‘ಸಹಕಾರ ದಿಂದ ಸಮೃದ್ಧಿ ‘ ಎಂಬುದು ಭಾರತ ಸರ್ಕಾರದ ಸಹಕಾರ ಇಲಾಖೆಯ ಧ್ಯೆಯ ವ್ಯಾಕ್ಯ . ಸಹಕಾರ ಮಾರ್ಗ ಆರ್ಥಿಕ ಅಭ್ಯುದಯ ಅಷ್ಟೇ ಅಲ್ಲದೆ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ. ಭಾರತ 2047 ಕ್ಕೆ ಸ್ವಾತಂತ್ಯದ ಶತಮಾನೋತ್ಸವ ಆಚರಿಸಲಿದೆ. ಅಷ್ಟರಲ್ಲಿ ವಿಶ್ವದಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ನಮ್ಮ ಈಗಿನ ಆರ್ಥಿಕತೆ 3.4 ಟ್ರಿಲಿಯನ್ ಡಾಲರ್ ರ್ಆರ್ಥಿಕತೆ ಇದ್ದು ಅದು 30 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪ ಬೇಕೆಂಬುದು ಇದರ ಸದಾಶಯ. ಭಾರತದ ಪ್ರತಿ ಪ್ರಜೆಗೂ ಮೂಲಭೂತ ಅಗತ್ಯತೆ ಮತ್ತು ಮುಂದುವರಿಯಲು ಅವಕಾಶಗಳು ಲಭ್ಯವಾಗಬೇಕು. (ಸಾಮಾಜಿಕ ) ನವೀಕರಿಸಬಹುದಾದ ಶಕ್ತಿಮೂಲಗಳ ಪೂರ್ಣ ಬಳಕೆ (ಸುಸ್ಥಿರ ಪರಿಸರ ನಿರ್ಮಾಣ) . ಅತ್ಯುತ್ತಮ ಆಡಳಿತ ನಿರ್ವಹಣೆ. ‘ಜನರು ಸಂತಸ ಪಡುವ ದಿಟವಾದ ಸ್ವಾತಂತ್ಯವನ್ನು ವಿಸ್ತರಿಸುವ ಪ್ರಕ್ರಿಯೆಗೆ ಅಭಿವೃದ್ಧಿ ಎನ್ನಲಾಗುತ್ತದೆ.’ ಎಂಬುದು ನೊಬೆಲ್ ಪಾರಿತೋಷಕ ವಿಜೇತ ಆರ್ಥಿಕ ತಜ್ಞ ಅಮೃತ್ಯ ಸೇನ್ ರವರ ಉಕ್ತಿ. ಆದರೆ ಭಾರತದಲ್ಲಿ ನಾವು ಈ ಸಾಧನೆ ಮಾಡಲು ಸಾಧ್ಯಅಸಾಧ್ಯತೆ ಪರಿಶೀಲಿಸುವಲ್ಲಿ ಆರ್ಥಿಕ ನೀತಿ ರೂಪಕರ ವಲಯದಲ್ಲಿ ಕೇಳಿ ಬರುವ ಮಾತು ‘ ಭಾರತದಲ್ಲಿ ಬಾಯಲ್ಲಿ ನೀರೂರಿಸುವಷ್ಟು ಅವಕಾಶಗಳು ಆದರೆ ಕಣ್ಣಲ್ಲಿ ನೀರು ತರಿಸುವಷ್ಟು ಸವಾಲುಗಳು ‘ಎಲ್ಲರನ್ನು ಒಳಗೊಂಡ ಸಮತಾ ಸಮಾಜ ನಿರ್ಮಾಣ ಕ್ಕೆ ಕಾರಣವಾಗಬಲ್ಲ ಕ್ಷೇತ್ರ ಸಹಕಾರ ಕ್ಷೇತ್ರ. ಇದು ಒಂದು ಅವಕಾಶ . 1990 ರ ದಶಕದಾಚೆಗಿನ ಆರ್ಥಿಕ ಪ್ರಗತಿ ಮೆಚ್ಚ ಬೇಕಾದುದೇ ಆಗಿದೆ. ಆದರೆ ಉದಾರೀಕರಣ ಮತ್ತು ಬಂಡವಾಳ ಶಾಹಿ ಪದ್ಧತಿ ಅಳವಡಿಕೆ ಸಮಾಜದಲ್ಲಿ ನೆಮ್ಮದಿ ತಂದಿದೆಯೇ? ಆಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿದೆ ಯಲ್ಲವೇ?
