ಭಾರತದ ಸಹಕಾರ ಚಳುವಳಿ ಆರಂಭವಾದದ್ದೇ ‘ಪತ್ತಿನ ಸಹಕಾರ ಸಂಘಗಳ ‘ ಸ್ಥಾಪನೆ ಮೂಲಕ, ಆದುದರಿಂದ ‘ಸಹಕಾರ ‘ ಮತ್ತು ‘ಪತ್ತು ‘ (ಸಾಲ) ಅವಿಭಾಜ್ಯ ಅಂಗಗಳಾಗಿ , ‘ ಒಂದೇ ನಾಣ್ಯದ ಎರಡುಮುಖಗಳೇ ‘ ಎಂಬಂತೆ ಇಂದಿಗೂ ಮುಂದುವರಿಯುತ್ತಿದೆ ಎಂದರೆ ತಪ್ಪಾಗಲಾರದು. ಐರೋಪ್ಯ ರಾಷ್ಟ್ರಗಳಲ್ಲಿ ಕೈಗಾರಿಕೆ ಕ್ರಾಂತಿಯ ಫಲವಾಗಿ , ಕಾರ್ಮಿಕರ ಕಲ್ಯಾಣಕ್ಕಾಗಿ ‘ರಾಕ್ ಡೇಲ್ ‘ ಅಗ್ರಗಾಮಿಗಳಿಂದ ‘ಗ್ರಾಹಕ ” ಬಳಕೆದಾರರ ‘ ಸಹಕಾರ ಸಂಘ ಸ್ಥಾಪನೆಯಾಗಿ ಒಂದು ಚಳುವಳಿಯ ‘ಆಂದೋಲನ ‘ ದ ರೂಪವನ್ನು ಪಡೆಯಿತು. ಜರ್ಮನಿ ಮತ್ತು ಇತರೆ ಐರೋಪ್ಯ ರಾಷ್ಟ್ರಗಳಲ್ಲಿ ರೈತರು ‘ರಾಫಿಸನ್’ ಮಾದರಿ ಸಹಕಾರ ಸಂಘಗಳನ್ನು ಆರಂಭಿಸಿದರು. ಜರ್ಮನಿ ಯಲ್ಲಿ ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ನೆಲೆಸಿದ್ದ ಕುಶಲ ಕರ್ಮಿಗಳು, ವ್ಯಾಪಾರಸ್ಥರು ‘ಹರ್ಮನ್ ಷ್ಲೂ ಜ್ ‘ ಎಂಬ ನ್ಯಾಯ ದೀಶ ರೊಬ್ಬರ ಪ್ರೇರಣೆಯಿಂದ ತಮ್ಮ ಆರ್ಥಿಕ ಅವಶ್ಯ ಪೂರೈಕೆಗಾಗಿ ‘ ಪತ್ತಿನ ಸಹಕಾರ ಸಂಘಗಳ ‘ ನ್ನು ಆರಂಭಿಸಿದರು. ತಮ್ಮ ಷೇರು ಬಂಡವಾಳ ಮತ್ತು ಠೇವಣಿ ಗಳನ್ನು ಸಂಗ್ರಹಿಸಿ ಅವಶ್ಯವಿದ್ದವರಿಗೆ ಬಡ್ಡಿ ಸಹಿತ ಸಾಲ ವಿತರಣೆ ಆರಂಭಿಸಿದರು. ಇವುಗಳನ್ನು ‘ ಷ್ಲೂ ಜ್’ ಮಾದರಿ ಸಹಕಾರ ಸಂಘಗಳೆಂದು ಕರೆಯಲಾಯಿತು.
ಭಾರತದಲ್ಲಿ ಖಾಸಗಿ ಲೇವಾದೇವಿದಾರರಿಂದ ರೈತರು ಶೋಷಣಿಗೆ ಒಳಗಾಗುತ್ತಿದ್ದು ಒಂದು ರೀತಿಯ ‘ ರೈತರ ದಂಗೆ’ ಪ್ರವೃತ್ತಿ ಭಾರತದಲ್ಲಿ ಕಂಡು ಬಂದಿದ್ದರಿಂದ ಇದರ ಪರಿಹಾರೋಪಾಯ ಕಂಡು ಹಿಡಿಯಲು ಅಂದಿನ (19 ನೇ ಶತಮಾನದ ಆದಿ 20ನೇ ಶತಮಾನದ ಆರಂಭ ) ಮದ್ರಾಸ್ ಪ್ರಾಂತ್ಯದಲ್ಲಿ ಬ್ರಿಟಿಷ್ ಸರ್ಕಾರ ‘ಫ್ರೆಡ್ರಿಕ್ ನಿಕೋಲ್ಸನ್’ ಎಂಬ ಅಧಿಕಾರಿಯನ್ನು ಐರೋಪ್ಯ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿನ ‘ಸಹಕಾರ ಚಳುವಳಿ’ ಬಗ್ಗೆಮಾಹಿತಿ, ವರದಿ ಪಡೆಯಿತು. ಉತ್ತರ ಪ್ರದೇಶದಲ್ಲಿ ‘ಡೂಪರ್ ನೆಕ್ಸ ‘ ಎಂಬ ಅಧಿಕಾರಿಯನ್ನು ನೇಮಿಸಿ ವರದಿ ಪಡೆಯಿತು. ಇವುಗಳನ್ನು ಗಣನೆಗೆ ತೆಗೆದುಕೊಂಡ ‘ಸರ್ ಎಡ್ವರ್ಡ್ ಲಾ ‘ಸಮಿತಿ ಒಂದು ವರದಿಯನ್ನು ನೀಡಿತು. ಇದರ ಆಧಾರದ ಮೇರೆಗೆ ‘ಭಾರತದ ಪತ್ತಿನ ಸಹಕಾರ ಕಾಯ್ದೆ 1904 ‘ ಜಾರಿಗೆ ಬಂತು.
