ಪಾಲು ಬಂಡವಾಳ ಸಂಗ್ರಹಿಸದೆ, ಒಂದು ಸಹಕಾರ ಸಂಸ್ಥೆಯನ್ನು ನೋಂದಾಯಿಸಬಹುದೇ? ಒಂದು ವಿಮರ್ಷೆ। ಸಿ.ಎನ್.ಪರಶಿವಮೂರ್ತಿ

 

ಸದಸ್ಯರೇ ಸಹಕಾರ ಸಂಸ್ಥೆಯ ಬಂಡವಾಳ, ಸದಸ್ಯರ ಪಾಲು ಬಂಡವಾಳವೇ ಸಹಕಾರ ಸಂಸ್ಥೆ ಜೀವಾಳ, ಪಾಲು ಬಂಡವಾಳವೇ ಸಂಸ್ಥೆಯ ಆರ್ಥಿಕ ಸಬಲತೆಗೆ ಆಧಾರ, ದುಡಿಯುವ ಬಂಡವಾಳವೇ ಸಹಕಾರ ಸಂಸ್ಥೆಯ ಶಕ್ತಿ, ಸದಸ್ಯರ ಹಕ್ಕು ಭಾದ್ಯತೆ ಚಲಾಯಿಸಲು ಆ ಸಹಕಾರ ಸಂಸ್ಥೆಯ ಹಕ್ಕು ಜವಾಬ್ದಾರಿ ನಿರ್ವಹಿಸಲು ಮತ್ತು ಸಂಸ್ಥೆಯ ಸೌಲತ್ತುಗಳನ್ನು ಪಡೆಯಲು ಪಾಲು ಬಂಡವಾಳವೇ ಆಧಾರ. ಸದಸ್ಯರ ಪಾಲು ಬಂಡವಾಳವಿಲ್ಲದ ಸಂಸ್ಥೆ ಅಸ್ತಿತ್ವ ಸಹಕಾರ ತತ್ವಕ್ಕೆ ವಿರುದ್ದ.

ಸಹಕಾರ ಸಂಸ್ಥೆಯ, ಮೂಲ ಉದ್ದೇಶ “ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ” ಎಂಬ ಮೂಲ ತತ್ವದ ಜೊತೆಗೆ “ಸಮಾನ ಮನಸ್ಕರು, ತಮ್ಮ ಅತ್ಯಲ್ಪ ಸಂಪನ್ಮೂಲವನ್ನು ಕ್ರೋಡೀಕರಿಸಿ, ತಮ್ಮ ಆರ್ಥಿಕ ಬೆಳವಣಿಗೆಗಾಗಿ ರಚಿಸಿಕೊಂಡ ಒಂದು ಸಂಸ್ಥೆ”. ಅಂದರೆ ಒಂದು ಸಹಕಾರ ಸಂಸ್ಥೆ ಧರ್ಮ ಸಂಸ್ಥೆಯಲ್ಲಿ, ಅದು ಒಂದು ಆರ್ಥಿಕ ಸಂಸ್ಥೆ. ಇದಕ್ಕೆ ಪೂರಕವಾಗಿ ಅಂತರ ರಾಷ್ಟ್ರೀಯ ಸಹಕಾರ ಒಕ್ಕೂಟ ಪ್ರಾರಂಭದಲ್ಲಿ ಆರು ಸಹಕಾರ ತತ್ವಗಳನ್ನು ರೂಪಿಸಿದೆ. ಅದರಂತೆ (1) ಸ್ವಯಂ ಪ್ರೇರಿತ ಮುಕ್ತ ಸದಸ್ಯತ್ವ (2) ಪ್ರಜಾಸತ್ತಾತ್ಮಕ ನಿಯಂತ್ರಣ (3) ಸಮಾನ ಲಾಭ ಹಂಚಿಕೆ (4) ಬಂಡವಾಳದ ಮೇಲೆ ಮಿತವಾದ ಬಡ್ಡಿ (5) ಸಹಕಾರ ಶಿಕ್ಷಣ (6) ಸಹಕಾರಿಗಳಲ್ಲಿ ಸಹಕಾರ. ಏಳನೇ ತತ್ವವಾಗಿ 1995 ರಲ್ಲಿ ಸಮಾಜಿಕ ಕಳಕಳಿ ಎಂಬ ತತ್ವವನ್ನು ಅಂತರ ರಾಷ್ಟ್ರೀಯ ಸಹಕಾರ ಒಕ್ಕೂಟ ಸೇರಿಸಿದೆ.

