ವಿಶ್ವದ ಚಿರಿತ್ರೆಯ ನಾಗರೀಕತೆಯ ಬೆಳವಣಿಗೆಯಲ್ಲಿ ನಾವು ಶಿಲಾಯುಗ, ಕಂಚುಯುಗ, ಕಬ್ಬಿಣ ಯುಗ ಎಂಬ ಹಂತಗಳನ್ನು ಗುರುತಿಸುತ್ತೇವೆ. ಈಗಿನ ಯುಗ ಜ್ಞಾನದ ಯುಗ, ವೇಗದ ಯುಗ, ಮತ್ತು ಮಾಹಿತಿ ತಂತ್ರಜ್ಞಾನದ ಯುಗ. ಮಾಹಿತಿ ತಂತ್ರಜ್ಞಾನ ಅಳವಡಿಕೆ ಇಲ್ಲದೇ ಇದ್ದಲ್ಲಿ ಆ ಕ್ಷೇತ್ರ ಅಥವ ವಲಯದ ಅಸ್ಥಿತ್ವವೇ ಇಲ್ಲದ ಕಾಲಘಟ್ಟದಲ್ಲಿ ನಾವಿದ್ದೇವೆ. ಇದಕ್ಕೆ ‘ ಸಹಕಾರ ಚಳುವಳಿ’ಯೂ
ಹೊರತಾಗಿಲ್ಲ. ಸಾಮಾಜಿಕ ನ್ಯಾಯದೊಡನೆ ಆರ್ಥಿಕ ಬೆಳವಣಿಗೆಗೆ ಕಾರಣವಾದ ಈ ಚಳುವಳಿ ಅಸ್ತಿತ್ವ ಕಳೆದುಕೊಂಡಲ್ಲಿ ಅಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ. ಸಮಾನತೆಯ ಸಮಾಜ ನಿರ್ಮಾಣ ವೇ ‘ಪ್ರಜಾಪ್ರಭುತ್ವ’ ರಾಷ್ಟ್ರದ ‘ಸಂವಿಧಾನ’ದ ಧ್ಯೇಯವಾಗಿರುತ್ತದೆ. ಈ ದಿಸೆಯಲ್ಲಿ ಸಹಕಾರ ಚಳುವಳಿಯು ಎಷ್ಟರ ಮಟ್ಟಿಗೆ ಮಾಹಿತಿ ತಂತ್ರಜ್ಞಾನಕ್ಕೆ ಪ್ರಾಧಾನ್ಯತೆ ನೀಡಿದೆ. ಅದನ್ನು ಅಳವಡಿಸಿ ಕೊಂಡು ಕಾರ್ಯನಿರ್ವಹಿಸುತ್ತಿದೆ. ಅದರ ಪ್ರಯೋಜನ ಪಡೆದು ಚಳುವಳಿಯ ಬೆಳವಣಿಗೆಗೆ ಕಾರಣವಾಗಿರುತ್ತದೆ ಎಂಬುದರ ಪರಮಾರ್ಶೆ ಈ ದಿನದ ಅತ್ಯಂತ ಅಗತ್ಯತೆ.
