ಅಂತರಾಷ್ಟ್ರೀಯ ಸಹಕಾರ ದಿನ O6 ನೇ ಜುಲೈ 2024. ಶ್ರೀ.ಶಶಿಧರ ಎಲೆ.

ವಿಶ್ವದಲ್ಲಿ ಸಹಕಾರ ಚಳುವಳಿ ಉಗಮ ಗೊಂಡು ಎರಡು ಶತಮಾನದ ಸನಿಹದಲ್ಲಿದೆ. ಸಾಮಾನ್ಯ ಜನರ ಆರ್ಥಿಕ ಅಭಿವೃದ್ಧಿ ಅಲ್ಲದೆ ಎಲ್ಲರನ್ನೂ ಒಳಗೊಳ್ಳುವ ಗುಣವಿಶೇಷ ಇರುವುದು ‘ಸಹಕಾರ’ಮಾದರಿಯಲ್ಲಿ ಎಂಬದು ಅತಿಶಯೋಕ್ತಿಯಲ್ಲ. ‘ಹನಿ ಹನಿ ಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ’ ಎಂಬ ನಾಣ್ಣುಡಿ ಸೃಷ್ಟಿಯಾಗಿರುವುದೇ ‘ಸಹಕಾರ’ ಪದ್ಧತಿಯ ಅನುಸರಣಿಯಿಂದ, ‘ಇವನಾರವ ಇವನಾರವ ಎಂದೆನ್ನದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂದ ಬಸವಣ್ಣನವರ ಉಕ್ತಿ ಇದನ್ನೇ ಧ್ವನಿಸುತ್ತದೆ. ಅಲ್ಲದೆ ‘ಕಾಗೆಯೊಂದ ಅಗಳ ಕಂಡರೆ ಕರೆಯದೆ ತನ್ನ ಬಳಗವೆಲ್ಲವ’ ಎಂಬ ವಚನ ಸಹಕಾರ ತತ್ವಗಳ ಸಾರವನ್ನು ಸಾರುತ್ತದೆ. ಈ ‘ಸಹಕಾರ ಪದ್ಧತಿ’ ಮಾನವನ ಹುಟ್ಟಿನಿಂದಲೇ ಆರಂಭಗೊಂಡರೂ ‘ ಒಬ್ಬ ಮನುಷ್ಯ ಸಾಧನೆ ಮಾಡಲಾಗದ್ದನ್ನು ಹತ್ತು ಜನ ಸೇರಿ ಮಾಡಬಹುದು.”ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ’ ‘ಸ್ವಯಂ ಸಹಾಯ ಮತ್ತು ಪರಸ್ಪರ ಸಹಾಯ’ ಎಂಬ ತತ್ವಗಳ ಆಧಾರದ ಮೇರೆಗೆ ಮಾನವ ತನ್ನ ಕನಿಷ್ಟ ಅಗತ್ಯತೆಯ ಪೂರೈಕೆ, ಅಲ್ಲದೆ, ಆರ್ಥಿಕ ಸಶಕ್ತತೆ ಪಡೆಯಲು ಆರಂಭಗೊಂಡಿದ್ದು ಯುರೋಪ್ ಖಂಡದ ದಲ್ಲಿ. ಈ ದಿಸೆಯಲ್ಲಿ ಆಲೋಚಿಸಿದ ಮತ್ತು ಕಾರ್ಯಗತ ಗೊಳಿಸಲು ಯತ್ನಿಸಿದ ಪ್ರಯತ್ನ ರಾಬರ್ಟ್ ಓವನ್(1771-1858) ರದು , ಆದುದರಿಂದ ಅವರನ್ನು ಸಹಕಾರ ಪಿತಾಮಹ ಎಂದು ಕರೆಯಲಾಗುತ್ತದೆ. ಅಂದಿನಿಂದ ಇಂದಿನ ವರೆಗೂ ಈ ಅವಿರತ ಪ್ರಯತ್ನ ನಡೆಯುತ್ತಲೇ ಬಂದಿದೆ.