ಈ ಲೇಖನದ ಉದ್ದೇಶಕ್ಕಾಗಿ ಮೊದಲು ಸಹಕಾರಿ ತತ್ವಗಳನ್ನು ಪರಿಶೀಲಿಸೋಣ. (1) ಸ್ವಯಂ ಪ್ರೇರಿತ ಮತ್ತು ಸದಸ್ಯತ್ವ – ವ್ಯಕ್ತಿಯ ಅವಶ್ಯಕತೆಯನ್ನು ಪಡೆಯಲು ಮತ್ತು ಯಾರ ಒತ್ತಡಕ್ಕೂ ಒಳಗಾಗದೆ ಸೇವೆ ಪಡೆಯಲು ಸದಸ್ಯತ್ವ ಪಡೆದ ವ್ಯಕ್ತಿ. ಸದಸ್ಯತ್ವವೆಂದರೆ ಒಂದು ಸಹಕಾರ ಸಂಸ್ಥೆಯ ಸದಸ್ಯತ್ವಕ್ಕೆ ನಿಗದಿ ಪಡಿಸಿದ ಪಾಲು ಬಂಡವಾಳ, ಸಹಕಾರ ಸಂಘಗಳ ನಿಯಮ 1960ರ, ನಿಯಮ 5(1)(ಡಿ) ಅಡಿ ಗರಿಷ್ಟ ಪ್ರಮಾಣದ ಪಾಲುಬಂಡವಾಳ ನಿಗದಿ ಪಡಿಸಲು ಸೂಚಿಸಿದೆ. (ಕರ್ನಾಟಕ ಸೌಹಾರ್ದ ಕಾಯಿದೆ 1997ರ ಕಲಂ.10 2(XI) ಮತ್ತು (XVII) ರಲ್ಲಿ ಪಾಲು ಬಂಡವಾಳದ ಬಿನ್ನ ಉಲ್ಲೇಖ ಇದೆ.) ಕನಿಷ್ಠ ಒಂದು ಷೇರನ್ನಾದರೂ ಪಡೆದಿರಬೇಕೆಂಬ ಶರತ್ತುಗೊಳಪಟ್ಟ ಸಹಕಾರ ಸಂಘಗಳ ಕಾಯಿದೆ 1959ರ ಕಲಂ.4, 6, 7 ನೋಂದಣಿ ಮತ್ತು ಕಲಂ.36 ಮತ್ತು 17ರಲ್ಲಿ ಸದಸ್ಯತ್ವಕ್ಕೆ ಅರ್ಹತೆ ಮತ್ತು ಅನರ್ಹತೆ ನಿಗದಿ ಪಡಿಸಿದೆ. ಸೌಹಾರ್ದ ಕಾಯಿದೆ 1997ರ ಕಲಂ.4 ಮತ್ತು 5 ರಲ್ಲಿ ನೋಂದಾವಣೆಗೆ ಸಲ್ಲಿಸುವ ಅರ್ಜಿಯಲ್ಲಿ ಸದಸ್ಯರು ಪಾಲುಬಂಡವಾಳದ ಬಗ್ಗೆ ಉಲ್ಲೇಖ ಇದೆ.

ಈ ಎಲ್ಲಾ ಅವಕಾಶಗಳಲ್ಲಿ ಒಂದು ಸಹಕಾರ ಸಂಸ್ಥೆ ಸ್ಥಾಪಿಸಲು/ನೋಂದಾಯಿಸಲು ಪ್ರತಿ ಸದಸ್ಯ ಪಾಲು ಬಂಡವಾಳ ಹೂಡತಕ್ಕದ್ದು ಅಂದರೆ, ಸದಸ್ಯತ್ವ ಪಡೆಯಲು ಪ್ರತಿಯೊಬ್ಬ ಸದಸ್ಯನಿಗೂ ಪಾಲುಬಂಡವಾಳದ ಕನಿಷ್ಠ ಒಂದು ಷೇರು ಹೊಂದಿರಬೇಕು. ಸದಸ್ಯತ್ವ ನೀಡುವಾಗ ಪ್ರತಿ ಸಹಕಾರ ಸಂಸ್ಥೆ ಷೇರು ಬಂಡವಾಳ ಸ್ವೀಕರಿಸಿ ಆಡಳಿತ ಮಂಡಳಿ ಒಪ್ಪಿಗೆ ನೀಡಿದ ನಂತರವೇ ಸದಸ್ಯತ್ವ ನೀಡಲಾಗುತ್ತಿದೆ. (ಇದಕ್ಕೆ ಪೂರ್ವದಲ್ಲಿ ನೋಂದಾವಣೆಗೆ ಸಲ್ಲಿಸುವ ಅರ್ಜಿಯಲ್ಲಿ ಸಹಿ ಮಾಡಿದ ವ್ಯಕ್ತಿಗಳು ನೋಂದಾವಣೆ ಆದ ದಿನಾಂಕದಂದೇ ಸದಸ್ಯರಾಗಿದ್ದಾರೆಂದು ಭಾವಿಸತಕ್ಕದೆಂದು ಕಾಯಿದೆ ಅವಕಾಶ ಕಲ್ಪಿಸಿದೆ.)