ಇದು ಸ್ಪರ್ಧಾತ್ಮಕ ಯುಗ ಕೂಡ ಆಗಿರುತ್ತದೆ. ಸ್ಪರ್ಧೆಯಲ್ಲಿ ಯಶಸ್ವಿಯಾದವರು ಮಾತ್ರ ಉಳಿಯುತ್ತಾರೆ. ಇತರರು ಅಳಿಯುತ್ತಾರೆ. ಸ್ಪರ್ದೆಯಲ್ಲಿ ಗೆಲ್ಲುವವರು ಈ ದಿನದ ಅವಶ್ಯಕತೆಯಾದ ಮಾಹಿತಿ ತಂತ್ರಜ್ಞಾನದ ಅವಶ್ಯಕತೆ ಆದರ ಉಪಯುಕ್ತತೆ ಅರಿತವಾಗಿರುತ್ತಾರೆ. ಆದುದರಿಂದ ಅದನ್ನು ಅಳವಡಿಸಿಕೊಂಡು ತಮ್ಮ ವ್ಯವಹಾರವನ್ನು ನಡೆಸುತ್ತಿರುತ್ತಾರೆ. ಅದರಿಂದ ಅವರು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಈ ದಿನಮಾನಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence -AI) ಉಪಯೋಗಿಸಿಕೊಂಡು ತಮ್ಮ ಉತ್ಪನ್ನ ಗಳನ್ನು ಮಾರುಕಟ್ಟೆ ಮಾಡಲು ಜಾಹಿರಾತು ಮತ್ತು ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲಾಗುತ್ತಿದೆ. ಮತ್ತು ನೂತನ ಮಾರುಕಟ್ಟೆ ಯನ್ನು ಈ ‘ಕೊಳ್ಳು ಬಾಕು’ ಸಂಸ್ಕೃತಿಯಲ್ಲಿ ಹುಟ್ಟು ಹಾಕಲಾಗುತ್ತಿದೆ. ಈ ಸ್ಪರ್ಧಾ ಯುಗದಲ್ಲಿ ಸಹಕಾರ ಚಳುವಳಿಯ ಈ ‘ಅನುಕೂಲತೆ’ ‘ಕುಶಲತೆ’ ಯನ್ನು ಉಪಯೋಗಿಸಿ ಕೊಳ್ಳದಿದ್ದಲ್ಲಿ ‘ ಸಹಕಾರ ಚಳುವಳಿ’ ಹಿಂದೆ ಉಳಿಯುತ್ತದೆ. ಇದರಿಂದ ಆಗುವ ನಷ್ಟ ಸಮಾಜಕ್ಕೆ ಭರಿಸಲು ಇತರರಿಂದ ಸಾಧ್ಯವಿಲ್ಲ.
ಪತ್ತು ಮತ್ತು ಬ್ಯಾಂಕಿಂಗ್ ವಲಯ: ಭಾರತದಲ್ಲಿ ‘ಪತ್ತು’ ಮತ್ತು ‘ಸಹಕಾರ ‘ ಒಂದೇ ನಾಣ್ಯದ ಎರಡು ಮುಖಗಳು ಎಂಬಂತೆ ಸಹಕಾರ ಚಳುವಳಿ ಬೆಳೆದು ಬಂದಿರುವುದನ್ನು ನಾವು ಕಂಡಿರುತ್ತೇವೆ. 1960-70 ರ ದಶಕದ ವರೆಗೆ ಈ ವಲಯ ಬಹಳಷ್ಟು ‘ ಸಹಕಾರ ‘ ಏಕಸ್ವಾಮ್ಯತೆಯನ್ನು ಪಡೆದಿತ್ತು ಎಂದರೆ ತಪ್ಪಾಗಲಾರದು. ಆದರೆ ಈ ವಲಯದಲ್ಲಿ ನಮ್ಮ ಪಾಲು ಎಷ್ಟಿದೆ ? ನಗಣ್ಯ ವೇ ಎಂಬ ಹಂತಕ್ಕೆ ತಲುಪಿದ್ದೇವೆ. (ಶೇ 44 – 1990-91 ಶೇ 16 2020 – 21) ಮೊತ್ತದಲ್ಲಿ ಏರಿಕೆಯಾಗಿದ್ದರೂ , ಸಂಖ್ಯೆಯಲ್ಲಿ ಏರಿಕೆಯಾಗಿದ್ದರೂ ವಾಣಿಜ್ಯ, ಖಾಸಗಿ , ಗ್ರಾಮೀಣ ಬ್ಯಾಕ್ ಗಳ ಪಾಲು