ಮಾನವ ಜನಾಂಗದ ಒಳಿತಿಗೆ ಇದರಿಂದ ಆಗಿರುವ , ಆಗಲಿರುವ ಪರಿಣಾಮಗಳ ವಿಶ್ಲೇಷಣೆ , 21 ನೇ ಶತಮಾನದ ಈ ಆಧುನಿಕ ಜಗತ್ತಿನಲ್ಲಿ ಇದರ ಪ್ರಸ್ಥುತೆ ಬಗ್ಗೆ ಚಿಂತನ-ಮಂಥನ, ವಿಶ್ಲೇಷಣೆ 2024 ನೇ ಇಸವಿ 06 ನೇ ಜುಲೈ ತಿಂಗಳಲ್ಲಿ ನಡೆಸಬೇಕಾಗಿರುವುದು ಸಹಕಾರಿಗಳ ಮುಂದಿರುವ ಸವಾಲು. ಈ ಅಂತರರಾಷ್ಟ್ರೀಯ ಸಹಕಾರ ದಿನವು 102 ನೇ ಆಚರಣೆ ಯಾಗಿರುತ್ತದೆ. ಆದರೂ ಇದಕ್ಕೆ ವಿಶ್ವ ಸಂಸ್ಥೆ ಮುನ್ನಡೆ ದೊರೆತದ್ದು 1992 ರಲ್ಲಿ, ಪ್ರತಿ ವರ್ಷ ಮೊದಲ ಶನಿವಾರವನ್ನು ಅಂತಾರಾಷ್ಟ್ರೀಯ ಸಹಕಾರ ದಿನ ವೆಂದು ಆಚರಿಸಲಾಗುತ್ತದೆ. ಇದರಿಂದಾಗಿ ಸಹಕಾರದ ಬಗ್ಗೆ ಸರ್ಕಾರಗಳ , ನಾಗರೀಕ ಸಮಾಜ ಸಂಸ್ಥೆಗಳ ಮತ್ತು ಮಿಗಿಲಾಗಿ ಸಾರ್ವಜನಿಕರ ಗಮನ ಸೆಳೆಯಲು ಸಾಧ್ಯವಾಗಿದೆ. ಈ ದಿಸೆಯಲ್ಲಿ ವಿಶ್ವದ ಸಹಕಾರ ಜಾಲದ ಶೃಂಗ ಸಂಸ್ಥೆ ಯಾದ ‘ಅಂತರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆ’ ಯು ಈ ವರ್ಷದ ಘೋಷ ವಾಕ್ಯವನ್ನು ಈ ರೀತಿ ಹೊರಡಿಸಿದೆ.”ಸರ್ವರಿಗೂ ಉತ್ತಮ ಭವಿಷ್ಯವನ್ನು ಸಹಕಾರ ಸಂಸ್ಥೆಗಳು ನಿರ್ಮಿಸುತ್ತವೆ.” ಇದು ಹೇಗೆ? ಎಂಬುದು ನಮ್ಮ ಮುಂದಿರುವ ಪ್ರಶ್ನೆ.

ವಿಶ್ವದಲ್ಲಿ ಒಟ್ಟು 3 ದಶಲಕ್ಷ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು 280 ದಶಲಕ್ಷ ಅಂದರೆ ಸರಿ ಸುಮಾರು ಶೇ 12 ಮಾನವ ಜನಾಂಗದ ಜೀವನದ ದಾರಿಯಾಗಿದೆ. ಭಾರತದಲ್ಲಿ 8.5ಲಕ್ಷ ಸಹಕಾರ ಸಂಘಗಳಿದ್ದು 40 ಕೋಟಿ ಸದಸ್ಯರಿರುತ್ತಾರೆ. ಕರ್ನಾಟಕದಲ್ಲಿ 44024 ಸಹಕಾರ ಸಂಘಗಳಿದ್ದು 40 ಕೋಟಿ ಸದಸ್ಯತ್ಯ ಹೊಂದಿದೆ ಎಂದು ಅಂಕಿಅಂಶಗಳು ತಿಳಿಸುತ್ತವೆ. ವಿಶ್ವದ ಮೊದಲ 300 ಅತಿ ಹೆಚ್ಚಿನ ವಹಿವಾಟು ನಡೆಸುವ ಸಹಕಾರ ಸಂಘಗಳಲ್ಲಿ ಫ್ರಾನ್ಸ್ ನ’ ಕ್ರೆಡಿಟ್ ಅಗ್ರಿಕೋಲ್’ 117.01 ಅಮೆರಿಕನ್ ಡಾಲರ್, ಜರ್ಮನ್ ನ ‘ರೆವೆ'(REWE)(ಗ್ರಾಹಕ ಸಹಕಾರಸಂಘ) 82.03 ಅಮೇರಿಕನ್ ಡಾಲರ್ ವ್ಯವಹಾರ ನಡೆಸುತ್ತಿದ್ದು ಅಗ್ರ ಸ್ಥಾನ ದಲ್ಲಿವೆ. ಇದರಲ್ಲಿ ಅಮೇರಿಕೆಯ 73, ಫ್ರಾನ್ಸ್ ನ 40, ಜರ್ಮನಿಯ 31, ಜಪಾನ್ ನ 21 ಸಂಸ್ಥೆಗಳಿವೆ. ಭಾರತದ ಎರಡು ಸಂಸ್ಥೆಗಳು ಇಷ್ಕೊ, ಮತ್ತು ‘ಅಮುಲ್’ ಇದರಲ್ಲಿ ಸ್ಥಾನ ಪಡೆದಿವೆ ಎಂಬುದು ಸಮಾಧಾನಕರ ಸಂಗತಿ.

