ಹೆಸರೇ ಸೂಚಿಸುವಂತೆ
ʻಬ್ರಹ್ಮಚಾರಿಣಿ’
ಬ್ರಹ್ಮ:-ಎಂದರೆ ತಪಸ್ಸು ಅಥವ ಜ್ಞಾನ ಎಂದು ಅರ್ಥ
ಚಾರಿಣಿ:- ಎಂದರೆ ನಡೆಯುವುದು.
“ಬ್ರಹ್ಮಚಾರಿಣಿ” :- ಎಂದರೆ ಜ್ಞಾನಮಾರ್ಗದಲ್ಲಿ ನಡೆಯವುದು ಎಂದರ್ಥ.
ತಾಯಿ ಬ್ರಹ್ಮಚಾರಿಣಿ ದೇವಿಯು ದೃಢತೆ ಮತ್ತು ನಡವಳಿಕೆಯ ಸಂಕೇತ. ತಾಯಿಯು ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ.
ಪಾರ್ವತಿ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ ಈ ಕಾರಣದಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ತಪಸ್ಸು ಮಾಡುತ್ತಿರುವ ಕಾಲದಲ್ಲಿ ಬರೀ ಹೂವು, ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು, ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸಿದಳು, ʻಪರ್ಣʼವೆಂದರೆ ಎಲೆ, ಹಾಗಾಗಿ ಈಕೆಯನ್ನು ʻಅಪರ್ಣಾʼ ಎಂದೂ ಕರೆಯುತ್ತಾರೆ.ನಂತರ ಶಿವನೇ ಒಂದು ಸನ್ಯಾಸಿಯ ರೂಪವನ್ನು ತಾಳಿ ಈಕೆಯ ನಿಷ್ಠೆಯನ್ನು ಪರೀಕ್ಷಿಸುವನು ಹಾಗು ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿ ಶಿವನು ಆಕೆಗೆ ಒಲಿಯುತ್ತಾನೆ.
ನವರಾತ್ರಿಯ ಸಂದರ್ಭದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಸಂಯಮ, ಪರಿತ್ಯಾಗ ಮತ್ತು ನಿರ್ಲಿಪ್ತತೆಯೊಂದಿಗೆ ವ್ಯಕ್ತಿಯಲ್ಲಿ ಸದ್ಗುಣದ ಭಾವನೆಗಳು ಸಹ ಬೆಳೆಯುತ್ತವೆ ಎನ್ನುವ ನಂಬಿಕೆಯಿದೆ.
ಬ್ರಹ್ಮಚಾರಿಣಿ ದೇವಿಯು ಸಕಲರಿಗೂ ಸನ್ಮಂಗಳವನ್ನು ಕರುಣಿಸಲಿ.