ಕಾಲ ಬದಲಾದಂತೆ ಸಮಯಕ್ಕೆ ಸರಿಯಾದ ಹೊಸ ಸೇವೆಗಳತ್ತ ನಮ್ಮ ಸಹಕಾರಿ ಸಂಘಗಳು ತೆರೆದುಕೊಳ್ಳದೆ ಕೇವಲ ಸಾಲ ಕೊಡುವುದು, ಸಾಲ ವಸೂಲಾತಿ, ಒಂದಷ್ಟು ಗೊಬ್ಬರ ಮಾರಾಟ ಅಂತ ವೈಖರಿ ಬದಲಾಯಿಸದೆ ಉಳಿದು ಬಿಟ್ಟರೆ ಅಂತಹ ಸಹಕಾರಿ ಸಂಘಗಳ ಬೆಳವಣಿಗೆ ಕುಂಠಿತವಾಗಬಹುದು. ಒಂದು ನಿರ್ದಿಷ್ಟ ಪ್ರದೇಶದ ಕಾರ್ಯವ್ಯಾಪ್ತಿಯಲ್ಲಿ ಅದು ಈ ಸ್ಪರ್ಧಾತ್ಮಕ ಯುಗದಲ್ಲಿ ಬಹಳವೇನೂ ಸಾಧಿಸುವ ಅವಕಾಶಗಳು ಇಲ್ಲ ಎಂಬ ಹಳೆಯ ರಾಗಗಳು ಈಗ ಯಾವ ಸಹಕಾರಿ ಸಂಘಗಳಿಗೂ ಬೇಕಾಗಿಲ್ಲ. ಮನಸ್ಸಿದ್ದರೆ ಮಾರ್ಗಗಳು ಅನೇಕ ತನ್ನಿಂದ ತಾನೆ ಗೋಚರವಾಗುತ್ತವೆ. ಕೇರಳದ ಮಾಂಕುಳ ಸೇವಾ ಸಹಕಾರಿ ಸಂಘ ತನ್ನ ಸದಸ್ಯರು ಬೆಳೆದ ಫ್ಯಾಶನ್ ಫ್ರುಟ್ ಬೆಳೆಯನ್ನು ಖರೀದಿಸಿ ಅದನ್ನು ಮೌಲ್ಯವರ್ಧನೆಗೊಳಿಸಿ ಉತ್ಪನ್ನ ತಯಾರಿಸಿ ಮಾರಾಟಮಾಡಿ ಸಾಧನೆ ಮೆರೆದಿದೆ.
ಮೌಲ್ಯ ವರ್ಧನೆಯಿಂದ ಸಾಧ್ಯತೆ
ಮಾಂಕುಳ ಸಹಕಾರಿ ಸಂಘ ಕಾಲಿಟ್ಟ ಹೊಸ ಕ್ಷೇತ್ರದಿಂದಾಗಿ ಮೊದಲನೆಯದಾಗಿ ತನ್ನ ಸದಸ್ಯರ ವಾರ್ಷಿಕ ಆದಾಯ ಹೆಚ್ಚಿಸಬಹುದು. ಅನೇಕ ಜನರಿಗೆ ಉದ್ಯೋಗ ಅವಕಾಶ. ಹಳ್ಳಿಗಳಿಂದ ಪಟ್ಟಣದ ಕಡೆಗೆ ವಲಸೆ ಹೋಗುವುದನ್ನು ತಡೆಯಬಹುದು. ಸಹಕಾರಿ ಸಂಘ ಮತ್ತು ತನ್ನ ಸದಸ್ಯರ ಬಾಂಧವ್ಯದಲ್ಲಿ ವೃದ್ಧಿ. ತನ್ಮೂಲಕ ಸಹಕಾರಿ ಸಂಘ ಹೆಚ್ಚು ಪ್ರಚಲಿತವಾಗಿ ಹೆಸರು ಗಳಿಸಬಹುದು. ಇಂತಹ ಸಾಧ್ಯತೆಗಳು ಪ್ರತಿಯೊಂದು ಸಹಕಾರಿ ಸಂಘಗಳ ಕಾರ್ಯಕ್ಷೇತ್ರದಲ್ಲಿ ಇದ್ದೇ ಇರುತ್ತದೆ. ಮಾಂಕುಳ ಸಹಕಾರಿ ಸಂಘಕ್ಕೆ ಫ್ಯಾಶನ್ ಫ್ರುಟ್ ಸಿಕ್ಕಿತು. ಆಯಾಯ ಊರಿನಲ್ಲಿ ಏನು ವಿಶೇಷವಿದೆಯೊ, ಯಾವುದು ಲಭ್ಯ ಇದೆಯೊ ಅದರತ್ತ ಗಮನ ಹರಿಸಬಹುದು.