ಈ ಕಾಯ್ದೆಯನ್ವಯ ಭಾರತಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ‘ ಸೇವ ಸಹಕಾರ ಸಂಘಗಳು ‘ ಮತ್ತು ನಗರ ಪ್ರದೇಶಗಳಲ್ಲಿ ‘ಪತ್ತಿನ ಸಹಕಾರ ಸಂಘಗಳು ‘ ಆರಂಭ ಗೊಂಡವು. ಕರ್ನಾಟಕದಲ್ಲಿ ಗದಗ ಜಿಲ್ಲೆಯ ‘ಕಣಗಿನಹಾಳ ‘ದಲ್ಲಿ ಪ್ರಪ್ರಥಮ ಸಹಕಾರ ಸಂಘ 1905 ರಲ್ಲಿ ಸ್ಥಾಪನೆಯಾಗಿದ್ದನ್ನು ಗುರುತಿಸಲಾಗಿದೆ. ಇದರ ಪ್ರಥಮ ಅಧ್ಯಕ್ಷರಾದ , ಸಹಕಾರದ ಬಗ್ಗೆ ಬದ್ಧತೆ ತೋರಿದ ‘ಶ್ರೀ ಸಿದ್ದನಗೌಡ ಸಂಣ ರಾಮನಗೌಡ ಪಾಟೀಲರವರನ್ನು ಕರ್ನಾಟಕದ ಸಹಕಾರ ಪಿತಾಮಹ ಎಂದು ಗುರುತಿಸಲಾಗಿದೆ. ಅಂದಿನ ಗ್ರಾಮೀಣ ಪ್ರದೇಶದ ಸೇವಾ ಸಹಕಾರ ಸಂಘಗಳು ಮತ್ತು ಮುಂದುವರೆದ ಗ್ರಾಮೀಣ ಸಹಕಾರ ಚಳುವಳಿ ಸರ್ಕಾರದ ಅವಲಂಭಿತವಾಗಿ ಬೆಳವಣಿಗೆ ಯಾಗಿರುವುದನ್ನುಕಾ ಣುತ್ತಲಿದ್ದೇವೆ. ಆದರೆ ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಸರ್ಕಾರ ಅವಲಂಭಿತವಾಗದೇ ತಮ್ಮದೇ ಆದ ಸಂಪನ್ಮೂಲ -ಗಳನ್ನು ಸಂಗ್ರಹಿಸಿ ಸ್ವಾವಲಂಭನೆಯಿಂದ, ಸ್ವತಂತ್ರವಾಗಿ ‘ಷ್ಲೂಜ್’ ‘ಮಾದರಿ ಸಹಕಾರ ಸಂಘಗಳು ಬೆಳವಣಿಗೆ ಯಾಗಿರುವುದನ್ನು ಕಾಣುತ್ತಲಿದ್ದೇವೆ. ಇದಕ್ಕೆ ಕಾರಣ ಈ ಪ್ರದೇಶದಲ್ಲಿದ್ದ ಜನಗಳ ತಿಳುವಳಿಕೆ, ಜ್ಞಾನ, ಸಹಕಾರದ ಅರಿವು, ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ಸುಲಭವಾಗಿ ಗ್ರಹಿಸಿದ್ದು ಅಲ್ಲದೇ ಅವರಲ್ಲಿ ಲಭ್ಯ ಸಂಪನ್ಮೂಲಗಳು. ಅದರಲ್ಲಿಯೂ ಈ ಚಳುವಳಿಯು ಅತ್ಯಂತ ಯಶಸ್ವಿಯಾಗಿ ಗುಜರಾತ್ , ಮಹರಾಷ್ಟ್ರ, ಮತ್ತು ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಬೆಳೆದು ಬಂದಿರುವುದನ್ನು ಕಾಣುತ್ತಲಿದ್ದೇವೆ.
ಈ ಸಹಕಾರ ಸಂಘಗಳು ಸಮಾನ ಮನಸ್ಕರು, ಸಮಾನ ಚಿಂತಕರು, ಸಮಾನ ಆರ್ಥಿಕತೆ , ಸಹಕಾರ ಮೌಲ್ಯವಾದ ಸಮಾನತೆ ಮತ್ತು ಐಕ್ಯತೆ ಅಥವ ಒಗ್ಗಟ್ಟಿನಿಂದ ಕೂಡಿದ ಸಮೂಹ ಗಳಲ್ಲಿ ಅತ್ಯಂತ ಯಶಸ್ವಿಯಾಗಿ ಸಂಘಟಿತ ವಾಗಿರುವುದನ್ನು ಕಾಣುತ್ತೇವೆ. ಈ ಸಹಕಾರ ಸಂಘಗಳ ಯಶಸ್ವಿಗೆ ಇದೂ ಒಂದು ಕಾರಣ ಎಂದರೆ ತಪ್ಪಾಗಲಾರದು. ಅನೇಕ ಆರಂಬಿಕವಾಗಿ ಸಹಕಾರ ಸಂಘಗಳಾಗಿದ್ದವು, ಮುಂದೆ ವ್ಯವಹಾರ ಗಾತ್ರವನ್ನು ಹಿಗ್ಗಿಸಿ ಕೊಂಡು ಪ್ರಾಥಮಿಕ (ಪಟ್ಟಣ ) ಸಹಕಾರ ಬ್ಯಾಂಕ್ ಗಳಿಗೆ ಪರಿವರ್ತಿತ ವಾಗಿವೆ. ಅನೇಕ ಸಹಕಾರ ಸಂಘಗಳು ಭಾರತದಲ್ಲಿ ಸಹಕಾರ ಚಳುವಳಿ ಆರಂಭಗೊಂಡ ಸಮಯದಲ್ಲಿ ಸ್ಥಾಪನೆ ಯಾದ ಸಹಕಾರ ಸಂಘಗಳು ಈಗಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ‘ಶತಮಾನೋತ್ಸವ’ ಆಚರಿಸಿವೆ. 