ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ 2019| ಅನೂಪ ದೇಶಪಾಂಡೆ.

 

ಹಿನ್ನೆಲೆ:

ದೇಶಾದ್ಯಂತ ಸಾರ್ವಜನಿಕರಿಂದ ಅಪಾರ ಮೊತ್ತದ ಠೇವಣಿ ಪಡೆದು ಜನರಿಗೆ ವಂಚನೆ ಮಾಡಿ ಕಣ್ಮರೆಯಾಗುತ್ತಿರುವ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸಂದರ್ಭದಲ್ಲಿ ಠೇವಣಿದಾರರ ಹಿತ ರಕ್ಷಣೆಗೆ ಸೂಕ್ತ ಕಾಯ್ದೆ ವ್ಯವಸ್ಥೆ ಇಲ್ಲದಿರುವುದರ ಕಾರಣವನ್ನು ಸರಕಾರ ಗಮನಿಸಿದೆ. ವಂಚಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪ್ರಸ್ತುತ ಕಾನೂನುಗಳಲ್ಲಿನ ಲೋಪ ದೋಷಗಳ ದುರ್ಲಾಭ ಪಡೆಯುತ್ತಿರುವುದನ್ನು ಹಾಗೂ ಬೇರೆ ಬೇರೆ ನಿಯಂತ್ರಕ ಸಂಸ್ಥೆಗಳ ನಡುವಿನ ಸಾಮರಸ್ಯದ ಕೊರತೆ, ಬೇರೆ ಬೇರೆ ರಾಜ್ಯಗಳ ನಡುವಿನ ಸಾಮರಸ್ಯದ ಕೊರತೆಗಳು ವಂಚಕರು ಸುಲಭವಾಗಿ ಕಾನೂನಿನ ಹಿಡಿತಕ್ಕೆ ಸಿಗದೇ ಇರುವುದು ಮತ್ತು ವಂಚನೆಗೊಳಗಾದ ಜನರಿಗೆ ಸೂಕ್ತ ನ್ಯಾಯ ಸಿಗದಿರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಸಿಬಿಐ ಸಂಗ್ರಹಿಸಿ ಮಾಹಿತಿಯಂತೆ ಅಂದಾಜು 6 ಕೋಟಿಗೂ ಹೆಚ್ಚು ಠೇವಣಿದಾರರಿಂದ ರೂ.68 ಸಾವಿರ ಕೋಟಿಯಷ್ಟು ಹಣವನ್ನು ಈ ರೀತಿ ಅನಿಯಂತ್ರಿತ ಠೇವಣಿಗಳ ರೂಪದಲ್ಲಿ ಸಂಗ್ರಹಿಸಲಾಗಿದೆ. ಈ ಕಾರಣದಿಂದ ಕೇಂದ್ರ ಸರಕಾರವು ಉನ್ನತ ಮಟ್ಟದ ಇಂಟರ್ ಮಿನಿಸ್ಟಿರಿಯಲ್ ಗ್ರುಪ್ ರಚಿಸಿತ್ತು. ಅದು ಗೃಹ ಸಚಿವಾಲಯ, ಕೃಷಿ ಮತ್ತು ಸಹಕಾರ ಸಚಿವಾಲಯ, ಕಂಪನಿ ವ್ಯವಹಾರಗಳ ಸಚಿವಾಲಯಗಳ ಜೊತೆಗೆ ಮತ್ತು ಸಿಬಿಐ, ರಿಸರ್ವ್ ಬ್ಯಾಂಕ್, ಸೆಬಿ ಮುಂತಾದ ಸಂಸ್ಥೆಗಳ ಜೊತೆಗೆ ವಿವರವಾಗಿ ಚರ್ಚಿಸಿ, ಅಧ್ಯಯನ ಮಾಡಿ ವಿವರವಾದ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯಲ್ಲಿ ಚಿಟ್ ಫಂಡ್. ನಿಧಿ, ಎನ್.ಬಿ.ಎಫ್‌.ಸಿ, ಸಹಕಾರ ಸಂಘಗಳು ಮುಂತಾದವುಗಳ ಚಟುವಟಿಕೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಈ ವರದಿಯಲ್ಲಿ ಸಹಕಾರ ಸಂಘಗಳ ಬಗ್ಗೆ ಉಲ್ಲೇಖವಿದ್ದಿದ್ದನ್ನು ಮಾತ್ರ ಇಲ್ಲಿ ನೀಡಲಾಗಿದೆ.

  • ನೋಂದಣಿ ಪ್ರಾಧಿಕಾರಗಳು ಶಿಕ್ಷಿಸಲು ಸಕ್ಷಮವಾಗಿರದಂತಹ ಕಾಯ್ದೆಗಳಿವೆ.
  • ಕ್ಷೇತ್ರವ್ಯಾಪ್ತಿಯ ಬಗ್ಗೆ ವಿವಿಧ ಪ್ರಾಧಿಕಾರಗಳ ನಡುವೆ ಗೊಂದಲಗಳಿವೆ. ಯಾವ ಪ್ರಾಧಿಕಾರ ಕ್ರಮ ಆರಂಭಿಸಬೇಕು ಎಂಬ ಸ್ಪಷ್ಟತೆಯಿಲ್ಲ,
  • ಕಾಯ್ದೆಗಳಲ್ಲಿನ ಗೊಂದಲದ ದುರ್ಲಾಭವನ್ನು ಠೇವಣಿ ಪಡೆವ ಸಂಸ್ಥೆಗಳು ಪಡೆಯುತ್ತಿವೆ.
  • ಸೆಜಿ ಮತ್ತಿತರ ಪ್ರಾಧಿಕಾರಗಳಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದನ್ನು ನಿಷೇಧಿಸಲ್ಪಟ್ಟ ಸಂಸ್ಥೆಗಳು ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿಸ್ ಕಾಯ್ದೆಗಳಡಿ ಸಂಸ್ಥೆ ನೋಂದಾಯಿಸಿಕೊಂಡು ಠೇವಣಿ ಸಂಗ್ರಹ ಮುಂದುವರೆಸುತ್ತಿವೆ. (ಸಹಾರಾ ಉತ್ತಮ ಉದಾಹರಣೆ)
  • ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿಸ್ ಕಾಯ್ದೆಯಡಿ ನೋಂದಣಿ ಪ್ರಾಧಿಕಾರಕ್ಕೆ ಪರಿವೀಕ್ಷಣೆ ಮತ್ತು ವಿಶೇಷ ಆಡಿಟ್ ನಡೆಸಲು ಆದೇಶಿಸಲು ಅವಕಾಶವಿದೆ. ಸಹಕಾರ ಸಂಘಗಳಿಗೆ ಹಣಕಾಸಿನ ಮಾನದಂಡಗಳನ್ನು ವಿಧಿಸಲು ಅಧಿಕಾರಗಳಿಲ್ಲ.

