ಈಗಿನ ಕೇಂದ್ರ ಸರ್ಕಾರದ ಎರಡನೇ ಅವಧಿಯಲ್ಲಿ ರಚನೆಯಾದ ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ರಂಗದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ರಚನೆಯಾದ ಆರಂಭದಲ್ಲಿ ಸಹಕಾರ ಸಚಿವಾಲಯವು ದೇಶಸದಲ್ಲಿರುವ ಒಟ್ಟು ಸಹಕಾರ ಸಂಸ್ಥೆಗಳ ಡೇಟಾ ಸಂಗ್ರಹಿಸಿ ಒಟ್ಟು ಎಷ್ಟು ಸಹಕಾರ ಸಂಸ್ಥೆಗಳಿವೆ, ಅವುಗಳಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು, ಅವುಗಳ ಸ್ವರೂಪ ಹೇಗೆ… ಇತ್ಯಾದಿ ಮಾಹಿತಿಗಳೆಲ್ಲವನ್ನೂ ಸಂಗ್ರಹಿಸಿದೆ. 2023ರ ಡಿಸೆಂಬರ್ ಅಂತ್ಯಕ್ಕೆ ಈ ಡೇಟಾಕ್ಕೆ ಅಂತಿಮ ರೂಪ ನೀಡಲಾಗಿದ್ದು, ಮೂರು ವಿಭಾಗಗಳಲ್ಲಿ ಇವುಗಳನ್ನು ಸಂಗ್ರಹಿಸಲಾಗಿದೆ. ಮೊದಲ ವಿಭಾಗದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಪ್ಯಾಕ್ಸ್), ಹಾಲಿನ ಡೈರಿಗಳು ಮತ್ತು ಮೀನುಗಾರಿಕಾ ವಲಯದ ಸಹಕಾರಿ ಸಂಘಗಳು. ಈ ಮಾಹಿತಿಗಳು 2023ರ ಫೆಬ್ರವರಿಗೆ ಪೂರ್ಣಗೊಂಡಿವೆ.
ಎರಡನೇ ವಿಭಾಗದಲ್ಲಿ ರಾಷ್ಟ್ರಮಟ್ಟದ ಸಹಕಾರ ಸಂಘಗಳು. ಇದರಲ್ಲಿ ರಾಜ್ಯಮಟ್ಟದ ಸಹಕಾರಿ ಸಂಸ್ಥೆಗಳು, ಡಿಸಿಸಿಗಳು, ಅರ್ಬನ್ ಕೋ ಆಪರೇಟಿವ್ ಸೊಸೈಟಿಗಳು, ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳು, ಸಕ್ಕರೆ ಸಹಕಾರಿ ಮಿಲ್‌ಗಳು ಮೊದಲಾವುಗಳು ಇದರಲ್ಲಿ ಒಳಗೊಂಡಿವೆ. ಮೂರನೇ ಹಂತದಲ್ಲಿ ಇತರೆ ವಲಯಗಳಲ್ಲಿ ಕಾರ್ಯನಿರ್ವಹಿಸತ್ತಿರುವ ಸುಮಾರು ಐದು ಲಕ್ಷಕ್ಕೂ ಅಧಿಕ ಸಹಕಾರ ಸಂಸ್ಥೆಗಳ ಮಾಹಿತಿ ಸಂಗ್ರಹಿಸಿದೆ. ಇದರಲ್ಲಿ ಕೇರಳ ಹಾಗೂ ಮಣಿಪುರ ರಾಜ್ಯಗಳ ಮಾಹಿತಿ ಬಿಟ್ಟರೆ ಉಳಿದ ರಾಜ್ಯಗಳ ಪೂರ್ಣ ಮಾಹಿತಿ ಸಂಗ್ರಹವಾಗಿದೆ.
“ಸಹಕಾರ ಸಮೃದ್ಧಿ” ಎಂಬ ಧ್ಯೇಯದಡಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸಹಕಾರ ಸಚಿವಾಲಯ ಸಹಕಾರ ಸಾಕ್ಷಾತ್ಕಾರ, ದೇಶದಲ್ಲಿ ಸಹಕಾರ ಚಳವಳಿಯ ಬಲಪಡಿಸುವಿಕೆ ಮತ್ತು ತಳಮಟ್ಟದವರೆಗೆ ಅದರ ವ್ಯಾಪ್ತಿಯನ್ನು ಹೆಚ್ಚಿಸುವುದು, ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಉತ್ತೇಜಿಸುವುದು ಮತ್ತು ಸೂಕ್ತ ನೀತಿ, ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟು ರಚಿಸಿ ಕಾರ್ಯನಿರ್ವಹಿಸುವ ಗುರಿ ಹೊಂದಿದೆ. ಮುಕ್ತ ಮತ್ತು ಸ್ವಯಂಪ್ರೇರಿತ ಸದಸ್ಯತ್ವ, ಪ್ರಜಾಪ್ರಭುತ್ವ ಮಾದರಿಯಲ್ಲಿ ಸದಸ್ಯರ ನಿಯಂತ್ರಣ, ಸದಸ್ಯರ ಆರ್ಥಿಕ ಪಾಲ್ಗೊಳ್ಳುವಿಕೆ, ಸ್ವಾಯತ್ತ ಮತ್ತು ಸ್ವಾತಂತ್ರ್ಯ, ಶಿಕ್ಷಣ, ತರಬೇತಿ ಮತ್ತು ಮಾಹಿತಿ, ಸಹಕಾರ ಸಂಘಗಳ ಮಧ್ಯೆ ಉನ್ನತ ಸಹಕಾರ ಮತ್ತು ಇಡೀ ಸಹಕಾರ ಸಮುದಾಯದ ಕಾಳಜಿ ಇವುಗಳು ಸಹಕಾರ ಸಚಿವಾಲಯದ ಧ್ಯೇಯಗಳು.