125 ನೇ ವಾರ್ಷಿಕೋತ್ಸವ ಸಂರ್ಭಾಮಾಚರಣೆಯ ಹೊಸ್ತಿಲಲ್ಲಿವೆ. ಇದಕ್ಕೆ ಕಾರಣ’ಸಹಕಾರ ತತ್ವ’ ಗಳ ಪಾಲನೆ ಮತ್ತು ಸಂಘದ ಚಟುವಟಿಕೆಯಲ್ಲಿ ಸದಸ್ಯರ ನಿರಂತರ ಪಾಲ್ಗೊಳ್ಳುವಿಕೆ. ಹೀಗಾಗಿ ಸಹಕಾರ ಸಂಘಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಾ ಬಂದಿದೆ.’ಈ ಕಾಲಘಟ್ಟದಲ್ಲಿ ‘ ಈ ವ್ಯವಸ್ಥೆಯ ಮುಂದುವರಿಕೆ ನಮ್ಮ ಮುಂದಿರುವ ಪ್ರಶ್ನೆ. 90ರ ದಶಕದಿಂದ ಭಾರತದ ಆರ್ಥಿಕತೆಯು ಒಂದು ‘ ದ್ವೀಪ’ ವಾಗದೆ ಜಗತ್ತಿನ ಆರ್ಥಿಕತೆಯೊಂದಿಗೆ ಒಂದಾಗಿ ‘ಉದಾರೀಕರಣ, ಖಾಸಗೀಕರಣ,ಮತ್ತು ಜಾಗತೀಕರಣ’ ದ ಭಾಗವಾಗಿ ಮೂರು ಟ್ರಿಲಿಯನ್ ಆರ್ಥಿಕತೆಯಿಂದ ಐದು ಟ್ರಿಲಿಯನ್ ಆರ್ಥಿಕತೆಯತ್ತ ಸಾಗುತ್ತಿದೆ. ಈ ‘ಸಂಕ್ರಮಣ’ ಕಾಲದಲ್ಲಿ ‘ಸಹಕಾರ ಚಳುವಳಿ’ ಸ್ಪರ್ಧೆಯನ್ನು ಎದುರಿಸಲಾಗದೆ.
ನಲುಗಿ ಹೋಗಿರುವುದನ್ನು ಕಾಣುತ್ತ ಇದ್ದೇವೆ, ಅನುಭವಿಸ ಇರುತ್ತೇವೆ. ಆದರೂ ಬಡ ಮತ್ತು ಮಧ್ಯಮ ವರ್ಗದವರಿಗೆ ‘ಆಶಾಕಿರಣ’ ಪತ್ತಿನ ಸಹಕಾರ ಸಂಘಗಳು ಎಂದರೆ ಅತಿಶಯೋಕ್ತಿಯಲ್ಲ. ಖಾಸಗಿ ಲೇವಾದೇವಿದಾರರೂ ಏನೇ ನಿರ್ಬಂಧಗಳಿದ್ದರೂ ಅತೀವ ಬಡ್ಡಿ, (ಮೀಟರ್ ಬಡ್ಡಿ) ಹೊರೆ ಹೊರೆಸಿ ಶೋಷಣಿ ಮಾಡುತ್ತಿರುತ್ತಾರೆ. ಖಾಸಗಿ, ವಾಣಿಜ್ಯ ಬ್ಯಾಂಕುಗಳು ಭದ್ರತೆ , ಮತ್ತು ಅತಿ ಹೆಚ್ಚು ವ್ಯವಹರಿಸುವವರ ಕಡೆಗೆ ಗಮನ ಹರಿಸುತ್ತಾರೆ. ಇದಕ್ಕೆ ಪರಿಹಾರ ವೆಂದರೇ ನಮ್ಮದೇ ಆದ ಪ್ರಜಾಸತ್ತಾತ್ಮಕ, ಸಾಮಾಜಿಕ ನ್ಯಾಯ ದೊಡನೆ ಆರ್ಥಿಕ ಬೆಳವಣಿಗೆಗೆ ಕಾರಣ ವಾದ ನಮ್ಮ ಪತ್ತಿನ ಸಹಕಾರ ಸಂಘಗಳು.
ಕರ್ನಾಟಕದಲ್ಲಿ 5500 ಕ್ಕೂ ಮೀರಿ ಈ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಯಶಸ್ಸಿಗೆ ಇಲ್ಲಿನ ಸದಸ್ಯರ ಮತ್ತು ಅವುಗಳಲ್ಲಿ , ‘ ನಾಯಕತ್ವ’ ವಹಿಸಿರುವ ಆಡಳಿತ ಮಂಡಳಿ. ಪ್ರಜ್ಞಾವಂತ ಸದಸ್ಯರು, ಜವಾಬ್ದಾರಿಯುತ , ಸದಸ್ಯರಿಗೆ ತಮ್ಮ ಹೊಣೆಗಾರಿಕೆ ಇದೆ,ತಮಗೆ ಅವರ ಉತ್ತರದಾಯಿತ್ವವಿದೆ, ತಾವು ಅವರ ಆಸೆ, ಆಕಾಂಕ್ಷೆ, ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಮೂಡಿಸಿರುವ ಭರವಸೆ. ಆದರೆ ಕೆಲವೇ ಕೆಲವು ಸಹಕಾರ ಸಂಘಗಳಲ್ಲಿ ಆಗಿರುವ ‘ಹಗರಣ’ ಗಳು ಇಡೀ ಸಹಕಾರ ವ್ಯವಸ್ಥೆಗೆ ಕಳಂಕ ತಂದಿರುವುದು, ಅದರ ವ್ಯಾಪಕ ಮಾಧ್ಯಮಗಳ ಪ್ರಚಾರ , ಸಾಮಾಜಿಕ ಮಾಧ್ಯಮಗಳಲ್ಲಿ ನ ಪ್ರಸಾರ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳ ಮೇಲೂ ದುಷ್ಪರಿಣಾಮ ಬೀರುವುದನ್ನು ಕಾಣುತ್ತಿದ್ದೇವೆ. ಈ ಕಾಲ ಘಟ್ಟದಲ್ಲಿ ಸದಸ್ಯರ ನಂಬಿಕೆ ವಿಶ್ವಾಸ ಉಳಿಸಿಕೊಳ್ಳಬೇಕಾದ್ದು ಅನಿವಾರ್ಯ ಮತ್ತು ಅವಶ್ಯಕ.
ನೌಕರರ ಪತ್ತಿನ ಸಹಕಾರ ಸಂಘಗಳಾಗ ಬಹುದು. ಅಥವ ಇತರೆ ಪತ್ತಿನ ಸಹಕಾರ ಸಂಘಗಳಾಗ ಬಹುದು ಕೆಲವೊಂದು ಆರ್ಥಿಕ ಶಿಸ್ತನ್ನು ಪಾಲಿಸ ಬೇಕಾಗುತ್ತದೆ. ಇದರಿಂದ ಸಹಕಾರ ಸಂಘವನ್ನು ಲಾಭದಾಯವಾಗಿ ನಡೆಸಿ ಸದಸ್ಯರಿಗೆ ‘ಡಿವಿಡೆಂಡ್ (‘ಲಾಭಾಂಶ) ಘೋಷಣೆ ಯನ್ನು ಪ್ರತಿವರ್ಷ ಮಾಡಬಹುದಾಗಿದೆ. ಈ ಸಹಕಾರ ಸಂಘಗಳು ‘ಬ್ಯಾರಿಕಿಂಗ್’ ಪರಿಧಿಯಲ್ಲಿ ಬಾರದಿದ್ದರೂ ಮಾಡುತ್ತಿರುವ ವ್ಯವಹಾರವು ‘ಬ್ಯಾಂಕಿಂಗ್ ‘ ಚಟುವಟಿಕೆಯೇ ಆಗಿರುತ್ತದೆ. ಠೇವಣಿ ಸಂಗ್ರಹಿಸುತ್ತಿದ್ದೇವೆ. ಆದರೆ ಸಾರ್ವಜನಿಕ ರಿಂದ ಲ್ಲ, ಸದಸ್ಯರಿಂದ ಮಾತ್ರ. ಠೇವಣಿಯನ್ನು ಸಾಲವಾಗಿ ವಿತರಿಸುತ್ತದ್ದೇವೆ, ಮತ್ತು ಹೂಡಿಕೆಗಳಲ್ಲಿ ತೊಡಗಿಸುತ್ತಿದ್ದೇವೆ. ಹೂಡಿಕೆ ಮತ್ತು ಸಾಲ ಮುಂಗಡ ಗಳ ಮೇಲೆ ಗಳಿಸುವ ‘ ಬಡ್ಡಿ’ ಯೇ ಪ್ರಮುಖ ಆಧಾಯ. ಠೇವಣಿಗಳು ಮತ್ತು ಒಂದು ಸಮಯ ಇತರೆಡೆಯಿಂದ ತಂದ ಸಾಲವಿದ್ದಲ್ಲಿ ಅದರ ಮೇಲೆ ಪಾವತಿಸುವ ಬಡ್ಡಿಯೇ ಪ್ರಮುಖ ಖರ್ಚು. ಇದರ ಅಂತರವೇ ಗರಿಷ್ಟ ಲಾಭ ಇದರಲ್ಲಿ ಸಂಘವು ವ್ಯವಸ್ಥಾಪನ ವೆಚ್ಚ ಸರಿಯಾಗಿಸಿ ಉಳಿಕೆಯೇ ನಿವ್ವಳ ಲಾಭ ವಾಗುತ್ತದೆ. ನಿವ್ವಳ ಲಾಭ ಗಳಿಸದೆಯೇ ಸಹಕಾರ ಸಂಘ ನಡೆಸಲಾಗುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು ಸಂಘದ ಆಸ್ತಿ – ಜವಾಬ್ದಾರಿ ತಖ್ತೆಯ ಪ್ರತಿ ಅಂಶವನ್ನು ವಿಶ್ಲೇಷಿಸಿ ಅದರ ಆಗು ಹೋಗುಗಳ ಬಗ್ಗೆ ಅರಿಯ ಬೇಕಾಗಿರುತ್ತದೆ.ಷೇರು ಬಂಡವಾಳ: ಇದು ಸಂಘದ ಮೂಲ ಬಂಡವಾಳ. ಪ್ರತಿ ಸದಸ್ಯ ಕನಿಷ್ಠ ಒಂದು ಷೇರು ಖರೀದಿಸುವುದು ಕಡ್ಡಾಯ. ಷೇರು ಬಂಡವಾಳ ವೆಚ್ಚ ರಹಿತ ಬಂಡವಾಳ . ನಿವ್ವಳ ಲಾಭದಲ್ಲಿ.
ಲಾಭಾಂಶ ‘(ಡಿ ವಿಡೆಂಡ್ ) ಘೋಷಣೆ ಆದ ನಂತರ ಪಾವತಿಸಲಾಗುತ್ತದೆ. ಇದು ‘ಸ್ವಂತ ಬಂಡವಾಳ’ ದ ಭಾಗ. ಇದನ್ನು ಅಧಿಕ ಗೊಳಿಸಿಕೊಳ್ಳುವುದು ಅಗತ್ಯ. ಇದರಿಂದ ನಿಧಿಗಳ ಮೇಲಿನ ವೆಚ್ಚವನ್ನು ತಗ್ಗಿಸಬಹುದು. ತೊಡಕು ತೂಕ ಸಹಿತ ಆಸ್ತಿಗೆ ಬಂಡವಾಳದ ಅನುಪಾತ (ಸಮರ್ಪಕ ಬಂಡವಾಳ) ಹೆಚ್ಚಿಸಿ ಕೊಳ್ಳಲು ಅನುಕೂಲವಾಗುತ್ತದೆ. ಪಾವತಿಯಾದ ಷೇರು ಅಧಿಕ ಗೊಳಿಸಲು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬೇಕಾಗುತ್ತದೆ. ಸದಸ್ಯತ್ವದ ಹೆಚ್ಚಳ, ಷೇರಿನ ಮೌಲ್ಯ ಏರಿಸುವಿಕೆ (ಉಪನಿಯಮ ತಿದ್ದುಪಡಿ ಮೂಲಕ), ಸಾಲ ನೀಡುವಲ್ಲಿ ಹೆಚ್ಚುವರಿ ಷೇರು ಸಂಗ್ರಹಣೆ (ಶೇ – 5-10) ‘ಹೆಚ್ಚು ಸಾಲ ನೀಡಿಕೆ.
