… “
ಮನುಷ್ಯನ ಜೀವನದಲ್ಲಿ ಅತೀ ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುವುದು ಬಾಲ್ಯ. ಆ ಬಾಲ್ಯದಲ್ಲಿ ಅಪ್ಪ– ಅಮ್ಮ ಮತ್ತು ಸ್ನೇಹಿತರ ಹೊರತಾಗಿ ನೆನಪಿರುವುದೆಂದರೆ ಶಾಲೆ ಮತ್ತು ಅಲ್ಲಿ ಪಾಠ ಮಾಡುವ ಶಿಕ್ಷಕರು. ಸಹಪಾಠಿಗಳ ಸ್ನೇಹದ ಬಳಗ. ಮಕ್ಕಳ ಮನಸ್ಸಿನಲ್ಲಿ ಈ ನೆನಪುಗಳು ಸದಾ ಹಸಿರಾಗಿರಲಿ ಎಂದು ಎಲ್ಲ ಪೋಷಕರೂ ಬಯಸುತ್ತಾರೆ. ಆದರೆ ಆ ನಿಟ್ಟಿನಲ್ಲಿ ಒಂದು ವ್ಯವಸ್ಥೆಯನ್ನು ರೂಪಿಸುವುದು ಸುಲಭವಾದ ಕೆಲಸವಲ್ಲ. ಪೋಷಕರು ಮತ್ತು ಸ್ನೇಹಿತರ ವಲಯಕ್ಕೆ ಸಂಬಂಧಿಸಿದಂತೆ ವ್ಯವಸ್ಥೆಯನ್ನು ರೂಪಿಸುವುದು ಕಷ್ಟಸಾಧ್ಯ. ಆದರೆ ಶಿಕ್ಷಕರ ಕ್ಷೇತ್ರವು ಸುಗಮವಾಗಿಯೂ, ಕ್ರಿಯಾಶೀಲವಾಗಿ, ಉತ್ಸಾಹದಿಂದ ಇರುವಂತೆ ನೋಡಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ಅದಕ್ಕಾಗಿ ಆಡಳಿತ ವರ್ಗವು ಸ್ವಲ್ಪ ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಸಾಕು.
‘ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನದ ಸಂದರ್ಭದಲ್ಲಿ ಶಿಕ್ಷಕರ ದಿನವನ್ನು ಆಚರಿಸುತ್ತಿರುವಾಗ ಈ ಆಲೋಚನೆಗಳು ಸಹಜವಾಗಿ ಮನಸ್ಸಿಗೆ ಬರುತ್ತವೆ. ಒಮ್ಮೆ ವಿಚಾರ ಮಾಡಿ ನೋಡಿ, ಶಿಕ್ಷಕರ ದಿನಾಚರಣೆ ಎಂದ ತಕ್ಷಣ ಸರ್ವಪಲ್ಲಿ ರಾಧಾಕೃಷ್ಣ ಅವರ ಹೆಸರು ನೆನಪಿಗೆ ಬರುತ್ತದೆ. ಅನಂತರ ನಮ್ಮ ಮನಸ್ಸಿಗೆ ತಕ್ಷಣಕ್ಕೆ ಹೊಳೆಯುವ ಹೆಸರೆಂದರೆ ಅದು ವಿಜ್ಞಾನಿ, ಮಾಜಿ ರಾಷ್ಟ್ರಪತಿ ಎ.ಪಿ.