ಆಧುನಿಕ ಸಮಾಜದಲ್ಲಿ ಹಣ ಕೈಯಲ್ಲಿ ಸಾಕಷ್ಟು ಓಡಾಡಿದರೂ ಕಷ್ಟ ಸಂಕಷ್ಟಗಳಿಗೆ ಗುರಿಯಾಗುವವರ ಸಂಖ್ಯೆ ಕಡಿಮೆಯಲ್ಲ. ಸರಕಾರಗಳು ನಾಗರಿಕ ಸಮಾಜದ ಬದುಕಿಗೆ ಅನ್ಯಾನ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅದು ಜನರ ನಿತ್ಯ ಬದುಕಿನ ಸರಳೀಕರಣಕ್ಕೆ, ಸುಲಭೀಕರಣಕ್ಕೆ ಸಾಕಾಗುತ್ತಿಲ್ಲ. ಇಂತಹ ಸಮಯದಲ್ಲಿ ಗ್ರಾಮೀಣ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸಮಾಜದ ಕಷ್ಟ ಸುಖಗಳಿಗೆ ಒದಗಬೇಕಾಗಿದೆ. ಬಹಳಷ್ಟು ಸಹಕಾರಿ ಸಂಘಗಳು ಈಗಾಗಲೆ ಬಹಳಷ್ಟು ಸೇವೆಗಳನ್ನು ತಮ್ಮ ಸದಸ್ಯರಿಗೆ ಕೊಡುತ್ತಿವೆ. ಅದರಲ್ಲೂ ಶಿರಸಿ ಭಾಗದ ಸಹಕಾರಿ ಸಂಘಗಳು ಈ ನಿಟ್ಟಿನಲ್ಲಿ ಈಗಾಗಲೇ ಮೇಲ್ಪಂಕ್ತಿಯಾಗಿವೆ.
ವೃದ್ಧಾಶ್ರಮಗಳಾಗುತ್ತಿರುವ ಮನೆಗಳು
ಕರಾವಳಿ ಜಿಲ್ಲೆಗಳು ಅಡಿಕೆ ಬೆಳೆಯುವ ಪ್ರದೇಶಗಳು. ಅಡಿಕೆ ಕೃಷಿಯೆಂದರೆ ನಿತ್ಯವೂ ಕೆಲಸಗಳೆ. ಬಹಳಷ್ಟು ಕೆಲಸಗಳನ್ನು ಕೃಷಿಕರು ಲಭ್ಯವಿರುವ ಕಾರ್ಮಿಕರನ್ನು ಒಟ್ಟುಗೂಡಿಸಿ ಹೇಗಾದರೂ ಮಾಡಿ ಮುಗಿಸುತ್ತಾರೆ. ಆದರೆ ಇನ್ನಷ್ಟು ತ್ರಾಸದಯಕ ಕೆಲಸಗಳು ಬಾಕಿ ಇರುತ್ತವೆ. ಕೃಷಿ ಕೆಲಸಗಳಲ್ಲಿ ಹೆಚ್ಚಾಗಿ ಮುಳುಗಿದ ಕೃಷಿಕರು ಅರುವತ್ತು ಎಪ್ಪತ್ತು ವರ್ಷ ದಾಟಿದವರು. ಈಗ ಸಾಮಾನ್ಯವಾಗಿ ಹೇಳುತ್ತಿರುವಂತೆ ಕೃಷಿಕರ ಮನೆಗಳೆಂದರೆ ವೃದ್ಧಾಶ್ರಮಗಳು. ಒಂದೆಡೆಯಲ್ಲಿ ವಯೋಸಹಜ ಸಮಸ್ಯೆಗಳು, ಮತ್ತೊಂದೆಡೆಯಲ್ಲಿ ಸಮಯಕ್ಕೆ ಒದಗದ ಕುಶಲ ಕಾರ್ಮಿಕರು. ಮಕ್ಕಳು ಉನ್ನತ ವ್ಯಾಸಂಗ ಮಾಡಿ ಪೇಟೆ ಪಟ್ಟಣಗಳಲ್ಲಿ ತಮ್ಮದೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಬಹಳ ದೂರವಿರುವ ಅವರು ಮನೆಯ ಹಿರಿಯರ ಕೃಷಿ ಸಂಬAಧಿತ ಕಷ್ಟ ಸುಖಗಳಿಗೆ ಸಮಯಕ್ಕೆ ಒದಗಲು ಕಷ್ಟ. ಇಂತಹ ಸಮಯದಲ್ಲಿ ಹಿರಿಯ ಕೃಷಿಕರಿಗೆ ಮಕ್ಕಳಂತೆ ನಮ್ಮ ಸಹಕಾರಿ ಸಂಘಗಳು ಮುಂದೆ ಬರಬೇಕೆಂಬುದು ಆಶಯ.