ಈ ಹಿನ್ನೆಲೆಯಲ್ಲಿ ಇಂಟರ್ ಮಿನಿಸ್ಟಿರಿಯಲ್ ಗ್ರುಪ್ ವಿವಿಧ ಶಿಫಾರಸ್ಸುಗಳನ್ನು ಮಾಡಿದ್ದು ಅದರಲ್ಲಿ ಪ್ರಮುಖವಾದವುಗಳು ಈ ಕೆಳಗಿವೆ:

1) ನ್ಯಾಷನಲ್ ಇಂಟಲಿಜೆನ್ಸ್ ಮೆಕ್ಯಾನಿಸಮ್ ರಚಿಸಲು ಕ್ರಮ ಕೈಗೊಳ್ಳಬೇಕು.

2) ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮತ್ತು ಠೇವಣಿದಾರರ ಹಿತರಕ್ಷಣಾ ವಿಧೇಯಕ, 2015

3) ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿ ಕಾಯ್ದೆಗೆ ತಿದ್ದುಪಡಿ ಮೂಲಕ ಸದಸ್ಯರಿಂದಲೂ ಠೇವಣಿ ಸಂಗ್ರಹಕ್ಕೆ ನಿಷೇಧ

4) ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಗೆ ತಿದ್ದುಪಡಿ ಮೂಲಕ ಸಹಕಾರ ಸಂಘಗಳ ಠೇವಣಿಗಳು ಸಹ ರಿಸರ್ವ್ ಬ್ಯಾಂಕಿನ ಸುಪರ್ದಿಗೆ ಒಳಪಡುತ್ತವೆ. (ಮತದಾನದ ಅಧಿಕಾರ ಹೊಂದಿರದ ಸದಸ್ಯರಿಂದ ಸಂಗ್ರಹಿಸಿದ ಠೇವಣಿ ಇದ್ದರೆ)

ಇಂಟರ್ ಮಿನಿಸ್ಟಿರಿಯಲ್ ಗ್ರುಪ್ ಮಾಡಿದ ಶಿಫಾರಸ್ಸಿನ ಅನ್ವಯ “ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮತ್ತು ಠೇವಣಿದಾರರ ಹಿತರಕ್ಷಣಾ ವಿಧೇಯಕ, 2015” ದ ಕರಡನ್ನು ಸಿದ್ಧಪಡಿಸಿ ಅದನ್ನು ಸಾರ್ವಜನಿಕ ಸಲಹೆ ಆಕ್ಷೇಪಣೆಗಾಗಿ ಕೇಂದ್ರ ಸರ್ಕಾರವು 18 ನವೆಂಬರ್ 2016 ರಂದು “ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಮತ್ತು ಠೇವಣಿದಾರರ ಹಿತರಕ್ಷಣಾ ವಿಧೇಯಕ, 2016” ಅನ್ನು ಪ್ರಕಟಿಸಿತ್ತು. ಸಾರ್ವಜನಿಕರ ಸಲಹೆಗಳ ಆಧಾರದ ಮೇಲೆ ವಿಧೇಯಕದ ಕರಡನ್ನು ಪರಿಷ್ಕರಿಸಿ “ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ವಿಧೇಯಕ, 2018” ಅನ್ನು ಲೋಕ ಸಭೆಯಲ್ಲಿ ಜುಲೈ 18, 2018 ರಂದು ಮಂಡಿಸಲಾಗಿತ್ತು. ಲೋಕಸಭೆಯು ಈ ವಿಧೇಯಕವನ್ನು ಹೆಚ್ಚಿನ ಚರ್ಚೆಗೆ ವೀರಪ್ಪ ಮೋಯ್ಲಿಯವರು ಅಧ್ಯಕ್ಷರಾಗಿರುವ ಹಣಕಾಸು ಸ್ಥಾಯೀ ಸಮಿತಿಗೆ ಕಳುಹಿಸಲಾಗಿತ್ತು. ಜನೇವರಿ 3, 2019 ರಂದು ಸ್ಥಾಯೀ ಸಮಿತಿಯು ತನ್ನ ವರದಿ ನೀಡಿತು. ನಂತರ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿ, ಲೋಕಸಭೆಯು 13 ಫೆಬ್ರುವರಿ 2019 ರಂದು ಅನುಮೋದನೆ ನೀಡಿತು. ಅಷ್ಟರಲ್ಲೇ ಆಧಿವೇಶನ ಮುಕ್ತಾಯವಾಗಿದ್ದರಿಂದ ರಾಜ್ಯ ಸಭೆಯಲ್ಲಿ ಅನುಮೋದನೆ ಪಡೆಯಲು ಸಾಧ್ಯವಾಗಲಿಲ್ಲ. ಸರಕಾರವು 21 ಫೆಬ್ರುವರಿ 2019 ರಂದು ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ “ಆನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ, 2019” ಜಾರಿಗೆ ತಂದಿದೆ.

ಏನಿದೆ ಈ ಸುಗ್ರೀವಾಜ್ಞೆಯಲ್ಲಿ?