ಮೇಲಿನ ಅಂಕಿ ಅಂಶಗಳು ಯುರೋಪ್ ಖಂಡದಲ್ಲಿ ಸಹಕಾರ ಚಳುವಳಿಯ ಮಹತ್ವವನ್ನು ಅರಿಯಬಹುದು. ಭಾರತದಲ್ಲಿ ಆರ್ಥಿಕ ಬೆಳವಣಿಗೆಗೆ ಹೋಲಿಸಿದರೆ ಪರಿಣಾಮಕಾರಿ ಸಾಧನೆ ಆಗಿದೆ, ಎಂಬ ತೃಪ್ತಿ ದೊರೆಯುವುದಿಲ್ಲ. ಕೇಂದ್ರ ಸರ್ಕಾರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಆರಂಭಗೊಂಡ ನಂತರ ನೂತನವಾಗಿ ಸಹಕಾರ ಮಾರಾಟ, ಕೃಷಿ ಉತ್ಪನ್ನಗಳ ರಫ್ತು ಸಾವಯವ ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ. ಬಿತ್ತನೆ ಬೀಜಗಳ ಉತ್ಪಾದನೆ ಸಹಕಾರ ಸಂಘಗಳ ಸ್ಥಾಪನೆಗೆ ಆಯೋಜಿಸಲಾಗಿದ್ದು ಈಗಾಗಲೆ ಕಾರ್ಯಾರಂಭ ಮಾಡಿವೆ. ಅಲ್ಲದೆ ನ್ಯಾಪೆಡ್, ಎನ್.ಸಿ. ಸಿ. ಎಫ್ ಗಳು ಈ ದಿಸೆಯಲ್ಲಿ ಸರ್ಕಾರಕ್ಕೆ, ಎನ್.ಸಿ.ಡಿ.ಸಿ, ನಬಾರ್ಡ್ ಸಹಯೋಗ , ಸಹಾಯದಿಂದ ಸಹಕಾರದಿಂದ ಭಾರತದ ಸಹಕಾರ ವಲಯ ಜನಸಾಮಾನ್ಯರ ಜೀವನವನ್ನು ಹಸನು ಮಾಡಿದೆ. ಆದರೂ ಒಟ್ಟಾರೆ ಆರ್ಥಿಕತೆಯ ಪಾಲು ತೃಪ್ತಿ ದಾಯಕ ವಾಗಿಲ್ಲ. ಇದರಿಂದ ಬಂಡವಾಳಶಾಹಿ ಬಲವರ್ಧನೆಗೊಂಡು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಿರುತ್ತದೆ. ಉತ್ತಮ ಸಮತಾ ಸಮಾಜ ನಿರ್ಮಾಣಕ್ಕಾಗಿ ಸಹಕಾರ ವಲಯ ಮತ್ತಷ್ಟು ಬೆಳೆಯಬೇಕಾದ ಅವಶ್ಯಕತೆ ನಿಚ್ಛಳವಾಗಿ ಕಂಡುಬರುತ್ತದೆ. ಅದಕ್ಕಾಗಿ ಅಂತಾರಾಷ್ರೀಯ ಮೈತ್ರಿ ಸಂಸ್ಥೆಯು ಈ ಕೆಳಕಂಡ ಉಪಕ್ರಮಗಳನ್ನು ಶಿಫಾರಸ್ಸು ಮಾಡಿದೆ.

