ಜಗತ್ತಿನಲ್ಲಿ ಹಲವಾರು ತತ್ವ ಸಿದ್ದಾಂತಗಳು ಜ್ಯಾರಿಗೆ ಬಂದದ್ದನ್ನು ಇತಿಹಾಸದ ಪುಟಗಳಲ್ಲಿ ನಾವು ಕಾಣಬಹುದು.ಬಂಡವಾಳಶಾಹಿ ಮತ್ತು ನೌಕರಶಾಹಿಗಳು ಇವುಗಳಲ್ಲಿ ಪ್ರಬಲ ಹಾಗೂ ಒಂದಕ್ಕೊಂದು ವಿರುದ್ದ ಧ್ರುವಗಳು. ಇವುಗಳ ಮಧ್ಯದ ತತ್ವದ ಆಧಾರದಲ್ಲಿ ಸಹಕಾರಚಿಂತನೆ ಹುಟ್ಟಿಕೊಂಡಿತು. ಉಗ್ರವಾದ ಇತ್ತೀಚೆಗಿನ ಬೆಳವಣಿಗೆ. ಪುರಾಣದ ರಾಕ್ಷಸ ಸಿದ್ದಾಂತ ಉಗ್ರವಾದ ಬೇರು. ಬಂಡವಾಳವಾದˌ ನೌಕರವಾದˌ ಉಗ್ರವಾದ ಮುಂತಾದ ಯಾವುದೇ ಚಳವಳಿಗಳು ಸರ್ವಜನರ ಬದುಕಿಗೆ ನೆಮ್ಮದಿ ನೀಡಿಲ್ಲ. ಪರಸ್ಪರ ಕೂಡಿ ಬಾಳುವ ಸಹಕಾರ ಸಿದ್ದಾಂತ ನಾಗರಿಕತೆಯ ಜತೆಜತೆಯಲ್ಲಿ ಸಾಗಿಬಂದಿದೆ. ಮತ್ತೆಲ್ಲವು ಕ್ಷಣಿಕ ಅಥವಾ ಒಂದು ವರ್ಗದ ಚಳುವಳಿಗಳಾಗಿದ್ದು ಬಹುಜನರ ಹಿತ ಕಾಪಾಡುವಲ್ಲಿ ವಿಫಲವಾಗಿವೆ.
ಜಗತ್ತಿನ ಸಹಕಾರ ಸಿದ್ದಾಂತಕ್ಕೆ ನಿಯಮಾವಳಿಯ ಚೌಕಟ್ಟು ಬಂದು 165ವರ್ಷಗಳಷ್ಟೇ ಆಗಿದ್ದರೂ ಎಲ್ಲ ರಾಷ್ಟ್ರಗಳಲ್ಲಿ ನಿಯಮಾವಳಿಯಡಿಯಲ್ಲಿ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಕಾರ್ಯಾಚರಿಸುತ್ತಿರುವುದು ಅದರ ಪ್ರಭಾವ ಸಾರಿ ಹೇಳುತ್ತದೆ.
ನಮ್ಮ ದೇಶದಲ್ಲೂ ಹಿರಿಯರ ಮಾರ್ಗದರ್ಶನ ಕಿರಿಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಕಳೆದ 116ವರ್ಷಗಳಲ್ಲಿ ಸಹಕಾರ ಸರ್ವವ್ಯಾಪಿಯಾಗಿ ಪಸರಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಪ್ರತಿಹಳ್ಳಿಯನ್ನು ಸಹಕಾರಚಳವಳಿ ತಲಪಿದೆ.
ಸಹಕಾರಿಸಂಘಗಳು ಬಲಿಷ್ಟವಾಗಿರುವ ಗ್ರಾಮೀಣ ಭಾರತದಲ್ಲಿ ಜನರ ಆರ್ಥಿಕˌ ಸಾಮಾಜಿಕ ಮಟ್ಟವು ಬಲಿಷ್ಟವಾಗಿರುವುದನ್ನು ನಾವು ಗುರುತಿಸಬಹುದು.ನಗರ ಪ್ರದೇಶಗಳು ಸೌಲಭ್ಯನೆಲೆಯಲ್ಲಿ ಎಷ್ಟೇ ಬೆಳೆದರೂ ನಾಡಿನ ಸಮಸ್ತ ಜನರು ಆಹಾರದ ಮೂಲ ಉತ್ಪಾದನೆಗಾಗಿ ಹಳ್ಳಿ ಪ್ರದೇಶವನ್ನು ಅವಲಂಬಿಸುವುದು ಅನಿವಾರ್ಯ. ಇಂದು ಬಹು ಸಂಖ್ಯಾತ ಯುವಕರು ವಿದ್ಯಾವಂತರಾಗಿ ಉದ್ಯೋಗ ಅರಸಿ ನಗರ ಪ್ರದೇಶವನ್ನು ಆಶ್ರಯಿಸುವುದನ್ನು ನಾವು ಕಾಣುತ್ತಿದ್ದೇವೆ. ಯುವಕರು ಉದ್ಯೋಗವನ್ನು ಮುಂದಿಟ್ಟು ನಗರಗಳಿಗೆ ವಲಸೆ ಹೋಗುತ್ತಿರುವುದರಿಂದ ಹಳ್ಳಿಗಳು ಬರಡಾಗುತ್ತಿವೆ. ಕಳೆದ ಮೂವತ್ತು ವರ್ಷಗಳಿಂದ ಹಳ್ಳಿ ಕೃಷಿ, ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ಷೀಣವಾಗುತ್ತಿರುವುದನ್ನು ಗಮನಿಸಬಹುದು. ಹಿಂದೆ ಗ್ರಾಮದ ಕೇಂದ್ರ ಸ್ಧಾನ ಯುವಕರ ಚಟುವಟಿಕೆಗಳ ಕೇಂದ್ರಬಿಂದು. ಪಂಚಾಯತ್ ಕಛೇರಿˌ ಶಾಲೆ ˌಯುವಕಮಂಡಲ ಮಹಿಳಾಮಂಡಲˌ ಕೆಲವೊಂದು ಜೀವನಾಶ್ಯಕ ವಸ್ತುಗಳ ಅಂಗಡಿಗಳುˌಅಂಚೆ ಕಛೇರಿˌ ಅಲ್ಲದೇ ಪ್ರಮುಖವಾಗಿ ಕೃಷಿ ಪತ್ತಿನ ಸಹಕಾರಿ ಸಂಘವೊಂದು ಇದ್ದು ಗ್ರಾಮದ ಜನರು ಪ್ರತಿನಿತ್ಯ ಈ ಗ್ರಾಮ ಕೇಂದ್ರಕ್ಕೆ ಭೇಟಿನೀಡಿ ಇವೆಲ್ಲವನ್ನು ಬಳಸುವುದು ರೂಢಿ. ಆಟೋಟಗಳಿಗಾಗಿ ಯುವಕರು ಸಾಯಂಕಾಲ ಒಟ್ಟಾಗಿ ಮನರಂಜನೆ ವ್ಯಾಯಮವನ್ನು ಪಡೆಯುವುದು ಇನ್ನೊಂದು ಚಟುವಟಿಕೆ.ಹಿರಿಯರು ಈ ಕೇಂದ್ರವನ್ನು ವ್ಯವಹಾರಕ್ಕಾಗಿ ದಿನದ ಇತರ ಸಮಯವನ್ನು ಬಳಸಿದರೆ ಯುವಕರು ಸಂಜೆಯ ವೇಳೆ ಮನರಂಜನೆಗಾಗಿ ತಪ್ಪದೇ ಹಾಜರಿರುತ್ತಿದ್ದುದು ವಿಶೇಷತೆ. ಇಂದು ಯುವಕರ ವಿದ್ಯೆˌ ಉದ್ಯೋಗದ ಕಾರಣ ಅವರು