ಈ ಸುಗ್ರೀವಾಜ್ಞೆಯು ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸುವ ಠೇವಣಿಗಳನ್ನು ಎರಡು ಭಾಗವಾಗಿ ವಿಂಗಡಿಸಿದೆ. ಒಂಡು ನಿಯಂತ್ರಿತ ಠೇವಣಿಗಳು, ಇನ್ನೊಂದು ಅನಿಯಂತ್ರಿತ ಠೇವಣಿಗಳು, ಸುಗ್ರೀವಾಜ್ಞೆಯ ಮೊದಲನೆಯ ಶೆಡ್ಯೂಲ್‌ನಲ್ಲಿ “ನಿಯಂತ್ರಿತ ಠೇವಣಿ ಯೋಜನೆ”ಗಳ ಮತ್ತು ಪ್ರತಿಯೊಂದು ಅಂತಹ ಯೋಜನೆಗಳ ನಿಯಂತ್ರಣ ಪ್ರಾಧಿಕಾರಗಳ ಪಟ್ಟಿಯನ್ನು ನೀಡಲಾಗಿದೆ. ಇವುಗಳ ಹೊರತು ಬೇರೆ ರೀತಿಯ ಠೇವಣಿಗಳ ಸಂಗ್ರಹವನ್ನು “ಆನಿಯಂತ್ರಿತ ಠೇವಣಿ ಸಂಗ್ರಹಣೆ” ಎಂದೇ ಪರಿಗಣಿಸಲಾಗುವುದು ಮತ್ತು ಅಂತಹ ಅನಿಯಂತ್ರಿತ ಠೇವಣಿ ಸಂಗ್ರಹಣೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೇ ಅದು ಶಿಕ್ಷಾರ್ಹ ಅಪರಾಧವಾಗಿದೆ.

ಸುಗ್ರೀವಾಜ್ಞೆಯ ಮೊದಲನೆಯ ಶೆಡ್ಯೂಲ್‌ನಲ್ಲಿ ಶೇರು, ಮ್ಯೂಚ್ಯುವಲ್ ಫಂಡ್ ಇತ್ಯಾದಿ ಸೆಬಿಯಿಂದ ಅನುಮತಿ ಪಡೆದ ಸಂಸ್ಥೆಗಳ ಯೋಜನೆಗಳು, ರಿಸರ್ವ್ ಬ್ಯಾಂಕಿನ ಲೈಸನ್ಸ್ ಪಡೆದ ಬ್ಯಾಂಕುಗಳ ಸ್ವೀಕರಿಸುವ ಠೇವಣಿಗಳು, ಐಆರ್‌ಡಿಎ ಅನುಮತಿ ಪಡೆದ ವಿಮಾ ಸಂಸ್ಥೆಗಳಲ್ಲಿನ ಯೋಜನೆಗಳು, ರಾಜ್ಯಗಳ ಕಾಯ್ದೆಯಡಿ ನೋಂದಾಯಿತವಾದ ಸಹಕಾರಿ ಸಂಸ್ಥೆಗಳು, ಚಿಟ್ ಫಂಡ್ ಸಂಸ್ಥೆಗಳು. ಇತ್ಯಾದಿ ಒಂಭತ್ತು ರೀತಿಯ ನಿಯಂತ್ರಣ ಪ್ರಾಧಿಕಾರದಡಿ ಬರುವ ಠೇವಣಿ ಯೋಜನೆಗಳನ್ನು “ನಿಯಂತ್ರಿತ ಠೇವಣಿ ಯೋಜನೆಗಳು” ಎಂದು ಪರಿಗಣಿಸಲಾಗಿದೆ. ಇದಲ್ಲದೇ ಯಾವುದೇ ಕಾಯ್ದೆಯಡಿ ರಚಿತಗೊಂಡ ಯಾವುದೇ ನಿಯಂತ್ರಣ ಪ್ರಾಧಿಕಾರ ಯಾವುದೇ ಯೋಜನೆಯಡಿ ಸ್ವೀಕರಿಸಿದ ಠೇವಣಿಗಳು ಅಥವಾ ಕೇಂದ್ರ ಸರ್ಕಾರ ಅಧಿಸೂಚಿಸಿದ ಯಾವುದೇ ಠೇವಣಿ ಯೋಜನೆಗಳನ್ನು “ನಿಯಂತ್ರಿತ ಠೇವಣಿ” ಎಂದೇ ಪರಿಗಣಿಸಲಾಗಿದೆ.

ಸಹಕಾರಿ ಸಂಸ್ಥೆಗಳ ಮೇಲೆ ಈ ಸುಗ್ರೀವಾಜ್ಞೆಯ ಪರಿಣಾಮ

ಈಸುಗ್ರೀವಾಜ್ಞೆಯು ದೇಶದ ಎಲ್ಲಾ ರೀತಿಯ ಹಣಕಾಸು ಸಂಸ್ಥೆಯ ಮೇಲೆ ದೂರಗಾಮಿ ಪರಿಣಾಮವನ್ನು ಬೀರುತ್ತದೆಯಾದರೂ ಈ ಟಿಪ್ಪಣಿಯನ್ನು ವಿಶೇಷವಾಗಿ ಸಹಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.

