ಇತ್ತೀಚೆಗೆ ಸಾಮಾಜಿಕ ಜಾಲತಾಣವೊಂದರಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವೊoದರ ಆಡಳಿತ ಮಂಡಳಿಯವರು ಶಿರಸಿ ಭಾಗದ ಸಹಕಾರಿ ಸಂಘಗಳ ಬಗ್ಗೆ ಅಧ್ಯಯನ ಪ್ರವಾಸ ಹೊರಟ ಚಿತ್ರ ಮತ್ತು ವರದಿಯನ್ನು ನೋಡಿದೆ. ಇದು ಇತರ ಸಹಕಾರಿ ಸಂಘಗಳಿಗೆ ಒಂದು ಆದರ್ಶ. ನಮ್ಮ ಸಹಕಾರಿ ಸಂಘ ಎಷ್ಟೇ ಸಾಧನೆಗಳನ್ನು ಮಾಡಿದ ಸಂಸ್ಥೆ ಆಗಿರಬಹುದು, ಆದರೆ ಅದು ಇನ್ನೂ ಸಾಧಿಸಬೇಕಾದ ವಿಷಯಗಳು ಹಲವಾರಿರಬಹುದು ಎಂಬ ಕಲ್ಪನೆ ಅದರ ಆಡಳಿತ ಮಂಡಳಿಗೆ ಬೇಕು. ನಾವು ಕಾಲಬದಲಾದಂತೆ ಬದಲಾಗದಿದ್ದರೆ ನಮ್ಮ ನೆರೆಹೊರೆಯ ಸಹಕಾರಿಗಳು ಬಹಳಷ್ಟು ಮುಂದೆ ನಡೆದು ಬಿಟ್ಟಾರು. ಈ ಬದಲಾವಣೆಗೆ ಹೊಸ ಅರಿವು, ತಿಳುವಳಿಕೆ ನಮ್ಮಲ್ಲಿ ಮೂಡಬೇಕು. ಹತ್ತಾರು ಕಡೆ ಪ್ರವಾಸ ಹೋಗಿ ಅಲ್ಲಿಯ ಅಧ್ಯಯನದಿಂದ ನಮ್ಮ ಅನುಭವದೆಸಳುಗಳನ್ನು ಹೆಚ್ಚಿಸುವ ಚಾಕಚಕ್ಯತೆ ನಾವು ಬೆಳೆಸಿಕೊಳ್ಳಬೇಕು.
ಇದು ತಿರುಗಾಟವಲ್ಲ
ಅಧ್ಯಯನ ಪ್ರವಾಸವೆಂದರೆ ತಿರುಗಾಟವಲ್ಲ. ಅಧ್ಯಯನದ ಹೆಸರಿನಲ್ಲಿ ಸಂಘದ ಹಣದಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ತಾರಾ ಹೋಟೆಲ್ ಗಳಲ್ಲಿ ಬೀಡು ಬಿಡುವುದಲ್ಲ. ಒಂದು ಅಧ್ಯಯನ ಪ್ರವಾಸವನ್ನು ಒಂದೆರಡು ದಿವಸಕ್ಕೆ ಸೀಮಿತವಿಟ್ಟು ಒಂದು ತಪ್ಪಿದರೆ ಎರಡು ಸಹಕಾರಿ ಸಂಘಗಳ ಬಗ್ಗೆ ಅಧ್ಯಯನ ನಡೆಸುವುದು ವಿಹಿತ.
ಅಧ್ಯಯನ ನಡೆಸುವ ನಿರ್ದೇಶಕರು ಅಥವ ಸಿಬ್ಬಂದಿಗಳಿಗೆ ಆಸಕ್ತಿ ಬೇಕು. ಕಾಟಾಚಾರಕ್ಕೆ ಮಣೆ ಹಾಕಬಾರದು. ಈಗಾಗಲೆ ಹತ್ತು ಹಲವಾರು ವಿಷಯಗಳಲ್ಲಿ ಜನಮಾನಸದಲ್ಲಿ ಗುರುತಿಸಲ್ಪಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ಇನ್ನಾವುದೆ ಸಹಕಾರಿ ಸಂಸ್ಥೆಯನ್ನು ಗುರುತಿಸಿಕೊಂಡೆ ಅಧ್ಯಯನ ನಡೆಸುವುದರಿಂದ ಪೂರ್ವ ತಯಾರಿ ಎಂದರೆ ಮಾನಸಿಕವಾಗಿ ಸಿದ್ಧವಾಗುವುದಷ್ಟೆ.