ಈ ಉದ್ದೇಶಕ್ಕಾಗಿ ನಿಬಂಧಕರು ಪ್ರತಿಯೊಂದು ವರ್ಗದ ಸಹಕಾರ ಸಂಸ್ಥೆಗಳ ನೋಂದಾವಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ, ನೋಂದಾವಣೆ ಮಾಡುವ ಅಧಿಕಾರಿಗಳಿಗೆ ಸೂಚಿಸಿದೆ. ಇದು ಕಾಯಿದೆಯಲ್ಲಿ 10 ವಿವಿಧ ಕುಟುಂಬಗಳಿಗೆ ಸೇರಿದ ಬಿಡಿ ಸದಸ್ಯರು ಸಾಕೆಂದಿದ್ದರೂ, ಈ ಮೇಲ್ಕಂಡ ನಿಬಂಧಕರ ಸುತ್ತೋಲೆಯನ್ನು  ಕೆಳಮಟ್ಟಿನ ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಈ ಮಾರ್ಗದರ್ಶಿ ಸುತ್ತೋಲೆಯಲ್ಲಿ ಪ್ರತಿಯೊಂದು ಸಹಕಾರ ಸಂಸ್ಥೆಯು ಪ್ರಸ್ತಾವನೆ ಸ್ವೀಕರಿಸಿದಾಗ ಕನಿಷ್ಠ ಪ್ರಮಾಣದ ಸದಸ್ಯರು ಮತ್ತು ಕನಿಷ್ಟ ಪ್ರಮಾಣದ ಪಾಲು ಬಂಡವಾಳ ಸಂಗ್ರಹಿಸಲು ಸೂಚಿಸುತ್ತಾರೆ. ಅದರಂತೆ ಬಂದ ಪ್ರಸ್ತಾವನೆಗಳನ್ನು ಮಾತ್ರ ನೋಂದಾಯಿಸಲಾಗುತ್ತಿದೆ. ಷರತ್ತು ಪೂರೈಸಲಾಗದಿದ್ದರೆ, ಅವಧಿಯನ್ನು ವಿಸ್ತರಿಸಲಾಗುತ್ತಿದೆ. ನೋಂದಾವಣೆ ಆದ ನಂತರದ ವಿಮರ್ಷೆ ಈ ಲೇಖನದ ಉದ್ದೇಶ ಇಲ್ಲ.

ನಮ್ಮ ರಾಜ್ಯದಲ್ಲಿ – ರಾಷ್ಟ್ರದ ಬಹುರಾಜ್ಯಗಳಲ್ಲಿ ಕೆಲವು ವರ್ಗದ ಸಹಕಾರ ಸಂಸ್ಥೆಗಳನ್ನು ಸದಸ್ಯತ್ವ ನೀಡದೆ. ಪಾಲು ಬಂಡವಾಳ ಸಂಗ್ರಹಿಸದೇ ನೋಂದಾಯಿಸಲಾಗುತ್ತಿದೆ. ಈ ಬಗ್ಗೆ ಈ ಲೇಖನದಲ್ಲಿ ವಿಮರ್ಷೆ ಮಾಡಲು ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯ ಮಟ್ಟದಲ್ಲಿ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಸೌಹಾರ್ದ ಕಾಯಿದೆಯ ಸಂಯುಕ್ತ ಸಹಕಾರಿ. ಇದರ ಜೊತೆಗೆ ಕೆಲವು ವಿದ್ಯಾಸಂಸ್ಥೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳನ್ನು ಸೇರಿಸಬಹುದು. ಈ ಸಹಕಾರ ಸಂಸ್ಥೆಗಳನ್ನು ನೋಂದಾಯಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಸಹಕಾರ ವಿದ್ಯಾ ಸಂಸ್ಥೆಗಳು, ಸಹಕಾರಿ ಆ ಸೂತ್ರಗಳು ವ್ಯಕ್ತಿಗತ ಸದಸ್ಯರನ್ನು ಹೊಂದಿರುವ ಸಹಕಾರ ಸಂಸ್ಥೆಗಳು. ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದಿರುವಂತಹ ಸಹಕಾರಿ ಸಂಸ್ಥೆಗಳೆಂದರೆ ಜಿಲ್ಲಾ ಸಹಕಾರಿ ಒಕ್ಕೂಟ, ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳ, ಈ ಮೂರು ಸಂಸ್ಥೆಗಳ ಸದಸ್ಯತ್ವ ಸಹಕಾರ ಸಂಸ್ಥೆಗಳಿಗೆ ಮಾತ್ರ ಅರ್ಹತೆ ಇದೆ. ಈ ಸಹಕಾರ ಸಂಸ್ಥೆಗಳು ವ್ಯಕ್ತಿಗತ ಸದಸ್ಯತ್ವ ನೀಡುವುದಿಲ್ಲ. ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದಲ್ಲಿ ವಾರ್ಷಿಕ ಚಂದಾ ನಿಗದಿ ಪಡಿಸಿದ್ದರೂ, ಆ ಹಣವನ್ನು ಸಂಸ್ಕರಿಸಿದ ಪ್ರಮಾಣದನ್ವಯ ನಿಗದಿ ಪಡಿಸಿದ್ದರೂ, ಅದನ್ನು ಪಾವತಿಸದೇ ಇದ್ದರೂ, ಕ್ರಮಜರುಗಿಸಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಂದರ್ಭದಲ್ಲಿ ವ್ಯವಹಾರಕ್ಕೆ ಪೂರಕವಾಗಿ ನಾಮಮಾತ್ರ ಸದಸ್ಯತ್ವ ನೀಡಿರಬಹುದು, ಅಂದರೆ ಈ ಮೇಲ್ಕಂಡ ಸಂಸ್ಥೆಗಳು ಸದಸ್ಯತ್ವ ನೀಡುವಾಗ ಅವರು ಪಾವತಿಸಬೇಕಾದ ಪಾಲು ಬಂಡವಾಳದ ಅವಕಾಶವನ್ನು ತನ್ನ ಉಪನಿಯಮಗಳಲ್ಲಿ ಅಳವಡಿಸಿಕೊಂಡಿಲ್ಲ. ಅವರ ಉಪನಿಯಮಗಳಲ್ಲಿ ವಾರ್ಷಿಕ ಚಂದಾ ಹಣ ನಿಗದಿ ಪಡಿಸಿದೆ. ಪಟ್ಟಣ ಬ್ಯಾಂಕ್ ಮತ್ತು ಸಂಯುಕ್ತ ಸಹಕಾರಿ ಸದಸ್ಯ ಸಹಕಾರಿಗಳ ವ್ಯವಹಾರದ ಆಧಾರದ ಮೇಲೆ ವಾರ್ಷಿಕ ಶುಲ್ಕ ನಿಗದಿ ಪಡಿಸಿದೆ. ಆದರೆ ಅವರ ಸದಸ್ಯರ ಹೆಸರಿನಲ್ಲಿ ಪಾಲು ಬಂಡವಾಳವಿಲ್ಲ. ಈ ವಾರ್ಷಿಕ ಚಂದಾ ಪಾವತಿಸದಿದ್ದರೆ ಮತದಾನದ ಹಕ್ಕನ್ನು ನೀಡುವುದಿಲ್ಲ (ಚುನಾವಣೆಯೂ ಸೇರಿ). ಇದು ಕಲಂ.20ಕ್ಕೆ ಬಾಕಿ ಎಂದು ಪರಿಗಣಿಸಿ ಮತದಾನದ ಹಕ್ಕು ನೀಡುವುದಿಲ್ಲ. ಇದರ ಜೊತೆಗೆ ಎಲ್ಲಾ ಮೇಲ್ಕಂಡ ಸಹಕಾರ ಸಂಸ್ಥೆಗಳು ಸದಸ್ಯತ್ವ ನೀಡಬೇಕಾದರೆ, ಸಂಬಂಧಪಟ್ಟ ಸಂಸ್ಥೆಯಿಂದ ಅರ್ಜಿ ಸ್ವೀಕರಿಸಿ, ಮಂಡಳಿ ತೀರ್ಮಾನವಾದ ನಂತರ ಸದಸ್ಯತ್ವ ನೀಡಲಾಗುತ್ತಿದೆ. ಇದಕ್ಕೆ ಪ್ರವೇಶ ಶುಲ್ಕ ಮತ್ತು ಅರ್ಜಿ ಶುಲ್ಕ ಪಡೆಯುತ್ತಾರೆ.