ಈ ಸುಗ್ರೀವಾಜ್ಞೆಯಲ್ಲಿ “ಠೇವಣಿ ಸ್ವೀಕರಿಸುವವ” (ಡೆಪಾಸಿಟ್ ಟೇಕರ್) ವ್ಯಾಖ್ಯೆಯಡಿ “ಸಹಕಾರ ಸಂಘಗಳನ್ನೂ ಸೇರಿಸಲಾಗಿದೆ. ಸುಗ್ರೀವಾಜ್ಞೆಯ ಮೊದಲನೆಯ ಶೆಡ್ಯೂಲ್‌ನಲ್ಲಿ ಸಹಕಾರ ಸಂಘಗಳ ಕಾಯ್ದೆ, 1912 ಅಡಿ ಅಥವಾ ಯಾವುದೇ ರಾಜ್ಯದ ಯಾವುದೇ ಕಾಯ್ದೆಯಡಿ ನೋಂದಾಯಿತವಾದ ಸಹಕಾರಿ ಸಂಸ್ಥೆಗಳು ನೀಡುವ ಯಾವುದೇ ಠೇವಣಿ ಯೋಜನೆಯನ್ನು “ನಿಯಂತ್ರಿತ ಠೇವಣಿ ಯೋಜನೆ”ಯೆಂದು ಪರಿಗಣಿಸಲಾಗದೆ. ಆದ್ದರಿಂದ ಕರ್ನಾಟಕದಲ್ಲಿರುವ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997 ಈ ಎರಡೂ ಕಾಯ್ದೆಯಡಿ ನೋಂದಾಯಿತವಾದ ಸಹಕಾರ ಸಂಸ್ಥೆಗಳು ನೀಡುವ ಯೋಜನೆಗಳು ಈ ಸುಗ್ರೀವಾಜ್ಞೆಯಡಿ ನಿಯಂತ್ರಿತ ಠೇವಣಿ ಯೋಜನೆಗಳ ವ್ಯಾಖ್ಯೆಯಡಿಯೇ ಸಹ ಒಳಪಟ್ಟಿವೆ.

ಹೀಗಾಗಿ ಸೌಹಾರ್ದ ಕಾಯ್ದೆಯೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಸಹಕಾರಿ ಸಂಸ್ಥೆಗಳಿಗೆ ಇದು ಅನ್ವಯವಾಗುತ್ತದೆ.

ನಮ್ಮ ದೇಶದಲ್ಲಿ ಒಂದು ರಾಜ್ಯಕ್ಕಿಂತ ಹೆಚ್ಚಿಗೆ ರಾಜ್ಯಗಳ ಅಡಿ ಕಾರ್ಯನಿರ್ವಹಿಸುವ ಸಹಕಾರ ಸಂಘಗಳಿಗಾಗಿ “ಬಹುರಾಜ್ಯಗಳ ಸಹಕಾರ ಸಂಘಗಳ ಕಾಯ್ದೆ, 2002″ ಎಂಬ ಕೇಂದ್ರ ಕಾಯ್ದೆ ಜಾರಿಯಲ್ಲಿದೆ. ಈ ಸುಗ್ರೀವಾಜ್ಞೆಯಡಿಯ ಸಹಕಾರ ಸಂಘಗಳಲ್ಲಿ ಠೇವಣಿ ಹೂಡಿದ ಮತದಾನ ಅಧಿಕಾರ ಹೊಂದಿದ ಸದಸ್ಯರು ಮಾಡಿದ ಠೇವಣಿಗಳು ಸಹ “ನಿಯಂತ್ರಿತ ಠೇವಣಿ ಯೋಜನೆ” ಎಂದು ಪರಿಗಣಿಸಲ್ಪಡುತ್ತದೆ.

ಸಹಕಾರ ಸಂಘಗಳು ಸ್ವೀಕರಿಸುವ ಎಲ್ಲಾ ಠೇವಣಿಗಳೂ ನಿಯಂತ್ರಿತ ಠೇವಣಿ ವ್ಯಾಖ್ಯೆಯಡಿ ಬರುತ್ತವೆಯೇ?

  • ಭಾರತೀಯ ರಿಸರ್ವ ಬ್ಯಾಂಕ್ ಅಧಿನಿಯಮ, 1934 ರ ಕಲಂ 45-ಐ ರ ಕ್ಲಾಸ್-(ಬಿಬಿ) ರಲ್ಲಿ “ಠೇವಣಿ” (ಡೆಪಾಸಿಟ್) ಎಂಬ ಶಬ್ದಕ್ಕೆ ವ್ಯಾಖ್ಯಾನ ನೀಡಲಾಗಿದೆ.
  • ಸದರಿ ವ್ಯಾಖ್ಯಾನದ ವಿವರಣೆಯಲ್ಲಿ ಮೂರನೇ ವಿವರಣೆಯನ್ನು ಇದೇ ಸುಗ್ರೀವಾಜ್ಞೆಯು ತಿದ್ದುಪಡಿಯ ಮೂಲಕ ಸೇರಿಸಲಾಗಿದೆ. ಅದರಂತೆ “ಸಹಕಾರ ಸಂಘಗಳು ತಮ್ಮ ಮತನೀಡುವ ಹಕ್ಕುಳ್ಳ ಸದಸ್ಯರಿಂದ ಸ್ವೀಕರಿಸುವ ಹಣ” ವನ್ನು ಠೇವಣಿ ಎಂದು ವಿವರಿಸಲಾಗಿದೆ.
  • ಅಂದರೆ, ಮತದಾನದ ಹಕ್ಕು ಇಲ್ಲದ, ಸಹ ಸದಸ್ಯರು ಮತ್ತು ನಾಮ ಮಾತ್ರ ಸದಸ್ಯರಿಂದ ಸ್ವೀಕರಿಸುವ ಹಣವನ್ನು ಠೇವಣಿ  ಎಂದು ಪರಿಗಣಿಸಲಾಗುವುದಿಲ್ಲ.
  • ಅಲ್ಲದೇ ಬಹುರಾಜ್ಯಗಳ ಸಹಕಾರ ಸಂಘಗಳ ಕಾಯ್ದೆ, 2002 ಗೆ ಮಾಡಿದ ತಿದ್ದುಪಡಿಯಂತೆ ಬಹುರಾಜ್ಯಗಳ ಸಹಕಾರ ಸಂಘಗಳು ಮತನೀಡುವ ಸದಸ್ಯರಿಂದ ಮಾತ್ರ ಠೇವಣಿ ಸ್ವೀಕರಿಸಬಹುದು.
  • ಮೇಲಿನ ತಿದ್ದುಪಡಿಗಳ ಮೂಲಕ ಸ್ಪಷ್ಟವಾಗುವುದೇನೆಂದರೆ, ಸಹಕಾರ ಸಂಘಗಳು (ರಾಜ್ಯಗಳ ಕಾಯ್ದೆಯಡಿ ಮತ್ತು ಬಹುರಾಜ್ಯಗಳ ಕಾಯ್ದೆಯಡಿ ಇರುವ ಸಹಕಾರ ಸಂಘಗಳು) ತಮ್ಮ ಮತ ನೀಡುವ ಹಕ್ಕುಳ್ಳ ಸದಸ್ಯರಿಂದ ಸ್ವೀಕರಿಸಿದ ಠೇವಣಿಗಳು ಮಾತ್ರ “ನಿಯಂತ್ರಿತ ಠೇವಣಿ ಯೋಜನೆ” ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ಈ ಸುಗ್ರೀವಾಜ್ಞೆಯು “ಅನಿಯಂತ್ರಿತ ಠೇವಣಿ ಯೋಜನೆಗಳನ್ನು ನಿಷೇಧಿಸಿದೆ.