ಹಾಗಾದರೆ ದೇಶದಲ್ಲಿ ಒಟ್ಟು ಎಷ್ಟು ಸಹಕಾರ ಸಂಘಗಳಿವೆ, ನಮ್ಮ ರಾಜ್ಯ ಕರ್ನಾಟಕದಲ್ಲಿ ಎಷ್ಟು ಸೊಸೈಟಿಗಳಿವೆ, ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿರುವ ಸಹಕಾರ ಸಂಘಗಳ ಸಂಖ್ಯೆ ಎಷ್ಟು ಎಂಬ ಕುತೂಹಲ ನಮ್ಮಲ್ಲಿರಬೇಕಲ್ಲವೇ…? ಬನ್ನಿ ಆ ನಿಟ್ಟಿನಲ್ಲಿ ಒಂದು ಮಾಹಿತಿಯತ್ತ ಸುತ್ತು ಹೊಡೆದು ಬರೋಣ…
ಸಹಕಾರ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಅತಿಹೆಚ್ಚು ಪ್ರಾಥಮಿಕ ಸಹಕಾರ ಸಂಘಗಳಿರುವುದು ಮಹಾರಾಷ್ಟ್ರ ರಾಜ್ಯದಲ್ಲಿ ಅಲ್ಲಿ ಎಲ್ಲ ಪ್ರಕಾರದ ಒಟ್ಟು 2,22,152 ಸೊಸೈಟಿಗಳಿವೆ. ಅಂಕಿ ಅಂಶ ಪಟ್ಟಿಯಲ್ಲಿ ಎರಡನೇ ಸ್ಥಾನ ಲಭಿಸುವುದು ಗುಜರಾತ್‌ಗೆ. ಅಲ್ಲಿ ಒಟ್ಟು 82,023 ಸಹಕಾರಿ ಸಂಸ್ಥೆಗಳಿವೆ. 2014ರಲ್ಲಿ ಹೊಸದಾಗಿ ರಚನೆಯಾದ ತೆಲಂಗಾಣ ರಾಜ್ಯದಲ್ಲಿ 60,619 ಸೊಸೈಟಿಗಳಿದ್ದು ಇದು ಡೇಟಾದಲ್ಲಿ ಮೂರನೇ ಸ್ಥಾನದಲ್ಲಿದೆ. 53,143 ಸೊಸೈಟಿಗಳಿರುವ ಮಧ್ಯಪ್ರದೇಶ ನಾಲ್ಕನೇ ಸ್ಥಾನದಲ್ಲಿದ್ದರೆ ನಮ್ಮ ರಾಜ್ಯ ಕರ್ನಾಟಕದಲ್ಲಿ ಒಟ್ಟು 45,338 ಸೊಸೈಟಿಗಳಿದ್ದು ಐದನೇ ಸ್ಥಾನದಲ್ಲಿದೆ. ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ 44,570 ಸೊಸೈಟಿಗಳಿದ್ದು ಆರನೇ ಸ್ಥಾನದಲ್ಲಿದೆ. ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಕೇವಲ 42 ಸಹಕಾರಿ ಸಂಘಗಳಿವೆ. ಉಳಿದಂತೆ ರಾಜಸ್ಥಾನ 37387, ಹರಿಯಾಣ 32776, ಪಶ್ಚಿಮ ಬಂಗಾಳ 31223, ಬಿಹಾರ 26585, ತಮಿಳುನಾಡು 22054, ಪಂಜಾಬ್ 19069 ಹೀಗೆ ಪಟ್ಟಿ ಸಾಗುತ್ತದೆ. ಒಟ್ಟು 808649 ಸಂಸ್ಥೆಗಳು ದೇಶದಲ್ಲಿವೆ.
ವಿಭಾಗವಾರು ಸಹಕಾರಿ ಸಂಸ್ಥೆಗಳು.
ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಕೃಷಿ ಮತ್ತು ಅದಕ್ಕೆ ಪೂರಕವಾದ 27,211 ಸಹಕಾರ ಸಂಸ್ಥೆಗಳಿವೆ. ಆಗ್ರೋ ಪ್ರಾಸೆಸಿಂಗ್ ಮತ್ತು ಇಂಡಸ್ಟ್ರಿಯಲ್‌ಗೆ ಸಂಬಂಧಿಸಿದ 22,925, 337 ಜೇನು ಕೃಷಿ ಸಹಕಾರಿ ಸಂಸ್ಥೆಗಳು, 21,827 ಗ್ರಾಹಕ ಸಹಕಾರ ಸಂಸ್ಥೆಗಳು, 80,341 ಕ್ರೆಡಿಟ್ ಸೊಸೈಟಿಗಳು, 1,43,815 ಹಾಲು ಉತ್ಪಾದಕ ಡೈರಿಗಳು, ಶೈಕ್ಷಣಿಕ ಮತ್ತು ತರಬೇತಿ ಸಹಕಾರಗಳು 404, 597 ರೈತ ಸೇವಾ ಸಂಘಗಳು, ಮೀನುಗಾರಿಕಾ ಸಹಕಾರಿ ಸಂಸ್ಥೆಗಳು 25,910, ಕರಕುಶಲ ಸಹಕಾರ ಸಂಸ್ಥೆಗಳು 5,087, ಕೈಮಗ್ಗ ಜವಳಿ ಮತ್ತು ನೇಕಾರರ ಸಹಕಾರ ಸಂಸ್ಥೆಗಳು 19,624, ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಗಳು 1,92,169, ಸೆಣಬು ಮತ್ತು ಕಾಯರ್ ಸಹಕಾರ 58, ಕಾರ್ಮಿಕ ಸಹಕಾರ 44,932, ವಿವಿಧೊದ್ದೇಶ ಸಹಕಾರ ಸಂಸ್ಥೆಗಳು(ಲ್ಯಾಂಪ್‌ಗಳು) -5,516, ಜಾನುವಾರು ಮತ್ತು ಕೋಳಿ ಸಹಕಾರ 16,759, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಪ್ಯಾಕ್ಸ್) 99,427, ಮಹಿಳಾ ಕಲ್ಯಾಣ ಸಹಕಾರ ಸಂಘಗಳು 25,076… ಇತ್ಯಾದಿ ಒಟ್ಟು 8,08,649 ಸಹಕಾರ ಸಂಸ್ಥೆಗಳು ದೇಶದಲ್ಲಿವೆ.
ಅತಿ ಹೆಚ್ಚು ಡಿಸಿಸಿ ಬ್ಯಾಂಕ್‌ಗಳು ಇರೋದೆಲ್ಲಿ…?
ದೇಶದಲ್ಲಿ ಒಟ್ಟು ಇರುವ ಸಹಕಾರ ಸಂಘಗಳ ಮಾಹಿತಿ ತಿಳಿದುಕೊಂಡ ಮೇಲೆ ಸಹಜವಾಗಿ ದೇಶದಲ್ಲಿರುವ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರಿ) ಬ್ಯಾಂಕ್‌ಗಳ ಬಗ್ಗೆ ಕುತೂಹಲ ಮೂಡುತ್ತದೆ. ಅಂದ ಹಾಗೆ ದೇಶದಲ್ಲಿ ಇರೋದು ಒಟ್ಟು 338 ಡಿಸಿಸಿ ಬ್ಯಾಂಕ್‌ಗಳು. ದೇಶದಲ್ಲಿರುವ ಒಟ್ಟು ಜಿಲ್ಲೆಗಳು 782. ಎಲ್ಲ ಜಿಲ್ಲೆಗಳಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್‌ಗಳು ಅಸ್ತಿತ್ವದಲ್ಲಿಲ್ಲ. ಅತಿ ಹೆಚ್ಚು ಡಿಸಿಸಿ ಬ್ಯಾಂಕ್‌ಗಳನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಅಲ್ಲಿ ಒಟ್ಟು 50 ಡಿಸಿಸಿ ಬ್ಯಾಂಕ್‌ಗಳಿವೆ. ಎರಡನೇ ಸ್ಥಾನ ಮಧ್ಯಪ್ರದೇಶಕ್ಕೆ. ಅಲ್ಲಿ ಒಟ್ಟು 38 ಡಿಸಿಸಿ ಬ್ಯಾಂಕ್‌ಗಳಿವೆ. ಮಹಾರಾಷ್ಟ್ರದಲ್ಲಿ 31 ಇದ್ದರೆ, ಬಿಹಾರದಲ್ಲಿ 23, ರಾಜಸ್ಥಾನ 29, ತಮಿಳುನಾಡು 24 ಡಿಸಿಸಿ ಬ್ಯಾಂಕ್‌ಗಳನ್ನು ಹೊಂದಿವೆ. 31 ಜಿಲ್ಲೆಗಳಿರುವ ಕರ್ನಾಟಕದಲ್ಲಿ 20 ಡಿಸಿಸಿ ಬ್ಯಾಂಕುಗಳಿದ್ದರೆ 23 ಜಿಲ್ಲೆಗಳನ್ನಷ್ಟೇ ಹೊಂದಿರುವ ಪಂಜಾಬ್‌ನಲ್ಲಿ ಕೂಡ 20 ಡಿಸಿಸಿ ಬ್ಯಾಂಕ್‌ಗಳಿವೆ.
ಮೋಹನ್‌ದಾಸ್ ಮರಕಡ.
ಸಂಪಾದಕರು, ಸಹಕಾರ ಸ್ಪಂದನ