ಹಳ್ಳಿಕೇಂದ್ರದತ್ತ ಆಸಕ್ತಿವಹಿಸುವುದು ಕಡಿಮೆಯಾಗಿದೆ. ಹಳೆಯ ದಿನಗಳಲ್ಲಿ ಸಹಕಾರಿಸಂಘಗಳ ಆಡಳಿತ ಮಂಡಳಿಗಳಲ್ಲಿ ಐವತ್ತು ವರ್ಷ ಮೇಲ್ಪಟ್ಟ ಹಿರಿಯರ ಜತೆ ಮೂವತ್ತರ ಆಸುಪಾಸಿನ ಯುವಕರ ಸಂಖ್ಯೆಯು ಸಮಾನ ನೆಲೆಯಲ್ಲಿ ಕಾಣಬಹುದಾಗಿತ್ತು. ಯುವಕರ ವಲಸೆಯಿಂದಾಗಿ ಇಂದು ಹೆಚ್ಚಿನ ಸಂಖ್ಯೆಯ ಆಡಳಿತಮಂಡಳಿಗಳು ಹಿರಿಯರಿಂದ ತುಂಬಿರುತ್ತದೆ. ಮಾಹಿತಿತಂತ್ರಜ್ಞಾನˌ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಸಹಕಾರಿ ಸಂಘಗಳು ಕೂಡಾ ಬದಲಾವಣೆಯತ್ತ ಹೆಜ್ಜೆಯಿಕ್ಕಬೇಕಾದ ಅನಿವಾರ್ಯತೆ ಬಂದಿದೆ. ಹಿರಿಯರಲ್ಲಿ ಮಾಹಿತಿತಂತ್ರಜ್ಞಾನ ಹಾಗೂ ಆಧುನಿಕತೆಯ ವಿಚಾರದಲ್ಲಿ ತಿಳುವಳಿಕೆಯ ಕೊರತೆ ಎದ್ದು ಕಾಣುತ್ತಿದ್ದು ಯುವಕರು ಈ ನೆಲೆಯಲ್ಲಿ ಆಡಳಿತಕ್ಕೆ ವೇಗ ನೀಡಬೇಕಾದ ಸಾರ್ವಜನಿಕ ಅನಿವಾರ್ಯತೆ ತಲೆದೋರಿದೆ.ಇಂತಹ ಸಂದರ್ಭದಲ್ಲಿ ಕಾರ್ಯನಿರತರಾಗಬೇಕಾದ ಯುವಕರ ತಂಡಗಳ ಕೊರತೆ ಎದ್ದುಕಾಣುತ್ತಿದೆ. ಸಹಕಾರಿ ಕಾನೂನು ಚೌಕಟ್ಟುಗಳಿಗೆ ಚ್ಯುತಿಯಾಗದಂತೆ ಹೊಸತಂತ್ರಜ್ಞಾನ ಹಾಗೂ ಖಾಸಗಿಯವರ ಪೈಪೋಟಿಯನ್ನು ಮೆಟ್ಟಿನಿಂತು ಮುನ್ನಡೆಯಬೇಕಾಗಿದೆ. ಹಳ್ಳಿಗಳಲ್ಲಿ ಕೆಲವು ವಿದ್ಯಾವಂತ ಯುವಕರು ವಾಸಿಸುತ್ತಿದ್ದರೂ ಸಹಕಾರಿ ಸಂಘಗಳಲ್ಲಿ ರಾಜಕೀಯಪಕ್ಷಗಳ ಹಿನ್ನಲೆಯ ಆಡಳಿತಮಂಡಳಿಗಳಿಂದಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಕೆಲವು ಯುವಕರಲ್ಲಿ ಚಿಂತನಾಶಕ್ತಿ ನೈಪುಣ್ಯತೆ ಇದ್ದು ರಾಜಕೀಯ ದೃಷ್ಟಿಯಿಂದ ನಿರ್ಲಿಪ್ತತೆ ಹೊಂದಿರುವುದರಿಂದ ರಾಜಕೀಯಪಕ್ಷಗಳು ಚುನಾವಣಾಹಂತದಲ್ಲಿ “ತಮ್ಮವರಲ್ಲ” ಎಂಬ ಕಾರಣಕ್ಕಾಗಿ ದೂರೀಕರಿಸುವುದು ಸಹಕಾರ ಚಳುವಳಿಗೆ ಆಘಾತಕಾರಿ ವಿಷಯ. ಕೆಲವೊಂದು ಯುವಕರು ಕ್ಷುಲ್ಲಕರಾಜಕೀಯ ಚಟುವಟಿಕೆಗಳನ್ನು ಗಮನಿಸಿ ಆಡಳಿತಕ್ಕೆ ಬರಲು ತಾವಾಗಿ ನಿರಾಕರಿಸುತ್ತಿದ್ದಾರೆ. .