ನಿಧಿಗಳು: ಸಂಘದ ನಿವ್ವಳ ಲಾಭ ವಿಲೇವಾರಿಯಿಂದ ನಿಧಿಗಳನ್ನು ಸೃಷ್ಟಿಸಲಾಗುತ್ತದೆ. ಸಹಕಾರ ಕಾಯ್ದೆ, ಉಪನಿಯಮ ರೀತಿ ಶೇ 25 ಕ್ಕೆ ಕಡಿಮೆ ಇಲ್ಲದಂತೆ ಆಪದ್ಧನ (ಮೀಸಲು) ನಿಧಿ ತೆಗೆದಿರಿಸತಕ್ಕದ್ದು. ಯಾವುದೇ ಖುಣಭಾರ ವಿಲ್ಲದ ನಿಧಿಗಳು ಸ್ವಂತ ಬಂಡವಾಳದ ಭಾಗವಾಗುತ್ತದೆ. ನಿಧಿಗಳು ನಿವ್ವಳ ಲಾಭ ವಿಂಗಡನೆಯಿಂದ ಸೃಷ್ಟಿಯಾಗಿದ್ದು, ವೆಚ್ಚ ರಹಿತ ಬಂಡವಾಳ -ವಾಗಿರುತ್ತದೆ. ಶೇ 25ಕ್ಕೆ ಕಡಿಮೆ ಇಲ್ಲದಂತೆ ಎ೦ದು ಕಾಯ್ದೆ ಹೇಳುವಾಗ ಅದಕ್ಕಿಂತ ಹೆಚ್ಚು ತೆಗೆದಿರುವುವಲ್ಲಿ ಯಾವುದೇ ನಿರ್ಬಂಧವಿಲ್ಲ. ಆದುದರಿಂದ ಅದಕ್ಕಿಂತ ಅಧಿಕ ತೆಗೆದಿರಿಸುವುದು ವಿವೇಚನಾಯುತ ನಡೆಯಾಗುತ್ತದೆ. ಇದರಿಂದ ನಿಧಿಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸಬಹುದು. ಸ್ವಂತ ಬಂಡವಾಳದ ಹೆಚ್ಚಳ ದಿಂದ ಸಮರ್ಪಕ ಬಂಡವಾಳವನ್ನು ಅಧಿಕ ಗೊಳಿಸಿ ಕೊಳ್ಳಬಹುದು. ನಿಧಿಗಳನ್ನು ಪ್ರತ್ಯೇಕವಾಗಿ ಹೂಡಿಕೆ ಮಾಡಿ, ಇತರೆಡೆಗೆ ಖರ್ಚು ಮಾಡದೇ ಇರುವುದು ಸಮಂಜಸ.
ಠೇವಣಿಗಳು: ಠೇವಣಿಗಳು ಪತ್ತಿನ ಸಹಕಾರ ಸಂಘದ ಪ್ರಮುಖ ಸಂಪನ್ಮೂಲ. ಠೇವಣಿಗಳು ವೆಚ್ಛ ಸಹಿತ ಬಂಡವಾಳ . ಇದು ಸ್ವಂತ ಬಂಡವಾಳ ವಲ್ಲ, ಇತರರಿಂದ ಪಡೆದ ಬಂಡವಾಳ. ಇದರ ಮೇಲಿನ ವೆಚ್ಚವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಅತಿ ಅಗತ್ಯ. ಇದರ ಮೇಲಿನ ವೆಚ್ಛ ಹೆಚ್ಚಳ ವಾದಲ್ಲಿ ನಿಧಿಗಳ ಮೇಲಿನ ವೆಚ್ಚ ಅಧಿಕ ಗೊಳ್ಳುತ್ತದೆ. ಗಳಿಕೆಯಲ್ಲಿನ ಅಂತರ ಕುಗ್ಗುತ್ತದೆ. ಆದುದರಿಂದ ಕಡಿಮೆ ವೆಚ್ಚದ ಠೇವಣಿಗಳಾದ (ಕಾಸಾ – ಕರೆಂಟ್ ಅಕೌಂಟ್ ಮತ್ತು ಸೇವಿಂಗ್ಸ್ ಅಕೌಂಟ್) ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಗಳಲ್ಲಿನ ಠೇವಣಿ ಹೆಚ್ಚು ಇರುವಂತೆ ನೋಡಿಕೊಳ್ಳುವುದು. ಇವು ಬೇಡಿಕೆ ಠೇವಣಿಗಳು