ಹೀಗಿದ್ದಲ್ಲಿ ‘ ವಿಕಸಿತ ಭಾರತ’ ಕನಸು ನನಸಾಗುವುದೆಂತು? ಇಂತಹ ಪ್ರಶ್ನೆಗಳಿಗೆ ಉತ್ತರ ಸಹಕಾರ ಪದ್ಧತಿ ಯಲ್ಲಿ ಇದೆಯಲ್ಲವೇ? ಇದನ್ನು ಅಳವಡಿಸಿಕೊಂಡು ಜಾರಿಗೆ ತರುವುದೇ ದೊಡ್ಡ ಸವಾಲಾಗಿದೆಯೇ ಎಂಬ ಮೂಲಭೂತ ಪ್ರಶ್ನೆ ಸಹಕಾರಿಗಳನ್ನು ಕಾಡುತ್ತದೆಯಲ್ಲವೇ? ಸಹಕಾರಿಗಳ ಆತ್ಮ ವಿಶ್ಲೇಷಣೆಗೆ ಇದು ಸಕಾಲ.
ವಿಶ್ವ ಸಂಸ್ಥೆ ಮತ್ತು ಅಂತರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆ 2025 ನೇ ಇಸವಿಯನ್ನು ಅಂತರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಿಸಿದೆ. ‘ಉತ್ತಮ ವಿಶ್ವ ನಿರ್ಮಾಣ ‘ ದ್ಯೇಯ ತಿಳಿಸುವ ಪದಪುಂಜ ವಾಗಿದೆ. ಇದನ್ನು ಉದ್ಭೋಷಿಸುವ ಅಂಗವಾಗಿ ನಡೆಯುತ್ತಿರುವ 2024 ರ ಅಂತರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆಯ ಮಹಾಸಭೆ ಮತ್ತು ಆದಿ ವೇಶನ ಪ್ರಥಮ ಬಾರಿಗೆ ಭಾರತದಲ್ಲಿ , ನವದೆಹಲಿ ಯಲ್ಲಿ ನಡೆಯುತ್ತಿರುವುದು (ದಿನಾಂಕ. 25ನೇ ನವೆಂಬರ್ 30 ನೆ ನವೆಂಬರ್ 2024 ) ಭಾರತದ ಸಹಕಾರಿಗಳಿಗೆ ಹೆಮ್ಮೆಯ ವಿಷಯವಾಗಿರುತ್ತದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ಸಹಕಾರ ಸಪ್ತಾಹ ದ ಆಚರಣೆಯು ನಡೆಯುತ್ತಿದ್ದು ದ್ಯೇಯ ವಾಕ್ಯ ” ವಿಕಸಿತ ಭಾರತ ” ನಿರ್ಮಾಣದಲ್ಲಿ ಸಹಕಾರದ ಪಾತ್ರ . ಎಂಬುದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೆಳಕಂಡ ಸವಾಲುಗಳನ್ನು ಎದಿರುಸುವ ಬಗೆ ಬಗ್ಗೆ ಚಿಂತನ- ಮಂಥನ ನಡೆಸಿ ಸಹಕಾರಿಗಳು ದಿಟ್ಟ ಹೆಜ್ಜೆ ಇಡಬೇಕಾಗಿರುವುದು ಈ ದಿನಮಾನಗಳ ಅತಿ ಅಗತ್ಯ ಅವಶ್ಯಕತೆ ಯಾಗಿದೆ.
