ವಿಶ್ವ ಸಂಸ್ಥೆ 2025 ನೇ ವರ್ಷವನ್ನು ಅಂತರರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಿಸಿದೆ. ಈ ಹಿಂದೆ ಮೊದಲ ಬಾರಿಗೆ 2012 ನ್ನು ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಲಾಗಿತ್ತು. ಅದರ ಯಶಸ್ಸು ಕಂಡ ವಿಶ್ವ ಸಂಸ್ಥೆ ಮತ್ತೊಮ್ಮೆ ಅಂತರರಾಷ್ಟ್ರೀಯ ಸಹಕಾರ ವರ್ಷವನ್ನು ಘೋಷಿಸಿದೆ ಎಂದು ‘ಅಂತರರಾಷ್ಟ್ರೀಯ ಮೈತ್ರಿ ಸಂಸ್ಥೆ’ ಪ್ರಕಟಿಸಿದೆ. ಇದು ಸಹಕಾರಿಗಳಲ್ಲರೂ ಸಂಭ್ರಮಿಸುವ ವಿಷಯವಾಗಿರುತ್ತದೆ.
ವಿಶ್ವ ಸಂಸ್ಥೆಯ ಈ ಘೋಷಣೆಗೆ ಕಾರಣ ಸಹಕಾರ ಸಂಘಗಳ ‘ಆರ್ಥಿಕ ಬೆಳವಣಿಗೆಯೊಂದಿಗಿನ ಸಾಮಾಜಿಕ ಅಭಿವೃದ್ಧಿ ‘ ಕಾರ್ಯಕ್ರಮಗಳು ಎಂದು ಸಂಬಂಧಿಸಿದ ಲೇಖನವೊಂದು ತಿಳಿಸಿದೆ. ಇದುವೇ ವಿಶ್ವ ಸಂಸ್ಥೆಯ ನಿರ್ಧಾರಕ್ಕೆ ಕಾರಣವಾಗಿರುತ್ತದೆ. ಅದರಂತೆ ವಿಶ್ವಸಂಸ್ಥೆಯ ಸಾಮಾನ್ಯ ನಿಕಾಯವು ದಿನಾಂಕ 22ನೇ ನವೆಂಬರ್ 2023 ರ ತನ್ನ ಠರಾವು ಮಾಡಿದೆ.
ವಿಶ್ವದ ‘ಸುಸ್ಥಿರ ಅಭಿವೃದ್ಧಿ’ ಗುರಿ ಸಾಧನೆಗೆ ಸಹಕಾರ ಸಂಘಗಳು ಸಾಧನವಾಗುತ್ತದೆ ಎಂಬುದು ವಿಶ್ವ ಸಂಸ್ಥೆಯ ಬಲವಾದ ನಂಬಿಕೆ. ವಿಶ್ವದಲ್ಲಿ 3 ದಶಲಕ್ಷ ಸಹಕಾರ ಸಂಘಗಳು ಇದ್ದು ವಿಶ್ವದ ಜನಸಂಖ್ಯೆಯ ಶೇ 12 ಜನರು ಸದಸ್ಯರಾಗಿರುತ್ತಾರೆ ಎಂಬ ಅಂದಾಜಿದೆ . ಭಾರತದಲ್ಲಿ 7.89 ಕೋಟಿ ಸಹಕಾರ ಸಂಘಗಳಿದ್ದು 29 ಕೋಟಿ ಸದಸ್ಯರಿದ್ದಾರೆ ಎಂಬ ಅಂದಾಜಿದೆ. ಈ ವಾಹಕಗಳು(ಸಹಕಾರ ಸಂಘಗಳು) ಸುಸ್ಥಿರ ಅಭಿವೃದ್ಧಿಯ ಪ್ರಮುಖ ಗುರಿಗಳಾದ ಆಹಾರ ಭದ್ರತೆ, ಬಡತನ ನಿರ್ಮೂಲನೆ, ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉತ್ತಮವಾಗಿ ಜೀವಿಸಬಲ್ಲ ವಿಶ್ವವನ್ನು ನೀಡುವುದಲ್ಲದೇ ಸಮತಾ ಸಮಾಜ ವನ್ನು ನಿರ್ಮಾಣ ಮಾಡಬಲ್ಲವು ಎಂಬುದು ಸದಾಶಯ. ಮತ್ತು ಇದು ಸಾಧ್ಯ ಕೂಡ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇದಕ್ಕೆ ಸೂಕ್ತ ಪರಿಸರವನ್ನು ಕಲ್ಪಿಸಿಕೊಡುವುದುಆಯಾ ಸರ್ಕಾರಗಳ ಮತ್ತು ಸಮುದಾಯದ ಜವಾಬ್ದಾರಿಯಾಗುತ್ತದೆ. ಇದೇ ಅತ್ಯಂತ ದುಸ್ತರ ಸವಾಲಾಗಿರುತ್ತದೆ. ವಿಶ್ವ ಸಂಸ್ಥೆಯು ಸಹಕಾರ ಸಂಘಗಳು ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾಧಿಸಬಲ್ಲವು ಎಂಬ ಅರಿವು ಮೂಡಿಸುವ ಸಲುವಾಗಿ ಪ್ರಚಾರಾಂದೋಲನವಾಗಿ 2025 ನ್ನು ಅಂತರರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಿಸಿದೆ. ಈ ದಿಸೆಯಲ್ಲಿ ಹಾಲಿ ಇರುವ ಶಾಸನಗಳು , ನಿಯಂತ್ರಣ ವ್ಯವಸ್ಥೆಗಳ ಪುನರ್ ಪರಿಶೀಲನೆ , ಪುನರಾವಲೋಕನ ಮಾಡಿ ಸಹಕಾರ ಸಂಘಗಳ ಅಭ್ಯುದಯಕ್ಕೆ ಸರ್ಕಾರಗಳು, ಸಂಬಂಧಿಸಿದ ಸಂಸ್ಥೆಗಳು ಕಾರ್ಯಕ್ರಮ ಗಳನ್ನು ಹಾಕಿಕೊಳ್ಳಬೇಕೆಂದು ವಿಶ್ವ ಸಂಸ್ಥೆ ಬಯಸಿದೆ. ಅಲ್ಲದೆ ವಿಶೇಷವಾಗಿ ಆಹಾರ ಉತ್ಪಾದನೆ ಮತ್ತು ಮಾರುಕಟ್ಟೆ ವಲಯದ ಸಹಕಾರ ಸಂಘಗಳಲ್ಲಿ ಬಂಡವಾಳದ ಹೆಚ್ಚಳ, ಪೂರಕವಾದ ಮಾರುಕಟ್ಟೆ, ನ್ಯಾಯಯುತವಾದ ಬೆಲೆ ದೊರಕುವುದು ಮತ್ತು ಇದಕ್ಕೆ ಅಗತ್ಯ ವಾತಾವರಣ ನಿರ್ಮಾಣ ಮಾಡಲು ಕರೆಕೊಟ್ಟಿದೆ. ಇದರಲ್ಲಿ ಮಹಿಳೆಯರ, ಅಬಲ ವರ್ಗಗಳ ಪಾತ್ರ ಮತ್ತು ಅವರಿಗೆ ಪ್ರಾಮುಖ್ಯತೆ ನೀಡುವ ಬಗ್ಗೆ ಮತ್ತು ಅವರ ‘ ಸಾಮರ್ಥ್ಯಭಿವೃದ್ಧಿ’ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕಾದ ಅವಶ್ಯಕತೆ ಬಗ್ಗೆ ತಿಳಿಹೇಳಲಾಗಿದೆ.
ಸುಸ್ಥಿರ ಅಭಿವೃದ್ಧಿ ಗೆ ಕಾರಣವಾಗ ಬಲ್ಲ ‘ಸಾಮಾಜಿಕ ಮತ್ತು ಐಕ್ಯಮತ್ಯ ಆರ್ಥಿಕತೆ ‘(Social and Solidarity Economy -SSE) ಸಂಸ್ಥೆಗಳೆಂದರೆ ” ಸಾಮೂಹಿಕ ಮತ್ತು/ಅಥವ ಸಾಮಾನ್ಯ ಆಸಕ್ತಿಯ ಆರ್ಥಿಕ , ಸಾಮಾಜಿಕ, ಮತ್ತು ಪರಿಸರ ಕಾಳಜಿಯ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಔದ್ಯೋಗಿಕ ಸಂಸ್ಥೆಗಳು, ಸಂಸ್ಥೆಗಳು ಮತ್ತು ಘಟಕಗಳು” ಎಂದು ವ್ಯಾಖ್ಯಾನಿಸಲಾಗಿದೆ. ಅಲ್ಲದೆ ” ಸ್ವಯಂ ಸಹಕಾರ ಮತ್ತು ಪರಸ್ಪರ ಸಹಕಾರ, ಪ್ರಜಾಪ್ರಭುತ್ವ ಮತ್ತು/ಅಥವ ಎಲ್ಲರ ಭಾಗವಹಿಸುವಿಕೆಗೆ ಅವಕಾಶವುಳ್ಳ ಆಡಳಿತ, ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವುಳ್ಳ, ಮತ್ತು ಹೆಚ್ಚುವರಿ ಹಂಚಿಕೆಯಲ್ಲಿ ಮತ್ತು ಹೆಚ್ಚುವರಿ ಮೊತ್ತ ಮತ್ತು ಅಥವ ಲಾಭ ಹಂಚಿಕೆಯಲ್ಲಿ ಬಂಡವಾಳ ಮೀರಿ ಜನತೆಗೆ ಪ್ರಥಮ ಆಧ್ಯತೆ” ಎಂದು ತಿಳಿಸಿದೆ. ಈ ಎಲ್ಲ ಗುಣಲಕ್ಷಣಗಳನ್ನು ಸಹಕಾರ ಸಂಘಗಳು ಹೊಂದಿದ್ದು’ ಅಭಿವೃದ್ಧಿ’ ಯಲ್ಲಿ ಅತ್ಯಂತ ಪ್ರಾಮುಖ್ಯತೆ , ಆಧ್ಯತೆಯನ್ನು ಸಹಕಾರ ಸಂಘಗಳಿಗೆ ನೀಡಬೇಕಾಗಿರುವುದು ಈ ಶತಮಾನದ ಅವಶ್ಯಕತೆಯಾಗಿದೆ.
ಈ ಹಿನ್ನೆಲೆಯಲ್ಲಿ , ಭಾರತವು ಭಾರತದ ಆರ್ಥಿಕ ಸಚಿವರು ಸಾರ್ವಜನಿಕವಾಗಿ ತಿಳಿಸಿದಂತೆ ನಾಲ್ಕು ಟ್ರಿಲಿಯನ್ ಡಾಲರ್ಆರ್ಥಿಕತೆ ತಲುಪಿರುತ್ತದೆ. 2028 ರ ಒಳಗೆ ಐದು ಟ್ರಿಲಿಯನ್ ಡಾಲರ್ Ashutosh ತಲುಪುವ ಗುರಿ ಹೊಂದಲಾಗಿದೆ. ಇತ್ತೀಚೆಗೆ ‘ಕೇಂದ್ರ ಸಹಕಾರ ಸಂಘಗಳ ನಿಬಂಧಕರ ‘(Central Registrar of cooperative societies) ಕಛೇರಿ ಉದ್ಘಾಟನ ಸಮಾರಂಭದಲ್ಲಿ ಕೇಂದ್ರ ಸರಕಾರದ ಸಹಕಾರ ಸಚಿವರು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ‘ಸಹಕಾರ ಸಂಘಗಳು’ ತನ್ನ ಕೊಡುಗೆ ನೀಡುವುದರ ಪ್ರಾಮುಖ್ಯತೆ ಬಗ್ಗೆ ತಿಳಿಸಿದ್ದಾರೆ. ಬಹು ರಾಜ್ಯ ಕಾಯ್ದೆಯಡಿಯಲ್ಲಿ ಹೆಚ್ಚುವರಿಯಾಗಿ ಸಹಕಾರ ಸಂಘಗಳು ನೊಂದಣಿ ಯಾಗಿರುವ ಬಗ್ಗೆ ಮಾಹಿತಿ ತಿಳಿಸಿರುತ್ತಾರೆ. ಅಲ್ಲದೆ ಆಹಾರ ಉತ್ಪಾದನೆ ಮಾರಾಟ ರಫ್ತು ಸಹಕಾರ ಸಂಘವನ್ನು ಮತ್ತು ಇತರೆ ಮೂರು ರೀತಿಯ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಒಂದು ಲಕ್ಷದಿಂದ ಮೂರು ಲಕ್ಷಕ್ಕೆ ಏರಿಸುವುದು ಇವುಗಳನ್ನು ರೈತ ವಿವಿವಿದೋದ್ದೇಶ ಸಹಕಾರ ಸಂಘಗಳಾಗಿ ಪರಿವರ್ತಿಸಿ ಅಲ್ಪಾವಧಿಯ ಬೆಳೆಸಾಲ ಅಲ್ಲದೆ ಇತರೆ ಕೃಷಿ ಪೂರಕ, ಕೃಷಿ ಅವಲಂಭಿತ ಉದ್ದೇಶಗಳಿಗೂ, ಹೈನುಗಾರಿಕೆ , ಮೀನುಗಾರಿಕೆ, ನೇಕಾರಿಕೆ ಮುಂತಾದ ಗ್ರಾಮೀಣ ಪ್ರದೇಶದ ಇತರೆ ಎಲ್ಲ ರೀತಿಯ ಉದ್ಯೋಗಗಳಿಗೆ ‘ದುಡಿಯುವ ಬಂಡವಾಳ’ ಸಾಲವನ್ನು ಒದಗಿಸಲು ಉದ್ದೇಶಿಸಿದೆ. ಇದಲ್ಲದೆ ಒಟ್ಟು 60 ಉಪಕ್ರಮಗಳನ್ನು ಕೈಗೊಳ್ಳಲಾಗಿರುವುದಾಗಿ ಕೇಂದ್ರ ಸಹಕಾರ ಸಚಿವರು ತಿಳಿಸಿರುತ್ತಾರೆ. ಈ ಉಪಕ್ರಮಗಳಿಗೆ ಸಹಕಾರ ಚಳುವಳಿಯು ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯನಿರ್ವಹಿಸಿದಲ್ಲಿ ಈ ಆಶಯವನ್ನು ಪೂರೈಸಬಹುದಾಗಿದೆ.
ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ದತ್ತಾಂಶ ಲಭ್ಯತೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಹಕಾರ ವಲಯದ ಬಗ್ಗೆ ಅಂಕಿ ಅಂಶಗಳ ಸಂಗ್ರಹಣೆಗೆ ಪ್ರಾಮುಖ್ಯತೆ ನೀಡುವ ಬಗ್ಗೆ 2005ರ ಅಂತಾರಾಷ್ರೀಯ ಸಹಕಾರ ವರ್ಷ ಘೋಷಣೆಯಲ್ಲಿ ಉಲ್ಲೇಖಿಸಿರುತ್ತಾರೆ. ಮಾಹಿತಿ ತಂತ್ರಜ್ಞಾನದ ಕ್ರಾಂತಿಯಾಗಿದ್ದು ಅದರ ಸದುಪಯೋಗವನ್ನು ಈ ವಲಯ ಕೈಗೊಳ್ಳಬೇಕಾಗಿದೆ. ಬಹುಹಂತದ ಸಹಕಾರ ವ್ಯವಸ್ಥೆಯಲ್ಲಿ ಉನ್ನತ ಸಂಸ್ಥೆಗಳು, ನಿಬಂಧಕರು , ಇದರ ಸದುಪಯೋಗವನ್ನು ಪಡೆಯಬೇಕಾಗಿದೆ. ಲಭ್ಯ ಅಂಕಿ ಅಂಶಗಳಂತೆ ಭಾರತದ ಆರ್ಥಿಕತೆಯಲ್ಲಿ ಕೃಷಿ ಮತ್ತು ಕೃಷಿ ಅವಲಂಭಿತ ವೃತ್ತಿಗಳ ಕೊಡುಗೆ ಶೇ.20 •19, ಕೈಗಾರಿಕೆ- ಶೇ.25.92. ಸೇವಾ ವಲಯ – 53.89, ಆಗಿರುತ್ತದೆ. ಹಾಲಿ ಸಕ್ರಿಯ ಸಹಕಾರ ಚಳುವಳಿಯ ಮೇಲ್ನೋಟಕ್ಕೆ ಕಂಡುಬರುವಂತೆ ಇದರ ಕೊಡಗೆ ಶ್ಲಾಘನೀಯ ವಾಗಿರುವುದಿಲ್ಲ ಎಂದು ತಿಳಿಯುತ್ತಿದೆ. ಉದಾಹರಣೆಗೆ ಪತ್ತಿನ ವಲಯದಲ್ಲಿ ಸಹಕಾರದ ಕೊಡುಗೆ ಶೇ.19. ಹೈನುಗಾರಿಕೆ ಶೇ 35, ದಾನ್ಯ, ಹಣ್ಣು, ತರಕಾರಿ ವಲಯಗಳಲ್ಲಿ ಕೇವಲ ಧರ ನಿಗದಿ ಪಡಿಸಲು ನಿಯಂತ್ರಣದಲ್ಲಿ ಸಹಾಯಕರ ವಾಗಿರುತ್ತದೆ. ರಸಗೊಬ್ಬರ ತಯಾರಿಕೆಯಲ್ಲಿ ಶೇ 80 ಇರುತ್ತದೆ. ಇತರೆ ವಲಯಗಳು ಅತಿ ಕನಿಷ್ಟ ಮಟ್ಟದಲ್ಲಿರುತ್ತದೆ ಎಂಬುದು ವಿಷಾದನೀಯ. ಖಾಸಗಿ ವಲಯದ ಸ್ಪರ್ಧೆಯಲ್ಲಿ ನಲುಗಿದೆ ಎಂದರೆ ತಪ್ಪಾಗಲಾರದು. ಈ ಹಿನ್ನಲೆಯಲ್ಲಿ 2025 ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ ಯನ್ನು ಭಾರತದ ಸಹಕಾರಿಗಳು ತಮ್ಮ ಸಾಮರ್ಥ್ಯವನ್ನು ವೃದ್ಧಿಸುವ ಬಗ್ಗೆ ತನ್ನ ವೈಪಲ್ಯತೆಗಳನ್ನು ಸಾಮರ್ಥ್ಯವಾಗಿ ಪರಿವರ್ತಿಸುವ ಬಗ್ಗೆ , ಇರುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಸವಾಲುಗಳನ್ನು ಸಮರ್ಥವಾಗಿ ಅತ್ಯುತ್ತಮ ನಾಯಕತ್ವದಿಂದ ಎದುರಿಸಬೇಕಾಗಿದೆ.
“ಪ್ರತಿ ದಿನ ತಮ್ಮದೇ ದಾಖಲೆಗಳನ್ನು ತಾವೇ ಮುರಿಯಿರಿ. ಏಕೆಂದರೆ ಯಶಸ್ಸು ಎಂಬುದು ತಮ್ಮೊಂದಿಗೆ ತಾವೇ ನಡೆಸುವ ಕಾಳಗದಿಂದ ಬರುತ್ತದೆ.”
– ಚಂದ್ರಶೇಖರ ಅಜಾದ್,
ಶಶಿಧರ ಎಲೆ .
ಸಹಕಾರ ಸಂಘಗಳ ಅಪರ ನಿಬಂಧಕರು ( ನಿವೃತ್ತ) .
ನಂ 281′ ನೇಸರ’ ಬಾಲಾಜಿ ಹೆಚ್. ಬಿ. ಸಿ. ಎಸ್ ಲೇಔಟ್, ವಾಜರಹಳ್ಳಿ,ಕನಕಪುರ ರಸ್ತೆ ,
ಬೆಂಗಳೂರು 560 109