ಎನಿಸಿಕೊಳ್ಳುತ್ತವೆ. ನಿರಖು, ನಿಶ್ಚಿತ ( ಫಿಕ್ಸಡ್) ಠೇವಣಿಗಳು ಅವಧಿ ಠೇವಣಿಗಳು ಎನಿಸಿಕೊಳ್ಳುತ್ತವೆ. ಇದರ ಮೇಲೆ ಹೆಚ್ಚು ಬಡ್ಡಿ ಧರ ನೀಡಲಾಗುತ್ತದೆ. ಇದರಿಂದ ಠೇವಣಿಗಳ ಮೇಲಿನ ವೆಚ್ಚ, ತನ್ಮೂಲಕ ನಿಧಿಗಳ ಮೇಲಿನ ವೆಚ್ಚ ಅಧಿಕ ಗೊಳುತ್ತದೆ. ಠೇವಣಿಗಳ ಮೇಲೆ ಬಡ್ಡಿ ನಿಗದಿಸುವಲ್ಲಿ ಆಡಳಿತ ಮಂಡಳಿ ವಿವೇಚನ ಯುತವಾಗಿ ವರ್ತಿಸಬೇಕಾಗುತ್ತದೆ. ಠೇವಣಿಗಳ ಮಿಶ್ರಣದಲ್ಲಿ ಕಡಿಮೆ ವೆಚ್ಚದ ಠೇವಣಿ ಅಧಿಕವಿರುವಂತೆ, ಮತ್ತು ಹೆಚ್ಚಿನ ವೆಚ್ಚದ ಠೇವಣಿ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಸಮಯ ಮತ್ತು ಬೇಡಿಕೆ ಜವಾಬ್ದಾರಿ ನುಸಾರ ಶೇ 03 ರ ಠೇವಣಿಗಳನ್ನು ನಗದು ಅಥವಾ ಬ್ಯಾಂಕ್ ಶಿಲ್ಕು ಆಗಿ (ನಗದು ಮೀಸಲು ಅನುಪಾತ – ಕ್ಯಾಶ್ ರಿಸರ್ವ ರೇಶಿಯೋ – ಸಿ.ಆರ್.ಆರ್) ಆಗಿ ಮತ್ತು ಶೇ 25 ನ್ನು ಶಾಸನ ಬದ್ಧ ದ್ರವ್ಯ ಆಸ್ತಿ (ಸ್ಟಾಚುಯರಿ ಲಿಕ್ವಿಡ್ ರೇಶಿಯೋ) ಆಗಿ ಹೂಡಿಕೆ (ನಿಶ್ಚಿತ ಠೇವಣಿ, ಸರ್ಕಾರಿ ರಕ್ಷಾ ಪತ್ರಗಳು) ಮಾಡಿರ ಬೇಕು. ಈ ರೂಢಿಗಳನ್ನು ‘ಪತ್ತಿನ ಸಹಕಾರ ಸಂಘಗಳಲ್ಲಿ ‘ಅನು ಸರಿಸುವುದು ಒಳ್ಳೆಯದು. ಇದರಿಂದ ಠೇವಣಿದಾರರಿಗೆ ಅವಶ್ಯಕತೆಗನುಸಾರ ‘ಬೇಡಿಕೆ ಅನುಸಾರ ಹಿಂತಿರುಗಿಸಲು ಸಾಧ್ಯವಾಗುತ್ತದೆ. ಇದರಿಂದ ಠೇವಣಿದಾರರ (ಸದಸ್ಯರ) ವಿಶ್ವಾಸ ಗಳಿಸಲು ಸಾಧ್ಯ. ಎಲ್ಲ ಠೇವಣಿಗಳನ್ನು ಸಾಲದಲ್ಲಿ ತೊಡಗಿಸಿದಾಗ ಠೇವಣಿಗೆ ಬೇಡಿಕೆ ಬಂದಾಗ ಹಿಂತಿರುಗಿಸಲು ದ್ರವ್ಯ ಆಸ್ತಿ ಇರುವುದಿಲ್ಲ. ಇದರಿಂದ ಸದಸ್ಯರ (ಠೇವಣಿದಾರರ) ವಿಶ್ವಾಸ ವನ್ನು ಕಳೆದುಕೊಳ್ಳುತ್ತೇವೆ. ಅಲ್ಪಾವಧಿ ಠೇವಣಿಗಳು ನಮ್ಮಲ್ಲಿದ್ದಲ್ಲಿ ಅಲ್ಪಾವಧಿ ಸಾಲಗಳನ್ನು ನೀಡಬೇಕು. ದೀರ್ಘಾವಧಿ ಠೇವಣೆಗಳಿದ್ದಲ್ಲಿ ದೀರ್ಘಾವಧಿ ಸಾಲಗಳನ್ನು ನೀಡಬೇಕು. ಇದರಿಂದ ನಗದು ಒಳಹರಿವು ಮತ್ತು ಹೊರ ಹರಿವನ್ನು ಸಮತೋಲನ ಗೊಳಿಸಬಹುದು. ಇಲ್ಲದಿದ್ದಲ್ಲಿ ಠೇವಣಿದಾರರ ವಿಶ್ವಾಸವನ್ನು ಕಳೆದುಕೊಳ್ಳಬೇಕಾಗುತ್ತದೆ.
ಇದಕ್ಕೆ ಆಸ್ತಿ ಜವಾಬ್ದಾರಿ ನಿರ್ವಹಣೆ ಎನ್ನಲಾಗುತದೆ. ಪತ್ತಿನ ಸಹಕಾರ ಸಂಘಗಳ ಮೇಲಿನ ಠೇವಣಿಗೆ ವಿಮೆ ಇರುವುದಿಲ್ಲ. ಇದಕ್ಕಾಗಿ ಪ್ರತ್ಯೇಕ ವಿಮಾ ಯೋಜನೆ ಅನುಷ್ಠಾನದ ಬಗ್ಗೆ ಆಲೋಚಿಸ ಬೇಕಿದೆ.