ಈ ವಿಮರ್ಷೆ ಮಾಡುವಾಗ ಕರ್ನಾಟಕ ಸೌಹಾರ್ದ ಕಾಯಿದೆಯಲ್ಲಿ ಶಾಸನಬದ್ದವಾಗಿ ರಚಿಸಿದ ಸಂಯುಕ್ತ ಸಹಕಾರಿಯೂ ಸಹ ವಾರ್ಷಿಕ ಚಂದಾ ನಿಗದಿ ಪಡಿಸಿ ಪಡೆಯುತ್ತಿದೆ. ಇದಕ್ಕೆ ಮೂಲ ಕಾರಣ ಕರ್ನಾಟಕ ಸೌಹಾರ್ದ ಕಾಯಿದೆ 1997ರ ಕಲಂ.53(1) ರಲ್ಲಿನ ಅವಕಾಶ.

“ರಾಜ್ಯದಲ್ಲಿ ಒಂದು ಸಂಯುಕ್ತ ಸಹಕಾರಿ ಇರತಕ್ಕದ್ದು. ಈ ಅಧಿನಿಯಮದ ಅಡಿಯಲ್ಲಿ ನೋಂದಾಯಿತವಾದ ಎಲ್ಲಾ ಸಹಕಾರಿಗಳು ಅಂಧ ಸಂಯುಕ್ತ ಸಹಕಾರಿಯು ಸದಸ್ಯರಾಗಿರತಕ್ಕದ್ದು.”