ಒಟ್ಟಾರೆ ಹೇಳುವುದೆಂದರೆ, ಈ ಸುಗ್ರೀವಾಜ್ಞೆಯು ಸಹಕಾರ ಸಂಸ್ಥೆಗಳು ಮತನೀಡುವ ಸದಸ್ಯರಿಂದ ಮಾತ್ರ ಸ್ವೀಕರಿಸಬಹುದು. ನೀಡುವ ಹೊಂದಿರದ ಸದಸ್ಯರಿಂದ (ಸಹ ಸದಸ್ಯರು ಮತ್ತು ನಾಮ ಮಾತ್ರ ಸದಸ್ಯರು) ಸಹಕಾರ ಸಂಘಗಳು ಯಾವುದೇ ರೀತಿಯ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ ಮತ್ತು ಹಾಗೆ ಸ್ವೀಕರಿಸಿದ್ದೇ ಆದಲ್ಲಿ ಅದು ಶಿಕ್ಷಾರ್ಹ ಅಪರಾಧ.

ಸಕ್ಷಮ ಪ್ರಾಧಿಕಾರ:

ಸರ್ಕಾರದ ಕಾರ್ಯದರ್ಶಿಗಿಂತ ಕೆಳಗಿನವರಲ್ಲದ ಅಧಿಕಾರಿಯೊಬ್ಬರನ್ನು ಈ ಸುಗ್ರೀವಾಜ್ಞೆಯಡಿ ಸಕ್ಷಮ ಪ್ರಾಧಿಕಾರವೆಂದು ನೇಮಿಸಲು ಅವಕಾಶವಿದೆ. ಅವರಿಗೆ ಸಹಾಯ ಮಾಡಲು ಅಧೀನ ಅಧಿಕಾರಿಗಳನ್ನು ನೇಮಿಸಲೂ ಅವಕಾಶವಿದೆ.

ಸಕ್ಷಮ ಪ್ರಾಧಿಕಾರದ ಅಧಿಕಾರವೇನು?

  • * ತನಿಖೆ ಮತ್ತು ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆ ಯಾವುದೇ ವ್ಯಕ್ತಿಗೆ ಸಮನ್ ನೀಡಿ ತನ್ನ ಮುಂದೆ ಹಾಜರಿರಲು ಮತ್ತು ದಾಖಲೆ ಹಾಜರು ಪಡಿಸಲು ಅಗತ್ಯಪಡಿಸಬಹುದು. ಸಾಕ್ಷಿಗಳನ್ನು ದಾಖಲಿಸುವುದೂ ಸೇರಿದಂತೆ ಸಿವಿಲ್ ಪ್ರಕ್ರಿಯಾ ಸಂಹಿತೆ, 1908 ರಡಿ ಇರುವ ಎಲ್ಲಾ ಅಧಿಕಾರಗಳಿವೆ. ಸಕ್ಷಮ ಪ್ರಾಧಿಕಾರದ ಮುಂದೆ ನಡೆಯುವ ಎಲ್ಲಾ ವ್ಯವಹರಣೆಗಳನ್ನು ಭಾರತೀಯ ದಂಡ ಸಂಹಿತೆಯಡಿ ನ್ಯಾಯಿಕ ವ್ಯವಹರಣೆಗಳೆಂದು ಪರಿಗಣಿಸಲ್ಪಡುತ್ತವೆ.
  • ಸಹಕಾರಿ ಸಂಸ್ಥೆಗಳು ಸಕ್ಷಮ ಪ್ರಾಧಿಕಾರಕ್ಕೆ ತಮ್ಮ ವ್ಯವಹಾರದ ಬಗ್ಗೆ ನಿಗದಿತ ರೀತಿಯಲ್ಲಿ ಮಾಹಿತಿ ಸಲ್ಲಿಸುವುದು ಕಡ್ಡಾಯ.
  • ಯಾವುದೇ ಸಹಕಾರ ಸಂಸ್ಥೆಯು ಅನಿಯಂತ್ರಿಯ ಯೋಜನೆಯಡಿ (ನಿಷೇಧಕ್ಕೊಳಗಾದ) ಠೇವಣಿ ಸ್ವೀಕರಿಸುತ್ತದೆ ಎಂದು ಸಕ್ಷಮ ಪ್ರಾಧಿಕಾರಕ್ಕೆ ನಂಬಬಹುದಾದ ಕಾರಣಗಳಿದ್ದಲ್ಲಿ (ಅಂದರೆ, ಸಹ ಸದಸ್ಯ ಅಥವಾ ನಾಮ ಮಾತ್ರ ಸದಸ್ಯರಿಂದ ಠೇವಣಿ ಸ್ವೀಕರಿಸುತ್ತಿದ್ದಲ್ಲಿ) ಅಂತಹ ಠೇವಣಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಅಗತ್ಯಕ್ಕೆ ತಕ್ಕ ವಿಚಾರಣೆ ಮತ್ತು ತನಿಖೆ ನಡೆಸಬಹುದು.

ವಿಶೇಷ ಪ್ರಾಧಿಕಾರದ ರಚನೆ.