1. ಹಸಿವು : ವಿಶ್ವದ ಜನಸಂಖ್ಯೆಯ ಶೇ9.4 ಎಂದರೆ 757 ದಶಲಕ್ಷ ಜನ (2023) ಆಫ್ರಿಕ ಖಂಡ – ಶೇ 20.4 ಎಂದರೆ 298.4 ದಶಲಕ್ಷ, ಏಶಿಯಾ ಖಂಡ ಶೇ 8.5 ಎಂದರೆ 384.5 ದಶಲಕ್ಷ , ಭಾರತದಲ್ಲಿ ಶೇ 2.5 ಎಂದರೆ 3.5 ಕೋಟಿ ಜನತೆ ಅರೆ ಹೊಟ್ಟೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಖರೀದಿ ಶಕ್ತಿ ಇಲ್ಲ. 84.5 ಕೋಟಿ ಜನತೆಗೆ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯದೆಯಲ್ಲಿ ಆಹಾರ ಒದಗಿಸಲಾಗುತ್ತಿದೆ. ಮೇಲಾಗಿ ಸಮತೋಲನ ಪೌಷ್ಠಿಕ ಆಹಾರ ಒದಗಿಸುವ ಸವಾಲಿದೆ. ಒಂದು ಅಂದಾಜಿನ ಪ್ರಕಾರ ಭಾರತದ ಬಡ ಜನತೆಯ ಒಬ್ಬ ವ್ಯಕ್ತಿಯ ಮಾಹೆಯಾನ ಬಳಕೆ ಖರ್ಚು ಗ್ರಾಮೀಣ ಪ್ರದೇಶದಲ್ಲಿ ರೂ 2197 ಇದರಲ್ಲಿ ಆಹಾರಕ್ಕಾಗಿಯೇ ರೂ 1569 ಇತರೆ ಖರ್ಚು ರೂ628 , ನಗರ ಪ್ರದೇಶದಲ್ಲಿ ರೂ 3077 ಇದರಲ್ಲಿ ಆಹಾರಕ್ಕಾಗಿ ರೂ 2098, ಇತರೆ ರೂ 979 ಖರ್ಚು ತಗುಲುತ್ತದೆ. ಇದರಿಂದ ಬಡ ಜನತೆಯ ಸಂಕಷ್ಟವನ್ನು ಅರಿಯಬಹುದಾಗಿದೆ. ಆಹಾರ ಭದ್ರತೆ ಗೆ ಅವಶ್ಯ ನಾಲ್ಕು ಅಂಶಗಳು (1) ಆಹಾರ ಲಭ್ಯತೆ (2) ಆಹಾರ ದೊರಕುವಿಕೆ (3) ಆಹಾರದ ಬಗ್ಗೆ ಅರಿವು (4) ಒಪ್ಪುವಂತ ಆಹಾರ . ಈ ಎಲ್ಲ ಅಂಶಗಳನ್ನು ಸಾಕಾರ ಗೊಳ್ಳಲು ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲ ಪಡಿಸುವ ಅಗತ್ಯತೆ ಇದೆ. ಈ ವರ್ಷದ ‘ವಿಶ್ವ ಆಹಾರ ದಿನ ‘ದ ಪೋಷ ವಾಕ್ಯ ‘ ಉತ್ತಮ ಜೀವನಕ್ಕಾಗಿ ಆಹಾರದ ಹಕ್ಕು ಮತ್ತು ಉತ್ತಮ ಭವಿಷ್ಯ’ ಎಂಬುದಾಗಿದ್ದು ‘ಹಸಿವು’ ನ ಪ್ರಾಮುಖ್ಯತೆ ಯನ್ನು ತೋರಿಸುತ್ತದೆ.