ಅರಿವನ್ನು ವೃದ್ಧಿಸುವುದು: ಸಹಕಾರ ಸಂಘಗಳ ವೈವಿಧ್ಯತೆ ಮತ್ತು ಇದರಿಂದ ಜನರಿಗೆ ಆಗುವ ಉಪಯುಕ್ತತೆ ಬಗ್ಗೆ ತಿಳಿಸಿಕೊಡುವುದು. ವಿವಿಧ ಪ್ರದೇಶಗಳಲ್ಲಿ ವಿವಿಧ ವಲಯಗಳ ಪರಿಚಯ ಮಾಡಿಕೊಡುವುದು.

ಯಶಸ್ಸನ್ನು ಸಂಭ್ರಮಿಸುವುದು: ವಿವಿಧ ಪ್ರದೇಶಗಳ ವಿವಿಧ ಸಮುದಾಯಗಳು ಸಹಕಾರ ಸಂಘಗಳ ಯಶಸ್ವಿ ಕಾರ್ಯಾಚರಣೆಯಿಂದ ಪಡೆದಿರುವ ಪ್ರಯೋಜನಗಳು , ಲಾಭಗಳು, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧನೆ ಮತ್ತು ಅದರ ಪ್ರಭಾವಗಳನ್ನು ಅರಿತು ಸಂಭ್ರಮಿಸಿ ಇತರರಿಗೂ ಪ್ರೇರಣೆಯಾಗುವುದು.

ಬೆಂಬಲ ನೀಡಲು ಒತ್ತಾಸೆ: ಸಹಕಾರ ಸಂಘಗಳ ಅಭಿವೃದ್ಧಿಗೆ ತಕ್ಕ ನೀತಿಗಳು ಮತ್ತು ಸಂಪನ್ಮೂಲ ಕ್ರೋಡಿಕರಣಕ್ಕೆ ತಕ್ಕ ಪರಿಸರ ನಿರ್ಮಾಣ ಮಾಡಿ ಭವಿಷ್ಯದಲ್ಲಿ ಸುಸ್ಥಿರ ಮತ್ತು ಸಮಾನತೆಯ ಸಮಾಜನಿ ರ್ಮಾಣ ಮಾಡುವುದು.

ಸಹಯೋಗವನ್ನು ಬಲ ಪಡಿಸುವುದು:ಹೆಚ್ಚು ಪರಿಣಾಮಕಾರಿಯಾಗಲು ಮತ್ತು ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಸರ್ಕಾರ ಸಂಸ್ಥೆಗಳೊಡನೆ , ಖಾಸಗಿ ಸಂಸ್ಥೆಗಳೊಡನೆ ಸಹಯೋಗ, ಸಹ ಭಾಗಿತ್ವದಿಂದ ಕಾರ್ಯನಿರ್ವಹಿಸುವುದರಿಂದ ಜನ ಸಾಮಾನ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರುವುದಲ್ಲದೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ. ಇದರೊಂದಿಗೆ ವಿವಿಧ ಸಹಾರ ಸಂಘಗಳು , ಶೃಂಗ ಸಹಕಾರ ಸಂಘಗಳು ಸಹಕಾರ ತತ್ವವಾದ ‘ಸಹಕಾರ ಸಂಘಗಳ ನಡುವೆ ಸಹಕಾರ’ ತಳಮಟ್ಟದ ಮತ್ತು ಶೃಂಗ ಶ್ರೇಣಿಗಳ ನಡುವೆ ಬಾಂಧವ್ಯ ವೃದ್ಧಿಯಿಂದ ಒಗ್ಗಟ್ಟು ಮತ್ತು’ ನಾವೆಲ್ಲ ಒಂದು’ ಎಂಬ ಭಾವನೆಯಿಂದ ಕಾರ್ಯನಿರ್ವಹಿಸುವುದರಿಂದ ಸಹಕಾರ ಚಳುವಳಿಯನ್ನು ಬಲ ಪಡಿಸಬಹುದು. ಈ ದಿಸೆಯಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಅಂತರರಾಷ್ಟ್ರೀಯ ಸಹಕಾರದಿನದಂದು ಆಲೋಚಿಸುವುದಕ್ಕೆ ಕರೆ ನೀಡಲಾಗಿದೆ.