ಕೇಂದ್ರ ಸರ್ಕಾರವು ಈಗಿರುವ ಯಾವುದೇ ಪ್ರಾಧಿಕಾರಕ್ಕೆ ಅಥವಾ ರಚಿಸಬಹುದಾದ ಹೊಸ ಪ್ರಾಧಿಕಾರಕ್ಕೆ ಇಡೀ ದೇಶದ ಠೇವಣಿ ಸ್ವೀಕರಿಸುವವರ ಬಗ್ಗೆ ಆನ್‌ಲೈನ್ ಡಾಟಾ ಬೇಸ್ ನಿರ್ವಹಿಸುವ ಅಧಿಕಾರ ನೀಡಿದೆ. ತನ್ಮೂಲಕ ದೇಶದ ಎಲ್ಲಾ ರೀತಿಯಲ್ಲಿ ಠೇವಣಿ ಸ್ವೀಕರಿಸುವ ಮಾಹಿತಿಗಳ ಕೋಶವೊಂದು ನಿರ್ಮಾಣವಾಗಲಿದೆ. ಆ‌ರ್.ಬಿ.ಐ. ಸೆಬಿ ಅಂತಹ ಯಾವುದೇ ನಿಯಂತ್ರಣ ಪ್ರಾಧಿಕಾರಕ್ಕೆ ಅಥವಾ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅಗತ್ಯ ಮಾಹಿತಿಯನ್ನು ಈ ಪ್ರಾಧಿಕಾರವು ಪಡೆಯಬಹುದು. ಮುಂದುವರೆದು, ಯಾವುದೇ ಬ್ಯಾಂಕು ತನ್ನ ಗ್ರಾಹಕನು ಆನಿಯಂತ್ರಿತ ಠೇವಣಿ ಸ್ವೀಕರಿಸುತ್ತಿದ್ದಾನೆ ಎಂದು ಕಂಡುಬಂದಲ್ಲಿ ಅಂತಹ ಮಾಹಿತಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ತಿಳಿಸುವುದು ಕಡ್ಡಾಯವಾಗಿದೆ. ಈ ಪ್ರಾಧಿಕಾರವು ಅಗತ್ಯವಿದ್ದಲ್ಲಿ ಸಿಬಿಐಗೂ ಮಾಹಿತಿ ಹಂಚಿಕೊಳ್ಳದೆ

ಸಕ್ಷಮ ನ್ಯಾಯಾಲಯ:

ಜಿಲ್ಲಾ ನ್ಯಾಯಾಧೀಶರ ದರ್ಜೆಯ ನ್ಯಾಯಾಧೀಶರುಗಳನ್ನು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ರಾಜ್ಯ ಸರ್ಕಾರವು ಈ ಸುಗ್ರೀವಾಜ್ಞೆಯಡಿ ಸಕ್ಷಮ ನ್ಯಾಯಾಲಯವೆಂದು ನೇಮಿಸುತ್ತದೆ. ಅಂತಹ ನ್ಯಾಯಾಲಯಗಳು ಈ ಸುಗ್ರೀವಾಜ್ಞೆಯಡಿ ಕಾರ್ಯನಿರ್ವಹಿಸುತ್ತವೆ.

ಸಕ್ಷಮ ನ್ಯಾಯಾಲಯದ ಅಧಿಕಾರವೇನು?

  • ಸಕ್ಷಮ ಪ್ರಾಧಿಕಾರ ತಾತ್ಕಾಲಿಕ ಮುಟ್ಟುಗೋಲು ಹಾಕಿಕೊಂಡ ಆದೇಶವನ್ನು ಸ್ಥಿರೀಕಸುವ ಅಥವಾ ತೆರವುಗೊಳಿಸುವ ಅಧಿಕಾರ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ಸೂಕ್ತ ವಿಚಾರಣೆ ನಡೆಸಿ ವಿಲೇವಾರಿ ಮಾಡಿ ಬಂದ ಹಣವನ್ನು ಠೇವಣಿದಾರರಿಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳುವ ಅಧಿಕಾರ.
  • ಮುಟ್ಟುಗೋಲು ಆದೇಶ ಹೊರಡಿಸುವ ಮೊದಲು ಪರಭಾರೆಯಾದ ಆಸ್ತಿಗಳನ್ನು ಮುಟ್ಟುಗೋಲು ಆದೇಶ ಹೊರಡಿಸಲೂ ಸಹ ಅಧಿಕಾರ, ಸಿಬಿಐ ಮತ್ತು ಪೋಲೀಸ್‌ರಿಗೆ ತನಿಖೆ ನಡೆಸುವ ಅಧಿಕಾರವಿದೆಯೇ?
  • ಸಕ್ಷಮ ಪ್ರಾಧಿಕಾರದ ಶಿಫಾರಸ್ಸಿನಿಂದ ಸಿಬಿಐ ಈ ಸುಗ್ರೀವಾಜ್ಞೆಯಡಿಯ ಅಪರಾಧಗಳ ತನಿಖೆ ನಡೆಸಬಹುದಾಗಿದೆ.
  • ಈ ಸುಗ್ರೀವಾಜ್ಞೆಯಡಿ “ಅಪರಾಧ” ಎಂದು ಘೋಷಿಸಿರುವ ಕೃತ್ಯ ಎಸಗಿದ ಸಂದರ್ಭದಲ್ಲಿ ಪೋಲೀಸರಿಗೆ ಯಾವುದೇ ಸ್ಥಳ, ಕಟ್ಟಡ ಪ್ರವೇಶಿಸಿ ಹುಡುಕಾಟ ನಡೆಸಿ ದಾಖಲೆ ಅಥವಾ ಆಸ್ತಿಗಳನ್ನು ವಶಕ್ಕೆ ಪಡೆಯುವ ಅಧಿಕಾರ ಪೋಲೀಸರಿಗೆ ಇದೆ. ಬೀಗ, ಬಾಗಿಲು ಒಡೆದು ಪ್ರವೇಶಿಸುವ ಅಧಿಕಾರವೂ ಇದೆ. ತುರ್ತು ಸ್ಥಿತಿಯಲ್ಲಿ ವಾರೆಂಟ್ ಇಲ್ಲದೆಯೂ ಈ ಕೆಲಸ ಮಾಡುವ ಅಧಿಕಾರವಿದೆ. ಬ್ಯಾಂಕ್ ಖಾತೆ ಸ್ಥಗಿತಕ್ಕೂ ಕ್ರಮ ಕೈಗೊಳ್ಳಬಹುದು.