ಹೆಚ್ಚಿಗೆಯಾಗುತ್ತಿದ್ದು ‘ ಸಹಕಾರ ವಲಯ’ ಸ್ಪರ್ಧೆಯಲ್ಲಿ ಹಿಂದಿದೆ ಎಂಬುದು ಕಟು ವಾಸ್ತವ. ಇದಕ್ಕೆ ಹಲವಾರು ಕಾರಣಗಳಿದ್ದರೂ ಅದರಲ್ಲಿ ‘ಮಾಹಿತಿ ತಂತ್ರಜ್ಞಾನ’ದ ಅಳವಡಿಕೆ , ‘ ಕಂಪ್ಯೂಟರೀಕರಣ’ ‘ಗಣಕ ಯಂತ್ರ’ ಅಳವಡಿಕೆಯಲ್ಲಿ ಹಿಂಜರಿಕೆಯೂ ಒಂದು ಕಾರಣವಾಗಿದೆ. ‘ಬ್ಯಾಂಕಿಂಗ್ ‘ ಎಂದರೆ ಸಾಲ (ಪತ್ತು ) ನೀಡುವ ಮತ್ತು ಹೂಡಿಕೆ ಉದ್ದೇಶಕ್ಕಾಗಿ ‘ಸಾರ್ವಜನಿಕರಿಂದ ಠೇವಣಿ ಸಂಗ್ರಹ ಣಿ’, ಬೇಡಿಕೆಯಂತೆ ಹಣ ಹಿಂತಿರುಗಿ ಪಡೆಯುವ ಮತ್ತು ಚೆಕ್, ಡಿ. ಡಿ. ಅಥವ ಇತರೆ ಉಪಕರಣ (instrument ) ಮೂಲಕ ಅಥವ ಇನ್ನಾವುದೇ ತರಹೆಯಲ್ಲಿ ಹಣ ಹಿಂದಿರುಗಿಸಲು ಅಥವ ವರ್ಗಾಯಿಸಲು ಸಾಧ್ಯವಾಗುವುದು. ಆದರೆ ಸಹಕಾರ ಸಂಘಗಳಲ್ಲಿ ಈ ವ್ಯವಹಾರವು ‘ಸದಸ್ಯ ‘ ರೊಡನೆ ಮಾತ್ರ ಸಾಧ್ಯ. ಈ ಚಟುವಟಿಕೆಯಲ್ಲಿ ವ್ಯವಸ್ಥಾಪನೆ, ಲೆಕ್ಕ ನಿರ್ವಹಣೆ, ಠೇವಣಿ ಸಂಗ್ರಹಣೆ, ಸಾಲ ನೀಡಿಕೆ, ಸಾಲವಸೂಲಿ ಎಲ್ಲ ಕಾರ್ಯಗಳಲ್ಲಿಯೂ ಮಾಹಿತಿ ತಂತ್ರಜ್ಞಾನ ಅವಿಭಾಜ್ಯ ಅಂಗವಾಗಿರುತ್ತದೆ. ಆರಂಭದಲ್ಲಿ ಘಟಕ ವಾರು ಕಂಪ್ಯೂಟರೀಕರಣ ಈಗ ‘ಕೋರ್ ಬ್ಯಾಂಕಿಂಗ್,’ ಹಂತ ತಲುಪಿ ಒಬ್ಬ ಗ್ರಾಹಕ ‘ ಎಲ್ಲಿಯಾದರೂ , ಯಾವಗಲಾದರೂ ‘ ಬ್ಯಾಂಕಿಂಗ್ ವ್ಯವಹಾರ ನಡೆಸಲು ಸಶಕ್ತತೆಯನ್ನು ಪಡೆದಿರುತ್ತಾನೆ. ತನ್ನ ಮೊಬೈಲ್ (ಚರ ದೂರವಾಣಿ ಸಾಧನ ) ನಲ್ಲಿ ತನ್ನ ಖಾತೆ ವೀಕ್ಷಿಸುವ, ಹಣ ವರ್ಗಾಯಿಸುವ, ಹಣ ಜಮಾ ಮಾಡುವ, ನಗದು ಎ, ಟಿ.ಎಂ. ನಿಂದ ಪಡೆಯುವ ಸಾಲಕ್ಕೆ ಅರ್ಜಿ ಸಲ್ಲಿಸಲು, ಸಾಲ ಪಡೆದು ಹಣ ಡ್ರಾ ಮಾಡಲು ಸಾಧ್ಯವಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ಷಣ ಮಾತ್ರದಲ್ಲಿ ಹಣ ವರ್ಗಾವಣೆ ಸಾಧ್ಯವಾಗಿದೆ. ಆದದರಿಂದ ಖರೀದಿ ಶಕ್ತಿ ಹೆಚ್ಚುತ್ತಿದೆ. ‘ಡಿಜಿಟಲ್’ ‘ವ್ಯವಹಾರಗಳಿಗೆ ಉತ್ತೇಜನ ನೀಡಲಾಗುತ್ತಿದೆ. ‘ಡಿಜಿಟಲೀಕರಣ ‘ ಎಂದು ಕರೆಯಲಾಗುತ್ತಿದೆ. ನಗದು ವ್ಯವಹಾರಗಳ ಮೇಲೆ ‘ವೆಚ್ಚ’ ವಿಧಿಸಲಾಗುತ್ತಿದೆ. ಆಟೋ ಚಾಲಕರು, ಸಣ್ಣ , ಸಣ್ಣ ವ್ಯಾಪಾರಸ್ಥರು ಕೂಡ ಪೇ ಟಿ.