ಜನರಿಗೆ ಬೇಕು
ಜನರು ಈಗ ಸುಲಭದಲ್ಲಿ ಸೇವಿಸುವಂತವುಗಳತ್ತ ಗಮನ ಕೊಡುತ್ತಾರೆ. ಉದಾಹರಣೆಗೆ ತಮ್ಮದೇ ಹಲಸಿನ ಮರವಿದ್ದು ಅದರಲ್ಲಿ ಯಥೇಚ್ಛ ಹಲಸು ಬೆಳೆದರೂ ಅದನ್ನು ಕೊಯ್ದು ಕೊರೆದು ತರ ತರದ ಉತ್ಪನ್ನ ಮಾಡಲು ಸಮಯ, ತಾಳ್ಮೆ ಇರುವ ಜನ ಇಂದು ಮನೆಗಳಲ್ಲಿ ಇಲ್ಲ. ಅದು ಕಷ್ಟದ ಕೆಲಸ ಎಂಬ ತೀರ್ಮಾನ ಬೇರೆ. ಹಾಗೆಂದು ಆ ಮನೆಯವರಿಗೆ ಹಲಸಿನ ಚಿಪ್ಸ್, ಹಣ್ಣಿನ ಹಲ್ವ, ಪಾಯಸಕ್ಕಾಗಿ ಹಣ್ಣಿನ ಪೆರಠಿ ಇಷ್ಟ ಇದೆ. ಅವರು ಅದನ್ನು ಸೇವಿಸುತ್ತಾರೆ ಕೂಡ. ಅದೆಲ್ಲ ಈಗ ಮಾರುಕಟ್ಟೆಯಲ್ಲಿ ಲಭ್ಯ. ಅಗತ್ಯ ಬಿದ್ದರೆ ಮನೆಗೆ ತಲಪಿಸುವ ವ್ಯವಸ್ಥೆಗಳು ಕೂಡ ಈಗಿನ ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮಾಮೂಲು.