ಪ್ರೇರಣೆ ಮತ್ತು ನೈತಿಕ ಮೌಲ್ಯಗಳ ವೃದ್ಧಿ: ಸಹಕಾರ ಸಂಘಗಳ ಯಶಸ್ಸನ್ನು ಸಂಭ್ರಮಿಸುವುದರಿಂದ ಸದಸ್ಯರಿಗೆ ಸಂಘದ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೊತ್ಸಾಹಿಸಿದಂತಾಗುತ್ತದೆ. ಇದರಿಂದ ಅವರು ಮತ್ತೂ ಉತ್ಸಾಹ ದಿಂದ ಕಾಯೋನ್ಮುಖರಾಗಿ ಮುಂದಿನ ಭವಿಷ್ಯವನ್ನು ಮತ್ತೂ ಉತ್ತಮವಾಗಿ ರೂಪಿಸ ಬಲ್ಲರು. ಇದರಿಂದ ಅವರ ಭವಿಷ್ಯ ಉತ್ತಮವಾಗುವುದಲ್ಲದೆ ಸಮುದಾಯದ ಭವಿಷ್ಯವನ್ನು ಉತ್ತಮ ಗೊಳಿಸಬಲ್ಲರು. ಉದಾಹರಣೆಗೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಧಿಕ ಮತ್ತು ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಿದ ಸದಸ್ಯರನ್ನು, ಪತ್ತಿನ ಸಹಕಾರ ಸಂಘದಲ್ಲಿ ಸ್ಟ ಪ್ರೇರಣೆಯಿಂದ ಸಕಾಲದಲ್ಲಿ ಸಾಲ ಮರುಪಾವತಿಸಿದವರನ್ನು ಸನ್ಮಾನಿಸುವುದು.

ಬೆಳವಣಿಗೆ ಮತ್ತು ಅಭಿವೃದ್ಧಿ ಯನ್ನು ಉತ್ತೇಜಿಸುವುದು: ಸಹಕಾರದಿಂದ ವ್ಯಕ್ತಿಗಳು ಉದ್ಯೋಗದಲ್ಲಿ ತೊಡಗಿಕೊಳುತ್ತಾರೆ ಮತ್ತು ಉದ್ಯೋಗ ಸೃಷ್ಠಿಸುತ್ತಾರೆ. ಇದರಿಂದ ಅದರಲ್ಲಿಯೂ ಸೇವೆ ಲಭ್ಯವಿಲ್ಲದ ವಲಯ ಮತ್ತು ಪ್ರದೇಶಗಳಲ್ಲಿ ಇದು ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಪತ್ತಿನ ಸಹಕಾರ ವಲಯ ಬಂಡವಾಳ ಒದಗಿಸುತ್ತದೆ. ಉತ್ಪಾದನಾ ಮತ್ತು ಮಾರುಕಟ್ಟೆ ಸಹಕಾರ ಸಂಘೆಗಳು ಮಾರುಕಟ್ಟೆ ಒದಗಿಸುತ್ತವೆ.

ಅರಿವು ಹೆಚ್ಚಿಸುವುದು: ಸಹಕಾರ ಸಂಸ್ಥೆಗಳು ತಮ್ಮದೇ ಆದ ಸ್ವಯಂ ಸಂಸ್ಥೆಗಳು ಅನ್ನುವುದನ್ನು ಅರಿಯಬೇಕು . ಇದರಲ್ಲಿ ಮಧ್ಯಮ ವರ್ತಿಯ ಪಾತ್ರವಿಲ್ಲ ಇದರಿಂದ ಆಗುವ ಪ್ರಯೋಜನ ಮತ್ತು ಲಾಭತಮಗೆ ನೇರವಾಗಿ ದೊರೆಯುತ್ತಿದೆ ಎಂಬುದನ್ನು ತಿಳಿಸಿಕೊಡಬೇಕಾಗಿದೆ. ಸಾರ್ವಜನಿಕರಿಗೂ ‘ಸಹಕಾರ’ದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇದರಿಂದಾಗುವ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ಪರಿಸರಾತ್ಮಕ ಸುಸ್ಥಿರತೆ ಬಗ್ಗೆ ತಿಳಿಯಪಡಿಸಲು ಕ್ರಮಗಳು ಅತ್ಯಗತ್ಯ ವಿಶ್ವದ ಸವಾಲುಗಳನ್ನು ಎದುರಿಸುವುದು(ಸರಿ ಪಡಿಸುವುದು); ಬಡತನ, ಹಸಿವು, ವಾತಾವರಣದ ಬದಲಾವಣೆ ಮತ್ತು ಅಸಮಾನತೆ ಸೃಷ್ಠಿಯಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಮತ್ತು ಅಸಮಾನತೆಯನ್ನು ತಡೆಗಟ್ಟುವುದರಲ್ಲಿ ಸಹಕಾರ ಸಂಘಗಳು ತೊಡಗಿಕೊಳ್ಳುವುದರಿಂದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ.