ಮುಕ್ತವಾದ ಸಂವಾದ
ಅಧ್ಯಯನ ನಡೆಸಲಿರುವ ಸಂಸ್ಥೆಯ ಸಿಬ್ಬಂದಿ ಹಾಗೂ ನಿರ್ದೇಶಕರ ಜೊತೆ ಮುಕ್ತವಾದ ಸಂವಾದ ಬೇಕು. ಇಲ್ಲಿ ಎಲ್ಲ ನಿರ್ದೇಶಕರಲ್ಲಿಯೂ ಅನುಭವ ಪಡೆಯುವುದು ಒಳ್ಳೆಯದು. ಯಾಕೆಂದರೆ ಕೆಲವೊಂದು ನಮಗೆ ಅಗತ್ಯ ಇರುವ ಸಂಗತಿಗಳು ಯಾವುದಾದರೂ ಒಬ್ಬ ನಿರ್ದೇಶಕ ಅಥವಾ ಸಿಬ್ಬಂದಿಯ ಕಡೆಯಿಂದ ನಮಗೆ ಸಿಗಬಹುದು. ನಿತ್ಯದ ಬ್ಯಾಂಕಿoಗ್ ಚಟುವಟಿಕೆಗಳು, ಸಾಲ ನೀಡುವಾಗ ಗಮನಿಸಬೇಕಾದ ಅಂಶಗಳು, ಸದಸ್ಯನಾದವ ಸಾಲ ಮರುಪಾವತಿ ಮಾಡುವಷ್ಟು ಶಕ್ತನೊ ಎಂಬುದನ್ನು ಗುರುತಿಸುವ ತಂತ್ರಗಾರಿಕೆ, ಸಾಲ ಮರುಪಾವತಿಯಲ್ಲಿ ಅನುಸರಿಸುವ ವಿಧಾನಗಳು, ಸಾಲ ನೀಡಿದಾಗ ಅದರ ಮರುಪಾವತಿ ಮಾಡಿಸಿಕೊಳ್ಳುವ ಜವಾಬ್ದಾರಿಯನ್ನು ಕೆಲವು ಸಂಘಗಳಲ್ಲಿ ಸಾಲ ನೀಡುವಾಗಲೆ ನಿರ್ಧರಿಸುತ್ತಾರೆ. ಒಬ್ಬ ನಿರ್ದೇಶಕ ಮತ್ತು ಇಬ್ಬರು ಸಿಬ್ಬಂದಿಗಳಿಗೆ ಜವಾಬ್ದಾರಿಯನ್ನು ಗುರುತಿಸುತ್ತಾರೆ. ಇವರು ಕಂತು ಕಂತು ಸಾಲ ಮರುಪಾವತಿ ಆಗುತ್ತಿರುವುದರ ಬಗ್ಗೆ ನಿಗಾ ಇಡುತ್ತಾರೆ. ಕಂತು ಬಾಕಿ ಆದ ಕೂಡಲೆ ಎಚ್ಚರಿಸಿ ಕಟ್ಟಿಸಿಕೊಳ್ಳುತ್ತಾರೆ. ಇಂತಹ ವ್ಯವಸ್ಥೆಗಳಲ್ಲಿ ಬೇರೆ ಹೊಸತನಗಳಿದ್ದರೆ ಅದನ್ನೂ ತಿಳಿದುಕೊಳ್ಳಬಹುದು.
ಸಹಾಕಾರಿ ಸಂಘದಲ್ಲಿ ಬೇರೆ ಮೌಲ್ಯವರ್ಧಿತ ಸೇವೆಗಳು, ಸದಸ್ಯರು ಬಂದಾಗ ಅವರನ್ನು ಸ್ವಾಗತಿಸುವ ರೀತಿ, ತ್ವರಿತವಾಗಿ ಅವರಿಗೆ ಸೇವೆಗಳನ್ನು ಒದಗಿಸುವ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ. ಡಿಜಿಟಲೀಕರಣದ ಹೊಸತನಗಳನ್ನು ಕೂಡ ಗುರುತುಹಾಕಿಕೊಳ್ಳಬಹುದು. ಸಹಕಾರಿ ಸಂಘಗಳು ಬ್ಯಾಂಕಿoಗ್ ವ್ಯವಹಾರವಲ್ಲದೆ ಇನ್ನಿತರ ಸಂಘಕ್ಕೆ ಆದಾಯ ತರುವಂತಹ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದರೆ ಅವುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಸೂಕ್ತ.
ನಿಮ್ಮ ಬಗ್ಗೆ ಅವರಿಗೆ ಹೇಳಿ
ನೀವು ಭೇಟಿಯಾಗುವ ಸಂಘದ ಜೊತೆಗಿನ ಮುಕ್ತ ಸಂವಾದದಲ್ಲಿ ನಿಮ್ಮ ಸಂಘದ ಬಗ್ಗೆಯೂ ಅವರಿಗೆ ವಿವರಗಳನ್ನು ಕೊಡುತ್ತಾ ಹೋದರೆ ಅದರಲ್ಲಿ ಬದಲಾವಣೆಗೆ ಅಥವಾ ಇನ್ನೊಂದು ತರಹದ ಕ್ರಮಗಳನ್ನು ಅವರು ಅನುಸರಿಸುತ್ತಿದ್ದರೆ ಅದು ನಿಮಗೆ ಲಾಭವಾಗಬಹುದು.
ಒಟ್ಟಿನಲ್ಲಿ ಅಧ್ಯಯನ ಪ್ರವಾಸ ನಿಮ್ಮ ಸಹಕಾರಿ ಸಂಘದಲ್ಲಿ ಹೊಸತನಗಳನ್ನು ತರಬೇಕು. ಅದು ನಿಮ್ಮ ಸಂಘದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವಂತೆ ಆಗಬೇಕು. ವಿಶೇಷವಾಗಿ ನಿಮ್ಮ ಸದಸ್ಯರು ನಿಮ್ಮ ಬಗ್ಗೆ ಹೆಮ್ಮೆಪಡುವಂತಹ ಬದಲಾವಣೆ ತರಲು ಪ್ರಯತ್ನ ಮಾಡಬೇಕು.
ಶಂ. ನಾ. ಖಂಡಿಗೆ
ಶ್ಯಾಮಕೃಪಾ ನಾಗೋಡಿ
ಅಂಚೆ : ಪೆರ್ಲ : ೬೭೧೫೫೨
ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