ಎಂ. ಗೂಗಲ್ ಪೇ ಅವಲಂಭಿಸಿರುವುದನ್ನು ಕಾಣುತ್ತಲಿದ್ದೇವೆ. ಇದರಿಂದ ರಾಷ್ಟ್ರದ ಆರ್ಥಿಕತೆ ಬಲಗೊಳ್ಳುತ್ತಲಿವೆ. ಆರ್ಥಿಕ ಸೇರ್ಪಡೆಗೆ ಕಾರಣವಾಗಿರುತ್ತದೆ. ನಮ್ಮ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್ ಗಳು ಆಧುನಿಕ ಈ ಎಲ್ಲ ಸೌಲಭ್ಯ ಒಳಗೊಳ್ಳುವ ಮೃದು ತಂತ್ರಜ್ಣಾನ(software) ಅಳವಡಿಸಿಕೊಳ್ಳಬೇಕು. ಕೋರ್ ಬ್ಯಾಂಕಿಂಗ್ (centralised online real time -CORE, banking) ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ತಮ್ಮದು ಸಣ್ಣ ವ್ಯವಹಾರವಾದಲ್ಲಿ ಇತರೆ ಬ್ಯಾಂಕ್ ನ ಸಹಯೋಗ ದಿಂದ ‘ಸ್ವಿಚ್’ ನ್ನು ಅಳವಡಿಸಿಕೊಳ್ಳಬೇಕು ಇದರಿಂದ ಆರ್. ಟಿ. ಜಿ.ಎಸ್. (real time gross settlement) ನೆಫ್ಟ್(national eloctranic fund transfer) ಸಾಧ್ಯವಾಗುತ್ತದೆ. ತಮ್ಮ ಲೆಕ್ಕ ನಿರ್ವಹಣೆ ಸುಲಭ ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿ, ನಗದು ಒಳ ಮತ್ತು ಹೊರ ಹರಿವು, ನಿಧಿಗಳ ನಿರ್ವಹಣೆ, ಒಟ್ಟಾರೆ ಆಸ್ತಿ ಜವಾಬ್ದಾರಿ ನಿರ್ವಹಣೆ ಸುಲಭ ಸಾಧ್ಯವಾಗುವುದಲ್ಲದೇ ಲಾಭದಾಯಕ ನಿರ್ವಹಣೆ ಸಾಧ್ಯವಾಗುತ್ತದೆ. ಸಾಲ ವಸೂಲಾತಿಗೆ ಹೆಚ್ಚು ಗಮನ , ಎನ್.ಪಿ. ಎ. ನಿರ್ವಹಣೆ, ಸೋರಿಕೆಗಳ ತಡೆಗಟ್ಟುವಿಕೆ ಸುಲಭ ಸಾಧ್ಯವಾಗುತ್ತದೆ. ಠೇವಣಿ ದಾರ ರೊಂದಿಗೆ , ಸಾಲಗಾರ ರೊಂದಿಗೆ ಸುಸಂಪರ್ಕ ಹೊಂದಲು , ಅವರಿಗೆ ಸಕಾಲದಲ್ಲಿ ನೆನಪಿಸಲು (ಸಂದೇಶಗಳನ್ನು ರವಾನಿಸುವ ಮೂಲಕ) ಸಾಧ್ಯವಾಗಿಸಿದೆ. ತನ್ನ ಪ್ರಚಾರಕ್ಕೆ, ನೂತನ ಠೇವಣಿ ಉತ್ಪನ್ನ ಮತ್ತು ಸಾಲದ ಉತ್ಪನ್ನ (products) ಸದಸ್ಯರಿಗೆ ಗ್ರಾಹಕರಿಗೆ ತಿಳಿಸಲು, ನೆನಪಿಸಲು ಸಾಧ್ಯವಾಗುತ್ತದೆ. ಜಾಹಿರಾತು ಗೆ ಅತ್ಯಂತ ಅನುಕೂಲ ಕಲ್ಪಿಸುತ್ತದೆ. ಕೃತಕ ಬುದ್ಧಿಮತ್ತೆ(AI) ನ್ನು ಕೂಡ ಉಪಯೋಗಿಸಿಕೊಳ್ಳಬೇಕಿದೆ. ಈ ಎಲ್ಲ ಅನು ಕೂಲತೆ ಒದಗಿಸಲು ಸಾಧ್ಯವಾಗಿರುವುದು ‘ಇಂಟರ್ನೆಟ್ ‘ (ಅಂರ್ಜಾಲ ) ವ್ಯವಸ್ಥೆಯಿಂದ, ಈ ಒಂದು ಸಂಪರ್ಕ ಸಾಧನ ಸಾಮಾಜಿಕ ಜಾಲ ತಾಣಗಳ ಮೂಲಕ ಕೂಡ ಸಂಪರ್ಕ ಮಾಹಿತಿ ಒದಗಿಸುವ ಪ್ರಚಾರ ಸಾಧನವಾಗಿ ಬಳಸಬೇಕಾಗಿದೆ. ಹಾಗಿದ್ದಲ್ಲಿ ಮಾತ್ರ ಯುವ ಜನತೆಯನ್ನು ಮುಟ್ಟಲು ಸಾಧ್ಯವಾಗುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಸಹಕಾರ ಸಂಘಗಳ ಸೇವೆ ಸೌಲಭ್ಯಗಳನ್ನು ಕೊಂಡಯ್ಯ ಬಹುದು. ಒಟ್ಟಾರೆ ಆರ್ಥಿಕತೆಯಲ್ಲಿ ತನ್ನ ಭಾಗವನ್ನು ಸಹಕಾರ ಚಳುವಳಿ ಹಿಗ್ಗಿಸಿಕೊಳ್ಳಲು ಸಾಧ್ಯವಾಗುತ್ತದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು: ಗ್ರಾಮೀಣ ಜನತೆಗೆ ಎಟುಕುವ , ಕೃಷಿ ಅಗತ್ಯತೆಗೆ ಅಗತ್ಯ ದುಡಿಯುವ ಬಂಡವಾಳ ಒದಗಿಸುವ , ಅದರಲ್ಲಿಯೂ ಸಣ್ಣ ಮತ್ತು ಅತಿ ಸಣ್ಣ ರೈತರ ಅಗತ್ಯತೆ ಪೂರೈಸುವ ಈ ಸಹಕಾರ ಸಂಘಗಳು ಕೂಡ ಮಾಹಿತಿ ತಂತ್ರಜ್ಞಾನ ಉಪಯೋಗಿಸುವಲ್ಲಿ ಹಿಂದೆ ಬೀಳುವ೦ತಿಲ್ಲ. ಈಗಾಗಲೇ ಕಡ್ಡಾಯವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿ. ಡಿ. ಎಸ್.) ಪಡಿತರ ವಿತರಣೆಗೆ , ಬೆಳೆಸಾಲ ವಿತರಣೆಯಲ್ಲಿ ‘ಪ್ರೂಟ್ಸ್’ ತಂತ್ರಾಂಶ ಬಳಕೆ ಮಾಡಬೇಕಾಗಿದೆ. ಲೆಕ್ಕಗಳನ್ನು ‘ ಸಾಮಾನ್ಯ ಲೆಕ್ಕ ಪದ್ಧತಿ’ ಅನುಸರಿಸಬೇಕಾಗಿದೆ. ಇದಕ್ಕೆ ನಬಾರ್ಡ್ ತಂತ್ರಾಂಶ ರಚಿಸಿ ನೀಡಿದೆ. ಸಂಘಗಳಲ್ಲಿ ಜಿ. ಕೇ.ಸ.ಬ್ಯಾಂಕಿನ ಶಾಖೆ ಯೊಡನೆ ಜೋಡನೆಯಾಗಿ, ‘ಮೈಕ್ರೊ ಎ.ಟಿ.ಎಂ. ‘ ಗಳ ಸ್ಥಾಪನೆಯಾಗಿದೆ. ಎಲ್ಲ ಸಹಕಾರ ಸಂಘಗಳು ಈ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲೇ ಬೇಕಾಗಿದೆ. ಆಗ ಮಾತ್ರ ಅಲ್ಪಾವಧಿ ಕೃಷಿ ಪತ್ತಿನ ರಚನೆಯ ಬುನಾದಿ ಯಾದ ಈ ಸಂಘಗಳು ಉಳಿದು ಹೆಚ್ಚಿನ ಕೊಡುಗೆ ನೀಡಬಲ್ಲವು.