ಅಡಿಕೆ ತೋಟಕ್ಕೆ ಮಳೆಗಾಲದಲ್ಲಿ ಔಷಧ ಸಿಂಪಡಣೆ, ಬೇಸಿಗೆಯಲ್ಲಿ ಅಡಿಕೆ ಕೊಯ್ಲು, ಕೊಯ್ಲೋತ್ತರ ಸಂಸ್ಕರಣೆಗಳು, ದಾಸ್ತಾನು ಒಂದೆಡೆ. ಗೊಬ್ಬರ ನಿರ್ವಹಣೆ ಮತ್ತೊಂದೆಡೆ. ಇದನ್ನು ನಮ್ಮ ಸಹಕಾರಿ ಸಂಘಗಳು ನಿಭಾಯಿಸಲು ಮುಂದೆ ಬರಬೇಕು.
ಏನು ಮಾಡಬಹುದು?
ಕೃಷಿಕರು ಬಯಸಿದ ಕೆಲಸವನ್ನು ಮಾಡಿಕೊಡಲು ಸಜ್ಜಾದ ‘ಲೇಬರ್ ಬ್ಯಾಂಕ್’ ಮೊದಲಾಗಿ ಆರಂಭಿಸಬೇಕು. ಕೇರಳದ ಕೆಲವು ಸಹಕಾರಿ ಸಂಘಗಳು ತಮ್ಮದೇ ಆದ ಲೇಬರ್ ಬ್ಯಾಂಕ್ ಸ್ಥಾಪಿಸಿಕೊಂಡಿವೆ. ತೋಟದ ಹುಲ್ಲು ತೆಗೆಯುವುದು, ಗೊಬ್ಬರ ನಿರ್ವಹಣೆ, ಸಿಂಪಡಣೆ, ಕೊಯ್ಲು, ಕೊಯ್ಲೋತ್ತರ ಸಂಸ್ಕರಣೆ, ಅಡಿಕೆ ಸುಲಿಯುವುದು, ಸುಲಿದ ಅಡಿಕೆಗಳ ಸಂಸ್ಕರಣೆ ಹೀಗೆ ಅಡಿಕೆ ಕೃಷಿಯ ಪ್ರಮುಖ ಸವಾಲಿನ ಕೆಲಸಗಳನ್ನು ಸಹಕಾರಿ ಸಂಘಗಳು ನಿರ್ವಹಿಸಿದರೆ ಸಾಕು. ಲೇಬರ್ ಬ್ಯಾಂಕಿಗೆ ಬೇಕಾದ ಸಲಕರಣೆಗಳು, ಯಂತ್ರಗಳು, ಗಾಡಿಗಳು, ಫೈಬರ್ ದೋಟಿ ಎಲ್ಲವೂ ಸಹಕಾರಿ ಸಂಘದ ಸೊತ್ತು ಆಗಿರಬೇಕು. ಕೃಷಿಕರು ಯಾರು ಸಹಕಾರಿ ಸಂಘದಲ್ಲಿ ಸದಸ್ಯರಿದ್ದಾರೆ ಅವರು ಲೇಬರ್ ಬ್ಯಾಂಕಿನ ಅವಶ್ಯಕತೆಯನ್ನು ನೋಂದಾಯಿಸಿರಬೇಕು. ಪ್ರತಿಯೊಂದು ಕೆಲಸ ನಿರ್ವಹಣೆಗೆ ಪ್ರತ್ಯೇಕ ಕಾರ್ಮಿಕ ತಂಡ. ಅದರ ಮೇಲುಸ್ತುವಾರಿಗೆ ಒಬ್ಬ.