ಸಕ್ಷಮ ಪ್ರಾಧಿಕಾರದ ಅಥವಾ ಸಕ್ಷಮ ನ್ಯಾಯಾಲಯದ ಆದೇಶದ ವಿರುದ್ಧ ಅಪೀಲಿಗೆ ಅವಕಾಶವಿದೆಯೇ?

  • ಸಕ್ಷಮ ನ್ಯಾಯಾಲಯದ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಅಪೀಲು ನಿರ್ಧರಿಸುವ ಅಧಿಕಾರವಿದೆ.
  • ಸಕ್ಷಮ ಪ್ರಾಧಿಕಾರ ಅಥವಾ ಸರ್ಕಾರಗಳು ಸಹ ಸಕ್ಷಮ ನ್ಯಾಯಾಲಯದ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಬಹುದು.

ಗಮನಿಸಲೇಬೇಕಾದ ಅಂಶಗಳು:

  • ಅನಿಯಂತ್ರಿತ ಠೇವಣಿ ಸ್ವೀಕರಿಸುವುದಷ್ಟೇ ಅಪರಾಧ ಅಲ್ಲ. ಅಂತಹ ಠೇವಣಿಗಳ ಬಗ್ಗೆ ಪ್ರಚಾರವೂ ಅಪರಾಧ. (ಏಜೆಂಟ್‌ರುಗಳಿದ್ದರೆ ಅವರೂ ಅಪರಾಧಿ).
  • ಸ್ವೀಕರಿಸಿದ ಠೇವಣಿಗೆ ಪ್ರತಿಯಾಗಿ ಬಡ್ಡಿ ಕೊಡುವುದಷ್ಟೇ ಅಲ್ಲ, ಪ್ರತಿಯಾಗಿ ಸೇವೆ. ವಸ್ತು ನೀಡುವುದಿದ್ದರೆ ಅಂತಹದ್ದೂ ನಿಷೇಧ. ಇದರಿಂದ ಬಂಗಾರದ ಅಂಗಡಿಗಳು ಪ್ರತಿ ತಿಂಗಳು ಹಣ ಪಡೆದು ನಿಶ್ಚಿತ ಅವಧಿಯ ನಂತರ ಆಭರಣ ಕೊಡುವಂತಹ ಚಟುವಟಿಕೆಗಳು. ನಿವೇಶನ ಅಥವಾ ಮನೆಗೆ ಕಂತುಗಳ ಮೂಲಕ ಬಿಲ್ಡರ್‌ಗಳಿಗೆ ಕೊಡುವ ಹಣ ಕೂಡ ನಿಷೇಧದ ವ್ಯಾಪ್ತಿಯಲ್ಲಿ ಬರುತ್ತವೆ. (ಇದನ್ನು ಭಾಗಶಃ ಖರೀದಿಯ ಮೊತ್ತ-Part payment of consideration, ಎಂದು ಪರಿಗಣಿಸಬಹುದು ಎಂಬ ಅಭಿಪ್ರಾಯವೂ ಇದೆ)

ಜಾಹೀರಾತು ಪ್ರಕಟಣೆಯೂ ಅಪರಾಧ

ಯಾವುದೇ ಪತ್ರಿಕೆಯು ಅನಿಯಂತ್ರಿತ ಠೇವಣಿ ಯೋಜನೆಗಳ ಬಗ್ಗೆ ಜಾಹೀರಾತು ಪ್ರಕಟಿಸಿದಲ್ಲಿ ಲೇಖನ ಪ್ರಕಟಿಸಿದಲ್ಲಿ ಸರ್ಕಾರವು ಅಂತಹ ಪತ್ರಿಕೆಗೆ ಉಚಿತವಾಗಿ ಅದನ್ನು ನಿರಾಕರಿಸುವ ಜಾಹೀರಾತನ್ನು ಅದೇ ಪ್ರಮಾಣದಲ್ಲಿ ಪ್ರಕಟಿಸಬೇಕೆಂದು ನಿರ್ದೇಶಿಸಬಹುದು,

ಕಾಯ್ದೆಯ ಇನ್ನಿತರ ವಿಶೇಷತೆಗಳು.