ಉತ್ಪನ್ನ ಸಂಗ್ರಹಣೆ ಸಂಸ್ಕರಣೆ (ರೂಪಾಂತರ) ಮಾರಾಟ ಸಹಕಾರ ಸಂಘಗಳು: ಧಾನ್ಯ, ಬೆಳೆಕಾಳು, ಎಣ್ಣಿ ಕಾಳು, ವಾಣಿಜ್ಯ ಬೆಳೆಗಳಾದ ಅಡಕೆ, ರಬ್ಬರ್ ಈ ಸಹಕಾರ ಸಂಘಗಳು ಕೂಡ ಮಾಹಿತಿ ತಂತ್ರಜ್ಣಾನ ಸೌಲಭ್ಯಗಳನ್ನು ಪಡೆಯಲು ಕಂಪ್ಯುಟರೀಕರಣ ಗೊಳ್ಳಲೇಬೇಕು. ಮಾರುಕಟ್ಟೆ ಮಾಹಿತಿಗಳು ಅಂತರ್ಜಾಲ ದಿಂದ ಲಭ್ಯವಿದ್ದು ಉತ್ಪಾದಕರಿಗೆ ಉತ್ತಮ ನ್ಯಾಯಯುತ ಧರ ದೊರಕಿಸಿಕೊಡಲುು ಸಾಧ್ಯವಾಗುತ್ತದೆ. ಸಂಸ್ಕರಣೆ ( ಮೌಲ್ಯವರ್ಧನೆ) ಮಾಡಿ ಮಾರಾಟ ಮಾಡುವಲ್ಲಿ ಇದು ಸಹಕಾರಿ. ಪ್ಯಾಕೇಜಿಂಗ್, ಸಂಗ್ರಹಣಿ, ‘ಸಾಗಾಣಿ, ಚಿಲ್ಲರೆ ಮಾರಾಟ , ಚಿಲ್ಲರೆ ಮಾರಾಟ ಏಜೆನ್ಸಿಗಳೊಡನೆ ವ್ಯವಹಾರ ಎಲ್ಲಕ್ಕೂ ಮಾಹಿತಿ ತಂತ್ರಜ್ಞಾನ ದ ಅಳವಡಿಕೆ ಅತಿ ಅವಶ್ಯ. ಆನ್ ಲೈನ್ ಮಾರಾಟಕ್ಕೂ ವಿವಿಧ ‘ಪ್ಲಾಟ್ ಫಾರಂ’ ಗಳನ್ನು (ಅಮೇಜಾನ್, ಪ್ಲಿಪ್ ಕಾರ್ಟ್, ಬಿಗ್ ಬಾಸ್ಕೆಟ್, ಇತರೆ) ಉಪಯೋಗಿಸಿಕೊಳ್ಳಲೇ ಬೇಕು. ಆಗ ಮಾತ್ರ ಈಗ ಖರೀದಿ ಶಕ್ತಿ ಉಳ್ಳ ಯುವ ಜನತೆಯನ್ನು ಮುಟ್ಟಬಹುದಾಗಿದೆ. ಆಗ ಮಾತ್ರ ಈ ಸಹಕಾರ ಕ್ಷೇತ್ರ ಉಳಿಯಬಹುದಾಗಿದೆ.