ಈ ಮೇಲ್ಕಂಡ ಅವಕಾಶದಂತೆ, ಸೌಹಾರ್ದ ಕಾಯಿದೆಯಲ್ಲಿ ನೋಂದಾಯಿತವಾದ ಸಹಕಾರಿ, ಸಂಯುಕ್ತ ಸಹಕಾರಿ ಸದಸ್ಯತ್ವವನ್ನು ಅದೇ ದಿನಾಂಕದಂದು ಪಡೆಯುತ್ತಿದೆ. ಇದಕ್ಕೆ ಸದಸ್ಯತ್ವಕ್ಕೆ ಅರ್ಜಿ ನೀಡಬೇಕಾಗಿಲ್ಲ ಮತ್ತು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಅದಕ್ಕಾಗಿಯೇ ಸಂಯುಕ್ತ ಸಹಕಾರಿ ಸದಸ್ಯ ಸಹಕಾರಿಗಳಿಗೆ ವಾರ್ಷಿಕ ಚಂದಾ ನಿಗದಿ ಪಡಿಸಲು ಅವಕಾಶ ನೀಡಿದೆ. ಇದಕ್ಕೆ ಪೂರಕವಾಗಿ ಸೌಹಾರ್ದ ಕಾಯಿದೆ ಕಲಂ.53ರಲ್ಲಿ ನಿಬಂಧಕರು ನಿರ್ವಹಿಸಬೇಕಾದ ಹಲವಾರು ಅಧಿಕಾರ/ಪ್ರಕಾರ್ಯಗಳನ್ನು ಈ ಸಂಯುಕ್ತ ಸಹಕಾರಿಗೆ ನೀಡಿದೆ. ಅವುಗಳೆಂದರೆ,

(ಎ) ಸಹಕಾರಿಗಳನ್ನು ಪ್ರವರ್ತಿಸುವುದು ಹಾಗೂ ಸಂಘಟಿಸುವುದು ಮತ್ತು ಈ ಉದ್ದೇಶಕ್ಕಾಗಿ ಮಾದರಿ ಉಪವಿಧಿಗಳನ್ನು ರಚಿಸುವುದು ಹಾಗೂ ಸಹಕಾರಿ ತತ್ವಗಳಿಗನುಸಾರವಾಗಿ ಸಹಕಾರಿಗಳಿಗಾಗಿ ವಿವಿಧ ಕಾರ್ಯನೀತಿಗಳನ್ನು ರಚಿಸಲು ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸುವುದು;

(ಬಿ) ಸಹಕಾರಿ ತರಬೇತಿ, ಶಿಕ್ಷಣ ಹಾಗೂ ತಿಳುವಳಿಕೆ ನೀಡುವುದು ಮತ್ತು ಸಹಕಾರ ತತ್ವಗಳನ್ನು ಪ್ರಚಾರ ಮಾಡುವುದು;

(ಸಿ) ಸಂಶೋಧನೆ ಹಾಗೂ ಮೌಲ್ಯಮಾಪನವನ್ನು ಕೈಗೊಳ್ಳುವುದು ಮತ್ತು ಸದಸ್ಯ ಸಹಕಾರಿಗಳಿಗಾಗಿ ಯಥಾದೃಷ್ಟ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಲು ನೆರವಾಗುವುದು;

(ಡಿ) ಸದಸ್ಯ ಸಹಕಾರಿಗಳ ನಡುವೆ ಸೌಹಾರ್ದ ಸಂಬಂಧವನ್ನು ಕಲ್ಪಿಸುವುದು;

(ಎಫ್) ಅಗತ್ಯವಿರುವಾಗ ಮಂಡಳಿಯ ಸಭೆಗಳಲ್ಲಿ ಭಾಗವಹಿಸುವುದೂ ಸೇರಿದರಂತೆ ಸದಸ್ಯ ಸಹಕಾರಿಗಳಿಗೆ ವ್ಯವಸ್ಥಾಪನಾ ಅಭಿವೃದ್ಧಿ ಸೇವೆಗಳನ್ನು ಕಲ್ಪಿಸುವುದು;

(ಜಿ) ಸದಸ್ಯ ಸಹಕಾರಿಗಳಿಗಾಗಿ ನಡತೆ ಸಂಹಿತೆಯನ್ನು ರೂಪಿಸುವುದು;

(ಹೆಚ್) ಸದಸ್ಯ ಸಹಕಾರಿಗಳಿಗಾಗಿ ಆರ್ಥಿಕ ಸಬಲತೆಯ ಮಾನದಂಡಗಳನ್ನು ರೂಪಿಸುವುದು;

(ಐ) ಸದಸ್ಯ ಸಹಕಾರಿಗಳಿಗೆ ಕಾನೂನು ನೆರವು ಹಾಗೂ ಸಲಹೆ ಒದಗಿಸುವುದು;

(ಜೆ) ಸದಸ್ಯ ಸಹಕಾರಿಗಳ ಅಗತ್ಯದ ಮೇರೆಗೆ ಯಾವುದೇ ಇತರ ಸೇವೆಗಳನ್ನು ಒದಗಿಸುವುದು;

(ಕೆ) ಹೊಸ ರೂಪದ ಸಹಕಾರಿ ಉದ್ದಿಮೆಗಳನ್ನು ಉತ್ತೇಜಿಸುವುದು;

(ಎಲ್) ಸಹಕಾರಿ ಶಿಕ್ಷಣ ನಿಧಿಯನ್ನು ರಚಿಸಿ ನಿರ್ವಹಿಸುವುದು;

(ಎಂ) ಸಹಕಾರಿ ವಿಚಾರ ಧಾರೆಯನ್ನು ಅನ್ವಯಿಸುವಂಥ ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು;