  • ಠೇವಣಿ ಸ್ವೀಕರಿಸಿದವರಿಂದ ಠೇವಣಿದಾರರಿಗೆ ನೀಡಬೇಕಾದ ಹಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಈ ಸುಗ್ರೀವಾಜ್ಞೆಯ ಆಡಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಯ ಮೇಲೆ ಕೂಡ ಠೇವಣಿದಾರರಿಗೆ ನೀಡುವ ಹಣಕ್ಕೆ ಪ್ರಥಮ ಆದ್ಯತೆ. ಸರ್ಕಾರಕ್ಕೆ, ಸ್ಥಳೀಯ ಸಂಸ್ಥೆಗಳ ಆಸಕ್ತಿಗಿಂತ ಠೇವಣಿದಾರರ ಆಸಕ್ತಿಗೆ ಆದ್ಯತೆ ನೀಡಲಾಗಿದೆ. (ಸರಘಸಿ ಕಾಯ್ದೆ ಮತ್ತು ದಿವಾಳಿ ಕಾಯ್ದೆಯ ಬೇಡಿಕೆಗಳ ಹೊರತು)
  • ಕೇಂದ್ರ ಸರ್ಕಾರಕ್ಕೆ ಈ ಸುಗ್ರೀವಾಜ್ಞೆ ಮೂಲಕ ಠೇವಣಿ ಸ್ವೀಕರಿಸುವವರ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಾಧಿಕಾರವನ್ನು ರಚಿಸುವ ಅಧಿಕಾರ ನೀಡಲಾಗಿದೆ.
  • ಠೇವಣಿ ಸ್ವೀಕರಿಸುವವರು ಸಕ್ಷಮ ಪ್ರಾಧಿಕಾರಕ್ಕೆ ತಮ್ಮ ವ್ಯವಹಾರದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ. ತಪ್ಪಿದರೆ ದಂಡ.
  • ಸಕ್ಷಮ ಪ್ರಾಧಿಕಾರವು ಸಿಬಿಐ ಜೊತೆಗೆ ಮತ್ತು ಈ ಕಾಯ್ದೆಯಡಿ ರಚಿಸುವ ವಿಶೇಷ ಪ್ರಾಧಿಕಾರದ ಜೊತೆ ಅನಿಯಂತ್ರಿತ ಠೇವಣಿಗಳಿಗೆ ಸಂಬಂಧಿಸಿದ ಮಾಹಿತಿ ವಿನಿಮಯ ಮಾಡುವುದು ಕಡ್ಡಾಯ, ಬ್ಯಾಂಕುಗಳು
  • ಸಹ ತಮ್ಮಲ್ಲಿನ ಠೇವಣಿದಾರರು ನಿಷೇಧಕ್ಕೊಳಗಾದ ಅನಿಯಂತ್ರಿತ ಠೇವಣಿ ಸ್ವೀಕರಿಸುವ ಚಟುವಟಿಕೆ ನಡೆಸುತ್ತಿದ್ದಾರೆಂಬ ಸಂಶಯವಿದ್ದಲ್ಲಿ ಅಂತಹ ಮಾಹಿತಿಯನ್ನು ಸಕ್ಷಮ ಪ್ರಾಧಿಕಾರದ ಜೊತೆ ಹಂಚಿಕೊಳ್ಳಬೇಕಾಗುತ್ತದೆ.
  • ಇತರೆ ಎಲ್ಲಾ ಕಾಯ್ದೆಗಳ ಪ್ರಾವಧಾನಗಳ ಮೇಲೆ ಈ ಸುಗ್ರೀವಾಜ್ಞೆಯ ಪ್ರಾವಧಾನಗಳು ಹೆಚ್ಚಿನ . (over riding effect)
  • ಬೇರೆ ಕಾಯ್ದೆಯ ಅನ್ವಯವನ್ನು ಈ ಸುಗ್ರೀವಾಜ್ಞೆಗೆ ಪೂರಕವಾಗಿ ಮತ್ತು ಈ ಸುಗ್ರೀವಾಜ್ಞೆಯ ಪರಿಣಾಮವನ್ನು ಕಡಿಮೆ ಮಾಡಲು ಅವಕಾಶವಾಗದಂತೆ ಜಾರಿ ಮಾಡಲು ಅವಕಾಶವಿದೆ.

ಈ ಸುಗ್ರೀವಾಜ್ಞೆ ಜಾರಿಯಿಂದ ಬ್ಯಾಂಕಿಂಗ ನಿಯಂತ್ರಣ ಅಧಿನಿಯಮ, ಸಹಕಾರ ಸಂಘಗಳ ಕಾಯ್ದೆಗಳ (ಸೌಹಾರ್ದ ಸಹಕಾರಿಯೂ ಸೇರಿದಂತೆ) ಮೇಲೆ ಏನು ಪರಿಣಾಮವಾಗುತ್ತದೆ?

ಸಹಕಾರ ಸಂಘಗಳು (ಸೌಹಾರ್ದ ಸಹಕಾರಿಯೂ ಸೇರಿದಂತೆ) ಮತದಾನದ ಹಕ್ಕು ಹೊಂದಿದ ಸದಸ್ಯರಿಂದ ಮಾತ್ರ ಠೇವಣಿ ಸ್ವೀಕರಿಸಬೇಕಾಗುತ್ತದೆ. ಸಹ ಸದಸ್ಯ ಮತ್ತು ನಾಮ ಮಾತ್ರ ಸದಸ್ಯರಿಂದ ಠೇವಣಿ ಸ್ವೀಕರಿಸಲು ಅವಕಾಶವಿಲ್ಲ. ಒಂದು ವೇಳೆ ಸಹ ಸದಸ್ಯರಿಂದ ಮತ್ತು ನಾಮ ಮಾತ್ರ ಸದಸ್ಯರಿಂದ ಠೇವಣೆ ಸ್ವೀಕರಿಸಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಲ್ಲದೇ ಸಕ್ಷಮ ಪ್ರಾಧಿಕಾರವು ಅಗತ್ಯ ಕ್ರಮಗಳನ್ನು ಕೈಗೊಂಡು ಠೇವಣಿದಾರರಿಗೆ ಅವರ ಹಣ ಮರುಪಾವತಿಸಲು ಕ್ರಮ ಕೈಗೊಳ್ಳಲು ಈ ಸುಗ್ರೀವಾಜ್ಞೆಯಲ್ಲಿ ಅವಕಾಶವಿದೆ. ಧನಾತ್ಮಕವಾಗಿ ಪತ್ತಿನ ಸಹಕಾರಿಗಳಲ್ಲಿ ಠೇವಣಿ ಇಡುವಲ್ಲಿ ಅದರ ಸದಸ್ಯರ ವಿಶ್ವಾಸಾರ್ಹತೆ ಹೆಚ್ಚಬಹುದು ಮತ್ತು ಠೇವಣಿ ಸುರಕ್ಷಿತ ಎಂಬ ಭಾವನೆ ಮೂಡಿ ಠೇವಣ ಪ್ರಮಾಣ ಹೆಚ್ಚಬಹುದು. ಪತ್ತಿನ ಸಹಕಾರಿಗಳಲ್ಲಿ ಆರ್ಥಿಕ ಶಿಸ್ತು ಇನ್ನೂ ಹೆಚ್ಚಬಹುದು.

ಅನೂಪ ದೇಶಪಾಂಡೆ.

ವಕೀಲರು, ಧಾರವಾಡ.

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More