ಅಂತರರಾಷ್ಟಿಯ ಸಹಕಾರಿ ದಿನವು ೧೯೨೩ ರಿಂದೀಚೆಗೆ ಜುಲೈ ತಿಂಗಳ ಮೊದಲ ಶನಿವಾರದಂದು ಆಚರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಸಹಕಾರ ಒಕ್ಕೂಟದಿಂದ ಆಚರಿಸಲ್ಪಡುವ ಈ ಸಹಕಾರಿ ದಿನ ಸಹಕಾರ ಕ್ಷೇತ್ರದ ವಾರ್ಷಿಕ ಆಚರಣೆಗಳಲ್ಲಿ ಒಂದು.
ವಿಮರ್ಶೆಗೆ ವೇದಿಕೆ
ಜಗತ್ತಿನ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಪಾಲು ಬಹಳ ದೊಡ್ಡದು. ಅಂತರರಾಷ್ಟ್ರೀಯ ಯ ಸಹಕಾರಿ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಹಕಾರಿಗಳ ವೈವಿಧ್ಯಮಯ ರೂಪಗಳ ಬಗ್ಗೆ ಸಾರ್ವಜನಿಕ ವಲಯಕ್ಕೆ ತಿಳುವಳಿಕೆ ನೀಡುವ ಮಹತ್ತರ ಜವಾಬ್ದಾರಿ ಸಹಕಾರ ಕ್ಷೇತ್ರದಲ್ಲಿರುವವರು ಮಾಡಬೇಕಿದೆ. ಈ ದಿನ ನಾವೆಲ್ಲಿದ್ದೇವೆ ಎಂಬುದರ ಬಗ್ಗೆ ಸಿಂಹಾವಲೋಕನದ ಸಮಯ. ಸಹಕಾರ ತತ್ತ್ವ ಸಂಘ, ಸಂಸ್ಥೆಗಳಲ್ಲಿ ಯಥಾವತ್ತಾಗಿ ಅನ್ವಯ ಆಗುತ್ತಿದೆಯೇ? ಒಂದು ಸಹಕಾರಿ ಸಂಘ ತನ್ನ ವ್ಯಾಪ್ತಿಯೊಳಗೆ ಏನೆಲ್ಲ ಸಹಕಾರಿ ತತ್ತ್ವ ಗಳನ್ನು ಅಳವಡಿಸಿಕೊಂಡಿದೆ? ಸಮಾಜದ ಉತ್ತಮ ಭವಿಷ್ಯದ ದೃಷ್ಟಿಯಲ್ಲಿ ಅದರ ಪಾತ್ರಗಳೇನು? ಇದನ್ನೆಲ್ಲ ವಿಮರ್ಶೆ ಮಾಡುವ ವೇದಿಕೆಯನ್ನು ಅಂತರರಾಷ್ಟ್ರೀಯ ಯಸಹಕಾರ ದಿನದಂದು ರೂಪಿಸಬಹುದು.
ಸಮಗ್ರತೆ, ಸಮಾನತೆ
ಸಹಕಾರಿ ಸಂಸ್ಥೆಗಳು ಬಾನಂಗಳದ ನಕ್ಷತ್ರಗಳಿದ್ದಂತೆ. ಪ್ರತಿಯೊಂದು ಪ್ರಕಾಶಮಾನವಾಗಿ ಹೊಳೆಯಬೇಕು. ಜೊತೆಗೆ ಎಲ್ಲವೂ ಜೊತೆಯಾಗಿ ಆಕಾಶವನ್ನು ಬೆಳಗಿಸಬೇಕು. ಪ್ರತಿಯೊಂದು ಸಂಸ್ಥೆಗಳು ಇದನ್ನರಿತು ಕಾರ್ಯಪ್ರವೃತ್ತವಾದರೆ ಯಾವದು ಕೂಡ ಅಸಂಭವವಲ್ಲ. ಸಹಕಾರಿ ಸಂಸ್ಥೆಗಳು ವ್ಯಕ್ತಿಗಳನ್ನು ಬಲಪಡಿಸುತ್ತವೆ. ಸದಸ್ಯರೊಂದಿಗೆ ನಿಕಟ ಬಾಂಧವ್ಯ ಸಾಧ್ಯವಾಗುವುದರಿಂದ ಇಲ್ಲಿ ವ್ಯಕ್ತಿ ಒಬ್ಬ ಸಮುದಾಯದ ಆಪ್ತನಾಗಿ ಗುರುತಿಸಿಕೊಳ್ಳುತ್ತಾನೆ. ಸಮಗ್ರವಾಗಿ ಬೆಳೆಯುತ್ತಾನೆ. ಇಲ್ಲಿ ಉಲ್ಲೇಖಗೊಂಡ ವ್ಯಕ್ತಿ ಆತ ಸಹಕಾರಿ ಸಂಘದ ಆಡಳಿತಮಂಡಳಿಯ ಸದಸ್ಯನಾಗಿರಬಹುದು, ಸಿಬ್ಬಂದಿಯಾಗಿರಬಹುದು ಅಥವಾ ಆ ಸಂಘದ ಸದಸ್ಯನಾಗಿರಬಹುದು. ಸಹಕಾರ ತತ್ತ್ವ ದಡಿಯಲ್ಲಿ ಬಂದವರಿಗೆ ಈ ರೀತಿಯ ಸಮಗ್ರತೆ ಪ್ರಾಪ್ತಿಯಾಗುವುದು ವಿಶೇಷ. ಇಲ್ಲಿ ಸಮಾನತೆಯ ಪರಿಕಲ್ಪನೆಯಿದೆ. ಪಾರದರ್ಶಕ ವ್ಯವಸ್ಥೆಯಿದೆ. ಪ್ರಜಾಪ್ರಭುತ್ವದ ಭದ್ರ ಚೌಕಟ್ಟು ಇದೆ. ಸರಕಾರದ ಕಣ್ಣೋಟ ಇದೆ. ನ್ಯಾಯ ಸಮ್ಮತೆ, ಸಮಾನತೆ ಮತ್ತು ಸಮೃದ್ಧಿಯ ಸಮಾನ ಹಂಚುವಿಕೆಯ ಒಂದು ಬಂಧ ಸಹಕಾರ ತತ್ತ್ವದ ಅತ್ಯದ್ಭುತ ಪರಿಕಲ್ಪನೆ.
ಗುರುತಿಸುವಿಕೆ
ಇವತ್ತು ಒಂದಲ್ಲ ಒಂದು ರೀತಿಯಲ್ಲಿ ಜಗತ್ತಿನ ದೊಡ್ಡ ಸಂಖ್ಯೆಯ ಜನರು ಸಹಕಾರಿ ರಂಗದೊಡನೆ ಗುರುತಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಸಹಕಾರ ದಿನದಂದು ಸಹಕಾರ ಕ್ಷೇತ್ರದಲ್ಲಿ ಗುರುತರ ಸಾಧನೆ ಮಾಡಿದ ವ್ಯಕ್ತಿಗಳನ್ನು, ಸಂಘ ಸಂಸ್ಥೆಗಳನ್ನು ಮತ್ತು ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತವರನ್ನು ಗುರುತಿಸಿ ಸನ್ಮಾನಿಸುವ ಪರಿಪಾಠ ಬಹಳ ಒಳ್ಳೆಯದು. ಒಬ್ಬನ ಸಾಧನೆಯ ಪ್ರಕಟೀಕರಣ ಹತ್ತಾರು ಸಾಧಕರನ್ನು ಹುಟ್ಟುಹಾಕಬಹುದು, ಬೆಳೆಸಬಹುದು. ಹಾಗೆಯೇ ಒಂದು ಸಂಘ, ಸಂಸ್ಥೆಯ ಸಾಧನೆಯ ಹಿಂದಿನ ಹಜ್ಜೆಗಳು ಹತ್ತಾರು ಸಂಘ ಸಂಸ್ಥೆಗಳಿಗೆ ಅಧ್ಯಯನ ಯೋಗ್ಯ ವಿಷಯಗಳಾಗಬಹುದು. ಸಹಕಾರ ತತ್ತ್ದವ ಬಗ್ಗೆ ತಿಳುವಳಿಕೆಗಳನ್ನು ಮೂಡಿಸುವ ಸೆಮಿನಾರುಗಳು, ಸಂವಾದಗಳು ಕೂಡ ಸಹಕಾರ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ಅಗತ್ಯ ಕೈಗೊಳ್ಳಬೇಕಾದ ನಿಲುವುಗಳು.
ಉತ್ತಮ ಭವಿತವ್ಯಕ್ಕೆ
ಸಹಕಾರವು ಪ್ರಗತಿ ಮತ್ತು ಸಮೃದ್ಧಿಯ ಬಾಗಿಲನ್ನು ತೆರೆಯುವ ಕೀಲಿಕೈ ಎಂಬುದನ್ನು ಪ್ರತಿಯೊಬ್ಬ ಸಹಕಾರಿ ಅರ್ಥ ಮಾಡಿಕೊಳ್ಳಬೇಕು. ಒಂದು ಸಮಾಜದ ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ಸಹಕಾರಿ ಕ್ಷೇತ್ರದ ಮೂಲಕ ಸಾಧಿಸುವುದರಿಂದಲೇ ಒಂದು ದೇಶದ ಅಭಿವೃದ್ಧಿ ಸಾಧ್ಯವಾಗುವುದು. ಸಹಕಾರಿ ಕ್ಷೇತ್ರವೇ ದೇಶದ ಆರ್ಥಿಕತೆಯ ಹೆಬ್ಬಾಗಿಲು ಎಂದು ಹೇಳುವುದು ಈ ಕಾರಣದಿಂದಾಗಿಯೆ. ನಮ್ಮ ಸಹಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಹೊಸ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಿ ಸಮಾಜದ ಕೊಟ್ಟ ಕೊನೆಯ ವ್ಯಕ್ತಿಯನ್ನು ಕೂಡ ಸಮಾನತೆಯ ಸುಮಧುರ ಬಾಂಧವ್ಯದಲ್ಲಿ ತಂದು ನಾಳೆಯ ದಿನಗಳನ್ನು ನೆಮ್ಮದಿಯ ದಿನಗಳಾಗಿ ಬಾಳಲು ಸಜ್ಜುಗೊಳಿಸಬೇಕು. ಉತ್ತಮ ಗಾಳಿ, ಉತ್ತಮ ನೀರು ಹಾಗೂ ಮೂಲಭೂತ ಸೌಕರ್ಯಗಳಲ್ಲಿ ತೃಪ್ತಿಯಾಗುವಂತೆ ಮಾಡುವ ಗುರುತರ ಜವಾಬ್ದಾರಿ ಸಹಕಾರ ಕ್ಷೇತ್ರದ ಮೇಲಿದೆ. ಯಾಕೆಂದರೆ ಒಂದು ಸರಕಾರದಿಂದ ಆಗದ ಕೆಲಸವನ್ನು ನಯ ನಾಜೂಕಿನಿಂದ ಮಾಡಿ ಸೈ ಎನಿಸಿಕೊಳ್ಳುವ ತಾಕತ್ತು ಇರುವುದು ಸಹಕಾರ ರಂಗಕ್ಕೆ. ಸಹಕಾರ ಕ್ಷೇತ್ರದ ಒಂದು ಹಬ್ಬದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಡುವ ಈ ದಿವಸ ಸಹಕಾರ ಕ್ಷೇತ್ರದ ಹೊಸ ನಡೆಗೆ ಮತ್ತು ಹೊಸ ಹೊಳಹಿಗೆ ಮುನ್ನುಡಿಯಾಗಬೇಕು. ‘ಎಲ್ಲರಿಗೂ ಉತ್ತಮ ಭವಿಷ್ಯವನ್ನು ನಿರ್ಮಿಸುವ ಸಹಕಾರಿಗಳು’ ಎಂಬ ಧ್ಯೇಯ ವ್ಯಾಕ್ಯಕ್ಕೆ ಸರಿಹೊಂದುವoತೆ ಸಹಕಾರಿಗಳ ನಡೆ ನುಡಿಗಳಿದ್ದರೆ ಎಲ್ಲವೂ ಚೆನ್ನ.
ಶಂ.ನಾ. ಖಂಡಿಗೆ
(ಲೇಖಕರು ಕ್ಯಾಂಪ್ಕೊ ಉಪಾಧ್ಯಕ್ಷರು)