ಹಾಲು ಉತ್ಪಾದನೆ ಸಹಕಾರ ವಲಯ: ‘ಅಮುಲ್ ‘ ಮತ್ತು ‘ ಅಮುಲ್ ಮಾದರಿ’ ‘ನಂದಿನಿ’ ಯಶಸ್ಸಿನ ಹಿಂದಿನ ಗುಟ್ಟು , ಮಾರುಕಟ್ಟೆಯಲ್ಲಿ ಮೇಲೆ ತಿಳಿಸಿದ ಎಲ್ಲ ಮಾಹಿತಿ ತಂತ್ರಜ್ಞಾನದ ತಂತ್ರಗಾರಿಕೆಯ ಅಳವಡಿಕೆಯೇ ಆಗಿದೆ. ಬೆಂಗಳೂರಿನ ‘ ಹಾಪ್ ಕಾಮ್ಸ್ ‘ ಆನ್ ಲೈನ್ ಮಾರುಕಟ್ಟೆ ಆರಂಭಿಸಿರುವುದು ಶ್ಲಾಘನೀಯ. ಸಿರ್ಸಿಯ ‘ ಕದಂಬ ಸೌಹಾರ್ಧ ‘ ಉತ್ಪನ್ನ ‘ ಮೆಣಸು, ಏಲಕ್ಕಿ, ಚಕ್ಕೆ, ಲವಂಗ, ಮುಂತಾದ ಸಾಂಬಾರು ಪದಾರ್ಥಗಳು ಆಕರ್ಷಣೀಯ ಪ್ಯಾಕೆಟ್ ಗಳಲ್ಲಿ ‘ಆನ್ ಲೈನ್’ ನಲ್ಲಿ ಲಭ್ಯವಿರುತ್ತದೆ. ಇದರಂತೆ ಇತರೆ ಸಹಕಾರ ಸಂಘಗಳು ಕೂಡ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಲ್ಲಿ ಸಹಕಾರದ ಪಾಲನ್ನು ವಿಸ್ತರಿಸಿ ತನ್ನ ಸದಸ್ಯರಿಗೆ ಸೇವೆ, ಸೌಲಭ್ಯ, ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ.
ಗ್ರಾಹಕ ಸಹಕಾರ ಸಂಘಗಳು: ಗ್ರಾಹಕ ಸಹಕಾರ ವಲಯವೇ ಗ್ರಾಹಕರಿಗೆ ತಾವೇ ತಮಗೆ ಬೇಕಾದ ವಸ್ತುಗಳನ್ನು ತಾವೇ ಆರಿಸಿ ಕೊಂಡುಕೊಳ್ಳುವ ಸೌಲಭ್ಯ ರೂಪಿಸಿದ್ದು, ಆದರೆ ಈಗ ಖಾಸಗಿ ಚಿಲ್ಲರೆ ಮಾರಾಟ ವಲಯದ ಸ್ಪರ್ಧೆ ಎದುರಿಸಲಾಗದೆ ಸಹಕಾರ ಗ್ರಾಹಕ ವಲಯ ಪೂರ್ಣ ಸ್ಥಗಿತ ಗೊಂಡಿರುವುದನ್ನು ಕಾಣುತ್ತಲಿದ್ದೇವೆ. ಆದರೆ ಯುರೋಪ್ ಖಂಡದಲ್ಲಿ ಈ ವಲಯ ಪ್ರಬುದ್ಧವಾಗಿ ಬೆಳೆದು ಈಗಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನಮ್ಮ ರಾಷ್ಟ್ರದಲ್ಲಿ ಈ ರೀತಿ ಬೆಳವಣಿಗೆ ಯಾಗದಿರುವುದು ವಿಷಾದನೀಯ. ಯೂರೋಪ್ ಖಂಡದಲ್ಲಿ ಅತ್ಯಂತ ಆಧುನಿಕ ಮಾಹಿತಿ ತಂತ್ರಜ್ಞಾನದ
ತಂತ್ರಾಂಶ ಅಳವಡಿಕೆ , ಬಂಡವಾಳದ ಕ್ರೋಡೀಕರಣ ವೇ ಯಶಸ್ಸಿಗೆ ಕಾರಣವಾಗಿರುತ್ತದೆ.