ಜೆ. “ಅಬ್ದುಲ್ ಕಲಾಂ” ಅವರು. ಏಕೆ ಹೀಗೆ. ಹಲವಾರು ಮಂದಿ ವಿಜ್ಞಾನಿಗಳು ಈ ದೇಶದಲ್ಲಿ ಆಗಿ ಹೋದರು. ದೊಡ್ಡ ದೊಡ್ಡ ಹುದ್ದೆಯನ್ನೇರಿದ ಸಾಧಕರು ಸಾಕಷ್ಟು ಮಂದಿಯಿದ್ದಾರೆ. ಆದರೆ ಅಬ್ದುಲ್ ಕಲಾಂ ಅವರು ನೆನಪಿನಲ್ಲಿ ಉಳಿಯುವುದಕ್ಕೆ ಕಾರಣ ಅವರೊಬ್ಬ ಕನಸುಗಾರರಾಗಿದ್ದರು. ಸಮರ್ಥವಾದ ತಾರ್ಕಿಕತೆಯ ಶಕ್ತಿಯನ್ನು ಹೊಂದಿದ್ದ ಅವರು, ದೇಶದ ಜನತೆಯ ಮುಂದೆ ಒಂದು ಗುರಿಯನ್ನು ಇರಿಸಬಲ್ಲವರಾಗಿದ್ದರು. ಯುವಪೀಳಿಗೆಯನ್ನು ಹೀಗಳೆಯದೇ, ನಮ್ಮಲ್ಲಿ ಇರುವ ಶಕ್ತಿ ಮತ್ತು ಸಂಪನ್ಮೂಲವನ್ನು ಬಳಸಿಕೊಂಡು ಏನೇನು ಸಾಧನೆ ಮಾಡಬಹುದು ಎಂಬುದನ್ನು ಯೋಚಿಸಿ ಎಂಬ ಮಾರ್ಗದರ್ಶನ ಮಾಡುತ್ತಿದ್ದರು. ಸಾಧನೆ, ಯಶಸ್ಸು ಎಂಬುದು ಯಾವುದೋ ವಿಜ್ಞಾನದ ಯಾವುದೋ ಅತ್ಯುನ್ನತ ಸಂಸ್ಥೆಗೆ ಸೀಮಿತವಾದ ವಿಚಾರವಲ್ಲ. ಎಲ್ಲರೂ ತಮ್ಮ ಮಟ್ಟದಲ್ಲಿ ಸಾಧನೆ ಮಾಡಿ ರಾಷ್ಟ್ರದ ಒಟ್ಟು ಪ್ರಗತಿಗೆ ಕೊಡುಗೆಯನ್ನು ಕೊಡಬಹುದು ಎಂಬ ಪುಟ್ಟ ಪುಟ್ಟ ಕನಸುಗಳನ್ನು ಬಿತ್ತಿದವರು.
ಭಾರತ 2020 ಎಂಬ ಧ್ಯೇಯವಾಕ್ಯವನ್ನು ಅವರು ಕೊಟ್ಟ ನಂತರ ಈ ದೇಶದಲ್ಲಿ ಹೊಸ ಪೀಳಿಗೆಯ ಆಲೋಚನಾಗತಿಯೇ ಬದಲಾಯಿತು.ಅಂದರೆ ಶಿಕ್ಷಕರಾದವರು ಮಕ್ಕಳ ಮನಸ್ಸಿನಲ್ಲಿ ಕನಸುಗಳನ್ನು ಬಿತ್ತುವವರಾದರೆ, ನಮ್ಮ ದೇಶದ ಭವಿಷ್ಯವು ಉಜ್ವಲವಾಗುತ್ತದೆ. ಅದಕ್ಕೇ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಕರೆಂದರೆ ಅವರನ್ನು ಕೇವಲ ಉದ್ಯೋಗಿಗಳು ಎಂದು ಪರಿಗಣಿಸಿಲ್ಲ. ಅವರನ್ನು ಸಮಾಜದ ಗೌರವ ಪ್ರದಾನವಾಗುವಂತೆ ವ್ಯವಸ್ಥೆಯಲ್ಲಿ ಗುರುತಿಸಲಾಗಿದೆ. ಆ ಗೌರವಯುತ ವ್ಯವಸ್ಥೆಯನ್ನು ಎಷ್ಟು ಸಮರ್ಥವಾಗಿ ಇಂದು ಕಾಪಾಡಿಕೊಳ್ಳಲಾಗಿದೆ ಎಂಬುದು ಚರ್ಚಾರ್ಹ ಸಂಗತಿಯಾಗಿರಬಹುದು. ಆದರೆ ನಮ್ಮ ಸಮಾಜದ ಮಾನಸಿಕತೆಯಲ್ಲಿ ಶಿಕ್ಷಕರಿಗೆ ಉನ್ನತವಾದ ಗೌರವ -ಪೂರ್ವಕವಾದ ಸ್ಥಾನವಿದೆ. ಅದಕ್ಕೆ ಕುಂದುಂಟಾಗದಂತೆ ಆಡಳಿತ ವ್ಯವಸ್ಥೆ ಮತ್ತು ಸಮಾಜ ವರ್ತಿಸಬೇಕಾಗಿದೆ. ಅವರು ಸಮಾಜದಲ್ಲಿ ನಿರ್ವಹಿಸುತ್ತಿರುವ ಮಹತ್ವದ ಕಾರ್ಯಗಳೇನು ಮತ್ತು ಆ ಗುರುತರ ಕಾರ್ಯಗಳನ್ನು ನಿರ್ವಹಿಸಲು ಕಲ್ಪಿಸಲಾದ ವಾತಾವರಣ ಏನು ಎಂಬುದರ ನಾವೆಲ್ಲರೂ ಚರ್ಚಿಸಬೇಕಾಗಿದೆ.
ಏಕೆಂದರೆ ಮಕ್ಕಳ ಮನಸ್ಸಿನಲ್ಲಿ ಕುತೂಹಲವನ್ನುಅರಳಿಸುವ ಸಾಮರ್ಥ್ಯವು ಶಿಕ್ಷಕರಿಗೆ ಇರುತ್ತದೆ. ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮಹತ್ವದ ಅರಿವನ್ನು ಮೂಡಿಸುವ ಸಾಮರ್ಥ್ಯವೂ ಶಿಕ್ಷಕರ ಬಳಿಯಿದೆ. ಇದು ಇನ್ನುಳಿದವರಿಂದ ಸಾಧ್ಯವಾಗದ ಮಾತು. ಯಾಕೆಂದರೆ ಅವರು ತಮ್ಮ ತರಗತಿಯಲ್ಲಿರುವ ವಿದ್ಯಾರ್ಥಿಯ ಚಟುವಟಿಕೆ, ಏಳ್ಗೆ, ಶಕ್ತಿ ಸಾಮರ್ಥ್ಯಗಳ ಕುರಿತು ಅರಿವುಳ್ಳವರಾಗಿರುತ್ತಾರೆ. ವಿದ್ಯಾರ್ಥಿಯ ಪ್ರಗತಿಗೆ ಯಾವ ಮಾರ್ಗವನ್ನು ಅನುಸರಿಸಿ ಬೋಧಿಸಬಹುದು ಎಂಬ ಆಲೋಚನೆಗಳು ಅವರ ಮನದಲ್ಲಿರುತ್ತದೆ. ಅಂತಹ ಆಲೋಚನೆ ಮತ್ತು ಮಾರ್ಗದರ್ಶನಗಳೇ ನಮ್ಮ ದೇಶವನ್ನು ಮುಂದಿನ ದಿನಗಳಲ್ಲಿ ಭದ್ರವಾಗಿಸುವ ಬುನಾದಿಗಳಾಗಿದೆ. ಆದರ್ಶ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವ ಶಿಕ್ಷಕರ ಪಾತ್ರವನ್ನು ಗುರುತಿಸಿ ಗೌರವಿಸೋಣ.
ಎಸ್ ಆರ್ ಹರೀಶ್ ಆಚಾರ್ಯ
ಅಧ್ಯಕ್ಷರು, ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಮಂಗಳೂರು ಹಾಗೂ
ಮಾಜಿ ಸಿಂಡಿಕೇಟ್ ಸದಸ್ಯರು
ಮಂಗಳೂರು ವಿಶ್ವವಿದ್ಯಾನಿಲಯ