ಪಡೆದ ಸಾಲಗಳು: ಅನೇಕ ಪತ್ತಿನ ಸಹಕಾರ ಸಂಘಗಳು ಅದರಲ್ಲಿಯೂ ನೌಕರರ ಪತ್ತಿನ ಸಹಕಾರ ಸಂಘಗಳು ಇತರೆ ಬ್ಯಾಂಕ್/ಜಿ. ಕೇ. ಸ. ಬ್ಯಾಂಕ್ ನಿಂದ ನಗದು ಪತ್ತಿನ ಮಿತಿ ಪಡೆದು ಸದಸ್ಯರಿಗೆ ಸಾಲ ವಿತರಿಸುತ್ತಿವೆ. ಪಡೆದ ಸಾಲದ ಮೇಲಿನ ಬಡ್ದಿ ಮತ್ತು ನೀಡಿದ ಸಾಲದ ಮೇಲಿನ ಅಂತರ ಲಾಭವಾಗುತ್ತದೆ. ಪಡೆದ ಸಾಲದ ಮೇಲೆ ವಿಧಿಸುವ ಷರತ್ತುಗಳನ್ನು ತಪ್ಪದೇ ಪಾಲಿಸಬೇಕು. ನೀಡಿದ ಸಾಲವನ್ನು ಸಕಾಲದಲ್ಲಿ ವಸೂಲಿ ಮಾಡಿ ಬ್ಯಾಂಕಿಗೆ ಹಿಂತಿರುಗಿಸ ಬೇಕು. ಇಲ್ಲವಾದಲ್ಲಿ ಸಂಘವು ನಷ್ಟ ಅನುಭವಸುವ ಸಂಭವ ವಿರುತ್ತದೆ.
ನಗದು/ ಬ್ಯಾಂಕ್ ಶಿಲ್ಕು: ಆದಷ್ಟು ಕಡಿಮೆ ಪ್ರಮಾಣದಲ್ಲಿ ಆದರೆ ಅಗತ್ಯತೆ ಇರುವಷ್ಟು ಇರಿಸಿ ಕೊಳ್ಳಬೇಕು. ಇದರಿಂದ ಗಳಿಕೆ ಇರುವುದಿಲ್ಲ. ಅಲ್ಲದೆ ವಿಮೆ ಮುಂತಾದ ಸೌಲಭ್ಯಗಳನ್ನು ಹೊಂದಬೇಕು. ಇವುಗಳಿಗೆ ವೆಚ್ಚವನ್ನೂ ಮಾಡಬೇಕಾಗುತ್ತದೆ.
ಹೂಡಿಕೆಗಳು: ಅತಿ ಎಚ್ಚರದಿಂದ ಗಳಿಕೆ ಬರುವಂತ ಹೂಡಿಕೆಗಳಲ್ಲಿ ತೊಡಗಿಸಬೇಕು. ಡಿವಿಡೆಂಡ್ ಬಡ್ಡಿ ಬರುವಂತಹ ಹೂಡಿಕೆಗಳನ್ನು ಮಾಡಬೇಕು. ಆದಷ್ಟೂ ತೊಡಕು ರಹಿತವಾಗಿರುವಂತೆ ಹೂಡಿಕೆ ಮಾಡಬೇಕು. ಸುರಕ್ಷತಾ ಮತ್ತು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸಾಲಗಳು ಮತ್ತು ಮುಂಗಡಗಳು: ಇದುವವೇ ಪತ್ತಿನ ಸಹಕಾರ ಸಂಘದ ಪ್ರಮುಖ ಆಸ್ತಿ. ಈ ಆಸ್ತಿಯ ಆರೋಗ್ಯ ಸಂಘದ ಆರೋಗ್ಯದ ಧ್ಯೋತಕ. ಸಾಲ ನೀಡುವಲ್ಲಿ ನಿಯಮಗಳನ್ನು ಪಾಲಿಸುವುದು. ಸಾಲ ವಸೂಲಾತಿ ಅಥವ ಮರುಪಾವತಿ ಸಾಲ ನೀಡಿಕೆಯಲ್ಲಿ ಪಾಲಿಸುವ ಪ್ರಾಮಾಣಿಕತೆ, ಮತ್ತು ನಿಷ್ಠೆಯನ್ನು ಬಹುತೇಕ ಅವಲಂಭಿಸಿರುತ್ತದೆ. ಒಂದು ಪತ್ತಿನ ಸಹಕಾರ ಸಂಘದಲ್ಲಿ ‘ಸಾಲಗಾರ’ ಕೂಡ ‘ ಠೇವಣಿದಾರ ‘ಸದಸ್ಯನಷ್ಟೇ ಪ್ರಮುಖ ಎಂಬುದನ್ನು ಮರೆಯಲಾಗದು. ಸಾಕಷ್ಟು ಸಾಲ, ಸಕಾಲದಲ್ಲಿ ಸಾಲ ನೀಡಿದಲ್ಲಿ ಸಾಲ ಮರುಪಾವತಿ (ವಸೂಲಾತಿ) ಅದು ಕಷ್ಟಕರ ವಾಗುವುದಿಲ್ಲ. ಇದರಲ್ಲಿ ಏರು ಪೇರು ಆದರೆ ಸಾಲ ವಸೂಲಾತಿ ಕಷ್ಟವಾಗುತ್ತದೆ ಮತ್ತು ಸಂಘವು ನಷ್ಟವನ್ನು ಅನುಭವಿಸುತ್ತದೆ. ಪತ್ತಿನ ಸಹಕಾರ ಸಂಘಗಳಲ್ಲಿ ಆಸ್ತಿಯ ವಿಂಗಡನೆ ರೂಡಿಯಲಿಲ್ಲ. ಇತರೆ ಪತ್ತಿನ ವಲಯದಲ್ಲಿ ಇದು ರೂಡಿಯಲ್ಲಿದೆ. ಅಲ್ಲದೆ ಅದರ ಶ್ರೇಣಿ ಅನುಸಾರ ಲಾಭನಷ್ಟ ತನ್ನೆಯಲ್ಲಿ ನಿವ್ವಳ ಲಾಭ ಪೂರ್ವದಲ್ಲಿ ಅದಕ್ಕಾಗಿ ‘ಅವಕಾಶ’ ಕಲ್ಪಿಸಲಾಗುತ್ತದೆ. ಅದೇ ರೂಡಿಯನ್ನು ಪತ್ತಿನ ಸಹಕಾರ ಸಂಘಗಳಲ್ಲಿ ಅನುಸರಿಸಿದರೆ ಸಂಘದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಕಾಲದಲ್ಲಿ ಸಾಲ ವಸೂಲಾತಿ ಮತ್ತು ಸಾಲ ವಿತರಣೆಯಿಂದ ಸಂಘದ ವ್ಯವಹಾರವನ್ನು ವಿಸ್ತರಿಸ ಕೊಳ್ಳಬಹುದು. ಯಾವುದೇ ಒಂದೇ ವಿಧದ ಸಾಲ ವಿತರಿಸುವ. ಬದಲಿಗೆ ವೈವಿಧ್ಯಮಯ ಸಾಲಗಳನ್ನು ವಿತರಿಸುವುದು ಉತ್ತಮ ಕ್ರಮ. ಒಂದು ವಲಯ ಕೊಂದರೆ ಗೀಡಾದರೂ ಮತ್ತೊಂದು ವಲಯ ಸಂಘವನ್ನು ಕಾಪಾಡುತ್ತದೆ.