(ಎನ್) ಸಹಕಾರಿಗಳ ಪರವಾಗಿ ಮತ್ತು ಸಹಕಾರಿಗಳ ಮಧ್ಯೆ ಪರಸ್ಪರ ಸಂಪರ್ಕ ಕಲ್ಪಿಸುವುದು;

(ಒ) ಸಹಕಾರಿಗಳ ಅಂಕಿ ಅಂಶಗಳ ಬ್ಯಾಂಕ್ನಂತೆ ವರ್ತಿಸುವುದು;

(ಪಿ) ಸದಸ್ಯ ಸಹಕಾರಿಗಳ ಹಿತಾಸಕ್ತಿಯನ್ನು ಪ್ರತಿನಿಸುವುದು;

(ಕ್ಯೂ) ಗೊತ್ತುಪಡಿಸಿದ ಅವಧಿಯೊಳಗಾಗಿ ಅದರ ಸದಸ್ಯ ಸಹಕಾರಿಗಳ ಲೆಕ್ಕ ಪರಿಶೋಧನೆ, ಚುನಾವಣೆಗಳು, ಸಾಮಾನ್ಯ ಸಭೆಗಳು ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು;

(ಆರ್) ಸದಸ್ಯ ಸಹಕಾರಿಗಳ ಪರವಾಗಿ ವ್ಯವಹಾರ ಹಾಗೂ ಸೇವೆಗಳನ್ನು ಕೈಗೊಳ್ಳುವುದು;

(ಎಸ್) 30ನೇ ಪ್ರಕರಣದ (2)ನೇ ಉಪಪ್ರಕರಣದ ಅಡಿಯಲ್ಲಿ, ಒಂದು ಸದಸ್ಯ ಸಹಕಾರಿಯು ನಡೆಸಲು ತಪ್ಪಿದ ವಿಶೇಷ ಸಾಮಾನ್ಯ ಸಭೆಯನ್ನು ನಡೆಸುವುದು;

(ಯು) ಸದಸ್ಯ ಸಹಕಾರಿಗಳ ಪರಿವೀಕ್ಷಣೆಯ ಅಧಿಕಾರ ಹೊಂದಿರುವುದು: ಪರಂತು. ಒಂದು ಸಹಕಾರಿ ಬ್ಯಾಂಕಿನ ಸಂದರ್ಭದಲ್ಲಿ, ರಿಜರ್ವ್ ಬ್ಯಾಂಕಿನ ಅನುಮೋದನೆ ಇದ್ದ ಹೊರತು. ಈ ಖಂಡದ ಅಡಿಯಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳತಕ್ಕದ್ದಲ್ಲ.

ಈ ಮೇಲ್ಕಂಡ ಅವಕಾಶದಂತೆ ಸಂಯುಕ್ತ ಸಹಕಾರಿ ಒಂದು ಶಾಸನ ಬದ್ಧ ಪ್ರಕಾರ್ಯ ನಿರ್ವಹಿಸುವುದರಿಂದ ಮತ್ತು ನಿಬಂಧಕರ ಅಧಿಕಾರ ನಿರ್ವಹಿಸುತ್ತಿರುವುದರಿಂದ, ಆ ಸಂಸ್ಥೆಯು ಕಾರ್ಯಾಲಯ ನಿರ್ವಹಣೆಗೆ ವಾರ್ಷಿಕ ಚಂದಾ ನಿಗದಿ ಪಡಿಸುವುದರಲ್ಲಿ ತೊಡಕಿಲ್ಲ. ಆದರೆ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರಲ್ಲಿ, ಇಂತಹ ಅವಕಾಶ ಇಲ್ಲದೇ ಇರುವುದರಿಂದ, ಈ ಎಲ್ಲಾ ಒಕ್ಕೂಟ ಮತ್ತು ಮಹಾಮಂಡಳಗಳ ನೋಂದಾವಣೆ ಮಾಡುವಾಗ, ಎಲ್ಲಾ ಸಂಸ್ಥೆಗಳ ಆರ್ಥಿಕ ಸಂಸ್ಥೆಗಳು ಮತ್ತು ಅದರ ವ್ಯವಹಾರಿಕವಾಗಿ ಕಾರ್ಯ ನಿರ್ವಹಿಸಬೇಕಾದರೆ, ಸದಸ್ಯರಿಂದ ಪಾಲುಬಂಡವಾಳ ಸ್ವೀಕರಿಸಲೇಬೇಕು. ಇದರ ಜೊತೆಗೆ ಪಾಲು ಬಂಡವಾಳ ಹೂಡಿ ಆ ಸಂಸ್ಥೆಯ ಮಾಲೀಕನಾದಾಗ ಮಾತ್ರ ಅದರ ಹಕ್ಕು, ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸಲು ಅರ್ಹ. ಸದಸ್ಯನಲ್ಲದವನಿಗೆ ಯಾವ ಶರತ್ತನ್ನು ನಿಗದಿ ಪಡಿಸಲಾಗದು. ಇದರ ಜೊತೆಗೆ ಕೆಲವು ಸಂದರ್ಭದಲ್ಲಿ ಸದಸ್ಯನಾಗಿದ್ದರೂ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಬಗ್ಗೆ ಕಲಂ.20(ಬಿ)(3) ರಲ್ಲಿ ನಿಬರ್ಂದ ವಿಧಿಸಿರುವುದನ್ನು ಗಮನಿಸಿದಾಗ ಸದಸ್ಯತ್ವದ ಮಹತ್ವ ತಿಳಿಯುತ್ತದೆ. ಆದ್ದರಿಂದ ಯಾವುದೇ ಸಹಕಾರ ಸಂಸ್ಥೆಯಲ್ಲಿ ಸದಸ್ಯತ್ವ ಪಡೆಯಲು ಪಾಲು ಬಂಡವಾಳದ ಅವಶ್ಯಕತೆ ಇದೆ. ಇದರ ಆಧಾರದ ಮೇಲೆಯೇ ಷೇರು ವರ್ಗಾವಣೆ, ಷೇರು ಮೌಲ್ಯಮಾಪನ, ಷೇರು ಹೊಂದಾಣಿಕೆ ಬಗ್ಗೆ ಕಾಯಿದೆಯಲ್ಲಿ ಸೇರಿಸಿದೆ.