2 . ಅಸಮಾನತೆ : ಖಾಸಗಿಕರಣ (ಬಂಡವಾಳಶಾಹಿ ) ದಿಂದಾಗಿ ಭಾರತ ‘ಅತ್ಯಂತ ಶ್ರೀಮಂತರ ಬಡರಾಷ್ಟ್ರ ‘ ಎಂದೆನಿಸಿಕೊಂಡಿದೆ. ಜನತೆಯ ಮೇಲ್ಪದರದ ಶೇ 01 ಒಟ್ಟು ಸಂಪತ್ತಿನ ಶೇ 40 ಹೊಂದಿರುತ್ತಾರೆ. ಅಸಮಾನತೆಗೆ ಕಾರಣ ಬಂಡವಾಳಶಾಹಿಗಳ ಬಂಡವಾಳ ಗಳಿಸುವಿಕೆ.ಬಂಡವಾಳ ಕ್ರೋಡಿಕರಣಕ್ಕೆ ಅನುಸರಿಸುವ ಮಾರ್ಗೋಪಾಯಗಳು ಅನೇಕ ವೇಳೆ ಅನೈತಿಕ ವಾಗಿಯೇಇರುತ್ತವೆ. ಉದಾ: ಷೇರು ಮಾರುಕಟ್ಟೆ ಕೈ ಚಳಕಗಳು, ರಾಜಕೀಯ ಲಾಭಗಳಿಸಿ ತಮಗೆ ಅನುಕೂಲಕರ ನೀತಿಗಳ ಜಾರಿ, ಇದರಿಂದ ಲಾಭಗಳಿಕೆಯೇ ಉದ್ದೇಶವಾಗಿದ್ದು ಗಳಿಸುವ ಮಾರ್ಗಗಳು ಅನುಚಿತವಾಗಿದ್ದು ಆಸಮಾನತೆಯು ಹೆಚ್ಚುವುದಕ್ಕೆ ಕಾರಣವಾಗಿರುತ್ತದೆ. ಅಸಮಾನತೆಯು ಅಪರಾಧಗಳಿಗೆ ದುಷ್ಕೃತ್ಯ ಗಳಿಗೆ ಕಾರಣವಾಗುತ್ತದೆ. ಆರ್ಥಿಕತೆ ಮೇಲಿನಿಂದ ಕೆಳಗೆ ಜಿನುಗುತ್ತದೆ ಎಂಬ ಎಂಬ ವಾದ ನಮ್ಮ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾಗಿರುವುದಿಲ್ಲ. ಸಮಾನತೆಯ ಆಧಾರದಲ್ಲಿ ಕೆಳಗಿನಿಂದ (ತಳದಿಂದ ) ಮೇಲುಗಡೆಗೆ ಆರ್ಥಿಕತೆ ಬೆಳಯಲು ‘ ಸಹಕಾರ ‘ ಮಾದರಿಯಿಂದ ಮಾತ್ರ ಸಾಧ್ಯ.
3, ನಿರುದ್ಯೋಗ : ಭಾರತದ ದುಡಿಯಬಲ್ಲ ವಯಸ್ಸಿನ ಜನಸಂಖ್ಯೆ 950 ದಶಲಕ್ಷ ಇದರಲ್ಲಿ ಶೇ 50 ಮಾತ್ರ ಉದ್ಯೋಗದಲ್ಲಿ ದ್ದಾರೆ ಅದರಲ್ಲಿಯೂ ಹಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಉದ್ಯೋಗದಲ್ಲಿಲ್ಲ. ಶೇ50 ನಿರುದ್ಯೋಗಿಗಳಾಗಿರುತ್ತಾರೆ. ಬಂಡವಾಳ ಹೂಡಿಕೆ ನಿರೀಕ್ಷಿಸಿದಷ್ಟು ಉದ್ಯೋಗ ಸೃಷ್ಟಿಸುತ್ತಿಲ್ಲ. ಉದ್ಯೋಗ ಮಾತ್ರ ಸ್ವಸ್ತ ಸಮಾಜ ನಿರ್ಮಾಣ ಮಾಡಬಲ್ಲದು. ಸ್ವ ಉದ್ಯೋಗ ಅನೇಕಸ ವಾಲುಗಳನ್ನು