ಇತರೆ ಚಟುವಟಿಕೆಗಳು: ಅನೇಕ ಸಹಕಾರ ಸಂಘಗಳ ಕ .ರಾ . ಪ.ಸ.ಸಂ. ಮಹಾಮಂಡಳ , ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಒಡಂಬಡಿಕೆ ಯೊಂದಿಗೆ ಇ-ಸ್ಟಾಂಪ್ ವಿತರಣೆ ಮಾಡುತ್ತಿದ್ದು ಆಧಾಯ ಗಳಿಸುತ್ತಿವೆ. ಇತರೆ ಬ್ಯಾಂಕ್ ಗಳ ಸಹಯೋಗ ದೊಂದಿಗೆ , ಆರ್. ಟಿ.ಜಿ.ಎಸ್. ನೆಪ್ಟ, ಸೌಲಭ್ಯ ಒದಗಿಸುತ್ತಿವೆ.
ಸಮರ್ಪಕ ಬಂಡವಾಳ: (ತೂಕ ಸಹಿತ ಆಸ್ತಿ ಗೆ ಸ್ವಂತ ಬಂಡವಾಳದ ಅನುಪಾತ – Capital to risk weighted asset ratio-CRAR): ಪತ್ತಿನ ಸಹಕಾರ ಸಂಘ ವಲಯ ಹೊರತು ಪಡಿಸಿ ಇತರೆ ವಲಯಗಳಲ್ಲಿ ಸಂಸ್ಥೆ ಯ ಆರೋಗ್ಯದ ಅರಿವಿಗೆ ಇದನ್ನು ಲೆಕ್ಕ ಹಾಕಲಾಗುತ್ತಿದೆ. ಇದು ಕನಿಷ್ಟ ಶೇ 9 ಇರಬೇಕೆಂದು ನಿರೀಕ್ಷಿಸಲಾಗಿದೆ. ಈ ರೂಢಿ ಪದ್ಧತಿ ಈ ವಲಯದಲ್ಲಿ ಬಂದರೆ ಒಳ್ಳೆಯದು. ಇದರಿಂದ ಸದಸ್ಯರಿಗೆ ಉತ್ತಮ ಮಾಹಿತಿ ಒದಗಿಸಿದಂತಾಗುತ್ತದೆ.
ಕರ್ನಾಟಕದಲ್ಲಿ ಪತ್ತಿನ ಸಹಕಾರ ಸಂಘಗಳು ತಮ್ಮದೇ ಮಹಾ ಮಂಡಳ ರಚಿಸಿಕೊಂಡಿದ್ದು , ಮಹಾ ಮಂಡಳವು ಈ ಸಂಘಗಳ ಸಮತೋಮುಖ ಅಭಿವದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಮಹಾ ಮಂಡಳವು ಶಿಕ್ಷಣ, ತರಭೇತಿ , ಪ್ರಚಾರದ ಮೂಲಕ ಈ ಸಹಕಾರ ಸಂಘಗಳ ಬಲ ವರ್ಧನೆಗೆ ಕಾರಣವಾಗಿರುತ್ತದೆ. ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಳಿಗೆಗೆ ಕಾರಣವಾಗಿರುವುದು ಹೆಮ್ಮೆಯ ವಿಷಯವಾಗಿದೆ. ‘ಸಣ್ಣದು ಸುಂದರ ‘ ಮತ್ತು ಇದರ ಒಕ್ಕೂಟ ವ್ಯವಸ್ಥೆಯಿಂದ ಸದಸ್ಯರ ಆರ್ಥಿಕ ಪ್ರಗತಿಗೆ ಕಾರಣವಾಗಿರುವುದು ಶ್ಲಾಘನೀಯ ಮತ್ತು ಈ ವ್ಯವಸ್ಥೆ ಆರ್ಥಿಕ ಪ್ರಗತಿಯೊಡನೆ ಸಾಮಾಜಿಕ ನ್ಯಾಯಕ್ಕೆ ಇದು ಅತ್ಯುತ್ತಮ ಮಾದರಿಯಾಗಿರುತ್ತದೆ. ಈ ಕಾಲಘಟ್ಟದಲ್ಲಿ ಮತ್ತು ಮುಂದೆಯೂ ಈ ವ್ಯವಸ್ಥೆ ಪ್ರಸ್ಥುತತೆ
ಉಳಿಸಿ ಕೊಳ್ಳುವುದರಲ್ಲಿ ಸಂಶಯವಿಲ್ಲ.
ಹಣ ಎಂಬುದು ಗೊಬ್ಬರ ವಿದ್ದಂತೆ, ಗುಡ್ಡೆ ಹಾಕಿಟ್ಟರೆ ದುರ್ನಾತ ಬೀರುತ್ತದೆ. ಹರಡಿದರೆ ಬೆಳೆಯುತ್ತಾ ಹೋಗುತ್ತದೆ. ಜೆ.ಆರ್.ಡಿ. ಟಾಟಾ.
ಶಶಧರ ಎಲೆ.
ಸಹಕಾರ ಸಂಘಗಳ ಅಪರ ನಿಬಂಧಕರು (ನಿವ್ರೃತ್ತ). Additional Registrar of co-operative societies (RTD).