ಇದಕ್ಕೆ ಮತ್ತೊಂದು ವಿವರಣೆ ಅವಶ್ಯಕ, ಒಂದು ಜಿಲ್ಲಾ ಸಹಕಾರ ಒಕ್ಕೂಟ, ಆ ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಸ್ಥೆಗಳನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳುವುದಿಲ್ಲ. ಅರ್ಜಿ ನೀಡಿದರೂ, ಸದಸ್ಯತ್ವ ನೀಡುವುದಿಲ್ಲ, ಚುನಾವಣೆ ಸಂದರ್ಭದಲ್ಲಿ, ಅವರಿಗೆ ಅನುಕೂಲವಲ್ಲದ ಸಹಕಾರ ಸಂಸ್ಥೆಗಳಿಗೆ ಸದಸ್ಯತ್ವ ನೀಡಿದರೆ ಚುನಾವಣೆಯಲ್ಲಿ ತೊಡಕಾಗುತ್ತದೆ ಎಂದು. ಒಂದು ಉದಾಹರಣೆ ನೀಡುವುದಾದರೆ, ಒಂದು ಜಿಲ್ಲೆಯಲ್ಲಿ ನೋಂದಾಯಿತ ಸಹಕಾರ ಸಂಘಗಳು 1200 ಇದ್ದರೂ ಜಿಲ್ಲಾ ಸಹಕಾರ ಒಕ್ಕೂಟದ ಸದಸ್ಯರು 250 ಮಾತ್ರ. ಸದಸ್ಯತ್ವ ಸ್ವೀಕರಿಸುವುದು, ಆಡಳಿತ ಮಂಡಳಿ ಅಧಿಕಾರವಿದ್ದರೂ, ಮುಕ್ತ ಮತ್ತು ಸ್ವಯಂ ಪ್ರೇರಿತ ಸದಸ್ಯತ್ವಕ್ಕೆ ವಿರುದ್ದವಾಗಿದ್ದರೂ, ಇಂತಹ ಒಕ್ಕೂಟಗಳು ಈಗಲೂ ಅಸ್ತಿತ್ವದಲ್ಲಿದೆ. ಈ ಸಂಸ್ಥೆಗಳೂ ಲಾಭ, ನಷ್ಟ ಖಾತೆಯನ್ನು ನಿರ್ವಹಿಸುವುದಿಲ್ಲ, ಹಾಗೂ ಆದಾಯ ಮತ್ತು ಖರ್ಚು ಮಾತ್ರ ನಿರ್ವಹಿಸುತ್ತವೆ. ಆದರೆ ಸಹಕಾರ ಸಂಸ್ಥೆಗಳು ಒಂದು ಆರ್ಥಿಕ ಸಂಸ್ಥೆ ಎಂಬ ತತ್ವಕ್ಕೆ ವಿರುದ್ಧವಾಗಿ ಇವು ಕೆಲಸ ನಿರ್ವಹಿಸುತ್ತಿವೆ. ಇದನ್ನು ನಿಬಂಧಕರು ನಿಯಂತ್ರಿಸಲೇಬೇಕು. ಇಲ್ಲವಾದರೆ ಇಂತಹ ಸಂಸ್ಥೆಗಳಿಗೆ ಸಹಕಾರ ಸಂಘಗಳ ಕಾಯಿದೆ ಕಲಂ.120ರಡಿ ನೋಂದಾವಣೆ ಶರತ್ತುಗಳಲ್ಲಿ ವಿನಾಯ್ತಿ ನೀಡಬೇಕು. ಕಲಂ.120 ಈ ಕೆಳಕಂಡಂತೆ ಅವಕಾಶ ಕಲ್ಪಿಸಿದೆ.