ಯುವಕರು ಸದಸ್ಯತ್ವ ಹೊಂದಿ ಸಕ್ರಿಯವಾಗಿ ಸಹಕಾರಿ ಸಂಘಗಳನ್ನು ಬಳಸಿಕೊಳ್ಳದೇ ಇದ್ದಲ್ಲಿ ಸಹಕಾರ ಚಳವಳಿ ಮುಂದೊಂದು ದಿನ ಅಧಃಪತನದತ್ತ ಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸಂಘಗಳ ದೈನಂದಿನ ಚಟುವಟಿಕೆಗಳನ್ನು ಪಕ್ಷರಾಜಕೀಯದ ದೃಷ್ಟಿಯಿಂದ ದೂರೀಕರಿಸಿ ಸರ್ವಸದಸ್ಯಕೇಂದ್ರಿತ ಚಳುವಳಿಯಾಗಿ ಬಿಂಬಿಸುವರೇ ಎಲ್ಲರ ಸಹಕಾರ ಅಗತ್ಯ. ಹಳ್ಳಿಯಲ್ಲಿರುವ ಕನಿಷ್ಟ ಸಂಖ್ಯೆಯ ಯುವಕರ ಸಕ್ರಿಯತೆಯಿಂದ ಸಹಕಾರಸಿದ್ದಾಂತ ಬೆಳೆಯಬಹುದುˌ ಉಳಿಯಬಹುದುˌ
ಸದಸ್ಯತ್ವಹಾಗೂ ಆಡಳಿತದಲ್ಲಿ ಯುವಕರ ಹಿರಿದಾದ ಪಾತ್ರದಂತೆ ಶಿಬಂಧಿವರ್ಗವು ಯುವಕರಿಂದ ಕೂಡಿರರಬೇಕಾದ ಅನಿವಾರ್ಯತೆ ಇದೆ. ಕಾರ್ಯನಿರ್ವಹಣಾಧಿಕಾರಿಯಂತಹ ಪ್ರಧಾನ ಹುದ್ದೆಗೆ ಸಾಕಷ್ಟು ನೈಪುಣ್ಯತೆˌ ಜ್ಞಾನ ಹೊಂದಿರುವ ಅನುಭವಿಯಾಗಿರಬೇಕು. ಕೆಲವೊಂದು ಕಾರ್ಯ ನಿರ್ವಹಣಾಧಿಕಾರಿಗಳಿಗೆ ಕೆಳಗಿನ ಶಿಬಂಧಿಯನ್ನು ಹತೋಟಿಯಲ್ಲಿಟ್ಟು ಸಂಸ್ಥೆಯ ಹಿತಕ್ಕಾಗಿ ದುಡಿಸುವ ಅಂತಃಶಕ್ತಿಯ ಕೊರತೆಯಿರುತ್ತದೆ. ನಿಯಮ ನಿಬಂಧನೆಗಳ ಬಗ್ಗೆ ಗಂಭೀರತೆಯಾಗಲಿ ಅರಿವಾಗಲಿ ಇರುವುದಿಲ್ಲ. ಕೆಳಗಿನ ಹುದ್ದೆಗಳಲ್ಲಿ ಬಹಳಷ್ಟು ವರ್ಷದುಡಿದು ಭಡ್ತಿಹೊಂದಿ ಹುದ್ದೆ ಅಲಂಕರಿಸಿದಾತ ದೈನಂದಿನ ಕಾರ್ಯನಿರ್ವಹಣೆ, ಇಲಾಖಾ ಸಂಪರ್ಕˌ ಇತರ ಸಂಘಗಳ ಜತೆ ವ್ಯಾವಹಾರಿಕ ಬಾಂಧವ್ಯˌ ವಿಶೇಷವಾಗಿ ಸದಸ್ಯರ ಆಗುಹೋಗುಗಳ ಬಗ್ಗೆ ಚಿಂತನೆ ಇಲ್ಲದಾತನಿಂದ ಸಂಸ್ಥೆಯ ಮುನ್ನಡೆ ಅಸಾಧ್ಯ.
