ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿನ ಆವಿಷ್ಕಾರಗಳು ಮನುಷ್ಯನ ಕಲಿಯುವಿಕೆಯ, ಜ್ಞಾನ ಸಂಪಾದನೆಯ ಮಾರ್ಗವನ್ನು ವಿಸ್ತಿರಿಸಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಕಲೆಹಾಕುವ ಅವಕಾಶಗಳನ್ನು ಅಂತರ್ಜಾಲಗಳು ಒದಗಿಸುತ್ತಿವೆ. ಒಂದೇ ವಿಷಯದ ಬಗ್ಗೆ ಹಲವು ರೀತಿಯ ಮಾಹಿತಿಗಳು, ಮಾಹಿತಿಗಳ ವಿಸ್ತೃತ ವಿವರಣೆಗಳು, ತಜ್ಞರ ವಿಷ್ಲೇಶಣೆಗಳು ವಿವಿಧ ವೆಬ್‌ತಾಣಗಳಲ್ಲಿ ಕ್ಷಣಮಾತ್ರದಲ್ಲಿ ದೊರೆಯುತ್ತಿವೆ. ವೆಬ್‌ತಾಣಗಳಲ್ಲಿ ಕೇವಲ ಮಾಹಿತಿ ಒದಗಿಸುವ ಹಾಗೂ ಯಾವುದೇ ಒಂದು ಸಂಸ್ಥೆ, ಇಲಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರ ಒದಗಿಸುವ ತಾಣಗಳು ನಿರ್ದಿಷ್ಠ ವಿಷಯಗಳನ್ನು ಅರಿಯಲು ಸಹಾಯಕವಾಗುತ್ತವೆ. ವಿಷಯ ಕೇಂದ್ರಿತ ಸುಲಭ ಅಂತರ್ಜಾಲ ಹುಡುಕುವಿಕೆಗೆ ಇಂತಹ ವೆಬ್‌ತಾಣಗಳ ಸಂಪರ್ಕದ ಬಗ್ಗೆ ತಿಳಿದಿರುವುದು ಅವಶ್ಯಕ.
ಕರ್ನಾಟಕ ಸಹಕಾರ ಕ್ಷೇತ್ರದಲ್ಲಿ ಸ್ವತಂತ್ರ ಕಾಯ್ದೆಯಾಗಿ ೧೯೯೭ರ ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆ ಜಾರಿಗೆ ಬರುವ ಪೂರ್ವದಿಂದಲೂ ೧೯೫೯ರ ಸಹಕಾರ ಸಂಘಗಳ ಕಾಯ್ದೆಗನುಗುಣವಾಗಿ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಕಾಯ್ದೆಯಡಿಯಲ್ಲಿ ವಿವಿಧ ರೀತಿಯ ೩೫ ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ನೋಂದಣಿಯಾಗಿವೆ. ಈ ಎಲ್ಲ ಸಹಕಾರ ಸಂಘಗಳು ಸರ್ಕಾರದ ನೇರ ನಿಯಂತ್ರಣದಲ್ಲಿರುತ್ತವೆ. ರಾಜ್ಯದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಇಲಾಖೆಯು “ಸಹಕಾರ ಸಿಂಧು” ಎನ್ನುವ ವೆಬ್‌ತಾಣವೊಂದನ್ನು ನಿರ್ವಹಿಸುತ್ತಿದೆ. ಸೌಹಾರ್ದ ಸಹಕಾರ ಕ್ಷೇತ್ರದ ಬಗ್ಗೆ ಮಾಹಿತಿ ಒದಗಿಸುವ ಜಾಲತಾಣದ ಬಗ್ಗೆ ಈಗಾಗಲೆ ಅರಿತಿದ್ದೇವೆ. ರಾಜ್ಯದ ಸಹಕಾರ ಕ್ಷೇತ್ರದ ಬಗ್ಗೆ ತಿಳಿಯಪಡಿಸುವ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ತಾಣದ ಪರಿಚಯ ಇಲ್ಲಿದೆ.