ಕಲಂ.120 ನೋಂದಣಿ ಶರತ್ತುಗಳಿಂದ ಸಂಘಗಳಿಗೆ ವಿನಾಯಿತಿಯನ್ನು ನೀಡುವ ಅಧಿಕಾರ, “ಈ ಕಾಯ್ದೆಯಲ್ಲಿ ಏನೇ ಅಡಕವಾಗಿದ್ದರೂ, ರಾಜ್ಯ ಸರ್ಕಾರವು, ಪ್ರತಿ ಸಂದರ್ಭದಲ್ಲಿಯೂ ರಾಜ್ಯ ಪತ್ರದಲ್ಲಿ ವಿಶೇಷ ಆದೇಶವನ್ನು ಪ್ರಕಟಿಸುವುದರ ಮೂಲಕ ಮತ್ತು ರಾಜ್ಯ ಸರ್ಕಾರವು ವಿಧಿಸಬಹುದಾದಂತಹ ಷರತ್ತುಗಳೇನಾದರೂ ಇದ್ದಲ್ಲಿ, ಅಂತಹ ಷರತ್ತುಗಳಿಗೊಳಪಟ್ಟು, ನೋಂದಣಿಗೆ ಸಂಬಂಧಿಸಿದಂತೆ ಈ ಕಾಯ್ದೆಯಲ್ಲಿ ವಿಧಾಯಕ ಮಾಡಿರತಕ್ಕವುಗಳ ಪೈಕಿ ಯಾವುದೇ ಅಗತ್ಯಗಳಿಂದ ಯಾವುದೇ ಸಹಕಾರ ಸಂಘವನ್ನು ವಿನಾಯ್ತಿಗೊಳಿಸಬಹುದು.”

ಈ ಅಧಿನಿಯಮದಲ್ಲಿ ಏನೇ ಇದ್ದರೂ ಸಹ ಅಥವಾ ಕಲಂ.121 ರಲ್ಲಿ ಈ ಕಾಯಿದೆಯ ಕೆಲವು ಶರತ್ತುಗಳು ಅನ್ವಯವಾಗು -ವುದಿಲ್ಲವೆಂದು ವಿನಾಯ್ತಿ ನೀಡಬಹುದು. ಕಲಂ.121 ಈ ಕೆಳಕಂಡಂತೆ ಇದೆ.

“ರಾಜ್ಯ ಸರ್ಕಾರವು ರಾಜ್ಯ ಪತ್ರದಲ್ಲಿ ಸಾಮಾನ್ಯ ಅಥವಾ ವಿಶೇಷ ಅದೇಶವನ್ನು ಪ್ರಕಟಿಸುವ ಮೂಲಕ ಯಾವುದೇ ಸಹಕಾರ ಸಂಘವನ್ನು ಅಥವಾ ಯಾವುದೇ ಸಹಕಾರ ಸಂಘಗಳ ವರ್ಗಗಳನ್ನು ಈ ಕಾಯ್ದೆಯ ಯಾವುದೇ ಉಪಬಂಧಗಳಿಂದ ವಿನಾಯ್ತಿಗೊಳಿಸಬಹುದು ಅಥವಾ ಅಂತಹ ಉಪಬಂಧಗಳು ಅಂತಹ ಸಂಘಕ್ಕೆ ಅಥವಾ ಸಂಘಗಳ ವರ್ಗಗಳಿಗೆ ಆ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂತಹ ಮಾರ್ಪಾಡುಗಳೊಂದಿಗೆ ಅನ್ವಯವಾಗತಕ್ಕದ್ದೆಂದು ನಿರ್ದೇಶಿಸಬಹುದು.”

ಕರ್ನಾಟಕ ಸೌಹಾರ್ದ ಸಹಕಾರ ಕಾಯ್ದೆ66 19970

“ಸಂಯುಕ್ತ ಸಹಕಾರಿ” ಹೊರತು ಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರಲ್ಲಿ ನೋಂದಾವಣೆಯಾದ ಪ್ರತಿಯೊಂದು ಸಹಕಾರಿ ಸಂಸ್ಥೆಯೂ ಸದಸ್ಯರಿಂದ ಪಾಲು ಬಂಡವಾಳ ಪಡೆದು ಸದಸ್ಯತ್ವ ನೀಡದೆ ಇದ್ದರೆ, ಅದನ್ನು ಸಹಕಾರ ಸಂಸ್ಥೆ ಎಂದು ಕರೆಯಲಾಗದು. ಸಹಕಾರ ಸಂಸ್ಥೆಗಳು ಆರ್ಥಿಕ ಸಂಸ್ಥೆಗಳು, ಧರ್ಮ ಸಂಸ್ಥೆಗಳಲ್ಲವೆಂದು ತಿಳಿಯಬೇಕು ಮತ್ತು ಹಾಗೇ ಮಾಡಲೇಬೇಕಾದರೆ ಮೇಲೆ ತಿಳಿಸಿದಂತೆ ಕಲಂ.120 ಮತ್ತು 121ರಲ್ಲಿ ಅಧಿಸೂಚನೆ ಮೂಲಕ ಮಾತ್ರ ಕಾರ್ಯನಿರ್ವಹಿಸಬಹುದು.

-ಶ್ರೀ ಸಿ.ಎನ್.ಪರಶಿವಮೂರ್ತಿ

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More