ಅಡಿಕೆ ಮರಗಳಿಗೆ ಸಿಂಪಡಣೆ ಇದ್ದರೆ ಆ ವಿಭಾಗದಲ್ಲಿ ಕೃಷಿಕ ನೋಂದಾವಣೆ ಮಾಡಬೇಕು. ಯಾರು ಮೊದಲು ನೋಂದಾವಣೆ ಮಾಡುತ್ತಾರೆ ಅವರಲ್ಲಿಗೆ ಲೇಬರ್ ಬ್ಯಾಂಕಿನ ಕಾರ್ಮಿಕರು ಬಂದು ಸಿಂಪಡಣೆ ಮಾಡುತ್ತಾರೆ. ಸಿಂಪಡಣೆಗೆ ಸಲಕರಣೆಗಳು, ಔಷಧ ಎಲ್ಲವೂ ಸಹಕಾರಿ ಸಂಘದ ಮೂಲಕವೇ ತೋಟಕ್ಕಿಳಿಯಬೇಕು. ತೋಟದ ಹುಲ್ಲು ತೆಗೆಯುವ ಕೆಲಸದಿಂದ ಹಿಡಿದು ಎಲ್ಲ ಕೆಲಸಗಳಿಗೆ ಸಹಕಾರಿ ಸಂಘವೇ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಕೃಷಿಕರ ಕೆಲಸ ಮುಗಿಸಬೇಕು.
ಸಹಕಾರಿ ಸಂಘದ ಇಬ್ಬರು ನಿರ್ದೇಶಕರು ಮತ್ತು ಇಬ್ಬರು ಸಿಬ್ಬಂದಿಗಳು ಈ ವ್ಯವಸ್ಥೆಯ ಮೇಲುಸ್ತುವಾರಿ ವಹಿಸಿಕೊಳ್ಳುವುದು. ಎಲ್ಲವೂ ಪಾರದರ್ಶಕವಾಗಿರಬೇಕು. ಇಲ್ಲಿ ಸ್ವಜನ ಹಿತ, ಮೇಲು ಕೀಳು, ಧನಿಕ ಬಡವ ಎಂಬೆಲ್ಲ ತಾರತಮ್ಯಗಳು ಬರಬಾರದು. ಯಾರು ಮೊದಲು ನೋಂದಾವಣೆ ಮಾಡುತ್ತಾರೆ ಅವರ ಕೆಲಸ ಮೊದಲು. ಅಗತ್ಯ ಬಿದ್ದರೆ ಕಾರ್ಮಿಕರ ತಂಡಗಳನ್ನು ಹೆಚ್ಚಿಸಿಕೊಳ್ಳಬಹುದು.