ವೆಬ್‌ತಾಣ ೦೨ : https://sahakarasindhu.karnataka.gov.in/
• ಈ ವೆಬ್‌ತಾಣದಲ್ಲಿ “ಸಹಕಾರ ಸಂಘಗಳ ಕಾಯ್ದೆ ೧೯೫೯ ಹಾಗೂ ನಿಯಮಗಳು ೧೯೬೦” ರ ಜೊತೆಗೆ ಈ ಕಾಯ್ದೆಗಾದ ೨೦೧೦ರ ವರೆಗಿನ ತಿದ್ದುಪಡಿಗಳನ್ನು ಪಡೆಯಬಹುದಾಗಿದೆ. ಇದಲ್ಲದೆ, ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆ ೧೯೯೭, ಚಿಟ್ ಫಂಡ್ ಆಕ್ಟ್ ೧೯೮೨ ಹಾಗೂ ನಿಯಮಗಳು ೧೯೮೩, ಪಾನ್‌ಬ್ರೋರ‍್ಸ್ ಕಾಯ್ದೆ ೧೯೬೧ ಹಾಗೂ ನಿಯಮಗಳು ೧೯೬೬, ಮನಿ ಲೆಂರ‍್ಸ್ ಆಕ್ಟ್ ೧೯೬೧ ಹಾಗೂ ನಿಯಮಗಳು ೧೯೬೫, ಕರ್ನಾಟಕ ಪಬ್ಲಿಕ್ ಮನಿ ಆಕ್ಟ್, ಕರ್ನಾಟಕ ಡೆಬ್ಟ್ ರಿಲೀಫ್ ಆಕ್ಟ್, ಕರ್ನಾಟಕ ಸೊಸೈಟೀಸ್ ರೆಜಿಸ್ಟ್ರೆಷನ್ ಆಕ್ಟ್ ೧೯೬೦ – ಇವುಗಳನ್ನು ಕೂಡ ಪಡೆಯಬಹುದು.
• ರಾಜ್ಯದ ಸಹಕಾರ ಕ್ಷೇತ್ರದ ಇತಿಹಾಸ, ಬೆಳವಣಿಗೆ, ಸಹಕಾರ ತತ್ವಗಳು, ಸಹಕಾರ ಇಲಾಖೆಯ ವಿನ್ಯಾಸ ಪರಿಚಯಿಸುವ ರೇಖಾ ನಕ್ಷೆ, ಸಹಕಾರ ಕ್ಷೇತ್ರ ಕಾರ್ಯನಿರ್ವಹಿಸುತ್ತಿರುವ ವಿಧಾನಗಳ ಬಗ್ಗೆ ವಿವರಣೆಯನ್ನು ನೋಡಬಹುದು.
• ರಾಜ್ಯ ಸರ್ಕಾರದಿಂದ ಸಹಕಾರ ಕ್ಷೇತ್ರದ ಮೂಲಕ ಹಮ್ಮಿಕೊಳ್ಳಲಾಗುವ ಅನೇಕ ಯೋಜನೆಗಳ ಸಂಕ್ಷಿಪ್ತ ಪರಿಚಯ ಇಲ್ಲಿ ದೊರೆಯುತ್ತದೆ. ಸಹಕಾರ ಕ್ಷೇತ್ರಕ್ಕೆ ಅನ್ವಯಿಸುವ ಸರ್ಕಾರದ ವಿವಿಧ ಆದೇಶಗಳನ್ನು ಹಾಗೂ ಸುತ್ತೋಲೆಗಳನ್ನು ಈ ವೆಬ್‌ತಾಣದಿಂದ ಪಡೆಯಬಹುದು. ವಿವಿಧ ಇಲಾಖೆಗಳ ಕಾರ್ಯಕ್ಷಮತೆಯ ತುಲನಾತ್ಮಕ ವರದಿಗಳನ್ನು ಕೂಡ ನೋಡಬಹುದಾಗಿದೆ.
• ಸಹಕಾರ ಇಲಾಖೆಯ ಸಂಪೂರ್ಣ ವಿವರ ಅಂದರೆ ಕೇಂದ್ರ ಕಛೇರಿ, ವಿಭಾಗೀಯ ಕಛೇರಿ ಹಾಗೂ ಜಿಲ್ಲಾ ಕಛೇರಿಗಳ ವಿಳಾಸ, ದೂರವಾಣಿ ಸಂಖ್ಯೆಗಳು ಹಾಗೂ ಇ ಮೈಲ್ ವಿವರಗಳನ್ನು ಒದಗಿಸಲಾಗಿದೆ.