ಮೀನುಗಾರಿಕೆ ಸಹಕಾರ ಸಂಘಗಳು: ಕರಾವಳಿ ಪ್ರದೇಶದಲ್ಲಿ ಸಮುದ್ರ ಮೀನುಗಾರಿಕೆ ಯಲ್ಲಿ ಮೀನು ಲಭ್ಯವಿರುವ ಪ್ರದೇಶದ ಬಗ್ಗೆ ದೂರ ಸಂವೇದಿ ಉಪಕರಣಗಳಿಂದ ಮಾಹಿತಿ ದೊರೆಯುತ್ತಿದ್ದು ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿರುವವರಿಗೆ ಪ್ರದೇಶದ (ಅಕ್ಷಾಂಶ, ರೇಖಾಂಶ) ಮಾಹಿತಿಯನ್ನು ರವಾಗಿಸಲಾಗುತ್ತಿದೆ. ಇದರಿಂದ ಮೀನಿನ ಲಭ್ಯತೆಗೆ ಕಾರಣ ವಾಗುತ್ತಿದೆ. ಅಲ್ಲದೇ ಸಹಕಾರ ಸಂಘಗಳ
ಕಾರ್ಯನಿರ್ವಹಣೆ ಯಲ್ಲಿ, ಕಂಪ್ಯೂಟರಿಕರಣ ಸಹಾಯಕ್ಕೆ ಬಂದಿರುತ್ತದೆ. ಮತ್ತೂ ಹೆಚ್ಚಿನ ವಿಸ್ತರಣೆ ಸಹಕಾರದ ಪಾಲನ್ನು ಹೆಚ್ಚಿಸಲು ಸಹಾಯವಾಗುತ್ತದೆ.
“ಬದಲಾವಣೆ ಜಗದ ನಿಯಮ ” . ಯಾವುದು ಸ್ಥಿರ ವೆಂದರೆ ” ಬದಲಾವಣೆ ” ಯೇ ಸ್ಥಿರ ಎಂಬ ಮಾತಿದೆ. ಬದಲಾವಣೆಗೆ ಹೊಂದಿಕೆಯಾಗದಿದ್ದಲ್ಲಿ ಅಸ್ಥಿತ್ವವೇ ಇಲ್ಲವಾಗುತ್ತದೆ. ‘ಅಪ್ ಡೇಟ್’ ಆಗದಿದ್ದಲ್ಲಿ ‘ಔಟ್ ಡೇಟ್’ ಆಗುತ್ತೇವೆ. ಎಂಬ ಮಾತು ದಿಟವಾಗುತ್ತದೆ. ಆದುದರಿಂದ ಸಹಕಾರ ಚಳುವಳಿಯ ಭವಿಷ್ಯ ದೃಷ್ಟಿಯಂದ ಸಹಕಾರ ಸಂಘಗಳು ‘ಮಾಹಿತಿ ತಂತ್ರಜ್ಣಾನ ‘ ದ ಬಹುಮುಖ ಬಳಕೆ ಮಾಡಬೇಕು. ಡಿಜಿಟಲೀಕರಣ’ ಕೈಗೊಳ್ಳಬೇಕು. ಅದರ ಸದ್ಭಳಕೆ ಅತಿ ಅಗತ್ಯ, ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಶಶಿಧರ. ಎಲೆ.
ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) ನಂ. 281, ನೇಸರ, ಬಾಲಾಜಿ ಹೆಚ್.ಬಿ. ಸಿ.ಎಸ್ ಲೇಔಟ್ ‘ ವಾಜರಹಳ್ಳಿ ಕನಕಪುರ ರಸ್ತೆ, ಬೆಂಗಳೂರು 560 109