ಹಿರಿಯ ಶಿಬಂಧಿಗಳಿಗೆ ಆಧುನಿಕ ತಂತ್ರಜ್ಞಾನವನ್ನು ನಿಭಾಯಿಸುವ ಶಕ್ತಿಯ ಕೊರತೆಯು ಇರುತ್ತದೆ. ಕೆಲವರು ಸಭೆˌ ಮಹಾಸಭೆ ಗಳಲ್ಲಿ ಸಭಾಧ್ಯಕ್ಷರ ಸೂಚನೆಗನುಸರಿಸಿ ಎದ್ದುನಿಂತು ಕಾರ್ಯಸೂಚಿಯ ಮಂಡನೆˌ ಲೆಕ್ಕಪತ್ರದ ಮಾಹಿತಿಗಳನ್ನು ನೀಡುವಷ್ಟು ಶಕ್ತರಾಗಿರುವುದಿಲ್ಲ. ಇಂತಹ ಮುಖ್ಯಕಾರ್ಯ್ರ್ಹಣಾಧಿಕಾರಿಗಳ ಉಸ್ತುವಾರಿಯಲ್ಲಿ ಸಂಸ್ಥೆ ಪ್ರಗತಿಯತ್ತ ಸಾಗಲು ಸಾಧ್ಯವೇ? ಅನನುಭವಿಗಳನ್ನು ಭಡ್ತಿಗೊಳಿಸಿ ಸಂಸ್ಥೆ ಬಸವಳಿಯುವಂತೆ ಮಾಡುವುದು ಅಕ್ಷಮ್ಯ… ಉನ್ನತವ್ಯಾಸಂಗ ಹೊಂದಿದ ಯುವಕರು ಉತ್ಸಾಹಿಗಳಾಗಿರುತ್ತಾರೆ. ಕಾರ್ಯತತ್ಪರತೆ ಅವರಲ್ಲಿರುತ್ತದೆ. ಹೊಸತಂತ್ರಜ್ಞಾನˌವ್ಯಾವಹಾರಿಕ ಕೌಶಲ್ಯತೆಯನ್ನು ಉದ್ಯೋಗದ ಆರಂಭದಲ್ಲೆ ಪಡೆಯುವ ಉತ್ಸುಕತೆಹೊಂದಿ ಸಂಸ್ಥೆಯ ಆಗುಹೋಗುಗಳ ಮೇಲೆ ನಿಯಮನಿ ಬಂಧನೆಗಳಿಗೊಳಪಟ್ಟು ಹತೋಟಿಯನ್ನು ಹೊಂದುವವರಾಗಿರುತ್ತಾರೆ. ಇವರ ಕಾರ್ಯಕೌಶಲ್ಯವನ್ನು ನೇಮಕಾತಿ ಸಂಧರ್ಭದಲ್ಲಿ ಖಚಿತ ಪಡಿಸಿಕೊಳ್ಳುವ ಅವಕಾಶವು ಆಡಳಿತಕ್ಕಿರುವುದರಿಂದ ಸಂಸ್ಥೆಯ ಚಟುವಟಿಕೆ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲ ಪ್ರಧಾನ ಹುದ್ದೆಗೆ ಯುವಜನ ರನ್ನು ಆಯ್ಕೆ ಮಾಡುವ ಅನಿವಾರ್ಯತೆ ಇದೆ. ಸಹಕಾರ ಚಳವಳಿಯ ಬೆಳವಣಿಗೆಯಲ್ಲಿ ಆಡಳಿತದಲ್ಲಾಗಲೀ ಶಿಬಂಧಿಯಲ್ಲಾಗಲೀ ಯುವಕರ ಸಕ್ರಿಯತೆ ಅಗತ್ಯ.
ದೇಶದ ಸರ್ವತೋಮುಖ ಪ್ರಗತಿಗೆ ಆಧುನಿಕ ಸೌಲಭ್ಯಗಳನ್ನು ಬಳಸಿ ಬೆಳೆಸಬೇಕಾದ ಯುವಕರ ಅನಿವಾರ್ಯತೆ ಹೇಗಿದೆಯೋ ಅದೇ ರೀತಿಯಲ್ಲಿ ಪರಿಪೂರ್ಣ ಪ್ರಜಾಪ್ರಭುತ್ವ ಸಿದ್ದಾಂತದಡಿಯಲ್ಲಿ ಸರ್ವರಿಗೂ ಸಮಪಾಲುˌ ಸರ್ವರಿಗೂ ಸಮಬಾಳು… ತತ್ವಕ್ಕನುಸರಿಸಿ ಮುನ್ನಡೆಯಬೇಕಾದ ಸಹಕಾರಚಳವಳಿಗೆ ಬಹುದೊಡ್ಡ ಸಂಖ್ಯೆಯ ಯುವಕರ ಸಕ್ರಿಯ ಪಾಲುಗಾರಿಕೆ ತೀರಾ ಅಗತ್ಯ.
ರಾಧಾಕೃಷ್ಣ ಕೋಟೆ
ಅಂಚೆ:ಕಳಂಜ
ಸುಳ್ಯ ತಾಲೂಕು.
ದ.ಕ 574212
08257201137