ಎದುರಿಸುತ್ತಿದೆ. ಕೃಷಿ ಮತ್ತು ಕೃಷಿ ಅವಲಂಭಿತ ಉದ್ಯೋಗ ಗಳಾಗಲಿ , ಕೈಗಾರಿಕೆ ಕ್ಷೇತ್ರ ವಾಗಲಿ , ಕೈಗಾರಿಕೆಗೆ ಸರಬರಾಜು ಮಾಡುವ ಕಿರು ಉಧ್ಯಮಗಳಾಗಲಿ ಆಧುನಿಕ ತಾಂತ್ರಿಕತೆ ಅಳವಡಿಕೆಯೊಂದಿಗೆ ಮುಂದುವರಿಕೆ ಅಗತ್ಯ. ಇದಕ್ಕೆ ಸೂಕ್ತ ಕುಶಲತೆ (ನೈಪುಣ್ಯತೆ) ಅಭಿವೃದ್ಧಿ ಅಗತ್ಯ . ಈ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ. ಭಾರತವು 2023 – 24 ರ ಮಾನವ ಸಂಪನ್ಮೂಲ ಸೂಚ್ಯಂಕ 0-644 ಇದ್ದು 193 ರಾಷ್ಟ್ರಗಳಲ್ಲಿ 134 ನೇ ಸ್ಥಾನದಲ್ಲಿದೆ ಎಂಬುದನ್ನು ವಿಷಾದಿಂದಲೇ ಒಪ್ಪಿಕೊಳ್ಳ ಬೇಕಿದೆ. ಇತರೆ ರಾಷ್ಟ್ರಗಳು ಅವರಣದಲ್ಲಿರುವುದು ಸ್ಥಾನ , ಮಲ್ಯೇಷಿಯಾ (63)ಥೈಲ್ಯಾಂಡ್ (66) ಚೈನಾ (75) . ಇದರಿಂದ ನಮ್ಮ ಪ್ರಗತಿ ನಿಧಾನ ಗತಿಯಲ್ಲಿರುವುದನ್ನು ಅರಿಯಬಹುದು. ಕೃಷಿ ಮತ್ತು ಕೃಷಿ ಅವಲಂಭಿತ ಕ್ಷೇತ್ರ ದಲ್ಲಿ ಹಾಲಿನ ಕ್ಷೇತ್ರ ತಕ್ಕ ಮಟ್ಟಿಗೆ ಸಹಕಾರ ಕ್ಷೇತ್ರವಾಗಿ (ಶೇ70) ಅವಲಂಭಿಸಿದೆ. ಅದು ಕೂಡ ಖಾಸಗಿ ವಲಯದಿಂದ ಸ್ಪರ್ಧೆ ಎದುರಿಸುತ್ತಿದೆ. ಅಲ್ಲದೆ ಮೂಲ ಬುಡ ವ್ಯವಸ್ಥೆಯನ್ನೇ ಅಲುಗಾಡಿಸುತ್ತಿದೆ. (ಚಾಮರಾಜನಗರ ತಾಲ್ಲೂಕು, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಆಡಳಿತ ದಲ್ಲಿ ಒಡಕು ಮೂಡಿಸುವುದು , ಅಮಿಷ ಒಡ್ಡುವುದು, ಹಸ್ತಕ್ಷೇಪ ಮಾಡುವುದು ಮುಂತಾದ ಕ್ರಿಯೆ ಗಳಿಂದ ವ್ಯವಸ್ಥೆ ಹಾಳುಗೆಡವಿ ತಾನು ಹಾಲು ಸಂಗ್ರಹಣೆ ಹೆಚ್ಚಳ ಮಾಡಲು ಖಾಸಗಿ ಕಂಪನಿಗಳು ಹವಣಿಸುತ್ತಿವೆ) ಇತರೆ ಉತ್ಪನ್ನಗಳ ಪಾಲು ಅತ್ಯಂತ ಕಡಿಮೆ ಇದೆ. ಕೈಗಾರಿಕೆ ಕ್ಷೇತ್ರದಲ್ಲಿ ಹಿಂದೆ ‘ ಕೈಗಾರಿಕಾ ಸಹಕಾರ ಸಂಘಗಳು ‘ ಕಾರ್ಯನಿರ್ವಹಿಸುತ್ತಿದ್ದವು. ಈಗ ಈ ವಲಯವನ್ನು ಪುನರ್ ರಚಿಸಬೇಕಾಗಿದೆ. ಕೈಗಾರಿಕೆ ವಲಯ ಪ್ರದೇಶಗಳಲ್ಲಿ ಸಹಕಾರ ವಲಯ ಕೂಡ ‘ಸಹಕಾರ ಉದ್ಯೋಗ ‘ (Cooperative enterprise ) , ಸಹಕಾರ ದ ಮೂಲಕವೂ ‘ನಾವು ವಾಣಿಜ್ಯೋಧ್ಯಮಿ ‘ಗಳಾಗಬಹುದು ಎಂಬ ಅರಿವು ಮೂಡಿಸಬೇಕಾಗಿದೆ. ಹಾಗೆ ಭಾರತದಲ್ಲಿ ಕೃಷಿ ಮತ್ತು ತೋಟಗಾರಿಕೆ ವಲಯದಲ್ಲಿ 93. 09 ದಶಲಕ್ಷ ಕುಟುಂಬಗಳು ತೊಡಗಿಸಿ ಕೊಂಡಿದ್ದು ಶೇ82 ಸಣ್ಣ ಮತ್ತು ಅತಿ ಸಣ್ಣ ರೈತರಿರುತ್ತಾರೆ. ಸಹಕಾರ ಸಂಘಟನೆ ಇಂದ ಮಾತ್ರ ಮಧ್ಯಮ ವರ್ತಿಗಳಿಲ್ಲದೆ ನ್ಯಾಯಯುತ ಬೆಲೆ ದೊರಕಿಸ ಬಹುದು. ಗ್ರಾಹಕರು ಖರೀದಿಸುವ ಬೆಲೆಯ ಶೇಕಡ 30 ಕೂಡ ಉತ್ಪಾದಕರಿಗೆ ದೂರುಯುವುದಿಲ್ಲ ಎಂದು ಇತ್ತೀಚೆಗಿನ ಸಮೀಕ್ಷ ವರದಿ ತಿಳಿಸುತ್ತದೆ. ಹಾಲಿನಲ್ಲಿ ಇದು ಶೇ.70 ಇದೆ. ಇದಕ್ಕೆ ಕಾರಣ ನಿರ್ಮಾಣವಾಗಿರುವ ಅಮುಲ್ ಮಾದರಿ ‘ ಸಹಕಾರ ವ್ಯವಸ್ಥೆ’. ಜಂಟಿ ಕೃಷಿ, ಸಮೂಹಿಕ ಕೃಷಿ, ಸಹಕಾರ ಮಾರುಕಟ್ಟೆ ಮಾತ್ರ ಪರಿಹಾರ ಒದಗಿಸಬಲ್ಲದು. ಇದರಿಂದ ಗ್ರಾಮೀಣ ಜನತೆಗೆ ಹೆಚ್ಚಿನ ಉದ್ಯೋಗ ಸೃಷ್ಠಿ ಯಾಗುವುದಲ್ಲದೆ ಜನತೆಯ ನಗರ ವಲಸೆ ಯನ್ನು ತಡೆಗಟ್ಟಬಲ್ಲದು. ಇದರಿಂದಾಗುತ್ತಿರುವ ಅನೇಕ ಸಂಕಷ್ಟಗಳು ಪರಿಹಾರ ವಾಗ ಬಲ್ಲುದಲ್ಲದೆ ಆರ್ಥಿಕ ಸಬಲತೆಗೆ ಕಾರಣವಾಗಬಲ್ಲದು. ರಫ್ತು ಮೂಲಕ ವಿದೇಶಿ ವಿನಿಮಯ ಗಳಿಕೆಗೂ ವಿಫುಲ ಅವಕಾಶಗಳಿವೆ.
4) ಮಧ್ಯಮ ಆದಾಯದ ಬಲೆ : (Middle Income Trap ) . ವಿಶ್ವಬ್ಯಾಂಕ್ ವರದಿ ಈ ವಿಷಯದಲ್ಲಿ ಆರ್ಥಿಕ ತಜ್ಞರ ಗಮನ ಸೆಳೆದಿದೆ. ಹಾಲಿ ಆರ್ಥಿಕ ಬೆಳವಣಿಗೆ ಧರದಲ್ಲಿ ಅಮೇರಿಕನ್ನರ ತಲಾ ಆದಾಯದ ಕಾಲು ಭಾಗ ತಲುಪಲು ಭಾರತೀಯರಿಗೆ 