ದಾರಿಗಳು ಹಲವು
ಹಲಸನ್ನೇ ಒಂದು ಸಹಕಾರಿ ಸಂಘ ಮೌಲ್ಯ ವರ್ಧನೆಗೆ ಯಾಕೆ ಎತ್ತಿಕೊಳ್ಳಬಾರದು. ಹಲಸು ಬೆಳೆಯದ ಊರುಗಳಿಲ್ಲ. ಸಹಕಾರಿ ಸಂಘ ಹಲಸಿನ ಬೆನ್ನು ಹತ್ತಿದೆಯೆಂದರೆ ಊರಲ್ಲಿ ಬೆಳೆಯದವರು ಕೂಡ ಹಲಸು ಬೆಳೆದು ಬಿಟ್ಟಾರು! ಹಲಸಿನ ಸೀಸನಿನಲ್ಲಿ ಅದರ ಎಳೆಯ ಗುಜ್ಜೆ, ನಂತರದ ದಿನಗಲಲ್ಲಿ ಬೆಳೆದ ಹಲಸಿನ ಕಾಯಿ ಮತ್ತು ಹಣ್ಣು ಇವಿಷ್ಟು ಸಹಕಾರಿ ಸಂಘ ಮತ್ತು ಅದರ ಶಾಖೆಗಳಿದ್ದರೆ ಅಲ್ಲಿ ಲಭ್ಯ ಇದೆ ಎಂದು ಸಂಘದ ವಾಟ್ಸಪ್ ಗ್ರೂಪಲ್ಲಿ ಬಂದರೆ ಸಾಕು ಅದನ್ನು ಖರೀದಿಸುವವರ ಸಂಖ್ಯೆಯೇ ಹೆಚ್ಚಿರಬಹುದು. ನಾಲ್ಕು ಅರೆಕಾಲಿಕ ಕಾರ್ಮಿಕರನ್ನು ನೇಮಿಸಿಕೊಂಡು ಗುಜ್ಜೆಯನ್ನು ಪಲ್ಯ, ಸಾಂಬಾರುಗಳಿಗೆ ಬೇಕಾದಂತೆ ತುಂಡರಿಸಿ ಪ್ಯಾಕ್ ಮಾಡಿ ಇಂತಹ ದಿನಗಳಲ್ಲಿ ಲಬ್ಯ ಇದೆ ಎಂಬ ಪ್ರಚಾರ ಕೊಟ್ಟರೆ ಸಾಕು. ಬೆಳೆದ ಹಲಸಿನ ಕಾಯಿ ಕೊರೆದು ಅದರ ಸೊಳೆ ಬಿಡಿಸಿ ತುಂಡರಿಸಿ ನೇರವಾಗಿ ದೋಸೆ ಹಿಟ್ಟು ಕಡೆಯಲು ಅಥವ ಪಲ್ಯ ಮಾಡಲು ಬಳಕೆ ಮಾಡುವಂತೆ ಮಾಡಬಹುದು. ಹಣ್ಣನ್ನು ತುಂಡರಿಸಿ ಆಕರ್ಷಕ ಪ್ಯಾಕ್ ಮಾಡಿ ತುಂಡರಿಸಿದ ಸ್ವಲ್ಪದರಲ್ಲೇ ಮಾರಾಟವಾಗುವ ಪ್ರಯತ್ನ ಮಾಡಬಹುದು. ಹಲಸಿನ ಹಣ್ಣಿನ ಹಲ್ವಕ್ಕಂತೂ ಅಧಿಕ್ ಬೇಡಿಕೆ. ಹಲ್ವ ಮಾಡುವ ಯಂತ್ರಗಳು ಈಗ ಲಭ್ಯ. ಹಣ್ಣಿನ ಪೆರಠಿ ಮಾಡಿದರೆ ಮನೆ ಮನೆಗಳಲ್ಲಿ ತುರ್ತಾಗಿ ಪಾಯಸ ಮಾಡಲು ಅನುಕೂಲ. ಹಲಸಿನ ಬೀಜ ಬೇರ್ಪಡಿಸಿ ಉಪ್ಪು ಮಸಾಲೆ ಸೇರಿಸಿ ಬೇಯಿಸಿ ಹಸಿಯಾಗಿಯೇ ತಿನ್ನುವವರ ಸಂಖ್ಯೆಯನ್ನು ಹೆಚ್ಚಿಸಬಹುದು. ಅದಲ್ಲದೆ ಹೋದರೆ ಹಲಸಿನ ಬೀಜಗಳನ್ನು ಬೇಯಿಸಿ ಚೆನ್ನಾಗಿ ಒಣಗಿಸಿ ಪ್ಯಾಕ್ ಮಾಡಿದರೆ ಮಳೆಗಾಲದುದ್ದಕ್ಕೂ ಅದಕ್ಕೆ ಡಿಮ್ಯಾಂಡ್. ಇಲ್ಲಿ ಪ್ಯಾಕಿಂಗ್ ವ್ಯವಸ್ಥೆಗಳಿಗೆ ಒಂದಷ್ಟು ಖರ್ಚು ಬರಬಹುದು. ಅದಕ್ಕೆ ಸಂಬಂಧಿಸಿದ ಇಲಾಖೆಗಳಿಂದ ಪುರವಾನಗಿಗಳೂ ಬೇಕು.