ನೈತಿಕ ಮತ್ತು ಸುಸ್ಥಿರ ರೂಢಿಗಳನ್ನು ಉತ್ತೇಜಿಸುವುದು: ಪ್ರಜಾಸತ್ತಾತ್ಮಕ ಆಡಳಿತವು ಎಲ್ಲರನ್ನೂ ಒಳಗೊಳ್ಳುವುದರಿಂದ ಸಮುದಾಯದ ಅಭಿವೃದ್ಧಿಗೆ ಕಾರಣವಾಗುತ್ತದೆ. ಆದುದರಿಂದ ಸಹಕಾರ ಸಂಘಗಳು ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ಮತ್ತು ಪರಿಸರ ಜವಾಬ್ದಾರಿ ಯನ್ನು ವೃದ್ಧಿಸುವುದಕ್ಕೆ ಆಧ್ಯತೆ ನೀಡಿ ಆಧಿಕ ಪ್ರಗತಿಗೆ ಕಾರಣವಾಗಬಲ್ಲ ಪರ್ಯಾಯ ಮಾರ್ಗವೆಂದರೆ ಸಹಕಾರ ಮಾರ್ಗ ಮಾತ್ರ ಆಗಿರುತ್ತದೆ.

ಭಾಗವಹಿಸುವಿಕೆ  ಮತ್ತು  ಸಶಕ್ತತೆಯನ್ನು  ಪ್ರೊತ್ಸಾಹಿಸುವುದು: ಸಹಕಾರ  ಸಂಘಗಳು  ವ್ಯಕ್ತಿಗಳನ್ನು  ಸಮುದಾಯಗಳನ್ನು  ಸಶಕ್ತರನ್ನಾಗಿ ಮಾಡುತ್ತದೆ. ಅವರ  ಧ್ವನಿ ಕೇಳಲೇ ಬೇಕಾಗುತ್ತದೆ.
ಅವರಿಗೆ  ಯಜಮಾನಿಕೆಯು  ಸಶಕ್ತರನ್ನಾಗಿ  ಮಾಡುತ್ತದೆ. ವಿಶ್ವಸಂಸ್ಥೆ ಯು ಮುಂದಿನ  ವರ್ಷ 2025  ನ್ನು ಅಂತರಾಷ್ಟ್ರೀಯ  ಸಹಕಾರ  ವರ್ಷ  ಎಂದು  ಘೋಷಿಸಿರುವುದು  ಈ  ವರ್ಷದ  ಅಂತರಾಷ್ಟ್ರೀಯ ಸಹಕಾರ  ದಿನದ  ಮಹತ್ವವನ್ನು  ಹೆಚ್ಚಿಸಿದೆ.

ಅಂತರರಾಷ್ಟ್ರೀಯ  ಸಹಕಾರ  ದಿನವು “ನಾವು  ಮತ್ತು  ನಮ್ಮ ಶಕ್ತಿ”ಯನ್ನು   ಪ್ರತಿದ್ವನಿಸುತ್ತದೆ. ಅನುರಣಿಸುತ್ತಲೇ  ಇರುತ್ತದೆ.

                                                                                                                                                                                                             

ಶ್ರೀ.ಶಶಿಧರ   ಎಲೆ.

ಸಹಕಾರ  ಸಂಘಗಳ  ಅಪರ ನಿಬಂಧಕರು(ನಿವೃತ್ತ)

ನಂ 281 , ನೇಸರ  ಬಾಲಾಜಿ  ಹೆಚ್.ಬಿ.ಸಿ.ಎಸ್  ಲೇಔಟ್ , ವಾಜರಹಳ್ಳಿ,ಕನಕಪುರ ರಸ್ತೆ  ಬೆಂಗಳೂರು 560109                              

 

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More