75 ವರ್ಷಬೇಕು. ಭಾರತವು ಸೇರಿದಂತೆ 108 ಮಧ್ಯಮ ಆದಾಯದ ದೇಶಗಳಲ್ಲಿ ಭಾರತವೂ ಸೇರಿವೆ. ಇದರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ. > ರೂ 95, 378 ರಿಂದ 11.62 ಈ ರಾಷ್ಟ್ರಗಳ ಜನರ ತಲಾ ಆಧಾಯ , ಶೇ75 ಪ್ರಪಂಚದ ಒಟ್ಟು ಜನಸಂಖ್ಯೆ ಯಲ್ಲಿ ಈ ರಾಷ್ಟ್ರಗಳ ಪಾಲು , ಶೇ 60 . ಜಗತ್ತಿನಲ್ಲಿರುವ ಬಡವರ ಪೈಕಿ ಈ ದೇಶಗಳಲ್ಲಿರುವವರ ಪ್ರಮಾಣ – ಈ ಸಂಖ್ಯೆ 40 ಕೋಟಿ , ಜಾಗತಿಕ ಮಟ್ಟದ ಆರ್ಥಿಕ ಚಟುವಟಿಕೆ ಗಳಿಗೆ ಈ ರಾಷ್ಟ್ರಗಳ ಕೊಡುಗೆ ಪ್ರಮಾಣ ಶೇ 40. ಈ ದೇಶಗಳು ಆರ್ಥಿಕತೆ ಅಭಿವೃದ್ಧಿ ಹೊಂದಲು ಅತ್ಯಂತ ಹಳೆಯ ತಂತ್ರಗಳ ಮೊರೆ, ದೀರ್ಘ ಕಾಲದ ಹೂಡಿಕೆ ಅವಲಂಭನೆ , ತಂತ್ರಜ್ಞಾನ ಮತ್ತು ಸಂಶೋಧನೆ ನಿರ್ಲಕ್ಷಿಸಿವೆ. ಈ ರಾಷ್ಟ್ರಗಳಿಗೆ ಹೊಸ ದೃಷ್ಟಿ ಕೋನ ಬೇಕಿದೆ. ಅದಕ್ಕಾಗಿ ಮೂರು ‘ಐ’ಗಳ ಅಳವಡಿಕೆ ಪ್ರತಿಪಾಧಿಸಿದೆ. Investment – ಹೂಡಿಕೆ , Infusion – ಅಳವಡಿಕೆ, Innovation -ಅವಿಷ್ಕಾರ, ಇವುಗಳನ್ನು ಅನುಷ್ಠಾನ ಗೊಳಿಸುವಲ್ಲಿ ಉದ್ಯಮ( enterprise ) , ಕೌಶಲ ವೃದ್ಧಿ / ಪ್ರತಿಭೆ (Talent ) ಮತ್ತು ಇಂಧನ (energy ) ಗೆ ಹೆಚ್ಚು ಒತ್ತು ನೀಡಬೇಕಾಗಿ ತಿಳಿಸಿದೆ. ಇದು ಒಂದು ಮಾರ್ಗ ಸೂಚಿ ಯಾಗಿದ್ದು ಸಹಕಾರ ವಲಯ ಇವುಗಳನ್ನು ಅಳವಡಿಸಿ ಕೊಳ್ಳಬೇಕು ಅಲ್ಲದೇ ಅನೇಕ ವಲಯಗಳಲ್ಲಿ ಸಹಕಾರ ವ್ಯವಸ್ಥೆ ರೂಪುಗೊಂಡು ಸಹಕಾರ ಚಳುವಳಿ ಯಶಸ್ವಿಯಾದಲ್ಲಿ ನಮ್ಮ ರಾಷ್ಟ್ರವು ‘ಮಧ್ಯಮ ಆದಾಯದ ಬಲೆ ‘ಯಿಂದ ಹೊರ ಬರಬಹುದಾಗಿದೆ . ಈ ವರ್ಷದ ಸಹಕಾರ ಸಪ್ತಾಹದ ಆಶಯಗಳು ಇದಕ್ಕೆ ಪೂರಕ ವಾಗಿವೆ ಎಂಬುದು ಸಂತಸದ ವಿಷಯವಾಗಿದೆ.