ಸ್ಪರ್ಧಾತ್ಮಕ ದರ
ಸಹಕಾರಿ ಸಂಘ ಒದಗಿಸುವ ಸೇವೆಗಳಿಗೆ ಸ್ಪರ್ಧಾತ್ಮಕ ದರವಿರಬೇಕು. ಕೃಷಿಕನನ್ನು ಸತಾಯಿಸುವ ಕಾರ್ಮುಕರು ಹೇಳುವ ದುಬಾರಿ ಕೂಲಿ ಇರಬಾರದು. ಆದರೆ ಕಾರ್ಮಿಕರ ಶ್ರಮಕ್ಕೆ ಗೌರವಯುತ ವೇತನ, ಕಾರ್ಮಿಕರಿಗೆ ಸಲ್ಲಬೇಕಾದ ಎಲ್ಲ ಸೌಲಭ್ಯಗಳು ಸಿಗಬೇಕು. ಇದರಿಂದ ಕೃಷಿಕನಿಗೆ ಹೊರೆಯಾಗದ ರೀತಿಯಲ್ಲಿ ಸಹಕಾರಿ ಸಂಘ ವ್ಯವಹಾರ ಮಾಡಬೇಕು. ಎಲ್ಲ ಸೇವೆಗಳ ಮೇಲೂ ಒಂದAಶ ಮೊತ್ತ ಸಹಕಾರಿ ಸಂಘಗಳಿಗೆ ಸಿಗುತ್ತಾನೆ ಇರಬೇಕು. ಇದು ಸಣ್ಣ ವಿಷಯ ಅಲ್ಲ. ಕೆಲವು ಸಹಕಾರಿ ಸಂಘಗಳು ತಮ್ಮ ಸದಸ್ಯರಿಗೆ ಏನು ಆವಶ್ಯಕತೆ ಇದೆ ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಸಿಬ್ಬಂದಿಗಳ ವೇತನದ ಹೊರೆ ಇಳಿಸುವುದರ ಜೊತೆಗೆ ಸಂಘಕ್ಕೆ ದೊಡ್ಡ ಮಟ್ಟದ ಉಳಿತಾಯವನ್ನೂ ತಂದು ಕೊಡುತ್ತದೆ. ಸಮಾಜದ ದೃಢತೆ ಮತ್ತು ಸಹಕಾರಿ ಸಂಘದ ಸಬಲತೆ ಜೊತೆ ಜೊತೆಗೆ ನಡೆಯುವುದರಿಂದ ಸಹಕಾರ ಚಳುವಳಿಯ ಮೂಲ ಉದ್ದೇಶಗಳು ಕಾರ್ಯಗತಗೊಂಡತಾಗುವುದು.
ಅಡಿಕೆ ದಾಸ್ತಾನು ಮಾಡುವುದು ಕೃಷಿಕರ ಮನೆಯಲ್ಲಿ ಕಷ್ಟವಾದರೆ ಸುಸಜ್ಜಿತ ದಾಸ್ತಾನು ಕೊಠಡಿಗಳನ್ನು ಕಟ್ಟಿ ಕೃಷಿಕರ ಅಡಿಕೆಯನ್ನು ಜೋಪಾನವಾಗಿ ದಾಸ್ತಾನು ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು. ದಾಸ್ತಾನಿಟ್ಟ ಅಡಿಕೆಯ ಮೇಲೆ ಕೃಷಿಕ ಸಾಲ ಪಡೆಯುವ ಅವಕಾಶ ಇರಬೇಕು.
ಒಟ್ಟಿನಲ್ಲಿ ಆಧುನಿಕ ಸಮಾಜದಲ್ಲಿ ಸಹಕಾರಿ ವ್ಯವಸ್ಥೆಗೆ ಮಹತ್ತರ ಜವಾಬ್ದಾರಿಗಳಿವೆ. ಒಂದೊಂದು ಊರಿಗೆ ಒಂದೊಂದು ವ್ಯವಸ್ಥೆ ಅಗತ್ಯವಿರಬಹುದು. ಅದನ್ನು ಗುರುತಿಸಿ ಮುನ್ನಡೆಯುವುದನ್ನು ಸಹಕಾರಿ ಸಂಘಗಳು ರೂಢಿಸಿಕೊಳ್ಳಬೇಕು.
ಶಂ. ನಾ. ಖಂಡಿಗೆ
ಶ್ಯಾಮಕೃಪಾ ನಾಗೋಡಿ
ಅಂಚೆ : ಪೆರ್ಲ : ೬೭೧೫೫೨
ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