• ಸಹಕಾರ ಕ್ಷೇತ್ರದ ವಿವಧ ವಿಭಾಗಗಳ ಬಗ್ಗೆ ಅಂದರೆ ಕೃಷಿ, ಕೃಷಿಯೇತರ, ಗ್ರಾಹಕ, ಮಾರ್ಕೇಟಿಂಗ್, ಡೈರಿ, ಹೌಸಿಂಗ್ ಇತ್ಯಾದಿಗಳ ವಿವರಗಳನ್ನು – ಸಂಬಂಧಿಸಿದ ಮಹಾಮಂಡಳಗಳ ವಿವರಗಳೊಂದಿಗೆ ನೋಡಬಹುದಾಗಿದೆ. ರಾಜ್ಯದ ಅನೇಕ ಮಹಾಮಂಡಳಗಳ ವಿವರಗಳನ್ನು ಸಂಪರ್ಕ ವಿಳಾಸದೊಂದಿಗೆ ಒದಗಿಸಲಾಗಿದೆ.
• ಸಹಕಾರ ಚಿಟ್ ಫಂಡ್ ಕಾಯ್ದೆ, ಪಾನ್ ಬ್ರೋರ‍್ಸ್ ಕಾಯ್ದೆಯ ಕುರಿತು ವಿವರಗಳನ್ನು ಅಂಕಿ ಅಂಶಗಳ ಸಮೇತವಾಗಿ ನೋಡಬಹುದಾಗಿದೆ. ಕರ್ನಾಟಕ ಸೊಸೈಟೀಸ್ ರೆಜಿಸ್ಟ್ರೆಷನ್ ಆಕ್ಟ್ ನಡಿ ನೋಂದಣಿಯಾಗುವಾಗ ಹಾಗೂ ಉಪವಿಧಿ ತಿದ್ದುಪಡಿ ಸಂದರ್ಭದಲ್ಲಿ ಒದಗಿಸಬೇಕಾದ ದಾಖಲಾತಿಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ.
• ಕೃಷಿಕರ ಆರೋಗ್ಯ ವಿಮಾ ಯೋಜನೆಯಾದ “ಯಶಸ್ವಿನಿ”ಯ ಬಗ್ಗೆ, ಮಾಹಿತಿ ಹಕ್ಕು ಅಧಿ ನಿಯಮದ ಕುರಿತು, ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿಯನ್ನು ಈ ವೆಬ್‌ಸೈಟ್‌ನಿಂದ ಪಡೆಯಬಹುದು.
• ರಾಜ್ಯದಲ್ಲಿನ ಸಹಕಾರ ಸಂಸ್ಥೆಗಳ ಪಟ್ಟಿಯನ್ನು, ಅವುಗಳ ವಿಧಗಳ ವಿಂಗಡಣೆ, ಲೆಕ್ಕಪರಿಶೋಧನಾ ವರ್ಗೀಕರಣ, ಕಾರ್ಯನಿರ್ವಹಣೆ, ಸಮಾಪನೆ ಇತ್ಯಾದಿಗಳ ಅಂಕಿ ಅಂಶಗಳ ಸಮೇತವಾಗಿ ನೋಡಬಹುದಾಗಿದೆ.
ಈ ವೆಬ್‌ತಾಣವನ್ನು ಕನ್ನಡ ಆವೃತ್ತಿಯಲ್ಲೂ ಕೂಡ ನೋಡುವ ಅವಕಾಶ ಒದಗಿಸಿರುವುದು ವಿಶೇಷ. ಕೆಲವು ವಿಭಾಗಗಳು ಅಪ್‌ಡೇಟ್ ಆಗಬೇಕಿದೆ. ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಜಾರಿಯಲ್ಲಿರುವ ಸೌಹಾರ್ದ ಸಹಕಾರ ಕಾಯ್ದೆ ಹಾಗೂ ಈ ಕಾಯ್ದೆಯಡಿ ರಚಿತವಾದ ಶಾಸನಬದ್ಧ ಸಂಸ್ಥೆಯಾದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಇದರ ಬಗ್ಗೆ ಮಾಹಿತಿ ಇಲ್ಲದಿರುವುದು ಈ ವೆಬ್‌ತಾಣದ ಕೊರತೆ. ಸರ್ಕಾರದ ವೆಬ್‌ತಾಣ ಸಹಕಾರ ಕ್ಷೇತ್ರವನ್ನ ಪೂರ್ಣವಾಗಿ ಒಳಗೊಂಡು ಪ್ರತಿನಿಧಿಸಲಿ ಎನ್ನುವುದು ನಮ್ಮ ಆಶಯ.
– ರಘುನಂದನ ಕೆ
ಸಹಪ್ರಧಾನ ವ್ಯವಸ್ಥಾಪಕ
ಕ.ರಾ.ಸೌ.ಸಂ.ಸ.
ನಿ., ಬೆಂಗಳೂರು.