5) ಮಹಿಳಾ ಸಬಲತೆ ಮತ್ತು ಲಿಂಗ ಅಸಮಾನತೆ : 2022 ರ ಅಧ್ಯಯನ ಪ್ರಕಾರ ವೇತನ ರಹಿತ ಮಹಿಳಾ ಕೌಟುಂಬಿಕ ಕಾರ್ಮಿಕರು ಶೇ 36.5 , ಪುರುಷರು ಶೇ 9.3 , ಇದು ಮಹಿಳೆಯರಿಗೆ ಉದ್ಯೋಗವಕಾಶ ದೊರೆಕಿಸಲು ಇರುವ ಅವಕಾಶಗಳ ಬಗ್ಗೆ ತಿಳಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನುೂ ಸಾಂಪ್ರದಾಯಿಕ ಉದ್ಯೋಗ ಗಳಲ್ಲಿ ತೊಡಗಿತುಕೊಂಡಿದ್ದು ಆದಾಯ ವಂಚಿತ ರಾಗಿರುತ್ತಾರೆ. ಆಧುನಿಕ ಅವಕಾಶಗಳಿವೆ, ಇದರಲ್ಲಿ ತೊಡಗಿಸಿಕೊಳ್ಳಲು ಸ್ವಸಹಾಯ ಗುಂಪುಗಳಲ್ಲದೇ ಮಹಿಳಾ ಸಹಕಾರ ಸಂಘಗಳು ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ. ಇತರೆ ಸಹಕಾರ ಸಂಘಗಳಲ್ಲಿಯೂ ಮಹಿಳಾ ಪಾಲ್ಗೊಳ್ಳುವಿಕೆ ಯನ್ನು ಹೆಚ್ಚಳ ಗೊಳಿಸುವ ಅವಶ್ಯಕತೆ ಇದೆ . ಗ್ರಾಮೀಣ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಸಿಗಳ ಉತ್ಪತ್ತಿ (ನರ್ಸರಿ) , ಎರೆಹುಳು ಗೊಬ್ಬರ ಉತ್ಪಾದನೆ, ಕೈಗೊಳ್ಳಲು ವಿಫುಲ ಅವಕಾಶಗಳಿವೆ. ಭಾರತದಲ್ಲಿ ಲಿಂಗ ಅಸಮಾನತೆಯ ಅಂತರ ಬಹಳಷ್ಟಿದೆ. ಕಾರ್ಮಿಕ ಶಕ್ತಿ ಭಾಗವಹಿಸುವ ದರ ಪುರುಷರು ಶೇ 76.1 ಮಹಿಳೆಯರು ಶೇ 28.3 ಅಂತರ ಶೇ 47.8 ಇರುತ್ತದೆ.ಮಹಿಳಾ ಆರ್ಥಿಕ ಸಬಲತೆ ಇಡೀ ಕುಟುಂಬಕ್ಕೆ ಅದರ ಅಭ್ಯುದಯಕ್ಕೆ ತನ್ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕಾರಣವಾಗುತ್ತದೆ.
ಈ ಮೇಲಿನ ಎಲ್ಲ ಅಂಶಗಳು ವಿಶ್ವಸಂಸ್ಥೆ ನಿಗದಿ ಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳು – 2030 ಕ್ಕೆ ಪೂರಕವಾಗಿದ್ದು ವಿಶ್ವದ ಅತ್ಯಂತ ಹೆಚ್ಚಿನ ಸದಸ್ಯತ್ವ ಹೊಂದಿದ ಭಾರತ ರಾಷ್ಟ್ರವು ಈ ದಿಸೆಯಲ್ಲಿ ಹೆಜ್ಜೆ ಇಡುವುದು ಈ ದಿನಗಳ ತುರ್ತು ಅಗತ್ಯತೆ ಯಾಗಿದೆ. ಒಟ್ಟಾರೆ ‘ವಿಕಸಿತ ಭಾರತ ‘ ದ ಗುರಿ ತಲುಪುವಲ್ಲಿ ಸಹಕಾರ ದ ಪಾತ್ರ ಮಹತ್ತರ ಪಾತ್ರ ವಹಿಸಬಲ್ಲದು. ಭಾರತದ ಸಂವಿಧಾನದ ಆಶಯವಾದ ಕಲ್ಯಾಣ ರಾಜ್ಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ‘ ಸಹಕಾರ ಚಳುವಳಿ ‘ ಯದಾಗಲಿ ಎಂದು ಆಶಿಸೋಣ.
ಉತ್ತಮವಾದುದು ಶ್ರಮವಿಲ್ಲದೆ ಲಭಿಸದು , ಇಚ್ಛೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ – ಕುವೆಂಪು,
ಶಶಿಧರ . ಎಲೆ .
ಸಹಕಾರ ಸಂಘಗಳ ಅಪರ ನಿಬಂಧಕರು (ನಿವೃತ್ತ) , ನಂ 281 , ನೇಸರ , ಬಾಲಾಜಿ ಹೆಚ್ ಬಿ ಸಿ ಎಸ್ ಲೇ ಔಟ್ , ವಾಜರಹಳ್ಳಿ, ಕನಕಪುರ ರಸ್ತೆ , ಬೆಂಗಳೂರು 560 109