ನಿಮ್ಮ ಮುತುವರ್ಜಿಯಲ್ಲಿ ಮಾಡಿಸಿ
ಯಾವುದೇ ಉತ್ಪನ್ನ ಮಾಡುತ್ತಿದ್ದರೂ ನೇರವಾಗಿ ಸಹಕಾರಿ ಸಂಘ ಕಟ್ಟಡ ಕಟ್ಟಿ ಇದನ್ನೆಲ್ಲ ಮಾಡಬೇಕಾದರೆ ಆರ್ಥಿಕ ಸದೃಢತೆ ಬೇಕು. ಅದು ಸಾಧ್ಯವಾದರೆ ಬಹಳ ಒಳ್ಳೆಯದು. ಹೊರತಾಗಿ ದಾರಿಗಳು ಇವೆ. ಸಹಕಾರಿ ಸಂಘದ ಸದಸ್ಯರಲ್ಲಿ ಆಸಕ್ತಿ ಇದ್ದವರು ಇದನ್ನು ಮಾಡಬಹುದು. ಪ್ಯಾಕಿಂಗ್ ಮತ್ತು ಮಾರಾಟದ ಜವಾಬ್ದಾರಿ ಸಂಘ ವಹಿಸಿಕೊಳ್ಳಬಹುದು. ಇಂತಹ ಕಾರ್ಯಗಳಿಂದ ಅನೇಕರಿಗೆ ಅವರ ಭವಿಷ್ಯ ಕಟ್ಟಿಕೊಳ್ಳಲು ಸಂಘ ನೆರವಾದಂತೆ ಆಗುತ್ತದೆ ಕೂಡ. ಇಲ್ಲಿ ಹಲಸು ಕೇವಲ ಉದಾಹರಣೆಗೆ ಬಂದಿದೆ. ಸಹಕಾರಿ ಸಂಘಗಳು ಅವರ ಕಾರ್ಯ ಕ್ಷೇತ್ರದಲ್ಲಿ ಯಾವುದೆಲ್ಲ ಲಭ್ಯ ಅದರ ಕಡೆಗೆ ಗಮನ ಕೊಡಬಹುದು. ಭತ್ತ ಬೆಳೆಯುತ್ತಿದ್ದರೆ ಅದನ್ನು ಖರೀದಿಸಿ ಅಕ್ಕಿ ಬ್ರಾಂಡ್ ಮಾಡಬಹುದು. ಉತ್ತಮ ಉಪ್ಪಿನಕಾಯಿ, ಸೆಂಡಿಗೆ ಹೀಗೆ ಅವಕಾಶಗಳು ಅಪರಿಮಿತ.
ಸಹಕಾರಿ ಸಂಘದ ಸದಸ್ಯರಿಂದ ಹಿಡಿದು ಸಿಬ್ಬಂದಿಗಳು ಹಾಗು ಆಡಳಿತ ಮಂಡಳಿ ಇಂತಹ ವಿಷಯಗಳಲ್ಲಿ ಆಸಕ್ತಿ ಮೂಡಿಸದಿದ್ದರೆ ಸಂಘಗಳ ಭವಿಷ್ಯ ಉಜ್ವಲವಾಗದು.
ಶಂಕರನಾರಾಯಣ ಖಂಡಿಗೆ
ಶ್ಯಾಮಕೃಪಾ ನಾಗೋಡಿ
ಅಂಚೆ : ಪೆರ್ಲ – ೬೭೧೫೫೨
ಕಾಸರಗೋಡು ಜಿಲ್ಲೆ